Tuesday, 22 April 2025

ಧರ್ಮದ್ವೇಷಿಗಳಿಗೆ ಪಾಠ ಹೇಳಿದ ಜನಿವಾರ




ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರವನ್ನು ಕಳಚಿದ ಪ್ರಕರಣಕ್ಕೆ ಸಂಬಂಧಿಸಿ ಬೀದರ್ ಮತ್ತು ಶಿವಮೊಗ್ಗದ ನಾಲ್ವರು ಅಧಿಕಾರಿಗಳ ಮೇಲೆ ಒಂದೇ ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಜನಿವಾರ ತೆಗೆದು ಸಿಇಟಿ ಪರೀಕ್ಷೆ ಬರೆಯಲು ಒಪ್ಪಿಕೊಳ್ಳದ ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಉಚಿತ ಇಂಜಿನಿಯರಿಂಗ್  ಸೀಟ್ ಕೊಡಿಸುವುದಾಗಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೀದರ್‌ನ ಸಾಯಿ ಸ್ಫೂರ್ತಿ ಕಾಲೇಜಿನ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ತಕ್ಷಣ ನೋಟೀಸು ಜಾರಿ ಮಾಡಿದ್ದಾರೆ. ಶಿವಮೊಗ್ಗ ಸಾಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿರುದ್ಧ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತನಿಖೆಗೆ ಆದೇಶಿಸಿದ್ದಾರೆ. ಈ ಎಲ್ಲದರ ನಡುವೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕರಾವಳಿಯ ಶಾಸಕ ಭರತ್ ಶೆಟ್ಟಿ ಸಹಿತ ಹತ್ತು-ಹಲವು ಜನಪ್ರತಿನಿಧಿಗಳು ಘಟನೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಈ ನಡುವೆ ಬೆಂಗಳೂರು, ಬೀದರ್ ಮತ್ತು ಕಲಬುರ್ಗಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆದಿದೆ. ಕಲಬುರ್ಗಿಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

2022 ಜನವರಿಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇದಕ್ಕೆ ಸಮಾನವಾದ ಘಟನೆ ನಡೆದಿತ್ತು. ಶಿರವಸ್ಟ್ರ  ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಯಿತು. ಹಾಗಂತ, ಆಗ ರಾಜ್ಯಾದ್ಯಂತ ಹಿಜಾಬ್‌ಗೆ ನಿಷೇಧವೇನೂ ಇರಲಿಲ್ಲ. ಸರಕಾರಿ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಹೋಗುವವರಿಗೂ ಅನುಮತಿ ಇತ್ತು. ಕೈನೂಲು, ಹಣೆಗೆ ಕುಂಕುಮ, ಮೂಗುತಿ, ಹಣೆಬೊಟ್ಟು, ಸಿಕ್ಖರ ಪೇಟ ಇತ್ಯಾದಿ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಗಳನ್ನು ಧರಿಸುವವರಿಗೂ ತರಗತಿಗೆ ಪ್ರವೇಶವಿತ್ತು. ಆದರೆ,

ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿದ್ದ ಹೆಣ್ಣು ಮಕ್ಕಳ ಸರಕಾರಿ ಕಾಲೇಜು ಹಿಜಾಬ್ ನಿಷೇಧದ ಪರವಾಗಿ ನಿಂತಿತು. ವಿದ್ಯಾರ್ಥಿನಿಯರು ಪರಿಪರಿಯಾಗಿ ವಿನಂತಿಸಿದರೂ ಜಗ್ಗಲಿಲ್ಲ. ಸುಮಾರು ಒಂದು ತಿಂಗಳ ಕಾಲ ಈ ವಿದ್ಯಾರ್ಥಿನಿಯರು ಕಾಲೇಜಿನ ಮೆಟ್ಟಿಲಲ್ಲಿ ಮತ್ತು ವರಾಂಡದಲ್ಲಿ ಕುಳಿತು ಅಭ್ಯಾಸ ಮಾಡಿದರು. ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾದರು. ಈಗ ಜನಿವಾರ ಪ್ರಕರಣವನ್ನು ಖಂಡಿಸಿರುವ ಇದೇ ಬಸವರಾಜ್ ಬೊಮ್ಮಾಯಿಯವರು ಆಗ ಮುಖ್ಯಮಂತ್ರಿಯಾಗಿದ್ದರೆ, ಇದೇ ಆರಗ ಜ್ಞಾನೇಂದ್ರ ಗೃಹಸಚಿವರಾಗಿದ್ದರು. ಪ್ರಹ್ಲಾದ ಜೋಶಿ ಆಗಲೂ ಕೇಂದ್ರ ಸಚಿವರಾಗಿದ್ದರು. ಆದರೆ, ಇವರೆಲ್ಲ ಆಗ ಈ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿದುದನ್ನು ಸಮರ್ಥಿಸಿಕೊಂಡಿದ್ದರು. ಸರಕಾರಕ್ಕೆ ಬ್ರಾಹ್ಮಣರ ಶಾಪ ತಟ್ಟಲಿದೆ ಎಂದು ಈಗ ಹೇಳುತ್ತಿರುವ ಭರತ್ ಶೆಟ್ಟಿಯವರು ಆಗ ಹಿಜಾಬ್ ನಿಷೇಧಕ್ಕೆ ಬೆಂಬಲ ಸೂಚಿಸಿದ್ದರು. ಹೀಗೆ ತಿಂಗಳ ಕಾಲ ಕಾದ ಬಳಿಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ನಡೆದುವು. ಆ ವಿದ್ಯಾರ್ಥಿನಿಯರು ನ್ಯಾಯವನ್ನು ಅಪೇಕ್ಷಿಸಿ ನ್ಯಾಯಾಲಯದ ಬಾಗಿಲು ಬಡಿದರು. ಆಗಲೂ ಬೊಮ್ಮಾಯಿ ಸರಕಾರ ಹಿಜಾಬ್ ನಿಷೇಧದ ಪರ ನ್ಯಾಯಾಲಯದಲ್ಲಿ ವಾದಿಸಿತು. ನಿಜವಾಗಿ,

