Tuesday, 6 February 2024

ಭಾರತದ ಎದೆಗೆ ವಾಸಿಯಾಗದ ಗಾಯ ಮಾಡಿರುವುದೇ ಅರ್ಹತೆಯೇ?



 ಸನ್ಮಾರ್ಗ ಸಂಪಾದಕೀಯ


ಬಾಬರಿ ಮಸೀದಿ ಧ್ವಂಸವನ್ನು ಅಪರಾಧ ಮತ್ತು ಕ್ರಿಮಿನಲ್ ಕೃತ್ಯ ಎಂದು 2019 ನವೆಂಬರ್‌ನಲ್ಲಿ ಸುಪ್ರೀಮ್ ಕೋರ್ಟ್ ನ  ಐವರು  ನ್ಯಾಯಾಧೀಶರು ಘೋಷಿಸುವಾಗಲೂ ಧ್ವಂಸದ ಆರೋಪಿಯಾಗಿಯೇ ಉಳಿದುಕೊಂಡಿದ್ದ ಎಲ್.ಕೆ. ಅಡ್ವಾಣಿಯವರನ್ನು ಭಾರತ ರತ್ನ  ಪುರಸ್ಕಾರದ ಮೂಲಕ ಗೌರವಿಸಲಾಗಿದೆ. ಈ ತೀರ್ಪಿನ 11 ತಿಂಗಳ ಬಳಿಕ 2020 ಸೆಪ್ಟೆಂಬರ್ 20ರಂದು ಲಕ್ನೋದ ಸಿಬಿಐ ವಿಶೇಷ  ನ್ಯಾಯಾಲಯವು ಅಡ್ವಾಣಿ ಸಹಿತ 32 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿತು. ಇದೇವೇಳೆ, ಅಡ್ವಾಣಿ ಮೇಲಿನ ಆರೋ ಪವನ್ನು ಸಾಬೀತುಪಡಿಸುವ ವೀಡಿಯೋವನ್ನು ನ್ಯಾಯಾಲಯದ ಮುಂದೆ ಸಿಬಿಐ  ನ್ಯಾಯಾಲಯ ಅದನ್ನು ಪುರಸ್ಕರಿಸ ಲಿಲ್ಲ. ಕಾರಣ ಏನೆಂದರೆ, ಫಾರೆನ್ಸಿಕ್ ಲ್ಯಾಬೋರೇಟರಿಯಲ್ಲಿ ಆ ವೀಡಿಯೋದ ಸಾಚಾತನವನ್ನು ಪರೀಕ್ಷಿಸಿಯೇ ಇರಲಿಲ್ಲ. ಹಾಗೆಯೇ,  ಅಂದಿನ ಧ್ವಂಸ ಕಾರ್ಯಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿತ್ತು. ಆದರೆ ಅದರ ಮೂಲ ಪ್ರತಿಯನ್ನೇ  ಸಲ್ಲಿಸಿರಲಿಲ್ಲ. ಅಷ್ಟಕ್ಕೂ,

ಸಾಕ್ಷ್ಯವಾಗಿ ಸಲ್ಲಿಸುವ ಯಾವುದೇ ವೀಡಿಯೋವನ್ನೂ ಫಾರೆನ್ಸಿಕ್ ಲ್ಯಾಬೋರೇಟರಿ ಪರೀಕ್ಷೆಗೆ ಒಳಪಡಿಸಬೇಕು ಎಂದೋ ಅಥವಾ ಯಾವುದೇ ಫೋಟೋದ ನೆಗೆಟಿವ್ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೋ ಸಿಬಿಐಗೆ ಗೊತ್ತಿರಲಿಲ್ಲ ಎಂದಲ್ಲ. ಅಲ್ಲದೇ  ಹೀಗೆ ಮಾಡುವುದಕ್ಕೆ ಸಾಕಷ್ಟು ಸಮಯಾವಕಾಶ ಇರಲಿಲ್ಲ ಎಂದೂ ಅಲ್ಲ. 1992ರಿಂದ 2020ರ ನಡುವೆ ದೀರ್ಘ 28 ವರ್ಷಗಳೇ ಸಿಬಿಐಗೆ ಇತ್ತು. ಧ್ವಂಸ ವೀಡಿಯೋದ ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸುವುದಕ್ಕೆ ಮತ್ತು ಫೋಟೋಗಳ ಮೂಲ ಪ್ರತಿಯನ್ನು ಸಂಗ್ರಹಿಸುವುದಕ್ಕೆ  ಇದಕ್ಕಿಂತಲೂ ಹೆಚ್ಚಿನ ಅವಧಿ ಬೇಕು ಎಂದು ಯಾರೂ ಹೇಳಲಾರರು. ಅಂದರೆ, ಸಿಬಿಐ ಉದ್ದೇಶಪೂರ್ವಕವಾಗಿಯೇ ಹೀಗೆ  ನಡಕೊಂಡಿತ್ತು. ಆರೋಪಿಗಳನ್ನು ದೋಷಮುಕ್ತಗೊಳಿಸುವುದೇ ಉದ್ದೇಶವಾಗಿರುವಾಗ ಅದು ಪ್ರಬಲ ಸಾಕ್ಷ್ಯ ಗಳನ್ನು ಸಲ್ಲಿಸುವುದಾದರೂ  ಹೇಗೆ? ಈ ತೀರ್ಪಿನ ವಿರುದ್ಧ ಉತ್ತರ ಪ್ರದೇಶದ ಹಾಜಿ ಮೆಹಬೂಬ್ ಮತ್ತು ಸೈಯದ್ ಅಖ್‌ಲಾಕ್ ಎಂಬವರು ಅರ್ಜಿ ಸ ಲ್ಲಿಸಿದರಾದರೂ 2022 ಸೆ. 9ರಂದು ಅಲಹಾಬಾದ್ ಹೈಕೋರ್ಟು ಆ ಅರ್ಜಿಯನ್ನೇ ತಳ್ಳಿಹಾಕಿತು. ಪ್ರಕರಣದಲ್ಲಿ ನೀವು ಸಂತ್ರಸ್ತರೆಂದು  ಸಾಬೀತಾಗದ ಕಾರಣ ನಿಮಗೆ ಅರ್ಜಿ ಸಲ್ಲಿಸುವ ಅರ್ಹತೆಯಿಲ್ಲ ಎಂದು ಕಾರಣವನ್ನೂ ನೀಡಿತು. ಹಾಗಂತ,

ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಮುಂತಾದವರು ಧ್ವಂಸ ಪ್ರಕರಣದಿಂದ  ದೋಷಮುಕ್ತಗೊಂಡದ್ದು ಇದೇ ಮೊದಲಲ್ಲ. 2003ರಲ್ಲಿ ಸಿಬಿಐ ನ್ಯಾಯಾಲಯವು ಈ ಪ್ರಕರಣದಿಂದ ಅಡ್ವಾಣಿಯನ್ನು ಮುಕ್ತಗೊಳಿಸಿತ್ತು.  ಆದರೆ, ಬಾಬರಿ ಮಸೀದಿ ಧ್ವಂಸಗೊಳ್ಳುವ ವೇಳೆ ಅಡ್ವಾಣಿಯವರ ಸುರಕ್ಷತೆಗಾಗಿ ನಿಯೋಜಿಸಲಾಗಿದ್ದ ಐಪಿಎಸ್ ಅಧಿಕಾರಿ ಅಂಜು ಗುಪ್ತ  ಅವರು ನೀಡಿರುವ ಸಾಕ್ಷ್ಯವನ್ನು ಪರಿಗಣಿಸಿ ಅಲಹಾಬಾದ್ ನ್ಯಾಯಾಲಯದ ಲಕ್ನೋ ಬೆಂಚ್ ಅಡ್ವಾಣಿ ಮೇಲಿನ ಪ್ರಕರಣವನ್ನು ಮರು  ಊರ್ಜಿತಗೊಳಿಸಿತು. ‘ಅಡ್ವಾಣಿಯವರು ಬಾಬರಿ ಮಸೀದಿ ಇದ್ದ ಸ್ಥಳಕ್ಕೆ ಆಗಮಿಸುವ ಮೊದಲು ಪರಿಸ್ಥಿತಿ ಶಾಂತವಾಗಿತ್ತು’ ಎಂದು  ಅಂಜು ಗುಪ್ತಾ ರಾಯ್‌ಬರೇಲ್ವಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಲ್ಲದೇ, ‘ಅಡ್ವಾಣಿಯವರ ಪ್ರಚೋದಕ ಭಾಷಣವೇ ಮಸೀದಿ  ಧ್ವಂಸಕ್ಕೆ ಕಾರಣವಾಗಿತ್ತು’ ಎಂದೂ ಹೇಳಿಕೆ ನೀಡಿದ್ದರು. ‘ಅವರ ಭಾಷಣ ಪರಿಸ್ಥಿತಿಯನ್ನು ಹದಗೆಡಿಸಿತು, ಮಸೀದಿಯ ಗುಂಬಜ್‌ಗಳು  ಉರುಳಿದಾಗ ಉಮಾಭಾರತಿ ಮತ್ತು ಸಾಧ್ವಿ ಋತುಂಬರಾ ಪರಸ್ಪರ ಆಲಿಂಗಿಸಿದರು, ಸಿಹಿ ಹಂಚಿದರು, ಮಾತ್ರವಲ್ಲ, ಅಡ್ವಾಣಿ, ಜೋಶಿ  ಮತ್ತು ಎಸ್.ಪಿ. ದೀಕ್ಷಿತ್‌ರನ್ನು ಆಲಿಂಗಿಸಿ ಸಂತೋಷ ವ್ಯಕ್ತಪಡಿಸಿದರು ಹಾಗೂ ಮಸೀದಿ ಧ್ವಂಸದ ಬಳಿಕ ಅವರೆಲ್ಲ ಪರಸ್ಪರ ಅಭಿನಂದನೆ ಸಲ್ಲಿಸಿಕೊಂಡರು..’  ಎಂದವರು 1993ರಲ್ಲಿ ಸಿಬಿಐ ಮುಂದೆ ಸಾಕ್ಷ ನುಡಿದಿದ್ದರು. ಮಸೀದಿಯನ್ನು ಬೀಳಿಸುವಂತೆ ಉಮಾಭಾರತಿ ಮತ್ತು ಸಾಧ್ವಿ ಋತುಂಬರಾ  ಪ್ರಚೋದಿಸಿದರು ಎಂದು 2010ರಲ್ಲಿ ಸಿಬಿಐ ನ್ಯಾಯಾಲಯಕ್ಕೆ ನೀಡಿದ ಸಾಕ್ಷಿಯಲ್ಲೂ ಅಂಜು ಗುಪ್ತ ಹೇಳಿದ್ದರು. ಸಿಬಿಐ ಪಟ್ಟಿ ಮಾಡಿದ್ದ  ಸಾಕ್ಷಿಗಳ ಪೈಕಿ 9ನೆಯವರಾಗಿದ್ದ ಅಂಜು ಗುಪ್ತ ಅವರ ಸಾಕ್ಷ ಬಹಳ ಪ್ರಾಮುಖ್ಯದ್ದಾಗಿತ್ತು. ಆದರೆ,

