Wednesday, 23 April 2014

ಕಬೀರ್ ನಿಗೆ ಗುಂಡಿಕ್ಕಿದ ಮನುಷ್ಯ ವಿರೋಧಿಗಳ ಪರಮ ಸುಳ್ಳುಗಳು

   ಕಾಡಿನಿಂದ ನಾಡಿಗೆ ಬಂದು ಭೀತಿ ಹುಟ್ಟಿಸುವ ಹುಲಿಯನ್ನೋ ಚಿರತೆಯನ್ನೋ ಜೀವಂತ ಹಿಡಿಯುವುದಕ್ಕೆ ವಿವಿಧ ರೀತಿಯ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುವ ಇಂದಿನ ದಿನಗಳಲ್ಲಿ; ಮನುಷ್ಯರ ಮೇಲೆ ಕನಿಷ್ಠ ಈ ಮಟ್ಟದ ಸೌಜನ್ಯವನ್ನು ತೋರುಲೂ ನಮ್ಮ ವ್ಯವಸ್ಥೆಗೆ ಸಾಧ್ಯವಾಗುವುದಿಲ್ಲವೆಂದರೆ, ಏನೆನ್ನಬೇಕು? ಕಬೀರ್; ನರಹಂತಕ ಹುಲಿಯೋ ಚಿರತೆಯೋ ಆಗಿರಲಿಲ್ಲ. ನಕ್ಸಲ್ ನಿಗ್ರಹ ಪಡೆಯ ಮೇಲೆ ಎರಗಿ ಹತ್ಯೆ ಮಾಡಬಲ್ಲಂತಹ ಕೋರೆ ಹಲ್ಲುಗಳೋ, ಉಗುರುಗಳೋ ಅಥವಾ ಆಯುಧಗಳೋ ಆತನಲ್ಲಿರಲಿಲ್ಲ. ಆತನ ಮೇಲೆ ಭಯೋತ್ಪಾದನೆಯ ಯಾವ ಆರೋಪಗಳೂ ಇರಲಿಲ್ಲ. ಮನುಷ್ಯರೆಂಬ ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಗೂ ಕಬೀರ್‍ನಿಗೂ ನಡುವೆ ಇದ್ದ ವ್ಯತ್ಯಾಸ ಅಂದರೆ, ಆತ ಜಾನುವಾರುಗಳ ಜೊತೆಗಿದ್ದ. ಇವರು ಬಂದೂಕುಗಳ ಜೊತೆಗಿದ್ದರು. ಜಾನುವಾರುಗಳ ಜೊತೆಗಿರುವುದು ಓರ್ವ ವ್ಯಕ್ತಿಯ ಹತ್ಯೆಗೆ ಕಾರಣವಾಗುವಷ್ಟು ಭೀಕರ ಅಪರಾಧವೇ? ಅದು ಅಕ್ರಮ ಜಾನುವಾರು ಸಾಗಾಟ ಎಂದೇ ಇಟ್ಟುಕೊಳ್ಳೋಣ. ಆದರೆ ಅದಕ್ಕಿರುವ ಶಿಕ್ಷೆ ಯಾವುದು? ಅದನ್ನು ಜಾರಿ ಮಾಡಬೇಕಾದವರು ಯಾರು? ಅಷ್ಟಕ್ಕೂ, ನಿರಾಯುಧನಾದ ಓರ್ವ ಯುವಕನನ್ನು ಗುಂಡಿಟ್ಟು ಕೊಲ್ಲುವಷ್ಟು ನಕ್ಸಲ್ ನಿಗ್ರಹ ಪಡೆಯಲ್ಲಿರುವವರ ಮನಸ್ಸು ದ್ವೇಷಮಯವಾಗಿದೆಯೆಂದರೆ, ಇನ್ನು ಅಯುಧಧಾರಿಗಳಾದ ನಕ್ಸಲರನ್ನು ಇವರು ಹೇಗೆ ನಡೆಸಿಕೊಂಡಾರು?
 ಮುಸ್ಲಿಮರನ್ನು ಬೆತ್ತಲೆಗೊಳಿಸಲು, ಹಲ್ಲೆ ನಡೆಸಲು ಮತ್ತು ಹಿಂದೂ ವಿರೋಧಿಗಳಂತೆ ಬಿಂಬಿಸಲು ಜಾನುವಾರುಗಳು ಕರಾವಳಿ ಭಾಗದಲ್ಲಿ ಅಸಂಖ್ಯ ಬಾರಿ ಬಳಕೆಯಾಗಿವೆ. ಈ ದೇಶದಲ್ಲಿ ಬಾಂಬ್ ಭಯೋತ್ಪಾದನೆಯು ಗಂಭೀರ ಚರ್ಚೆಗೆ ಒಳಪಟ್ಟ ಆಸುಪಾಸಿನಲ್ಲೇ ಕರಾವಳಿ ಭಾಗದಲ್ಲಿ ಸ್ಫೋಟಗೊಂಡ ಬಾಂಬ್ ಇದು. ಸುಮಾರು 10 ವರ್ಷಗಳ ಹಿಂದೆ ಉಡುಪಿ ಬಳಿಯ ಹಾಜಬ್ಬ ಮತ್ತು ಹಸನಬ್ಬ ಎಂಬ ಅಪ್ಪ-ಮಗನನ್ನು ಬೆತ್ತಲೆಗೊಳಿಸುವ ಮೂಲಕ ಈ ಬಾಂಬನ್ನು ಅದ್ದೂರಿಯಾಗಿ ಸ್ಫೋಟಿಸಲಾಯಿತು. ಆ ಸ್ಫೋಟ ಎಷ್ಟು ಕ್ರೂರವಾಗಿತ್ತೆಂದರೆ, ಅಪ್ಪ ಮತ್ತು ಮಗ ಬೆತ್ತಲೆಯಾಗಿ ಮೈದಾನಕ್ಕೆ ಸುತ್ತು ಬರುವಷ್ಟು ಮತ್ತು ನೆರೆದ ಜನರು ಅದನ್ನು ಕ್ರೀಡೆಯಂತೆ ವೀಕ್ಷಿಸುವಷ್ಟು. ಆ ಬಳಿಕ, ‘ಅಕ್ರಮ ಗೋಸಾಗಾಟ ಮತ್ತು ಹಲ್ಲೆ’ ಎಂಬ ಶೀರ್ಷಿಕೆಯಲ್ಲಿ ನೂರಾರು ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಲ್ಲಿಯ ವಿಶೇಷತೆ ಏನೆಂದರೆ, ಈ ಸುದ್ದಿಗಳ ಕಣ್ಣು, ಕಿವಿ, ಕೈ, ಬಾಯಿ, ಕಾಲು, ಮೂಗು ಎಲ್ಲವೂ ಮುಸ್ಲಿಮರದ್ದೇ ಆಗಿರುವುದು. `ಅಕ್ರಮ ಗೋ ಸಾಗಾಟ' ಎಂಬ ಶೀರ್ಷಿಕೆ ಕಂಡ ಕೂಡಲೇ ಅಪರಾಧಿ ಯಾರು ಎಂದು ತೀರ್ಮಾನವಾಗಿ ಬಿಡುತ್ತದೆ. `ಅಕ್ರಮ' ಎಂಬ ಪದ ಶೀರ್ಷಿಕೆಯಲ್ಲೇ ಇರುವುದರಿಂದ, ‘ಶಿಕ್ಷೆ ಆಗಲೇ ಬೇಕು’ ಎಂಬ ಸಂದೇಶವನ್ನು ಆ ಸುದ್ದಿ ರವಾನಿಸಿ ಬಿಡುತ್ತದೆ. ಆದ್ದರಿಂದಲೇ, ಶಿಕ್ಷೆ ನೀಡುವವರು ಗೌರವಾರ್ಹರಾಗಿ ಮತ್ತು ಶಿಕ್ಷೆಗೀಡಾಗುವವರು ಅಕ್ರಮಿಗಳಾಗಿ ಗುರುತಿಗೀಡಾಗುತ್ತಾರೆ. ಅಂದಹಾಗೆ, ಜಾನುವಾರು ಸಾಗಾಟವು ಅಕ್ರಮವೋ ಸಕ್ರಮವೋ ಎಂಬುದನ್ನು ತೀರ್ಮಾನಿಸುವುದು ಪೊಲೀಸರೋ ಅಥವಾ ಇಲ್ಲಿನ ಕಾನೂನು ವ್ಯವಸ್ಥೆಯೋ ಅಲ್ಲ. ಸ್ವಘೋಷಿತ ಜಾನುವಾರು ರಕ್ಷಕರು ಸ್ಥಳದಲ್ಲೇ ಅದನ್ನು ತೀರ್ಮಾನಿಸುತ್ತಾರೆ. ಆ ತೀರ್ಮಾನವು ಅತ್ಯಂತ ಗೌರವಾರ್ಹ ಪದಗಳೊಂದಿಗೆ ಸುದ್ದಿಯಾಗಿ ಪ್ರಕಟವಾಗುತ್ತದೆ. ಜಾನುವಾರು ಸಾಗಾಟವು ‘ಅಕ್ರಮ’ ಎಂದು ತೀರ್ಮಾನವಾದ ಬಳಿಕ ಹಲ್ಲೆ `ಸಕ್ರಮ'ವಾಗಬೇಕಾದದ್ದು ಸಹಜವಾಗಿ ಬಿಡುತ್ತದೆ. ಹೀಗೆ, ಸರಕಾರವೇ ಪರವಾನಿಗೆ ಕೊಟ್ಟ ಕಸಾಯಿಖಾನೆಗೆ ಸಾಗಿಸಲಾಗುವ ಜಾನುವಾರುಗಳು ಕರುಣಾಮಯಿ ರೂಪವನ್ನು ಪಡೆದು ಸಾಗಿಸುವವರು ಕ್ರೂರಿಗಳಾಗಿ ಹಲ್ಲೆಗೆ, ಬೆತ್ತಲೆಗೆ ಒಳಗಾಗಿ ಬಿಡುತ್ತಾರೆ. ಜಾನುವಾರುಗಳನ್ನು ಸಾಕುವವರು ಹಿಂದೂಗಳು ಮಾತ್ರ ಮತ್ತು ಅದನ್ನು ಕಡಿದು ತಿನ್ನುವವರು ಮುಸ್ಲಿಮರು ಮಾತ್ರ ಎಂಬ ಹಸಿ ಸುಳ್ಳಿಗೆ ಮರುಳಾದವರು ಇಲ್ಲಿ ಇರುವಂತೆಯೇ, ಹಿಂದೂಗಳನ್ನು ಅವಮಾನಿಸುವುದಕ್ಕಾಗಿಯೇ ಮುಸ್ಲಿಮರು ಜಾನುವಾರು