Saturday, 25 May 2019

ಮದ್ಯಪಾನ: ಇಬ್ಬರು ಮಕ್ಕಳ ಕತೆ


   


ಕಳೆದವಾರ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಎರಡರ ಕೇಂದ್ರ ಬಿಂದುವೂ ಮದ್ಯವೇ. ರಾಜ್ಯದ ಚಿಕ್ಕಬಲ್ಲಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಇಬ್ಬರು ಮಕ್ಕಳು ನೆರೆಯ ಆಂಧ್ರ ಪ್ರದೇಶದ ಅನಂತರಪುರ ಜಿಲ್ಲೆಯಲ್ಲಿ ಮಣ್ಣು ತಿಂದು ಸಾವನ್ನಪ್ಪಿದ್ದಾರೆ ಅನ್ನುವುದು ಮೊದಲ ಸುದ್ದಿ. ಎರಡನೇ ಸುದ್ದಿ ಏನೆಂದರೆ, ಕಳೆದ 2010 ರಿಂದ 17ರ ನಡುವೆ ಭಾರತದಲ್ಲಿ ಮದ್ಯ ಸೇವನೆಯ ಪ್ರಮಾಣ ಶೇ. 38ಕ್ಕೆ ಹೆಚ್ಚಳವಾಗಿದೆ ಎಂಬುದು. ಬಾಗೇಪಲ್ಲಿಯ ಇಬ್ಬರು ಮಕ್ಕಳ ಸಾವಿಗೂ ಮದ್ಯಕ್ಕೂ ಸಂಬಂಧ ಇದೆ. ಇಲ್ಲಿನ ಮಹೇಶ್ ಮತ್ತು ನಾಗಮಣಿ ದಂಪತಿಗಳು ಕೂಲಿ ಕೆಲಸಕ್ಕೆಂದು ಆಂಧ್ರಕ್ಕೆ ತೆರಳಿದ್ದರು. ಇವರ ಜೊತೆ ಐದು ಮಕ್ಕಳು ಮತ್ತು ನಾಗಮಣಿಯ ತಾಯಿ ಮತ್ತು ಸೋದರಿಯ ಮಗುವೂ ಇತ್ತೆಂದು ಹೇಳಲಾಗುತ್ತದೆ. ಈ ದಂಪತಿಗಳು ಮತ್ತು ನಾಗಮಣಿಯ ತಾಯಿ ಮಹಾ ಕುಡುಕರು. ನಾಗಮಣಿ ದಂಪತಿಗಳು ಕೆಲಸಕ್ಕೆಂದು ಹೊರಗೆ ಹೋಗುವಾಗ ಅಜ್ಜಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಅಜ್ಜಿಯೂ ಕುಡಿಯುತ್ತಿದ್ದುದರಿಂದ ಮನೆಯಲ್ಲಿ ಅನ್ನ ಬೇಯಿಸುತ್ತಿದ್ದುದು ಕಡಿಮೆ. ಹೀಗಾಗಿ ಹಸಿದ ಮಕ್ಕಳು ಮಣ್ಣು ತಿನ್ನುತ್ತಿದ್ದರು. 6 ತಿಂಗಳ ಹಿಂದೆ 3 ವರ್ಷದ ಮಗು ಮಣ್ಣು ತಿಂದು ತೀರಿಕೊಂಡಿತು. ಇದು ಹೊರಗಿನ ಪ್ರಪಂಚಕ್ಕೆ ಗೊತ್ತಾಗಿರಲಿಲ್ಲ. ಆದರೆ ಇದೀಗ ನಾಗಮಣಿಯ ಸೋದರಿಯ ಮಗನೂ ಹಸಿವೆಯಿಂದ ಮಣ್ಣು ತಿಂದ ಪರಿಣಾಮ ಸಾವನ್ನಪ್ಪಿದ್ದಾನೆ. ಇದು ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಹೃದಯವಿದ್ರಾವಕ ಸುದ್ದಿಯ ಮೂರು ದಿನಗಳ ಬಳಿಕ ಭಾರತದಲ್ಲಿ ಮದ್ಯ ಸೇವನೆಯ ಸ್ಥಿತಿಗತಿಯ ಕುರಿತಂತೆ ಜರ್ಮನಿಯ ಡ್ರೆಸ್ಡನ್ ವಿಶ್ವವಿದ್ಯಾಲಯದ ಸಂಶೋಧಕರು ಸಿದ್ಧಪಡಿಸಿದ ಅಧ್ಯಯನ ವರದಿಯನ್ನು ದಿ ಲಾನ್ಸೆಟ್ ಜರ್ನಲ್ ಬಿಡುಗಡೆಗೊಳಿಸಿದೆ. 1990 ರಿಂದ 2017ರ ನಡುವೆ ಜಾಗತಿಕವಾಗಿ ಮದ್ಯಸೇವನೆಯ ಪ್ರಮಾಣ ಹೇಗಿದೆ ಎಂಬ ಬಗ್ಗೆ 189 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿದ ಬಳಿಕ ಬಿಡುಗಡೆಗೊಳಿಸಲಾದ ಈ ವರದಿಯ ಅಂಶಗಳೇನೂ ಆಶಾದಾಯಕವಾಗಿಲ್ಲ. 2025ರ ವೇಳೆಗೆ ಮದ್ಯ ಸೇವನೆಯ ಪ್ರಮಾಣವನ್ನು ಶೇ. 10 ರಷ್ಟು ಕಡಿಮೆಗೊಳಿಸಲು ವಿಶ್ವಸಂಸ್ಥೆ ಒಂದು ಕಡೆ ಗುರಿ ಇಟ್ಟುಕೊಂಡಿದ್ದರೆ ಇನ್ನೊಂದು ಕಡೆ ಈ ಗುರಿಯನ್ನು ಅಪಹಾಸ್ಯ ಮಾಡುವಂತೆ ಮದ್ಯ ಸೇವನೆಯ ಪ್ರಮಾಣದಲ್ಲಿ ಏರಿಕೆ ಆಗುತ್ತಲೇ ಇದೆ. ವಿಶೇಷ ಏನೆಂದರೆ, 1990ಕ್ಕೂ ಮೊದಲು ಶ್ರೀಮಂತ ರಾಷ್ಟ್ರಗಳಲ್ಲಿ ಮದ್ಯ ಸೇವನೆಯ ಪ್ರಮಾಣ ಅಧಿಕವಿರುತ್ತಿತ್ತು. ಆದರೆ ಆ ಬಳಿಕದ ಈ ಎರಡೂವರೆ ದಶಕಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿದೆ. ಹೆಚ್ಚು ಆದಾಯಕ್ಕೂ ಮದ್ಯ ಸೇವನೆಗೂ ಸಂಬಂಧ ಇಲ್ಲ ಎಂಬ ಅಘಾತಕಾರಿ ಬದಲಾವಣೆಯೊಂದು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ. ಯುರೋಪ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ, ಚೀನಾ, ವಿಯೆಟ್ನಾಂ ಸೇರಿದಂತೆ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ತಲಾವಾರು ಆದಾಯ ಕಡಿಮೆ. ಆದರೆ, ಈ ರಾಷ್ಟ್ರಗಳಲ್ಲೇ ಈಗ ಮದ್ಯ ಸೇವನೆಯ ಪ್ರಮಾಣ ಹೆಚ್ಚಾಗಿದೆ ಎಂಬುದಾಗಿ ಅಧ್ಯಯನ ವರದಿ ಹೇಳುತ್ತಿದೆ. 1990 ರಿಂದ 2017ರ ತನಕ ಜಾಗತಿಕ ಮಟ್ಟದಲ್ಲಿ ಮದ್ಯ ಸೇವನೆಯಲ್ಲಿ ಶೇ. 70 ರಷ್ಟು ಹೆಚ್ಚಳವಾಗಿದೆ ಎಂಬ ದಂಗು ಬಡಿಸುವ ಸುದ್ದಿಯನ್ನು ದಿ ಲಾನ್ಸೆಟ್ ಜರ್ನಲ್ ಬಹಿರಂಗ ಪಡಿಸಿದೆ.
ಯಾವುದೇ ಒಂದು ವಸ್ತುವಿನ ಮಾರಾಟಕ್ಕೆ ಸರಕಾರ ಅನುಮತಿಯನ್ನು ಕೊಡುವಾಗ ಅದರ ಅಗತ್ಯ-ಅನಗತ್ಯಗಳ ಕುರಿತಂತೆ ಪರಾಮರ್ಶೆಯೊಂದು ಖಂಡಿತ ನಡೆಯುತ್ತದೆ. ಗಾಂಜಾ, ಅಫೀಮ್ ನಂತಹ ಮಾದಕ ವಸ್ತುಗಳನ್ನು ಯಾಕೆ ನಿಷೇಧಿಸಲಾಗಿದೆಯೆಂದರೆ, ಅದು ಜನರ ಆರೋಗ್ಯಕ್ಕೆ ಹಾನಿಕಾರಕ ಎಂಬುದರಿಂದ. ಮದ್ಯ ಸೇವನೆಯಿಂದ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ಸುಮಾರು 200ಕ್ಕೂ ಅಧಿಕ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆಯೆಂದು ದಿ ಲಾನ್ಸೆಟ್ ಜರ್ನಲ್ ಬಿಡುಗಡೆಗೊಳಿಸಿದ ವರದಿಯಲ್ಲೇ ಇದೆ. ಹಾಗಂತ, ಇದು ಈ ವರೆಗೆ ಗೊತ್ತಿಲ್ಲದ ಸಂಗತಿಯಲ್ಲ. ಮದ್ಯ ಸೇವನೆಯಿಂದ ಸಮಾಜದ ಆರೋಗ್ಯ ಕೆಡುತ್ತದೆ ಅನ್ನುವುದು ಅದನ್ನು ಸೇವಿಸುವವರಿಗೂ ಗೊತ್ತು. ಅದನ್ನು ಮಾರಾಟ ಮಾಡುವುದಕ್ಕೆ ಅನುಮತಿ ನೀಡಿರುವ ಸರಕಾರಕ್ಕೂ ಗೊತ್ತು. ಹಾಗಿದ್ದರೂ ಸರಕಾರ ಈ ಮದ್ಯ ಮಾರಾಟಕ್ಕೆ ಯಾಕೆ ಅನುಮತಿ ಕೊಟ್ಟಿದೆಯೆಂದರೆ ಅದರಿಂದ ಬರುವ ಬಹುದೊಡ್ಡ ಆದಾಯವನ್ನು ಪರಿಗಣಿಸಿ. ಈ ಆದಾಯವನ್ನು ಬಳಸಿಯೇ ಶಿಕ್ಷಕರಿಗೆ ವೇತನವೂ ಸೇರಿದಂತೆ ವಿವಿಧ ರೀತಿಯ ಕಾಮಗಾರಿ, ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ ಎಂಬ ಸಮರ್ಥನೆ ಕೇಳಿ ಬರುತ್ತಿದೆ. ನಿಜವಾಗಿ, ಪ್ರಶ್ನೆಯಿರುವುದು ಆದಾಯದ್ದಲ್ಲ, ಬದುಕಿನದ್ದು. ಶಿಕ್ಷಕರಿಗೋ ಅಭಿವೃದ್ಧಿ ಯೋಜನೆಗಳಿಗೋ ಹಣ ಸಂಗ್ರಹಿಸಬೇಕಾದದ್ದು ಜನರನ್ನು ಅನಾರೋಗ್ಯಕ್ಕೆ ತಳ್ಳಿಯೋ? ಸರಕಾರದ ಹೊಣೆಗಾರಿಕೆ ಏನು?
ಅನ್ನ, ಶಿಕ್ಷಣ ಮತ್ತು ಆರೋಗ್ಯ- ಇವು ಮೂರೂ ಜನರ ಪಾಲಿನ ಮೂಲಭೂತ ಬೇಡಿಕೆಗಳು. ಯಾವುದೇ ಸರಕಾರ ಇವುಗಳ ಲಭ್ಯತೆಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕೇ ಹೊರತು ಜನರ ಆರೋಗ್ಯವನ್ನು ನಾಶಮಾಡಿ ಅಭಿವೃದ್ಧಿ ನಡೆಸುವುದಲ್ಲ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಮದ್ಯಪಾನ ನಿಷೇಧ ಮಾಡಲಾಗಿತ್ತು. ಒಂದುವೇಳೆ, ಇವತ್ತಿಗೂ ಅದು ಮುಂದುವರಿದಿರುತ್ತಿದ್ದರೆ ಈ ಮಕ್ಕಳು ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ?
ಆದಾಯ ಮತ್ತು ಆರೋಗ್ಯ- ಈ ಎರಡರ ನಡುವೆ ಆಯ್ಕೆಯ ಪ್ರಶ್ನೆ ಬಂದಾಗಲೆಲ್ಲ ಸರಕಾರಗಳು ಅದಾಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಕೆಲವು ತಿಂಗಳುಗಳ ಹಿಂದೆ ಚಿತ್ರದುರ್ಗದಿಂದ ಮಹಿಳೆಯರ ಬೃಹತ್ ಪ್ರತಿಭಟನಾ ರ್ಯಾಲಿಯೊಂದು ಬೆಂಗಳೂರಿಗೆ ತಲುಪಿತ್ತು. ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳೆಯರು ತಮ್ಮೆಲ್ಲ ಕಷ್ಟಗಳನ್ನು ಕಡೆಗಣಿಸಿ ಕಾಲ್ನಡಿಯಲ್ಲಿ ಬೆಂಗಳೂರಿಗೆ ತಲುಪಿ ಮದ್ಯ ನಿಷೇಧಕ್ಕೆ ಒತ್ತಾಯ ಮಾಡಿದ್ದರು. ತಂತಮ್ಮ ಮನೆಯ ಪರಿಸ್ಥಿತಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು. ಪ್ರತಿ ಮನೆಯ ಕತೆಯೂ ಕರುಣಾಜನಕವೇ. ಕುಡಿತವು ಬರೇ ಕುಡಿದವರನ್ನಷ್ಟೇ ಕಾಡುವುದಲ್ಲ, ಅವರನ್ನು ಅವಲಂಬಿಸಿದವರನ್ನೂ ಕಾಡುತ್ತದೆ. ಒಂದು ಮನೆಯ ಪುರುಷ ಕುಡುಕನಾಗಿದ್ದರೆ ಆತನ ಮನೆಯ ಮಹಿಳೆ, ಮಕ್ಕಳು ಮತ್ತು ನೆರೆಕರೆಯವರೂ ಅದರ ಅಡ್ಡಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನೆಯ ಖರ್ಚು ವೆಚ್ಚಗಳಿಗೆ ವಿನಿಯೋಗವಾಗಬೇಕಿದ್ದ ದೊಡ್ಡದೊಂದು ಮೊತ್ತವು ಮದ್ಯದಂಗಡಿಯ ಡ್ರಾವರ್ ಸೇರಿಕೊಳ್ಳುತ್ತದೆ. ಮಕ್ಕಳ ಶೀಕ್ಷಣದ ಮೇಲೂ ಅದು ಪರಿಣಾಮವನ್ನು ಬೀರುತ್ತದೆ. ಈ ಬಗ್ಗೆ ಬೆಳಕು ಚೆಲ್ಲುವ ವರದಿಗಳು ನೂರಾರು ಬಂದಿವೆ. ಮದ್ಯಪಾನವನ್ನು ನಿಷೇಧಿಸಿ ಎಂದು ಜನರು ಅಸಂಖ್ಯ ಬಾರಿ ಬೀದಿಗಿಳಿದು ಒತ್ತಾಯಿಸಿದ್ದಾರೆ. ಆದರೆ ಸರಕಾರ ಕೈ ತಪ್ಪುವ ಭಾರೀ ಪ್ರಮಾಣದ ಆದಾಯವೊಂದನ್ನೇ ತೋರಿಸಿ ನಿರಾಕರಿಸುತ್ತಿದೆ. ಜನರ ಆರೋಗ್ಯವನ್ನು ಕಾಪಾಡುವುದನ್ನೇ ಆದ್ಯತೆಯಾಗಿ ಮಾಡಿಕೊಳ್ಳಬೇಕಿದ್ದ ಸರಕಾರಗಳು ಆದಾಯವನ್ನೇ ಆಧ್ಯತೆಯ ವಿಷಯವಾಗಿ ಆರಿಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ. ಇದು ಬದಲಾಗಬೇಕು. ಮದ್ಯದ ಆದಾಯಕ್ಕೆ ಬದಲಾಗಿ ಪರ್ಯಾದ ಆದಾಯ ಮೂಲವನ್ನು ಸರಕಾರ ಹುಡುಕಬೇಕು. ಈಗಾಗಲೇ ಬಿಹಾರದಂಥ ರಾಜ್ಯಗಳಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಈ ಬಗ್ಗೆ ರಾಜ್ಯ ಸರಕಾರ ಅಧ್ಯಯನ ನಡೆಸಬೇಕು. ಅಬಕಾರಿ ಕ್ಷೇತ್ರದ ಆದಾಯವಿಲ್ಲದೇ  ಬಿಹಾರದಲ್ಲಿ ಸರಕಾರ ನಡೆಯಬಹುದೆಂದಾದರೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು. ಮದ್ಯದ ಆದಾಯಕ್ಕೆ ಬದಲಾಗಿ ಪರ್ಯಾಯ ಆದಾಯ ಮೂಲವನ್ನು ಕಂಡುಕೊಳ್ಳುವ ಅವಕಾಶಗಳನ್ನು ತಜ್ಞರು ಮಂಡಿಸಬೇಕು. ಮದ್ಯ ಸೇವನೆಯು ಮಕ್ಕಳಿಗೆ ಅನ್ನದ ಬದಲು ಮಣ್ಣನ್ನು ತಿನ್ನಿಸುತ್ತದೆ. ಇದು ಹೃದಯ ವಿದ್ರಾವಕ. ಇದಕ್ಕೆ ಸರಕಾರವೇ ನೇರ ಹೊಣೆ.

