Monday, 18 June 2012

ಶಾರದ ಎಂಬ ತಾಯಿ, ವೆಂಕಟರಮಣ ಭಟ್ ಎಂಬ ಅಪ್ಪ

ಈ ಸುದ್ದಿಗಳನ್ನು ಓದಿ

1. ಕಾಶ್ಮೀರದ ಮಾನವ ಹಕ್ಕು ಕಾರ್ಯಕರ್ತರೋರ್ವರನ್ನು
ಕೊಂದ ಆರೋಪವಿದ್ದ ಮಾಜಿ ಸೇನಾಧಿಕಾರಿ ಅವತಾರ್ ಸಿಂಗ್ ರು ,
ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.                                                - ಜೂನ್ 11, 2012
2. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ 80 ವರ್ಷದ ಬ್ರಾಹ್ಮಣ ಮಹಿಳೆ ಕಳೆದ 12 ವರ್ಷಗಳಿಂದ ಭಿಕ್ಷೆ ಬೇಡಿ ಬದುಕುತ್ತಿದ್ದಾರೆ. ಅರಮನೆಯಂಥ ಮನೆ ಮತ್ತು ನಾಲ್ವರು ಮಕ್ಕಳಿದ್ದರೂ ¥ಕಿರಿಕಿರಿ¥ಯ ನೆಪವೊಡ್ಡಿ ಮನೆಯಿಂದ ಅವರನ್ನು ಹೊರಹಾಕಲಾಗಿದೆ.                                                                          - ಜೂನ್ 13, 2012
3. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವೆಂಕಟ್ರಮಣ ಭಟ್ ಎಂಬವರು 18, 16 ಮತ್ತು 12ರ ಹರೆಯದ ತಮ್ಮ ಮೂವರು ಮಕ್ಕಳನ್ನೂ ಪತ್ನಿಯನ್ನೂ ಕೊಂದು ಪರಾರಿಯಾಗಿದ್ದಾರೆ..                                   - ಜೂನ್ 15, 2012

ಕಳೆದ ಒಂದೇ ವಾರದಲ್ಲಿ ಪ್ರಕಟವಾದ ಮೂರು ಸುದ್ದಿಗಳಿವು. ಈ ಸುದ್ದಿಗಳ ವಿಶೇಷತೆ ಏನೆಂದರೆ, ಇವು ಓದುಗರನ್ನು ಒಂದಷ್ಟು ಹೊತ್ತು ಕಟ್ಟಿ ಹಾಕುತ್ತದೆ. ಭಾವುಕಗೊಳಿಸುತ್ತದೆ. ರಾಜಕೀಯದ್ದೋ ಕ್ರೀಡೆಯದ್ದೋ ವರದಿಯನ್ನು ಓದಿದಷ್ಟು ಸಲೀಸಾಗಿ ಇದನ್ನು ಓದುವುದಕ್ಕೆ ಸಾಧ್ಯವೂ ಆಗುವುದಿಲ್ಲ. ಇಷ್ಟಕ್ಕೂ ಇಬ್ಬರು ವ್ಯಕ್ತಿಗಳ ಮಧ್ಯೆ ನಡೆಯುವ ಜಗಳ ಕೊಲೆಯಲ್ಲಿ ಅಂತ್ಯವಾಗುವುದಕ್ಕೂ ಓರ್ವ ಅಪ್ಪ ತಾನೇ ಬೆಳೆಸಿದ ತನ್ನ ಮಕ್ಕಳನ್ನು ಕೊಲ್ಲುವುದಕ್ಕೂ ವ್ಯತ್ಯಾಸ ಇದೆ. ವರ್ಷಗಟ್ಟಲೆ ತನ್ನ ಬಳಿ ಮಲಗಿದ ಪತ್ನಿಯನ್ನು ಕೊಲ್ಲುವುದೆಂದರೆ, ಅದು `ಕೊಲೆ’ ಎಂಬ ಎರಡಕ್ಷರಗಳಲ್ಲಿ ಹೇಳಿ ಮುಗಿಸುವಷ್ಟು ಸಣ್ಣ ಸಂಗತಿಯಲ್ಲ. ಇನ್ನು, 80 ವರ್ಷದ ವೃದ್ಧೆಯನ್ನು ಐವತ್ತೋ ಅರುವತ್ತೋ ವರ್ಷದ ಮಕ್ಕಳು ಮನೆಯಿಂದ ಹೊರಗಟ್ಟುತ್ತಾರೆಂದರೆ, ಅವರು ಬೌದ್ಧಿಕವಾಗಿ ಬೆಳೆದಿಲ್ಲ ಎಂದು ಹೇಳುವಂತೆಯೂ ಇಲ್ಲ. ಹೀಗಿರುವಾಗ ಇಂಥ ಕ್ರೂರ ಮತ್ತು ಹೃದಯ ವಿದ್ರಾವಕ ಘಟನೆಗಳನ್ನು ವ್ಯಾಖ್ಯಾನಿಸುವುದಾದರೂ ಹೇಗೆ?
