Monday, 10 September 2012

ಅವರೆಲ್ಲಾ ಆ ಪೋಟೋವನ್ನು ಜೇಬಿನಲ್ಲಿ ಇಟ್ಟುಕೊಳ್ಳಲಿ

ಮಾಯಾ ಕೊಡ್ನಾನಿ
ಈ ಟಿಪ್ಪಣಿಗಳನ್ನು ಓದಿ
1. ಜನಪ್ರತಿನಿಧಿಯಾಗಿ ಮಾಯಾ ಕೊಡ್ನಾನಿ ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ. ಆಕೆ ಪಾತಕದಲ್ಲಿ ಭಾಗಿಯಾಗಿದ್ದಾರೆ..
2. ಗಲಭೆಕೋರರ ಕೈಯಲ್ಲಿ ಕೊಲೆಗೀಡಾದ 20 ದಿನದ ಶುಐಬ್ ಎಂಬ ಶಿಶುವನ್ನು ನರೋಡ ಠಾಣೆಯ ಪೊಲೀಸರು 20 ವರ್ಷದ ಯುವಕ ಎಂದು ನಮೂದಿಸಿದ್ದಾರೆ.
3. ಘಟನಾ ಸ್ಥಳದಿಂದ ಒಬ್ಬನೇ ಒಬ್ಬ ಗಲಭೆಕೋರನನ್ನೂ ನರೋಡದ ಪೊಲೀಸರು ಬಂಧಿಸಿಲ್ಲ.
4. ಆಸ್ಪತ್ರೆಯಲ್ಲಿದ್ದ ಸಂತ್ರಸ್ತರಿಂದ ಹೇಳಿಕೆಗಳನ್ನೂ ಪಡಕೊಂಡಿಲ್ಲ.
5. ಆರೋಪಿಗಳನ್ನು ಗುರುತು ಹಚ್ಚುವ ಪೆರೇಡನ್ನೂ ನಡೆಸಲಾಗಿಲ್ಲ.
6. ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಕೆ.ಕೆ. ಮೈಸೂರ್‍ವಾಲ ಎಷ್ಟರ ಮಟ್ಟಿಗೆ ಕರ್ತವ್ಯಚ್ಯುತಿ ಎಸಗಿದರೆಂದರೆ, ಪ್ರದೇಶದಲ್ಲಿ ಸಾಮಾನ್ಯವಾಗಿ ಮಾಡಬೇಕಾಗಿದ್ದ ರೌಂಡನ್ನೂ ಮಾಡಿಲ್ಲ. ಪ್ರಾಥಮಿಕ ತನಿಖೆಯನ್ನೂ ನಡೆಸಿಲ್ಲ..
        ಜ್ಯೋತ್ಸ್ ನಾ  ಯಾಗ್ನಿಕ್ ಎಂಬ ನ್ಯಾಯಾಧೀಶೆಯ 1969 ಪುಟಗಳ ತೀರ್ಪಿನ ಉದ್ದಕ್ಕೂ ಇಂಥ ಸಾವಿರಾರು ಟಿಪ್ಪಣಿಗಳಿವೆ. ನಿಜವಾಗಿ, ಗುಜರಾತ್‍ನ ನರೋಡಾ-ಪಾಟಿಯಾ ಹತ್ಯಾಕಾಂಡದ ತನಿಖೆಯನ್ನು ಎರಡು ವರ್ಷಗಳ ಹಿಂದೆ ಇವರು ಎತ್ತಿಕೊಂಡಾಗ ಮಾಯಾ ಕೊಡ್ನಾನಿ, ಭಜರಂಗಿ, ಮೈಸೂರ್‍ವಾಲಾ.. ಮುಂತಾದ ಬೃಹತ್ ಆಲದ ಮರಗಳನ್ನೆಲ್ಲಾ ಉರುಳಿಸಿ ಬಿಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಒಂದಿಡೀ ವ್ಯವಸ್ಥೆಯೇ ಪಾತಕಿಗಳ, ರಕ್ಷಣೆಗೆ ಟೊಂಕಕಟ್ಟಿ ನಿಂತಿರುವಾಗ, ಯಾಗ್ನಿಕ್‍ಗೆ ಅದನ್ನು ಬೇಧಿಸಲು ಸಾಧ್ಯವಾ ಎಂಬ ಅನುಮಾನ,  ಅವರನ್ನು ಮೆಚ್ಚುವವರಲ್ಲೂ ಇತ್ತು. ಆದರೆ ಯಾಗ್ನಿಕ್ ಅವನ್ನೆಲ್ಲಾ ಸುಳ್ಳು ಮಾಡಿದ್ದಾರೆ.