ಹಿಜಾಬ್ ಆಗಲಿ, ಜನಿವಾರ, ಬಿಂದಿ, ಕರಿಮಣಿ, ಪೇಟ ಇತ್ಯಾದಿ ಯಾವುವೂ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಎಂದೋ ಅವರ ಬುದ್ಧಿಮತ್ತೆಯನ್ನು ಕುಗ್ಗಿಸುವ ಅಪಾಯಕಾರಿ ಅಸ್ಮಿತೆಗಳೆಂದೋ ಯಾವ ಸಂಶೋಧಕರೂ ಹೇಳಿಲ್ಲ. ಅಂಥದ್ದೊಂದು  ವೈಜ್ಞಾನಿಕ ವರದಿಯೂ ಬಂದಿಲ್ಲ. ತಲೆತಲಾಂತರಗಳಿಂದ  ವಿವಿಧ ಸಮುದಾಯಗಳು ಪಾಲಿಸಿಕೊಂಡು ಬರುತ್ತಿರುವ ಈ ಬಗೆಯ ಧಾರ್ಮಿಕ ಸಂಕೇತಗಳನ್ನು ಆಧುನಿಕತೆಗೆ ಅನ್ಯವಾಗಿಯೋ ವಿದ್ಯಾರ್ಥಿ ಸಮಾನತೆಯ ವಿರೋಧಿಯಾಗಿಯೋ ನೋಡಬೇಕಾಗಿಯೂ ಇಲ್ಲ. ಇವೆಲ್ಲ ಸಾಮಾಜಿಕವಾಗಿ ಅತಿ ಶಕ್ತಿಯುತವಾಗಿ ಬಳಕೆಯಾಗುತ್ತಿರುವಾಗ, ತರಗತಿಯಲ್ಲಿ ಮಾತ್ರ ನಿಷೇಧಿಸುವುದರಿಂದ ಸಮಾನತೆಯನ್ನು ತಂದಂತೆಯೂ ಆಗುವುದಿಲ್ಲ. ನಿಜವಾಗಿ,

ಅಸ್ಮಿತೆಗಳನ್ನು ಸಮಾನತೆಯ ವಿರೋಧಿ ಎಂಬ ದೃಷ್ಟಿಯಲ್ಲಿ ನೋಡುವುದಕ್ಕಿಂತ ವೈವಿಧ್ಯತೆಯ ಸೊಗಸು ಎಂಬ ನೆಲೆಯಲ್ಲೇ  ನೋಡಬೇಕಾಗಿದೆ. ಸಮಾನತೆಯನ್ನು ವಿದೇಶಿ ಕಣ್ಣಲ್ಲಿ ವ್ಯಾಖ್ಯಾನಿಸದೇ ದೇಶಿ ಜೀವನ ಕ್ರಮದ ಆಧಾರದಲ್ಲಿ ನೋಡದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಹೇಳಬೇಕಾಗುತ್ತದೆ. ಒಂದುವೇಳೆ, ಹಿಜಾಬ್ ಆಗಲಿ, ಬಿಂದಿ, ಪೇಟ, ಜನಿವಾರವೇ ಆಗಲಿ ಸಾಮಾಜಿಕ ನ್ಯಾಯ, ಏಕತೆ, ಸಮಾನತೆ ಇತ್ಯಾದಿ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುತ್ತದೆ ಎಂದಾಗಿದ್ದರೆ, ತರಗತಿಯಿಂದಷ್ಟೇ ಅಲ್ಲ, ಇಡೀ ಸಾರ್ವಜನಿಕ ಜೀವನ ಕ್ರಮದಿಂದಲೇ ಅದಕ್ಕೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಈ ಯಾವ ಧಾರ್ಮಿಕ ಅಸ್ಮಿತೆಗಳಿಗೂ ಸಂವಿಧಾನ ವಿರೋಧಿ ಎಂಬ ಹಣೆಪಟ್ಟಿ ಇಲ್ಲ ಮತ್ತು ಸಾರ್ವಜನಿಕವಾಗಿ ನಿಷೇಧವೂ ಇಲ್ಲ. ಹೀಗಿರುವಾಗ ಬರೇ ತರಗತಿಯಲ್ಲಿ ಅಥವಾ ಪರೀಕ್ಷೆಯ ವೇಳೆ ಮಾತ್ರ ಇದನ್ನು ಅಪಾಯಕಾರಿಯಂತೆ ಕಾಣುವುದಕ್ಕೆ ಅರ್ಥವೂ ಇಲ್ಲ. ಅಂದಹಾಗೆ,