ಈ ಸಾಕ್ಷದ ಗಂಭೀರತೆಯನ್ನು ತಣಿಸುವುದಕ್ಕೆ ಏನೆಲ್ಲ ಬೇಕೋ ಅವೆಲ್ಲವನ್ನೂ ಆ ಬಳಿಕ ಸಿಬಿಐ ಶ್ರಮಿಸಿರುವಂತಿದೆ. ಸ್ಥಳೀಯ ಸಾಕ್ಷಿಗಳ  ಪೈಕಿ ಯಾರನ್ನೂ ಅದು ಪರೀಕ್ಷೆಗೆ ಒಳಪಡಿಸಲೇ ಇಲ್ಲ. ಹೀಗೆ ಬಾಬರಿ ಮಸೀದಿ ಇದ್ದ ಜಾಗ ಯಾರಿಗೆ ಸೇರಬೇಕು ಎಂಬ ಪ್ರಕರಣ  ಸುಪ್ರೀಮ್ ಕೋರ್ಟು ಮೆಟ್ಟಲೇರಿ 2019 ನವೆಂಬರ್ 9ರಂದು ತೀರ್ಪು ಪ್ರಕಟವಾಗುವಾಗಲೂ ಧ್ವಂಸ ಪ್ರಕರಣ ಇನ್ನೂ ಸಿಬಿಐ ನ್ಯಾಯಾ  ಲಯದಲ್ಲೇ  ಕೊಳೆಯುತ್ತಿತ್ತು. ಕೊನೆಗೂ ಬಾಬರಿ ಮಸೀದಿ ಧ್ವಂಸವನ್ನು ಕ್ರಿಮಿನಲ್ ಕೃತ್ಯ ಮತ್ತು ಅಪರಾಧ ಎಂದು ಹೇಳಿ ಮಂದಿರ  ನಿರ್ಮಾಣಕ್ಕೆ ಸುಪ್ರೀಮ್ ಅನುಮತಿ ನೀಡಿದ ಬಳಿಕ ಸಿಬಿಐ ಚುರುಕಾಯಿತು. 2020 ಸೆ. 30ರಂದು ಅಡ್ವಾಣಿ ಸಹಿತ ಎಲ್ಲರನ್ನೂ  ದೋಷಮುಕ್ತಗೊಳಿಸಿದ ಸಿಬಿಐ ನ್ಯಾಯಾಧೀಶ ಎಸ್.ಕೆ. ಯಾದವ್, ಅಂದೇ ನಿವೃತ್ತರಾದರು. ನಿಜವಾಗಿ, ಅವರು ಒಂದು ವರ್ಷದ  ಮೊದಲೇ ನಿವೃತ್ತರಾಗಬೇಕಿತ್ತು. ಆದರೆ, ಈ ಪ್ರಕರಣಕ್ಕೆಂದೇ ಅವರ ಸೇವಾವಧಿಯನ್ನು ವಿಸ್ತರಿಸಲಾಗಿತ್ತು. ಅಷ್ಟಕ್ಕೂ,

ಅಡ್ವಾಣಿಯವರಿಗೆ ಭಾರತ ರತ್ನ ಸಲ್ಲಬೇಕೋ ಬೇಡವೋ ಎಂಬ ಚರ್ಚೆಯೇ ಅಪ್ರಸ್ತುತ. 1992 ರಿಂದ 2020 ಸೆಪ್ಟೆಂಬರ್ ವರೆಗೆ ದೀರ್ಘ  28 ವರ್ಷಗಳ ಕಾಲ ಗಂಭೀರ ಕ್ರಿಮಿನಲ್ ಆರೋಪವನ್ನು ಹೊತ್ತುಕೊಂಡ ಮತ್ತು 1989ರಲ್ಲಿ ರಥಯಾತ್ರೆ ನಡೆಸಿ ದೇಶದ ನಾಗರಿಕರನ್ನು  ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದ್ದಲ್ಲದೇ ರಕ್ತದೋಕುಳಿಗೂ ಕಾರಣವಾದ ವ್ಯಕ್ತಿಯೋರ್ವ ಭಾರತ ರತ್ನಕ್ಕೆ ಅರ್ಹರೇ ಎಂದು  ಚರ್ಚೆಗೊಳಗಾಗುವುದೇ ತಮಾಷೆ. ಅವರನ್ನು ಈಗಲೂ ಭಾರತದ ಗೃಹಸಚಿವರಾಗಿ ಯಾರೂ ನೆನಪಿಸುತ್ತಿಲ್ಲ. ಅಥವಾ ಸಚಿವರಾಗಿ  ಮಹತ್ವದ ಕೊಡುಗೆ ಕೊಟ್ಟವರಾಗಿಯೂ ಸ್ಮರಿಸುತ್ತಿಲ್ಲ. ರಥಯಾತ್ರೆ ಮತ್ತು ಅದಕ್ಕೆ ಸಂಬಂಧಿಸಿದ ನಾಗರಿಕ ಸಂಕಷ್ಟಗಳ ಕಾರಣಕ್ಕಾಗಿಯೇ  ಅವರೀಗಲೂ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಭಾರತ ರತ್ನಕ್ಕೆ ಯಾಕೆ ಅನರ್ಹ ಅನ್ನುವುದಕ್ಕೆ ಈ ಗುರುತೇ ಧಾರಾಳ ಸಾಕು.

ಅಡ್ವಾಣಿಯವರು ರಥಯಾತ್ರೆ ನಡೆಸುವ ಮೊದಲು ಬಾಬರೀ ಮಸೀದಿ ವಿವಾದವು ಅಯೋಧ್ಯೆಗೆ ಸೀಮಿತಗೊಂಡಿತ್ತು. ಬಾಬರೀ ಮಸೀದಿ  ಇದ್ದ ಸ್ಥಳ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ನ್ಯಾಯಾಲಯದಲ್ಲಿ ತನ್ನ ಪಾಡಿಗೆ ನಡೆಯುತ್ತಿತ್ತು. ನ್ಯಾಯಾಲಯದ ತೀರ್ಪಿನ ಮೂಲಕ  ಅದು ಇತ್ಯರ್ಥವಾಗುವುದಕ್ಕೂ ಅವಕಾಶವಿತ್ತು. ಒಂದುವೇಳೆ, ಈ ಪ್ರಕರಣವು ದೇಶವ್ಯಾಪಿ ಸಂಚಲನ ಸೃಷ್ಟಿಸಬೇಕಾದಷ್ಟು ಗಂಭೀರವೇ  ಆಗಿರುತ್ತಿದ್ದರೆ, ಸರ್ದಾರ್ ವಲ್ಲಭಬಾಯಿ  ಪಟೇಲ್, ಸಾವರ್ಕರ್ ಮತ್ತು ಆ ಕಾಲದಲ್ಲಿದ್ದ ಬಲಪಂಥೀಯ ನಾಯಕರು 1947 ಆಗಸ್ಟ್ 15ರ  ಬಳಿಕ ಇದನ್ನೇ ಪ್ರಧಾನ ವಿಷಯವಾಗಿ ಎತ್ತಿಕೊಳ್ಳುತ್ತಿದ್ದರು ಮತ್ತು ದೇಶದಾದ್ಯಂತ ಅದಕ್ಕಾಗಿ ಅಭಿಯಾನವನ್ನೇ ನಡೆಸುತ್ತಿದ್ದರು. ಭಾರತ  ಸ್ವತಂತ್ರಗೊಂಡ  ವೇಳೆ ಇಲ್ಲಿನ ಮುಸ್ಲಿಮ್ ನಾಯಕತ್ವ ಅತ್ಯಂತ ದುರ್ಬಲವಾಗಿತ್ತು ಮತ್ತು ಮುಸ್ಲಿಮರ ದೊಡ್ಡದೊಂದು ಗುಂಪು ಪಾಕಿಸ್ತಾನವಾಗಿ ಬದಲಾಗಿತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಈ ವಿವಾದವು ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸದೇ ಇರುವುದಕ್ಕೆ ಮತ್ತು ವಲ್ಲಭಬಾಯಿ   ನೇತೃತ್ವದಲ್ಲಿ ಗಂಭೀರ ಪ್ರಯತ್ನ ನಡೆಯದೇ ಇರುವುದಕ್ಕೆ ಕಾರಣಗಳೇನು? ನಿಜವಾಗಿ,

1989ರ ಅಡ್ವಾಣಿ ರಥಯಾತ್ರೆ ನಿಕಷಕ್ಕೆ ಒಳಗಾಗಬೇಕಾದದ್ದೇ  ಈ ಕಾರಣಕ್ಕಾಗಿ. ಬಾಬರಿ ಮಸೀದಿ ವಿವಾದವನ್ನು ಶಂಕರಾಚಾರ್ಯರ  ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಲಾಗಿತ್ತು ಮತ್ತು ವಾಜಪೇಯಿಯವರು ಅದನ್ನು ಒಮ್ಮೆ ಪ್ರಸ್ತಾಪಿಸಿಯೂ ಇದ್ದರು ಎಂಬುದನ್ನು  ಪರಿಗಣಿಸುವಾಗ ಅಡ್ವಾಣಿಯವರ ರಥಯಾತ್ರೆಯ ಮರ್ಮ ಅರ್ಥವಾಗುತ್ತದೆ. “ಆ ಜಾಗವನ್ನು ನಾವು ಹೋರಾಡಿಯೇ ಪಡಕೊಳ್ಳುತ್ತೇವೆ,  ಮಾತುಕತೆಯ ಇತ್ಯರ್ಥ ಬೇಕಾಗಿಲ್ಲ...” ಎಂಬ ರಾಜಕೀಯ ನಿಲುವಿನ ಕಾರಣದಿಂದಾಗಿಯೇ ಈ ಪ್ರಕರಣ ಇಷ್ಟೊಂದು ರಕ್ತಪಾತಕ್ಕೆ ಮತ್ತು  ಧಾರ್ಮಿಕ ವಿಭಜನೆಗೆ ಕಾರಣವಾಯಿತು ಎಂದೇ ಹೇಳಬೇಕು. ಇದರ ಸಂಪೂರ್ಣ ಹೊಣೆಯನ್ನು ಅಡ್ವಾಣಿಯವರೇ ಹೊರಬೇಕಾಗುತ್ತದೆ.  ಅವರು ನಡೆಸಿದ ರಥಯಾತ್ರೆ ಮತ್ತು ಆ ಬಳಿಕ ಉಂಟಾದ ಕಾನೂನುಬಾಹಿರ ಧ್ವಂಸವು ಈ ದೇಶದ ಆತ್ಮಕ್ಕೆ ಮಾಡಿರುವ ಗಾಯ ಇನ್ನೂ  ವಾಸಿಯಾಗಿಲ್ಲ. ಮಾತ್ರವಲ್ಲ, ಆ ಗಾಯವನ್ನು 3 ದಶಕಗಳ ಬಳಿಕ ಇವತ್ತಿಗೂ ಜೀವಂತ ಇಡಲಾಗಿದೆಯಲ್ಲದೇ, ಕೆದಕಿ ಕೆದಕಿ ಧರ್ಮ  ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಡ್ವಾಣಿ ನೇತೃತ್ವ ನೀಡಿದ ರಾಜಕೀಯ ಪಕ್ಷವು ಇವತ್ತೂ ಅದರ ದುರ್ಲಾಭವನ್ನು ಪಡೆಯುತ್ತಲೂ  ಇದೆ. ಹೀಗಿರುತ್ತಾ, 

ಭಾರತ ರತ್ನ ಅಡ್ವಾಣಿಯವರ ಮುಡಿಗೇರುವುದೆಂದರೆ, ಅದು ದೇಶದ ಪರಂಪರೆಗೆ ಆಗುವ ಅವಮಾನ. ದೇಶದ  ಆತ್ಮಕ್ಕೆ ಚುಚ್ಚಿದ ಮತ್ತು ಶಾಂತಿ-ನೆಮ್ಮದಿಗೆ ಭಂಗ ತಂದ ಆರೋಪವನ್ನು ನಿರಂತರ 28 ವರ್ಷಗಳ ಎದುರಿಸಿದ ವ್ಯಕ್ತಿಯೋರ್ವ ಭಾರತ  ರತ್ನವಾಗಿ ಗೌರವಿಸಲ್ಪಡುವುದು ಆಘಾತಕಾರಿ ಮತ್ತು ಆತಂಕಕಾರಿ.

