ಕಳೆದ ವಾರ ದೆಹಲಿಯಲ್ಲಿ 14 ನಿಮಿಷಗಳ ಕುಟುಕು ಕಾರ್ಯಾಚರಣೆಯ ಸಿಡಿಯೊಂದು ಬಿಡುಗಡೆಗೊಂಡಿತು. ಬಿಡುಗಡೆಗೊಳಿಸಿದ್ದು ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ನವೀನ್ ಜಿಂದಾಲ್. ಝೀ ನ್ಯೂಸ್ ಟಿ.ವಿ. ಚಾನೆಲ್‍ನ ಸಂಪಾದಕ ಸುಧೀರ್ ಚೌಧರಿ ಮತ್ತು ಝೀ ಬಿಸಿನೆಸ್ ನ್ಯೂಸ್‍ನ ಸಂಪಾದಕ ಸಮೀರ್ ಅಹ್ಲುವಾಲಿಯ ಇದರಲ್ಲಿ ಮುಖ್ಯ ಪಾತ್ರಧಾರಿಗಳು. ಕಲ್ಲಿದ್ದಲು ಹಗರಣದಲ್ಲಿ ಜಿಂದಾಲ್ ಕಂಪೆನಿ ಭಾಗಿಯಾಗಿರುವ ಬಗ್ಗೆ ಝೀ ಚಾನೆಲ್‍ಗಳಲ್ಲಿ ಧಾರಾಳ ಸುದ್ದಿಗಳು ಈ ಮೊದಲು ಪ್ರಸಾರ ಆಗಿದ್ದುವು. ಈಗಲೂ ಆಗುತ್ತಿವೆ. ವರ್ಷಕ್ಕೆ 25 ಕೋಟಿಯಂತೆ 4 ವರ್ಷಗಳಲ್ಲಿ 100 ಕೋಟಿ ರೂಪಾಯಿಗಳನ್ನು ಕೊಟ್ಟರೆ ಈ ಸುದ್ದಿಗಳ ಪ್ರಸಾರವನ್ನು ನಿಲ್ಲಿಸುವುದಾಗಿ ಚೌಧರಿ ಮತ್ತು ಅಹ್ಲುವಾಲಿಯಾಗಳು ಜಿಂದಾಲ್ ಅಧಿಕಾರಿಗಳಿಗೆ ಭರವಸೆ ಕೊಡುತ್ತಾರೆ. ಈ ಕುರಿತಂತೆ ಕಳೆದ ಸೆಪ್ಟೆಂಬರ್‍ನಲ್ಲಿ ವಿವಿಧ ಕೆಪೆ, ರೆಸ್ಟೋರೆಂಟ್‍ಗಳಲ್ಲಿ ಮಾತುಕತೆಗಳು ನಡೆಯುತ್ತವೆ. ಈ ಮಾತುಕತೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಕಳೆದ ಕೆಲವು ದಿನಗಳಿಂದ ಹೇಗೆ ಸುದ್ದಿ ಪ್ರಸಾರವನ್ನು ಕಡಿಮೆಗೊಳಿಸುತ್ತಾ ಬರಲಾಗಿದೆ ಎಂಬ ವರದಿಯನ್ನು ಚೌಧರಿ ಅಧಿಕಾರಿಗಳ ಮುಂದಿಡುತ್ತಾನೆ. ಇಂಥ ವ್ಯವಹಾರಗಳನ್ನು ಝೀ ಮಾತ್ರ ಮಾಡುತ್ತಿಲ್ಲ, ಟೈಮ್ಸ್ ಆಫ್ ಇಂಡಿಯಾದ ದೆಹಲಿ ಆವೃತ್ತಿಯಾದ ದೆಹಲಿ ಟೈಮ್ಸ್, ಬಾಂಬೆ ಟೈಮ್ಸ್ ಗಳೆಲ್ಲಾ ಪಾವತಿ ಸುದ್ದಿಗಳಿಂದಲೇ ಬದುಕುತ್ತಿವೆ ಎಂದೂ ಆತ ವೀಡಿಯೋದಲ್ಲಿ ಸಮರ್ಥಿಸಿಕೊಳ್ಳುತ್ತಾನೆ..'