ಶಾರದಾ
ನಿಜವಾಗಿ, ಅಪ್ಪ, ಅಮ್ಮ, ಮಕ್ಕಳು ಎಂಬ ಒಂದು ಸಣ್ಣ ಗುಂಪು ಒಂದೇ ಮನೆಯಲ್ಲಿದ್ದುಕೊಂಡು ಬದುಕುವುದೆಂದರೆ, ಜೈಲಿನಲ್ಲಿ ಕೆಲವಾರು ಕೈದಿಗಳು ಒಟ್ಟಿಗೆ, ಒಂದೇ ಸೆಲ್ ನಲ್ಲಿ ಬದುಕಿದಂತೆ ಖಂಡಿತ ಅಲ್ಲ. ಜೈಲಿನಲ್ಲಿ ವರ್ಷಗಟ್ಟಲೆ ಕೈದಿಗಳು ಒಟ್ಟಿಗಿದ್ದರೂ ಒಂದು ಬಗೆಯ ಅಂತರವನ್ನು ಕಾಯ್ದುಕೊಂಡೇ ಇರುತ್ತಾರೆ. ಬದುಕಿನಲ್ಲಿ ನಡೆದ ಸರ್ವವನ್ನೂ ಅವರು ಪರಸ್ಪರ ಹಂಚಿಕೊಳ್ಳುವುದೂ ಇಲ್ಲ. ಆದರೆ ಕುಟುಂಬ ಎಂಬುದು ಹಾಗಲ್ಲವಲ್ಲ. ಅಲ್ಲೊಂದು ವಿಶ್ವಾಸ ಇರುತ್ತದೆ. ಪತಿಯ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಪತ್ನಿ ತವರು ಮನೆಯಿಂದ ಹೊರಟು ಬರುತ್ತಾಳೆ. ಮಕ್ಕಳೂ ಹಾಗೆಯೇ. ಅಪ್ಪನನ್ನು ಹಚ್ಚಿಕೊಂಡೇ ಬೆಳೆಯುತ್ತವೆ. ಒಂದು ರೀತಿಯಲ್ಲಿ ಮನೆಯ ವಾತಾವರಣ ಎಂಬುದು ಪ್ರೀತಿ, ವಿಶ್ವಾಸ, ಅನುಕಂಪದ್ದಾಗಿರುತ್ತದೆ. ಆದ್ದರಿಂದಲೇ ಮನೆಯಲ್ಲಿ 10 ಮಂದಿಯಿದ್ದರೆ ಅವರೆಲ್ಲರನ್ನೂ ಕೊಲ್ಲುವುದಕ್ಕೆ ಓರ್ವ ಅಪ್ಪನಿಗೆ ಸಾಧ್ಯವಿದೆ. ಯಾಕೆಂದರೆ, ಅಪ್ಪ ಕೊಲ್ಲುತ್ತಾನೆ ಅನ್ನುವುದನ್ನು ಮಕ್ಕಳು ಕಲ್ಪಿಸಿಕೊಂಡಿರುವುದೇ ಇಲ್ಲ. ಒಂದು ವೇಳೆ ಅಪ್ಪ ಕತ್ತಿ ಎತ್ತಿದರೂ ಅದನ್ನು ಬೆದರಿಕೆಗೆ ಎಂದು ಮಕ್ಕಳು ತಿಳಿದುಕೊಳ್ಳುತ್ತಾರೆಯೇ ಹೊರತು ಕೊಲೆಗೆ ಎಂದಲ್ಲ. ಅಂಥದ್ದೊಂದು ವಿಶ್ವಾಸದ ವಾತಾವರಣ ಇರುವ ಮನೆಯಲ್ಲೂ ಹತ್ಯೆಗಳಾಗತೊಡಗಿದರೆ, ಹೆತ್ತ, ಸಾಕಿ ಸಲಹಿದ, ಮುತ್ತು ಕೊಟ್ಟ ತಾಯಿಯನ್ನೇ ಮಕ್ಕಳು ಮನೆಯಿಂದ ಹೊರಕ್ಕಟ್ಟುವುದು ನಡೆದರೆ, ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು?