Saturday, 18 May 2019

ಅರ್ಮಿನ್ ವೋಲ್ಫ್ ಎಂಬ ಉಗ್ರವಾದಿ ಮತ್ತು ವಿಲಿಮಿಸ್ಕಿ ಎಂಬ ದೇಶಪ್ರೇಮಿ



      ಆಸ್ಟ್ರಿಯಾದಲ್ಲಿ ಇತ್ತೀಚೆಗೆ ನಡೆದಿರುವ ಮತ್ತು ನಡೆಯುತ್ತಿರುವ ಬೆಳವಣಿಗೆಗಳು ಭಾರತೀಯ ಪರಿಸ್ಥಿತಿಗೆ ಬಹಳವಾಗಿ ಹೋಲುತ್ತದೆ. ಯುರೋಪಿಯನ್ ಯೂನಿಯನ್‍ನ ಸದಸ್ಯ ರಾಷ್ಟ್ರವಾಗಿರುವ ಆಸ್ಟ್ರಿಯಾದಲ್ಲಿ ಮೈತ್ರಿ ಸರಕಾರವಿದೆ. ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹೊಂದಿರುವ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾವು ಈ ಮೈತ್ರಿ ಸರಕಾರದ ಪಾಲುದಾರ ಪಕ್ಷ. ಯುರೋಪಿಯನ್ ಯೂನಿಯನ್‍ನ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿರುವ ಈ ಪಕ್ಷದ ಹೆರಾಲ್ಡ್ ವಿಲಿಮಿಸ್ಕಿಯನ್ನು ಇತ್ತೀಚೆಗೆ ಅಲ್ಲಿನ ಹೆಸರಾಂತ ಟಿವಿ ನಿರೂಪಕ ಅರ್ಮಿನ್ ವೋಲ್ಫ್ ಸಂದರ್ಶನ ನಡೆಸಿದರು. ಅರ್ಮಿನ್ ವೋಲ್ಫ್ ರು ಆಸ್ಟ್ರಿಯಾದ ಅತ್ಯಂತ ಗೌರವಾನ್ವಿತ ಮತ್ತು ಜನಪ್ರಿಯ ಟಿ.ವಿ. ನಿರೂಪಕ. ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾ ಪಕ್ಷವು ನಡೆಸುತ್ತಿರುವ ಚುನಾವಣಾ ಪ್ರಚಾರ ವೈಖರಿಯನ್ನು ಸಂದರ್ಶನದ ವೇಳೆ ವಿಲಿಮಿಸ್ಕಿಯವರಲ್ಲಿ ವೋಲ್ಫ್ ಪ್ರಶ್ನಿಸಿದರು. ಮುಖ್ಯವಾಗಿ, ಇಸ್ಲಾಮೋಫೋಬಿಯ(ಇಸ್ಲಾಮ್ ಭೀತಿ)ವನ್ನು ಬಿತ್ತುವ ಮತ್ತು ಜನಾಂಗೀಯವಾದವನ್ನು ಬೆಳೆಸುವ ವ್ಯಂಗ್ಯ ಚಿತ್ರವನ್ನು ಪಕ್ಷದ ಪ್ರಕಟಣೆಗಳಲ್ಲಿ ಬಳಸಿರುವುದನ್ನು ಅವರು ಬೊಟ್ಟು ಮಾಡಿದರು. ವಿಲಿಮಿಸ್ಕಿಯವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಅರ್ಮಿನ್ ವೋಲ್ಫ್ ಅವರು ಹಿಟ್ಲರ್ ಕಾಲದ ಚಿತ್ರಗಳನ್ನು ಅವರ ಮುಂದೆ ಪ್ರದರ್ಶಿಸಿದರು. ಯಹೂದಿಯರನ್ನು ಇದೇ ರೀತಿಯಲ್ಲಿ ಹಿಟ್ಲರ್ ಬಿಂಬಿಸಿರುವುದನ್ನು ಎತ್ತಿ ಹಿಡಿದರು. ಈ ಎರಡರಲ್ಲಿ ಏನು ವ್ಯತ್ಯಾಸವಿದೆ ಎಂದು ಅವರು ಪ್ರಶ್ನಿಸಿದರು. ತಕ್ಷಣ ವಿಲಿಮಿಸ್ಕಿ ಸಿಟ್ಟಾದರು. ನೀನಿದರ ಪರಿಣಾಮವನ್ನು ಎದುರಿಸುವೆ ಎಂದು ಬೆದರಿಕೆ ಹಾಕಿದರು. ಅಂದಿನಿಂದ ಅಸ್ಟ್ರಿಯಾದ ವೈಸ್ ಚಾನ್ಸಲರ್ ಹೈನ್ ಕ್ರಿಸ್ಚಿಯನ್ ಸ್ಟ್ರಾಚೆಯೂ ಸೇರಿದಂತೆ ಫ್ರೀಡಂ ಪಾರ್ಟಿ ಆಫ್ ಆಸ್ಟ್ರಿಯಾದ ರಾಜಕಾರಣಿಗಳು ಮತ್ತು ಬೆಂಬಲಿಗರು ಅತ್ಯಂತ ನಿಂದನೀಯ ಭಾಷೆಯಲ್ಲಿ ಅರ್ಮಿನ್ ವೋಲ್ಫ್ ರನ್ನು ಜರೆಯುತ್ತಿದ್ದಾರೆ.  ಅವನು ಎಡಪಂಥೀಯ ಉಗ್ರಗಾಮಿ, ದೇಶದ್ರೋಹಿ ಎಂದೆಲ್ಲಾ ಅಪಮಾನಕರ ಭಾಷೆಯಲ್ಲಿ ಜರೆಯುತ್ತಿರುವವರಲ್ಲದೇ, ವೋಲ್ಫ್ ರನ್ನು ವಜಾ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಹಾಗಂತ,
ಕಳೆದ ಶುಕ್ರವಾರ ಆಚರಿಸಲಾದ ವಿಶ್ವ ಪತ್ರಿಕಾ ದಿನಾಚಣೆಯ ಆಸುಪಾಸಿನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿರುವುದನ್ನು ನಾವು ಅಚ್ಚರಿಯಿಂದ ನೋಡಬೇಕಿಲ್ಲ. ಬಲಪಂಥೀಯ ವಿಚಾರಧಾರೆಯು ಟೀಕೆಯನ್ನೇ ಒಪ್ಪದ ರೀತಿಯಲ್ಲಿ ವರ್ತಿಸುತ್ತಿರುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರಗಳು ಸಾಕ್ಷ್ಯ ವಹಿಸಿವೆ. ಟೀಕೆಗೆ ಪ್ರತಿಯಾಗಿ ನಿಂದನೆ, ಅವಮಾನ, ಬೆದರಿಕೆ, ಹಲ್ಲೆ ಮತ್ತು ಚಾರಿತ್ರ್ಯಹರಣದ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹಂಚುವುದು ಇತ್ಯಾದಿಗಳನ್ನು ಎಗ್ಗಿಲ್ಲದೇ ಮಾಡಲಾಗುತ್ತಿದೆ. ವಿಶ್ವ ಪತ್ರಿಕಾ ದಿನಾಚಣೆಯ ಸಮಯದಲ್ಲೇ `ರಿಪೋರ್ಟರ್ಸ್ ವಿದೌಟ್ ಬಾರ್ಡ್‍ರ್ಸ್’ ಸಂಸ್ಥೆಯ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ವಿವಿಧ ರಾಷ್ಟ್ರಗಳ ಸ್ಥಾನಮಾನ ಹೇಗಿದೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 2018ರಲ್ಲಿ 11ನೇ ಸ್ಥಾನದಲ್ಲಿದ್ದ ಆಸ್ಟ್ರಿಯಾವು ಈಗ 16ನೇ ಸ್ಥಾನಕ್ಕೆ ಕುಸಿದಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕುಸಿತ ಕಾಣಲಿದೆ ಎಂದು ಈಗಾಗಲೇ ತಜ್ಞರು ಹೇಳುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಭಾರತದ ಸ್ಥಾನಮಾನವೂ ಕುಸಿತದ ದಾರಿಯಲ್ಲೇ ಸಾಗಿದೆ. ಒಟ್ಟು 180 ರಾಷ್ಟ್ರಗಳ ಮೇಲೆ `ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್' ಸಂಸ್ಥೆಯು ಅಧ್ಯಯನ ನಡೆಸುತ್ತಿದ್ದು ಅದರಲ್ಲಿ 2017ರಲ್ಲಿ ಭಾರತವು 136ನೇ ಸ್ಥಾನದಲ್ಲಿತ್ತು. 2018ಕ್ಕಾಗುವ ಎರಡು ಸ್ಥಾನಗಳ ಕುಸಿತವನ್ನು ಕಂಡು 138ಕ್ಕೆ ಇಳಿಯಿತು. ಈಗ 140ನೇ ಸ್ಥಾನದಲ್ಲಿದೆ.
ವಿಶ್ವ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಮತ್ತು ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿರುವ ಭಾರತವು ಪತ್ರಿಕಾ ಸ್ವಾತಂತ್ರ್ಯದ ಪಟ್ಟಿಯಲ್ಲಿ 140ನೇ ಸ್ಥಾನದಲ್ಲಿರುವುದು ಖಂಡಿತ ಅವಮಾನಕರ ಸಂಗತಿ. ಇದಕ್ಕೆ ಕಾರಣವೇನು ಅನ್ನುವುದನ್ನು ಅವಲೋಕಿಸಬೇಕಾದ ತುರ್ತು ಅಗತ್ಯ ಈಗಿನದು. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ನೆಲೆಸಿರುವ ವಾತಾವರಣವನ್ನು ಗಂಭೀರವಾಗಿ ಅವಲೋಕಿಸಿದರೆ ಇದಕ್ಕೆ ಒಂದು ಹಂತದವರೆಗೆ ಉತ್ತರ ಲಭ್ಯವಾಗಬಹುದು. ಆಡಳಿತ ಪಕ್ಷವಾದ ಬಿಜೆಪಿಯ ರಾಜಕಾರಣಿಗಳು ಮತ್ತು ಬೆಂಬಲಿಗರ ಭಾಷೆ ಈ ಐದು ವರ್ಷಗಳಲ್ಲಿ ಎಷ್ಟು ಕಳಪೆ ದರ್ಜೆಯನ್ನು ಹೊಂದಿವೆ ಎಂದರೆ, ಭಾರತದ ಭವ್ಯ ಸಂಸ್ಕೃತಿಗೆ ಯಾವ ಮಟ್ಟದಲ್ಲೂ ಅದು ತಾಳೆಯಾಗಲಾರದು. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದರೆ ಪ್ರತಿಯಾಗಿ ಬೈಗುಳು ನಿಂದನೆ, ಅಮಾನ, ಬೆದರಿಕೆಗಳೇ ಸಿಗುತ್ತವೆ. ಬಿಜೆಪಿಗೆ ಸಂಬಂಧಿಸಿ ಮಾಧ್ಯಮಗಳು ಯಾವ ತನಿಖಾ ಬರಹವನ್ನೂ ಬರೆಯಬಾರದು ಎಂಬ ರೀತಿಯ ವರ್ತನೆಯೊಂದು ಬಿಜೆಪಿ ಮತ್ತು ಅದರ ಬೆಂಬಲಿಗರಲ್ಲಿದೆ. ಅಮಿತ್ ಶಾ ಅವರ ಮಗನಿಗೆ ಸಂಬಂಧಿಸಿದ ತನಿಖಾ ವರದಿ, ರಕ್ಷಣಾ ಸಲಹೆಗಾರ ಅಜಿತ್ ಧೋವಲ್‍ರ ಮಕ್ಕಳಿಗೆ ಸಂಬಂಧಿಸಿದ ವರದಿ ಮತ್ತು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಹೇಗೆ ಸ್ವೀಕರಿಸಿದೆ ಎಂಬುದು ಈಗ ಜಗಜ್ಜಾಹೀರು. ಬೋಫೋರ್ಸ್ ಅವ್ಯವಹಾರವನ್ನು ಭಾರೀ ಉತ್ಸಾಹದಿಂದ ದೇಶದೆಲ್ಲೆಡೆ ಹಂಚಿದ್ದ ಪಕ್ಷವೇ ರಫೇಲ್ ಮತ್ತಿತರ ವ್ಯವಹಾರಗಳ ಬಗ್ಗೆ ವರದಿಯನ್ನಾಗಲಿ, ಟೀಕೆಯನ್ನಾಗಲಿ ಸಹಿಸುವುದಿಲ್ಲ ಎಂದರೆ ಏನರ್ಥ? ಮುಸ್ಲಿಮರ ಬಗೆಗೆ ಬಿಜೆಪಿ ನಾಯಕರು ಮತ್ತು ಅದರ ಬೆಂಬಲಿಗರು ಆಗಾಗ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನೂ ಇಲ್ಲಿ ಪರಿಶೀಲನೆಗೊಡ್ಡಬಹುದು. ಮುಸ್ಲಿಮ್ ನಿಂದನೆಯನ್ನೇ ರಾಜಕೀಯ ರಣ ತಂತ್ರವಾಗಿ ಬಿಜೆಪಿ ಸ್ವೀಕರಿಸಿಕೊಂಡಿದೆ ಅನ್ನುವುದನ್ನು ಅಚ್ಚರಿಯ ರೀತಿಯಲ್ಲಿ ಇವತ್ತು ಹೇಳಬೇಕಿಲ್ಲ. ಈ ದೇಶದ ಪ್ರತಿ ಪ್ರಜೆಗೂ ಅದು ಗೊತ್ತಿದೆ. ಮುಸ್ಲಿಮ್ ವಿರೋಧಿ ಭಾಷಣ ಮಾಡಿದವರು, ಮಸೀದಿ ಒಡೆದ ಆರೋಪ ಇರುವವರು, ಮುಸ್ಲಿಮರ ಮತವೇ ಬೇಕಾಗಿಲ್ಲ ಅನ್ನುವವರು... ಹೀಗೆ ವಿಭಿನ್ನ ದಾಟಿಯಲ್ಲಿ ಮುಸ್ಲಿಮ್ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುವವರನ್ನೇ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಅದೇವೇಳೆ, ಹಿಂದೂ ಧರ್ಮವನ್ನು ಅವಮಾನಿಸುವ, ಹಿಂದೂ ಧರ್ಮದ ಆಚರಣೆಗಳನ್ನು ಪ್ರಶ್ನಿಸುವ ಮತ್ತು ಮಂದಿರದಂಥ ಆರಾಧನಾಲಯಗಳನ್ನು ಒಡೆದ ಆರೋಪ ಇರುವವರಿಗೆ ಅದು ಟಿಕೆಟನ್ನು ನೀಡುತ್ತಲೂ ಇಲ್ಲ. ತನ್ನ ವಿರುದ್ಧದ ಟೀಕೆಯನ್ನು ಸಹಿಸಲು ಸಿದ್ಧರಿರದ ಮತ್ತು ಅಲ್ಪಸಂಖ್ಯಾತರನ್ನು ಟೀಕಿಸಿದರೆ ಪಾರಿತೋಷಕ ಕೊಡುವ ನೀತಿಯೊಂದನ್ನು ಬಿಜೆಪಿ ಅಳವಡಿಸಿಕೊಂಡಿದೆ ಅನ್ನುವುದಕ್ಕೆ ಇವೂ ಸಹಿತ ನೂರಾರು ಆಧಾರಗಳು ಇವೆ. ಉಗ್ರ ಬಲಪಂಥೀಯ ವಿಚಾರಧಾರೆ ಎಂದರೆ ಹೀಗೆಯೇ. ಅದು ಟೀಕೆಯನ್ನು ಸಹಿಸುವುದಿಲ್ಲ. ಬಹುಸಂಖ್ಯಾತ ಪಕ್ಷಪಾತಿಯಾಗಿ ಮತ್ತು ಅಲ್ಪಸಂಖ್ಯಾತ ವಿರೋಧಿಯಾಗಿ ಅದು ಗುರುತಿಸಿಕೊಳ್ಳುತ್ತದೆ. ಟೀಕೆಗೆ ಪ್ರತಿಯಾಗಿ ನಿಂದನೆ ಮತ್ತು ಅಪಾಹಾಸ್ಯವನ್ನು ನೀಡುತ್ತದೆ. ವಿರೋಧಿಗಳನ್ನು ಸಂದರ್ಭಾನುಸಾರ ಉಗ್ರವಾದಿಯೆಂದೋ, ಪರಾವಲಂಬಿಯೆಂದೋ, ನುಸುಳುಕೋರರು, ವಲಸೆಗಾರರೆಂದೋ ಕರೆದು, ಜರೆದು ತನ್ನ ಪರವಾದ ರಾಜಕೀಯ ವಾತಾವರಣವನ್ನು ನಿರ್ಮಿಸಿಕೊಳ್ಳ ಬಯಸುತ್ತದೆ. ಕಳೆದ ಐದು ವರ್ಷಗಳಲ್ಲಿ ಈ ದೇಶದ ವಿವಿಧ ಪತ್ರಿಕೆಗಳ ಪುಟಗಳಲ್ಲಿ ಪ್ರಕಟವಾದ ಸುದ್ದಿ-ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಚರ್ಚೆಗಳು ಇದಕ್ಕೆ ಉತ್ತಮ ಪುರಾವೆಯಾಗಿದೆ.
ಆಸ್ಟ್ರೀಯಾದ ಟಿವಿ ನಿರೂಪಕ ಅರ್ಮಿನ್ ವೋಲ್ಫ್ ಇದರ ಇತ್ತೀಚಿನ ಉದಾಹರಣೆ ಅಷ್ಟೇ. ಭಾರತದಲ್ಲಂತೂ ವಿಲಿಮಿಸ್ಕಿಯಂಥ ರಾಜಕಾರಣಿಗಳು ಮತ್ತು ಪ್ರತಿಭಟನಾ ನಿರತ ಅವರ ಬೆಂಬಲಿಗರಂಥವರು ಧಾರಾಳ ಇದ್ದಾರೆ.