ಮಾಂಸವನ್ನು ತಿನ್ನುತ್ತಾರೆ ಎಂಬ ಪರಮ ಸುಳ್ಳನ್ನೂ ನಂಬಿದವರಿದ್ದಾರೆ. ಅಷ್ಟಕ್ಕೂ, ಆಹಾರ ಸೇವಿಸುವುದು ಯಾರನ್ನಾದರೂ ಅವಮಾನಿಸುವುದಕ್ಕೆ ಎಂದಾದರೆ, ಇಲ್ಲಿ ಅವಮಾನಕ್ಕೆ ಒಳಗಾಗದ ಧರ್ಮವಾದರೂ ಯಾವುದಿದ್ದೀತು? ಆದರೆ, ಮುಸ್ಲಿಮರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸುವ ಮೂಲಕ ರಾಜಕೀಯ ಲಾಭ ಪಡಕೊಳ್ಳುವುದಕ್ಕಾಗಿ ಒಂದು ವರ್ಗವು ಹಬ್ಬಿಸಿರುವ ಈ ಸುದ್ದಿಯು ಹಾಜಬ್ಬ-ಹಸನಬ್ಬ ಪ್ರಕರಣದಿಂದ ಹಿಡಿದು ಕಬೀರ್ ಪ್ರಕರಣದವರೆಗೆ ಸುಳ್ಳಾಗುತ್ತಲೇ ಬಂದಿದೆ. ಹಾಜಬ್ಬರ ಜಾನುವಾರು ಸಾಗಾಟ ಪ್ರಕರಣದಲ್ಲಿಯೂ ಹಿಂದೂ ಸಹೋದರರು ಭಾಗಿಯಾಗಿದ್ದರು. ಕಬೀರ್ ಪ್ರಕರಣದಲ್ಲಿ ವಾಹನದ ಚಾಲಕ ಪ್ರಮೋದ್ ಎಂಬವನಾಗಿದ್ದ. ನಿಜವಾಗಿ, ಸಾಮಾನ್ಯ ಮಂದಿ ಜಾನುವಾರು ಸಾಗಾಟವನ್ನು ಒಂದು ವ್ಯಾಪಾರವಾಗಿ ಪರಿಗಣಿಸಿದ್ದಾರೆಯೇ ಹೊರತು ಹಿಂದೂ-ಮುಸ್ಲಿಮ್ ಆಗಿ ಅಲ್ಲ. ಆದರೆ, ಈ ಕಟು ಸತ್ಯವನ್ನು ಮುಚ್ಚಿಟ್ಟು ಇಡೀ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚುವಲ್ಲಿ ಒಂದು ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. 10 ವರ್ಷಗಳ ಹಿಂದೆ ಇದೇ ಕಾರಣಕ್ಕಾಗಿ ಹಾಜಬ್ಬ ಬೆತ್ತಲೆಯಾಗಿದ್ದರೆ ಇದೀಗ ಅದರ ದಶಮಾನೋತ್ಸವ ಎಂಬಂತೆ ಕಬೀರ್‍ನ ಹತ್ಯೆ ನಡೆದಿದೆ.
 ನಿಜ, ಪೊಲೀಸರೂ ಮನುಷ್ಯರೇ. ಉತ್ಪ್ರೇಕ್ಷಿತ ಸುಳ್ಳುಗಳು ಮತ್ತು ಕೋಮುವಾದಿ ವಿಚಾರಧಾರೆಗಳು ನಿರಂತರ ಪ್ರಚಾರದಲ್ಲಿರುವಾಗ ಅವರು ಕಣ್ಣು-ಕಿವಿ ಮುಚ್ಚಿಕೊಂಡು ಇರಬಲ್ಲರೆಂದು ಹೇಳುವಂತಿಲ್ಲ. ಕೆಲವೊಮ್ಮೆ ಇಂಥ ವಿಚಾರಧಾರೆಗಳು ಅವರ ಮೇಲೂ ಪ್ರಭಾವ ಬೀರಬಹುದು. ಕೆಲವೊಮ್ಮೆ ಇಂಥ ವಿಚಾರಧಾರೆಗಳನ್ನು ಹರಡುತ್ತಿರುವವರೇ ಪೊಲೀಸ್ ಇಲಾಖೆಗೆ ಸೇರಿಕೊಳ್ಳಬಹುದು. ಇವು ಏನೇ ಆಗಿದ್ದರೂ ಇಂಥ ಬೆಳವಣಿಗೆಗಳು ಸಮಾಜದ ಪಾಲಿಗೆ ಅಪಾಯಕಾರಿಯೇ. ಕಬೀರ್ ಪ್ರಕರಣ ಮುಸ್ಲಿಮ್ ಸಮಾಜದ ಅನುಮಾನಗಳಿಗೆ ಮತ್ತೊಮ್ಮೆ ಬಲ ನೀಡಿದೆ. ಜಾನುವಾರು ಸಾಗಾಟ, ನೈತಿಕ ಪೊಲೀಸ್‍ಗಿರಿ, ಕೋಮುಗಲಭೆ.. ಮುಂತಾದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆ ನಡಕೊಳ್ಳುತ್ತಿರುವ ರೀತಿಯ ಬಗ್ಗೆ ಸಮಾಜದಲ್ಲಿದ್ದ ಅನುಮಾನವನ್ನು ಕಬೀರ್ ಪ್ರಕರಣವು ಬಲಪಡಿಸಿದೆ. 2-3 ವರ್ಷಗಳ ಹಿಂದೆ ನೌಶಾದ್ ಕಾಸಿಮ್‍ಜಿ ಎಂಬ ಯುವ ನ್ಯಾಯವಾದಿಯ ಹತ್ಯೆ ನಡೆದಾಗಲೂ ಇಂಥ ಅನುಮಾನ ದಟ್ಟವಾಗಿತ್ತು. ಆ ಹತ್ಯೆಯ ಹಿಂದೆ ವ್ಯವಸ್ಥೆಯ ಕೈವಾಡವಿದೆ ಎಂಬ ಸಂಶಯವನ್ನು ಅಸಂಖ್ಯ ಮಂದಿ ವ್ಯಕ್ತಪಡಿಸಿದ್ದರು. ಆ ಕುರಿತಾದ ತನಿಖೆ ಎಲ್ಲಿಗೆ ಮುಟ್ಟಿದೆ ಎಂಬುದೇ ಇವತ್ತು ತಿಳಿದಿಲ್ಲ. ಇಂತಹ ಹೊತ್ತಲ್ಲೇ ಕಬೀರ್‍ನ ಹತ್ಯೆ ನಡೆದಿದೆ. ಅದ್ದರಿಂದ ಈ ಪ್ರಕರಣವು ಇನ್ನೊಂದು ಕಾಸಿಮ್‍ಜಿ ಪ್ರಕರಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿರುವಂತೆಯೇ ಸರಕಾರದ ಮೇಲೆಯೂ ಇದೆ. ‘ಮುಖ್ಯಮಂತ್ರಿ ಯಡಿಯೂರಪ್ಪ ಎಂಬ ಜಾಗದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂಬ ಬದಲಾವಣೆಯಷ್ಟೇ ಆಗಿದೆ, ವ್ಯತ್ಯಾಸವೇನೂ ಇಲ್ಲ..’ ಎಂದು ಜನರು ಆಡಿಕೊಳ್ಳುವಂತಹ ಹಂತಕ್ಕೆ ತಲುಪುತ್ತಿದ್ದಾರೆ. ವ್ಯವಸ್ಥೆಯೊಳಗಿನ ಮತ್ತು ಹೊರಗಿನ ಮನುಷ್ಯ ವಿರೋಧಿಗಳ ಬಗ್ಗೆ ಸಿದ್ಧರಾಮಯ್ಯ ಸರಕಾರ ಇನ್ನೂ ಮೃದುಧೋರಣೆಯನ್ನೇ ಅನುಸರಿಸಿದರೆ ಅದು ಸಾರುವ ಸಂದೇಶ ಮತ್ತು ಬೀರುವ ಪರಿಣಾಮ ಅತ್ಯಂತ ದುರಂತಮಯವಾದೀತು.
   ಏನೇ, ಆಗಲಿ, ಹತ್ಯೆಗೊಳಗಾಗುವ ಮೂಲಕ ಕರಾವಳಿ ಭಾಗದಲ್ಲಿ ಕಾರ್ಯಾಚರಣೆಯಲ್ಲಿರುವ ದಬ್ಬಾಳಿಕೆಯೊಂದನ್ನು ಕಬೀರ್ ಮತ್ತೊಮ್ಮೆ ಚರ್ಚೆಗೆ ತಂದಿದ್ದಾನೆ. ಈ ಚರ್ಚೆ ಇಲ್ಲಿಗೇ ಕೊನೆಗೊಳ್ಳಬಾರದು. ಅಕ್ರಮ ಜಾನುವಾರು ಸಾಗಾಟದಲ್ಲಿ ತೊಡಗಿರುವವರ ಮೇಲೆ ವ್ಯವಸ್ಥೆಯು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುತ್ತಲೇ ಕಬೀರ್ ಎತ್ತಿರುವ ಚರ್ಚೆಯನ್ನು ಜೀವಂತವಾಗಿಡಬೇಕಾಗಿದೆ. ಮುಸ್ಲಿಮ್ ಮತ್ತು ಹಿಂದೂಗಳನ್ನು ವಿಭಜಿಸುವ ಸುಳ್ಳಿನ ವಕ್ತಾರರನ್ನು ಸೋಲಿಸಲು ಕಬೀರ್‍ನ ಪ್ರಾಣತ್ಯಾಗಕ್ಕೆ ಸಾಧ್ಯವಾದರೆ, ಈ  ಒಂದು ಪ್ರಾಣತ್ಯಾಗವನ್ನು ಬಲಿದಾನವೆಂದೇ ಪರಿಗಣಿಸಿ ನಾವೆಲ್ಲ ಅಭಿಮಾನ ಪಟ್ಟುಕೊಳ್ಳಬಹುದಾಗಿದೆ.

Wednesday, 16 April 2014

ಮೋದಿ ಮಾದರಿಯನ್ನು ಪ್ರಶ್ನಿಸಿದ ಜಶೋದಾಬೆನ್

   `ಕುಟುಂಬ' ಎಂಬ ಮೂರಕ್ಷರದ ಮನೆಯೊಳಗೆ ಪತಿ ಮತ್ತು ಪತ್ನಿ ಹೀರೊ-ಹೀರೋಯಿನ್ ಆಗಿರುತ್ತಾರೆ. ದುಃಖದ ಮತ್ತು ಸುಃಖದ ಅಸಂಖ್ಯ ಸಂದರ್ಭಗಳನ್ನು ಅವರು ಪರಸ್ಪರ ಹಂಚಿಕೊಂಡಿರುತ್ತಾರೆ. ಅದೆಷ್ಟೋ ಬಾರಿ ಅವರು ಭಾವುಕರಾಗಿರಬಹುದು. ಸಿಟ್ಟಾಗಿರಬಹುದು. ಆನಂದದ ಕ್ಷಣಗಳನ್ನು ಕಳೆದಿರಬಹುದು. ಎಲ್ಲೋ ಏನೋ ಆಗಿರುವ ಓರ್ವ ಯುವಕ ಮತ್ತು ಯುವತಿಯನ್ನು ಮದುವೆ ಒಟ್ಟುಗೂಡಿಸುತ್ತದೆ. ಆ ವರೆಗೆ ಅಪರಿಚಿತರಾಗಿದ್ದ ಅವರಿಬ್ಬರೂ ಮದುವೆಯ ಬಳಿಕ ಎಷ್ಟು ನಿಕಟರಾಗಿ ಬಿಡುತ್ತಾರೆಂದರೆ ಒಬ್ಬರ ನೋವನ್ನು ಇನ್ನೊಬ್ಬರು ಅನುಭವಿಸುತ್ತಾರೆ. ಪರಸ್ಪರ ಬಿಟ್ಟಿರಲಾರದ ಅನ್ಯೋನ್ಯತೆಯ ಸಂಬಂಧವೊಂದು ಅವರ ನಡುವೆ ಸ್ಥಾಪಿತಗೊಂಡಿರುತ್ತದೆ. ಪತ್ನಿಯನ್ನು ಅಭದ್ರತೆಯ ಭಾವ ಕಾಡದಂತೆ ನೋಡಿಕೊಳ್ಳುವ ಹೊಣೆಗಾರಿಕೆ ತನ್ನದೆಂದು ಭಾವಿಸುವ ಪತಿಯ ಹಾಗೆಯೇ, ಪತಿಯ ಕ್ಷೇಮಕ್ಕಾಗಿ ಎಲ್ಲವನ್ನೂ ಧಾರೆಯೆರೆಯುವುದು ತನ್ನ ಕರ್ತವ್ಯವೆಂದು ಪತ್ನಿ ಭಾವಿಸುತ್ತಾಳೆ. ಇಂಥದ್ದೊಂದು ಭಾವುಕ ಸಂಬಂಧ ಪತಿ ಮತ್ತು ಪತ್ನಿಯ ಮಧ್ಯೆ ಇರುವುದರಿಂದಲೇ, ವಿಚ್ಛೇದನವನ್ನು ಈ ಸಮಾಜ ಇಷ್ಟ ಪಡದೇ ಇರುವುದು. ಯಾವುದಾದರೊಂದು ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ ಎಂದು ಗೊತ್ತಾದರೆ, ತಕ್ಷಣ ಅಲ್ಲಿ ಮೌನ ಆವರಿಸುತ್ತದೆ. ಛೆ, ಹೀಗಾಗಬಾರದಿತ್ತು ಎಂಬ ಉದ್ಗಾರವೊಂದು ಆ ಜೋಡಿಯ ಗುರುತು-ಪರಿಚಯ ಇಲ್ಲದವರಿಂದಲೂ ಹೊರಡುತ್ತದೆ. ಆದರೆ ಜೋಡಿಯೊಂದು ತಮ್ಮ ದಾಂಪತ್ಯ ಜೀವನದ ನಲ್ವತ್ತೋ ಐವತ್ತೋ ವರ್ಷಕ್ಕೆ ಕಾಲಿಟ್ಟರೆ, ಅದಕ್ಕಾಗಿ ಸಂಭ್ರಮಪಡಲಾಗುತ್ತದೆ. ಅಂಥ ಜೋಡಿಗಳ ಭಾವನೆಗಳಿಗೆ ಮಾಧ್ಯಮಗಳು ಜೀವ ಕೊಡುತ್ತವೆ. ಇವತ್ತು ಮದುವೆಯಾಗಿ ನಾಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ಯಾವ ಸಮಾಜವೂ ಮಾದರಿಯೆಂದು ಪರಿಗಣಿಸುವುದಿಲ್ಲ. ದುರಂತ ಏನೆಂದರೆ, ಗುಜರಾತ್‍ನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಅವರ ಅಭಿಮಾನಿಗಳು ಈ ತಪ್ಪು ಕ್ರಮವನ್ನೇ ಮಾದರಿ ಎಂದು ಇವತ್ತು ಸಮರ್ಥಿಸುತ್ತಿದ್ದಾರೆ. ಮದುವೆಯಾದ ಮೂರೇ ತಿಂಗಳೊಳಗೆ ಮೋದಿಯವರು ತನ್ನ ಪತ್ನಿಯನ್ನು ತ್ಯಜಿಸಿದ್ದು ದೇಶಸೇವೆಗಾಗಿ ಎಂದವರು ವಾದಿಸುತ್ತಿದ್ದಾರೆ. ದೇಶಸೇವೆ ಮಾಡಬೇಕೆಂದರೆ, ತನ್ನನ್ನೇ ನಂಬಿ ಬಂದ ಒಂಟಿ ಹೆಣ್ಣನ್ನು ತ್ಯಜಿಸಬೇಕಾದ ಅಗತ್ಯ ಇದೆಯೇ? ಪತಿ ಎಂಬ ನೆಲೆಯಲ್ಲಿ ಇರುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಲೇ `ದೇಶ ಸೇವೆ' ಮಾಡುವುದಲ್ಲವೇ ಅತ್ಯಂತ ಯೋಗ್ಯ ಮತ್ತು ಮಾದರಿಯಾಗಬೇಕಾದದ್ದು? ದೇಶ ಸೇವೆಯೆಂಬುದು ಪತ್ನಿಗೆ ಕೈ ಕೊಡಬೇಕಾದಷ್ಟು ಭೀಕರ ಸಂಗತಿಯೇ? ಇಂಥ `ದೇಶಸೇವೆ' ಎಂಥ ಭಾರತವನ್ನು ನಿರ್ಮಾಣ ಮಾಡೀತು?
 ತನಗೊಬ್ಬಳು ಪತ್ನಿಯಿದ್ದಾಳೆ ಎಂದು 45 ವರ್ಷಗಳ ಬಳಿಕ ಇದೇ ಮೊದಲ ಬಾರಿ ಮೋದಿ ಒಪ್ಪಿಕೊಂಡದ್ದನ್ನು ಯಾಕೆ ಚರ್ಚೆಗೆ ಎತ್ತಿಕೊಳ್ಳಬೇಕಾಯಿತೆಂದರೆ, ಅವರು ಪ್ರಧಾನಿ ಅಭ್ಯರ್ಥಿ ಎಂಬುದರಿಂದ ಮತ್ತು ‘ತಾನು ಮಾದರಿ ದೇಶವನ್ನು ನಿರ್ಮಿಸುತ್ತೇನೆ’ ಎಂದು ವಾದಿಸುತ್ತಿರುವುದರಿಂದ. ದೇಶ ಅಂದರೆ ಗೋವು, ಗುಜರಾತ್‍ನ ಹುಲಿ, ರಸ್ತೆಗಳಷ್ಟೇ ಅಲ್ಲವಲ್ಲ. ಕುಟುಂಬ ಅದರ ಬಹುಮುಖ್ಯ ಭಾಗ ತಾನೇ. ಆದರೆ ಮೋದಿ ಈ ಅತ್ಯಮೂಲ್ಯ ಭಾಗದ ಬಗ್ಗೆಯೇ ತೀರಾ ಉಡಾಫೆಯ ನಿಲುವನ್ನು ತಾಳಿದ್ದಾರೆ. ದೇಶ ಸೇವೆಯ ನೆಪದಲ್ಲಿ ಓರ್ವ ಹೆಣ್ಣಿನ ಭಾವನೆಗಳನ್ನು ಕ್ಷುಲ್ಲಕಗೊಳಿಸಿದ್ದಾರೆ. 45 ವರ್ಷಗಳ ಹಿಂದೆ ಮೋದಿಯವರನ್ನು ಮದುವೆಯಾಗುವಾಗ ಜಶೋದಾಬೆನ್‍ಗೆ 17 ವರ್ಷ. ಇಂದಿನಂತೆ ಟಿ.ವಿ., ಇಂಟರ್‍ನೆಟ್ ಮುಂತಾದ ಆಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಜಶೋದಾಬೆನ್ ನಿಜವಾಗಿಯೂ ಅಪ್ರಾಪ್ತೆ. ಪತಿ-ಪತ್ನಿ ಸಂಬಂಧದ ಬಗ್ಗೆ, ಮದುವೆಯ ಪಾವಿತ್ರ್ಯದ ಕುರಿತಂತೆ ಅವರಿವರಿಂದ ತಿಳಿದಿರುವುದರ ಹೊರತಾಗಿ ಹೆಚ್ಚಿನದೇನನ್ನೂ ಆ ಪ್ರಾಯದಲ್ಲಿ ಅವರು ಅರಿತುಕೊಂಡಿರುವ ಸಾಧ್ಯತೆ ಇಲ್ಲ. ಅದಾಗಲೇ ಮದುವೆಯಾಗಿರುವ ತನ್ನ ಗೆಳತಿಯರನ್ನು ನೋಡಿ ಜಶೋದಾಬೆನ್ ಹಲವಾರು ಕನಸುಗಳನ್ನು ಕಂಡಿರಬಹುದು. ಗೆಳತಿಯರು ತವರು ಮನೆಗೊಮ್ಮೆ- ಪತಿ ಮನೆಗೊಮ್ಮೆ ಬಂದು ಹೋಗುತ್ತಿರುವುದು, ಪತಿಯ ಜೊತೆ ತಿರುಗಾಡುವುದು, ಮಕ್ಕಳೊಂದಿಗೆ ಆಡುವುದು... ಎಲ್ಲವನ್ನೂ ನೋಡಿರಬಹುದು. ಅವರೊಂದಿಗೆ ಕೌಟುಂಬಿಕ ಬದುಕಿನ ಬಗ್ಗೆ ವಿಚಾರ ವಿನಿಮಯ ಮಾಡಿರಬಹುದು. ನರೇಂದ್ರ ಮೋದಿಯವರೊಂದಿಗೆ ವಿವಾಹ ನಿಶ್ಚಿತಗೊಂಡಾಗ ಜಶೋದಾ ತನ್ನ ಗೆಳತಿಯರಂಥ ಒಂದು ಸುಂದರ ಕುಟುಂಬ ಜೀವನದ ಕನಸು ಕಂಡಿರಬಹುದು. ತನ್ನ ಪತಿಯಾದ ಮೋದಿಯರೊಂದಿಗೆ ಸುತ್ತಾಡುವ, ಮಕ್ಕಳನ್ನು ಹೊಂದುವ ಕುರಿತಂತೆ ನೀಲ ನಕ್ಷೆ ರೂಪಿಸಿರಬಹುದು. ಸಾಮಾನ್ಯವಾಗಿ, ಕೌಟುಂಬಿಕ ಜೀವನದ ಬಗ್ಗೆ ಪುರುಷನಿಗಿಂತ ಹೆಚ್ಚು ಗಂಭೀರವಾಗಿರುವುದು ಮಹಿಳೆಯೇ. ಪತಿಯೊಂದಿಗೆ ಎಷ್ಟೇ ಮುನಿಸಿದ್ದರೂ ಹೊರಗೆ ಆಕೆ ನಗು ನಗುತ್ತಲೇ ಇರುತ್ತಾಳೆ. ಕೌಟುಂಬಿಕ ಜೀವನದ ಯಾವ ಸಮಸ್ಯೆಗಳೂ ಮನೆಯ ನಾಲ್ಕು ಗೋಡೆ ದಾಟದಂತೆ ಎಚ್ಚರ ವಹಿಸುತ್ತಾಳೆ.  ಪತಿಯ ದೌರ್ಬಲ್ಯಗಳನ್ನು ತವರು ಮನೆಯಿಂದಲೂ ಮುಚ್ಚಿಡುತ್ತಾಳೆ. ಹೀಗಿರುವಾಗ, 45 ವರ್ಷಗಳ ಹಿಂದೆ ನರೇಂದ್ರ ಮೋದಿ ಎಂಬ ಪತಿಯ ಸುತ್ತ ಜಶೋದಾಬೆನ್ ಇಂಥದ್ದೊಂದು ರಮ್ಯ ಕನಸನ್ನು ಕಟ್ಟಿರಲಾರರು ಎಂದು ಹೇಳುವುದಕ್ಕೆ  ಯಾವ ಆಧಾರವೂ ಇಲ್ಲ. ಅದರೆ, ಕಳೆದ 45 ವರ್ಷಗಳಲ್ಲಿ ಮೋದಿ ತನ್ನ ಪತ್ನಿಯನ್ನು ಒಮ್ಮೆಯೂ ಸಂಪರ್ಕಿಸಿಲ್ಲ. ಕ್ಷೇಮ ಸಮಾಚಾರ ವಿಚಾರಿಸಿಲ್ಲ. ಮಾತ್ರವಲ್ಲ, 45 ವರ್ಷಗಳ ಬಳಿಕ ಇದೀಗ, ‘ತನಗೋರ್ವ ಪತ್ನಿ ಇದ್ದಾಳೆ’ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಾಗಲೂ ಅವರಲ್ಲಿ ಯಾವ ಪಾಪಭಾವವೂ ಇಣುಕುತ್ತಿಲ್ಲ. ದೇಶಸೇವೆಯು ಓರ್ವ ವ್ಯಕ್ತಿಯನ್ನು ಈ ಮಟ್ಟಕ್ಕೆ ಮುಟ್ಟಿಸುತ್ತದೆಂದರೆ ಅಂಥ ಸೇವೆಯು ಎಂಥ ಕುಟುಂಬವನ್ನು ನಿರ್ಮಿಸೀತು? ನಿಜವಾಗಿ, ಮೋದಿ ಮೊಟ್ಟಮೊದಲು ಜಶೋದಾಬೆನ್‍ರ ಕ್ಷಮೆಯಾಚಿಸಬೇಕಿತ್ತು. 45 ವರ್ಷಗಳಲ್ಲಿ ಒಮ್ಮೆಯೂ ಸಂಪರ್ಕಿಸದ ತಪ್ಪಿಗಾಗಿ, ಪಶ್ಚಾತ್ತಾಪ ಪಡಬೇಕಿತ್ತು. ನಾಮಪತ್ರ ಸಲ್ಲಿಸುವಾಗ ಪತ್ನಿಯನ್ನು ಜೊತೆ ಸೇರಿಸಿ ಪತಿ ಧರ್ಮವನ್ನು ಪಾಲಿಸಬೇಕಿತ್ತು. ಪತ್ನಿಯನ್ನು ತ್ಯಜಿಸಿ ದೇಶಸೇವೆ ಮಾಡುವ ತನ್ನ ನಿರ್ಧಾರ ಪತ್ನಿಗೆ ಮಾಡಿದ ದ್ರೋಹ ಮತ್ತು ತಪ್ಪು ಮಾದರಿ ಎಂದು ಘೋಷಿಸಬೇಕಿತ್ತು. 17 ವರ್ಷದ ಅಪ್ರಾಪ್ತೆ ಪತ್ನಿಯ ಕಣ್ಣೀರಿಗೆ ಕಾರಣವಾದ ತನ್ನನ್ನು ಮನ್ನಿಸುವಂತೆ ದೇಶದ ನಾಗರಿಕರೊಂದಿಗೆ ವಿನಂತಿಸಬೇಕಿತ್ತು. ಆದರೆ ಇವಾವುದನ್ನೂ ಮಾಡದ ಮೋದಿ, ಬದಲು ತನ್ನನ್ನೇ ಸಮರ್ಥಿಸಿಕೊಂಡಿದ್ದಾರೆ. ಕಳೆದ 45 ವರ್ಷಗಳಿಂದ ಅತ್ತ ಪತ್ನಿಯೂ ಅಲ್ಲದ ಇತ್ತ ವಿಚ್ಛೇದಿತೆಯೂ ಅಲ್ಲದ ಸ್ಥಿತಿಯಲ್ಲಿ ಬದುಕಿದ ಹೆಣ್ಣು ಮಗಳ ಮಾನಸಿಕ ಹೊಯ್ದಾಟವನ್ನು ತಿಳಿಯದ ವ್ಯಕ್ತಿಯಂತೆ ವರ್ತಿಸಿದ್ದಾರೆ. ‘ತನಗೋರ್ವ ಪತ್ನಿಯಿದ್ದಾಳೆ ಮತ್ತು ಆಕೆಯ ಆಸ್ತಿ ವಿವರ ಗೊತ್ತಿಲ್ಲ..’ ಎಂದು ನಾಮಪತ್ರದಲ್ಲಿ ಉಲ್ಲೇಖಿಸುವ ಪತಿಯನ್ನೊಮ್ಮೆ ಊಹಿಸಿ. ಅವರ ಬಗ್ಗೆ ಪತ್ನಿಯಾದವಳ ಆಂತರಿಕ ಅಭಿಪ್ರಾಯ ಏನಿರಬಹುದು? ಒಂದು ವೇಳೆ ಮದುವೆಯದ ಮೂರೇ ತಿಂಗಳೊಳಗೆ ಮೋದಿಯನ್ನು ತ್ಯಜಿಸಿ ಜಶೋದಾ ಹೊರಟು ಹೋಗಿರುತ್ತಿದ್ದರೆ ಮೋದಿಯ ನಿರ್ಧಾರ ಏನಿರುತ್ತಿತ್ತು?  
   ನಿಜವಾಗಿ, ಓರ್ವ ವ್ಯಕ್ತಿಯ ಸರಿಯಾದ ಪರೀಕ್ಷೆ ನಡೆಯುವುದೇ ಕೌಟುಂಬಿಕ ಜೀವನದಲ್ಲಿ. ಮನೆಯ ಹೊರಗೆ ಮುಖವಾಡಗಳಿಂದ ಬದುಕಬಹುದು, ಆದರೆ ಮನೆಯ ಒಳಗಲ್ಲ. ಪತ್ನಿ-ಮಕ್ಕಳ ಮುಂದೆ ಮುಖವಾಡಗಳು ಪ್ರಯೋಜನಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಶೋದಾಬೆನ್‍ರನ್ನು ನಾವು ಅಭಿನಂದಿಸಬೇಕಾಗಿದೆ. ‘ಮೋದಿ ಪರಿಹಾರ’ ಎಂಬ ಜಾಹೀರಾತು ದೇಶದ ಎಲ್ಲೆಡೆ ಕಾಣಿಸುತ್ತಿರುವಾಗ, ಅ ಪರಿಹಾರ ಎಷ್ಟು ಕ್ರೂರ ಮತ್ತು ನಿರ್ಭಾವುಕ ಎಂಬುದನ್ನು ಆಕೆ ತನ್ನ 45 ವರ್ಷಗಳ ಒಂಟಿ ಬದುಕಿನ ಮೂಲಕ ಸಾರಿ ಹೇಳಿದ್ದಾರೆ. ಮೋದಿಯನ್ನು `ಮಾದರಿ' ಅನ್ನುವವರಿಗೆ ಜಶೋದಾಬೆನ್ ಎಚ್ಚರಿಕೆಯಾಗಲಿ.