Saturday, 3 February 2024

ವಾಯಿಲ್ ದಹ್ ದಾಹ್, ಹಕೀಮ್ ಮತ್ತು ಕ್ರೌರ್ಯದ 100 ದಿನಗಳು





ಫೆಲೆಸ್ತೀನ್ ಮೇಲೆ ಇಸ್ರೇಲ್‌ನ ಮುತ್ತಿಗೆ 100 ದಿನಗಳನ್ನೂ ದಾಟಿ ಮುಂದುವರಿದಿದೆ. ಫೆಲೆಸ್ತೀನಿನ 85% ಮಂದಿ ಕೂಡಾ ತಮ್ಮ ಮನೆಮಾರುಗಳನ್ನು ತೊರೆದು ನಿರಾಶ್ರಿತರಾಗಿ ಅಲೆಯುತ್ತಿದ್ದಾರೆ. ಗಾಝಾದ ಬಹುತೇಕ ಎಲ್ಲ ಆಸ್ಪತ್ರೆಗಳೂ ಸ್ಥಗಿತಗೊಂಡಿವೆ. ಶಾಲೆ,  ಕಾಲೇಜುಗಳು ಧರಾಶಾಹಿಯಾಗಿವೆ. ಯಾವ ಕ್ಷಣದಲ್ಲೂ ತಾವು ಹತ್ಯೆಗೀಡಾಗಬಹುದು ಎಂಬ ನಿರೀಕ್ಷೆಯಿಂದಲೇ ಫೆಲೆಸ್ತೀನಿಯರು ದಿನ  ದೂಡುತ್ತಿದ್ದಾರೆ. ರೋಗಿಗಳು, ಗಾಯಾಳುಗಳು, ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ದಾಳಿಯಿಂದ ತೀವ್ರ ಸಂಕಷ್ಟಕ್ಕೆ  ಒಳಗಾಗಿದ್ದಾರೆ. ಜನನಿಬಿಡ ಅಪಾರ್ಟ್ಮೆಂಟ್‌ಗಳ ಮೇಲೆ ಇಸ್ರೇಲ್ ಬಾಂಬ್ ಹಾಕುತ್ತಿರುವುದನ್ನು ನೋಡಿದರೆ, ನರಮೇಧವೇ ಅದರ  ಉದ್ದೇಶ ಅನ್ನುವುದನ್ನು ಸ್ಪಷ್ಟಪಡಿಸುತ್ತಿದೆ. ಹಮಾಸ್‌ನ ನೆಪದಲ್ಲಿ ಇಡೀ ಫೆಲೆಸ್ತೀನನ್ನು ನಿರ್ವೀರ್ಯಗೊಳಿಸುವುದು ಮತ್ತು ಸಂಪೂರ್ಣ  ಪರಾವಲಂಬಿಯಾಗಿಸುವುದು ಅದರ ರಣತಂತ್ರವೆಂಬುದು ದಿನೇದಿನೇ ನಿಚ್ಚಲವಾಗುತ್ತಿದೆ.


ಈಗಾಗಲೇ ಹತ್ಯೆಗೀಡಾದ 23 ಸಾವಿರ ಮಂದಿ ಫೆಲೆಸ್ತೀನಿಯರ ಪೈಕಿ 10 ಸಾವಿರಕ್ಕಿಂತಲೂ ಅಧಿಕ ಮಕ್ಕಳೇ ಇದ್ದಾರೆ. 7  ಸಾವಿರಕ್ಕಿಂತಲೂ ಅಧಿಕ ಮಹಿಳೆಯರಿದ್ದಾರೆ. ಹಮಾಸನ್ನು ನಾಶ ಮಾಡುತ್ತೇವೆ ಎಂದು ಹೊರಟ ಇಸ್ರೇಲ್ ಎಲ್ಲವನ್ನೂ ನಾಶಮಾಡುತ್ತಿದೆ.  ಈ ಕ್ರೌರ್ಯದ ಭೀಕರತೆಯನ್ನು ಪ್ರತಿದಿನ ಅಲ್ ಜಝೀರಾ, ಮಿಡ್ಲ್ ಈಸ್ಟ್ ಐಯಂಥ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು  ಬಿತ್ತರಿಸುತ್ತಲೂ ಇವೆ. ಇಸ್ರೇಲ್‌ನ ಕ್ರೌರ್ಯದ ತೀವ್ರತೆಯನ್ನು ಅಂದಾಜಿಸುವುದಕ್ಕೆ ಗಾಝಾದ 30 ವರ್ಷದ ಹಕೀಮ್ ಮತ್ತು 56  ವರ್ಷದ ವಾಯಿಲ್ ದಹ್ ದಾಹ್ ರ ಅನುಭವಗಳೇ ಧಾರಾಳ ಸಾಕು. ನಿಜವಾಗಿ, ಈ ಹಕೀಮ್- ಗಾಝಾ ಪರಿಸ್ಥಿತಿಯ ಒಂದು ತುದಿಯಾದರೆ ವಾಯಿಲ್ ದಹ್ ದಾಹ್ ರು ಇನ್ನೊಂದು ತುದಿ.


ಗಾಝಾದ ಕೆಲವು ಯುವಕರನ್ನು ಇಸ್ರೇಲ್ ಸೇನೆ ಬಂಧಿಸಿ ಕೊಂಡೊಯ್ಯುತ್ತಿರುವ ವೀಡಿಯೋ ಮತ್ತು ಚಿತ್ರಗಳು ಡಿಸೆಂಬರ್  ಮಧ್ಯಭಾಗದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಯುವಕರ ಮೈಮೇಲೆ ಒಳವಸ್ತ್ರವೊಂದನ್ನು ಬಿಟ್ಟು ಇನ್ನೇನೂ ಇರಲಿಲ್ಲ. ಮಂಡಿಯೂರಿ  ಕುಳಿತಿದ್ದ ಈ ಗುಂಪಿನಲ್ಲಿ ಈ ಹಕೀಮ್ ಕೂಡಾ ಇದ್ದ. ಹಮಾಸ್‌ನ ಭೂಗತ ಸುರಂಗ ಮಾರ್ಗದ ಪತ್ತೆ ಕಾರ್ಯದಲ್ಲಿ ಇಸ್ರೇಲ್  ಯೋಧರು ಈ ಹಕೀಮ್‌ನನ್ನು ಮಾನವ ಬಾಂಬ್ ಆಗಿ ಪರಿವರ್ತಿಸುವ ತಂತ್ರ ಹೆಣೆದರು. ತಾವು ಪತ್ತೆ ಹಚ್ಚಿದ ಗಾಝಾದ  ಸುರಂಗದೊಳಗೆ ಹಮಾಸ್ ಯೋಧರು ಇದ್ದಾರೋ ಇಲ್ಲವೋ ಎಂಬುದಾಗಿ ಈ ಯೋಧರಿಗೆ ಪರೀಕ್ಷಿಸಬೇಕಾಗಿತ್ತು. ಅದಕ್ಕಾಗಿ ಈ  ಹಕೀಮ್‌ನನ್ನು ಬಳಸಿಕೊಳ್ಳಲು ಅವರು ನಿರ್ಧರಿಸಿದರು. ಈತನ ದೇಹಕ್ಕೆ ಬಾಂಬ್ ಬೆಲ್ಟನ್ನು ಕಟ್ಟಲಾಯಿತಲ್ಲದೇ, ತಲೆಗೊಂದು  ಕ್ಯಾಮರಾವನ್ನೂ ಅಳವಡಿಸಲಾಯಿತು. ಬಳಿಕ ಸುರಂಗದೊಳಗೆ ಕಳುಹಿಸಿಕೊಡಲಾಯಿತು. ಸುರಂಗದೊಳಗಿನ ಪ್ರತಿಯೊಂದೂ ಆ  ಕ್ಯಾಮರಾದ ಮೂಲಕ ಹೊರಗಿರುವ ಯೋಧರಿಗೆ ಸ್ಪಷ್ಟವಾಗಿ ಕಾಣಿಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದುವೇಳೆ,


ಸುರಂಗದೊಳಗೆ ಹಮಾಸ್ ಯೋಧರು ಅಡಗಿದ್ದರೆ ತಕ್ಷಣ ಈತನ ದೇಹಕ್ಕೆ ಕಟ್ಟಲಾಗಿದ್ದ ಬಾಂಬನ್ನು ಉಡಾಯಿಸುವುದು ಯೋಧರ  ತಂತ್ರವಾಗಿತ್ತು. ಹಕೀಮ್‌ಗೂ ಅದು ಗೊತ್ತಿತ್ತು. ನಿನ್ನನ್ನು ದೇವನಲ್ಲಿಗೆ ಕಳುಹಿಸುತ್ತಿದ್ದೇವೆ ಎಂದೇ ಆತನನ್ನು ಕಳುಹಿಸುವ ಮೊದಲು  ಯೋಧರು ತಿಳಿಸಿದ್ದರು. ಆದರೆ, ಸುರಂಗದೊಳಗೆ ಹಮಾಸ್ ಯೋಧರು ಪತ್ತೆಯಾಗದ ಕಾರಣ ಆತ ಜೀವಸಮೇತ ಹೊರಬಂದ  ಮತ್ತು ಆತನನ್ನು ಯೋಧರು ಬಿಡುಗಡೆಗೊಳಿಸಿದರು. ಈ ಇಡೀ ಘಟನೆಯನ್ನು ಈ ಹಕೀಮ್ ಆ ಬಳಿಕ ಮಾಧ್ಯಮಗಳ ಜೊತೆ  ಹಂಚಿಕೊಂಡ. ಈತನೊಬ್ಬನೇ ಅಲ್ಲ, 15 ವರ್ಷದ ಬಾಲಕನೂ ಸೇರಿದಂತೆ ಹಲವು ಮಂದಿ ಇಂಥ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದೂ  ವರದಿ ಇದೆ ಮತ್ತು ಅದರಲ್ಲಿ ಸ್ಫೋಟಕ್ಕೆ ಒಳಗಾದವರು ಎಷ್ಟು ಮಂದಿ ಅನ್ನುವುದು ಸ್ಪಷ್ಟವಾಗಿಲ್ಲ. ಹಾಗೆಯೇ,