ಜನಿವಾರ ವಿವಾದವು ಮತ್ತೊಮ್ಮೆ ನಮ್ಮನ್ನು ಹಿಜಾಬ್ ವಿವಾದದ ಕಡೆಗೆ ಕೊಂಡೊಯ್ಯಬೇಕಿದೆ. ನಿಜಕ್ಕೂ, ಹಿಜಾಬನ್ನು ವಿವಾದವನ್ನಾಗಿ ಮಾಡಬೇಕಿತ್ತೇ? ಅದು ತರಗತಿಯಲ್ಲಾಗಲಿ, ಶಾಲಾ ಕ್ಯಾಂಪಸ್‌ನಲ್ಲಾಗಲಿ ಯಾರಿಗಾದರೂ ತೊಂದರೆ ಮಾಡಿತ್ತೇ? ತರಗತಿಯೊಳಗೆ ಹಿಜಾಬ್ ನಿಷೇಧಿಸಿದ ಉಪನ್ಯಾಸಕರನ್ನು ಕರೆದು ವಿಚಾರಿಸಿ, ಅಗತ್ಯ ಬಿದ್ದರೆ ಶಿಸ್ತು ಕ್ರಮ ಕೈಗೊಂಡು ಅಲ್ಲಿಗೇ ಮುಗಿಸ ಬಹುದಾಗಿದ್ದ ಪ್ರಕರಣವನ್ನು ವಾರಗಟ್ಟಲೆ ಜೀವಂತ ಉಳಿಸಿಕೊಂಡದ್ದು ಏಕೆ? ಜನಿವಾರ ಪ್ರಕರಣವನ್ನು ತಕ್ಷಣ ನಿರ್ವಹಿಸಿದಂತೆ ಹಿಜಾಬ್ ಪ್ರಕರಣವನ್ನು ನಿಭಾಯಿಸದೇ ಇದ್ದುದು ಯಾವ ಕಾರಣಕ್ಕೆ? ಅವರ ಉದ್ದೇಶ ಏನಾಗಿತ್ತು? ಸಾರ್ವಜನಿಕರಿಗೆ ಸಮಸ್ಯೆಯೇ ಅಲ್ಲದ ಒಂದು ತುಂಡು ಬಟ್ಟೆಯು ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆಯಾಗಿ ಪರಿವರ್ತನೆಯಾದುದು ಹೇಗೆ? ಏಕೆ? ಇಂಥದ್ದೊಂದು  ಅವಲೋಕನ ಸಾರ್ವಜನಿಕವಾಗಿ ನಡೆಯಬೇಕಿದೆ. ನಿಜವಾಗಿ,

ಹಿಜಾಬ್ ಪ್ರಕರಣವನ್ನು ರಾಜ್ಯ ಸರಕಾರವು ಆ ಕಾಲೇಜಿನ ಸಮಸ್ಯೆ ಮಾತ್ರವಾಗಿ ಕಂಡು ಅಲ್ಲಿಯೇ ಪರಿಹರಿಸಿ ಬಿಡದೇ ಇದ್ದುದರ ಹಿಂದೆ ರಾಜಕೀಯ ದುರುದ್ದೇಶ ಇತ್ತು ಅನ್ನುವುದನ್ನು ಆ ಬಳಿಕದ ಬೆಳವಣಿಗೆಗಳು ಸಾರಿ ಸಾರಿ ಹೇಳಿವೆ. ಹಿಜಾಬ್ ಹೆಸರಲ್ಲಿ ಮುಸ್ಲಿಮ್ ದ್ವೇಷ ಭಾವನೆಯನ್ನು ಕೆರಳಿಸುವುದು ಮತ್ತು ಆ ಮೂಲಕ ಹಿಂದೂಗಳನ್ನು ಧ್ರುವೀಕರಿಸುವುದು ಉದ್ದೇಶವಾಗಿತ್ತು. ಅದಕ್ಕಾಗಿ ಉಡುಪಿಯ ವಿದ್ಯಾರ್ಥಿನಿಯರನ್ನು ಬಲಿ ನೀಡಲು ಸರಕಾರ ಮುಂದಾಯಿತು. ಹಿಜಾಬ್ ವಿರುದ್ಧ ರಾಜ್ಯದಾದ್ಯಂತ ವಿದ್ಯಾರ್ಥಿಗಳನ್ನು ಸರಕಾರ ಪ್ರಚೋದಿಸಿತು. ಬೀದಿಗಿಳಿಸಿತು. 6 ಕೋಟಿ ಕನ್ನಡಿಗರನ್ನು ಹಿಂದೂ-ಮುಸ್ಲಿಮ್ ಎಂಬುದಾಗಿ ವಿಭಜಿಸಿತು.