Thursday, 3 April 2014

ದುರಂತ ಸುದ್ದಿಗಳ ಪಟ್ಟಿಯಲ್ಲಿ ಮಕ್ಕಳು ಕಾಣಿಸಿಕೊಳ್ಳದಿರಲಿ


   ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷÀಕರಿಗೆ ಮಾತ್ರ ಸೀಮಿತವಾಗಿದ್ದ ಪರೀಕ್ಷೆಯು ಇವತ್ತು ತನ್ನ ವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. ಈ ವ್ಯಾಪ್ತಿಯೊಳಗೆ ಹೆತ್ತವರು, ಸರಕಾರ, ಸಿನಿಮಾ ನಿರ್ಮಾಪಕರು... ಮುಂತಾದವರೆಲ್ಲ ಸೇರಿಕೊಂಡಿದ್ದಾರೆ. ಪರೀಕ್ಷೆ ಹತ್ತಿರವಾಗುತ್ತಿರುವಂತೆಯೇ ಮಕ್ಕಳಷ್ಟೇ ಗಂಭೀರವಾಗಿ ಹೆತ್ತವರೂ ಸಿದ್ಧಗೊಳ್ಳುತ್ತಾರೆ. ಮನೆಯಲ್ಲಿ ಟಿ.ವಿ. ನೋಡುವ, ಊಟ ಮಾಡುವ, ಮದುವೆ-ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವ ಬಗ್ಗೆ ವೇಳಾಪಟ್ಟಿ ತಯಾರಾಗುತ್ತದೆ. ಮಕ್ಕಳ ಪರೀಕ್ಷಾ ತಯಾರಿಗೆ ತೊಂದರೆಯಾಗದಂತೆ ಇವೆಲ್ಲಕ್ಕೂ ಜಾಗರೂಕತೆಯಿಂದ ಸಮಯ ಹೊಂದಿಸಲಾಗುತ್ತದೆ. ಆವರೆಗೆ ಬಿಝಿಯಾಗಿದ್ದ ಅಪ್ಪ ಬಿಡುವು ಮಾಡಿಕೊಳ್ಳುತ್ತಾನೆ. ತಾಯಿಯೇ ಮಾರುಕಟ್ಟೆಗೆ ಹೋಗುತ್ತಾಳೆ. ಸಮಯ ಸಮಯಕ್ಕೆ ಮಕ್ಕಳಿಗೆ ಕುಳಿತಲ್ಲಿಗೇ ಆಹಾರ ಸರಬರಾಜು ಮಾಡುವಲ್ಲಿ ಕಾಳಜಿ ವಹಿಸಲಾಗುತ್ತದೆ. ಇನ್ನು, ಈ ಸಮಯದಲ್ಲಿ ಸಿನಿಮಾಗಳು ಬಿಡುಗಡೆಯಾಗುವುದು ಕಡಿಮೆ. ಸರಕಾರವಂತೂ ವಿದ್ಯಾರ್ಥಿಗಳ ಬಗ್ಗೆ ವಿಪರೀತ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ರೈತರಿಗೆ ಕೊಡದ ವಿದ್ಯುತನ್ನು ವಿದ್ಯಾರ್ಥಿಗಳಿಗೆ ಕೊಡುವಷ್ಟು ಅದು ಉದಾರಿಯಾಗಿ ಬಿಡುತ್ತದೆ. ವಿಶೇಷ ಏನೆಂದರೆ, ಪರೀಕ್ಷೆ ಮುಗಿದಂತೆಯೇ ಈ ಎಲ್ಲ ಕಾಳಜಿಗಳೂ ಹೊರಟು ಹೋಗುತ್ತವೆ ಎಂಬುದು. ವಿದ್ಯಾರ್ಥಿಗಳು ಹಗುರವಾಗುತ್ತಾರೆ. ಬ್ಯಾಟು, ಬಾಲ್‍ಗಳು ಅಡಗುತಾಣದಿಂದ ಹೊರಬರುತ್ತವೆ. ಆವರೆಗೆ ಮನೆಯಲ್ಲೇ ಇದ್ದ ಮಕ್ಕಳೆಲ್ಲ ಮೈದಾನದಲ್ಲೇ ಠಿಕಾಣಿ ಹೂಡುತ್ತಾರೆ. ಕರೆಂಟ್ ಕೈ ಕೊಡತೊಡಗುತ್ತದೆ. ಸಿನಿಮಾಗಳು ಭರಪೂರ ಬಿಡುಗಡೆಯಾಗುತ್ತವೆ. ಆದರೆ, ಹೆತ್ತವರು ಮಾತ್ರ ಹಗುರವಾಗುವುದಿಲ್ಲ. ಅದರ ಬದಲು ಒಂದಷ್ಟು ಹೆಚ್ಚೇ ಒತ್ತಡಕ್ಕೆ ಒಳಗಾಗುತ್ತಾರೆ.  ಯಾಕೆಂದರೆ, ಪರೀಕ್ಷೆಯ ಜಾಗದಲ್ಲಿ ರಜೆ ಬಂದು ಕೂತಿರುತ್ತದೆ.
 ಪತ್ರಿಕೆಗಳು ಪ್ರಕಟಿಸುವ ದುರಂತ ಸುದ್ದಿಗಳ ಪುಟಗಳಲ್ಲಿ ಈಗಾಗಲೇ ಮಕ್ಕಳು ಕಾಣಿಸಿಕೊಳ್ಳತೊಡಗಿದ್ದಾರೆ. ರಜೆಯ ಮಜವನ್ನು ಅನುಭವಿಸುವ ತುರ್ತಿನಲ್ಲಿ ಮಕ್ಕಳು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇನ್ನು ಕೆಲವು ದಿನಗಳು ಕಳೆದರೆ ವಿದ್ಯಾರ್ಥಿಗಳ ದೊಡ್ಡದೊಂದು ಗುಂಪು ಪರೀಕ್ಷೆ ಮುಗಿಸಿಕೊಂಡು ಹೊರಬರಲಿದೆ. ನಿಜವಾಗಿ, ಹೆತ್ತವರು ಮತ್ತು ಮಕ್ಕಳನ್ನು ಅತ್ಯಂತ ಹೆಚ್ಚು ಪರೀಕ್ಷೆಗೆ ಒಡ್ಡುವ ಸಂದರ್ಭ ಇದು. ಪರೀಕ್ಷಾ ತಯಾರಿಯ ಸಂದರ್ಭದಲ್ಲಾದರೋ ಮಕ್ಕಳು ಹೆಚ್ಚಿನ ಸಮಯವನ್ನು ಮನೆಯ ಒಳಗೆಯೇ ಕಳೆಯುತ್ತಾರೆ. ಮಕ್ಕಳಿಗೆ ಓದುವುದಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಒತ್ತಡವಷ್ಟೇ ಹೆತ್ತವರ ಮೇಲಿರುತ್ತದೆ. ಅಲ್ಲದೇ, ಆ ಸಂದರ್ಭದಲ್ಲಿ ಮಕ್ಕಳ ಒತ್ತಡವನ್ನು ಹೇಗೆ ನಿವಾರಿಸಬೇಕು, ಯಾವ ರೀತಿಯ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು... ಎಂಬಿತ್ಯಾದಿಗಳ ಬಗ್ಗೆ ಪತ್ರಿಕೆಗಳು ಮತ್ತು ಟಿ.ವಿ.ಗಳಲ್ಲಿ ತಜ್ಞರು ಹೇಳುತ್ತಿರುತ್ತಾರೆ. ಆದರೆ, ಪರೀಕ್ಷೆ ಮುಗಿದೊಡನೇ ಮಕ್ಕಳು ಬಂಧನದಿಂದ ಬಿಡುಗಡೆಗೊಂಡಂಥ ಮನಸ್ಥಿತಿಗೆ ತಲುಪುತ್ತಾರೆ. ಆ ಬಳಿಕ ಮಕ್ಕಳು ಹೆಚ್ಚಿನ ವೇಳೆಯನ್ನು ಕಳೆಯುವುದು ಮನೆಯ ಹೊರಗೆಯೇ. ಆದ್ದರಿಂದ ಹೆತ್ತವರಿಗೆ ಅವರ ಮೇಲಿನ ಹಿಡಿತ ಬಹುತೇಕ ತಪ್ಪಿ ಹೋಗುತ್ತದೆ. ಮಕ್ಕಳು ಅಲ್ಲಿ  ಏನು ಮಾಡುತ್ತಾರೆ, ಗೆಳೆಯರೊಂದಿಗೆ ಯಾವ ಯೋಜನೆ ಹಾಕಿರುತ್ತಾರೆ, ಎಲ್ಲೆಲ್ಲಿಗೆ ಹೋಗುತ್ತಾರೆ.. ಎಂಬುದೆಲ್ಲಾ ಹೆತ್ತವರಿಗೆ ಗೊತ್ತಾಗುವುದು ಕಡಿಮೆ. ಒಂದು ರೀತಿಯಲ್ಲಿ, ಪರೀಕ್ಷಾ ತಯಾರಿಯ ಸಂದರ್ಭಕ್ಕಿಂತ ಹೆಚ್ಚಿನ ಆತಂಕವನ್ನು ಹೆತ್ತವರಲ್ಲಿ ಉಂಟು ಮಾಡುವುದು ರಜೆಯ ವೇಳೆಯೇ. ಹೊರಗೆ ಹೋದ ಮಕ್ಕಳು ಮಧ್ಯಾಹ್ನ ಊಟಕ್ಕೆ ಬಂದರೂ ಆಯಿತು, ಇಲ್ಲದಿದ್ದರೂ ಆಯಿತು.. ಅನ್ನುವ ಸಂದರ್ಭವೊಂದು ಸೃಷ್ಟಿಯಾಗುವುದನ್ನು ಯಾವ ಹೆತ್ತವರು ಸಹಿಸುತ್ತಾರೆ ಹೇಳಿ? ಈಜಲು, ಜಾಲಿ ರೈಡ್ ಮಾಡಲು ಮಕ್ಕಳು ಬಳಸುವುದು ರಜೆಯ ದಿನಗಳನ್ನೇ. ‘ಅಪಘಾತ: ವಿದ್ಯಾರ್ಥಿ ಸಾವು', ‘ವಿದ್ಯಾರ್ಥಿ ಮುಳುಗಿ ಸಾವು..' ಮುಂತಾದ ಸುದ್ದಿಗಳು ಹೆಚ್ಚು ಕಾಣಿಸಿಕೊಳ್ಳುವುದೂ ರಜೆಯ ದಿನಗಳಲ್ಲೇ. ಆದ್ದರಿಂದಲೇ ಹೆತ್ತವರು ಪ್ರತಿದಿನಗಳನ್ನೂ ಆತಂಕದಲ್ಲೇ ಕಳೆದು ಬಿಡುವುದಿದೆ. ಮಕ್ಕಳಿಗೆ ಎಷ್ಟೇ ಸಲಹೆ-ಸೂಚನೆಗಳನ್ನು ಕೊಟ್ಟರೂ ಅದನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ನೋಡುವುದಕ್ಕೆ ಹೆತ್ತವರಿಗೆ ಸಾಧ್ಯವಿಲ್ಲವಲ್ಲ. ತನ್ನ ಮಗನಿಗೆ ಬೈಕ್ ಚಲಾಯಿಸಲು ಬರುತ್ತದೆ ಎಂದು ಎಷ್ಟೋ ಹೆತ್ತವರಿಗೆ ಗೊತ್ತಾಗುವುದೇ ಆತ ಗೆಳೆಯನ ಬೈಕ್ ಚಲಾಯಿಸಿಕೊಂಡು ಮನೆಗೆ ಬಂದಾಗ. ಮಕ್ಕಳು ಹೆತ್ತವರ ಗಮನಕ್ಕೆ ತಾರದೆಯೇ ಕೆಲವಾರು ಯೋಜನೆಗಳನ್ನು ಹಾಕಿಕೊಳ್ಳುವುದಿದೆ. ಹೆತ್ತವರೊಂದಿಗೆ ಹೇಳಿಕೊಂಡರೆ ಎಲ್ಲಿ ಅನುಮತಿ ಸಿಗುವುದಿಲ್ಲವೋ ಎಂಬ ಭಯ. ಹೀಗೆ ಹೆತ್ತವರಿಗೆ ತಿಳಿಸದೇ ಸಾಹಸಕ್ಕೆ ಧುಮುಕುವ ಮಕ್ಕಳು ಬಳಿಕ ಹೆತ್ತವರ ಕಣ್ಣೀರಿಗೆ ಕಾರಣವಾದ ಘಟನೆಗಳು ಧಾರಾಳ ನಡೆದಿವೆ.
   ರಜೆ ಎಂಬುದು ಮಕ್ಕಳಿಗೆ ಎಷ್ಟು ಖುಷಿಯ ಸಂಗತಿಯೋ ಅಷ್ಟೇ ಹೆತ್ತವರಿಗೂ ಖುಷಿಯ ಸಂಗತಿಯಾಗುವಂಥ ವಾತಾವರಣವೊಂದು ನಿರ್ಮಾಣವಾಗಬೇಕಾದ ತುರ್ತು ಅಗತ್ಯ ಇದೆ. ಕೈ-ಕಾಲು ಮುರಿತಕ್ಕೊಳಗಾಗಿ ರಜೆಯನ್ನು ಸಜೆಯಾಗಿ ಪರಿವರ್ತಿಸಿಕೊಂಡ ಮಕ್ಕಳ ವಿವರಗಳು ಈಗಾಗಲೇ ಬರುತ್ತಿರುವುದರಿಂದ ಈ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪರೀಕ್ಷೆಯ ಬಗ್ಗೆ ಮತ್ತು ಒತ್ತಡ ನಿವಾರಿಸಿಕೊಳ್ಳುವ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವಿವರಗಳು ಆಗಾಗ ಬರುತ್ತಿರುತ್ತವೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆಗೊಳಿಸುವ ಪ್ರಯತ್ನಗಳನ್ನೂ ಮಾಧ್ಯಮಗಳು ಮಾಡುತ್ತಿವೆ. ಪರೀಕ್ಷೆಯ ಪ್ರಾರಂಭದ ದಿನದಂದು ಹೆಚ್ಚಿನ ಪತ್ರಿಕೆಗಳು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಬರಹಗಳನ್ನು ಪ್ರಕಟಿಸುತ್ತವೆ. ಆದರೆ ಪರೀಕ್ಷೆ ಮುಗಿದ ಬಳಿಕ ಈ ವಿದ್ಯಾರ್ಥಿಗಳಿಗೆ ಅದೇ ಮಟ್ಟದ ಮಾರ್ಗದರ್ಶನವನ್ನು ಮಾಧ್ಯಮಗಳು ಮಾಡುವುದು ಕಡಿಮೆ. ಕೋಚಿಂಗ್ ಕ್ಲಾಸ್‍ಗಳು, ಕ್ಯಾಂಪ್‍ಗಳ ಬಗ್ಗೆ ಮಾಹಿತಿ ಇರುತ್ತದೆಯೇ ಹೊರತು ರಜೆಯಲ್ಲಿ ಮಕ್ಕಳು ಮಾಡಿಕೊಳ್ಳಬಹುದಾದ ಅನಾಹುತಗಳ ಕಡೆಗೆ ಬೆಳಕು ಚೆಲ್ಲುವ ಬರಹಗಳು ಪ್ರಕಟವಾಗುತ್ತಿಲ್ಲ. ನಿಜವಾಗಿ, ಪರೀಕ್ಷೆಗೆ ಮಕ್ಕಳನ್ನು ತಯಾರುಗೊಳಿಸುವ ಸಂದರ್ಭ ಎಷ್ಟು ಸೂಕ್ಷ್ಮವಾದದ್ದೋ ಅಷ್ಟೇ ರಜೆಯ ಬಳಿಕ ಮಕ್ಕಳನ್ನು ಕಾಪಾಡಿಕೊಳ್ಳುವುದೂ ಸೂಕ್ಷ್ಮವಾದದ್ದೇ. ಪರೀಕ್ಷೆಯ ಮುಕ್ತಾಯ ಬದುಕಿನ ಮುಕ್ತಾಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು ಒಂದು ಕಡೆಯಾದರೆ ರಜೆಯ ಮಜವನ್ನು ಅನುಭವಿಸುವ ಧಾವಂತದಲ್ಲಿ ಬದುಕನ್ನು ಕಳಕೊಳ್ಳುವ ಮಕ್ಕಳು ಇನ್ನೊಂದು ಕಡೆ. ಇವತ್ತು ವಿದ್ಯಾರ್ಥಿ ಆತ್ಮಹತ್ಯೆಯ ವಿರುದ್ಧ ಜಾಗೃತಿ ಮೂಡಿಸುವಂಥ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿವೆ. ‘ಫಲಿತಾಂಶವೇ ಕೊನೆಯಲ್ಲ' ಎಂದು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ರಜೆಯಲ್ಲಾಗುವ ಜೀವಹಾನಿಯ ಬಗ್ಗೆ ಈ ಮಟ್ಟದ ಜಾಗೃತಿ ಕಾರ್ಯಕ್ರಮಗಳು ಅಷ್ಟಾಗಿ ನಡೆಯುತ್ತಿಲ್ಲ. ಸಮುದ್ರ ಪಾಲಾಗುವ ಮಕ್ಕಳ ಬಗ್ಗೆ, ವಾಹನಾಪಘಾತದಲ್ಲಿ ಮೃತಪಡುವ ಮಕ್ಕಳು ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಆತ್ಮಹತ್ಯೆ ಮಾಡುವ ವಿದ್ಯಾರ್ಥಿಗಳು ಎಷ್ಟು ದುರ್ಬಲರೋ ರಜೆಯಿಂದಾಗಿ ಕಳೆದು ಹೋಗುವ ಮಕ್ಕಳೂ ಅಷ್ಟೇ ದುರ್ಬಲರು. ಆದ್ದರಿಂದಲೇ ಈ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆಯಬಲ್ಲ ಕಾರ್ಯಕ್ರಮಗಳು ಏರ್ಪಡಬೇಕಾಗಿದೆ. ರಜೆಯು ಹೆತ್ತವರ ಪಾಲಿಗೆ ಸಜೆಯಾಗದಿರಲು ಮಾಧ್ಯಮಗಳೂ ಕೈ ಜೋಡಿಸಬೇಕಾಗಿದೆ. ಆ ಮೂಲಕ ಸಾವಿನ ಪುಟಗಳಲ್ಲಿ ಮಕ್ಕಳ ಹೆಸರು ಕಾಣಿಸಿಕೊಳ್ಳದಂತೆ ತಡೆಯುವುದಕ್ಕೆ ತಮ್ಮ ಕಾಣಿಕೆಯನ್ನು ನೀಡಬೇಕಾಗಿದೆ.