ಹೊರಗೆ ಬಿಳಿ, ಒಳಗೆ ಕತ್ತಲು



‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’
ಇದು ಪವಿತ್ರ ಕುರ್‍ಆನ್‍ನಲ್ಲಿ ನಮೂದಾಗಿರುವ ಒಂದು ಪ್ರಶ್ನೆ. ಹೀಗೆ ಪ್ರಶ್ನಿಸಿದವರು ಪ್ರವಾದಿ ಮೂಸಾ(ಅ). ಪ್ರಶ್ನೆಯನ್ನು ಎದುರಿಸಿದವನು ದೊರೆ ಫಿರ್‍ಔನ್. ಹೀಗೆ ಪ್ರಶ್ನಿಸಬೇಕೆಂದು ಆದೇಶ ಕೊಟ್ಟವನು ಅಲ್ಲಾಹ್. ಪವಿತ್ರ ಕುರ್‍ಆನಿನ ಅನ್ನಾಝಿಆತ್  ಅಧ್ಯಾಯದ 18ನೇ ವಚನದಲ್ಲಿ ಈ ಬಗ್ಗೆ ಉಲ್ಲೇಖವಿದೆ. ನಿಜವಾಗಿ, ಪುರಾತನ ಕಾಲದ ಫಿರ್‍ಔನ್‍ಗೆ ಮಾತ್ರ ಅನ್ವಯಿಸಿ ನೋಡಬೇಕಾದ ಪ್ರಶ್ನೆಯಲ್ಲ ಇದು. ಈ ಪ್ರಶ್ನೆ ಸಾರ್ವಕಾಲಿಕ. ಪ್ರತಿ ವ್ಯಕ್ತಿಯೂ ತನ್ನ ಜೊತೆ ಇಂಥದ್ದೊಂದು ಪ್ರಶ್ನೆಯನ್ನು  ಕೇಳಿಕೊಳ್ಳಲೇಬೇಕು ಮತ್ತು ತನ್ನ ಹೃದಯ ಯಾವ ಬಗೆಯಲ್ಲಿ ಈ ಪ್ರಶ್ನೆಗೆ ಪ್ರತಿಕ್ರಿಯಿಸುತ್ತದೆ ಅನ್ನುವುದನ್ನು ಪರಿಶೀಲಿಸಬೇಕು. ‘ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ?’ ಎಂದು ಫಿರ್‍ಔನ್‍ನಲ್ಲಿ ಪ್ರವಾದಿ ಮೂಸಾ(ಅ)ರು ಪ್ರಶ್ನಿಸುವುದಕ್ಕೆ ಎರಡು  ಪ್ರಮುಖ ಕಾರಣಗಳಿದ್ದುವು. 1. ಫಿರ್‍ಔನ್ ಸೃಷ್ಟಿಕರ್ತನನ್ನು ನಿರಾಕರಿಸಿ ಬದುಕುತ್ತಿದ್ದ. 2. ಸೃಷ್ಟಿಗಳ ಮೇಲೆ ಹಿಂಸೆಯೆಸಗುತ್ತಿದ್ದ. ಅಲ್ಲಾಹನ ಪ್ರಕಾರ ಇವೆರಡೂ ಪರಿಶುದ್ಧತೆಗೆ ವಿರುದ್ಧ. ಈ ಬಗ್ಗೆ ಪವಿತ್ರ ಕುರ್‍ಆನ್‍ನಲ್ಲಿ ಬೇರೆ ಕೆಲವು ಉಲ್ಲೇಖಗಳೂ ಇವೆ.  ‘ಪರಿಶುದ್ಧ ಹೃದಯದ ಹೊರತು ಸೊತ್ತು-ಸಂತಾನಗಳಾವುವೂ ನಾಳೆ ಪರಲೋಕದಲ್ಲಿ ಫಲಕಾರಿಯಾಗುವುದಿಲ್ಲ’ ಎಂದು ಅಶ್ಶುಅರಾ ಅಧ್ಯಾಯದ 88-89ನೇ ವಚನದಲ್ಲಿ ಅಲ್ಲಾಹನು ಹೇಳಿದ್ದಾನೆ. ‘ಯಾರು ಆತ್ಮವನ್ನು ಪರಿಶುದ್ಧಗೊಳಿಸಿಕೊಂಡನೋ  ಅವನು ವಿಜಯಿಯಾದನು’ ಎಂದು ಅಶ್ಶಮ್ಸ್ ಅಧ್ಯಾಯದ 9ನೇ ವಚನದಲ್ಲಿ ಹೇಳಲಾಗಿದೆ. ‘ಪ್ರವಾದಿ ಇಬ್ರಾಹೀಮರು ತನ್ನ ಪ್ರಭುವಿನ ಸನ್ನಿಧಿಗೆ ಪರಿಶುದ್ಧ ಮನಸ್ಸಿನಿಂದ ಬಂದರು’ ಎಂಬ ಉಲ್ಲೇಖವು ಪವಿತ್ರ ಕುರ್‍ಆನಿನ ಅಸ್ಸಾಫ್ಫಾತ್ ಅಧ್ಯಾಯದ  37ನೇ ವಚನದಲ್ಲಿದೆ. ‘ಪರಿಶುದ್ಧತೆಯನ್ನು ಕೈಗೊಂಡವನು ಯಶಸ್ವಿಯಾದನು’ ಎಂದು ಅಲ್ ಅಅïಲಾ ಅಧ್ಯಾಯದ 14ನೇ ವಚನವು ಹೇಳುತ್ತದೆ. ಅಂದಹಾಗೆ, ಈ ಎಲ್ಲ ವಚನಗಳಲ್ಲಿ ಪರಿಶುದ್ಧತೆಯ ಬೇರೆ ಬೇರೆ ವ್ಯಾಖ್ಯಾನಗಳಿವೆ. ಫಿರ್‍ಔನನಲ್ಲಿ ಯಾವ  ಎರಡು ಕೆಟ್ಟ ಗುಣಗಳಿದ್ದುವೋ ಅವು ಮಾತ್ರ ಅಪರಿಶುದ್ಧತೆಯ ಮಾನದಂಡ ಅಲ್ಲ. ಸೊತ್ತು ಮತ್ತು ಸಂತಾನಗಳ ಮೇಲಿನ ಅತಿ ವ್ಯಾಮೋಹವೂ ಹೃದಯವನ್ನು ಅಶುದ್ಧಗೊಳಿಸಬಹುದು. ಪರಿಶುದ್ಧಗೊಳ್ಳಬೇಕಾದುದರ ಪಟ್ಟಿಯಲ್ಲಿ ಆತ್ಮವೂ ಇದೆ.  ಆತ್ಮವೂ ಕಳಂಕಕ್ಕೆ ಒಳಗಾಗಬಹುದು. ಅಪರಿಶುದ್ಧಗೊಳ್ಳಬಹುದು. ಒಂದು ರೀತಿಯಲ್ಲಿ, ಪರಿಶುದ್ಧ ಅನ್ನುವುದು ಬದುಕಿನ ಯಾವುದಾದರೊಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಬೇಕಾದ ಪದವಲ್ಲ. ಓರ್ವ ವ್ಯಕ್ತಿ ಅಡಿಯಿಂದ ಮುಡಿವರೆಗೆ  ಬಿಳಿಯಾಗುವುದು ಎಂದು ಸರಳವಾಗಿ ಇದನ್ನು ವಿವರಿಸಬಹುದು. ಬಿಳಿ ಎಂಬುದು ಶುದ್ಧತೆಯ ಪ್ರತೀಕ. ಶುಕ್ರವಾರದಂದು ಮುಸ್ಲಿಮರಲ್ಲಿ ಬಹುತೇಕರೂ ಬಿಳಿ ಬಟ್ಟೆಯನ್ನು ಧರಿಸುತ್ತಾರೆ. ಮೃತದೇಹದ ಮೇಲೂ ಬಿಳಿ ಬಟ್ಟೆಯನ್ನು ಹೊದೆಸಲಾಗುತ್ತದೆ.  ಸದ್ಯದ ಅಗತ್ಯ ಏನೆಂದರೆ, ಬಾಹ್ಯವಾಗಿರುವ ಈ ಬಿಳಿಯನ್ನು ಆಂತರಿಕವಾಗಿ ಸ್ವೀಕರಿಸಿಕೊಳ್ಳುವುದು. ಹೊರಗಿನ ವೇಷ ವಿಧಾನಗಳು ಹೇಗೆ ಬಿಳಿಯೋ ಹಾಗೆಯೇ ಒಳಗಿನ ಭಾವ-ಬಿಂಬಗಳೂ ಬಿಳಿ ಎಂಬುದನ್ನು ಸಾರಲು ಯಾವ P್ಷÀಣದಲ್ಲೂ ನಾವು  ಸಿದ್ಧವಾಗಿರುವುದು. ಇದು ಸುಲಭ ಅಲ್ಲ. ಒಳ್ಳೆಯವರಂತೆ ನಟಿಸುವುದಕ್ಕೂ ಒಳ್ಳೆಯವರಾಗುವುದಕ್ಕೂ ವ್ಯತ್ಯಾಸ ಇದೆ. ಕಷ್ಟವೂ ಇದೆ. ನಟನೆ ಈ ಜಗತ್ತಿನಲ್ಲಿ ಸುಲಭ. ಅದೊಂದು ಕಲೆ. ಈ ಕಲೆಯನ್ನು ಕರಗತ ಮಾಡಿಕೊಂಡ ವ್ಯಕ್ತಿಯೋರ್ವ ಅಪರಿ ಶುದ್ಧನಾಗಿದ್ದೂ ಪರಿಶುದ್ಧನಂತೆ ಜನರನ್ನು ನಂಬಿಸಿ ಬಿಡಬಲ್ಲ. ತನ್ನ ಈ ಕಲೆಯನ್ನು ಬಳಸಿ ವಿವಿಧ ಸ್ಥಾನ-ಮಾನಗಳನ್ನು ಪಡೆಯಬಲ್ಲ. ಆದರೆ ಇದು ಪರಿಪೂರ್ಣ ಯಶಸ್ಸಲ್ಲ ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಯಶಸ್ಸು ಯಾವುದರಲ್ಲಿ ಅಡಗಿದೆ  ಎಂದರೆ, ಹೊರಗೆ ಕಾಣದ ಹೃದಯವನ್ನು ಕಾಮ, ಕ್ರೋಧ, ಮೋಹ, ಲೋಭಗಳಾದಿಯಾಗಿ ಎಲ್ಲ ಕೆಡುಕುಗಳಿಂದಲೂ ಪರಿಶುದ್ಧಗೊಳಿಸುವುದು. ಹೊರಗೊಂದು ಒಳಗೊಂದು ಎಂಬ ವೇಷವನ್ನು ಕಳಚಿಡುವುದು. ಅಪ್ಪಟ ಪಾರದರ್ಶಕ ಬದುಕನ್ನು  ಬದುಕುವುದು. ರಮಝಾನ್ ತಿಂಗಳ ಉಪವಾಸ ವ್ರತದ ಬಹುಮುಖ್ಯ ಉದ್ದೇಶ ಇದು. ಉಪವಾಸಿಗರೆಲ್ಲರ ಹೃದಯವನ್ನು ಪರಿಶುದ್ಧಗೊಳಿಸುವ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ ಇದು. ಇದರರ್ಥ ವಿಶ್ವಾಸಿಗಳಲ್ಲಿ ಯಾರೂ ಪರಿಶುದ್ಧರಿಲ್ಲ ಎಂದಲ್ಲ.  ಇದೊಂದು ಅಭಿಯಾನ. ಜಾಗೃತಿ ಕಾರ್ಯಕ್ರಮ. ಒಂದು ತಿಂಗಳ ವರೆಗೆ ಈ ಜಾಗೃತಿ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ. ಪ್ರತಿದಿನವೂ ಪ್ರತಿಕ್ಷಣವೂ ‘ಪರಿಶುದ್ಧರಾಗಿ’ ಎಂಬ ಸಂದೇಶವನ್ನು ಈ ಒಂದು ತಿಂಗಳು ಉಪವಾಸಿಗರಲ್ಲಿ ಸಾರುತ್ತಲೇ ಇರುತ್ತದೆ.  ಹಸಿವು ಈ ಸಂದೇಶವನ್ನು ಪ್ರಬಲಗೊಳಿಸುವ ಒಂದು ಆಯುಧ ಮಾತ್ರ. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯಾರೆಲ್ಲ ಮನಃಪೂರ್ವಕ ಭಾಗಿಯಾಗುತ್ತಾರೋ ಅವರು ಪರಿಶುದ್ಧರಾಗುತ್ತಾರೆ. ಅಡಿಯಿಂದ ಮುಡಿವರೆಗೆ ಬಿಳಿಯಾಗುತ್ತಾರೆ. ಯಾರು ವೇಷ  ಕಟ್ಟುತ್ತಾರೋ ಅವರು ಹೊರಗಡೆಗೆ ಮಾತ್ರ ಬಿಳಿಯಾಗುತ್ತಾರೆ. ಒಳಗಡೆ ಕತ್ತಲೆಯಿರುತ್ತದೆ.
ಇನ್ನು ತೀರ್ಮಾನ ನಿಮ್ಮದು.

ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ತೆರೆದಿರುವುದು ಬಾಯಲ್ಲ, ಬಾಗಿಲು


 

ಶ್ರೀಲಂಕಾದಲ್ಲಿ ನಡೆದ ಭೀಕರ ಭಯೋತ್ಪಾದನಾ ಕೃತ್ಯಕ್ಕಿಂತ ಒಂದು ವಾರ ಮೊದಲು ನಮ್ಮ ದೇಶದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆಯಿತು. ಈ ಬೆಳವಣಿಗೆಯ ಸೂತ್ರಧಾರ ಬಿಜೆಪಿ. ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪದಲ್ಲಿ ವರ್ಷಗಳ ಕಾಲ ಜೈಲಲ್ಲಿದ್ದ ಪ್ರಜ್ಞಾಸಿಂಗ್ ಠಾಕೂರ್‍ಳನ್ನು ಅದು ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ನೇಮಿಸಿತು. ಆ ಬಳಿಕ ಆಕೆ ನೀಡಿದ ಹೇಳಿಕೆಯು- ಭಾರತೀಯರು ಈವರೆಗೆ ನಂಬಿಕೊಂಡು ಬಂದಿದ್ದ ಮತ್ತು ಇಲ್ಲಿಯ ತನಿಖಾ ಸಂಸ್ಥೆಗಳು ನಂಬಿಸಿದ್ದ ಸಂಗತಿಗಳೆಲ್ಲವೂ ಪೊಳ್ಳು ಆಗಿರಬಹುದೇ ಎಂಬ ಸಂದೇಹವನ್ನು ಮೂಡಿಸಿದೆ. ನವೆಂಬರ್ 2011 (26/11)ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ರೂವಾರಿ ಪಾಕಿಸ್ತಾನ ಎಂಬುದು ಭಾರತೀಯರ ನಂಬಿಕೆ. ಈ ನಂಬಿಕೆಯನ್ನು ಹುಟ್ಟಿಸಿದ್ದು ಇಲ್ಲಿನ ತನಿಖಾ ಸಂಸ್ಥೆಗಳು. ಅಜ್ಮಲ್ ಕಸಬ್‍ನನ್ನು ಗಲ್ಲಿಗೇರಿಸುವ ಮೂಲಕ ಆ ದಾಳಿಗೆ ನ್ಯಾಯವನ್ನು ಒದಗಿಸಲಾಗಿದೆ ಎಂಬುದೂ ಈ ನಂಬಿಕೆಯ ಭಾಗ. ಹಾಗಂತ, ಈ ದಾಳಿಯ ಕುರಿತಂತೆ ಅನುಮಾನಗಳು ವ್ಯಕ್ತವಾಗಿರಲಿಲ್ಲ ಎಂದಲ್ಲ. ಮಾಲೆಗಾಂವ್ ಸ್ಫೋಟ, ಅಜ್ಮೀರ್ ದರ್ಗಾ ಸ್ಫೋಟ, ಸಂಜೋತಾ ಎಕ್ಸ್‍ಪ್ರೆಸ್ ರೈಲು ಸ್ಫೋಟ ಇತ್ಯಾದಿಗಳಲ್ಲಿ ಹಿಂದುತ್ವ ಭಯೋತ್ಪಾದನೆಯ ಭಯಾನಕ ಪಾತ್ರವನ್ನು ದೇಶದ ಮುಂದೆ ತೆರೆದಿಟ್ಟ ಹೇಮಂತ್ ಕರ್ಕರೆ, ಕಾಮ್ಟೆ ಮತ್ತು ಸಾಲಸ್ಕರ್‍ರಂಥ ಪ್ರಮುಖ ಪೊಲೀಸ್ ಅಧಿಕಾರಿಗಳು ಸಾಲುಸಾಲಾಗಿ ಈ ದಾಳಿಯಲ್ಲಿ ಯಾಕೆ ಬಲಿಯಾದರು ಅನ್ನುವ ಪ್ರಶ್ನೆ ಆಗಲೇ ಎದ್ದಿತ್ತು. ಕಾಂಗ್ರೆಸ್ ಮುಖಂಡ ಎ.ಆರ್. ಅಂತುಳೆಯವರು ಹೀಗೆ ಪ್ರಶ್ನಿಸಿದವರಲ್ಲಿ ಒಬ್ಬರು. ಆ ಬಳಿಕ ಮಹಾರಾಷ್ಟ್ರ ಪೊಲೀಸ್ ಮಹಾ ನಿರೀಕ್ಷಕರಾದ ಎಸ್.ಎಂ. ಮುಶ್ರಿಫ್ ಅವರು ದೊಡ್ಡಮಟ್ಟದಲ್ಲಿಯೇ ಈ ಪ್ರಶ್ನೆಗೆ ಬಲ ನೀಡಿದರು. ಮುಂಬೈ ದಾಳಿಯ ಸಂದರ್ಭದಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಕರ್ಕರೆ ಮತ್ತು ಅವರ ತಂಡದ ಹತ್ಯೆಗೂ ಮುಂಬೈ ದಾಳಿಗೂ ನೇರ ಸಂಬಂಧ ಇದೆಯೇ? ದಾಳಿಕೋರರು ಕರ್ಕರೆಯವರನ್ನು ಕೊಲ್ಲುವ ಯೋಜನೆ ಹಾಕಿಕೊಂಡಿದ್ದರೆ ಅಥವಾ ಆ ದಾಳಿಯ ಮರೆಯಲ್ಲಿ ಕರ್ಕರೆ ಮತ್ತು ತಂಡವನ್ನು ಹತ್ಯೆಗೈಯುವ ಸಂಚೊಂದು ಒಳಗಿನಿಂದಲೇ ನಡೆಯಿತೇ? ಕರ್ಕರೆ ಮತ್ತು ತಂಡವನ್ನು ಹತ್ಯೆಗೈದು ಮಾಲೆಗಾಂವ್ ಸಹಿತ ಅವರು ಬೆಳಕಿಗೆ ತಂದ ಇಡೀ ತನಿಖಾ ಫಲಿತಾಂಶವನ್ನೇ ಮುಚ್ಚಿ ಹಾಕುವುದಕ್ಕೆ ಆ ಮೊದಲೇ ಷಡ್ಯಂತ್ರವೊಂದು ನಡೆದಿತ್ತೇ? ಮುಂಬೈ ದಾಳಿಯ ಸಂದರ್ಭದಲ್ಲಿ ಆ ಷಡ್ಯಂತ್ರವನ್ನು ಜಾರಿಗೊಳಿಸಲಾಯಿತೇ.. ಇಂಥ ಪ್ರಶ್ನೆಗಳು ಆಗಲೂ ಈಗಲೂ ಹಾಗೆಯೇ ಉಳಿದುಕೊಂಡಿದೆ. ಛತ್ರಪತಿ ಶಿವಾಜಿ ರೈಲು ನಿಲ್ದಾಣದಲ್ಲಿ ಉಗ್ರರು ಗುಂಡು ಹಾರಿಸಿ ಹೊರಟು ಹೋದ ದಾರಿಗೂ ಅವರನ್ನು ಎದುರಿಸುವುದಕ್ಕಾಗಿ ಕರ್ಕರೆ ಸಾಗಿ ಹೋದ ದಾರಿಗೂ ಸಂಬಂಧ ಇಲ್ಲ ಎಂದು ಹೇಳಲಾಗುತ್ತದೆ. ಅವರನ್ನು ಉದ್ದೇಶಪೂರ್ವಕವಾಗಿ ತಪ್ಪು ದಾರಿಯಲ್ಲಿ ಸಾಗಿಸಿ ಹತ್ಯೆಗೈಯಲಾಗಿದೆ ಎಂದೂ ಹೇಳಲಾಗುತ್ತದೆ. ಕರ್ಕರೆ ಮತ್ತು ಅವರ ತಂಡದ ಹುತಾತ್ಮತೆಯ ಹಿನ್ನೆಲೆಯಲ್ಲಿ ಇಂಥ ಅನುಮಾನಗಳು ಇನ್ನೂ ಉಳಿದುಕೊಂಡಿರುವ ಈ ಹೊತ್ತಿನಲ್ಲಿ ಈ ಅನುಮಾನಗಳಿಗೆ ಪುಷ್ಠಿ ನೀಡುವಂತೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾಳೆ. ಆಕೆ ಕರ್ಕರೆಯ ಸಾವನ್ನು ಸಂಭ್ರಮಿಸಿದ್ದಾಳೆ. ತನ್ನ ಶಾಪದಿಂದ ಕರ್ಕರೆ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾಳೆ. ನೀನು ನಾಶವಾಗುತ್ತೀ ಎಂದು ನಾನು ಕರ್ಕೆರೆಗೆ ಹೇಳಿದ್ದೆ  ಎಂದೂ ಹೇಳಿದ್ದಾಳೆ. ಬಿಜೆಪಿಯು ಆಕೆಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡರೂ ತನ್ನ ಬೆಂಬಲಿಗರ ಮೂಲಕ ಆಕೆಯನ್ನು ಅದು ಪರೋಕ್ಷವಾಗಿ ಸಮರ್ಥಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಆಕೆಯ ಅಭ್ಯರ್ಥಿತನವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದಾರೆ. ಅವರ ಜೀವನ ಚರಿತ್ರೆಯನ್ನು ಬರೆದಿರುವ ಮಧುಕೀಶ್ವರ್ ಎಂಬವರು ಮೋದಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ‘ಕರ್ಕರೆ ಪಾಕಿಸ್ತಾನಕ್ಕಾಗಿ ಕೆಲಸ ಮಾಡುತ್ತಿದ್ದರು’ ಎಂದೂ ಹೇಳಿದ್ದಾರೆ. ಮುಂಬೈ ದಾಳಿಕೋರರನ್ನು ಸಾಯಿಸುವ ಹಾದಿಯಲ್ಲಿ ಜೀವವನ್ನೇ ಕಳಕೊಂಡ ಅಧಿಕಾರಿಯ ಬಗ್ಗೆ ಬಿಜೆಪಿಯ ಭಾವನೆ ಏನು ಅನ್ನುವುದು ಈ ಒಟ್ಟು ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ. ನಿಜವಾಗಿ, ಕರ್ಕರೆ ಮತ್ತು ಅವರ ತಂಡದ ಸಾವಿನ ಬಗ್ಗೆ ಮೊಟ್ಟಮೊದಲು ಪ್ರಶ್ನೆ ಎತ್ತಬೇಕಾಗಿದ್ದುದು ಬಿಜೆಪಿ. ಯಾಕೆಂದರೆ, ಮುಂಬೈ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು ಎಂಬ ಭಾಷೆಯಲ್ಲಿ ಅಂದು ಇದೇ ಬಿಜೆಪಿ ಮಾತಾಡಿತ್ತು. ಮನ್‍ಮೋಹನ್ ಸಿಂಗ್ ಸರಕಾರವನ್ನು ಅತ್ಯಂತ ತೀವ್ರವಾಗಿ ಅದು ತರಾಟೆಗೆ ತೆಗೆದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಕಟು ಮಾತುಗಳನ್ನಾಡಿತ್ತು. ಆದರೆ, ಈ ದೇಶದ ಬಹು ಬೆಲೆಬಾಳುವ ಕರ್ಕರೆ ಮತ್ತು ಅವರ ತಂಡದ ಸಾವಿಗೆ ಕಾರಣಗಳೇನು ಎಂಬ ಬಗ್ಗೆ ಪ್ರತ್ಯೇಕ ತನಿಖೆಗೆ ಅದು ಅಂದಿನಿಂದ ಇಂದಿನ ವರೆಗೆ ಒತ್ತಾಯಿಸಿಯೇ ಇಲ್ಲವಲ್ಲ, ಯಾಕೆ? ಕರ್ಕರೆಗೆ ದುರ್ಬಲ ಗುಂಡು ನಿರೋಧಕ ಜಾಕೆಟನ್ನು ಒದಗಿಸಿರುವ ಕುರಿತಂತೆ ಬಲವಾದ ಪ್ರಶ್ನೆಯನ್ನು ಅದು ಎಬ್ಬಿಸದೇ ಇರುವುದಕ್ಕೆ ಕಾರಣಗಳೇನು? ಇದರರ್ಥ ಈ ಘಟನೆಯಲ್ಲಿ ಬಿಜೆಪಿಗೆ ಪಾತ್ರ ಇದೆ ಎಂದಲ್ಲ. ಅದನ್ನು ತೀರ್ಮಾನಿಸಬೇಕಾದುದು ಈ ದೇಶದ ನ್ಯಾಯಾಂಗ. ಆದರೆ, ಸಾಧ್ವಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿರುವುದು ಮತ್ತು ಕರ್ಕರೆಯವರ ಹತ್ಯೆಯನ್ನು ಸಂಭ್ರಮಿಸಿ ಆಕೆ ಹೇಳಿಕೆ ನೀಡಿರುವುದನ್ನು ನೋಡುವಾಗ ಬಿಜೆಪಿ ಸಹಜವಾಗಿ ಕಟಕಟೆಯಲ್ಲಿ ನಿಲ್ಲುತ್ತದೆ. ಒಂದುವೇಳೆ, ಕರ್ಕರೆಯವರ ಪತ್ನಿ ಇವತ್ತು ಜೀವಂತವಿರುತ್ತಿದ್ದರೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಏನನ್ನುತ್ತಿದ್ದರೋ? ಸಾಧ್ವಿ ಪ್ರಜ್ಞಾ ಸಿಂಗ್‍ಳ ಬಗ್ಗೆ ಕರ್ಕರೆಗಿದ್ದ ಅಭಿಪ್ರಾಯ ಮತ್ತು ಒಟ್ಟು ಭಯೋತ್ಪಾದನಾ ಕೃತ್ಯಗಳ ಒಳ ಸತ್ಯಗಳ ಕುರಿತಾಗಿ ಓರ್ವ ದಕ್ಷ ಅಧಿಕಾರಿಯ ಪತ್ನಿಯೆಂಬ ನೆಲೆಯಲ್ಲಿ ಅವರು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರೋ?
ಮಾಲೆಗಾಂವ್, ಸಂಜೋತಾ, ಮಕ್ಕಾ ಮತ್ತು ಅಜ್ಮೀರ್ ಮಸೀದಿಗಳ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಮಾತ್ರ ಆರೋಪಿಯಲ್ಲ. ಲೆ. ಕರ್ನಲ್ ಪುರೋಹಿತ್, ಅಸೀಮಾನಂದ, ಸುನೀಲ್ ಜೋಷಿ, ಕಲ್‍ಸಿಂಗ್ರಾ ಸಹಿತ ಅನೇಕರಿದ್ದಾರೆ. ಸಾಧ್ವಿಯಿಂದ ಲೆಫ್ಟಿನೆಂಟ್ ಕರ್ನಲ್ ತನಕ ಚಾಚಿರುವ ಈ ಸಂಬಂಧದ ಕೊಂಡಿ ಅತ್ಯಂತ ಭಯಾನಕವಾದುದು. ಸೇನೆಯ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೋರ್ವ ಭಯೋತ್ಪಾದನಾ ಕೃತ್ಯದ ಆರೋಪಿಯಾಗಿ ವರ್ಷಗಳ ಕಾಲ ಜೈಲಲ್ಲಿರುವುದು ಮತ್ತು ಸಾಧ್ವಿಯೋರ್ವಳೊಂದಿಗೆ ಸೇರಿಕೊಂಡು ಕ್ರೌರ್ಯವೊಂದರ ಸಂಚಿನಲ್ಲಿ ಭಾಗಿಯಾಗುವುದೆಂದರೆ ಅದು ಇನ್ನಿತರ ಭಯೋತ್ಪಾದನಾ ಕೃತ್ಯಗಳಿಗಿಂತ ಖಂಡಿತ ಭಿನ್ನವಾದುದು. ಇದನ್ನು ತನಿಖಿಸುವುದು ಸುಲಭ ಅಲ್ಲ. ಸೇನೆಯಲ್ಲಿರುವ ಪ್ರಭಾವಿ ವ್ಯಕ್ತಿಯೋರ್ವರ ಮೇಲೆ ಅನುಮಾನ ಪಡುವುದೇ ಒಂದು ಧೈರ್ಯದ ಕೆಲಸ. ಆ ಅನುಮಾನವನ್ನು ಸಾಬೀತುಪಡಿಸುವುದೆಂದರೆ ಇನ್ನಷ್ಟು ಸಾಹಸದ ಕೆಲಸ. ಯಾಕೆಂದರೆ, ಸಾಮಾನ್ಯ ನಾಗರಿಕರಿಗೆ ಇಲ್ಲದ ರಕ್ಷಣಾ ವಲಯವೊಂದು ಸಾಧ್ವಿಗಳಿಗೆ ಮತ್ತು ಸೇನೆಯ ಅಧಿಕಾರಿಗಳಿಗೆ ಖಂಡಿತ ಇರುತ್ತದೆ. ಇದನ್ನು ಭೇದಿಸಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸುವಾಗ ಅನೇಕಾರು ಅಡೆತಡೆಗಳು ಎದುರಾಗಲೇಬೇಕು. ಹಾಗೆ ತನಿಖಿಸುವ ಧೈರ್ಯ ಪ್ರದರ್ಶಿಸುವವರ ವಿರುದ್ಧ ಸಂಚು, ಷಡ್ಯಂತ್ರ, ತಂತ್ರಗಳೆಲ್ಲ ಖಂಡಿತ ನಡೆದೇ ನಡೆದಿರುತ್ತದೆ. ಸಾಧ್ವಿ ಪ್ರಜ್ಞಾಸಿಂಗ್, ಪುರೋಹಿತ್, ಅಸೀಮಾನಂದ ಮುಂತಾದವರ ಮೇಲೆ ಆರೋಪ ಪಟ್ಟಿ ತಯಾರಿಸುವಾಗ, ಅವರನ್ನು ಬಂಧಿಸುವಾಗ ಮತ್ತು ಅವರ ವಿಚಾರಣೆ ನಡೆಸುವಾಗಲೆಲ್ಲ ಕರ್ಕರೆ ಮತ್ತು ತಂಡ ಇಂಥದ್ದೊಂದು  ಸವಾಲನ್ನು ಎದುರಿಸಿಯೇ ಇರಬಹುದು. ಸಾಧ್ವಿ ನೀಡಿರುವ ‘ನೀನು ನಾಶವಾಗುತ್ತೀಯ’ ಅನ್ನುವ ಹೇಳಿಕೆಯಲ್ಲಿ ಅಡಗಿರುವುದು ಇದೇ ಧ್ವನಿ. ಕರ್ಕರೆಯವರು ಎಂಥ ಹುತ್ತಕ್ಕೆ ಕೈ ಹಾಕಿದ್ದರು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ನಿಜಕ್ಕೂ, ಸಾಧ್ವಿ ನೀಡಿರುವುದು ಬರೇ ಹೇಳಿಕೆ ಮಾತ್ರವೋ ಅಥವಾ ಕರ್ಕರೆಯವರ ನಾಶಕ್ಕೆ ಸಂಚು ಹೆಣೆದು ಯಶಸ್ವಿಯಾದ ಕತೆಯೂ ಆ ಹೇಳಿಕೆಯಲ್ಲಿ ಇದೆಯೇ? ಕರ್ಕರೆ ಮತ್ತು ತಂಡವನ್ನು ನಾಶ ಮಾಡುವುದಕ್ಕೆ ಗುಂಪೊಂದನ್ನು ರಚಿಸಿಕೊಂಡು ಅದರ ಜಾರಿಗಾಗಿ ಸೂಕ್ತ ಸಂದರ್ಭಕ್ಕಾಗಿ ಕಾಯಲಾಗುತ್ತಿತ್ತೇ? ಈ ಹಿನ್ನೆಲೆಯಲ್ಲಿ, ಮುಂಬೈ ದಾಳಿ ಪ್ರಕರಣವನ್ನು ದೇಶ ಮರುತನಿಖೆ ನಡೆಸಬೇಕಾಗಿದೆಯೇ? ಇದರ ಹಿಂದೆ ಈಗಾಗಲೇ ಗೊತ್ತಿರುವ ಸಂಗತಿಗಿಂತ ಗೊತ್ತಿರದ ಸಂಗತಿಗಳು ಇವೆಯೇ? ಕರ್ಕರೆಯವರ ಹುತಾತ್ಮತೆಗೆ ಇಂಥ ತನಿಖೆಯನ್ನು ಉತ್ತರ ಸಿಗಬಲ್ಲುದೇ? ಬಹುಶಃ,
ಸಾಧ್ವಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಭಯೋತ್ಪಾದನಾ ಕೃತ್ಯಗಳ ಮರು ಅವಲೋಕನವೊಂದಕ್ಕೆ ಬಿಜೆಪಿ ಬಾಗಿಲನ್ನು ತೆರೆದಿದೆ. ಈ ಬಾಗಿಲು ಮುಚ್ಚದಿರಲಿ.