           ಇಷ್ಟಕ್ಕೂ ಬಳ್ಳಾರಿಯ ಗಣಿ ಅಕ್ರಮಗಳ ಬಗ್ಗೆಯೋ, 2ಜಿ ಸ್ಪೆಕ್ಟ್ರಮ್‍ನ ಬಗ್ಗೆಯೋ ತನಿಖೆ ನಡೆಸುವುದಕ್ಕೂ ಹತ್ಯಾಕಾಂಡದ ತನಿಖೆ ನಡೆಸುವುದಕ್ಕೂ ಖಂಡಿತ ವ್ಯತ್ಯಾಸ ಇದೆ. ಯಾಕೆಂದರೆ, ಗಣಿಗೆ ಧರ್ಮದ ಹಂಗು ಇರುವುದಿಲ್ಲ. ರೆಡ್ಡಿಗಳು ಯಾವ ಜಾತಿಯವರು ಎಂಬುದು ತನಿಖೆಯ ಸಂದರ್ಭದಲ್ಲಿ ಮಹತ್ವ ಪಡಕೊಳ್ಳುವುದೂ ಇಲ್ಲ. ಸಮಾಜದ ಎಲ್ಲರೂ ಅಕ್ರಮವನ್ನು ವಿರೋಧಿಸುತ್ತಲೂ ಇರುತ್ತಾರೆ. ರಾಜಕಾರಣಿಗಳನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ ಗಲಭೆ ಹಾಗಲ್ಲ. ನಡೆದಿರುವುದು ಮನುಷ್ಯರ ಹತ್ಯೆಯೇ ಆಗಿದ್ದರೂ ಆ ಮನುಷ್ಯರನ್ನು ಅವನು - ಇವನು ಎಂದು ಸಮಾಜವೇ ವಿಭಜಿಸುತ್ತದೆ. ಗಲಭೆಯನ್ನು ನಿಯಂತ್ರಿಸಬೇಕಾದ ಪೊಲೀಸರಲ್ಲೂ ಅವನು - ಇವನು ಇರುತ್ತಾರೆ. ಸಾವಿಗೆ ಮತ್ತು ಬಂಧನಕ್ಕೆ ಒಳಗಾಗುವ ಮನುಷ್ಯರಲ್ಲಿ ಅವರೆಷ್ಟು-ಇವರೆಷ್ಟು ಎಂದು ಸಮಾಜ ಚರ್ಚಿಸುತ್ತದೆ. ರಾಜಕೀಯದ ಮಂದಿಯಲ್ಲೂ ಅವರದ್ದೇ ಆದ ಲಾಭ-ನಷ್ಟಗಳ ಲೆಕ್ಕಾಚಾರ ಇರುತ್ತದೆ. ಇಷ್ಟೇ ಅಲ್ಲ, ಯಾರು ಅದರ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಾರೋ ಅವರಿಗೂ ಒಂದು ಧರ್ಮ ಇರುತ್ತದೆ. ಅವನು ಅಥವಾ ಇವನಲ್ಲಿ ಅವರೂ ಒಬ್ಬರಾಗಿರುತ್ತಾರೆ. ಹೀಗಿರುವಾಗ ಯಾಗ್ನಿಕ್ ಎಂದಲ್ಲ, ಕೋಮು ಹತ್ಯಾಕಾಂಡದ ವಿಚಾರಣೆಯನ್ನು ಎತ್ತಿಕೊಳ್ಳುವ ಯಾವುದೇ ನ್ಯಾಯಾಧೀಶರೂ ರಾಜಕಾರಣಿಗಳಿಂದ ಮಾತ್ರವಲ್ಲ, ಸಮಾಜ ಮತ್ತು ತನ್ನೊಳಗಿಂದಲೂ ಒತ್ತಡಕ್ಕೆ ಒಳಗಾಗುತ್ತಾರೆ. ಇಂಥ ಒತ್ತಡಗಳಿಂದ ತಪ್ಪಿಸಿಕೊಂಡು ನ್ಯಾಯದ ಮೇಲೆ ದೃಢವಾಗಿ ನಿಲ್ಲುವುದಕ್ಕೆ ಎಲ್ಲರಿಗೆ ಸಾಧ್ಯವೂ ಆಗುವುದಿಲ್ಲ. ಆದ್ದರಿಂದಲೇ ಯಾಗ್ನಿಕ್‍ರ ಬಗ್ಗೆ ಅಭಿಮಾನ ಮೂಡುವುದು. ತನ್ನ ಒಡ ಹುಟ್ಟಿದವರು ಸಹಿತ ಕುಟುಂಬದ 19 ಮಂದಿಯನ್ನು ಕಣ್ಣೆದುರಲ್ಲೇ ಕಳಕೊಂಡ ಇಮ್ರಾನ್ ಶೈಕ್‍ನ (ಘಟನೆ ನಡೆಯುವಾಗ 16 ವರ್ಷ) ಸಾಕ್ಷ್ಯವನ್ನು ಸರಕಾರಿ ವಕೀಲರು ತಡೆಯಲೆತ್ನಿಸಿದಾಗ ಅವರ ಬಾಯಿ ಮುಚ್ಚಿಸಿದ್ದೂ ಯಾಗ್ನಿಕ್‍ರೇ. ಪಾತಕಿಗಳಿಂದ ತಪ್ಪಿಸಿಕೊಂಡು ರಿಸರ್ವ್ ಪೊಲೀಸ್ ಠಾಣೆಯ ಎದುರು ಗೇಟ್ ತೆರೆಯುವಂತೆ ಅಂಗಲಾಚಿದ ಗುಂಪಿನಲ್ಲಿ ಆತನೂ ಇದ್ದ. ಆದರೆ ಗೇಟ್ ತೆರೆಯುವ ಬದಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಕಣ್ಣೆದುರೇ ತಾಯಿಯನ್ನು, 7 ವರ್ಷದ ಮಗಳನ್ನು, ಸಹೋದರಿಯನ್ನು ಕಳಕೊಂಡ ನಈಮುದ್ದೀನ್‍ನಂಥ ಅನೇಕಾರು ಮಂದಿಗೆ ಧೈರ್ಯದಿಂದ ಸಾಕ್ಷ್ಯ ಹೇಳಲು ಅವಕಾಶ ಒದಗಿಸಿದ್ದೂ ಯಾಗ್ನಿಕ್‍ರೇ.
         ನ್ಯಾಯವನ್ನು ಖರೀದಿಸಲು ಸಾಧ್ಯ ಎಂಬ ನಂಬಿಕೆ ನಿಜವಾಗುತ್ತಿರುವ ಇಂದಿನ ದಿನಗಳಲ್ಲಿ ಯಾಗ್ನಿಕ್‍ರಂಥವರು ಖಂಡಿತ ಅಪರೂಪ. ಸಾಮಾನ್ಯವಾಗಿ ಯಾವುದೇ ಕೋಮು ಗಲಭೆಯಲ್ಲೂ ರೂವಾರಿಗಳು ಶಿಕ್ಷೆಗೆ ಗುರಿಯಾಗುವುದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಆಲದ ಮರವನ್ನು ಹಾಗೆಯೇ ಬಿಟ್ಟು ಅದರ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಪ್ರಯತ್ನವನ್ನೇ ಹೆಚ್ಚಿನ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಪೆಟ್ರೋಲನ್ನೋ ಡೀಸಲನ್ನೋ ಸುರಿದು ಮನುಷ್ಯರನ್ನು ಕೊಂದವ ಜೈಲಿಗೆ ಹೋಗುವಾಗ ಅವನ್ನು ಒದಗಿಸಿದವ ವಿಧಾನಸೌಧದಲ್ಲೋ ಏ.ಸಿ. ಕಾರಲ್ಲೋ ಹಾಯಾಗಿ ತಿರುಗುತ್ತಿರುತ್ತಾನೆ. ಆದರೆ ಯಾಗ್ನಿಕ್‍ರು ಮಾಯಾ ಕೊಡ್ನಾನಿ, ಭಜರಂಗಿಯಂಥ ಆಲದ ಮರವನ್ನೇ ಉರುಳಿಸಿದ್ದಾರೆ. ಕಳೆದ 10 ವರ್ಷಗಳಿಂದ ಹತಾಶ ಮುಖ ಭಾವದಲ್ಲಿದ್ದ, ಸಾಕ್ಷ್ಯ ಹೇಳುತ್ತಾ ಕಣ್ಣೀರು ಹಾಕುತ್ತಿದ್ದ ಸಂತ್ರಸ್ತರಿಗೆ ಮೊತ್ತಮೊದಲ ಬಾರಿ ಕೊಲೆಗಾರರು ಹತಾಶಭಾವದಲ್ಲಿ ಪೊಲೀಸ್ ವ್ಯಾನಿನಿಂದ ಇಣುಕುವುದನ್ನು ನೋಡಲು ಸಾಧ್ಯವಾಗಿದೆ.