Wednesday, 26 March 2014

ನಮ್ಮ ಸಂವೇದನಾರಹಿತ ಬದುಕಿಗೆ ಕನ್ನಡಿ ಹಿಡಿದ ಕಾರ್ಯಕ್ರಮ

   ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಮತ್ತು ಪರಸ್ಪರರನ್ನು ಎತ್ತಿ ಕಟ್ಟುವ ವಾತಾವರಣವು ದೇಶದಲ್ಲಿ ಸದ್ಯ ಚಲಾವಣೆಯಲ್ಲಿರುವಾಗಲೇ ಕಳೆದವಾರ ರಾಷ್ಟ್ರಪತಿ ಭವನದಲ್ಲಿ ಒಂದು ಅಪರೂಪದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಎಷ್ಟು ಭಾವನಾತ್ಮಕ ಮತ್ತು ಆಪ್ತವಾಗಿತ್ತೆಂದರೆ, ‘ಕಡಿ, ಕೊಲ್ಲು, ಮುಗಿಸು..' ಮುಂತಾದ ಭಾಷೆಯಲ್ಲಿ ಮಾತಾಡುವ ಎಲ್ಲರಿಗೂ ಅದರಲ್ಲಿ ಸಾಕಷ್ಟು ಪಾಠವಿತ್ತು. ಆದರೆ, ಹೆಚ್ಚಿನ ಪತ್ರಿಕೆಗಳು ಆ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲೇ ಇಲ್ಲ. ಬಹುಶಃ, ಪ್ರತಿವರ್ಷ ಇಂಥದ್ದೊಂದು ಕಾರ್ಯಕ್ರಮ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತದೆ ಅನ್ನುವುದೋ ಅಥವಾ ಸೆಲೆಬ್ರಿಟಿಗಳು ಮತ್ತು ಅವರ ಡ್ಯಾನ್ಸುಗಳು ಇಲ್ಲದ ಸಪ್ಪೆ ಕಾರ್ಯಕ್ರಮ ಅನ್ನುವುದೋ ಯಾವುದು ಇದಕ್ಕೆ ಕಾರಣ ಎಂಬುದನ್ನು ಅವೇ ಹೇಳಬೇಕು.
   ಉತ್ತರಾಖಂಡದ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದಕ್ಕಾಗಿ ಮಿಗ್ 17v5 ವಿಮಾನದ ಪೈಲಟ್ ಕ್ಯಾಸ್ಟಲಿನೋ ಎಂಬವರು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದರು. ಬೆಟ್ಟ-ಗುಡ್ಡಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಸುಮಾರು 80 ಸಂತ್ರಸ್ತರನ್ನು ಅವರು ಜೀವದ ಹಂಗು ತೊರೆದು ರಕ್ಷಿಸಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಸಹ ಪೈಲಟ್ ಆಗಿ ಪ್ರವೀಣ್ ಅನ್ನುವವರೂ ಇದ್ದರು. ಆದರೆ, ಈ ಕಾರ್ಯಾಚರಣೆಯ ಸಂದರ್ಭದಲ್ಲೇ ವಿಮಾನ ಪತನಗೊಂಡು ಅವರಿಬ್ಬರೂ ಸಾವಿಗೀಡಾದರು. ಅಸ್ಸಾಮ್‍ನ ಗ್ರಾಮವೊಂದಕ್ಕೆ ತಗುಲಿದ ಬೆಂಕಿಯನ್ನು ನಂದಿಸುವುದಕ್ಕಾಗಿ ಯುವ ಯೋಧನೋರ್ವ ಜೀವ ಪಣಕ್ಕಿಟ್ಟು ಧುಮುಕಿ ಯಶಸ್ವಿಯಾಗಿದ್ದ. ಹಾಗೆಯೇ, ಅಸ್ಸಾಮ್‍ನಲ್ಲಿ ನಡೆದ ಅಪಘಾತವೊಂದರಲ್ಲಿ ತನ್ನ ಮೂವರು ಗೆಳೆಯರನ್ನು ಉಳಿಸುವುದಕ್ಕಾಗಿ ಶ್ರಮಿಸುವ ವೇಳೆ ಯುವ ಇಂಜಿನಿಯರ್ ಮನೀಶ್ ಸಾವಿಗೀಡಾಗಿದ್ದ.. ಇವರೆಲ್ಲರನ್ನು ಗೌರವಿಸುವ ಕಾರ್ಯಕ್ರಮ ಅದಾಗಿತ್ತು. ಆದರೆ ಇವರು ಮತ್ತು ಇಂಥ ಸಾಹಸಗಳನ್ನು ಮೆರೆದ ಇತರರ ಗೌರವಾರ್ಥ ರಾಷ್ಟ್ರಪತಿ ನೀಡಿದ ಕೀರ್ತಿಚಕ್ರ, ಶೌರ್ಯಚಕ್ರ, ವಿಶಿಷ್ಟ ಸೇವಾ ಪದಕಗಳನ್ನು ಪಡಕೊಳ್ಳುವುದಕ್ಕೆ ಇವರಲ್ಲಿ ಬಹುತೇಕರೂ ಜೀವಂತವಿರಲಿಲ್ಲ. ಆದ್ದರಿಂದಲೇ ಅವರ ಪತ್ನಿಯೋ, ಅಮ್ಮನೋ, ಅಪ್ಪನೋ ಭಾವುಕ ಮನಸ್ಸಿನಿಂದ ಸ್ವೀಕರಿಸಿದರು. ಕಣ್ಣೀರು ಮಿಡಿದರು. ಮನುಷ್ಯರನ್ನು ಅವರ ಧರ್ಮ, ಹೆಸರು, ಭಾಷೆಯ ಹಂಗಿಲ್ಲದೇ ಪ್ರೀತಿಸುವ ಮತ್ತು ಇನ್ನೊಬ್ಬರಿಗಾಗಿ ಬದುಕುವ ಅಮೂಲ್ಯ ಮಾದರಿ ಪಾತ್ರಗಳಾಗಿ ಅವರು ನೆರೆದವರನ್ನು ತಟ್ಟಿದರು.
 ಚುನಾವಣೆಯ ಕಾವು ಬಿರುಸು ಪಡೆಯುತ್ತಿರುವ ಈ ದಿನಗಳಲ್ಲಿ ಕ್ಯಾಸ್ಟಲಿನೋ, ಪ್ರವೀಣ್, ಮನೀಶ್.. ಮುಂತಾದ ಪಾತ್ರಗಳು ಮತ್ತೆ ಮತ್ತೆ ಚರ್ಚೆಗೊಳಗಾಗಬೇಕಾದ ತುರ್ತು ಅಗತ್ಯ ಇದೆ. ಉತ್ತರಾಖಂಡದಲ್ಲಿ ದಿಕ್ಕೆಟ್ಟು ನಿಂತ ಯಾತ್ರಾರ್ಥಿಗಳಿಗೂ ಕ್ಯಾಸ್ಟಲಿನೋಗೂ ಯಾವ ಸಂಬಂಧವೂ ಇರಲಿಲ್ಲ. ಆತ ಉತ್ತರಾಖಂಡದವನಲ್ಲ. ಆತನ ಭಾಷೆಗೂ ಉತ್ತರಾಖಂಡಕ್ಕೂ ಸಂಬಂಧ ಇರಲಿಲ್ಲ. ಅಲ್ಲಿ ಆತನಿಗೆ ಬಂಧುಗಳಾರೂ ಇರಲಿಲ್ಲ. ಅಲ್ಲದೇ ಸಂತ್ರಸ್ತರ ಧರ್ಮವನ್ನು ಆತ ಆಚರಿಸುತ್ತಲೂ ಇರಲಿಲ್ಲ. ಒಂದು ರೀತಿಯಲ್ಲಿ, ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗದೇ ಇರುವುದಕ್ಕೆ ಇಂಥ ಹತ್ತು-ಹಲವು ಕಾರಣಗಳು ಆತನ ಮುಂದಿದ್ದುವು. ಅಲ್ಲದೇ, ಪ್ರವಾಹ ಪೀಡಿತ ಪ್ರದೇಶವು ಅತ್ಯಂತ ದುರ್ಗಮ ಮತ್ತು ಅಪಾಯಕಾರಿ ವಲಯದಲ್ಲಿತ್ತು. ಆದರೆ, ಕ್ಯಾಸ್ಟಲಿನೋ ಇವಾವುದನ್ನೂ ನೆಪ ಮಾಡಿಕೊಂಡು ಕೂರಲಿಲ್ಲ. ಕೇವಲ ಎರಡೇ ದಿನಗಳಲ್ಲಿ 15 ಸಾವಿರ ಸಂತ್ರಸ್ತರನ್ನು ಉತ್ತರಾಖಂಡದಿಂದ ಗುಜರಾತ್‍ಗೆ ಸಾಗಿಸಿರುವೆ ಎಂದು ಎಲ್ಲೋ ಕುಳಿತು ಸುಳ್ಳು ಸುಳ್ಳೇ ಪ್ರಚಾರ ಮಾಡಿದ ಗುಜರಾತ್‍ನ ಮುಖ್ಯಮಂತ್ರಿ ಮೋದಿ ಮತ್ತು ಕ್ಯಾಸ್ಟಲಿನೋರನ್ನು ಒಮ್ಮೆ ಹೋಲಿಸಿನೋಡಿ. ಇಂದಿನ ದಿನಗಳಲ್ಲಿ ಇಂಥದ್ದೊಂದು ಹೋಲಿಕೆಯ ಅಗತ್ಯ ಯಾಕೆ ಇದೆ ಎಂದರೆ, ಇವತ್ತು ‘ಕ್ಯಾಸ್ಟಲಿನೋ ಮಾದರಿ’ ಕಡಿಮೆ ಆಗುತ್ತಿದೆ. ‘ಮೋದಿ ಮಾದರಿ’ ಜನಪ್ರಿಯವಾಗುತ್ತಿದೆ. ನಿಜವಾಗಿ, ಕ್ಯಾಸ್ಟಲಿನೋ ಓರ್ವ ವ್ಯಕ್ತಿಯಲ್ಲ, ಅದೊಂದು ಪಾತ್ರ. ಈ ದೇಶದ ಕೋಟ್ಯಾಂತರ ಮಂದಿ ಆ ಪಾತ್ರದಂತೆ ಇವತ್ತು ನಿತ್ಯ ಬದುಕುತ್ತಿದ್ದಾರೆ. ಅವರ ಹೆಸರು ಅಬ್ದುಲ್ಲ, ನಾರಾಯಣ, ಡಿಸೋಜ... ಏನೇ ಇರಬಹುದು, ಆದರೆ ಈ ಪಾತ್ರದಂತೆ ಬದುಕುವುದಕ್ಕೆ ಈ ಹೆಸರುಗಳು ಎಂದೂ ಅವರಿಗೆ ಅಡ್ಡಿಯಾಗಿಲ್ಲ. ನೆರೆಯವನ ಮನೆಗೆ ತನ್ನ ಮನೆಯಿಂದ ನೀರು ಕೊಡುವ ಅಬ್ದುಲ್ಲ; ಪಕ್ಕದ ಮನೆಯ ಅನಾರೋಗ್ಯ ಪೀಡಿತ ಯೂಸುಫ್‍ನನ್ನು ಆಸ್ಪತ್ರೆಗೆ ಸೇರಿಸಿ ಬಿಲ್ ಪಾವತಿಸುವ ರಮೇಶ; ನಡು ರಾತ್ರಿ ಫಾತಿಮಾಳ ಹೆರಿಗೆ ನೋವಿಗೆ ಸ್ಪಂದಿಸಿ ನಿದ್ದೆಗೆಟ್ಟು ಕಾಯುವ ಜಯಲಕ್ಷ್ಮಿ; ನೆರೆಯ ವೃದ್ಧೆ ಸೆಲಿನಾ ಬಾಯಿಯನ್ನು ತಾಯಿಯಂತೆ ಉಪಚರಿಸುವ ಲಕ್ಷ್ಮಿ... ಇಂಥ ಪಾತ್ರಗಳು ಈ ಸಮಾಜದಲ್ಲಿ ಧಾರಾಳ ಇವೆ. ಮಾತ್ರವಲ್ಲ, ಇಂಥ ಮನುಷ್ಯ ಪ್ರೀತಿಯೇ ಈ ದೇಶದ ಜೀವಾಳವೂ ಆಗಿದೆ. ಕ್ಯಾಸ್ಟಲಿನೋ ಇದರ ಒಂದು ಬಿಂಬ ಅಷ್ಟೇ. ಆದರೆ ರಾಜಕೀಯವು ಇವತ್ತು ಸಮಾಜದ ಈ ಮಾನವೀಯ ಬೆಸುಗೆಯನ್ನು ತುಂಡರಿಸುವ ಭಾಷೆಯಲ್ಲಿ ಮಾತಾಡುತ್ತಿದೆ. ಒಂದು ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಅಸ್ಪ್ರಶ್ಯರಂತೆ ನೋಡುವುದಕ್ಕೆ ಪ್ರಚೋಧನೆ ಕೊಡುತ್ತಿದೆ. ನಿಜವಾಗಿ, ಕೆಲವು ರಾಜಕಾರಣಿಗಳು ಕ್ಯಾಸ್ಟಲಿನೋರಂಥ ಮನುಷ್ಯರನ್ನು ಎಂದೂ ಇಷ್ಟಪಡುವುದಿಲ್ಲ. ಯಾಕೆಂದರೆ, ಇಂಥವರ ಸಂಖ್ಯೆ ಹೆಚ್ಚಿದಂತೆಲ್ಲಾ, ಅವರ ಅಧಿಕಾರ ನಿರೀಕ್ಷೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ತನ್ನ ಸಾಧನೆಯನ್ನು ಹೇಳಿಕೊಂಡು ಓಟು ಬೇಡುವುದಕ್ಕೂ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಓಟು ಪಡೆಯುವುದಕ್ಕೂ ವ್ಯತ್ಯಾಸ ಇದೆ.  ಮೊದಲನೆಯದ್ದು ತೀರಾ ಕಷ್ಟದ್ದಾದರೆ ಎರಡನೆಯದು ತೀರಾ ಸುಲಭ. ಸದ್ಯದ ದಿನಗಳಲ್ಲಿ ಈ ಸುಲಭದ ಆಯ್ಕೆಯನ್ನು ಪರಿಗಣಿಸುವ ರಾಜಕಾರಣಿಗಳ ಒಂದು ದಂಡೇ ನಿರ್ಮಾಣವಾಗುತ್ತಿದೆ. ಅವರ ಭಾಷೆ, ವರ್ತನೆ, ಅವೇಶಗಳೆಲ್ಲ ಕ್ಯಾಸ್ಟಲಿನೋನನ್ನು ಪ್ರತಿನಿಧಿಸುತ್ತಿಲ್ಲ. ಆ ಭಾಷೆಗೆ ಸಂತ್ರಸ್ತರನ್ನು ನಿರ್ಮಾಣ ಮಾಡುವ ಸಾಮರ್ಥ್ಯ  ಇದೆಯೇ ಹೊರತು ಸಂತೃಪ್ತರನ್ನು ತಯಾರಿಸುವುದಲ್ಲ. ಆ ವರ್ತನೆಯಲ್ಲಿ ಮನುಷ್ಯರ ಸಹಾಯಕ್ಕೆ ಧುಮುಕುವ ಇರಾದೆಗಿಂತ ಮನುಷ್ಯರ ಅಸಹಾಯಕತೆಯಿಂದ ಲಾಭ ಎತ್ತುವ ಹುನ್ನಾರ ಕಾಣಿಸುತ್ತದೆ. ಆ  ಆವೇಶಕ್ಕೆ ಜನರನ್ನು ರಕ್ಷಿಸುವ ತುಡಿತಕ್ಕಿಂತ ಅವರನ್ನು ವಿಭಜಿಸಿ ಸಂತ್ರಸ್ತರನ್ನಾಗಿಸುವ ಉಮೇದು ಇದೆ.
   ಸಾಮಾನ್ಯವಾಗಿ, ಸಿನಿಮಾ ತಾರೆಯರ ಕಾರ್ಯಕ್ರಮಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತದೆ. ಸಿನಿ ಅವಾರ್ಡ್‍ನಂಥ ಕಾರ್ಯಕ್ರಮಗಳು ಟಿ.ವಿ. ಚಾನೆಲ್‍ಗಳನ್ನು ದಿನವಿಡೀ ತುಂಬಿಕೊಂಡಿರುತ್ತವೆ. ತಾರೆಯರ ಮಾತು, ನಗು, ಡ್ಯಾನ್ಸು, ಹಾವಭಾವಗಳನ್ನು ತುಂಬಿಕೊಳ್ಳಲು ಕ್ಯಾಮರಾಗಳು ದಣಿವರಿಯದೇ ಕಾಯುತ್ತವೆ. ಆದರೆ, ಇತರಿಗಾಗಿ ಬದುಕುವ, ಅವರ ಉಳಿವಿಗಾಗಿ ತಾವೇ ಜೀವತ್ಯಾಗ ಮಾಡುವ ಮನುಷ್ಯರ ಬಗ್ಗೆ ಹೇಳುವುದಕ್ಕೆ ನಮ್ಮ ಮಾಧ್ಯಮಗಳು ಉತ್ಸಾಹ ತೋರುತ್ತಿಲ್ಲ. ಅವರನ್ನು ಸ್ಮರಿಸಿಕೊಂಡು ಕಣ್ತುಂಬಿಕೊಳ್ಳುವ ಪತ್ನಿ, ಅಪ್ಪ, ತಾಯಿಯನ್ನು ತುಂಬಿಕೊಳ್ಳಲು ಕ್ಯಾಮರಾಗಳಿಗೆ ಪುರುಸೊತ್ತಿಲ್ಲ. ಅವರನ್ನು ಎದುರಿಟ್ಟುಕೊಂಡು ಒಂದೊಳ್ಳೆಯ ಮನುಷ್ಯ ಪ್ರೇಮಿ ಚಿಂತನೆಯನ್ನು ಸಮಾಜಕ್ಕೆ ಅರ್ಪಿಸುವುದಕ್ಕೆ ಪ್ರಯತ್ನಗಳೂ ನಡೆಯುತ್ತಿಲ್ಲ. ಬಹುಶಃ, ಬರಬರುತ್ತಾ ನಾವೆಲ್ಲ ಸಂವೇದನೆಯನ್ನು ಕಳಕೊಳ್ಳುತ್ತಿರುವುದಕ್ಕೆ ಇವೆಲ್ಲ ಸಾಕ್ಷಿಯಾಗಬಹುದೇನೋ. ಇದು ಬದಲಾಗಬೇಕು. ಕ್ಯಾಸ್ಟಲಿನೋರಂಥ ಪಾತ್ರವನ್ನು ಸಮಾಜದಲ್ಲಿ ಪೋಷಿಸಿ ಬೆಳೆಸುವ ಬರಹ, ಚಿಂತನೆಗಳು ಹರಿದು ಬರಬೇಕು. ಇಲ್ಲದಿದ್ದರೆ ವಿಭಜಿಸುವ ಪಾತ್ರಗಳು ನಮ್ಮ ನಡುವಿನ ಕ್ಯಾಸ್ಟಲಿನೋರನ್ನು ನುಂಗಿಬಿಟ್ಟಾವು.