Thursday, 25 April 2019

ಚೌಕಿದಾರರನ್ನು ಮತ್ತೆ ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸಿದ ರಫೇಲ್



   ಕಳೆದವಾರ ಎರಡು ಬೆಳವಣಿಗೆಗಳು ನಡೆದುವು. ಈ ಎರಡೂ ಬೆಳವಣಿಗೆಗಳು ತಳಕು ಹಾಕಿಕೊಂಡಿರುವುದು ರಫೇಲ್ ಒಪ್ಪಂದದ ಜೊತೆ. ಮಾತ್ರವಲ್ಲ, ಈ ಎರಡೂ ಬೆಳವಣಿಗೆಗಳು ಚೌಕಿದಾರನೇ ಕಳ್ಳ ಅನ್ನುವುದಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸಿವೆ. ಇದರಲ್ಲಿ ಒಂದು ಸುಪ್ರೀಮ್ ಕೋರ್ಟಿನ ತೀರ್ಪು.
ರಫೇಲ್ ವ್ಯವಹಾರಕ್ಕೆ ಸಂಬಂಧಿಸಿ ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರುಣ್ ಶೌರಿ, ಪ್ರಶಾಂತ್ ಭೂಷಣ್ ಮತ್ತಿತರರು ಸುಪ್ರೀಮ್ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿದ್ದರು. ಇವರು ಹೀಗೆ ಮನವಿ ಮಾಡಿಕೊಳ್ಳುವುದಕ್ಕೆ ಕಾರಣ- ದ ಹಿಂದೂ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ತನಿಖಾ ವರದಿ. ಮೂರು ದಶಕಗಳ ಹಿಂದೆ ರಾಜೀವ್ ಗಾಂಧಿಯವರ ಕಾಲದಲ್ಲಿ ಭಾರತ ಸರಕಾರ ಸ್ವೀಡನ್ನಿನ ಮದ್ದುಗುಂಡು ತಯಾರಕ ಕಂಪೆನಿಯಾದ ಬೋಫೋರ್ಸ್‍ನೊಂದಿಗೆ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಆ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ದ ಹಿಂದೂ ಪತ್ರಿಕೆಯ ಎನ್. ರಾಮ್ ಎಂಬ ಪತ್ರಕರ್ತ ಅಂದು ದೇಶದ ಮುಂದಿಟ್ಟಿದ್ದರು. ಅವರ ಆ ತನಿಖಾ ಬರಹ ದೇಶದ ರಾಜಕೀಯ ವಾತಾವರಣವನ್ನೇ ಬದಲಿಸಿತ್ತು. ಇದೀಗ ಅದೇ ಎನ್. ರಾಮ್ ಅವರು ರಫೇಲ್ ಒಪ್ಪಂದದಲ್ಲಾಗಿರುವ ಅವ್ಯವಹಾರವನ್ನು ಇತ್ತೀಚೆಗೆ ದ ಹಿಂದೂ ಪತ್ರಿಕೆಯಲ್ಲಿ ಆಧಾರ ಸಮೇತ ಬರೆದರು. ಇದೇ ಬರಹಗಳನ್ನು ಆಧರಿಸಿಕೊಂಡು ಪ್ರಶಾಂತ್ ಭೂಷಣ್ ಮತ್ತಿತರರು ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿದರು. ಕೋರ್ಟು ಈ ಹಿಂದೆ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ಆದರೆ ಈ ಮನವಿಯನ್ನು ಮೋದಿ ಸರಕಾರ ಬಲವಾಗಿ ವಿರೋಧಿಸಿತು. ರಕ್ಷಣಾ ಇಲಾಖೆಯಿಂದ ಕಳವು ಮಾಡಲಾದ ದಾಖಲೆಗಳನ್ನಿಟ್ಟುಕೊಂಡು ಎನ್. ರಾಮ್ ಅವರು ಲೇಖನ ಬರೆದಿದ್ದು, ಅದನ್ನು ಸಾಕ್ಷ್ಯವಾಗಿ ಪರಿಗಣಿಸಬಾರದೆಂದು ಕೇಂದ್ರ ಸರಕಾರ ವಾದಿಸಿತು. ಮಾತ್ರವಲ್ಲ, ಬ್ರಿಟಿಷ್ ಕಾಲದ ಮತ್ತು ಇಂದಿಗೆ ಅಪ್ರಸ್ತುತವಾಗಿರುವ ಅಧಿಕೃತ ರಹಸ್ಯ ಕಾಯ್ದೆಯಂತೆ ದ ಹಿಂದೂ ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿತು. ಯಾವಾಗ ಕೇಂದ್ರ ಸರಕಾರ ರಫೇಲ್ ಒಪ್ಪಂದದ ದಾಖಲೆಗಳು ಕಳವಾಗಿವೆ ಮತ್ತು ದ ಹಿಂದೂ ಪ್ರಕಟಿಸಿದ ಬರಹಗಳು ಅವೇ ದಾಖಲೆಗಳ ಆಧಾರಿತವಾಗಿವೆ ಎಂದು ಸುಪ್ರೀಮ್ ಕೋರ್ಟಿನಲ್ಲಿ ಒಪ್ಪಿಕೊಂಡಿತೋ ಆಗಲೇ ಈ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಅನ್ನುವುದು ಸ್ಪಷ್ಟವಾಯಿತು. ಮಾತ್ರವಲ್ಲ, ಸುಪ್ರೀಮ್ ಕೋರ್ಟು ಮತ್ತು ಈ ದೇಶದ ಮುಂದೆ ತಾನು ಸುಳ್ಳು ಹೇಳಿದ್ದೇನೆ ಎಂದೂ ಕೇಂದ್ರ ಸರಕಾರ ಘೋಷಿಸಿದಂತಾಯಿತು. ಎನ್. ರಾಮ್ ಅವರ ತನಿಖಾ ಬರಹಗಳು ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗುವುದಕ್ಕಿಂತ ಮೊದಲು ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಮ್ ಕೋರ್ಟ್‍ನಲ್ಲಿ ವಿಚಾರಣೆ ನಡೆದಿತ್ತು. ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ತನ್ನೆದುರು ಹಾಜರುಪಡಿಸುವಂತೆ ಕೋರ್ಟು ಕೇಂದ್ರ ಸರಕಾರಕ್ಕೆ ಆದೇಶಿಸಿತ್ತು. ಆ ದಾಖಲೆಗಳ ಆಧಾರದಲ್ಲಿ ರಫೇಲ್ ಒಪ್ಪಂದಕ್ಕೆ ಸುಪ್ರೀಮ್ ಕೋರ್ಟು ಕ್ಲೀನ್‍ಚಿಟ್ ನೀಡಿತ್ತು. ಆದರೆ, ದ ಹಿಂದೂ ಪತ್ರಿಕೆ ಯಾವಾಗ ಸರಣಿ ಲೇಖನಗಳನ್ನು ಪ್ರಕಟಿಸತೊಡಗಿತೋ, ಕೇಂದ್ರ ಸರಕಾರದ ಸುಳ್ಳುಗಳು ಒಂದೊಂದೇ ಬಹಿರಂಗಕ್ಕೆ ಬಹಿರಂಗತೊಡಗಿದುವು. ನಿಜವಾಗಿ, ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನಿಂದ ಪ್ರಮುಖ ದಾಖಲೆಗಳನ್ನೇ ಮುಚ್ಚಿಟ್ಟಿತ್ತು. ತನಗೆ ಅನುಕೂಲಕರವಾದ ದಾಖಲೆಗಳನ್ನಷ್ಟೇ ಕೋರ್ಟಿನ ಮುಂದಿರಿಸಿತ್ತು. ರಕ್ಷಣಾ ಒಪ್ಪಂದಕ್ಕಾಗಿ ಕೇಂದ್ರ ಸರಕಾರವೇ ರಚಿಸಿದ ತಜ್ಞರ ತಂಡವು ಒಂದುಕಡೆ ಫ್ರಾನ್ಸ್‍ನ ಡಸಾಲ್ಟ್ ಕಂಪೆನಿಯೊಂದಿಗೆ ಮಾತುಕತೆಯಲ್ಲಿ ತೊಡಗಿರುವಾಗ, ಇನ್ನೊಂದು ಕಡೆ ಪ್ರಧಾನಮಂತ್ರಿ ಕಚೇರಿಯೇ ಮಧ್ಯ ಪ್ರವೇಶಿಸಿತ್ತೆಂದು ದ ಹಿಂದೂ ಪತ್ರಿಕೆ ಪ್ರಕಟಿಸಿದ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಗಳು ಸ್ಪಷ್ಟಪಡಿಸಿದುವು. ಸುಪ್ರೀಮ್ ಕೋರ್ಟಿನ ಮುಂದೆ ಕೇಂದ್ರ ಸರಕಾರ ಈ ಅಂಶವನ್ನು ಮುಚ್ಚಿಟ್ಟಿತ್ತು. ಅಲ್ಲದೇ, ಕೇಂದ್ರದ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಅವರೂ ಈ ಒಪ್ಪಂದದಲ್ಲಿ ಮಧ್ಯಪ್ರವೇಶ ಮಾಡಿz್ದÁರೆ ಎಂದೂ ಈ ದಾಖಲೆಗಳು ಹೇಳಿದುವು. ಅವರ ಭಾಗೀದಾರಿಕೆಯ ಬಳಿಕವೇ ಒಪ್ಪಂದದಿಂದ ಬ್ಯಾಂಕ್ ಖಾತರಿಯ ಷರತ್ತನ್ನು ತೆಗೆದುಹಾಕಲಾಯಿತು ಮತ್ತು ಆ ಮೂಲಕ ಡಸಾಲ್ಟ್ ಕಂಪೆನಿಗೆ ಅನುಕೂಲ ಮಾಡಿಕೊಡಲಾಯಿತು ಎಂಬುದನ್ನೂ ದ ಹಿಂದೂ ಪ್ರಕಟಿಸಿದ ದಾಖಲೆಗಳು ವಿವರಿಸಿದುವು. ಇದನ್ನೂ ಸುಪ್ರೀಮ್ ಕೋರ್ಟ್‍ನಿಂದ ಕೇಂದ್ರ ಸರಕಾರ ಮುಚ್ಚಿಟ್ಟಿತ್ತು. ನಿಜವಾಗಿ, ಇವೆರಡೂ ಗಂಭೀರ ಅಂಶಗಳು. ರಫೇಲ್ ಯುದ್ಧ ವಿಮಾನವನ್ನು ತಯಾರಿಸುವ ಡಸಾಲ್ಟ್ ಕಂಪೆನಿಯೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ತಜ್ಞರ ತಂಡವನ್ನು ಕೇಂದ್ರ ಸರಕಾರವೇ ರಚಿಸಿರುವಾಗ ಮತ್ತು ಅದು ಮಾತುಕತೆಯಲ್ಲಿ ನಿರತವಾಗಿರುವಾಗ ಪ್ರಧಾನ ಮಂತ್ರಿ ಕಚೇರಿ ಮಧ್ಯ ಪ್ರವೇಶಿಸಿದ್ದೇಕೆ? ಯಾರಿಗೆ ಅನುಕೂಲ ಮಾಡಿಕೊಡುವುದಕ್ಕೆ ಈ ಮಧ್ಯಪ್ರವೇಶ? ಅಜಿತ್ ಧೋವಲ್ ಅವರ ಮಧ್ಯಪ್ರವೇಶವೂ ಇಂಥದ್ದೊಂದು  ಅನುಮಾನವನ್ನು ಹುಟ್ಟು ಹಾಕುತ್ತದೆ. ಬ್ಯಾಂಕ್ ಖಾತರಿ ಎಂಬುದು ಯಾವುದೇ ಒಪ್ಪಂದದ ಬಹುದೊಡ್ಡ ಭಾಗ. ಧೋವಲ್ ಅವರು ಈ ಬ್ಯಾಂಕ್ ಖಾತರಿಯನ್ನೇ ರದ್ದುಪಡಿಸಿರುವುದು ಯಾಕೆ? ರಾಷ್ಟ್ರೀಯ ಭದ್ರತೆ, ದೇಶಭಕ್ತಿ ಎಂದೆಲ್ಲಾ ಹೇಳುತ್ತಾ ಬಂದ ಮೋದಿ ಮತ್ತು ಅವರ ತಂಡವು ಯಾಕೆ ದೇಶದ ಮುಂದೆ ಸುಳ್ಳುಗಳನ್ನು ಹೇಳಿದೆ? ತನ್ನ ಆಪ್ತ ಉದ್ಯಮಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ದೇಶರಕ್ಷಣೆಯಲ್ಲಿ ರಾಜಿ ಮಾಡಿಕೊಂಡರೇ ಮೋದಿ ಎಂಬ ಪ್ರಶ್ನೆಗಳು ಉದ್ಭವಿಸಿದುವು. ಇದನ್ನು ಸುಪ್ರೀಮ್ ಕೋರ್ಟು ಕೂಡ ಗಮನಿಸಿತು ಮತ್ತು ತನ್ನ ಈ ಹಿಂದಿನ ‘ಕ್ಲೀನ್‍ಚಿಟ್’ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಕೊಂಡಿತು.
ಕಳೆದವಾರ ನಡೆದ ಇನ್ನೊಂದು ಬೆಳವಣಿಗೆ ಏನೆಂದರೆ, ಫ್ರಾನ್ಸ್ ನ ಲೆ ಮಾಂಡೆ ಎಂಬ ಹೆಸರಿನ ಪತ್ರಿಕೆಯೊಂದು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ವರದಿಯೊಂದನ್ನು ಪ್ರಕಟಿಸಿದ್ದು. ಫ್ರಾನ್ಸ್ ನಲ್ಲಿರುವ ಅನಿಲ್ ಅಂಬಾನಿಯವರ ರಿಲಯನ್ಸ್ ಪ್ಲ್ಯಾಗ್ ಅಟ್ಲಾಂಟಿಕ್ ಫ್ರಾನ್ಸ್ (ಎಸ್‍ಎಎಸ್) ಎಂಬ ಕಂಪೆನಿಗೆ ಫ್ರಾನ್ಸ್ ಸರಕಾರವು ರೂ. 1124.9 ಕೋಟಿಯಷ್ಟು ತೆರಿಗೆ ವಿನಾಯಿತಿಯನ್ನು ಘೋಷಿಸಿರುವುದಕ್ಕೂ ರಫೇಲ್ ಒಪ್ಪಂದಕ್ಕೂ ಸಂಬಂಧ ಇದೆ ಎಂದು ಪತ್ರಿಕೆ ಹೇಳಿದೆ. ಡಸಾಲ್ಟ್ ಕಂಪೆನಿಯಂದ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 6 ತಿಂಗಳ ಬಳಿಕ ಈ ತೆರಿಗೆ ವಿನಾಯಿತಿ ಬೆಳವಣಿಗೆ ನಡೆದಿದೆ ಎಂದು ಪತ್ರಿಕೆ ಬರೆದಿದೆ. ರಫೇಲ್ ಒಪ್ಪಂದಕ್ಕೆ ಮೊದಲು ತೆರಿಗೆ ಪಾವತಿಯಲ್ಲಿ ಯಾವ ವಿನಾಯಿತಿಯನ್ನು ಮಾಡಲೂ ಒಪ್ಪಿಕೊಳ್ಳದ ಫ್ರಾನ್ಸ್ ಸರಕಾರವು ಈ ಒಪ್ಪಂದದ ಬಳಿಕ ದಿಢೀರ್ ಆಗಿ ತೆರಿಗೆ ವಿನಾಯಿತಿ ಘೋಷಿಸಲು ಕಾರಣವೇನು ಅನ್ನುವ ಪ್ರಶ್ನೆಯನ್ನು ಲೆ ಮಾಂಡೆ ಪತ್ರಿಕಾ ವರದಿಯು ಸಹಜವಾಗಿಯೇ ಎತ್ತುತ್ತದೆ. ಇದಲ್ಲದೇ, ಸರಕಾರಿ ಸ್ವಾಮ್ಯದ ಮತ್ತು ಕರ್ನಾಟಕದಲ್ಲಿರುವ ಹೆಚ್‍ಎಎಲ್ ಕಂಪೆನಿಯನ್ನು ಕೈಬಿಟ್ಟು ಅನಿಲ್ ಅಂಬಾನಿಯ ಕಂಪೆನಿಗೆ ರಫೇಲ್ ಯುದ್ಧ ವಿಮಾನ ತಯಾರಿಯ ಗುತ್ತಿಗೆಯನ್ನು ಕೇಂದ್ರ ಸರಕಾರ ವಹಿಸಿಕೊಟ್ಟಿರುವುದೇಕೆ ಅನ್ನುವ ಪ್ರಶ್ನೆ ಈ ಮೊದಲೇ ಎದ್ದಿತ್ತು. ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಈ ಒಪ್ಪಂದದ ಭಾರತೀಯ ಪಾಲುದಾರನಾಗಿ ಹೆಚ್‍ಎಎಲ್ ಅನ್ನು ಆರಿಸಿಕೊಳ್ಳಲಾಗಿತ್ತು. ಡಸಾಲ್ಟ್ ಮತ್ತು ಹೆಚ್‍ಎಎಲ್ ಜಂಟಿಯಾಗಿ ರಫೇಲ್ ಯುದ್ಧವಿಮಾನಗಳನ್ನು ನಿರ್ಮಿಸುವುದಾಗಿ ಒಪ್ಪಂದವಾಗಿತ್ತು. ಆದರೆ, ಮೋದಿಯವರು ಆ ಒಪ್ಪಂದವನ್ನು ರದ್ದುಗೊಳಿಸಿ ಹೆಚ್‍ಎಎಲ್‍ನ ಸ್ಥಾನದಲ್ಲಿ ಅನಿಲ್ ಅಂಬಾನಿಯನ್ನು ತಂದು ಕೂರಿಸಿದರು. ಸರಕಾರಿ ಸ್ವಾಮ್ಯದ ಮತ್ತು ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಅನುಭವಿಯಾಗಿರುವ ಹೆಚ್‍ಎಎಲ್ ಅನ್ನು ಕೈಬಿಟ್ಟು ಅನನುಭವಿ ಅನಿಲ್ ಅಂಬಾನಿಯ ಕಂಪೆನಿಯನ್ನು ಆರಿಸಿಕೊಂಡಿದ್ದೇಕೆ ಎಂಬ ಈಗಾಗಲೇ ಇರುವ ಪ್ರಶ್ನೆಯ ಜೊತೆಗೇ ಲೆ ಮಾಂಡೆ ಪ್ರಕಟಿಸಿರುವ ‘ತೆರಿಗೆ ವಿನಾಯಿತಿ’ ವರದಿಯು ಇನ್ನಷ್ಟು ಪ್ರಶ್ನೆಗಳಿಗೆ ದಾರಿ ತೆರೆದಿದೆ. ಬಹುಕೋಟಿ ಅವ್ಯವಹಾರವೊಂದು ಈ ಒಪ್ಪಂದದ ಮೂಲಕ ನಡೆದಿದೆಯೇ? ಯಾರು ಇದರ ಫಲಾನುಭವಿಗಳು? ಈ ಅವ್ಯವಹಾರದಲ್ಲಿ ಪ್ರಧಾನಮಂತ್ರಿ ಕಚೇರಿಯವರ ಪಾತ್ರ ಏನು? ಅಜಿತ್ ಧೋವಲ್ ಅವರ ಪಾತ್ರ ಏನು? ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಹಳೇ ಒಪ್ಪಂದವನ್ನು ರದ್ದುಪಡಿಸಲಾಯಿತೇ? ಮೋದಿ ಸರಕಾರದ ದೇಶಪ್ರೇಮ, ಸೇನಾಪ್ರೇಮ, ರಾಷ್ಟ್ರೀಯ ಭದ್ರತೆ, ದೇಶರಕ್ಷಣೆ ಇತ್ಯಾದಿ ಇತ್ಯಾದಿ ಮಾತುಗಳೆಲ್ಲ ಬರೀ ಬೊಗಳೆಯೇ? ರಫೇಲ್ ಎಂಬುದು ಇನ್ನೊಂದು ಬೋಫೋರ್ಸ್ ಹಗರಣವೇ? ಚೌಕೀದಾರ ಕಳ್ಳನಾದ ಕತೆಯೇ?
ಈಗಾಗಲೇ ನಡೆದಿರುವ ಬೆಳವಣಿಗೆಗಳು ಮತ್ತು ಬಹಿರಂಗವಾಗಿರುವ ದಾಖಲೆಗಳಂತೂ ಚೌಕೀದಾರನನ್ನೇ ಕಳ್ಳ ಅನ್ನುತ್ತಿದೆ. ಉಳಿದುದನ್ನು ಸುಪ್ರೀಮ್ ಕೋರ್ಟೇ ಹೇಳಲಿ.

ಆಡಳಿತ ಪಕ್ಷದ ಮನೆಯ ಬೆಕ್ಕು ಮತ್ತು...



ಕಳೆದವಾರ ಚುನಾವಣಾ ಆಯೋಗವು ನೀಡಿರುವತೀರ್ಪನ್ನು ವಿಶ್ಲೇಷಕರುಗಂಭೀರವಾಗಿ ಪರಿಗಣಿಸುವ ಬದಲು ಜೋಕ್ ಆಗಿ ಸ್ವೀಕರಿಸಿದ್ದಾರೆ. ಅದಕ್ಕೆಕಾರಣವೂ ಇದೆ.
ವಿಜ್ಞಾನಿಗಳು ಹಾರಿಸಿದ ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂಬುದನ್ನು ದೇಶಕ್ಕೆ ತಿಳಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮುಂದೆ ಬಂದರು. ಟಿ.ವಿ. ವಾಹಿನಿಗಳ ಮೂಲಕ ಸುಮಾರು 40 ನಿಮಿಷಗಳ ಕಾಲ ದೇಶವನ್ನುದ್ದೇಶಿಸಿ ಮಾತಾಡಿದರು. ಇದು ನೀತಿಸಂಹಿತೆಯ ಉಲ್ಲಂಘನೆ ಎಂದು ಸಿಪಿಐಎಂ ಪಕ್ಷವು ಚುನಾವಣಾ ಮಂಡಳಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿತು. ಚುನಾವಣಾ ಮಂಡಳಿಯು ಪರಿಶೀಲನಾ ತಂಡವೊಂದನ್ನು ರಚಿಸಿತು. ಅದರ ಆಧಾರದಲ್ಲಿ ಚುನಾವಣಾ ಮಂಡಳಿ ನೀಡಿರುವ ತೀರ್ಪು ಎಷ್ಟು ತಮಾಷೆಯ ಸ್ವರೂಪದಲ್ಲಿ ಇದೆಯೆಂದರೆ, ಆ ತೀರ್ಪಿಗೆ ಕೆಜಿ ಕ್ಲಾಸಿನ ಮಗುವೂ ನಗಬಹುದು. ‘ದೂರದರ್ಶನವು ಆ ಭಾಷಣವನ್ನು ನೇರವಾಗಿ ಪ್ರಸಾರ ಮಾಡಿಲ್ಲ,ANI ನಿಂದ ಪಡೆದುಕೊಂಡು ಅದು ಪ್ರಸಾರ ಮಾಡಿದೆ’ ಎಂಬ ತೀರ್ಮಾನಕ್ಕೆ ಚುನಾವಣಾ ಆಯೋಗ ಬಂದಿದೆ. ನಿಜವಾಗಿ, ಈ ತೀರ್ಪಿನಲ್ಲಿಯೇ ಶರಣಾಗತಿಯ ಭಾವವಿದೆ. ನರೇಂದ್ರ ಮೋದಿಯವರನ್ನು ಎದುರು ಹಾಕಿಕೊಳ್ಳಲು ಬರುವುದಿಲ್ಲ ಎಂಬ ಸಂದೇಶ ಇದೆ. ಅಂದಹಾಗೆ,
ಒಂದು ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗವು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದೆಯೇ ಅನ್ನುವ ಪ್ರಶ್ನೆಗೆ ಇಲ್ಲ ಅನ್ನುವುದೇ ಉತ್ತರ. ದೂರದರ್ಶನದಲ್ಲಿ ನೇರವಾಗಿ ಪ್ರಸಾರವಾದರೆ ಮಾತ್ರವೇ ಈ ದೇಶದ ಮತದಾರರು ಅಂಥ ಭಾಷಣದಿಂದ ಪ್ರಭಾವಿತಗೊಳ್ಳುವುದೇ? ನೇರವಾಗಿ ಪ್ರಸಾರ ಮಾಡುವ ಖಾಸಗಿ ಟಿ.ವಿ. ಚಾನೆಲ್‍ಗಳಿಂದ ಸಿಗ್ನಲ್‍ಗಳನ್ನು ಪಡೆದುಕೊಂಡು ಹಾಗೆಯೇ ಪ್ರಸಾರ ಮಾಡುವುದರಿಂದ ಪ್ರಭಾವದಲ್ಲಿ ಕುಂಠಿತ ಆಗುವುದೇ? ಪ್ರಶ್ನೆ ಇರುವುದು- ದೂರದರ್ಶನ ಪ್ರಧಾನಿಯವರ ಭಾಷಣವನ್ನು ನೇರವಾಗಿ ಪ್ರಸಾರ ಮಾಡಿದೆಯೋ ಇಲ್ಲವೋ ಎಂಬುದಲ್ಲ. ಚುನಾವಣಾ ನೀತಿ-ಸಂಹಿತೆ ಜಾರಿಯಾದ ಬಳಿಕ ಅಂಥದ್ದೊಂದು ಭಾಷಣ ಮತದಾರರ ಮೇಲೆ ಪ್ರಭಾವ ಬೀರಬಹುದೋ ಇಲ್ಲವೋ ಎಂಬುದು. ನೀತಿ ಸಂಹಿತೆಯನ್ನು ಅಕ್ಷರಾರ್ಥವಾಗಿ ಪರಿಗಣಿಸುವುದಕ್ಕೂ ಆಶಯಾರ್ಥವಾಗಿ ಪರಿಗಣಿಸುವುದಕ್ಕೂ ನಡುವೆ ವ್ಯತ್ಯಾಸ ಇದೆ. ಅಕ್ಷರಾರ್ಥವು ಅನುಕೂಲ ಸಿಂಧು ತೀರ್ಪನ್ನು ನೀಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಆಶಯಾರ್ಥ ಹಾಗಲ್ಲ. ನೀತಿ ಸಂಹಿತೆಯ ಆಶಯ ಏನಿದೆಯೋ ಅದನ್ನು ಅರಿತುಕೊಂಡು ತೀರ್ಪು ನೀಡಲು ಅದು ಒತ್ತಾಯಿಸುತ್ತದೆ. ಹಾಗಂತ, ಚುನಾವಣಾ ಆಯೋಗದ ದೌರ್ಬಲ್ಯವನ್ನು ಎತ್ತಿ ಹಿಡಿಯುವ ಪ್ರಕರಣ ಇದೊಂದೇ ಅಲ್ಲ.
ಪಾಕಿಸ್ತಾನದಲ್ಲಿ ಸೆರೆಯಾದ ಭಾರತದ ವಿಂಗ್‍ ಕಮಾಂಡರ್‍ ಅಭಿನಂದನ್ ವರ್ಧಮಾನ್‍ರನ್ನು ಬಿಜೆಪಿ ಚುನಾವಣೆಗೆ ಬಳಸಿಕೊಂಡಿತು. ಅವರ ಬೃಹತ್ ಹೋರ್ಡಿಂಗ್‍ಗಳನ್ನು ಪ್ರದರ್ಶಿಸಿತು. ನೀತಿ ಸಂಹಿತೆಯ ಆಶಯವನ್ನು ಪರಿಗಣಿಸುವುದಾದರೆ ಇದು ಸ್ಪಷ್ಟ ಉಲ್ಲಂಘನೆ. ಚುನಾವಣಾ ಆಯೋಗ ಈ ವಿಷಯದಲ್ಲಿ ಎಷ್ಟು ಮೃದು ನಿಲುವನ್ನು ತಾಳಿತೆಂದರೆ, ‘ನೀವು ಹಾಗೆ ಮಾಡಬೇಡಿ’ ಎಂಬ ವಿನಂತಿಯನ್ನು ಮಾಡಿಕೊಂಡು ಕೈ ತೊಳೆದುಕೊಂಡಿತು.  ಚುನಾವಣಾ ಆಯೋಗ ದುರ್ಬಲಗೊಂಡಾಗ ಆಗುವ ಬೆಳವಣಿಗೆಗಳು ಇವು.
ಭಾರತೀಯ ಸೇನಾ ಪಡೆಯನ್ನು ಮೋದಿಯ ಸೇನೆ ಎಂದು ವ್ಯಾಖ್ಯಾನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರಿಗೆ ಎಚ್ಚರಿಗೆ ಕೊಟ್ಟು ಬಿಡಲಾಯಿತೇ ಹೊರತು ಯಾವ ಶಿಸ್ತುಕ್ರಮವನ್ನೂ ಜರುಗಿಸಲಿಲ್ಲ. ಇನ್ನೊಂದೆಡೆ ವಿರೋಧ ಪಕ್ಷಗಳ ಕುರಿತು ಈ ಸಡಿಲ ಧೋರಣೆ ಕಾಣಿಸುತ್ತಿಲ್ಲ. ಪ್ರಧಾನಮಂತ್ರಿ ಕಿಸಾನ್‍ಯೋಜನೆಯನ್ವಯ, ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ನರೇಂದ್ರ ಮೋದಿಯವರಿಗೆ ಅವಕಾಶ ಮಾಡಿಕೊಟ್ಟಿರುವ ಚುನಾವಣಾ ಆಯೋಗವು ಸಾಲ ಮನ್ನಾದ ಫಲಾನುಭವಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸಲು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅವಕಾಶ ನೀಡಿಲ್ಲ ಎಂಬ ದೂರಿದೆ. ವಿರೋಧ ಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವ ಆದಾಯ ತೆರಿಗೆ ಇಲಾಖೆಯ ಬಗ್ಗೆಯೂ ಚುನಾವಣಾ ಆಯೋಗ ಏನನ್ನೂ ಹೇಳುತ್ತಿಲ್ಲ. ನೀತಿಸಂಹಿತೆ ಜಾರಿಯಾದ ಬಳಿಕ ಏಕಮುಖವಾಗಿ ಹೀಗೆ ದಾಳಿ ಮಾಡುವುದು ಕಾನೂನು ಬದ್ಧವೇ ಎಂಬ ಪ್ರಶ್ನೆ ಖಂಡಿತ ಪ್ರಸ್ತುತ. ಇಂಥ ಪ್ರಶ್ನೆಗಳಿಗೆ ಟಿ.ಎನ್. ಶೇಷನ್‍ ಧೈರ್ಯದಿಂದ ಎದೆಯೊಡ್ಡಿದ್ದರು. ಚುನಾವಣಾ ಆಯೋಗವು ಒಂದು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆ ಎಂಬುದು ಈ ದೇಶಕ್ಕೆಗೊತ್ತಾದದ್ದೇ ಅವರಿಂದ. ಅವರುಚುನಾವಣಾ ಆಯೋಗಕ್ಕೆ ಹೊಸ ರೂಪವನ್ನು ಕೊಟ್ಟರು. ಉಗುರು-ಹಲ್ಲುಗಳನ್ನು ಉದುರಿಸಿಕೊಂಡು ಸಾಧು ಹುಲಿಯಂತಾಗಿದ್ದ ಆಯೋಗಕ್ಕೆಅವರು ಉಗುರು ಹಲ್ಲುಗಳನ್ನು ಮರಳಿಸಿದುದಷ್ಟೇ ಅಲ್ಲ, ಪ್ರಶ್ನಿಸಿದವರ ಉಗುರು-ಹಲ್ಲುಗಳನ್ನು ಕಿತ್ತು ಹಾಕಲೂ ಹಿಂಜರಿಯಲಿಲ್ಲ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಮತದಾರರನ್ನು ಪ್ರಭಾವಿತಗೊಳಿಸಬಲ್ಲ ಒಂದೊಂದೇ ಕಾರ್ಯಕ್ರಮಗಳನ್ನು ಆಡಳಿತ ಪಕ್ಷ ಮುನ್ನೆಲೆಗೆ ತರುತ್ತಿದೆ ಮತ್ತು ಅದನ್ನು ಪ್ರಶ್ನಿಸುವ ಅಧಿಕಾರವುಳ್ಳ ಚುನಾವಣಾ ಆಯೋಗವು ಪ್ರಶ್ನಿಸದೇ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂದರೆ, ಆಯೋಗ ಭಯದಲ್ಲಿದೆ ಎಂದೇ ಅರ್ಥ. ಚುನಾವಣೆ ಘೋಷಣೆಯಾದ ಬಳಿಕ ಯಾಕೆ ನಮೋ ಟಿ.ವಿ. ಪ್ರಸಾರವನ್ನು ಆರಂಭಿಸುತ್ತದೆ, ವೈಜ್ಞಾನಿಕ ಸಾಧನೆಯನ್ನು ಘೋಷಿಸುವ ನೆಪದಲ್ಲಿ ಯಾಕೆ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತಾಡುತ್ತಾರೆ, ಯಾಕೆ ಅವರ ಜೀವನಾಧಾರಿತ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ಪ್ರಶ್ನೆಗೆಉತ್ತರ ಅತ್ಯಂತ ಸ್ಪಷ್ಟ. ಮತದಾರರನ್ನು ಓಲೈಸುವುದು. ಅಕ್ಷರಗಳಲ್ಲಿ ಬರೆದಿಟ್ಟ ನೀತಿಸಂಹಿತೆಯಲ್ಲಿ ಇವೆಲ್ಲವನ್ನೂ ಯಥಾಪ್ರಕಾರ ನಮೂದಿಸಿಲ್ಲದೇ ಇರಬಹುದು. ಆದರೆ, ಆ ಅಕ್ಷರಗಳ ಆಶಯದಲ್ಲಿ ಖಂಡಿತ ಇವೆಲ್ಲ ಒಳಗೊಂಡಿರುತ್ತದೆ. ‘ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ಸು ಸಾಧಿಸಿರುವುದನ್ನು ನೆಪವಾಗಿಸಿಕೊಂಡು ದೇಶವನ್ನುದ್ದೇಶಿಸಿ ಮಾತಾಡುವುದು ಮತ್ತು ಆ ಮಾತನ್ನು ಖಾಸಗಿ ಚಾನೆಲ್‍ಗಳಿಂದ ಪಡೆದುಕೊಂಡು ದೂರದರ್ಶನ ಪ್ರಸಾರ ಮಾಡುವುದು ತಪ್ಪು’ ಎಂಬುದಾಗಿ ನೀತಿ-ಸಂಹಿತೆಯಲ್ಲಿ ಬರೆದಿಟ್ಟಿರುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ಉಪಗ್ರಹ ನಿರೋಧಕ ಕ್ಷಿಪಣಿ ಉಡಾವಣೆ ಎಂಬುದು ಆಯಾ ಕಾಲದ ಬೆಳವಣಿಗೆ. ಪ್ರಧಾನಮಂತ್ರಿ ಕಿಸಾನ್‍ ಯೋಜನೆಯಾಗಲಿ, ರೈತರ ಸಾಲ ಮನ್ನಾವಾಗಲಿ ಆಯಾ ಸಂದರ್ಭದ ಯೋಜನೆಗಳೇ ಹೊರತು ನೀತಿ ಸಂಹಿತೆಯಲ್ಲಿ ಅಕ್ಷರಗಳಲ್ಲಿ ನೇರವಾಗಿ ಬರೆದಿಡಬಹುದಾದಂತಹ ವಿಷಯವಲ್ಲ. ಆದ್ದರಿಂದ,
      ನೀತಿ ಸಂಹಿತೆಯನ್ನು ಅಕ್ಷರಗಳ ಬದಲು ಆಶಯವಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಟಿ.ಎನ್. ಶೇಷನ್ ಮಾಡಿದ್ದು ಇದನ್ನೇ. ಆವರೆಗೆ ಬರೇ ಅಕ್ಷರಗಳಲ್ಲಿ ಕಳೆದುಹೋಗಿದ್ದ ನೀತಿ ಸಂಹಿತೆಯನ್ನು ಅವರು ಆಶಯಾರ್ಥವಾಗಿ ಬದಲಿಸಿದ್ದರು. ಮತದಾರರನ್ನು ಪ್ರಭಾವಿತಗೊಳಿಸಬಲ್ಲ ಎಲ್ಲದರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡರು. ಸದ್ಯ ಅನಾಥವಾಗಿರುವುದು ಈ ಗುಣವೇ. ನಿರ್ದಾಕ್ಷಿಣ್ಯಎಂಬುದು ದಾಕ್ಷಿಣ್ಯಕ್ಕೆ ಬಿದ್ದಿದೆ. ಆಡಳಿತ ಪಕ್ಷದ ಮನೆಯ ಬೆಕ್ಕಿನಂತೆ ಚುನಾವಣಾ ಮಂಡಳಿ ವರ್ತಿಸುತ್ತಿದೆ. ಇದು ಕಳವಳಕಾರಿ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ದೇಶದ ಚುನಾವಣಾ ಆಯೋಗವು ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಧೈರ್ಯವನ್ನು ಪ್ರದರ್ಶಿಸದೇ ಹೋದರೆ, ಆಡಳಿತ ಪಕ್ಷವು ಮುಂದೊಂದು ದಿನ ಚುನಾವಣಾ ಆಯೋಗವನ್ನು ತಮ್ಮ ಚುನಾವಣಾ ಕಚೇರಿಯಾಗಿ ಪರಿವರ್ತಿಸಿಬಿಟ್ಟೀತು.

ಉತ್ತರ ಕೊಡಿ ಪ್ರಧಾನಿಯವರೇ...