ವಾಯಿಲ್ ದಹ್ ದಾಹ್ ರದ್ದು ಇನ್ನೊಂದು ತುದಿ. ಅಲ್ ಜಝೀರಾ ಚಾನೆಲ್‌ನ ಪತ್ರಕರ್ತ ಮತ್ತು ಫೆಲೆಸ್ತೀನ್ ಚೀಫ್ ಬ್ಯೂರೋ ಕೂಡ  ಆಗಿರುವ ಇವರು ಈ ವೃತ್ತಿಗಾಗಿ ತೆತ್ತಿರುವ ಬೆಲೆ ಅಪಾರವಾದದ್ದು. ಗಾಝಾದಲ್ಲಿ ವೃತ್ತಿನಿರತರಾಗಿರುವ ಪತ್ರಕರ್ತರನ್ನು ಇಸ್ರೇಲ್ ಬಾಂಬ್  ಹಾಕಿ ಸಾಯಿಸುತ್ತಿರುವುದು ಎಲ್ಲರಿಗೂ ಗೊತ್ತು. ಈಗಾಗಲೇ ೧೦೦ರಷ್ಟು ಪತ್ರಕರ್ತರನ್ನು ಇಸ್ರೇಲ್ ಬಾಂಬ್ ಹಾಕಿ ಸಾಯಿಸಿದೆ.  ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನಲ್ಲಿ ಇಸ್ರೇಲ್ ಈ ಕಾರಣಕ್ಕಾಗಿಯೇ ವಿಚಾರಣೆಗೂ ಒಳಗಾಗಿದೆ. ಈ ವಾಯಿಲ್  ದಹ್ ದಾಹ್ ರು ಕಳೆದ ಅಕ್ಟೋಬರ್‌ನಲ್ಲಿ ಅಲ್ ಜಝೀರಾ ಚಾನೆಲ್‌ಗಾಗಿ ಲೈವ್ ವರದಿ ನೀಡುತ್ತಿದ್ದಾಗಲೇ ಅವರ ಪತ್ನಿ, 15 ವರ್ಷದ  ಮಗಳು, 7 ವರ್ಷದ ಮಗ ಮತ್ತು ಮೊಮ್ಮಗಳನ್ನು ಇಸ್ರೇಲ್ ಬಾಂಬ್ ಹಾಕಿ ಸಾಯಿಸಿತ್ತು. ಅಲ್ ಜಝೀರಾ ಫೋಟೋಗ್ರಾಫರ್ ಆಗಿದ್ದ  27 ವರ್ಷದ ಇವರ ಮಗ ಹಂಝ ಮತ್ತು ಮಗಳು ಬದುಕುಳಿದಿದ್ದರು. ಕಳೆದ ಜನವರಿ 7ರಂದು ಈ ಮಗನನ್ನೂ ಇಸ್ರೇಲ್ ಬಾಂಬ್  ಹಾಕಿ ಸಾಯಿಸಿದೆ. ಹೀಗೆ ಈ ದಹ್ ದಾಹ್ ತನ್ನ ಇಡೀ ಕುಟುಂಬವನ್ನೇ ಕಳಕೊಂಡು ಗಾಝಾದಲ್ಲಿ ಒಣ ಮರದಂತೆ ಅನಾಥವಾಗಿ  ನಿಂತಿದ್ದಾರೆ. ನಿಜವಾಗಿ,

ಗಾಝಾದಲ್ಲಿ ತಾನು ನಡೆಸುತ್ತಿರುವ ನರಮೇಧವನ್ನು ಇಸ್ರೇಲ್ ಬಚ್ಚಿಡಲು ಪ್ರಯತ್ನಿಸುತ್ತಿದೆ. ಗಾಝಾ ಪ್ರವೇಶಕ್ಕೆ ಅಂತಾರಾಷ್ಟ್ರೀಯ  ಮಾಧ್ಯಮ ಸಂಸ್ಥೆಗಳಿಗೆ ಇಸ್ರೇಲ್ ಅನುಮತಿಯನ್ನೂ ನೀಡುತ್ತಿಲ್ಲ. ಆದ್ದರಿಂದ, ಫೆಲೆಸ್ತೀನ್ ಕುರಿತು ಅಲ್ಲಿನ ನಾಗರಿಕರೇ ಸೆರೆ ಹಿಡಿದಿರುವ  ಸಣ್ಣ ಪುಟ್ಟ ವೀಡಿಯೋಗಳು, ಚಿತ್ರಗಳು ಮತ್ತು ವರದಿಗಳನ್ನೇ ಜಾಗತಿಕ ಮಾಧ್ಯಮಗಳು ಇವತ್ತು ಆಶ್ರಯಿಸುವಂತಾಗಿದೆ. ಫೆಲೆಸ್ತೀನಿ  ಪತ್ರಕರ್ತರು ಜೀವ ಕೈಯಲ್ಲಿ ಹಿಡಿದು ವೃತ್ತಿನಿರತರಾಗಬೇಕಾದ ಭಯಾನಕ ಸ್ಥಿತಿಯಿದೆ. ಅಂದಹಾಗೆ, ಯಾವುದೇ ವೃತ್ತಿನಿರತ  ಪತ್ರಕರ್ತರಿಗೂ ನಾಗರಿಕ ಪತ್ರಕರ್ತರಿಗೂ ಸಾಕಷ್ಟು ವ್ಯತ್ಯಾಸ ಇದೆ. ವೃತ್ತಿನಿರತ ಪತ್ರಕರ್ತರಲ್ಲಿ ಕೌಶಲ್ಯ ಇರುತ್ತದೆ. ಯಾವುದನ್ನು ಹೇಗೆ,  ಯಾವ ಕೋನದಲ್ಲಿ ಚಿತ್ರಿಸಬೇಕು ಮತ್ತು ಹೇಗೆ ವರದಿ ಮಾಡಬೇಕು ಎಂಬ ತಿಳುವಳಿಕೆ ಇರುತ್ತದೆ. ಆದರೆ ಕಂಡದ್ದನ್ನು ಮೊಬೈಲ್‌ನಲ್ಲಿ  ಸೆರೆ ಹಿಡಿಯುವ ಸಾಮಾನ್ಯ ನಾಗರಿಕರಿಗೆ ಈ ತಿಳುವಳಿಕೆ ಮತ್ತು ಕೌಶಲ್ಯ ಇರುವುದಿಲ್ಲ. ಇವತ್ತು ಜಗತ್ತಿಗೆ ಲಭ್ಯವಾಗುತ್ತಿರುವುದು ಈ  ಬಡಪಾಯಿ ನಾಗರಿಕರು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೋಗಳು ಹಾಗೂ ಅವರು ತಮಗೆ ತಿಳಿದಷ್ಟು ಬರೆದಿರುವ ವರ ದಿಗಳು. ಹಾಗಂತ, ಪತ್ರಕರ್ತರೇ ಅಲ್ಲದ ಇವರು ಸೆರೆಹಿಡಿದಿರುವ ಚಿತ್ರಗಳು ಮತ್ತು ವೀಡಿಯೋಗಳೇ ಇಷ್ಟು ಭಯಾನಕವಾಗಿದೆ ಮತ್ತು  ಜಗತ್ತಿನ ಎದೆಗೂಡನ್ನು ನಡುಗಿಸುವಂತಾಗಿದೆ ಎಂದಮೇಲೆ, ವೃತ್ತಿನಿರತ ಪತ್ರಕರ್ತರು ಮುಕ್ತವಾಗಿ ತಿರುಗಿ ವರದಿ ಮಾಡುವಂತಿದ್ದರೆ ಆ  ವರದಿ, ವೀಡಿಯೋ ಮತ್ತು ಚಿತ್ರಗಳು ಇನ್ನೆಷ್ಟು ಭಯಾನಕವಿದ್ದೀತು? ಬಹುಶಃ, ಈ ವಾಸ್ತವವನ್ನು ಇತರೆಲ್ಲರಿಗಿಂತ ಹೆಚ್ಚಾಗಿ ಇಸ್ರೇಲ್  ಅರಿತುಕೊಂಡಿದೆ. ಒಂದುವೇಳೆ,


ಸ್ವತಂತ್ರ  ಪತ್ರಕರ್ತರು ಗಾಝಾ ಪ್ರವೇಶಿಸಿದರೆ, ಅವರ ವರದಿಗಾರಿಕೆಯಿಂದಾಗಿ ಈಗ ತನ್ನ ಪರ ಇರುವವರಲ್ಲಿ ಹೆಚ್ಚಿನ ಮಂದಿಯನ್ನೂ  ತಾನು ಕಳಕೊಳ್ಳಬೇಕಾದೀತು ಎಂಬ ಭಯ ಅದಕ್ಕಿದೆ. ತನ್ನನ್ನು ಬೆಂಬಲಿಸುವ ರಾಷ್ಟ್ರಗಳಲ್ಲೇ  ತನ್ನ ವಿರುದ್ಧ ಪ್ರತಿಭಟನೆಗಳು  ಕಾಣಿಸಿಕೊಂಡೀತು ಮತ್ತು ಆಯಾ ರಾಷ್ಟ್ರಗಳು ತನ್ನನ್ನು ಕೈಬಿಟ್ಟೀತು ಎಂಬ ಆತಂಕ ಅದನ್ನು ಕಾಡುತ್ತಿದೆ. ಆ ಕಾರಣದಿಂದಲೇ ಫೆಲೆಸ್ತೀನ್‌ನಲ್ಲಿ ವೃತ್ತಿನಿರತರಾಗಿರುವ ಪತ್ರಕರ್ತರನ್ನು ಅದು ಹುಡುಕಿ ಹುಡುಕಿ ಸಾಯಿಸುತ್ತಿದೆ ಮತ್ತು ವಿದೇಶಿ ಪತ್ರಕರ್ತರನ್ನು ಗಾಝಾ  ಪ್ರವೇಶಿಸದಂತೆ ತಡೆಯುತ್ತಿದೆ. ಅಷ್ಟಕ್ಕೂ,