Thursday, 20 March 2014

ನಮ್ಮ ಸಂಶೋಧನೆಯ ಮಿತಿಯನ್ನು ಸ್ಪಷ್ಟಪಡಿಸಿದ ವಿಮಾನ

   ಕಣ್ಮರೆಯಾದ ಮಲೇಶ್ಯಾದ ವಿಮಾನವು, ಅಮೇರಿಕದ ಕಾದಂಬರಿಕಾರ ವಿನ್ಸೆಂಟ್ ಗಡ್ಡೀಸ್ ಎಂಬವರು 1964ರಲ್ಲಿ ಬರೆದ, 'ದಿ ಡೆಡ್ಲಿ ಬರ್ಮುಡಾ ಟ್ರಯಾಂಗಲ್' ಎಂಬ ಕಾದಂಬರಿಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯಲ್ಲಿರುವ ಈ ದ್ವೀಪದ ಬಗ್ಗೆ ಸಾಕಷ್ಟು ಊಹಾಪೋಹಗಳು ಈಗಲೂ ಇವೆ. 1945 ಡಿ. 5ರಂದು ಅಮೇರಿಗ ಎಫ್ 19 ಮಾದರಿಯ ವಿಮಾನವೊಂದು ಅಲ್ಲಿ ಕಣ್ಮರೆಯಾದ ಬಳಿಕ ಹತ್ತಾರು ಕಣ್ಮರೆ ಪ್ರಕರಣಗಳು ಈ ದ್ವೀಪದಲ್ಲಿ ನಡೆದಿವೆ. ಹಡಗುಗಳು ಮತ್ತು ವಿಮಾನಗಳನ್ನು ನುಂಗುವ ದ್ವೀಪವೆಂಬ ನೆಲೆಯಲ್ಲಿ ಅದರ ಬಗ್ಗೆ ಸಂಶೋಧನೆಗಳು ನಡೆದಿವೆ. ‘ದಿ ಬರ್ಮುಡಾ ಟ್ರಯಾಂಗಲ್ ಮಿಸ್ಟರಿ: ಸಾಲ್ವಡ್’ ಎಂಬ ಕಾದಂಬರಿಯನ್ನು 1975ರಲ್ಲಿ ಬರೆದ ಲಾರೆನ್ಸ್ ಕ್ರುಶ್ಚೇವ್ ಎನ್ನುವವರು, ಈ ದ್ವೀಪದ ಬಗೆಗಿರುವ ಊಹಾಪೋಹಗಳನ್ನು ಸುಳ್ಳು ಎಂದಿದ್ದಾರೆ. ಆದರೂ ಈ ದ್ವೀಪದ ಕುರಿತಾದ ಕುತೂಹಲ ತಣಿದಿಲ್ಲ. ಬ್ರಿಟನ್ನಿನ ಪ್ರಮುಖ ಟಿ.ವಿ. ಚಾನೆಲ್ ಆದ ‘ಚಾನೆಲ್ 4’ ಅಂತೂ 1992ರಲ್ಲಿ ಈ ಬಗ್ಗೆ ‘ಬರ್ಮುಡಾ ಟ್ರಯಾಂಗಲ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿ ಮತ್ತೊಮ್ಮೆ ಚರ್ಚೆಗೆ ಒಳಪಡಿಸಿತ್ತು. ಒಂದು ರೀತಿಯಲ್ಲಿ, ಆಧುನಿಕ ಸಂಶೋಧನೆಗಳ ಬಗ್ಗೆ ನಾವೆಷ್ಟೇ ಜಂಭ ಕೊಚ್ಚಿಕೊಂಡರೂ ಭೂಮಿಯಲ್ಲಿ ನಾವು ತಲುಪದ ಮತ್ತು ಬೇಧಿಸಲು ಆಗದ ಸ್ಥಳಗಳಿರಲು ಸಾಧ್ಯ ಎಂಬುದನ್ನು ಇಂಥ ಸುದ್ದಿಗಳು ಆಗಾಗ ಮನದಟ್ಟು ಮಾಡುತ್ತಿರುತ್ತದೆ. ಇದೀಗ, ಮಲೇಶ್ಯಾದ ಈ ವಿಮಾನವನ್ನು ಈ ದ್ವೀಪ ನುಂಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದು ಇಂಥ ಅನುಮಾನಗಳಿಗೆ ಮತ್ತೊಮ್ಮೆ ಜೀವ ಒದಗಿಸಿದೆ.
 ಜಗತ್ತಿನಲ್ಲಿ ಸಾಮಾನ್ಯವಾಗಿ ಎರಡು ವಿಧದ ವಿಚಾರಧಾರೆಗಳಿವೆ. ಒಂದು ಕಣ್ಣಿಗೆ ಕಾಣುವಂಥದ್ದನ್ನು ಮಾತ್ರ ನಂಬುವ ವಿಚಾರಧಾರೆ. ಇನ್ನೊಂದು, ಕಣ್ಣಿಗೆ ಕಾಣದೇ ಇರುವ ಆದರೆ, ಇದೆ ಎಂದು ಧರ್ಮಗ್ರಂಥಗಳು ಪ್ರತಿಪಾದಿಸಿರುವ ವಿಷಯಗಳನ್ನು ನಂಬುವ ವಿಚಾರಧಾರೆ. ಜಗತ್ತಿನಲ್ಲಿ ಈ ಎರಡು ವಿಚಾರಧಾರೆಗಳು ಎಲ್ಲ ಕಾಲಗಳಲ್ಲೂ ಸದಾ ಮುಖಾಮುಖಿಯಾಗುತ್ತಲೇ ಬಂದಿವೆ. ದೇವನು ಇದ್ದಾನೆ ಎಂದು ಒಂದು ವರ್ಗ ಹೇಳುವಾಗ ಆತನನ್ನು ತೋರಿಸು ಎಂದು ಇನ್ನೊಂದು ವರ್ಗ ಹೇಳುತ್ತದೆ. ಸ್ವರ್ಗ ಮತ್ತು ನರಕ ಎಂಬ ಎರಡು ವಸ್ತುಗಳನ್ನು ದೇವನು ಸೃಷ್ಟಿಸಿದ್ದಾನೆ ಎಂದು ಹೇಳುವವರೂ ಭೂಮಿಯೇ ಸ್ವರ್ಗ ಮತ್ತು ನರಕ ಎಂದು ವಾದಿಸುವವರೂ ಧಾರಾಳ ಇದ್ದಾರೆ. ಭೂಮಿಯ ಸೃಷ್ಟಿ ರಹಸ್ಯವನ್ನು ಕಂಡುಕೊಳ್ಳುವ ಒಂದು ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ ಬಿಗ್ ಬ್ಯಾಂಗ್ಸ್ ಎಂಬ ಸಂಶೋಧನೆಯನ್ನು ಕೈಗೊಳ್ಳಲಾಯಿತು. ವಿವಿಧ ದೇಶಗಳ ಅನೇಕಾರು ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಭಾಗವಹಿಸಿ ಸೃಷ್ಟಿ ರಹಸ್ಯದ ಸತ್ಯಗಳನ್ನು ಕಂಡುಕೊಳ್ಳಲು ಯತ್ನಿಸಿದರು. ಆರ್ಕಿಮಿಡೀಸ್, ಗೆಲಿಲಿಯೋ, ನ್ಯೂಟನ್‍ರಿಂದ ಹಿಡಿದು ಈ ಕಾಲದ ಅದ್ಭುತವಾದ ಸ್ಟೀಫನ್ ಹಾಕಿಂಗ್ಸ್‍ರ ವರೆಗೆ ವಿಜ್ಞಾನಿಗಳ ದಂಡೇ ಈ ಜಗತ್ತಿನ ರಹಸ್ಯವನ್ನು ಹುಡುಕುವ ಪ್ರಯತ್ನ ನಡೆಸುತ್ತಲೇ ಇವೆ. ಮನುಷ್ಯ ಹೇಗಾದ, ಪ್ರಾಣಿಗಳು ಹೇಗಾದುವು, ಸೂರ್ಯ, ಚಂದ್ರ, ನಕ್ಷತ್ರ, ಆಕಾಶ, ನೀರು.. ಎಲ್ಲವುಗಳ ಬಗೆಗೂ ಈ ವಿಜ್ಞಾನಿಗಳು ಕುತೂಹಲಗೊಂಡು ಸಂಶೋಧನೆಗೊಳಪಡಿಸುತ್ತಲೇ ಬಂದಿದ್ದಾರೆ. ವಿಕಾಸವಾದದ ಸಿದ್ಧಾಂತವನ್ನು ಡಾರ್ವಿನ್ ಮುಂದಿಟ್ಟಾಗ ಅಂದಿನಿಂದ ಇಂದಿನ ವರೆಗಿನ ಸಮಾಜ ಅದನ್ನು ಅನುಮಾನಿಸುತ್ತಲೇ ಬಂದಿತು. ಮಂಗ ವಿಕಾಸ ಹೊಂದುತ್ತಾ ಮನುಷ್ಯ ರೂಪ ತಾಳಿದುದಾದರೆ, ಆ ಬಳಿಕ ಈ ವಿಕಸನವು ಸ್ಥಬ್ಧಗೊಂಡಿತೇಕೆ ಎಂಬ ಪ್ರಶ್ನೆ ಇವತ್ತೂ ಪ್ರಸ್ತುತವಾಗಿಯೇ ಉಳಿದಿದೆ. ಮನುಷ್ಯನ ಹೃದಯಕ್ಕೆ ಬದಲಿ ಹೃದಯವನ್ನು, ರಕ್ತಕ್ಕೆ ಬದಲಿ ರಕ್ತವನ್ನು, ಕಿಡ್ನಿಗೆ ಬದಲಿ ಕಿಡ್ನಿಯನ್ನು, ಕಣ್ಣಿಗೆ ಬದಲಿ ಕಣ್ಣನ್ನು.. ಹೀಗೆ ಮಾನವ ದೇಹದ ವಿವಿಧ ಅಂಗಗಳಿಗೆ ಪ್ರಯೋಗಾಲಯದಲ್ಲಿ ಬದಲಿ ಅಂಗಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಯಾವ ವಿಜ್ಞಾನಿಗಳು ಈ ವರೆಗೂ ಯಶಸ್ಸು ಕಂಡಿಲ್ಲ. ಮನುಷ್ಯನ ದೇಹದಿಂದ ಒಂದಂಶವನ್ನು ತೆಗೆದು ಒಂದು ಜೀವವನ್ನು ಸೃಷ್ಟಿಸುವ ಕ್ಲೋನಿಂಗ್‍ನಂಥ ಪ್ರಯತ್ನಗಳು ಸಫಲಗೊಂಡಿವೆಯೇ ಹೊರತು ಕೇವಲ ಪ್ರಯೋಗಾಲಯವೇ ಓರ್ವ ಮನುಷ್ಯನನ್ನು ಸೃಷ್ಟಿಸುವ ಪ್ರಯತ್ನ ಈ ವರೆಗೂ ಯಶಸ್ಸು ಕಂಡಿಲ್ಲ. ಧಾರ್ಮಿಕ ಚಿಂತನೆಗಳಿಗೆ ಬಲ ಬರುವುದು ಇಂಥ ಸ್ಥಿತಿಯಲ್ಲೇ. ವಿಜ್ಞಾನ ಹೇಳದ ಅಥವಾ ಹೇಳಿಯೂ ಹತ್ತಾರು ಅನುಮಾನಗಳಿಗೆ ಉತ್ತರ ಸಿಗದ ಅನೇಕಾರು ವಿಷಯಗಳ ಬಗ್ಗೆ ಧರ್ಮಗ್ರಂಥಗಳು ಸ್ಪಷ್ಟವಾಗಿ ಉತ್ತರಿಸುತ್ತವೆ. ಮನುಷ್ಯ ಹೇಗೆ ಮತ್ತು ಯಾಕೆ ಸೃಷ್ಟಿಯಾಗಿದ್ದಾನೆ, ಮೊತ್ತಮೊದಲ ಮಾನವನ ಹೆಸರೇನು, ಆ ಬಳಿಕ ಹೇಗೆ ಅವರ ಸಂತಾನಗಳು ವಿಕಸನ ಹೊಂದಿದುವು, ಮೊತ್ತಮೊದಲ ಮರಣ ಹೇಗಾಯಿತು, ಮೃತಪಟ್ಟವರು ಮತ್ತು ಅದಕ್ಕೆ ಕಾರಣರಾದವರ ಹೆಸರುಗಳು ಏನೇನು, ಮೃತ ಶರೀರವನ್ನು ದಫನ ಮಾಡುವ ಕಲೆ ಹೇಗೆ ಅವರಿಗೆ ಸಿದ್ಧಿಸಿತು, ಅದನ್ನು ಹೇಳಿಕೊಟ್ಟದ್ದು ಯಾವುದು.. ಮುಂತಾದುವುಗಳಿಂದ ಹಿಡಿದು, ಒಂಭತ್ತು ತಿಂಗಳ ನಡುವೆ ಒಂದು ಶಿಶು ತಾಯಿಯ ಉದರದಲ್ಲಿ ವಿಕಸನಗೊಳ್ಳುವ ವಿವಿಧ ಹಂತಗಳ ವರೆಗೆ, ಭೂಮಿಯ ರಚನೆಯಿಂದ ಹಿಡಿದು ಪ್ರಳಯದ ವಿವಿಧ ಕುರುಹುಗಳ ವರೆಗೆ.. ಎಲ್ಲವನ್ನೂ ಅತ್ಯಂತ ಸ್ಪಷ್ಟವಾಗಿ ಪವಿತ್ರ ಕುರ್‍ಆನ್ (23:14, 49: 13, 5: 27-31, 46:15...)ವಿವರಿಸಿದೆ. ದೇವನನ್ನು ಗುರುತಿಸುವುದಕ್ಕೆ ಈ ಭೂಮಿಯಲ್ಲಿ ಹತ್ತು-ಹಲವು ದೃಷ್ಟಾಂತಗಳನ್ನು ಸೃಷ್ಟಿಸಲಾಗಿದೆ ಎಂದು ಅದು ಹೇಳುತ್ತದೆ. ಬರ್ಮುಡಾ ಟ್ರಯಾಂಗಲ್ ಎಂಬುದು ಆ ಕುರುಹು ಹೌದೋ ಅಲ್ಲವೋ ಆದರೆ ಮಾನವ ಜಗತ್ತನ್ನು ಅದು ಕುತೂಹಲದ ಮೊಟ್ಟೆಯಾಗಿಸಿ ಬಿಟ್ಟಿದೆ. ಸಂಶೋಧನೆಗೆ ಸವಾಲನ್ನು ಒಡ್ಡುತ್ತಲೇ, ಭೂಮಿಯಲ್ಲಿ ಇಂಥದ್ದೊಂದು ಅಚ್ಚರಿಯ ದ್ವೀಪವನ್ನು ಯಾರು ಮತ್ತು ಯಾಕೆ ಸೃಷ್ಟಿಸಿದರು ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಇದೆ.
 ನಿಜವಾಗಿ, ವಿಮಾನ ಎಂಬುದು ಕಾರಿನಂತೆಯೋ, ಬಸ್ಸು, ಬೈಕ್‍ನಂತೆಯೋ ಅಲ್ಲ. ಈ ಭೂಮಿಯಲ್ಲಿ ತಾಂತ್ರಿಕವಾಗಿ ಅತ್ಯಂತ ಹೆಚ್ಚು ನಿಖರವಾಗಿರುವ ಮತ್ತು ಅನೇಕಾರು ತಪಾಸಣೆ, ಪ್ರಯೋಗಗಳ ಬಳಿಕ ಚಾಲನೆಗೆ ಬರುವ ವಾಹನ ಅದು. ಪ್ರಯಾಣಿಕರೂ ಅಷ್ಟೇ. ಬಸ್ಸಿಗೋ, ಟ್ಯಾಕ್ಸಿಗೋ ಹತ್ತಿದಂತೆ ವಿಮಾನವನ್ನು ಹತ್ತುವಂತಿಲ್ಲ. ಬಿಗಿಯಾದ ತಪಾಸಣೆಯ ಬಳಿಕವೇ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಓರ್ವ ಪ್ರಯಾಣಿಕ ಏನೇನಲ್ಲ ಕೊಂಡೊಯ್ಯಬಹುದು ಮತ್ತು ಅವು ಎಷ್ಟು ಕೆ.ಜಿ. ಮಿತಿಯಲ್ಲಿರಬೇಕು ಎಂಬ ನಿಯಮವೂ ಇದೆ. ಹೀಗೆ ಸಾಮಾನ್ಯ ಪ್ರಯಾಣಕ್ಕಿಂತ ಭಿನ್ನವಾಗಿ ಬಿಗಿ ನಿಯಮ, ತಪಾಸಣೆಗೊಳಪಟ್ಟು ಹಾರುವ ವಿಮಾನವು ಆಕಾಶದ ಮತ್ತು ಭೂಮಿಯ ಮೇಲೆ ಎಲ್ಲೇ ಇದ್ದರೂ ಸತತ ಮೂಲ ಕೇಂದ್ರದೊಂದಿಗೆ ಅದು ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ವಿಮಾನದ ಪ್ರತಿ ಚಲನೆಯ ಮೇಲೂ ರಾಡಾರ್ ಕಣ್ಣಿಟ್ಟಿರುತ್ತದೆ. ಹೀಗೆ ಇತರೆಲ್ಲ ವಾಹನಗಳಿಗಿಂತ ಹೆಚ್ಚು ಸೌಕರ್ಯವಿರುವ ಮತ್ತು ನಿಖರವಾಗಿರುವ ಆನೆಗಾತ್ರದ ವಿಮಾನವೇ ಎಲ್ಲ ಮಾನವ ನಿರ್ಮಿತ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸಿ ಕಣ್ಮರೆಯಾಗಲು ಸಾಧ್ಯವೆಂದರೆ ಅದು ರವಾನಿಸುವ ಸಂದೇಶವೇನು? ಭೂಮಿಯಲ್ಲಿ ತಾನು ಮುಟ್ಟದ ಜಾಗವೇ ಇಲ್ಲ ಎಂದು ವಿಜ್ಞಾನ ಹೇಳುವಾಗ ಮತ್ತು ಮಂಗಳನಲ್ಲಿ ನೀರು ಹುಡುಕುತ್ತಿರುವಾಗ ನಡೆದ ಈ ಘಟನೆ ಏನನ್ನು ಸೂಚಿಸುತ್ತದೆ? ಭೂಮಿಯಲ್ಲಿ ವಿಜ್ಞಾನ ತಲುಪದ ಮತ್ತು ಅದರ ತಂತ್ರಜ್ಞಾನಗಳಿಗೂ ನಿಲುಕದ ಜಾಗಗಳಿವೆಯೇ? ಯಾರು ಅದರ ಸೃಷ್ಟಿಕರ್ತ? ಏನದರ ಉದ್ದೇಶ?
   ಕಣ್ಮರೆಯಾದ ವಿಮಾನವನ್ನು ಎದುರಿಟ್ಟುಕೊಂಡು ಜಗತ್ತು ಈ ಬಗ್ಗೆ ಚರ್ಚಿಸಬೇಕಾಗಿದೆ. ಒಂದು ವೇಳೆ ಅದು ಪತ್ತೆಯಾದರೂ ಕೂಡ.