        ನಿಜವಾಗಿ, ಕೊಡ್ನಾನಿ ಮತ್ತು ಯಾಗ್ನಿಕ್‍ರು ಸಮಾಜದ ಎರಡು ಮುಖಗಳ ಪ್ರತಿಬಿಂಬವಾಗಿದ್ದಾರೆ. ಸ್ತ್ರೀರೋಗ ತಜ್ಞೆಯಾದ ಕೊಡ್ನಾನಿಗೆ ತನ್ನಂತೇ ಇರುವ ಮಹಿಳೆಯರನ್ನು ಅತ್ಯಾಚಾರಕ್ಕೊಳಪಡಿಸುವುದು, ಹತ್ಯೆ ನಡೆಸುವುದೆಲ್ಲಾ ಧರ್ಮದ ರಕ್ಷಣೆಯಂತೆ ಕಾಣುವಾಗ ಕಾನೂನು ತಜ್ಞೆಯಾದ ಯಾಗ್ನಿಕ್‍ಗೆ, ಅದು ಧರ್ಮದ್ರೋಹದ ಕೃತ್ಯದಂತೆ ಕಾಣಿಸುತ್ತದೆ. ದುರಂತ ಏನೆಂದರೆ, ನಮ್ಮ ಸಮಾಜದಲ್ಲೂ ಕೊಡ್ನಾನಿಯಂಥವರು ಇದ್ದಾರೆ ಅನ್ನುವುದು. ಕೊಡ್ನಾನಿ ಯಾವ ಕ್ರೌರ್ಯಕ್ಕೆ ನೇತೃತ್ವ ನೀಡಿದ್ದರೋ ಅದನ್ನು ಈಗಲೂ ಅವರು ಧರ್ಮರಕ್ಷಣೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ ಅನ್ನುವುದು. ಆದ್ದರಿಂದ ಯಾಗ್ನಿಕ್‍ರ 1969 ಪುಟಗಳ ತೀರ್ಪಿನ ಸಂಕ್ಷಿಪ್ತ ರೂಪವನ್ನಾದರೂ ಕೊಡ್ನಾನಿಯ ಇಂಥ ಬೆಂಬಲಿಗರಿಗೆ ತಲುಪಿಸುವ  ವ್ಯವಸ್ಥೆಯಾಗಬೇಕು. ಯಾಕೆಂದರೆ ಈ ಸಮಾಜದಲ್ಲಿ ಹೆಚ್ಚಾಗಬೇಕಾದದ್ದು ಕೊಡ್ನಾನಿಗಳಲ್ಲ, ಯಾಗ್ನಿಕ್‍ಗಳು. ಪೊಲೀಸ್ ವ್ಯಾನ್‍ನಲ್ಲಿ ಗಲ್ಲಕ್ಕೆ ಕೈಯಿಟ್ಟು ಹತಾಶೆಯಿಂದ ನೋಡುತ್ತಿರುವ ಕೊಡ್ನಾನಿಯ ಪೊಟೋವನ್ನು ಮನುಷ್ಯ ವಿರೋಧಿಗಳೆಲ್ಲಾ ತಮ್ಮ ಜೇಬಿನಲ್ಲಿ ಕತ್ತರಿಸಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.

No comments:

Post a Comment