ನಿಜವಾಗಿ, ನ್ಯೂಸ್ ಚಾನೆಲ್‍ಗಳೆಲ್ಲಾ ಕನಿಷ್ಠ 5 ನಿಮಿಷವಾದರೂ ತಮ್ಮ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಶೋಕ ಆಚರಿಸಬೇಕಾದಷ್ಟು ಗಂಭೀರ ಪ್ರಕರಣ ಇದು. ವಿಶೇಷ ಏನೆಂದರೆ, ಕುಟುಕು ಕಾರ್ಯಾಚರಣೆಗಳನ್ನು ಈ ವರೆಗೆ ಪ್ರಾಯೋಜಿಸುತ್ತಿದ್ದುದು ಮಾಧ್ಯಮಗಳೇ. ಕಾಳಿ ಮಠದ ಋಷಿಕುಮಾರ ಸ್ವಾಮಿಯ ಕಳ್ಳ ಮುಖವನ್ನು ಕುಟುಕು ಕಾರ್ಯಾಚರಣೆಯ ಮೂಲಕ ಇತ್ತೀಚೆಗೆ ಬಹಿರಂಗಗೊಳಿಸಿದ್ದೂ ಕನ್ನಡದ ಒಂದು ಟಿ.ವಿ. ಚಾನೆಲ್ಲೇ. ಆದರೆ ಇಲ್ಲಿ, ಕಂಪೆನಿಯೇ ಕುಟುಕು ಕಾರ್ಯಾಚರಣೆಗೆ ಇಳಿದಿದೆ. ಆ ಮುಖಾಂತರ ಟಿ.ವಿ. ಚಾನೆಲ್‍ಗಳ ಬ್ಲ್ಯಾಕ್‍ಮೇಲ್ ಪತ್ರಿಕೋದ್ಯಮವನ್ನು ಬಹಿರಂಗಪಡಿಸಿದೆ. ಸದ್ಯ ಝೀ ಚಾನೆಲ್‍ನ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದೆ. ಚೌಧರಿಯನ್ನು ಸಂಪಾದಕರುಗಳ ಸಂಘದಿಂದ ಉಚ್ಛಾಟಿಸಲಾಗಿದೆ. ಅಂದಹಾಗೆ, ಮಾಧ್ಯಮಗಳ ವಿಶ್ವಾಸಾರ್ಹತೆ ದಿನೇದಿನೇ ಕುಸಿಯುತ್ತಿರುವ ಈ ಹೊತ್ತಿನಲ್ಲಿ ಟಿ.ವಿ. ಚಾನೆಲ್‍ಗಳು ಈ ಪ್ರಕರಣಕ್ಕೆ ಕೊಡಬೇಕಾದ ಮಹತ್ವವಾದರೂ ಹೇಗಿರಬೇಕಿತ್ತು? ಗಡ್ಕರಿಯದ್ದೋ ವಾದ್ರಾರದ್ದೋ ಅಥವಾ ಇನ್ನಾರದ್ದೋ ಭ್ರಷ್ಟ ಮುಖವನ್ನು ಚರ್ಚಿಸುವುದಕ್ಕಿಂತ ಮೊದಲು ತಮ್ಮದೇ ಮುಖವನ್ನು ಚಂದಗೊಳಿಸುವುದು ಮಾಧ್ಯಮಗಳ ಅಗತ್ಯವೂ ಆಗಿತ್ತಲ್ಲವೇ? ನೀವು ವೀಕ್ಷಿಸುವ ಸುದ್ದಿ ಸ್ಪಾನ್ಸರ್ಡ್ ಅಲ್ಲ ಎಂದು ವೀಕ್ಷಕರನ್ನು ನಂಬಿಸುವ ಹೊಣೆಗಾರಿಕೆ ಇರುವುದು ಯಾರ ಮೇಲೆ? ಆದರೆ ಎಷ್ಟು ಚಾನೆಲ್‍ಗಳು ಇಂಥ ಪ್ರಯತ್ನ ಮಾಡಿವೆ? ಪ್ರಾಮಾಣಿಕತೆ, ಪಾರದರ್ಶಕತೆ.. ಮುಂತಾದ ಪದಗಳೆಲ್ಲ ರಾಜಕಾರಣಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲವಲ್ಲ. ಮಾಧ್ಯಮಗಳು