ಅಣುಬಾಂಬೂ ಸೇರಿದಂತೆ ಅತ್ಯಾಧುನಿಕ ಶಸ್ತಾçಸ್ತçಗಳನ್ನು ಹೊಂದಿರುವ ದೇಶವೊಂದು ಅತ್ತ ದೇಶವೇ ಅಲ್ಲದ ಮತ್ತು ತನ್ನದೇ ಮಿಲಿಟರಿ  ವ್ಯವಸ್ಥೆಯನ್ನೂ ಹೊಂದಿಲ್ಲದ ಭೂಪ್ರದೇಶದ ಮೇಲೆ 100 ದಿನಗಳಿಗಿಂತಲೂ ಅಧಿಕ ಸಮಯದಿಂದ ಸತತ ಬಾಂಬ್ ದಾಳಿ ನಡೆಸುತ್ತಿದೆ  ಎಂಬುದು ಮಾನವ ಇತಿಹಾಸದಲ್ಲೇ  ಮೊಟ್ಟಮೊದಲನೆಯದಾದ ಮತ್ತು ಅತ್ಯಂತ ಭೀಭತ್ಸಕರವಾದ ಕ್ರೌರ್ಯವಾಗಿದೆ. ಆಯುಧ  ಬಲವಿಲ್ಲದ ಜನತೆಯೊಂದರ ಮೇಲೆ ಬಲಶಾಲಿ ರಾಷ್ಟ್ರವೊಂದು ನಡೆಸುತ್ತಿರುವ ಈ ಏಕಮುಖ ದಾಳಿಯನ್ನು ‘ಆತ್ಮರಕ್ಷಣೆ’ ಎಂಬ ಹೆಸರಲ್ಲಿ  ಜಗತ್ತಿನ ಬಲಾಢ್ಯ ಶಕ್ತಿಗಳು ಸಮರ್ಥಿಸಿಕೊಳ್ಳುತ್ತಿರುವುದು ಮನುಷ್ಯತ್ವದ ಅಣಕವಾಗಿದೆ. ನಿಜವಾಗಿ, ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕ್ರಿಮಿನಲ್  ನ್ಯಾಯಾಲಯ ಇತ್ಯಾದಿಗಳು ಬಡರಾಷ್ಟ್ರಗಳ ಮೇಲೆ ಸವಾರಿ ಮಾಡಲು ಬಲಾಢ್ಯರು ರೂಪಿಸಿಕೊಂಡಿರುವ ಆಯುಧಗಳೇ ಹೊರತು ಇ ನ್ನೇನಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಅಪರಾಧಿಗಳು ಮತ್ತು ಪ್ರಭುತ್ವದ ಅನೈತಿಕ ನಂಟಿನ ಅನಾವರಣ




`ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಜೈಲಿನಿಂದ ಹೊರಗಿರುವುದಕ್ಕೆ ಅನರ್ಹರು' ಎಂದು ಸುಪ್ರೀಮ್ ಕೋರ್ಟು ತೀರ್ಪು  ನೀಡುತ್ತಿದ್ದ ಹೊತ್ತಿನಲ್ಲೇ, 20 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಬಿಡುಗಡೆಯ ಭಾಗ್ಯ  ಸಿಕ್ಕಿದೆ. ಈತ ಸ್ವಘೋಷಿತ ಧಾರ್ಮಿಕ ನಾಯಕ. ದೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ. ಬಿಜೆಪಿಯೊಂದಿಗೆ ನಿಕಟ ಸಂಬಂಧ ಇರುವ  ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾನೆ. ತನ್ನ ಆಶ್ರಮದಲ್ಲಿರುವ ಇಬ್ಬರ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ ಸಿಬಿಐ  ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಲ್ಪಟ್ಟವ. ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನರಿಯಾ ಜೈಲಿನಲ್ಲಿ ಕಳೆದ  2017ರಿಂದಲೂ ಬಂಧಿಯಾಗಿರುವ ಈತನಿಗೆ ನ್ಯಾಯಾಲಯವು 50 ದಿನಗಳ ಪೆರೋಲನ್ನು (ಬಿಡುಗಡೆ) ಮಂಜೂರು ಮಾಡಿದೆ.  ಹಾಗಂತ,

ಇದು ಮೊದಲ ಪೆರೋಲ್ ಅಲ್ಲ. ಇದು ಕಳೆದ 24 ತಿಂಗಳುಗಳಲ್ಲಿ ಈತನಿಗೆ ಲಭಿಸಿರುವ 7ನೇ ಪೆರೋಲ್ ಮತ್ತು ಕಳೆದ ನಾಲ್ಕು  ವರ್ಷಗಳಲ್ಲಿ ಸಿಕ್ಕಿರುವ 9ನೇ ಪೆರೋಲ್ ಕೂಡಾ ಹೌದು. ಕೇವಲ ಕಳೆದ ಒಂದೇ ವರ್ಷದಲ್ಲಿ ಈತನಿಗೆ 3 ಪೆರೋಲ್‌ಗಳು ಸಿಕ್ಕಿವೆ ಮತ್ತು  ಆ ಮೂಲಕ ಆತ 91 ದಿನಗಳ ಕಾಲ ಜೈಲಿನಿಂದ ಹೊರಗೆ ಇದ್ದ. ದೇರಾ ಸಚ್ಚಾ ಸೌದಾದ ಮಾಜಿ ಮುಖ್ಯಸ್ಥ ಸತ್ನಾಮ್ ಸಿಂಗ್ ಜನ್ಮ  ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದಕ್ಕಾಗಿ ಪೆರೋಲ್ ಮೂಲಕ ಜೈಲಿನಿಂದ ಹೊರಬಂದ ಆತ, ಭಾರೀ ಗಾತ್ರದ ಖಡ್ಗದಿಂದ ಕೇಕ್  ಕತ್ತರಿಸಿದ್ದ. ಆ ವೀಡಿಯೋ ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹರ್ಯಾಣದಲ್ಲಿ ಪಂಚಾಯತ್ ಚುನಾವಣೆ  ನಡೆಯುವುದಕ್ಕಿಂತ ತುಸು ಮುನ್ನ 2022ರ ಅಕ್ಟೋಬರ್‌ನಲ್ಲಿ ಈತನಿಗೆ ಪೆರೋಲ್ ಸಿಕ್ಕಿತ್ತು. ಹೀಗೆ ಬಿಡುಗಡೆಗೊಂಡ ಈತ ವರ್ಚುವಲ್  ಸತ್ಸಂಗ ನಡೆಸಿದ್ದ ಮತ್ತು ಬಿಜೆಪಿಯ ಹಲವು ಮುಖಂಡರು ಇದರಲ್ಲಿ ಭಾಗಿಯಾಗಿದ್ದರು. ತನ್ನ ತಾಯಿಯನ್ನು ನೋಡುವುದಕ್ಕಾಗಿ 2020  ಮತ್ತು 21ರಲ್ಲಿ ತಲಾ ಒಂದು ಬಾರಿ ಈತನಿಗೆ ಪೆರೋಲ್ ಸಿಕ್ಕಿತ್ತು. 2022ರಲ್ಲಂತೂ ಮೂರು ಬಾರಿ ಪೆರೋಲ್ ಸಿಕ್ಕಿತ್ತು. ಆಗೆಲ್ಲ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರವನ್ನು ವಿಪಕ್ಷಗಳು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದುವು. ಹಾಗಂತ,

ರಾಜ್ಯ ಸರಕಾರದ ಸಹಕಾರ ಇಲ್ಲದೇ ಅಪರಾಧಿಯೋರ್ವ ಇಷ್ಟು ಸಲೀಸಾಗಿ ಪೆರೋಲ್ ಪಡಕೊಂಡು ಜೈಲಿನಿಂದ ಹೊರಡುವುದಕ್ಕೆ  ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಬಿಲ್ಕೀಸ್ ಬಾನು ಪ್ರಕರಣದ ಅಪರಾಧಿಗಳಿಗೂ ಇಂಥದ್ದೇ ಪೆರೋಲ್ ಲಭಿಸಿದೆ. 2023  ಆಗಸ್ಟ್ 15 ರಂದು ಸನ್ನಡತೆಯ ಆಧಾರದಲ್ಲಿ ಈ 11 ಮಂದಿ ಅಪರಾಧಿಗಳು ಬಿಡುಗಡೆಗೊಳ್ಳುವುದಕ್ಕಿಂತ ಮೊದಲು ಹಲವಾರು ಬಾರಿ  ಪೆರೋಲ್‌ಗಳನ್ನು ಪಡೆದಿದ್ದರು. ರಮೇಶ್ ಭಾಯಿ ರೂಪಾ ಭಾಯಿ ಚಂದನ ಎಂಬ ಅಪರಾಧಿ ಒಟ್ಟು 1198 ದಿನಗಳ ಕಾಲ ಜೈಲಿನಿಂದ  ಹೊರಗಿದ್ದ. ರಾಜು ಭಾಯಿ  ಬಾಬುಲಾಲ್ ಸೋನಿ ಎಂಬವ 1166 ದಿನಗಳ ಕಾಲ ಜೈಲಿನಿಂದ ಹೊರಗಿದ್ದ. ಪ್ರದೀಪ್ ರಮಣ್ ಲಾಲ್  ಮೋಧಿಯಾ ಎಂಬವನು  1011 ದಿನಗಳ ಕಾಲ ಜೈಲಿನಿಂದ ಹೊರಗಿದ್ದು ಓಡಾಡಿಕೊಂಡಿದ್ದ. ಇವರ ಹೊರತಾಗಿ ಜಸ್ವಂತ್ ಭಾಯಿ   ಚತುರ್ ಭಾಯಿ  ನೈ ಎಂಬವ 950 ದಿನಗಳ ಕಾಲ, ಗೋವಿಂದ ಭಾಯಿ  ಲಖಮ್ ಭಾಯಿ  ನೈ ಎಂಬವ 986 ದಿನಗಳ ಕಾಲ, ಶೈಲೇಶ್ ಭಾಯಿ   ಚಿಮಣ್ ಲಾಲ್ ಭಟ್ 934 ದಿನಗಳ ಕಾಲ ಮತ್ತು ಬಿಪಿನ್ ಚಂದ್ರ ಕನ್ನಯ್ಯ ಲಾಲ್ ಜೋಷಿ ಎಂಬವ 909 ದಿನಗಳ ಕಾಲ ಜೈಲಿನಿಂದ  ಹೊರಗಿದ್ದರು. ಈ ಅಪರಾಧಿಗಳ ಪೈಕಿ ಅತ್ಯಂತ ಕಡಿಮೆ ಕಾಲ ಜೈಲಿನಿಂದ ಹೊರಗಿದ್ದವನ ಹೆಸರು ಮಿತೇಶ್ ಭಾಯಿ  ಚಿಮಣ್ ಲಾಲ್  ಭಟ್ ಎಂದಾಗಿದ್ದು, ಆತ 771 ದಿನಗಳ ಕಾಲ ಜೈಲಿನಿಂದ ಬಿಡುಗಡೆ ಹೊಂದಿದ್ದ. ಈ ಎಲ್ಲ ಮಾಹಿತಿಯನ್ನು ಖುದ್ದು ಗುಜರಾತ್  ಸರ್ಕಾರವೇ ಸುಪ್ರೀಮ್ ಕೋರ್ಟ್ಗೆ ತಿಳಿಸಿದೆ.