 ಬಿಜೆಪಿಗೆ ಓಟು ಹಾಕಬೇಡಿ ಎಂದು ಈ ದೇಶದ ಪ್ರಮುಖ 100 ಮಂದಿ ಸಿನಿಮಾ ನಿರ್ದೇಶಕರು ಮತದಾರರೊಂದಿಗೆ ವಿನಂತಿಸಿದ್ದಾರೆ. ನಿಜವಾಗಿ, ಇದೊಂದು ಅಭೂತಪೂರ್ವ ಘಟನೆ. 1977ರ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿದರೆ, ಉಳಿದಂತೆ ಈ ದೇಶದ ಚುನಾವಣೆಯ ಇತಿಹಾಸದಲ್ಲಿ ಸಿನಿಮಾ ಕ್ಷೇತ್ರದಿಂದ ಇಂಥದ್ದೊಂದು  ಬೇಡಿಕೆ ಈ ವರೆಗೆ ಕೇಳಿಬಂದಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಇಂಥದ್ದೊಂದು  ವಿನಂತಿಯನ್ನು ಯಾವುದೇ ಕ್ಷೇತ್ರದ ಪ್ರಮುಖರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಿಲ್ಲ. ಸದ್ಯದ ಪರಿಸ್ಥಿತಿ ಎಷ್ಟು ಆತಂಕಕಾರಿ ಅನ್ನುವುದನ್ನು ಈ ಬೆಳವಣಿಗೆ ಸ್ಪಷ್ಟಪಡಿಸುತ್ತದೆ. ಕಳೆದ 5 ವರ್ಷಗಳಲ್ಲಿ ಎನ್.ಡಿ.ಎ. ಸರಕಾರ ಮಾಡಿದ ಸಾಧನೆಗಳೇನು ಅನ್ನುವ ಬಹುಮುಖ್ಯ ಪ್ರಶ್ನೆಯನ್ನೇ ಅಮುಖ್ಯಗೊಳಿಸುವ ರೀತಿಯಲ್ಲಿ ಪ್ರಧಾನಿ ಮೋದಿ ವರ್ತಿಸುತ್ತಿದ್ದಾರೆ. ತನ್ನ 5 ವರ್ಷಗಳ ಸಾಧನೆಯಾಗಿ ಪ್ರಧಾನಿ ತೋರಿಸುತ್ತಿರುವುದು ಉಪಗ್ರಹ ಉಡಾವಣೆಯನ್ನು. ಪಾಕಿಸ್ತಾನದ ಬಾಲಾಕೋಟ್‍ನ ಮೇಲಿನ ದಾಳಿಯನ್ನು ಮತ್ತು ಎರಡ್ಮೂರು ಸರ್ಜಿಕಲ್ ಸ್ಟ್ರೈಕ್‍ಗಳನ್ನು. ಇವರ ಮಾತು ಇವತ್ತು ಆರಂಭವಾಗುವುದೇ ಪಾಕಿಸ್ತಾನ್ ಎಂಬ ಉಲ್ಲೇಖದ ಮೂಲಕ. ಪಾಕಿಸ್ತಾನ್, ಹಿಂದೂಸ್ತಾನ್, ಸರ್ಜಿಕಲ್ ಸ್ಟ್ರೈಕ್, ರಾಷ್ಟ್ರೀಯ ಭದ್ರತೆ, ದೇಶಪ್ರೇಮ ಇತ್ಯಾದಿ ಇತ್ಯಾದಿ ಮಾತುಗಳೇ ಇವತ್ತು ಪ್ರಧಾನಿಯವರ ಬಂಡವಾಳ. ಇನ್ನು ಸಮಯ ಸಿಕ್ಕಿದರೆ ವಿರೋಧ ಪಕ್ಷಗಳನ್ನು ವ್ಯಂಗ್ಯ ಮಾಡುವುದು, ರಾಹುಲ್ ಗಾಂಧಿಯನ್ನು ಡಿಸ್‍ಲೆಕ್ಸಿಯಾ ರೋಗಪೀಡಿತ ಎಂದು ಅಣಕವಾಡುವುದು, ವಿರೋಧ ಪಕ್ಷಗಳ ಒಕ್ಕೂಟವನ್ನು ಶರಾಬ್ (ಅಮಲು) ಎಂದು ಹೀಗಳೆಯುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ನಿಜಕ್ಕೂ, 130 ಕೋಟಿ ಜನಸಂಖ್ಯೆಯಿರುವ ದೇಶವೊಂದರಲ್ಲಿ ಚರ್ಚೆಗೊಳಗಾಗಬೇಕಾದ ವಿಷಯಗಳೇ ಇವು? 5 ವರ್ಷಗಳ ಹಿಂದೆ ಇದೇ ಮೋದಿಯವರು ತನ್ನ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದರು. ಅದರ ಮೂಲಕ ಹಲವು ಭರವಸೆಗಳನ್ನು ನೀಡಿದ್ದರು. ವಿದೇಶಿ ನೇರ ಹೂಡಿಕೆಯನ್ನು (ಎಫ್‍ಡಿಎ) ಅವತ್ತು ಇದೇ ಮೋದಿಯವರು ವಿರೋಧಿಸಿದ್ದರು. ಜಿಎಸ್‍ಟಿ ಮತ್ತು ಆಧಾರ್ ಚೀಟಿಯನ್ನು ದೇಶವಿರೋಧಿ ಎಂಬಂತೆ ಬಿಂಬಿಸಿದ್ದರು. ಗ್ಯಾಸ್ ಸಿಲಿಂಡರ್ ನ  ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವುದನ್ನೂ ಸಂಚು ಎಂದು ಕರೆದಿದ್ದರು. ಇವುಗಳನ್ನು ಮನ್‍ಮೋಹನ್ ಸಿಂಗ್ ಸರಕಾರದ ಮಹಾ ಜನವಿರೋಧಿ ನೀತಿಗಳೆಂದು ಪಟ್ಟಿ ಮಾಡಿದ್ದ ಇದೇ ಬಿಜೆಪಿ ಇವತ್ತು ಏನು ಹೇಳುತ್ತಿದೆ? ವಿರೋಧ ಪಕ್ಷದಲ್ಲಿದ್ದಾಗ ಖಂಡತುಂಡವಾಗಿ ವಿರೋಧಿಸಿದ್ದ ಅವೇ ಕಾರ್ಯಕ್ರಮಗಳನ್ನು ಅಧಿಕಾರಕ್ಕೆ ಬಂದಾಗ ನೀವೇಕೆ ಜಾರಿ ಮಾಡಿದಿರಿ ಎಂಬ ಭಾರತೀಯರ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಯಾರು, ಪ್ರಧಾನಿಯಲ್ಲವೇ? ಮತ್ತೇಕೆ ಅವರು ಈ ಬಗ್ಗೆ ಮಾತನ್ನೇ ಆಡುತ್ತಿಲ್ಲ? ನೋಟ್‍ಬ್ಯಾನ್ ಎಂಬುದು ಬಿಜೆಪಿಯ ಪ್ರಣಾಳಿಕೆಯಲ್ಲೇ ಇರಲಿಲ್ಲ. ಆದರೆ ಅಧಿಕಾರಕ್ಕೆ ಬಂದರೆ ಪ್ರತಿಯೋರ್ವ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ  ರೂಪಾಯಿ ಹಣವನ್ನು ಜಮಾ ಮಾಡುತ್ತೇನೆಂದು ಸ್ವತಃ ಮೋದಿಯವರೇ ಹೇಳಿದ್ದರು. ಆದರೆ ಪ್ರಣಾಳಿಕೆಯಲ್ಲಿ ಹೇಳದ ನೋಟ್‍ಬ್ಯಾನ್ ಅನ್ನು ಭಾರತೀಯರು ನಿದ್ದೆಗೆ ಸಜ್ಜಾಗುವ ವೇಳೆಯಲ್ಲಿ ಘೋಷಿಸಿದರು. ಮಾತ್ರವಲ್ಲ, 50 ದಿನಗಳಲ್ಲಿ ಉದ್ದೇಶಿತ ಫಲಿತಾಂಶ ಸಿಗದಿದ್ದರೆ ನನ್ನನ್ನು ನೇಣಿಗೆ ಹಾಕಿ ಎಂದು ಭಾವುಕರಾಗಿ ನುಡಿದರು. ದುರಂತ ಏನೆಂದರೆ, ಈ 50 ದಿನಗಳ ಒಳಗೆ 100 ಕ್ಕಿಂತಲೂ ಅಧಿಕ ಬಡ ಭಾರತೀಯ ನೇಣಿಗೋ ಆತ್ಮಹತ್ಯೆಗೋ ಶರಣಾದರು. ನೋಟನ್ನು ಬದಲಿಸಿಕೊಳ್ಳುವುದಕ್ಕಾಗಿ ಬ್ಯಾಂಕ್‍ನ ಎದುರು ಬಿಸಿಲಲ್ಲಿ ಕಾದು ಕಾದು ಸುಸ್ತಾದರು. ಈ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಅಡ್ಡಪರಿಣಾಮವನ್ನು ಬೀರಿದ ಕ್ರಮ ಇದು. ಈ ದೇಶದ ಆರ್ಥಿಕ ತಜ್ಞರು ಆ ನೋಟ್ ಬ್ಯಾನನ್ನು ತುಘಲಕ್ ನೀತಿ ಎಂದು ಖಂಡಿಸಿದರು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನಾಶವಾದುವು. ಉದ್ಯೋಗ ಸೃಷ್ಟಿ ನಾಸ್ತಿಯಾಯಿತು. ಇರುವ ಉದ್ಯೋಗಗಳೂ ನಾಶದ ಭೀತಿಗೆ ಒಳಗಾದುವು. ವ್ಯಾಪಾರ-ವಹಿವಾಟುಗಳು ತೀರಾ ತೀರಾ ತಳಮಟ್ಟಕ್ಕೆ ಕುಸಿದುವು. ಜನರು ಕಂಗಾಲಾದರು. ವಿಷಾದ ಏನೆಂದರೆ, 50 ದಿನಗಳ ವಾಯಿದೆಯನ್ನು ನೀಡಿದ್ದ ಪ್ರಧಾನಿಯವರು ಬಳಿಕ ಆ ವಾಯಿದೆಯನ್ನೇ ಮರೆತರು. ನೋಟ್‍ಬ್ಯಾನ್‍ನಿಂದ ಗಳಿಸಿದ್ದೇನು ಅನ್ನುವ ಬಹುಮುಖ್ಯ ಪ್ರಶ್ನೆಯನ್ನು ಕಾಶ್ಮೀರದ ಕಲ್ಲು, ನಕ್ಸಲ್ ಭಯೋತ್ಪಾದನೆ ಇತ್ಯಾದಿಗಳ ಮೂಲಕ ತೇಲಿಸಿ ಬಿಡತೊಡಗಿದರು. ನೋಟ್‍ಬ್ಯಾನ್ ಮಾಡುವಾಗ ಅವರು ಈ ಕಾರಣಗಳನ್ನು ನೀಡಿಯೇ ಇರಲಿಲ್ಲ. ಈ ಕಾರಣಗಳೂ ಸುಳ್ಳಾದಾಗ ಪ್ರಶ್ನಿಸುವುದನ್ನೇ ದೇಶದ್ರೋಹ ಅಂದರು. ಆದ್ದರಿಂದಲೇ, ಅವರ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಮೂಡುವುದು. ನಿಜವಾಗಿ, ಸಾಮಾನ್ಯ ನಾಗರಿಕರಿಗೆ ಒಳಿತು ಮಾಡುವ ಉದ್ದೇಶದಿಂದ ಅವರು ನೋಟ್‍ಬ್ಯಾನ್ ಮಾಡಿರಲಿಲ್ಲ. ಬದಲು ಅಂಬಾನಿ, ಅದಾನಿ, ಮಲ್ಯ, ಮೋದಿ ಮತ್ತು ಬಿಜೆಪಿಗೆ ಹಣ (ಪಾರ್ಟಿ ಫಂಡ್) ಒದಗಿಸುವ ಆಪ್ತರಿಗೆ ನೆರವಾಗುವ ಉದ್ದೇಶವೇ ನೋಟ್‍ಬ್ಯಾನ್‍ನ ಮುಖ್ಯ ಗುರಿಯಾಗಿತ್ತು. ಇದೇವೇಳೆ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಭಾರತೀಯ ಖಾತೆಗೆ ಜಮಾ ಮಾಡುವ ಹೊಣೆಗಾರಿಕೆಯಿಂದ ಅವರು ನುಣುಚಿಕೊಂಡರು. ಬಹುಶಃ, ಇದಕ್ಕೂ ಈ ಉದ್ಯಮಿಗಳೇ ಕಾರಣ ಎಂದೇ ಹೇಳಬೇಕಾಗುತ್ತದೆ. ವಿದೇಶಿ ಬ್ಯಾಂಕ್‍ಗಳಲ್ಲಿ ಕಪ್ಪು ಹಣವಿರುವುದು ಬಡ ಭಾರತೀಯರದ್ದಲ್ಲ. ಬಿಜೆಪಿಗೆ ಹಣ ಒದಗಿಸುವ ಉದ್ಯಮಿಗಳದ್ದು. ಒಂದುವೇಳೆ, ಅದನ್ನು ಭಾರತಕ್ಕೆ ಮರಳಿಸುವುದೆಂದರೆ, ಈ ಉದ್ಯಮಿಗಳನ್ನು ಎದುರು ಹಾಕಿಕೊಳ್ಳುವುದು ಎಂದೇ ಅರ್ಥ. ಹೀಗೆ ಎದುರು ಹಾಕಿಕೊಂಡರೆ ಮುಂದೆ ಪಾರ್ಟಿ ಫಂಡ್ ಅಲಭ್ಯವಾಗುತ್ತದೆ. ಫಂಡ್ ಅಲಭ್ಯವಾದರೆ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಜನರಿಗೆ ವಚನಭಂಗ ಆದರೂ ತೊಂದರೆಯಿಲ್ಲ, ಶ್ರೀಮಂತರಿಗೆ ತೊಂದರೆಯಾಗಬಾರದು ಎಂಬ ನಿಲುವಿಗೆ ಅವರು ಅಂಟಿಕೊಂಡರು.
ಸದ್ಯ, ಈ ದೇಶದಲ್ಲಿ ಕಳೆದ 40 ವರ್ಷಗಳಲ್ಲೇ  ಅತ್ಯಂತ ಗರಿಷ್ಠತಮ ನಿರುದ್ಯೋಗ ಸಮಸ್ಯೆಯಿದೆ. ಹಾಗೆಯೇ ಕೇಂದ್ರ ಸರಕಾರದ ಆಡಳಿತಾಂಗದಲ್ಲಿ 77 ಲಕ್ಷ ಹುದ್ದೆಗಳು ಖಾಲಿ ಇವೆ. ಪ್ರತಿ ಅರ್ಧ ಗಂಟೆಗೊಮ್ಮೆ ರೈತ ಆತ್ಮಹತ್ಯೆ ಮಾಡಿಕೊಳ್ಳುವಾಗ, ಇನ್ನೊಂದೆಡೆ ರೈತರಿಗೆ ವಿಮೆ ನೀಡುವ ಕಂಪೆನಿ 10 ಸಾವಿರ ಕೋಟಿ ಲಾಭವನ್ನು ತೋರಿಸಿದೆ. ಈ ಹಿಂದೆ 250 ರೂಪಾಯಿಗೆ ಅಗತ್ಯದ ಎಲ್ಲ ಟಿವಿ ಚಾನೆಲ್‍ಗಳನ್ನು ವೀಕ್ಷಿಸುತ್ತಿದ್ದ ಸಾಮಾನ್ಯ ಭಾರತೀಯನೊಬ್ಬ ಇವತ್ತು ಅವೇ ಚಾನೆಲ್‍ಗಳನ್ನು ಪಡೆಯಬೇಕಾದರೆ  ಕೇಬಲ್ ನಿರ್ವಾಹಕರಿಗೆ ದುಪ್ಪಟ್ಟು ಹಣ ಪಾವತಿಸಬೇಕಾಗಿದೆ. ಬೋಫೋರ್ಸ್‍ಗಿಂತ ಬಹುದೊಡ್ಡ ಹಗರಣವಾಗಿ ರಫೇಲ್ ಇವತ್ತು ದೇಶದ ಮುಂದಿದೆ. 1990ರ ಬಳಿಕ ಅತ್ಯಂತ ಹೆಚ್ಚಿನ ಅಶಾಂತ ಸ್ಥಿತಿಗೆ ಕಾಶ್ಮೀರ ತುತ್ತಾಗಿದೆ. ಅತ್ಯಂತ ಬಿಗಿ ಭದ್ರತೆಯ ಪುಲ್ವಾಮದಲ್ಲೇ  ನಮ್ಮ 40 ಯೋಧರ ಪ್ರಾಣಾಹುತಿ ನಡೆದಿದೆ. ಗುಂಪುಹತ್ಯೆ, ಥಳಿತ, ಅತ್ಯಾಚಾರ, ಆಹಾರ ವಸ್ತುಗಳ ಬೆಲೆ ಏರಿಕೆ, ತೈಲ ಬೆಲೆಯಲ್ಲಿ ಹೆಚ್ಚಳ ಇತ್ಯಾದಿಗಳಿಗೆ ತಡೆ ಹಾಕಲು ಪ್ರಧಾನಿಯವರಿಗೆ ಸಾಧ್ಯವಾಗಿಲ್ಲ. ನಿಜವಾಗಿ, ಮೋದಿಯವರು ಚುನಾವಣಾ ಸಭೆಗಳನ್ನು ಉದ್ದೇಶಿಸಿ ಈ ವಿಷಯಗಳ ಬಗ್ಗೆ ತನ್ನ ಸ್ಪಷ್ಟೀಕರಣಗಳನ್ನು ನೀಡಬೇಕಾಗಿತ್ತು. ತಾನೆಷ್ಟು ಉದ್ಯೋಗವನ್ನು ಸೃಷ್ಟಿಸಿದೆ, ಉಜ್ವಲ ಯೋಜನೆ ಎಷ್ಟು ಯಶಸ್ವಿ, ತಾನೇ ವಿರೋಧಿಸಿದ್ದ ಆಧಾರ್, ಎಫ್‍ಡಿಎ, ಸಬ್ಸಿಡಿ ಹಣ ನೇರ ವರ್ಗಾವಣೆ ಇತ್ಯಾದಿಗಳಲ್ಲಿ ನಿಲುವು ಬದಲಿಸಿದ್ದು ಯಾತಕ್ಕಾಗಿ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿತ್ತು. ತನ್ನ ಜನಪರ ಕಾರ್ಯಕ್ರಮಗಳನ್ನು ಜನರ ಮುಂದಿಡುವುದು ಮತ್ತು ಆ ಮೂಲಕ ಮತ್ತೊಂದು ಅವಧಿಗೆ ಚುನಾಯಿಸುವಂತೆ ಕೇಳಿಕೊಳ್ಳುವುದು- ಇದು ಮೋದಿ ಎಂದಲ್ಲ ಯಾವುದೇ ಆಡಳಿತ ಪಕ್ಷದ ಸಹಜ ಆಯ್ಕೆಯಾಗಬೇಕು. ಮೋದಿಯವರು ಹೀಗೆ ಮಾಡುತ್ತಿಲ್ಲ ಎಂದಾದರೆ ಅವರಲ್ಲಿ ಹೇಳಿಕೊಳ್ಳುವುದಕ್ಕೆ ಸಾಧನೆಗಳಿಲ್ಲ ಎಂದೇ ಅರ್ಥ. ಕಳೆದ 5 ವರ್ಷಗಳಲ್ಲಿ ಅವರ ಪ್ರಮುಖ ಸಾಧನೆ ಎಂದರೆ ಮಾತು ಮಾತ್ರ. ಒಳ್ಳೆಯ ಭಾಷಣಕಾರರಾಗಿ ಅವರು ಕಳೆದ 5 ವರ್ಷಗಳಲ್ಲಿ ದೇಶದ ಗಮನ ಸೆಳೆದರು. ಧಾರಾಳ ವಿದೇಶ ಸುತ್ತಿದರು. ವಿರೋಧ ಪಕ್ಷಗಳನ್ನು ತಮಾಷೆ ಮಾಡಿದರು. ಮಾತ್ರವಲ್ಲ, ನೆರೆಯ ಬಹುತೇಕ ಎಲ್ಲ ರಾಷ್ಟ್ರಗಳೊಂದಿಗೆ ದ್ವೇಷ ಕಟ್ಟಿಕೊಂಡರು. ಎಲ್ಲಿಯವರೆಗೆಂದರೆ, ಮಸೂದ್ ಅಝರನ ವಿಷಯದಲ್ಲಿ ಚೀನಾದ ಬೆಂಬಲ ಗಳಿಸುವುದಕ್ಕೂ ಅವರು ವಿಫಲರಾದರು. ನಿಜವಾಗಿ,
ದೇಶದ ಪ್ರಮುಖ 100 ಮಂದಿ ಚಿತ್ರ ನಿದೇರ್ಶಕರ ವಿನಂತಿಗೆ ಬಲ ಬರುವುದು ಈ ಎಲ್ಲ ಕಾರಣಗಳಿಂದಲೇ. ಅವರು ನಿಜವನ್ನೇ ಹೇಳಿದ್ದಾರೆ. ನರೇಂದ್ರ ಮೋದಿ ವಿಫಲ ಪ್ರಧಾನಿ.