Wednesday, 5 March 2014

ಮೋದಿ ಎಂಬ ಆರೋಪಿಯೂ ಸಲ್ಮಾನ್ ಎಂಬ ಅಸಭ್ಯರೂ

    ‘ಏನಿಲ್ಲದಿದ್ದರೂ ರಾಜಕಾರಣಿಗಳ ಕೈ ಮತ್ತು ಬಾಯಿ ಶುದ್ಧವಾಗಿರುತ್ತದೆ..' ಎಂದು ಯಾರಾದರೂ ಹೇಳಿದರೆ, ಅದನ್ನೇ ಜನರು ದಿನದ ಜೋಕ್ ಆಗಿ ಪರಿಗಣಿಸುವಷ್ಟು ಅವರ ಈ ಎರಡು ಅಂಗಗಳು ಇವತ್ತು ವಿಶ್ವಾಸಾರ್ಹತೆಯನ್ನು ಕಳಕೊಂಡು ಬಿಟ್ಟಿವೆ. ಹಾಗಂತ, ರಾಜಕಾರಣಿ ಎಂಬುದು ಮನುಷ್ಯ ವರ್ಗಕ್ಕಿಂತ ಭಿನ್ನವಾದ ಜೀವಿಯೇನೂ ಅಲ್ಲ. ಮನುಷ್ಯರನ್ನು ಹೊರತುಪಡಿಸಿದ ‘ಶೂನ್ಯ' ಪ್ರದೇಶದಲ್ಲಿ ಅವರು  ಬದುಕುತ್ತಲೂ ಇಲ್ಲ. ರಾಜಕಾರಣಿಯಾಗುವುದಕ್ಕಿಂತ ಮೊದಲು ಪ್ರತಿಯೊಬ್ಬರೂ ಸಾಮಾನ್ಯ ಮನುಷ್ಯರೇ ಆಗಿರುತ್ತಾರೆ. ಅವರಲ್ಲಿ ಜನಸಾಮಾನ್ಯರಂತೆ ರೇಶನ್ ಅಂಗಡಿಗಳಲ್ಲಿ ಕ್ಯೂ ನಿಂತವರಿರಬಹುದು. ಮಣ್ಣು ಹೊತ್ತವರು, ಬಾವಿಯಿಂದ ನೀರು ಸೇದಿದವರು, ಕಾರಿನಲ್ಲೇ ಓಡಾಡಿದವರು.. ಎಲ್ಲರೂ ಇರಬಹುದು. ಆಗೆಲ್ಲಾ ಶುದ್ಧವಾಗಿಯೇ ಇರುವ ಇವರ ಕೈ ಮತ್ತು ಬಾಯಿಗಳು ರಾಜಕಾರಣಿಯಾದ ಮೇಲೆ ಅಶುದ್ಧವಾಗುವುದೇಕೆ? ಆಡಬಾರದ ಮಾತನ್ನು ಆಡುವಷ್ಟು, ಮಾಡಬಾರದ ಕೆಲಸವನ್ನು ಮಾಡುವಷ್ಟು ಅವು ಲಜ್ಜೆರಹಿತವಾಗುವುದೇಕೆ? ಲಕ್ಷಾಂತರ ಮಂದಿಯನ್ನು ಪ್ರತಿನಿಧಿಸುವ ರಾಜಕಾರಣಿಯೊಬ್ಬ ಹೊಲಸು ಮಾತಾಡುತ್ತಾರೆಂದರೆ ಅದು ಲಕ್ಷಾಂತರ ಮಂದಿಗೆ ಮಾಡುವ ಅವಮಾನ. ಆದ್ದರಿಂದಲೇ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್‍ರನ್ನು ನಾವು ಖಂಡಿಸಬೇಕಾಗಿದೆ. ಕಳೆದವಾರ ತಮ್ಮ ಅಸಂಸ್ಕ್ರ ತ ನಾಲಗೆಯನ್ನು ಅವರು ದೇಶದ ಮುಂದೆ ಪ್ರದರ್ಶಿಸಿದ್ದಾರೆ. ನರೇಂದ್ರ ಮೋದಿಯನ್ನು ಷಂಡ, ನಪುಂಸಕ ಎಂದು ಕರೆದು ತನ್ನ ಯೋಗ್ಯತೆ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರ ಈ ಪದ ಪ್ರಯೋಗವನ್ನು ಯಾವ ನೆಲೆಯಲ್ಲೂ ಸ್ವೀಕರಿಸಲು ಸಾಧ್ಯವಿಲ್ಲ.
 ನಿಜವಾಗಿ, ನರೇಂದ್ರ ಮೋದಿಯ ಬಗ್ಗೆ, ಅವರ ರಾಜಕೀಯ ವಿಚಾರಧಾರೆಗಳ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಸಲ್ಮಾನ್ ಖುರ್ಷಿದ್‍ರಿಗೆ ಎಲ್ಲ ರೀತಿಯಲ್ಲೂ ಅರ್ಹತೆಯಿದೆ. ಗುಜರಾತ್ ಗಲಭೆಗೆ ಸಂಬಂಧಿಸಿ ಮೋದಿಯ ಪ್ರಾಮಾಣಿಕತೆಯನ್ನು ಅವರು ಪ್ರಶ್ನಿಸುವುದಾದರೆ, ಅದನ್ನಾರೂ ತಪ್ಪೂ ಅನ್ನುತ್ತಿಲ್ಲ. ಈ ದೇಶದಲ್ಲಿ ಯಾವ ರಾಜಕಾರಣಿಯೂ ಪ್ರಶ್ನಾತೀತರಲ್ಲ. ಮೋದಿಯೂ ಕೂಡ. ಆದರೆ ಓರ್ವ ಮನುಷ್ಯರಾಗಿ ಮೋದಿಗೂ ಕೆಲವು ಅರ್ಹತೆಗಳಿವೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಶಂಕಿತ ಪಾತ್ರದ ಬಗ್ಗೆ ಎಷ್ಟೇ ಅನುಮಾನಗಳಿದ್ದರೂ ಓರ್ವ ಮನುಷ್ಯರಾಗಿ ಅವರಿಗೆ ಸಲ್ಲತಕ್ಕ ಗೌರವಗಳನ್ನು ನಿರಾಕರಿಸುವುದು ಸಭ್ಯತನವಲ್ಲ.  1984 ಸಿಕ್ಖ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರನ್ನು ಸಲ್ಮಾನ್‍ರದ್ದೇ ಭಾಷೆಯಲ್ಲಿ ಖಂಡಿಸುವುದಕ್ಕೆ ಮೋದಿಗೂ ಅವಕಾಶ ಇದೆಯಲ್ಲವೇ? ಹತ್ಯಾಕಾಂಡಗಳಂಥ ಭೀಕರ ಕ್ರೌರ್ಯಗಳನ್ನು ಖಂಡಿಸುವುದಕ್ಕಾಗಿ ಇಂಥ ಪದಗಳ ಬಳಕೆಯನ್ನು ನಾವು ಸಹಿಸುವುದಾದರೆ ಅದು ನಮ್ಮನ್ನು ಎತ್ತ ಕೊಂಡೊಯ್ದೀತು? ಮೋದಿಯನ್ನು ಖಂಡಿಸುವುದಕ್ಕೆ ಈ ನಾಗರಿಕ ಜಗತ್ತಿನಲ್ಲಿ ಧಾರಾಳ ಸಭ್ಯ ಪದಗಳಿವೆ. ಕ್ರೌರ್ಯವೊಂದರ ಸಕಲ ಗಂಭೀರತೆಯನ್ನೂ ಪ್ರತಿನಿಧಿಸಬಲ್ಲಷ್ಟು ಅವು ಪ್ರಭಾವಶಾಲಿಯೂ ಆಗಿವೆ. ಅವನ್ನು ಬಿಟ್ಟು ಅಸಭ್ಯ ಪದಗಳನ್ನು ಬಳಸುವುದು ನಿಜವಾಗಿ ಸಭ್ಯ ಪದಗಳಿಗೆ ಮಾಡುವ ಅವಮಾನವಾಗಿದೆ. ಮಾತ್ರವಲ್ಲ, ಅಸಭ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಅಸಭ್ಯರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಮತ್ತು ಸಾರ್ವಜನಿಕರಿಂದ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೂ ಅವಕಾಶ ಒದಗಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲೂ ಖುರ್ಷಿದ್‍ರ ಪದಪ್ರಯೋಗವನ್ನು ವಿರೋಧಿಸಬೇಕಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ಶಂಕಿತರಾಗಿರಬಹುದು. ಆದರೆ ಅದರ ಹೆಸರಲ್ಲಿ ಖುರ್ಷಿದ್‍ರ ಅಸಭ್ಯ ಪದಪ್ರಯೋಗವನ್ನು ಸಮರ್ಥಿಸಲು ಸಾಧ್ಯವಿಲ್ಲ. ನ್ಯಾಯ ಮೋದಿಗಾದರೂ ಸಲ್ಮಾನ್‍ರಿಗಾದರೂ ಏಕಪ್ರಕಾರ ಇರಬೇಕೆಂಬುದೇ ಖುರ್ಷಿದ್ ಪ್ರತಿನಿಧಿಸುವ ಧರ್ಮದ ನಿಯಮ. ಅದನ್ನು ಯಾರು ವಿೂರಿದರೂ ಖಂಡನಾರ್ಹವೇ.
 ಹಾಗಿದ್ದರೂ ಈ ಪದಪ್ರಯೋಗಕ್ಕೆ ಕಾರಣವಾದ ಅಂಶಗಳ ಬಗ್ಗೆ ಮೋದಿ ಮತ್ತು ಅವರ ಬೆಂಬಲಿಗರು ಆತ್ಮಾವಲೋಕನ ನಡೆಸಬೇಕಾದ ಅಗತ್ಯವಿದೆ. ಮೋದಿ ಖಂಡನೆಗೆ ಒಳಗಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಕೊನೆಯದಾಗುವ ಸಾಧ್ಯತೆಯೂ ಇಲ್ಲ. ಈ ದೇಶದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಎಂದಷ್ಟೇ ಅಲ್ಲ, ಸ್ವತಃ ಅಮೇರಿಕವೇ ಮೋದಿಯವರನ್ನು ಶಂಕಿತರಂತೆ ನೋಡುತ್ತಿದೆ. ಒಂದು ದೇಶದ ಪ್ರಧಾನಿ ಅಭ್ಯರ್ಥಿಯಾಗಿರುವ ಮತ್ತು ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೊಬ್ಬರನ್ನು ಹತ್ತಿರ ಸೇರಿಸುವುದಕ್ಕೆ ಅಮೇರಿಕ ಸಿದ್ಧವಾಗುತ್ತಿಲ್ಲವೆಂದರೆ ಅದನ್ನು ಪಿತೂರಿ ಎಂದೋ ದುರುದ್ದೇಶ ಎಂದೋ ಸಾಮನ್ರ್ಯೀಕರಿಸಲು ಸಾಧ್ಯವಿಲ್ಲ. ಅಲ್ಲದೇ ಮೋದಿ ಇತರೆಲ್ಲ ಪಕ್ಷಗಳಿಗಿಂತಲೂ ಹೆಚ್ಚು ಕಾರ್ಪೋರೇಟ್ ಪ್ರಿಯರು. ಅಮೇರಿಕ ಸಹಿತ ಬೃಹತ್ ರಾಷ್ಟ್ರಗಳಿಂದ ಬಂಡವಾಳ ಹರಿದು ಬರುವುದನ್ನು ಇಷ್ಟಪಡುವವರು. ಅಮೇರಿಕದ ಭಯೋತ್ಪಾದನಾ ವಿರೋಧಿ ಹೋರಾಟವನ್ನಾಗಲಿ, ಆರ್ಥಿಕ ಸಿದ್ಧಾಂತವನ್ನಾಗಲಿ ಮೋದಿ ಎಂದೂ ವಿಮರ್ಶಿಸಿಲ್ಲ. ಒಂದು ರೀತಿಯಲ್ಲಿ ಅಮೇರಿಕಕ್ಕೆ ಸರ್ವರೀತಿಯಿಂದಲೂ ಮೆಚ್ಚುಗೆಯವರಾಗಬೇಕಾದ ಮೋದಿಯನ್ನು ಅಮೆರಿಕ ಅಸ್ಪೃಶ್ಯರಂತೆ ಕಾಣಬೇಕಾದರೆ ಮೋದಿಯವರೊಳಗೊಬ್ಬ ಶಂಕಿತ ಇದ್ದಾನೆಂಬ ಅನುಮಾನವೇ ಇದಕ್ಕೆ ಕಾರಣವೆನ್ನಬೇಕಾಗಿದೆ. ಈ ಸತ್ಯವನ್ನು ಮೋದಿ ಬೆಂಬಲಿಗರು ಜೋರುದನಿಯಿಂದ ಅಡಗಿಸಲು ಯತ್ನಿಸಿದಷ್ಟೂ ಅದು ಮತ್ತೆ ಮತ್ತೆ ಚಿಮ್ಮುತ್ತಲೇ ಇರುತ್ತದೆ.
   ಈ ದೇಶದ 120 ಕೋಟಿಯಷ್ಟು ಬೃಹತ್ ಜನಸಂಖ್ಯೆಯನ್ನು ಲೋಕಸಭೆಯಲ್ಲಿ ನೇರವಾಗಿ ಪ್ರತಿನಿಧಿಸುವುದು ಕೇವಲ 543ರಷ್ಟು ಸಂಸದರು ಮಾತ್ರ. ಅಂದರೆ ಪ್ರತಿಯೊಬ್ಬ ಸಂಸದನೂ ಲಕ್ಷಾಂತರ ಮಂದಿಯ ಮಾತು-ಕೃತಿ, ಭಾವನೆ, ಸಂಸ್ಕøತಿ, ಧರ್ಮ, ನಡೆ, ನುಡಿಗಳನ್ನು ಪ್ರತಿನಿಧಿಸುತ್ತಾನೆ. ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯೊಬ್ಬರ ವೇಷ-ಭೂಷಣ, ಮಾತುಗಾರಿಕೆ ಮತ್ತು ಗ್ರಹಿಕೆಗಳು ಉತ್ತರ ಪ್ರದೇಶದ್ದೋ ಒಡಿಸ್ಸಾದ್ದೋ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯೊಬ್ಬರ ವೇಷ-ಭೂಷಣ, ಭಾಷೆ, ಗ್ರಹಿಕೆಗಳಂತೆ ಇರಬೇಕಾಗಿಲ್ಲ. ಇವರಿಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳೂ ಭಿನ್ನ ಭಿನ್ನ ಆಗಿರಬಹುದು. ಇವರಿಬ್ಬರ ಧಾರ್ಮಿಕ ಚಿಂತನೆಗಳಲ್ಲೂ ವ್ಯತ್ಯಾಸ ಇರಬಹುದು. ಹಾಗಂತ, ಇವರಿಬ್ಬರ ಮಧ್ಯೆ ಸತ್ಯ, ನ್ಯಾಯ, ಮೌಲ್ಯ, ಸಭ್ಯತೆ, ನೈತಿಕತೆ.. ಮುಂತಾದ ಗುಣಗಳ ಬಗ್ಗೆ ಭಿನ್ನಾಭಿಪ್ರಾಯ ಇರುವುದಕ್ಕೆ ಸಾಧ್ಯವಿಲ್ಲ. ನಾನು ಸುಳ್ಳು ಹೇಳುತ್ತೇನೆ, ನಾನು ಹತ್ಯಾಕಾಂಡ ನಡೆಸುತ್ತೇನೆ, ನಾನು ಅನೈತಿಕತೆಯಲ್ಲೇ ನಂಬಿಕೆ ಇರಿಸಿದ್ದೇನೆ.. ಎಂದು ಯಾವ ಜನಪ್ರತಿನಿಧಿಯೂ ಬಹಿರಂಗವಾಗಿ ಘೋಷಿಸುವುದಿಲ್ಲ. ಯಾಕೆಂದರೆ, ಇವೆಲ್ಲ ಎಲ್ಲ ಜನರ ಪಾಲಿಗೂ ಸಮಾನ. ಭಿನ್ನ ಭಿನ್ನ ದೇಶ, ಭಾಷೆ, ಧರ್ಮ, ಸಂಸ್ಕøತಿಗಳುಳ್ಳವರೆಲ್ಲರಿಗೂ ಮೌಲ್ಯಗಳು ಬಹುತೇಕ ಒಂದೇ ಆಗಿರುತ್ತವೆ. ಆದ್ದರಿಂದಲೇ, ಸಲ್ಮಾ ನ್ ಖುರ್ಷಿದ್‍ರ ಪದಬಳಕೆಯನ್ನು ನಾವು ಪ್ರತಿಭಟಿಸಬೇಕಾದದ್ದು. ಅವರು ಮುಸ್ಲಿಮರೆಂಬ ಕಾರಣಕ್ಕಾಗಿ ಮತ್ತು ಅವರು ಆ ಪದ ಬಳಸಿದ್ದು ಓರ್ವ ಹತ್ಯಾಕಾಂಡದ ಆರೋಪಿಯ ವಿರುದ್ಧ ಎಂಬುದಕ್ಕಾಗಿ ಅದೆಂದೂ ಸಹ್ಯ ಆಗುವುದಕ್ಕೆ ಸಾಧ್ಯವಿಲ್ಲ. ಆಗಬಾರದು ಕೂಡಾ. ಮೋದಿ ಈ ಸಮಾಜದ ಸಭ್ಯತನಕ್ಕೆ ತಮ್ಮ ಕೃತ್ಯಗಳ ಮೂಲಕ ಅಪಚಾರ ಎಸಗಿದ್ದಾರೆಂದಾದರೆ ಅದನ್ನು ಅಸಭ್ಯ ಪದಗಳ ಮೂಲಕ ಪ್ರಶ್ನಿಸುವುದು ಉತ್ತರ ಆಗುವುದಿಲ್ಲ. ಬದಲು ಅದು ಇನ್ನೊಂದು ತಪ್ಪಷ್ಟೇ ಆಗುತ್ತದೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಪಾತ್ರ ಏನು ಎಂಬುದನ್ನು ನ್ಯಾಯಾಲಯ ಇಂದಲ್ಲ ನಾಳೆ ಖಂಡಿತ ನಿರ್ಧರಿಸುತ್ತದೆ. ಅದನ್ನು ಸಲ್ಮಾನ್ ಖುರ್ಷಿದ್‍ರು ಅಸಭ್ಯ ಪದಗಳ ಮೂಲಕ ನಿರ್ಧರಿಸುವ ಅಗತ್ಯವಿಲ್ಲ.

