ಜೆಸಿಂತಾ |
ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಚರ್ಚೆಗೆ ಒಳಗಾಗಿದೆ. ಮೇಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಟಿಯನ್ ಎಂಬ ಆಸ್ಟ್ರೇಲಿಯದ ಇಬ್ಬರು ರೇಡಿಯೋ ನಿರೂಪಕರು ನಾಪತ್ತೆಯಾಗಿದ್ದಾರೆ. ‘ಇಂಗ್ಲೆಂಡಿನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೆಸಿಂತಾರನ್ನು ಕೊಂದ ಪಾಪಿಗಳು ನೀವು..' ಎಂದು ಫೇಸ್‍ಬುಕ್‍ನಲ್ಲಿ ಸಾವಿರಾರು ಮಂದಿ ಇವರನ್ನು ದೂಷಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಹದಿಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿ ಫೇಸ್ ಬುಕ್‍ನಲ್ಲಿ ಇವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ, ಮೇಲುನೋಟಕ್ಕೆ ಇವರಿಬ್ಬರು ಕೊಲೆಗಾರರೇ ಅಲ್ಲ. ಆಸ್ಟ್ರೇಲಿಯಾದ ಟುಡೇ ಎಫ್.ಎಂ. ಎಂಬ ರೇಡಿಯೋದ ನಿರೂಪಕರಾದ ಇವರು ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿದರು. ‘ನಿಮ್ಮಲ್ಲಿ ದಾಖಲಾಗಿರುವ ರಾಜಕುಮಾರ ವಿಲಿಯಮ್ಸ್ ರ ಪತ್ನಿ ಕೇಟ್‍ಳ ಆರೋಗ್ಯ ಮಾಹಿತಿಯನ್ನು ಕೊಡಿ'.. ಅಂತ ವಿನಂತಿಸಿದರು. ತಾವು ಬ್ರಿಟನ್ನಿನ ರಾಣಿ ಎಲಿಜಬೆತ್ ಮತ್ತು ರಾಜಕುಮಾರ ವಿಲಿಯಮ್ಸ್ ರ ತಂದೆ ಚಾರ್ಲ್ಸ್ ಮಾತಾಡುತ್ತಿರುವುದು ಅಂತಲೂ ಹೇಳಿದರು. ದೂರವಾಣಿ ಕರೆಯನ್ನು ಸ್ವೀಕರಿಸಬೇಕಿದ್ದ ರಿಸೆಪ್ಶನ್ ಕೆಲಸ ಮುಗಿಸಿ ಹೋಗಿದ್ದರಿಂದ ದಾದಿ ಜೆಸಿಂತಾ ಅದನ್ನು ಸ್ವೀಕರಿಸಿ ಕೇಟ್‍ಳನ್ನು ಆರೈಕೆ ಮಾಡುತ್ತಿದ್ದ ದಾದಿಗೆ ವರ್ಗಾಯಿಸಿದಳು. ಆಕೆ ಎಲ್ಲ ಮಾಹಿತಿಯನ್ನೂ ಅವರಿಗೆ ನೀಡಿದಳು. ಇದಾಗಿ ಎರಡು ದಿನಗಳ ಬಳಿಕ ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಳು.