ಈ ಪದಕ್ಕೆ ಮತ್ತು ಅವು ಧ್ವನಿಸುವ ಮೌಲ್ಯಗಳಿಗೆ ಬೆಲೆ ಕೊಡದಿದ್ದರೆ ಇತರರನ್ನು ದೂರುವ, ಪ್ರಶ್ನಿಸುವ ಅರ್ಹತೆಯಾದರೂ ಎಲ್ಲಿರುತ್ತದೆ? ಅದರಲ್ಲೂ ಋಷಿಕುಮಾರ ಸ್ವಾಮಿಯ ಬಗ್ಗೆ ಸತತ 3 ದಿನಗಳ ಕಾಲ ಲೈವ್ ಚರ್ಚೆಯನ್ನು ಹಮ್ಮಿ ಕೊಂಡ ಕನ್ನಡ ನ್ಯೂಸ್ ಚಾನೆಲ್‍ಗಳು ಝೀ ಪ್ರಕರಣದ ಕುರಿತಂತೆ ಬಹುತೇಕ ಚರ್ಚಿಸಿಯೇ ಇಲ್ಲ. ಇನ್ನಾರದ್ದೋ ದೌರ್ಬಲ್ಯಗಳಿಗೆ ಕ್ಯಾಮರಾ ಇಟ್ಟು ಅದನ್ನು ದಿನಗಟ್ಟಲೆ ಚರ್ಚಿಸುವ ಕನ್ನಡ ಚಾನೆಲ್‍ಗಳಿಗೆ ತಮ್ಮದೇ ದೌರ್ಬಲ್ಯಗಳು ಚರ್ಚೆಗೆ ಅನರ್ಹ ಅನ್ನಿಸಿಕೊಂಡದ್ದೇಕೆ?
ಮಾಧ್ಯಮಗಳು ನೂರು ಶೇಕಡಾ ಪಾರದರ್ಶಕ ಆಗಿವೆ ಎಂದು ಸಾರ್ವಜನಿಕರು ಬಿಡಿ, ಪತ್ರಕರ್ತರೇ ಇವತ್ತು ನಂಬುವ ಸ್ಥಿತಿಯಲ್ಲಿಲ್ಲ. ಸುದ್ದಿಗಳ ವಿಶ್ವಾಸಾರ್ಹತೆ ಅಷ್ಟಂಶ ಕೆಟ್ಟು ಹೋಗಿವೆ. ಟಿ.ವಿ. ಚಾನೆಲ್‍ಗಳಂತೂ ತಮ್ಮ ವೀಕ್ಷಕ ವಲಯವನ್ನು ವಿಸ್ತರಿಸುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸುತ್ತಿಲ್ಲ. ಪ್ರಕರಣವೊಂದು ಕೋರ್ಟು ಮೆಟ್ಟಲು ಹತ್ತುವುದಕ್ಕಿಂತ ಮೊದಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ತೀರ್ಪು ಕೊಡುವ ಕೆಲಸವನ್ನು ಅವು ಮಾಡುತ್ತಲೇ ಇವೆ. ಕನ್ನಡ ಚಾನೆಲ್‍ಗಳ ಮಟ್ಟಿಗೆ ಋಷಿಕುಮಾರ ಪ್ರಕರಣ ಇದಕ್ಕೆ ಇತ್ತೀಚಿನ ಉದಾಹರಣೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಚಾನೆಲ್ ಒಂದು, ಎಲ್ಲರೆದುರೇ ಅವರನ್ನು ಪೀಠದಿಂದ ಕೆಳಗಿಳಿಸುತ್ತದೆ. ಆ ಬಳಿಕ ಅದನ್ನೇ ಮಹಾನ್ ಸಾಧನೆಯೆಂಬಂತೆ ಬಿಂಬಿಸುತ್ತದೆ. ಇಷ್ಟಕ್ಕೂ ಇಂಥ ಕಾರ್ಯಕ್ರಮಗಳು ಓರ್ವ ಋಷಿಕುಮಾರನಿಗೆ ಮಾತ್ರ ಸೀಮಿತವಾಗಬೇಕೆಂದೇನೂ ಇಲ್ಲವಲ್ಲ. ನಾಳೆ, ತಮಗಾಗದವರನ್ನು ಬೆದರಿಸಿಯೋ ಮತ್ತುಬರಿಸಿಯೋ ಕ್ಯಾಮರಾದಲ್ಲಿ ಸೆರೆ ಹಿಡಿದು ಲೈವ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾನಹರಣ ಮಾಡುವುದಕ್ಕೂ ಇವು ಮುಂದಾಗಲಾರದೆಂದು ಹೇಗೆ ಹೇಳುವುದು? ಭಯೋತ್ಪಾದನೆಯ ಹೆಸರಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಬಂಧಿತರಾದ ಯುವಕರ ಬಗ್ಗೆ ಕನ್ನಡ ಚಾನೆಲ್‍ಗಳು ನಡೆದುಕೊಂಡದ್ದಾದರೂ ಹೇಗೆ? ಅವು ಆ ಯುವಕರ ಬಗ್ಗೆ ಈಗಾಗಲೇ ತೀರ್ಪು ಕೊಟ್ಟಿಲ್ಲವೇ?
ಮಾಧ್ಯಮಗಳು ತಾನೇ ತನಿಖೆ ನಡೆಸುವ ಮತ್ತು ತೀರ್ಪು ನೀಡುವ ಅಪಾಯಕಾರಿ ಪಾತ್ರವನ್ನು ನಿರ್ವಹಿಸುತ್ತಿರುವ ಈ ಹೊತ್ತಿನಲ್ಲಿಯೇ ಝೀ ಪ್ರಕರಣ ಬಯಲಿಗೆ ಬಂದಿದೆ. ಆ 14 ನಿಮಿಷಗಳ ಸಿ.ಡಿ.ಯಲ್ಲಿ ಮಾಧ್ಯಮಗಳು ಅವಲೋಕನ ನಡೆಸಿಕೊಳ್ಳುವುದಕ್ಕೆ ಧಾರಾಳ ವಿಷಯಗಳೂ ಇವೆ. ಸುಳ್ಳರು, ಭ್ರಷ್ಟರು, ಸೋಗಲಾಡಿಗಳೆಲ್ಲ ರಾಜಕೀಯದಲ್ಲಿ ಮಾತ್ರ ಇರುವುದಲ್ಲ, ಅವರು ಸುದ್ದಿ ಮನೆಯಲ್ಲೂ ಇದ್ದಾರೆ ಎಂಬುದನ್ನು ಆ ಸಿ.ಡಿ. ಬಲವಾಗಿ ಪ್ರತಿಪಾದಿಸುತ್ತಿದೆ. ಆದ್ದರಿಂದ ವೀಕ್ಷಕರಲ್ಲಿ ಭರವಸೆ ತುಂಬುವ ಹೊಣೆಗಾರಿಕೆಯನ್ನು ಚಾನೆಲ್‍ಗಳು ವಹಿಸಿಕೊಳ್ಳಲೇ ಬೇಕು. ತಮ್ಮನ್ನು ವಿಮರ್ಶೆಗೊಡ್ಡುವ ಅವಕಾಶದಿಂದ ಅವು ತಪ್ಪಿಸಿಕೊಳ್ಳಬಾರದು. ತಪ್ಪು ಮಾಧ್ಯಮಗಳಿಂದಾದರೂ ರಾಜಕಾರಣಿಗಳಿಂದಾದರೂ ತಪ್ಪು ತಪ್ಪೇ ಎಂದು ಸಾರಲು, ತಪ್ಪುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಚಾನೆಲ್‍ಗಳು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವೀಕ್ಷಕರು ನ್ಯೂಸ್‍ಗಳಿಗೂ ಮನರಂಜನೆಯ ಸ್ಥಾನವನ್ನಷ್ಟೇ ಕೊಟ್ಟುಬಿಟ್ಟಾರು.