    ಇವತ್ತು ಬದುಕಿನ ದೃಷ್ಟಿಕೋನಗಳು ಬದಲಾಗುತ್ತಾ ಇವೆ. ಅಪ್ಪ, ಅಮ್ಮ, ಮಕ್ಕಳು ಎಂಬ ಪವಿತ್ರ ಸಂಬಂಧಕ್ಕೆ ಪ್ರಸಕ್ತ ಜಗತ್ತಿನ ವಾತಾವರಣ ಅಷ್ಟಾಗಿ ಒಗ್ಗುತ್ತಿಲ್ಲ. ಬಿಝಿ ಜಗತ್ತು. ಮನುಷ್ಯನೂ ಬಿಝಿ. ಬೆಳಗ್ಗೆ ತೆರೆದು ರಾತ್ರಿ ಮುಚ್ಚುತ್ತಿದ್ದ ಭಟ್ರದ್ದೋ, ಶೆಟ್ರದ್ದೋ ಅಂಗಡಿಗಳು ಒಂದಾನೊಂದು ಕಾಲಕ್ಕೆ ಸೇರಿ ಆ ಜಾಗಕ್ಕೆ, ದಿನದ 24 ಗಂಟೆಯೂ ಜಗಮಗಿಸುವ ಮಾಲ್ ಗಳು ಬಂದಿವೆ. ಮನುಷ್ಯರನ್ನು ಪ್ರೀತಿ, ವಿಶ್ವಾಸ, ಸಂಬಂಧಗಳು ಆಳುವ ಬದಲು ದುಡ್ಡು, ಅಂತಸ್ತುಗಳು ಆಳತೊಡಗಿವೆ. ಇಂಥ ಹೊತ್ತಲ್ಲಿ ಇಂಥ ಘಟನೆಗಳನ್ನು ನಿರ್ಲಕ್ಷಿಸಿ ಮಾಧ್ಯಮಗಳು ಜನಪ್ರಿಯ ಇಶ್ಯೂಗಳನ್ನೇ ಚರ್ಚೆಗೆತ್ತಿಕೊಂಡರೆ ಖಂಡಿತ ಭವಿಷ್ಯದ ದೃಷ್ಟಿಯಿಂದ ಅದು ದೊಡ್ಡದೊಂದು ಪ್ರಮಾದವಾಗುವ ಸಾಧ್ಯತೆ ಇದೆ. ರಾಜಕೀಯ ಇವತ್ತೂ ಇರುತ್ತದೆ. ನಾಳೆಯೂ ಇರುತ್ತದೆ. ಸಿನಿಮಾ, ಕ್ರೀಡೆಗಳಿಗೆಲ್ಲಾ ಇವತ್ತು ಪ್ರಚಾರದ ಅಗತ್ಯವೂ ಇರುವುದಿಲ್ಲ. ಅದರಲ್ಲಿ ತೊಡಗಿಸಿಕೊಂಡವರು ಏನಾದರೊಂದು ಇಶ್ಯೂ ಸೃಷ್ಟಿಸಿಕೊಂಡು ಸುದ್ದಿಯಲ್ಲೇ ಇರುತ್ತಾರೆ. ಹೀಗಿರುವಾಗ, ಬರೇ ರಾಜಕೀಯ, ಕ್ರೀಡೆ, ಸಿನಿಮಾಗಳು ಮತ್ತು ಒಂದಿಷ್ಟು ಕ್ರೈಮುಗಳ ಸುತ್ತಲೇ ಸುತ್ತುವ ಬದಲು ಇಂಥ ಘಟನೆಗಳನ್ನು ಮಾಧ್ಯಮಗಳು ಚರ್ಚೆಗೆ ಎತ್ತಿಕೊಳ್ಳಬೇಕು. ಸಮಾಜವನ್ನು ಜಾಗೃತಿಗೊಳಿಸುವ ಸಂಪಾದಕೀಯ, ಚರ್ಚೆ, ಅಂಕಣಗಳು ಪ್ರಕಟವಾಗಬೇಕು. ಅಂದಹಾಗೆ ಹೆತ್ತವರು, ಮಕ್ಕಳು