ಮಾಧ್ಯಮಗಳ ಮೇಲೆ ಇವತ್ತು ಇರುವ ಆರೋಪ ಏನೆಂದರೆ, ಅವು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತವೆ ಅನ್ನುವುದು. ಪತ್ರಿಕೆಯ ಮಾಲಿಕ, ಸಂಪಾದಕ ಮತ್ತು ವರದಿಗಾರನ ಮರ್ಜಿಗೆ ತಕ್ಕಂತೆ ಸುದ್ದಿಗಳು ತಯಾರಾಗುತ್ತವೆ ಎಂಬುದು. ಇವತ್ತು ಪತ್ರಿಕೆಯೊಂದಕ್ಕೆ ನಿರ್ದಿಷ್ಟ ಪಕ್ಷ ಇಲ್ಲವೇ ವ್ಯಕ್ತಿಯ ಮೇಲೆ ಒಲವು ಇದ್ದರೆ, ಆ ಪಕ್ಷದ ಪರ ಜನರ ಅಲೆಯಿದೆ ಎಂಬಂತೆ ಸುದ್ದಿಗಳನ್ನು ರಚಿಸುವುದಿದೆ. ವ್ಯಕ್ತಿ ಎಷ್ಟೇ ಭ್ರಷ್ಟನಾಗಿದ್ದರೂ ಜನರ ಮಧ್ಯೆ ಅವು ಚರ್ಚೆಯಾಗದಂತೆ ನೋಡಿಕೊಳ್ಳುತ್ತಾ, ವ್ಯಕ್ತಿಯನ್ನು ಮೆರೆಸುವ, ಅನುಕಂಪ ಪೂರಿತ ಲೇಖನಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರಕಟಿಸುವುದೂ ಇದೆ. ವಿಶೇಷವಾಗಿ, ಬಾಬರಿ ಮಸೀದಿಯನ್ನು ಉರುಳಿಸಿದ ದಿನಗಳಲ್ಲಿ ಮತ್ತು ಆ ಬಳಿಕದ ಕೋಮು ಉದ್ವಿಘ್ನತೆಯ ವೇಳೆಯಲ್ಲೆಲ್ಲಾ ಕೆಲವೊಂದು ಪತ್ರಿಕೆಗಳು ಈ ಗುಣವನ್ನು ಧಾರಾಳ ಪ್ರದರ್ಶಿಸಿವೆ. ಗುಜರಾತ್ ಹತ್ಯಾಕಾಂಡವನ್ನು ಮೃದು ಪದಗಳಲ್ಲಿ ಖಂಡಿಸುವ ಲೇಖನಗಳನ್ನು ಪ್ರಕಟಿಸುತ್ತಲೇ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೋದಿಯ ಸಿದ್ಧಾಂತದಡಿಯಲ್ಲಿ ಹತ್ಯಾಕಾಂಡವನ್ನು ಸಮರ್ಥಿಸುವ ದುಪ್ಪಟ್ಟು ಲೇಖನಗಳನ್ನು ಪ್ರಕಟಿಸಿದ್ದೂ ಇವೆ. ಈ ಮನಃಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಬೇಕಾದರೆ ಎಲ್ಲಾದರೂ ಬಾಂಬ್ ಸ್ಫೋಟವಾಗಬೇಕು. ಆಗ ಕೆಲವು ಪತ್ರಿಕೆಗಳ ಸುದ್ದಿ ಮತ್ತು ವಿವರಗಳು ಎಷ್ಟು ಅಸಹ್ಯ ಆಗಿರುತ್ತವೆ ಅಂದರೆ, ಇತರ ಯಾವ ಪತ್ರಕರ್ತರಿಗೂ ಸಿಗದ 'ಮೂಲಗಳ ವಿವರಗಳು' ಅವಕ್ಕೆ ಸಿಕ್ಕಿರುತ್ತವೆ. ನಿಜವಾಗಿ, ಮಾಧ್ಯಮಗಳ ಈ ಮನಸ್ಥಿತಿಯು ಸಾರ್ವಜನಿಕವಾಗಿ ಚರ್ಚೆಯಲ್ಲಿರುವಾಗಲೇ ಜೆಸಿಂತಾ ಸಾವಿಗೀಡಾಗಿದ್ದಾಳೆ. ಇದು ಬರೇ ಆತ್ಮಹತ್ಯೆಯಲ್ಲ, ಸುಳ್ಳಿನ ಪತ್ರಿಕೋದ್ಯಮಕ್ಕೆ ಓರ್ವ ದುರ್ಬಲ ದಾದಿ ತೋರಿದ ಪ್ರತಿಭಟನೆ. ಆದ್ದರಿಂದಲೇ ಆತ್ಮಹತ್ಯೆ ಎಂಬ ನಾಲ್ಕಕ್ಷರಗಳಲ್ಲಿ ನಾವು ಈ ಸಾವಿಗೆ ಸಮಾಧಿಯನ್ನು ಕಟ್ಟಬಾರದು. ಅಂದಹಾಗೆ, ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ರಾಜಕುಮಾರಿ ಕೇಟ್ ದಾಖಲಾಗಿದ್ದುದು ಗರ್ಭದ ತಪಾಸಣೆಗಾಗಿ. ದೂರವಾಣಿ ಕರೆಯನ್ನು ದಾದಿಗೆ ವರ್ಗಾಯಿಸುವ ಸ್ವಾತಂತ್ರ್ಯ ಜೆಸಿಂತಾಳಿಗೆ ಇಲ್ಲದಿದ್ದರೂ ಕರೆ ಮಾಡಿದವರ ಸುಳ್ಳನ್ನು ನಂಬಿ ಆಕೆ ವರ್ಗಾಯಿಸಿದ್ದಳು. ಆದ್ದರಿಂದಲೇ ಆಕೆ ಆಸ್ಪತ್ರೆಯ ಅಧಿಕಾರಿಗಳ ತರಾಟೆಗೂ ಒಳಗಾದಳು..
