ರೈತ ಎಂಬ ಎರಡಕ್ಷರಕ್ಕೆ ಡಿಕ್ಷನರಿಯಲ್ಲಿರುವ ಅರ್ಥ ಬೇಸಾಯಗಾರ ಎಂದು. ಸಾಮಾನ್ಯವಾಗಿ ಯಾವುದೇ ಒಂದು ಪದಕ್ಕೆ ಡಿಕ್ಷನರಿಯಲ್ಲಿ ಒಂದಕ್ಕಿಂತ ಹೆಚ್ಚು ಅರ್ಥ, ವ್ಯಾಖ್ಯಾನಗಳಿರುತ್ತವೆ. ಆದರೆ ರೈತನಿಗೆ ಇಲ್ಲವೇ ಮನುಷ್ಯನಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳೇ ಇಲ್ಲ. ಮನುಷ್ಯನನ್ನು ಮನುಜ ಎಂದಷ್ಟೇ ಡಿಕ್ಷನರಿ ವ್ಯಾಖ್ಯಾನಿಸುತ್ತದೆ. ಒಂದು ರೀತಿಯಲ್ಲಿ ಮನುಷ್ಯ ಎಂದ ಕೂಡಲೇ ಕಾಲುಗಳಿಂದ ನಡೆಯುವ, ಕೈಗಳಿಂದ ಕೆಲಸ ಮಾಡುವ, ಬುದ್ಧಿ-ಭಾವ ಇರುವ, ಬಟ್ಟೆ ಧರಿಸುವ.. ಒಂದು ಚಿತ್ರ ನಮ್ಮ ಕಣ್ಣ ಮುಂದೆ ಬರುವಂತೆಯೇ, ರೈತ ಎಂಬ ಪದವೂ, ಠಾಕು-ಠೀಕು ಇಲ್ಲದ, ನೇಗಿಲನ್ನೋ ಭತ್ತದ ಮೂಟೆಯನ್ನೋ ಹೊತ್ತು ನಡೆದಾಡುವ ಶ್ರಮಜೀವಿಗಳ ಗುಂಪೊಂದನ್ನು ಕಣ್ಣ ಮುಂದೆ ತರುತ್ತದೆ. ಹಸಿವು, ಬಾಯಾರಿಕೆ, ನೋವುಗಳ ವಿಷಯದಲ್ಲಿ ಭಾರತದ ಮನುಷ್ಯನಿಗೂ ಅಮೇರಿಕದ ಮನುಷ್ಯನಿಗೂ ನಡುವೆ ವ್ಯತ್ಯಾಸ ಇರಲು ಸಾಧ್ಯವಿಲ್ಲವಲ್ಲ. ಹಾಗೆಯೇ ಕರ್ನಾಟಕ ಮತ್ತು ತಮಿಳುನಾಡು ರೈತರ ಮಧ್ಯೆಯೂ ವ್ಯತ್ಯಾಸ ಇರಲು ಸಾಧ್ಯವಿಲ್ಲ. ಈ ರೈತರು ಬಳಸುತ್ತಿರುವ ನೀರಿನ ಮೂಲ ಒಂದೇ. ಭಾಷೆ ಭಿನ್ನ ಆದರೂ ದೇಶ ಒಂದೇ. ಗದ್ದೆಗಳಲ್ಲಿ ಬೆಳೆಯುತ್ತಿರುವುದೂ ಬಹುತೇಕ ಒಂದೇ. ಇಷ್ಟೆಲ್ಲ ಇದ್ದೂ ಕಾವೇರಿ ಎಂದ ಕೂಡಲೇ ಇವರೆಲ್ಲ 'ಅವರು', 'ಇವರು' ಆಗಿ ವಿಭಜನೆಗೊಳ್ಳುವುದೇಕೆ? ಈ ವಿಭಜನೆಗೂ ರಾಜಕೀಯಕ್ಕೂ ನಡುವೆ ಇರುವ ಸಂಬಂಧಗಳೇನು? ತಮಿಳುನಾಡು ಮತ್ತು ಕರ್ನಾಟಕದ ರೈತರು ಒಟ್ಟು ಸೇರಿ 2003ರಲ್ಲೇ ‘ಕಾವೇರಿ ಕುಟುಂಬ' ಎಂಬೊಂದು ತಂಡವನ್ನು ರಚಿಸಿಕೊಂಡಿದ್ದರು. ರೈತರು, ನೀರಾವರಿ ತಜ್ಞರೂ ಸೇರಿದಂತೆ 20ರಷ್ಟು ಸದಸ್ಯರಿರುವ ಆ ತಂಡ, ಉಭಯ ರಾಜ್ಯಗಳ ನೀರಾವರಿ ಪ್ರದೇಶಗಳಿಗೆ ಭೇಟಿ ನೀಡಿದೆ. ರೈತರ ಮಧ್ಯೆ ಮಾತುಕತೆಗಳನ್ನು ಏರ್ಪಡಿಸಿವೆ. ಶೀಘ್ರ ಸರಕಾರದ ಮುಂದೆ ವರದಿ ಇಡುವ ಸಾಧ್ಯತೆಯೂ ಇದೆ. ಆದರೆ 2002ರಲ್ಲಿ ಕಬಿನಿ ಜಲಾಶಯಕ್ಕೆ ಹಾರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ರಾಜಕೀಯ ಪಕ್ಷಗಳಾಗಲಿ ಅಥವಾ ತಮಿಳುನಾಡನ್ನು ನೀರು ಕೊಳ್ಳೆ ಹೊಡೆಯುವ ದರೋಡೆಕೋರನಂತೆ ಚಿತ್ರಿಸುವ ಇವತ್ತಿನ ರಾಜಕಾರಣಿಗಳಾಗಲಿ, ಈ ‘ಕಾವೇರಿ ಕುಟುಂಬದ' ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಕಳೆದ 9 ವರ್ಷಗಳಿಂದ ಈ ಕುಟುಂಬದ ಸದಸ್ಯರು ತಮ್ಮದೇ ಖರ್ಚಿನಲ್ಲಿ ಸಮೀಕ್ಷೆ ನಡೆಸಿದ್ದಾರೆ, ಮಾತುಕತೆ ಆಯೋಜಿಸಿದ್ದಾರೆ. ಒಂದು ವೇಳೆ ರಾಜಕಾರಣಿಗಳು 'ಕಾವೇರಿ ಕುಟುಂಬ'ಕ್ಕೆ ಸಂಪೂರ್ಣ ಬೆಂಬಲ ಸಾರಿರುತ್ತಿದ್ದರೆ, ಇವತ್ತು ಈ ಪರಿಸ್ಥಿತಿ ಬರುವ ಸಾಧ್ಯತೆ ಇತ್ತೇ? ಸುಪ್ರೀಮ್ ಕೋರ್ಟ್‍ನಲ್ಲಿ ಸರಕಾರ ಈ ವರೆಗೆ ಖರ್ಚು ಮಾಡಿರುವ ಮೊತ್ತದ ಸಣ್ಣದೊಂದು ಭಾಗವನ್ನು ಈ 'ಕುಟುಂಬಕ್ಕೆ' ರವಾನಿಸುತ್ತಿದ್ದರೆ ಇವತ್ತು 'ನೀರು' ಈ ಮಟ್ಟದಲ್ಲಿ ಸುದ್ದಿಗೊಳಗಾಗುತ್ತಿತ್ತೇ?
ನಿಜವಾಗಿ, ನೀರು, ಮನುಷ್ಯರನ್ನು ತಮಿಳು, ಕನ್ನಡ, ಮರಾಠಿ.. ಎಂದೆಲ್ಲಾ ವಿಭಜಿಸುವುದೇ ಇಲ್ಲ. ಕಾವೇರಿ ನದಿಯು ಕರ್ನಾಟಕದ ರೈತರಿಗೆ ಗುಣಮಟ್ಟದ ನೀರನ್ನೂ ತಮಿಳುನಾಡು ರೈತರಿಗೆ ಕಳಪೆ ಮಟ್ಟದ ನೀರನ್ನೂ ಕೊಡುತ್ತಿರುವ ಬಗ್ಗೆ ಈ ವರೆಗೆ ಯಾರೂ ದೂರಿಕೊಂಡಿಲ್ಲ. ಇಷ್ಟಕ್ಕೂ, ಕರ್ನಾಟಕ ಮತ್ತು ತಮಿಳುನಾಡು ಎಂಬೆರಡು ರಾಜ್ಯಗಳಲ್ಲಿ ರೈತರು ಹಂಚಿಹೋಗದೇ ಇರುತ್ತಿದ್ದರೆ, ಕಾವೇರಿ ವಿವಾದವಾಗುತ್ತಿತ್ತೇ? ಇವು ಎರಡು ರಾಜ್ಯಗಲಾಗುವ ಬದಲು ಒಂದೇ ರಾಜ್ಯವಾಗಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಪ್ರತಿಭಟನೆಗಳಾಗುತ್ತಿದ್ದವೇ? ಕೋರ್ಟಿನಲ್ಲಿ ಮೊಕದ್ದಮೆ ದಾಖಲಾಗುತ್ತಿತ್ತೇ? ಅಂದರೆ, ಸದ್ಯದ ವಿವಾದ ಏನಿದೆಯೋ ಅದಕ್ಕೆ ನೀರು ನೆಪ ಮಾತ್ರ. ನಿಜವಾದ ಕಾರಣ ಎರಡು ರಾಜ್ಯಗಳಲ್ಲಿ ರೈತರು ಹಂಚಿಹೋದದ್ದು. ಅಂದಹಾಗೆ, ಕಾವೇರಿ ನೀರನ್ನು ಬಳಸಿ ದಶಕಗಳ ಕಾಲ ಉತ್ತು-ಬಿತ್ತ ಕರ್ನಾಟಕದ ರೈತನೊಬ್ಬ ತಮಿಳುನಾಡಿಗೆ ವಲಸೆ ಹೋದನೆಂದಿಟ್ಟುಕೊಳ್ಳಿ. ಅಲ್ಲಿ ಆತನ ನಿಲುವು ಏನಿದ್ದೀತು? ಆತ ತಮಿಳುನಾಡಿನಲ್ಲಿ ನಿಂತು ಕರ್ನಾಟಕದ ರೈತರ ಪರ ಮಾತಾಡುವ ಸಾಧ್ಯತೆ ಇದೆಯೇ? ನ್ಯಾಯ ಕರ್ನಾಟಕದ ಪರ ಇದ್ದರೂ ಅದನ್ನು ಬಹಿರಂಗವಾಗಿ ಹೇಳಿ ಆತನಿಗೆ ದಕ್ಕಿಸಿಕೊಳ್ಳುವುದು ಇವತ್ತು ಸಾಧ್ಯವಾ? ಯಾಕೆಂದರೆ, ಒಟ್ಟು ಪರಿಸ್ಥಿತಿಯನ್ನು ರಾಜಕಾರಣಿಗಳು ಅಷ್ಟಂಶ ಕೆಡಿಸಿಬಿಟ್ಟಿದ್ದಾರೆ. ಒಟ್ಟು ವಿವಾದವೇ ಭಾವನಾತ್ಮಕವಾಗಿ ಬಿಟ್ಟಿದೆ. ಇಂಥ ಹೊತ್ತಲ್ಲಿ ಈ ವಿವಾದವನ್ನು ರಾಜಕಾರಣಿಗಳು ಪರಿಹರಿಸಬಲ್ಲರೆಂದು ಹೇಗೆ ನಿರೀಕ್ಷಿಸುವುದು? ಅವರಾಡುವ ಪ್ರತಿ ಪದವೂ ಓಟಿನ ಲೆಕ್ಕಾಚಾರದಲ್ಲೇ ಇರುತ್ತದೆ. ಒಂದು ವೇಳೆ ಸುಪ್ರೀಮ್ ಕೋರ್ಟು ಮುಂದೊಂದು ದಿನ ನೀಡುವ ತೀರ್ಪನ್ನು ಎರಡೂ ರಾಜ್ಯಗಳ ರೈತರು ಸ್ವಾಗತಿಸಿದರೂ ರಾಜಕಾರಣಿಗಳು ಸ್ವಾಗತಿಸುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಸ್ವಾಗತಿಸುವುದಕ್ಕಿಂತ ವಿರೋಧಿಸುವುದರಲ್ಲೇ ಅವರಿಗೆ ಅವಕಾಶಗಳು ಹೆಚ್ಚಿರುತ್ತವೆ.