2002ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆದ ಭೀಕರ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ಸರ್ಕಾರ ಕೊಟ್ಟ ಗೌರವ ಇದು.  21ರ ಹರೆಯದ ಗರ್ಭಿಣಿ ಬಿಲ್ಕೀಸ್ ಬಾನು ಮೇಲೆ ಈ ದುರುಳರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯ ಮೂರು ವರ್ಷದ  ಮಗಳನ್ನು ನೆಲಕ್ಕೆ ಅಪ್ಪಳಿಸಿ ಕೊಂದಿದ್ದರು ಮತ್ತು ಕುಟುಂಬದ 7 ಮಂದಿಯ ಹತ್ಯೆ ನಡೆಸಿದ್ದರು. ಈ ಅಪರಾಧ ಸಾಬೀತಾದ ಕಾರಣದಿಂದಲೇ ಸಿಬಿಐ ನ್ಯಾಯಾಲಯ 2008ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ 2012ರಲ್ಲಿ ಎತ್ತಿ ಹಿಡಿದಿತ್ತು. ಆ  ಬಳಿಕ ಸುಪ್ರೀಮ್ ಕೋರ್ಟಿನ ಕದ ತಟ್ಟುವ ಅವಕಾಶ ಈ ಅಪರಾಧಿಗಳಿಗೆ ಇತ್ತಾದರೂ ಅವರು ಅದಕ್ಕಾಗಿ ಪ್ರಯತ್ನಿಸಲಿಲ್ಲ. ಬಹುಶಃ, ಈ  ಜೀವಾವಧಿ ಶಿಕ್ಷೆ ಎಲ್ಲಿ ಮರಣ ದಂಡನೆಯಾಗಿ ಪರಿವರ್ತನೆಯಾದೀತೋ ಎಂಬ ಭಯ ಇವರನ್ನು ಕಾಡಿರಬೇಕು. ನಿಜವಾಗಿ,

ಇವರು ಮಾಡಿರುವ ಕೃತ್ಯಕ್ಕೆ ಮರಣ ದಂಡನೆಯೇ ಸೂಕ್ತ ಶಿಕ್ಷೆ. ಯಾವಾಗ ಇವರಿಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಬಾಂಬೆ  ಹೈಕೋರ್ಟು ಎತ್ತಿ ಹಿಡಿಯಿತೋ ಮುಂದೆ ಇವರ ಹಿತ ಕಾಯುವ ಕೆಲಸವನ್ನು ಗುಜರಾತ್ ಸರಕಾರ ವಹಿಸಿಕೊಂಡಂತೆ  ಕಾಣಿಸುತ್ತಿದೆ.  2012ರಿಂದ 2023 ಆಗಸ್ಟ್ 15ರಂದು ಬಿಡುಗಡೆಯಾಗುವ ವರೆಗಿನ ಅವಧಿಯ ನಡುವೆ ಈ 11 ಮಂದಿ ಅಪರಾಧಿಗಳು ಕನಿಷ್ಠ 2  ವರ್ಷಗಳಿಂದ ಸುಮಾರು 4 ವರ್ಷಗಳ ತನಕ ಜೈಲಿನಿಂದ ಹೊರಗಿದ್ದುದು ಇದನ್ನೇ ಸೂಚಿಸುತ್ತದೆ. ಇದೀಗ ಈ ದುರುಳರನ್ನು  ಸುಪ್ರೀಮ್ ಕೋರ್ಟು ಮತ್ತೆ ಜೈಲಿಗಟ್ಟಿದೆ. ಜೈಲಿಗೆ ಮರಳುವುದಕ್ಕೆ ಕಾಲಾವಕಾಶ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.  ಇದು ಆಶಾದಾಯಕ ಬೆಳವಣಿಗೆಯಾದರೂ ಸಂಭ್ರಮಿಸುವಂಥದ್ದಲ್ಲ. ಯಾಕೆಂದರೆ,
ಆಡಳಿತಗಾರರು ಅಪರಾಧಿಗಳ ಪೋಷಕ ಪಾತ್ರವನ್ನು ನಿಭಾಯಿಸುತ್ತಿರುವ ವರೆಗೆ ಶಿಕ್ಷೆ ಎಂಬುದು ಸರಕಾರಿ ಕಡತಗಳಿಗಷ್ಟೇ  ಸೀಮಿತವಾಗಿರುತ್ತದೆ. ಅಪರಾಧಿಗಳ ಜೊತೆ ಆಡಳಿತಗಾರರೇ ಶಾಮೀಲಾದರೆ ಕಾನೂನಿನ ಕಣ್ಣಿಗೆ ಮಣ್ಣೆರಚುವುದು ಕಷ್ಟ ಅಲ್ಲ. ಈ 11  ಮಂದಿ ಅಪರಾಧಿಗಳು ಕಳೆದ ಒಂದು ದಶಕದಲ್ಲಿ ನೂರಕ್ಕಿಂತಲೂ ಅಧಿಕ ಬಾರಿ ಪಡೆದಿರುವ ಬಿಡುಗಡೆ ಭಾಗ್ಯವೇ ಇದಕ್ಕೆ ಸಾಕ್ಷಿ.  ನಿಜವಾಗಿ, ಅಪರಾಧಿಗಳಲ್ಲಿ ಪಶ್ಚಾತ್ತಾಪಭಾವವನ್ನು ಮೂಡಿಸಬೇಕು ಮತ್ತು ಸನ್ನಡತೆಯನ್ನು ಬೆಳೆಸಬೇಕು ಎಂಬ ಉದ್ದೇಶವೂ  ನ್ಯಾಯಾಲಯ ವಿಧಿಸುವ ಶಿಕ್ಷೆಯ ಹಿಂದಿರುತ್ತದೆ. ಆದರೆ ಆಡಳಿತಗಾರರು ಅಪರಾಧಿಗಳ ಬೆಂಬಲಕ್ಕೆ ನಿಂತಾಗ ಈ ಉದ್ದೇಶವೇ ಅರ್ಥ  ಕಳಕೊಳ್ಳುತ್ತದೆ. ಅಪರಾಧಿ ನಿಶ್ಚಿಂತರಾಗುತ್ತಾರೆ ಮತ್ತು ಈ ಹಿಂದಿಗಿಂತಲೂ ಹೆಚ್ಚು ಕ್ರೂರಿಗಳಾಗುತ್ತಾರೆ. 2020ರಲ್ಲಿ ಪೆರೋಲ್ ಮೂಲಕ  ಜೈಲಿನಿಂದ ಹೊರಬಂದ ಮಿತೇಶ್ ಚಿಮಣ್‌ಲಾಲ್ ಭಟ್ ಇದಕ್ಕೊಂದು ನಿದರ್ಶನ. ಈ ಅವಧಿಯಲ್ಲಿ ಈತನ ಮೇಲೆ ಪ್ರಕರಣ  ದಾಖಲಾಗಿತ್ತು. ಮಹಿಳೆಗೆ ಕಿರುಕುಳ ನೀಡಿದ್ದು, ಉದ್ದೇಶಪೂರ್ವಕವಾಗಿ ಅವಮಾನಿಸಿದ್ದು, ಶಾಂತಿಭಂಗಕ್ಕೆ ಪ್ರಚೋದನೆ ನೀಡಿದ್ದು ಹಾಗೂ  ಕ್ರಿಮಿನಲ್ ಕೃತ್ಯವೂ ಸೇರಿದಂತೆ ಭಾರತೀಯ ದಂಡಸಂಹಿತೆ ಯ ಸೆಕ್ಷನ್ 354, 504 ಮತ್ತು 506ರಡಿಯಲ್ಲಿ ಈತನ ವಿರುದ್ಧ ಎಫ್‌ಐಆರ್  ದಾಖಲಿಸಲಾಗಿತ್ತು. ಹೀಗಿದ್ದೂ, ಆ ಬಳಿಕವೂ ಈತನಿಗೆ ಪೆರೋಲ್ ಲಭಿಸಿತು ಮತ್ತು ಆ ಮೂಲಕ 281 ದಿನಗಳ ಕಾಲ ಈತ ಜೈಲಿನಿಂದ  ಹೊರಗಿದ್ದ. ಅಂದಹಾಗೆ,

ಗುರ್ಮೀತ್ ರಾಮ್ ರಹೀಮ್‌ನಿಗೆ ಸಿಗುತ್ತಿರುವ ಪೆರೋಲ್‌ಗಳನ್ನೂ ಈ ನೆಲೆಯಲ್ಲೇ  ವಿಶ್ಲೇಷಿಸಬೇಕಾಗಿದೆ. ಜೀವಾವಧಿ  ಶಿಕ್ಷೆಗೊಳಗಾಗಿರುವ ಸಾಮಾನ್ಯ ಅಪರಾಧಿಗಳಿಗೆ ಸಿಗದ ಪೆರೋಲ್‌ಗಳು ಇಂಥವರಿಗೆ ಯಾಕೆ ಮತ್ತು ಹೇಗೆ ಸಿಗುತ್ತದೆ ಎಂಬ ಪ್ರಶ್ನೆಯನ್ನು  ಹರಡಿ ಕುಳಿತರೆ ಆಡಳಿತಗಾರರು ಮತ್ತು ಅಪರಾಧಿಗಳ ನಡುವಿನ ಅನೈತಿಕ ನಂಟು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಹಾಗಿದ್ದರೂ,

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರಿದ್ದ ನ್ಯಾಯಪೀಠದ ನಿಷ್ಠುರ ತೀರ್ಪನ್ನು ಶ್ಲಾಘಿಸಬೇಕಾಗಿದೆ.  ನ್ಯಾಯಾಧೀಶರುಗಳು ಪ್ರಭುತ್ವದ ಪಕ್ಷಪಾತಿಳಾಗುತ್ತಿದ್ದಾರೋ ಎಂಬ ಸಂದೇಹ ಸಾರ್ವಜನಿಕವಾಗಿ ಬಲಗೊಳ್ಳುತ್ತಿರುವ ಹೊತ್ತಿನಲ್ಲೇ  ಈ  ತೀರ್ಪು ಪ್ರಕಟವಾಗಿದೆ. ಸ್ವತಂತ್ರ ನ್ಯಾಯಾಲಯವೇ ಜನರ ಪಾಲಿನ ಬಹುದೊಡ್ಡ ಆಯುಧ. ಪ್ರಭುತ್ವ ಎಂದೂ ಸಂಪೂರ್ಣ ನ್ಯಾಯ ಪಕ್ಷಪಾತಿಯಾಗುವುದಕ್ಕೆ  ಸಾಧ್ಯವೇ ಇಲ್ಲ. ಅದು ಓಟಿನ ಲೆಕ್ಕಾಚಾರದಲ್ಲೇ ನ್ಯಾಯಾನ್ಯಾಯವನ್ನು ನಿರ್ಧರಿಸುತ್ತದೆ. ಆದರೆ ನ್ಯಾಯಾಲಯ ಹಾಗಲ್ಲ. ಅದಕ್ಕೆ ಓಟಿನ  ಹಂಗಿಲ್ಲ. ಆದ್ದರಿಂದ ಅದು ನ್ಯಾಯದ ಹೊರತು ಇನ್ನಾವುದಕ್ಕೂ ನಿಷ್ಠವಾಗಿರಲೇಬಾರದು. 11 ಮಂದಿ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಿ  ಗುಜರಾತ್ ಸರ್ಕಾರಕ್ಕೆ ಪಾಠ ಕಲಿಸಿದ ನ್ಯಾಯಾಧೀಶರುಗಳಿಗೆ ಧನ್ಯವಾದಗಳು.

ಲಕ್ಷ್ಮೀ ಹೆಗ್ಡೆ ಉಳಿಸಿ ಹೋಗಿರುವ ಪ್ರಶ್ನೆಗಳು...