Wednesday, 26 February 2014

'ಮತ್ತು' ಬರಿಸುವ ಚಹಾ ಮತ್ತು ಓಟು

   ಚಾಯ್ ಪೆ ಚರ್ಚಾ, ರಾಗಾ ಹಾಲು, ಮೆಹೆಂದಿ ಲಗಾವೋ... ಮುಂತಾದ ಹೊಸ ಹೊಸ ಪದಗುಚ್ಛಗಳು ಮಾಧ್ಯಮಗಳಲ್ಲಿ ಇವತ್ತು ಹೆಚ್ಚೆಚ್ಚು ಸುದ್ದಿ ಮಾಡುತ್ತಿವೆ. ಹೊಟೇಲು, ಬಸ್ಸು ನಿಲ್ದಾಣ, ಅಲ್ಲಿ-ಇಲ್ಲಿ ಇವು ತಮಾಷೆ ಮತ್ತು ಬಿಸಿಬಿಸಿ ಚರ್ಚೆಗೂ ಒಳಗಾಗುತ್ತಿದೆ. ಚಹಾ ಮಾರಾಟ ಮಾಡಿ ಬೆಳೆದ ಮೋದಿಯವರನ್ನು ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ವ್ಯಂಗ್ಯವಾಡಿದ್ದೇ ಚಾಯ್ ಪೆ ಚರ್ಚಾ ಪದಗುಚ್ಛ ಹುಟ್ಟಿಕೊಳ್ಳಲು ಕಾರಣ. ಅಯ್ಯರ್‍ರ ವ್ಯಂಗ್ಯವನ್ನೇ ನೆಪವಾಗಿಟ್ಟುಕೊಂಡು ಈ ದೇಶದ 300 ನಗರಗಳ 1000 ಕೇಂದ್ರಗಳಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸುವ ಯೋಜನೆಯನ್ನು ಮೋದಿ ಹಮ್ಮಿಕೊಂಡರು. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಮಾಡಲಾಗುವ ಈ ಸಂವಾದಕ್ಕೆ ಸ್ವತಃ ಮೋದಿಯೇ ಚಾಲನೆ ಕೊಟ್ಟರು. ಇದರ ಬೆನ್ನಿಗೇ ರಾಗಾ (ರಾಹುಲ್ ಗಾಂಧಿ) ಹಾಲು ಹುಟ್ಟಿಕೊಂಡಿತು. ಚಹಾವು ಆರೋಗ್ಯಕ್ಕೆ ಹಾನಿಕರವಾಗಿದ್ದು ಅದಕ್ಕಿಂತ ಹಾಲು ಉತ್ತಮ ಎಂದು ಹೇಳುತ್ತಾ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಗಾ ಹಾಲು ಮಾರಾಟ ಆರಂಭಿಸಿದರು. ಆ ಬಳಿಕ ಮೆಹಂದಿ ಲಗಾವೋ (ಮೆಹಂದಿ ಹಚ್ಚಿ) ಎಂಬ ಅಭಿಯಾನವನ್ನು ಜಾರ್ಖಂಡ್‍ನ ಬಿಜೆಪಿ ಮಹಿಳಾ ವಿಭಾಗವು ಹಮ್ಮಿಕೊಂಡಿತು. ಪ್ರತಿ ಮನೆಗೂ ಭೇಟಿ ಕೊಟ್ಟು ಮಹಿಳೆಯರ ಕೈಗಳಿಗೆ ಮೆಹಂದಿಯಲ್ಲಿ ತಾವರೆಯನ್ನು ಬಿಡಿಸುವ ಅಭಿಯಾನ ಇದು. ಇದೀಗ ಬಿಹಾರದಲ್ಲಿ ಲಾಲೂ ದುಕಾನ್ (ಅಂಗಡಿ) ಪ್ರಾರಂಭವಾಗಿದೆ. ಅಷ್ಟಕ್ಕೂ ಇಂಥ ಅಭಿಯಾನಗಳು ಇಲ್ಲಿಗೇ ಕೊನೆಗೊಳ್ಳುವ ಸಾಧ್ಯತೆ ಇಲ್ಲ. ಎದುರಾಳಿಗಳು ಹೊರಿಸುವ ಆರೋಪಗಳ ಗುಣಮಟ್ಟವನ್ನು ಹೊಂದಿಕೊಂಡು ಹೊಸಹೊಸ ಪದಗುಚ್ಛಗಳು ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ.
 ನಿಜವಾಗಿ, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಹೊಸತೇನೂ ಅಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಮಾಡಲಾಗುವ ಆರೋಪಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ವೇದಿಕೆಯಲ್ಲಿ ಹುಟ್ಟಿಕೊಂಡು ವೇದಿಕೆಯಲ್ಲೇ ಸಾವಿಗೀಡಾಗುವ ಇಂಥ ಆರೋಪಗಳು ಆ ದಿನದ ಮನರಂಜನೆಯಾಗಿ ಗುರುತಿಗೀಡಾಗುವುದೇ ಹೆಚ್ಚು. ಆದರೆ ಚಾಯ್ ಪೇ ಚರ್ಚಾ ಎಂಬ ಪದಗುಚ್ಛ ಮತ್ತು ಅದು ಚುನಾವಣಾ ಕಾರ್ಯತಂತ್ರವಾಗಿ ಬದಲಾಗಿರುವುದನ್ನು ನೋಡಿದರೆ, ಅಚ್ಚರಿ ಮತ್ತು ಆಘಾತವಾಗುತ್ತದೆ. ಯಾಕೆಂದರೆ, ಚುನಾವಣೆಗಳು ನಡೆಯಬೇಕಾದದ್ದು ಇಶ್ಶೂಗಳ ಆಧಾರದ ಮೇಲೆಯೇ ಹೊರತು ಗಿಮಿಕ್‍ಗಳ ಮೇಲಲ್ಲ. ಜನರ ಗಮನವನ್ನು ಸೆಳೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಚಹಾ, ಕಾಫಿ, ಹಾಲು, ಮೆಹಂದಿಗಳ ಮೊರೆ ಹೋಗಲು ಪ್ರಾರಂಭಿಸಿದರೆ, ಅದರ ಪರಿಣಾಮ ಏನಾದೀತು? ಅದು ಯಾವ ಫಲಿತಾಂಶಕ್ಕೆ ಕಾರಣವಾದೀತು? ಈ ದೇಶ ಇವತ್ತು ಎದುರಿಸುತ್ತಿರುವುದು ಚಹಾದ್ದೋ ಹಾಲಿನದ್ದೋ ಸಮಸ್ಯೆಯನ್ನು ಅಲ್ಲವಲ್ಲ. ಭ್ರಷ್ಟಾಚಾರ, ಮಂದ ಪ್ರಗತಿ, ಕೋಮುವಾದ, ಭಯೋತ್ಪಾದನೆ, ಔದ್ಯೋಗಿಕ ಸಮಸ್ಯೆಗಳಿಂದ ಸುತ್ತುವರಿದಿರುವ ದೇಶವೊಂದರಲ್ಲಿ ಹಾಲು ಚುನಾವಣಾ ಇಶ್ಶೂ ಆಗುವುದಕ್ಕೆ ಏನೆನ್ನಬೇಕು? ಮೆಹಂದಿಯ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು? ಚುನಾವಣೆಯು ಒಂದು ದೇಶದ ಪಾಲಿಗೆ ಮಹತ್ವಪೂರ್ಣ ಆಗಬೇಕಾದದ್ದು ಅಲ್ಲಿ ಚರ್ಚೆಗೀಡಾಗುವ ಇಶ್ಶೂಗಳು ಏನೇನು ಎಂಬುದರ ಆಧಾರದ ಮೇಲೆ. ಕೋಮುವಾದ ಯಾವುದೇ ದೇಶದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮತೋಲನವನ್ನೇ ಕೆಡಿಸಿಬಿಡುತ್ತದೆ. ಒಂದು ದೇಶದ ಪ್ರಗತಿಯನ್ನು ತಡೆಗಟ್ಟಬೇಕಾದರೆ ಕೋಮುಗಲಭೆ ಮತ್ತು ಭ್ರಷ್ಟಾಚಾರವನ್ನು ಆ ದೇಶದಲ್ಲಿ ಪೋಷಿಸಿದರೆ ಧಾರಾಳ ಸಾಕು. ಜೊತೆಗೇ ಬೆಲೆಯೇರಿಕೆ, ನಿರುದ್ಯೋಗ, ಅಸಮಾನತೆ, ಭಯೋತ್ಪಾದನೆಗಳು.. ಒಂದು ದೇಶದ ಜನರ ಜೀವನ ಪ್ರೀತಿಯನ್ನೇ ಕಸಿದುಕೊಳ್ಳುತ್ತವೆ. ಇಂಥ ಸ್ಥಿತಿಯಲ್ಲಿ, ಜನರು ರಾಜಕೀಯ ಪಕ್ಷಗಳಿಂದ ಜವಾಬ್ದಾರಿಯುತ ನಿಲುವನ್ನು ಬಯಸುತ್ತಾರೆ. ಇಂಥ ಸಮಸ್ಯೆಗಳಿಂದ ದೇಶವನ್ನು ಮುಕ್ತಗೊಳಿಸುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಯಾವ ಪರಿಹಾರ ಮಾರ್ಗವನ್ನು ಸೂಚಿಸುತ್ತವೆ ಎಂದು ನಿರೀಕ್ಷೆಯಿಂದ ಕಾಯುತ್ತಾರೆ. ಈ ಎಲ್ಲ ವಿಷಯಗಳ ಮೇಲೆ ರಾಜಕೀಯ ಪಕ್ಷಗಳು ಒಂದೊಳ್ಳೆಯ ಚರ್ಚೆಯನ್ನು ತಮ್ಮ ಚುನಾವಣಾ ವೇದಿಕೆಗಳ ಮೂಲಕ ನಡೆಸುವುದನ್ನು ಅವರು ಕಾಯುತ್ತಿರುತ್ತಾರೆ. ಅಮೇರಿಕದಲ್ಲಿ ಅಧ್ಯಕ್ಷ  ಸ್ಥಾನದ ಅಭ್ಯರ್ಥಿಗಳ ಮಧ್ಯೆ ನೇರ ಟಿ.ವಿ. ಚರ್ಚೆಗಳು ನಡೆಯುತ್ತವೆ. ಆ ದೇಶದ ಪ್ರಮುಖ ಸಮಸ್ಯೆಗಳ ಕುರಿತಂತೆ ಅವರು ನಡೆಸುವ ಸಂವಾದವನ್ನು ಮತದಾರರು ಆಸಕ್ತಿಯಿಂದ ವೀಕ್ಷಿಸಿ, ಯಾರು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಯೋಗ್ಯರು ಎಂದು ತೀರ್ಮಾನಿಸುತ್ತಾರೆ. ಹಾಗಂತ, ಈ ದೇಶವು ಅಮೇರಿಕನ್ ಮಾದರಿಗಿಂತ ಭಿನ್ನ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ, ನಿಜ. ಆದರೆ ಅದರರ್ಥ ಜನರಿಗೆ ಯಾವ ಲಾಭವನ್ನೂ ನೀಡದ ಚಹಾವೋ ಕಾಫಿಯೋ ಚರ್ಚೆಗೀಡಾಗಬೇಕು ಎಂದಲ್ಲವಲ್ಲ. ಚಾಯ್ ಪೆ ಚರ್ಚಾ ಅಭಿಯಾನದಿಂದ ನಮಗೆ ಮೋದಿಯ ಆರ್ಥಿಕ ನಿಲುವನ್ನೋ ವಿದೇಶಾಂಗ ನೀತಿಯನ್ನೋ ತಿಳಿಯಲು ಸಾಧ್ಯವೇ? ಎಲ್ಲೋ ಕುಳಿತ ಮೋದಿಯೊಂದಿಗೆ ಸಾರ್ವಜನಿಕರು ಚಾಯ್ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತಾಡುವುದು ಬರೇ ಕ್ರೇಜ್‍ಗಾಗಿ. ಅಲ್ಲಿ ದೇಶದ ಪ್ರಮುಖ ಇಶ್ಶೂಗಳಾಗಲಿ, ಪ್ರಗತಿಯ ಸಂಗತಿಗಳಾಗಲಿ ಗಂಭೀರ ಚರ್ಚೆಗೆ ಒಳಗಾಗಲು ಸಾಧ್ಯವೇ ಇಲ್ಲ. ತಾವರೆಯ ಮೆಹಂದಿ ಹಚ್ಚಿಕೊಂಡ ಮಹಿಳೆಯರು ಮೋದಿಗೆ ಓಟು ಹಾಕಲು ತೀರ್ಮಾನಿಸಿದರೆ ಅದಕ್ಕೆ ಆ ಕ್ಷಣದ ಪುಳಕ ಕಾರಣವೇ ಹೊರತು ಮೋದಿಯ ಯೋಗ್ಯತೆ ಅಲ್ಲ. ಹಾಲಿನಲ್ಲಿ ಓಟು ಹುಡುಕುತ್ತಿರುವ ರಾಹುಲ್ ಗಾಂಧಿಯ ಸ್ಥಿತಿಯೂ ಹೀಗೆಯೇ.
 ಅಸೋಸಿಯೇಟೆಡ್ ಪ್ರೆಸ್ (A P) ಕಳೆದ ವಾರ ಒಂದು ಸುದ್ದಿಯನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತ್ತು. ಇರಾನಿನ ನೂತನ ಅಧ್ಯಕ್ಷ  ಹಸನ್ ರೂಹಾನಿಯವರು ಕಳೆದ ವಾರ ತಮ್ಮ ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಅದರಲ್ಲಿ ಅವರು ವಿಶ್ವದಲ್ಲಿಯೇ ಅತಿದೊಡ್ಡ ಅರೋಮಿಹ್ ಸರೋವರವನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಣಯವನ್ನು ಕೈಗೊಂಡರು. ಸರೋವರವು ಮತ್ತೆ ಹಿಂದಿನ ವೈಭವಕ್ಕೆ ಮರಳುವುದಕ್ಕಾಗಿ ತಜ್ಞರು ನೀಡಿದ ಸಲಹೆಗಳನ್ನು ಸಂಪುಟದ ಮುಂದಿಟ್ಟು ಅನುಮೋದಿಸಿಕೊಂಡರು. ವಾತಾವರಣದ ಏರುಪೇರು, ನದಿಗಳ ತಪ್ಪು ಬಳಕೆ, ತಪ್ಪು ನೀರಾವರಿಯಿಂದಾಗಿ ಸರೋವರದ 80% ಭಾಗ ಬಂಜರಾಗಿರುವುದನ್ನು ಅವರು ಸಂಪುಟದ ಮುಂದಿಟ್ಟರು. ನಿಜವಾಗಿ, ತನ್ನ ಪರಮಾಣು ವಿವಾದವನ್ನು ಸರಿಪಡಿಸಿಕೊಳ್ಳುವಂತೆ ಜಾಗತಿಕ ರಾಷ್ಟ್ರಗಳು ಒತ್ತಡ ಹಾಕುತ್ತಿರುವ ಸಂದರ್ಭದಲ್ಲಿ ಅದಕ್ಕಿಂತ ತನ್ನ ಜೀವದ್ರವವಾದ ಸರೋವರವನ್ನು ಉಳಿಸಿಕೊಳ್ಳುವುದಕ್ಕೆ ರೂಹಾನಿ ಆದ್ಯತೆ ಕೊಟ್ಟಿರುವುದನ್ನು ಅಸೋಸಿಯೇಟೆಡ್ ಪ್ರೆಸ್ ವಿಶೇಷ ಒತ್ತು ಕೊಟ್ಟು ಉಲ್ಲೇಖಿಸಿತ್ತು. ಒಂದು ರೀತಿಯಲ್ಲಿ, ಓರ್ವ ಪ್ರಬುದ್ಧ ಮತ್ತು ದೂರದೃಷ್ಟಿಯುಳ್ಳ ನಾಯಕ ತೆಗೆದುಕೊಳ್ಳಬಹುದಾದ ನಿರ್ಧಾರ ಇದು. ಒಂದು ವೇಳೆ ಪರಮಾಣು ವಿವಾದದ ಕುರಿತಂತೆ ಭಾವನಾತ್ಮಕ ನಿರ್ಣಯವೊಂದನ್ನು ಸಂಪುಟ ಸಭೆಯಲ್ಲಿ ರೂಹಾನಿ ಅಂಗೀಕರಿಸಿದ್ದಿದ್ದರೆ ಇರಾನಿನ ನಾಗರಿಕರು ಮೆಚ್ಚಿಕೊಳ್ಳುವುದಕ್ಕೆ ಸಾಧ್ಯವಿತ್ತು. ರಾಜಕೀಯವಾಗಿ ಲಾಭ ತಂದುಕೊಡುವುದಕ್ಕೂ ಅವಕಾಶವಿತ್ತು. ಆದರೆ ರೂಹಾನಿ ತಾತ್ಕಾಲಿಕ ಲಾಭವನ್ನೋ ಗಿಮಿಕ್ ನೀತಿಯನ್ನೋ ಆಯ್ಕೆ ಮಾಡಿಕೊಳ್ಳಲಿಲ್ಲ.
   ಏನೇ ಆಗಲಿ, ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಮೇಲೆ ಚುನಾವಣೆಗಳು ನಡೆಯಬೇಕೇ ಹೊರತು ಚಹಾ, ಕಾಫಿ, ಹಾಲು, ಮೆಹಂದಿಗಳ ಮೇಲೆ ಅಲ್ಲ. ಇವು ದೇಶದ ನಿಜವಾದ ವಿಷಯಗಳನ್ನು ಮರೆಸುವುದಕ್ಕೆ ರಾಜಕೀಯ ಪಕ್ಷಗಳು ಹೊರತಂದಿರುವ ನಕಲಿ ವಿಷಯಗಳು. ನಾವು ಇವುಗಳ ಆಕರ್ಷಣೆಯಿಂದ ಹೊರಬಂದು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ. ಇಲ್ಲದಿದ್ದರೆ ನಾಳೆ `ಮತ್ತು' ಬರಿಸುವ ಚಹಾವನ್ನೋ ಹಾಲನ್ನೋ ಕೊಟ್ಟು ಅವರು ಓಟು ಕಸಿದುಕೊಂಡಾರು.