ನಿಜವಾಗಿ ಕಾವೇರಿಯ ನದಿ ನೀರನ್ನು ಕನ್ನಡಿಗರು ಇಲ್ಲವೇ ತಮಿಳರು ಸಂಶೋಧನೆಯಿಂದ ಸೃಷ್ಟಿಸಿಕೊಂಡದ್ದೇನೂ ಅಲ್ಲ. ಇಂತಿಂಥ ಪ್ರದೇಶದಲ್ಲಿ ಮಾತ್ರ ಹರಿಯಬೇಕು ಎಂದು ಯಾರಾದರೂ ಕೇಳಿಕೊಂಡಿದ್ದರಿಂದಾಗಿ ಅದು ಹರಿಯುತ್ತಲೂ ಇಲ್ಲ. ನಾಲ್ಕು ರಾಜ್ಯಗಳ ಲಕ್ಷಾಂತರ ಮಂದಿಯ ಪಾಲಿಗೆ ಇವತ್ತು ಈ ನೀರು ಜೀವನಾಡಿಯಾಗಿದ್ದರೆ ಅದರ ಹಿಂದೆ ಪ್ರಕೃತಿಯ ದೊಡ್ಡದೊಂದು ಸಂದೇಶ ಇದೆ. ಅದು ಸರ್ವರೂ ಸಮಾನರು ಎಂಬ ಸಂದೇಶ. ನೀರಿಗೆ ಇಲ್ಲದ ಅಸೂಯೆ, ದ್ವೇಷ, ಹೊಟ್ಟೆಕಿಚ್ಚುತನಗಳೆಲ್ಲ ಅದನ್ನು ಬಳಸುವ ಮನುಷ್ಯರಲ್ಲಿ ಇರಬಾರದು ಎಂಬ ಸಂದೇಶ. ಈ ಸಂದೇಶವನ್ನು ಮೊತ್ತಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ರಾಜಕಾರಣಿಗಳು. ಒಂದು ವೇಳೆ ರಾಜಕಾರಣಿಗಳ ಬದಲು, ‘ಕಾವೇರಿ ಕುಟುಂಬದಂಥ’ ಗುಂಪುಗಳಿಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕರೆ, ಅವರ ಹೇಳಿಕೆಗಳಿಗೆ ಬ್ರೇಕಿಂಗ್ ನ್ಯೂಸ್ ಆಗುವ ಭಾಗ್ಯ ದಕ್ಕಿದರೆ ಖಂಡಿತ ಇವತ್ತಿಗಿಂತ ಭಿನ್ನವಾದ ವಾತಾವರಣ ನಿರ್ಮಾಣವಾದೀತು. ರೈತರನ್ನು ರೈತರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಲ್ಲವರಾದರೂ ಯಾರು? ಅಂದಹಾಗೆ, ಕಾವೇರಿ ಹೋರಾಟದ ನೊಗವನ್ನು ರಾಜಕಾರಣಿಗಳಿಂದ ಕಸಿದು ಉಭಯ ರಾಜ್ಯಗಳ ರೈತರಿಗೆ ಕೊಟ್ಟುಬಿಟ್ಟರೆ ಸಾಕು, ಅರ್ಧ ಸಮಸ್ಯೆ ಪರಿಹಾರವಾದಂತೆ. ಆದ್ದರಿಂದ ಕಾವೇರಿ ವಿವಾದವನ್ನು ಮೊತ್ತಮೊದಲು ರಾಜಕೀಯ ಮುಕ್ತಗೊಳಿಸಿ ರೈತರ ಕೈಗೆ ಒಪ್ಪಿಸಿಬಿಡೋಣ. ಉಳುವ ರೈತನಿಗೆ ಹರಿವ ನೀರನ್ನು ಹಂಚಿಕೊಳ್ಳಲು ಖಂಡಿತ ಗೊತ್ತಿದೆ.

No comments:
Post a Comment