 


ಸನ್ಮಾರ್ಗ ಸಂಪಾದಕೀಯ


ಮಾಧ್ಯಮಗಳ ಮುಖಪುಟದಲ್ಲಿ ಜಾಗ ಪಡೆಯಬೇಕಿದ್ದ ಲಕ್ಷ್ಮೀ ಹೆಗ್ಡೆ ಎಂಬ ತಾಯಿ ಯಾರ ಗಮನಕ್ಕೂ ಬಾರದೇ ತನ್ನ ಊರು  ಇಳಂತಿಲದ ಅಷ್ಟಿಷ್ಟು ಹಿರಿಯರ ಕರುಣೆಯ ಮಾತುಗಳಿಗೆ ಆಹಾರವಾಗಿ ಜನವರಿ ಏಳರಂದು ಇಹಲೋಕ ತ್ಯಜಿಸಿದರು. ಹಾಗಂತ,

ದಕ್ಷಿಣ ಕನ್ನಡ ಜಿಲ್ಲೆಯ  ಉಪ್ಪಿನಂಗಡಿ ಸಮೀಪದ ಇಳಂತಿಲದ ಈ ಲಕ್ಷ್ಮೀ ಹೆಗ್ಡೆ ಪ್ರಸಿದ್ಧರಲ್ಲ. ಇನ್ಫೋಸಿಸ್‌ನ ಸುಧಾ ಮೂರ್ತಿ, ಓಟಗಾತಿ  ಪಿ.ಟಿ. ಉಷಾ, ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಅಥವಾ ಐಟಿ ಕ್ಷೇತ್ರದ ಕಿರಣ್ ಮಜುಂದಾರ್‌ರಂತೆ  ಸಾಧಕಿಯೂ ಅಲ್ಲ.  ಆದರೆ, ದ.ಕ. ಜಿಲ್ಲೆಯ ಕನ್ಯಾನದ ಭಾರತ್ ಸೇವಾಶ್ರಮದಲ್ಲಿ ನಡೆದ ಇವರ ಸಾವು ಸಮಾಜದ ಪಾಲಿಗೆ ಪಾಠದಾಯಕ. ನಿಜವಾಗಿ,

ಈ ತಾಯಿ ವೃದ್ಧಾಶ್ರಮದಲ್ಲಿ ಬದುಕಿನ ಸಂಧ್ಯಾಕಾಲವನ್ನು ಕಳೆಯಬೇಕಾದಂಥ ಅಸಹಾಯಕಿಯಲ್ಲ. ಇಳಂತಿಲದಲ್ಲಿ ಸ್ವಂತದ್ದೊಂದು  ಮನೆಯೂ ಅವರಿಗಿತ್ತು. ಏಳು ಮಕ್ಕಳನ್ನೂ ಹೆತ್ತಿದ್ದರು. ಆದರೆ, ಈ ತಾಯಿ ಮಕ್ಕಳ ನಡುವೆ ಅದೇನು ವೈಮನಸ್ಯ ಉಂಟಾಯಿತೋ  ಗೊತ್ತಿಲ್ಲ, ಈ ವೃದ್ಧ ತಾಯಿ ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾದರು. ಕೊನೆಗೆ ಮಕ್ಕಳ ನಡವಳಿಕೆಗೆ ಬೇಸತ್ತು ಪೊಲೀಸ್ ಠಾಣೆಯ  ಮೆಟ್ಟಿಲೇರಿದರು. ಮಕ್ಕಳಿಗೆ ಕರೆಯೂ ಹೋಯಿತು. ಆದರೆ ತಾಯಿಯ ಆರೈಕೆ ಮಾಡಲೋ ಕಾಳಜಿ ತೋರಲೋ ಮಕ್ಕಳು  ನಿರಾಕರಿಸಿದರು. ಪೊಲೀಸ್ ಠಾಣೆಯಲ್ಲಿ ಒಂಟಿಯಾದ ತಾಯಿಯನ್ನು ಠಾಣಾಧಿಕಾರಿ ನಂದಕುಮಾರ್ ಭಾರತ್ ಸೇವಾಶ್ರಮಕ್ಕೆ  ಸೇರಿಸಿದರು. ಮಾತ್ರವಲ್ಲ, ಮಗನ ಸ್ಥಾನದಲ್ಲಿ ನಿಂತು ಆಗಾಗ ಅವರ ಯೋಗಕ್ಷೇಮ ವಿಚಾರಿಸುತ್ತಾ ಪ್ರೀತಿ ತೋರಿಸುತ್ತಿದ್ದರು. ಇಂಥ  ತಾಯಿ ಈ ಆಶ್ರಮದಲ್ಲಿ ನಿಧನರಾದಾಗಲೂ ಈ ಮಕ್ಕಳು ಕೊನೆಯ ಬಾರಿ ನೋಡುವುದಕ್ಕಾಗಲಿ ಅಂತ್ಯಸಂಸ್ಕಾರ ನೆರವೇರಿಸುವುದಕ್ಕಾಗಲಿ  ಬರಲೇ ಇಲ್ಲ. ಆಶ್ರಮದಿಂದ ಕರೆ ಮಾಡಿ ವಿನಂತಿಸಿದರೂ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿಲ್ಲ. ಕೊನೆಗೆ ಆಶ್ರಮದವರೇ ಸೇರಿ ಅಂತಿಮ  ವಿಧಿ ಪೂರೈಸಿದರು. ಒಂದುರೀತಿಯಲ್ಲಿ,ಈ ಲಕ್ಷ್ಮೀ ಹೆಗ್ಡೆ ಕೆಲವು ಪ್ರಶ್ನೆಗಳನ್ನು ಉಳಿಸಿ ಹೋಗಿದ್ದಾರೆ. ಏಳು ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ ಏಳು ಮಕ್ಕಳಲ್ಲಿ ಒಬ್ಬರೂ ನೆರವಿಗೆ  ಬಾರದೇ ಇರುವುದಕ್ಕೆ ಕಾರಣಗಳೇನು? ಹಾಗಂತ, 

ಮಕ್ಕಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸುಲಭ ಮತ್ತು ನಿಲ್ಲಿಸಲೇ ಬೇಕು.  ಹೆತ್ತಮ್ಮನನ್ನು ಬೀದಿಗಟ್ಟಿರುವುದಕ್ಕೆ ಮಕ್ಕಳು ಕೊಡುವ ಯಾವುದೇ ಸಮರ್ಥನೆಯೂ ತಿರಸ್ಕಾರಕ್ಕಷ್ಟೇ ಯೋಗ್ಯ. ಈ ಮಕ್ಕಳೇನೂ  ಪ್ರಯೋಗಾಲಯದಲ್ಲಿ ಹುಟ್ಟಿರುವುದಲ್ಲ. ಈ ಏಳು ಮಕ್ಕಳಲ್ಲಿ ಪ್ರತಿಯೊಂದನ್ನೂ ಈ ಲಕ್ಷ್ಮೀ ಹೆಗ್ಡೆ ಎಂಬ ತಾಯಿ 9 ತಿಂಗಳು ತನ್ನ  ಹೊಟ್ಟೆಯಲ್ಲಿಟ್ಟು ಬೆಳೆಸಿದ್ದರು. ಗರ್ಭದಲ್ಲಿರುವ ಮಗುವಿಗೆ ಏನೂ ಹಾನಿಯಾಗದಿರಲಿ ಎಂದು ಈ 9 ತಿಂಗಳೂ ವಿಶೇಷ ಕಾಳಜಿಯನ್ನು  ತೋರಿದ್ದರು. ಈ ಅವಧಿಯಲ್ಲಿ ಈ ಲಕ್ಷ್ಮೀ ಹೆಗ್ಡೆ ಎಷ್ಟು ಮದುವೆಗಳನ್ನು ತಪ್ಪಿಸಿಕೊಂಡಿದ್ದಾರೆ, ಎಷ್ಟು ಪ್ರಯಾಣಗಳನ್ನು ರದ್ದು ಪಡಿಸಿಕೊಂಡಿದ್ದಾರೆ, ಎಷ್ಟು ಧಾರ್ಮಿಕ, ಸಾಮಾಜಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ ಅನ್ನುವುದು ಅವರಿಗಷ್ಟೇ  ಗೊತ್ತು. ತಿನ್ನುವಾಗ, ಕುಡಿಯುವಾಗ, ಮಲಗುವಾಗ, ನಡೆಯುವಾಗ... ಹೀಗೆ ಎಲ್ಲ ಸಂದರ್ಭಗಳಲ್ಲೂ ಹೊಟ್ಟಿಯಲ್ಲಿರುವ ಮಗುವಿನ  ಕ್ಷೇಮದ ದೃಷ್ಟಿಯಿಂದ ಈ ತಾಯಿ ವಿಶೇಷ ಕಾಳಜಿ ತೋರಿರಬಹುದು. ಈ ಏಳು ಮಕ್ಕಳ ಗರ್ಭ ಧರಿಸಿದಲ್ಲಿಂದ ತೊಡಗಿ ಪ್ರಸವದ  ವರೆಗೆ ಮತ್ತು ಆ ಬಳಿಕದಿಂದ ದೊಡ್ಡವರಾಗುವವರೆಗೆ ಈ ಲಕ್ಷ್ಮೀ ಹೆಗ್ಡೆ ತೋರಿರಬಹುದಾದ ಅಸಾಧಾರಣ ತಾಳ್ಮೆ, ಪ್ರೀತಿ ಮತ್ತು  ಕಾಳಜಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಈ ತಾಯ್ತನದ ಭಾರವನ್ನು ಓರ್ವ ಹೆಣ್ಣಿಗೆ ಮಾತ್ರ ನಿಭಾಯಿಸಲು ಸಾಧ್ಯ ಎಂದು  ಹೇಳುವಷ್ಟು ಇದು ಸವಾಲಿನದ್ದು. ಅಂದಹಾಗೆ,