ಆದರೆ ಇವತ್ತು ಅದೇ ಮಂದಿ ಜನಿವಾರ ನಿರಾಕರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಪರೀಕ್ಷೆಗೂ ಜನಿವಾರಕ್ಕೂ ಏನು ಸಂಬಂಧ  ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಯುನಿಫಾರ್ಮ್ ನ  ಭಾಗಿವಾಗಿ ಭುಜದಲ್ಲಿರುವ ಶಾಲನ್ನು ತಲೆಗೆ ಹಾಕಿಕೊಂಡರೆ ಏನು ತೊಂದರೆ ಎಂದು ಮೂರು ವರ್ಷಗಳ ಹಿಂದೆ ವಿದ್ಯಾರ್ಥಿನಿಯರು ಪ್ರಶ್ನಿಸಿದಾಗ ಇದೇ ಮಂದಿ ಈ ಪ್ರಶ್ನೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದರು. ಸಮಾನತೆಯ ವಿರೋಧಿ ಎಂದಿದ್ದರು. ಅಂದಹಾಗೆ,

ದ್ವೇಷದ ಆಧಾರದಲ್ಲಿ ನ್ಯಾಯವನ್ನು ವಿತರಿಸಲು ಹೊರಟರೆ ಅಂತಿಮವಾಗಿ ದ್ವೇಷಕ್ಕೇ ಮುಖಭಂಗವಾಗುತ್ತದೆ ಅನ್ನುವುದನ್ನು ಈ ಜನಿವಾರ ಪ್ರಕರಣ ಎತ್ತಿ ತೋರಿಸಿದೆ.

Saturday, 12 April 2025

ಸನ್ಮಾರ್ಗಕ್ಕೆ 47 ವರ್ಷ: ಹೆಮ್ಮೆ, ಸವಾಲು ಮತ್ತು ನಿರೀಕ್ಷೆ





ಸನ್ಮಾರ್ಗಕ್ಕೆ 47 ವರ್ಷಗಳು ತುಂಬಿವೆ. ಇದು 48ನೇ ವರ್ಷದ ಮೊದಲ ಸಂಚಿಕೆ. ಈ 2025ರ ನೆತ್ತಿಯಲ್ಲಿ ನಿಂತು 1978ರ ಬುಡದೆಡೆಗೆ ನೋಡಿದರೆ, ಹೆಮ್ಮೆಪಡುವುದಕ್ಕೆ ಹತ್ತು-ಹಲವು ಸಂಗತಿಗಳಿವೆ. ಈ 47 ವರ್ಷಗಳ ದೀರ್ಘ ಅವಧಿಯಲ್ಲಿ ಸವಾಲುಗಳೂ ಇದ್ದುವು. ಬೆನ್ನು ತಟ್ಟುವಿಕೆಗಳೂ ಇದ್ದುವು. ಸಿಹಿಯೂ ಇತ್ತು, ಕಹಿಯೂ ಇತ್ತು.

1978 ಎಪ್ರಿಲ್ 23ರಂದು ಸನ್ಮಾರ್ಗದ ಮೊದಲ ಸಂಚಿಕೆ ಬಿಡುಗಡೆಗೊಂಡಾಗ ಸಂಪಾದಕರಾಗಿದ್ದವರು ಇಬ್ರಾಹೀಮ್ ಸಈದ್. ಅವರಿಗೆ ಬೆನ್ನೆಲುಬಾಗಿದ್ದವರು ನೂರ್ ಮುಹಮ್ಮದ್ ಮತ್ತು ಸಾದುಲ್ಲಾ. ಈ ಮೂವರೂ ಆ ಕಾಲದ ಪದವೀಧರರು. ಸಣ್ಣದೊಂದು ಪ್ರಯತ್ನ ನಡೆಸಿರುತ್ತಿದ್ದರೂ ಈ ಮೂವರೂ ಉನ್ನತ ಸರಕಾರಿ ನೌಕರಿಯನ್ನು ಗಿಟ್ಟಿಸಿರುತ್ತಿದ್ದರು. ಇಬ್ರಾಹೀಮ್ ಸಈದ್ ಇಂಥದ್ದೊಂದು ಪ್ರಯತ್ನದಲ್ಲಿ ಯಶಸ್ವಿಯೂ ಆಗಿದ್ದರು. ಅವರಿಗೆ ಸರಕಾರಿ ಬ್ಯಾಂಕ್ ನೌಕರಿಯೂ ಸಿಕ್ಕಿತ್ತು. ಆದರೆ, ಯಾವಾಗ ಬಡ್ಡಿಯ ಕುರಿತಾದ ಕುರ್‌ಆನಿನ ತಾಕೀತುಗಳು ಅವರೊಳಗನ್ನು ಕೊರೆಯಲು ಪ್ರಾರಂಭಿಸಿತೋ ಬದುಕಿಗೆ ಏಕೈಕ ಆಧಾರವಾಗಿದ್ದ ನೌಕರಿಯನ್ನೇ ತೊರೆದರು. ಹಾಗಂತ,