ತಂತಮ್ಮ ಹೊಣೆಗಾರಿಕೆಯ ಬಗ್ಗೆ ಆಲೋಚಿಸುವಂತೆ ಮಾಡುವುದಕ್ಕೆ ಇವತ್ತು ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯ ಇರುವಷ್ಟು ಇನ್ನಾವುದಕ್ಕೂ ಸಾಧ್ಯವಿಲ್ಲ. ಅದರ ಆಧಾರದಲ್ಲಿಯೇ ಜನರ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಅವು ಚರ್ಚಿಸುವುದನ್ನೇ ಸಮಾಜ ಚರ್ಚಿಸುತ್ತದೆ. ಹೀಗಿರುವಾಗ, ಕೌಟುಂಬಿಕ ಸಂಬಂಧ, ಮೌಲ್ಯಗಳ ಬಗ್ಗೆ ಅವು ತುಸು ಗಂಭೀರವಾದರೂ ಸಾಕು, ಸಮಾಜ ಅದರ ದುಪ್ಪಟ್ಟು ಗಂಭೀರವಾಗಬಲ್ಲುದು. ಅಪ್ಪ ವೆಂಕಟ್ರಮಣ ಭಟ್ಟರ ಕೈಯಲ್ಲೇ ಸಾವಿಗೀಡಾದ ಮಕ್ಕಳ ಬಗ್ಗೆ, ಅರಮನೆಯಂಥ ಮನೆಯಿದ್ದೂ ಅಲೆಮಾರಿಯಾಗಿರುವ ಶಾರದಾರ ಬಗ್ಗೆ ಚರ್ಚಿಸುವುದೆಂದರೆ ಅದು ನಮ್ಮೆಲ್ಲರ ಭವಿಷ್ಯದ ಕುರಿತು ಚರ್ಚಿಸಿದಂತೆ.
        ಏನೇ ಆಗಲಿ, ದುರ್ಬಲವಾಗುತ್ತಿರುವ ಮನುಷ್ಯ ಸಂಬಂಧಗಳಿಗೆ ಅವತಾರ್ ಸಿಂಗ್, ಶಾರದಾ ಮತ್ತು ವೆಂಕಟ್ರಮಣ ಭಟ್ರು ಅತ್ಯುತ್ತಮ ಪುರಾವೆಯಾಗಿದ್ದಾರೆ. ಅವರನ್ನು ಎದುರಿಟ್ಟುಕೊಂಡು ನಮ್ಮನ್ನು ನಾವು ತಿಕ್ಕಿ ನೋಡಿಕೊಳ್ಳಬೇಕಾದ ಅಗತ್ಯವಿದೆ. ಅಮ್ಮ, ಅಪ್ಪ, ಮಕ್ಕಳು ಎಂಬ ಸುಂದರ ಗುಂಪು ಪರಸ್ಪರ ಪ್ರೀತಿ, ವಿಶ್ವಾಸದಿಂದ ಎಂದೆಂದೂ ಬಾಳುವಂತಾಗಲು ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೆ ಶಾರದಾರಂಥ ತಾಯಿ, ವೆಂಕಟ್ರಮಣ ಭಟ್ರಂಥ ಅಪ್ಪಂದಿರ ಸಂಖ್ಯೆ ಹೆಚ್ಚಾದೀತು..

No comments:

Post a Comment