ಇಷ್ಟೆಲ್ಲಾ ತ್ಯಾಗ-ಪ್ರೀತಿಯನ್ನು ತೋರಿ ಮಕ್ಕಳನ್ನು ಬೆಳೆಸುವ ತಾಯಿ ವೃದ್ಧಾಪ್ಯದಲ್ಲಿ ಈ ಮಕ್ಕಳಿಂದಲೇ ಯಾಕೆ ಪರಿತ್ಯಕ್ತರಾಗುತ್ತಾರೆ ಎಂಬ  ಪ್ರಶ್ನೆ ಸಹಜವಾಗಿಯೇ ಇಲ್ಲಿ ಮುನ್ನೆಲೆಗೆ ಬರುತ್ತದೆ. ಮಕ್ಕಳನ್ನು ಕೃತಘ್ನರು, ಹೆತ್ತವರ ಮಹತ್ವ ಗೊತ್ತಿಲ್ಲದವರು, ಧರ್ಮದ್ರೋಹಿಗಳು  ಎಂದೆಲ್ಲಾ ಷರಾ ಬರೆದು ಆ ಪ್ರಶ್ನೆಯಿಂದ ತಪ್ಪಿಸಿಕೊಳ್ಳಬಹುದು. ಆದರೂ ಮಕ್ಕಳೇಕೆ ಹೀಗಾಗುತ್ತಾರೆ ಅನ್ನುವ ಪ್ರಶ್ನೆಯ ಗಂಭೀರತೆ  ಹಾಗೆಯೇ ಉಳಿಯುತ್ತದೆ. ಇದು ಓರ್ವ ಲಕ್ಷ್ಮೀ ಹೆಗ್ಡೆಯ ಪ್ರಶ್ನೆಯಲ್ಲ. ವೃದ್ಧಾಶ್ರಮದಲ್ಲಿರುವ ವೃದ್ಧರನ್ನು ಮಾತ್ರ ಕೇಂದ್ರೀಕರಿಸಿ  ಕೇಳಬೇಕಾದ ಪ್ರಶ್ನೆಯೂ ಅಲ್ಲ. ಈ ದೇಶದಲ್ಲಿ ಕೋಟ್ಯಂತರ ವೃದ್ಧರಿದ್ದಾರೆ. ಅವರೆಲ್ಲ ವೃದ್ಧಾಶ್ರಮದಲ್ಲಿ ಇಲ್ಲದೇ ಇರಬಹುದು. ಆದರೆ  ಮನೆಯೆಂಬ ವೃದ್ಧಾಶ್ರಮದಲ್ಲಿ ನಿತ್ಯ ಕಣ್ಣೀರಿನೊಂದಿಗೆ ಬದುಕುತ್ತಿದ್ದಾರೆ ಎಂದು ವರ್ಷಂಪ್ರತಿ ಬಿಡುಗಡೆಗೊಳ್ಳುವ ಸಮೀಕ್ಷಾ ವರದಿಗಳು  ಹೇಳುತ್ತವೆ. ಮಗ ಮತ್ತು ಸೊಸೆ ಅಥವಾ ಮಗಳು ಮತ್ತು ಗಂಡ ಅಥವಾ ಇನ್ನಿತರ ಆಶ್ರಯದಾತರಿಂದ ನಿತ್ಯ ಮಾನಸಿಕ ಮತ್ತು ದೈಹಿಕ  ಶೋಷಣೆಗೆ ಅವರು ಗುರಿಯಾಗುತ್ತಾ ಜೀವನ ಪ್ರೀತಿಯನ್ನೇ ಮರೆತು ಬದುಕುತ್ತಿದ್ದಾರೆ ಎಂದು ಈ ಸಮೀಕ್ಷೆಗಳು ಹೇಳುತ್ತಲೇ ಇವೆ.  ವರ್ಷಂಪ್ರತಿ ಇಂಥವರ ಸಂಖ್ಯೆ ಅಧಿಕವಾಗುತ್ತಲೂ ಇದೆ. ಇದಕ್ಕೆ ಏನು ಕಾರಣ? ಹೆತ್ತು ಹೊತ್ತು ಸಾಕಿ ಬೆಳೆಸಿದವರೇ ಮಕ್ಕಳ ಪಾಲಿಗೆ  ಭಾರ ಅನ್ನಿಸಿಕೊಳ್ಳಲು ಕಾರಣ ಏನು? ಹೆತ್ತವರ ಪಾಲೂ ಇದರಲ್ಲಿ ಇದೆಯೇ? ಅವರು ಮಕ್ಕಳ ನಡುವೆ ಪಕ್ಷಪಾತಿ ವರ್ತನೆ  ತೋರುತ್ತಾರೆಯೇ? ಒಂದಿಬ್ಬರ ಪರ ವಹಿಸಿ ಉಳಿದ ಮಕ್ಕಳನ್ನು ನಿರ್ಲಕ್ಷಿಸುವಂಥ ವರ್ತನೆ ಅವರಲ್ಲಿದೆಯೇ? ಆಸ್ತಿಯಲ್ಲಿ ಅನ್ಯಾಯವಾಗಿ  ವಿಲೇವಾರಿ ಮಾಡುತ್ತಾರೆಯೇ? ಮಕ್ಕಳಿಗೆ ಕೊಡುವ ಪ್ರೀತಿಯಲ್ಲೂ ತಾರತಮ್ಯ ಎಸಗುತ್ತಾರೆಯೇ? ಅನುಕೂಲಸ್ಥ ಮಗನ ಅಥವಾ  ಮಗಳ ಪರ ವಹಿಸುವ ಮತ್ತು ಅದರಿಂದಾಗಿ ಕೌಟುಂಬಿಕ ಏರುಪೇರುಗಳಾಗುವ ಘಟನೆಗಳು ಹೆಚ್ಚತೊಡಗಿವೆಯೇ? ಅಥವಾ ಬಡತನ  ಮತ್ತು ಔಷಧಿಗಾಗಿ ಖರ್ಚು ಮಾಡಲಾಗದ ಅಸಹಾಯಕತೆಯು ಹೆತ್ತವರ ಮೇಲೆ ಮಕ್ಕಳು ಏರಿ ಹೋಗುವುದಕ್ಕೆ ಮತ್ತು ಚುಚ್ಚು  ಮಾತುಗಳಿಗೆ ಕಾರಣವಾಗುತ್ತಿದೆಯೇ? ಅಷ್ಟಕ್ಕೂ,

ಬಾಲ್ಯದಿಂದ ತೊಡಗಿ ಯೌವನ ಪ್ರಾಯದವರೆಗೆ ಪ್ರತಿಯೊಬ್ಬರಿಗೂ ಹೆತ್ತವರಿಂದಲೋ ಶಿಕ್ಷಕರಿಂದಲೋ ಸಮಾಜದಿಂದಲೋ ಜೀವನ  ಪಾಠ ಲಭಿಸುತ್ತಲೇ ಇರುತ್ತದೆ. ಹಾಗೆ ಮಾಡಬೇಕು, ಹೀಗೆ ಮಾಡಬಾರದು, ಹೇಗೆ ವರ್ತಿಸಬೇಕು ಮತ್ತು ಹೇಗೆ ಬಾರದು ಇತ್ಯಾದಿಗಳನ್ನು  ಈ ಪ್ರಾಯದಲ್ಲಿ ಹೇಳಿ ಕೊಡಲಾಗುತ್ತದೆ. ಹಾಗಂತ, ಇಂಥದ್ದೇ  ತರಬೇತಿಯು ವೃದ್ಧಾಪ್ಯಕ್ಕೆ ತಲುಪುವ ಹೆತ್ತವರಿಗೂ ನೀಡಬೇಕಾದ ಅಗತ್ಯ  ಇದೆಯೇ? ವೃದ್ಧಾಪ್ಯಕ್ಕೆ ತಲುಪುವ ಪ್ರಾಯದಲ್ಲಿ ಹೇಗೆ ಜೀವಿಸಬೇಕು, ಮಕ್ಕಳು ಮತ್ತು ಮರಿಮಕ್ಕಳೊಂದಿಗೆ ಹೇಗಿರಬೇಕು, ಮನೆಯ  ವಾತಾವರಣವನ್ನು ಹೇಗೆ ತನಗೆ ಪೂರಕವಾಗಿ ಬಳಸಿಕೊಳ್ಳಬೇಕು, ತನ್ನ ಆಸೆ-ಇಂಗಿತವನ್ನು ಪೂರೈಸಿಕೊಳ್ಳುವುದಕ್ಕೆ ಯಾವ ರೀತಿಯ  ವರ್ತನೆ ಅಗತ್ಯ.. ಎಂಬಿತ್ಯಾದಿ ತರಬೇತಿಯನ್ನು ಹಿರಿಯರಿಗೆ ನೀಡುವ ಕಾರ್ಯಾಗಾರಗಳ ಅಗತ್ಯ ಇದೆಯೇ? ಬಾಲ್ಯದಲ್ಲಿ ಮಕ್ಕಳು  ಹಠಮಾರಿಗಳಾಗುವಂತೆಯೇ ಹಿರಿಪ್ರಾಯಕ್ಕೆ ತಲುಪಿದವರೂ ಹಠಮಾರಿಗಳಾಗುತ್ತಾರೆ. ಇಂಥ ಹಿರಿಯರಿರುವ ಮನೆಗಳ ಸಮೀಕ್ಷೆ ಮತ್ತು  ಮಕ್ಕಳಿಗೆ ಆ ಹಿರಿಯರ ಮನಸ್ಥಿತಿಯನ್ನು ಅರ್ಥ ಮಾಡಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯಬೇಕಾಗಿದೆಯೇ? ನಿಜವಾಗಿ,

ಮಕ್ಕಳ ಪಾಲಿನ ಸ್ವರ್ಗ ಮತ್ತು ನರಕ ಅವರ ಹೆತ್ತವರಾಗಿದ್ದಾರೆ ಎಂಬ ಅತೀ ಪ್ರಬಲ ಮತ್ತು ಪರಿಣಾಮಕಾರಿ ಪರಿಕಲ್ಪನೆ ಇಸ್ಲಾಮಿನದ್ದು.  ಹೆತ್ತವರ ಮನ ನೋಯಿಸುವ ಮಕ್ಕಳು ದೇವಕೋಪಕ್ಕೆ ತುತ್ತಾಗುತ್ತಾರೆ ಎಂಬ ಅತಿ ಮಹತ್ವದ ಸಂದೇಶವನ್ನು ಇಸ್ಲಾಮ್ ಸಾರುತ್ತದೆ.  ವೃದ್ಧ ಹೆತ್ತವರ ಬಗ್ಗೆ ‘ಛೆ’ ಎಂಬ ಪದವನ್ನೂ ಬಳಸಬಾರದು ಎಂದು ಪವಿತ್ರ ಕುರ್‌ಆನ್ ತಾಕೀತು ಮಾಡಿದೆ. ಹಿಂದೂ ಧರ್ಮದಲ್ಲೂ  ಹೆತ್ತವರ ಬಗ್ಗೆ ಮೌಲ್ಯಯುತ ಆದೇಶಗಳಿವೆ. ಶ್ರವಣ ಕುಮಾರನ ಕತೆಯನ್ನು ಓದಿಯೇ ಎಲ್ಲ ಮಕ್ಕಳೂ ಬೆಳೆಯುತ್ತಿದ್ದಾರೆ. ಸಮಸ್ಯೆ ಏ ನೆಂದರೆ, ಬಾಲ್ಯದಲ್ಲಿ ಕಲಿತ ಪಾಠ ಅವರು ಬೆಳೆದು ದೊಡ್ಡವರಾದಾಗ ಪಾಲನೆಗೆ ಬರುತ್ತಿಲ್ಲ ಎಂಬುದು. ಆದ್ದರಿಂದಲೇ, ಲಕ್ಷ್ಮೀ ಹೆಗ್ಡೆ  ಮುಖ್ಯವಾಗುತ್ತಾರೆ. ಇಂಥವರ ಸಂಖ್ಯೆ ಅಸಂಖ್ಯ ಇದ್ದಿರಬಹುದಾದರೂ ಹೀಗೆ ಬಹಿರಂಗಕ್ಕೆ ಬರುವುದು ಬಹಳ ಕಡಿಮೆ. ಅಷ್ಟಕ್ಕೂ, 

 ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುವ ಇಂಥ ಸುದ್ದಿಗಳನ್ನು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸಿದರೆ, ಅದು ಸಾರ್ವಜನಿಕ ಚರ್ಚೆಗೂ  ಒಳಗಾಗಬಹುದು ಮತ್ತು ಒಂದಷ್ಟು ಜಾಗೃತಿಗೂ ಕಾರಣವಾಗಬಹುದು.