ಇನ್ನೊಂದು  ನೌಕರಿಯನ್ನು ದೃಢಪಡಿಸಿಕೊಂಡು ಅವರು ಹೀಗೆ ಬ್ಯಾಂಕ್‌ ನಿಂದ  ಇಳಿದು ಬಂದಿರಲೂ ಇಲ್ಲ. ಅವರು ತನ್ನ ಅಂತರಾತ್ಮದ ಕರೆಯಂತೆ ನಡಕೊಂಡಿದ್ದರು. ಆ ಬಳಿಕ ಕ್ಷಿಪ್ರ ಬೆಳವಣಿಗೆಗಳಾದುವು. ಸನ್ಮಾರ್ಗ ಪತ್ರಿಕೆ ಪ್ರಾರಂಭಿಸುವ ಬಗ್ಗೆ ಚರ್ಚೆ, ಯೋಜನೆ, ಸಮಾಲೋಚನೆಗಳು ನಡೆದುವು. ಅಂತಿಮವಾಗಿ ಪತ್ರಿಕೆ ಪ್ರಾರಂಭಿಸುವುದೆಂದು ನಿರ್ಧಾರವಾಯಿತು. ಸನ್ಮಾರ್ಗ ಸಂಪಾದಕರಾಗಿ ಇಬ್ರಾಹೀಮ್ ಸಈದ್ ಆಯ್ಕೆಯಾದರು. ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಇವರ ಜೊತೆಗೂಡಿದರು. ಮಾತ್ರವಲ್ಲ, ಆರಂಭ ಕಾಲದಲ್ಲಿ ಈ ಮೂವರೂ ವೇತನದ ಹಂಗಿಲ್ಲದೇ ದುಡಿದರು. ೧೨ ಪುಟಗಳ ಡೆಮಿ ಗಾತ್ರದಲ್ಲಿ ಪ್ರಾರಂಭವಾದ ಪತ್ರಿಕೆಯ ಬೆಲೆ ಆಗ 40 ಪೈಸೆಯಾಗಿತ್ತು.

ತನ್ನ ಮೊದಲ  ಸಂಚಿಕೆಯಲ್ಲೇ ಪತ್ರಿಕೆ ಕುರ್‌ಆನಿನ ಅನುವಾದವನ್ನು ಪ್ರಕಟಿಸಿತು. ಅಂದಿನ ಕಾಲಕ್ಕೆ ಸಂಬಂಧಿಸಿ ಇದು ಅತೀವ ಸವಾಲಿನದ್ದಾಗಿತ್ತು ಮತ್ತು ಕ್ರಾಂತಿಕಾರಿ ನಿರ್ಧಾರವಾಗಿತ್ತು. ಮುಸ್ಲಿಮ್ ಸಮುದಾಯ ಭಕ್ತಿಯಿಂದ ಓದಲಷ್ಟೇ ಕುರ್‌ಆನನ್ನು ಬಳಸುತ್ತಿದ್ದ ಕಾಲ. ಅರಬಿಯ ಹೊರತಾದ ಇನ್ನಾವುದೇ ಭಾಷೆಗೆ ಕುರ್‌ಆನನ್ನು ಅನುವಾದ ಮಾಡುವುದು ನಿಷಿದ್ಧ ಎಂದು ನಂಬಿಕೊಂಡಿದ್ದ ಕಾಲ. ಸನ್ಮಾರ್ಗ ಈ ನಂಬಿಕೆಯನ್ನು ಪ್ರಶ್ನಿಸಿತಲ್ಲದೇ, ಜನಸಾಮಾನ್ಯರಿಗೆ ಕುರ್‌ಆನಿನ ಅರ್ಥವನ್ನು ತಿಳಿಸುವ ಮಾಧ್ಯಮವಾಯಿತು. ಇದರೊಂದಿಗೆ ಆದ ಇನ್ನೊಂದು ಕ್ರಾಂತಿ ಏನೆಂದರೆ,

ಈ ಕುರ್‌ಆನ್ ಮೊದಲ ಬಾರಿ ಮುಸ್ಲಿಮೇತರರ ಬಳಿಯೂ ತಲುಪಿದ್ದು. ಕುರ್‌ಆನಿನ ಅನುವಾದವನ್ನು ಕನ್ನಡದಲ್ಲಿ ಓದುವುದರೊಂದಿಗೆ ಮುಸ್ಲಿಮೇತರರಲ್ಲಿದ್ದ ಹತ್ತು-ಹಲವು ತಪ್ಪು ಅಭಿಪ್ರಾಯಗಳು ದೂರವಾದುವು. ಇದರ ಜೊತೆಗೇ ಮುಸ್ಲಿಮರೂ ಕುರ್‌ಆನನ್ನು ಅರಿತು ಓದತೊಡಗಿದರು. ಆವರೆಗೆ ಪುಣ್ಯ ಸಂಪಾದನೆಗೆಂದು  ಕುರ್‌ಆನನ್ನು ಓದುತ್ತಿದ್ದವರು, ಮೊದಲ ಬಾರಿ ಜೀವನ ಬದಲಾವಣೆಗಾಗಿ ಓದತೊಡಗಿದರು. ತಮ್ಮ ಈಗಿನ ಬದುಕು ಮತ್ತು ಕುರ್‌ಆನ್ ಹೇಳುವ ಬದುಕನ್ನು ಪರಸ್ಪರ ತಿಕ್ಕಿ ನೋಡಿ ಪಶ್ಚಾತ್ತಾಪಪಟ್ಟರು. ಹೊಸ ಜೀವನಕ್ರಮವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದರು. ಹಾಗಂತ,

ಸನ್ಮಾರ್ಗ ಕೇವಲ ಕುರ್‌ಆನ್ ಅನುವಾದವೊಂದನ್ನಷ್ಟೇ ಪ್ರಕಟಿಸುತ್ತಾ ಇದ್ದುದಲ್ಲ. ಹದೀಸ್‌ಗಳ ಪ್ರಕಟನೆಯನ್ನೂ ಪ್ರಾರಂಭಿಸಿತು. ಇಸ್ಲಾಮೀ ಇತಿಹಾಸವನ್ನೂ ಪ್ರಕಟಿಸತೊಡಗಿತು. ಮಹಿಳೆಯರ ಹಕ್ಕುಗಳ ಬಗ್ಗೆ ಕುರ್‌ಆನ್ ಮತ್ತು ಪ್ರವಾದಿ ಚರ್ಯೆ ಏನು ಹೇಳುತ್ತದೆಂಬುದರ ಬಗ್ಗೆ ಅರಿವಿಲ್ಲದ ಹಾಗೂ ಅಂದಿನ ಸಾಮಾಜಿಕ ರೀತಿ-ನೀತಿಗಳನ್ನೇ ಅಳವಡಿಸಿಕೊಂಡಿದ್ದ ಮುಸ್ಲಿಮರಿಗೆ ಇಸ್ಲಾಮ್ ಮಹಿಳೆಗೆ  ನೀಡಿರುವ ಸ್ಥಾನ ಮಾನಗಳನ್ನು ಪರಿಪರಿಯಾಗಿ ವಿವರಿಸಿಕೊಟ್ಟಿತು. ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕಿಲ್ಲ, ವರದಕ್ಷಿಣೆ ಇಸ್ಲಾಮ್ ನ ಭಾಗ, ಹೆಣ್ಣು ಶಿಕ್ಷಣ ಪಡೆಯಬೇಕಾಗಿಲ್ಲ, ಹೆಣ್ಣು ಮಸೀದಿ  ಪ್ರವೇಶಿಸುವಂತಿಲ್ಲ, ಆಕೆ ಗಂಡಿನ ಗುಲಾಮಳು... ಇತ್ಯಾದಿ ಇತ್ಯಾದಿ ಸ್ಥಾಪಿತ ನಿಲುವುಗಳಿಗೆ ಪ್ರಬಲ ಏಟನ್ನು ಕೊಟ್ಟದ್ದು ಸನ್ಮಾರ್ಗವೇ. ಮುಸ್ಲಿಂ ಮಹಿಳೆಯನ್ನು  ಸಂಕೋಲೆಗಳಿಂದ ಬಿಡಿಸಿದ್ದಲ್ಲದೇ ಹಿಜಾಬ್ ನ ಮಹತ್ವ, ತಾಯ್ತನದ ಮಹತ್ವ, ಕೌಟುಂಬಿಕ ಹೊಣೆಗಾರಿಕೆಗಳು, ದಾಂಪತ್ಯದ ಹಕ್ಕು- ಬಾಧ್ಯತೆಗಳು.. ಇತ್ಯಾದಿಯಾಗಿ ಹತ್ತು ಹಲವು ಸಂಗತಿಗಳನ್ನು ಕುರ್ ಆನ್  ಮತ್ತು ಹದೀಸ್  ಗಳ ಆಧಾರದಲ್ಲಿ ವಿವರಿಸುತ್ತಾ, ಇದನ್ನು ಅನುಸರಿಸುವ ಒಂದಿಡೀ ಹೊಸ ತಲೆಮಾರನ್ನೇ  ಸೃಷ್ಟಿಸಿತು. ಇದರ ಜೊತೆಗೆ, ಸನ್ಮಾರ್ಗ ಮಾಡಿದ ಇನ್ನೊಂದು ಮಹತ್ವಪೂರ್ಣ ಕಾರ್ಯವೆಂದರೆ ಸಂದೇಶ ಪ್ರಚಾರದ ಪ್ರಜ್ಞೆಯನ್ನು ಸಮುದಾಯದಲ್ಲಿ ಮೂಡಿಸಿದ್ದು. 

ಮುಸ್ಲಿಂ ಸಮುದಾಯದಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಶೂನ್ಯ ಅನ್ನುವಷ್ಟು ಕಡಿಮೆಯಿತ್ತು. ಇಸ್ಲಾಮಿನಂತೆ ಬದುಕುವುದಕ್ಕೆ ಬೇಕಾದ ಮಾರ್ಗದರ್ಶನಗಳೇ ಅಸ್ಪಷ್ಟವಾಗಿದ್ದ ಕಾಲದಲ್ಲಿ ಸಂದೇಶ ಪ್ರಚಾರದ ಪ್ರಜ್ಞೆ ಮೂಡುವುದಕ್ಕೆ ಸಾಧ್ಯವೂ ಇರಲಿಲ್ಲ. ಸನ್ಮಾರ್ಗ ನಿರಂತರ ಈ ಬಗ್ಗೆ ಸಮುದಾಯವನ್ನು ಎಚ್ಚರಿಸುವ ಬರಹಗಳನ್ನು ಪ್ರಕಟಿಸತೊಡಗಿತು. ಪ್ರವಾದಿಯ(ಸ) ದೌತ್ಯವನ್ನು ಜನರ ಮುಂದಿಟ್ಟಿತು. ಕುರ್‌ಆನಿನ ಉದ್ದೇಶವನ್ನು ಪದೇ ಪದೇ ನೆನಪಿಸತೊಡಗಿತು. ಹೀಗೆ ಕ್ರಾಂತಿಯೊಂದಕ್ಕೆ ಸಮಾಜವನ್ನು ನಿಧಾನಕ್ಕೆ ಒಗ್ಗಿಸುತ್ತಾ ಬರತೊಡಗಿತು. ಇದರ ಜೊತೆಜೊತೆಗೇ,

ಕಾಲದ ಬದಲಾವಣೆಗಳಿಗೂ ತನ್ನನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯೂ ಸನ್ಮಾರ್ಗಕ್ಕಿತ್ತು. ಬ್ಲ್ಯಾಕ್ ಅಂಡ್ ವೈಟ್‌ನಿಂದ ಡಬಲ್ ಕಲರ್‌ಗೆ ಅದು ತನ್ನನ್ನು ಬದಲಿಸಿಕೊಂಡಿತು. ೧೨ ಪುಟಗಳ ಸಣಕಲು ಗಾತ್ರವು ಇನ್ನಷ್ಟು ಪುಟಗಳೊಂದಿಗೆ ದಷ್ಟಪುಷ್ಟವಾದುವು. ಹಾಗೆಯೇ ತಂತ್ರಜ್ಞಾನದಲ್ಲಾದ ಕ್ರಾಂತಿಕಾರಿ ಬದಲಾವಣೆಗೂ ಸನ್ಮಾರ್ಗ ಒಗ್ಗಿಕೊಳ್ಳಬೇಕಾಗಿತ್ತು. ಆ ಕಾರಣದಿಂದಲೇ 2019ರಲ್ಲಿ ವೆಬ್‌ಪೋರ್ಟಲನ್ನು ಪ್ರಾರಂಭಿಸುವ ಮೂಲಕ ಸನ್ಮಾರ್ಗ ಇತರ ಪತ್ರಿಕೆಗಳಿಗೆ ಸಮಸಮವಾಗಿ ಬೆಳೆಯಿತು. 2020ರಲ್ಲಿ ಡಿಜಿಟಲ್ ನ್ಯೂಸ್ ಚಾನೆಲನ್ನೂ ಆರಂಭಿಸಿತು. ಇವತ್ತು ಇವು ಇರಡೂ ಅತ್ಯಂತ ಜನಪ್ರಿಯ ಮಾಧ್ಯಮವಾಗಿ ಗುರುತಿಸಿಕೊಂಡಿದೆ ಮತ್ತು ಕಾಲದ ಬದಲಾವಣೆಗೆ ಅತ್ಯಂತ ಶೀಘ್ರವಾಗಿ ಸ್ಪಂದಿಸಿದ ಕ್ರಾಂತಿಕಾರಿ ಹೆಜ್ಜೆಯಾಗಿ ಶ್ಲಾಘನೆಗೆ ಒಳಗಾಗಿದೆ. ಅಲ್ಲದೇ, ಎರಡು ದಶಕಗಳ ಹಿಂದೆ ಅನುಪಮ ಪತ್ರಿಕೆಯನ್ನು  ಆರಂಭಿಸಿದ ಹೆಗ್ಗಳಿಕೆಯೂ ಸನ್ಮಾರ್ಗಕ್ಕಿದೆ. ಆದರೆ,

1978ರಲ್ಲಿ ಯಾರು ಸನ್ಮಾರ್ಗ ಪತ್ರಿಕೆಯ ರೂವಾರಿಗಳಾಗಿದ್ದರೋ ಆ ಮೂವರೂ ಇವತ್ತು ನಮ್ಮ ಜೊತೆ ಇಲ್ಲ. ಇವರ ಜೊತೆಗೇ, ಈ ಪತ್ರಿಕೆಯ ಚಂದಾದಾರಿಕೆಗಾಗಿ ರಾಜ್ಯದಾದ್ಯಂತ ಹಗಲಿರುಳೂ ಸುತ್ತಿದವರು, ಚಂದಾ ನೀಡಿ ಬೆಂಬಲಿಸಿದವರು, ಆರ್ಥಿಕವಾಗಿ ನೆರವಾದವರು ಮತ್ತು ಪತ್ರಿಕೆಯ ಏಳಿಗೆಗಾಗಿ ದುಡಿದವರಲ್ಲಿ ಅನೇಕರು ಇವತ್ತು ನಮ್ಮ ಜೊತೆ ಇಲ್ಲ. ಈ 48ರ ಪ್ರಾಯದಲ್ಲಿ ಸನ್ಮಾರ್ಗ ಅವರೆಲ್ಲರನ್ನೂ ನೆನಪಿಸಿಕೊಳ್ಳುತ್ತದೆ. ಹಾಗೆಯೇ, ಅಂದಿನಿಂದ  ಈ ಹೊತ್ತಿನವರೆಗೂ ಪ್ರತಿಫಲಾಪೇಕ್ಷೆಯಿಲ್ಲದೇ ಸನ್ಮಾರ್ಗದ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಆರ್ಥಿಕವಾಗಿಯೂ ಬೌದ್ಧಿಕವಾಗಿಯೂ ದೈಹಿಕವಾಗಿಯೂ ಕೊಡುಗೆ ನೀಡುತ್ತಿರುವ ಎಲ್ಲ ಸಹೃದಯರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ ಸ್ಮರಿಸಿಕೊಳ್ಳುತ್ತದೆ. ಇವರೆಲ್ಲರಿಗೂ ಅಲ್ಲಾಹನು ತಕ್ಕ ಪ್ರತಿಫಲವನ್ನು ನೀಡಲಿ.

ಹಾಗಂತ, ಸನ್ಮಾರ್ಗ ಲಾಭದಾಯಕ ಮಾಧ್ಯಮವಲ್ಲ. ತಂಬಾಕು, ಬ್ಯಾಂಕು, ಸಿನಿಮಾ ಇತ್ಯಾದಿ ಜಾಹೀರಾತುಗಳಿಗೆ ಸ್ವಯಂ ನಿರ್ಬಂಧ ಹೇರಿಕೊಂಡಿರುವ ಸನ್ಮಾರ್ಗಕ್ಕೆ ಆರಂಭದಿಂದ  ಇಂದಿನವರೆಗೂ ಆರ್ಥಿಕ ಸವಾಲು ಹೊಸತೂ ಅಲ್ಲ. ಎಷ್ಟೇ ಕಷ್ಟ ಎದುರಾದರೂ ‘ಧರ್ಮ ನಿಷಿದ್ಧ’ ಜಾಹೀರಾತುಗಳನ್ನು ಸ್ವೀಕರಿಸಲಾರೆ ಎಂಬ ನಿಲುವಿನಲ್ಲಿ ಅದು ಈ ವರೆಗೂ ರಾಜಿ ಮಾಡಿಕೊಂಡೂ ಇಲ್ಲ. ಒಂದುವೇಳೆ ಈ ವಿಷಯದಲ್ಲಿ ಮಾಡುವ ಸಣ್ಣ ರಾಜಿಯೂ ಸನ್ಮಾರ್ಗವನ್ನು ಇವತ್ತು ಆರ್ಥಿಕವಾಗಿ ಬಲಿಷ್ಠವಾಗಿಡುತ್ತಿತ್ತೋ ಏನೋ? ಆದರೆ, ಸನ್ಮಾರ್ಗ ಎಂದೂ ಈ ವಿಷಯದಲ್ಲಿ ರಾಜಿ ಮಾಡುವುದಿಲ್ಲ. ಈ ಕಾರಣದಿಂದಲೇ ಸನ್ಮಾರ್ಗ ದಾನಿಗಳಿಂದ ನೆರವನ್ನು ಕೋರುತ್ತದೆ. ಪತ್ರಿಕೆ, ವೆಬ್‌ಪೋರ್ಟಲ್ ಮತ್ತು ನ್ಯೂಸ್ ಚಾನೆಲ್- ಈ ಮೂರನ್ನೂ ಏಕಕಾಲದಲ್ಲಿ ನಡೆಸುವುದೆಂದರೆ ಅದು ಸಣ್ಣ ಸವಾಲಲ್ಲ. ಪ್ರತಿಯೊಂದೂ ದುಬಾರಿಯಾಗಿರುವ ಈ ಕಾಲದಲ್ಲಿ ಸಿಬಂದಿಗಳ ವೇತನದಿಂದ ಹಿಡಿದು ಪತ್ರಿಕೆಯ ಮುದ್ರಣದವರೆಗೆ, ಕ್ಯಾಮರಾದಿಂದ ಹಿಡಿದು ಕಂಪ್ಯೂಟರ್ ವರೆಗೆ ಎಲ್ಲವೂ ತುಟ್ಟಿಯೇ. ಈ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ನಿಮ್ಮೆಲ್ಲರ ನೆರವಿನ ಅಗತ್ಯವಿದೆ. ಕೇವಲ ಆರ್ಥಿಕ ನೆರವು ಮಾತ್ರವಲ್ಲ, ಬೌದ್ಧಿಕ ನೆರವು ಮತ್ತು ದೈಹಿಕ ಶ್ರಮದ ಅಗತ್ಯವೂ ಇದೆ. ಈ ಪಯಣದಲ್ಲಿ ನಿಮ್ಮೆಲ್ಲರ ಭಾಗೀದಾರಿಕೆಯನ್ನು ಸನ್ಮಾರ್ಗ ಅಪೇಕ್ಷಿಸುತ್ತದೆ. ಸುಳ್ಳು ಮತ್ತು ದ್ವೇಷಗಳೇ ಆಳುವ ಈ ಕಾಲದಲ್ಲಿ ಸನ್ಮಾರ್ಗ ದುರ್ಬಲವಾಗದಂತೆ ಕಾಪಾಡುವ ಜವಾಬ್ದಾರಿಯನ್ನು ನೀವೆಲ್ಲ ವಹಿಸಿಕೊಳ್ಳಬೇಕು ಎಂದು ವಿನಂತಿಸುತ್ತದೆ.