ಇಷ್ಟಕ್ಕೂ, ಗರ್ಭದಾರಣೆ ಎಂಬುದು ತೀರಾ ಖಾಸಗಿ ವಿಚಾರ. ರಾಜಕುಟುಂಬವಾದರೂ ಕೂಲಿ ಕಾರ್ಮಿಕನ ಕುಟುಂಬವಾದರೂ ಎಲ್ಲದಕ್ಕೂ ಖಾಸಗಿತನ ಎಂಬುದಿದೆ. ಅದಕ್ಕೆ ಕ್ಯಾಮರಾ ಇಡುವುದು ಎಷ್ಟು ಸರಿ? ಪತ್ರಿಕೋದ್ಯಮಕ್ಕೆ ಸುಳ್ಳು ಅನಿವಾರ್ಯವೇ? ತಾನು ಇಂತಿಂಥ ಸುದ್ದಿಯನ್ನು, ಇಂತಿಂಥವರಲ್ಲಿ ಸುಳ್ಳು ಹೇಳಿ, ವಂಚಿಸಿ ಪಡಕೊಂಡೆ ಎಂದು ಯಾವ ಪತ್ರಕರ್ತರೇ ಆಗಲಿ ಬಹಿರಂಗವಾಗಿ ಹೇಳಿಕೊಳ್ಳಬಲ್ಲರೇ? ಅಂದಹಾಗೆ, ಭ್ರಷ್ಟಾಚಾರಕ್ಕೂ ಗರ್ಭಧಾರಣೆಯಂಥ ಖಾಸಗಿ ಸಂಗತಿಗಳಿಗೂ ಖಂಡಿತ ವ್ಯತ್ಯಾಸ ಇದೆ. ಭ್ರಷ್ಟಾಚಾರ ವ್ಯಕ್ತಿಯ ಖಾಸಗಿ ಸಂಗತಿಯಲ್ಲ. ಅಂತಹವರನ್ನು ಕಾನೂನಿನ ಮುಂದೆ ತರುವುದಕ್ಕಾಗಿ ಕೆಲವೊಮ್ಮೆ ಸ್ಟಿಂಗ್ ಆಪರೇಶನ್‍ನಂಥ ಚಟುವಟಿಕೆ ಅನಿವಾರ್ಯ ಆಗಿರಬಹುದು. ಹಾಗಂತ ತೀರಾ ಖಾಸಗಿ ವಿಚಾರಕ್ಕೂ ಸುಳ್ಳಿನ ಮುಖಾಂತರ ನುಸುಳತೊಡಗಿದರೆ ಅದನ್ನು ಹೇಗೆ ಸಮರ್ಥಿಸುವುದು?
ಮಾಧ್ಯಮ ಪೈಪೋಟಿಯು ಇವತ್ತು ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ರೋಚಕ ಸುದ್ದಿಯನ್ನು ಕೊಡುವ ಧಾವಂತದಲ್ಲಿ ಸರಿ-ತಪ್ಪುಗಳನ್ನೇ ಕಡೆಗಣಿಸುವಷ್ಟು. ರೋಚಕ ಸುದ್ದಿ ಸಿಗದೇ ಹೋದರೆ ಅಂಥದ್ದೊಂದು ಸುದ್ದಿಯನ್ನು ಸೃಷ್ಟಿಸುವ ಸಣ್ಣತನ ಕೂಡ ಇವತ್ತು ಪತ್ರಿಕಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿವೆ. ದುಡ್ಡು ಪಡಕೊಂಡು ಸುದ್ದಿ ತಯಾರಿಸುವ ಪತ್ರಿಕೆಗಳೂ ಪತ್ರಕರ್ತರೂ ಇವತ್ತಿದ್ದಾರೆ. ಇಂಥ ಮನಸ್ಥಿತಿಯು ಕ್ರಮೇಣ ಪತ್ರಕರ್ತರು ಮತ್ತು ಪತ್ರಿಕೆಗಳ ಕುರಿತಂತೆ ಸಾರ್ವಜನಿಕರಲ್ಲಿ ಗೌರವವನ್ನು ಕಡಿಮೆಗೊಳಿಸಲಾರದೇ? ಒಂದಷ್ಟು ಕಾಸು ಕೊಟ್ಟರೆ ಆತ/ಕೆ ಯಾವ ಸುಳ್ಳನ್ನೂ ಗೀಚಬಹುದು ಎಂದು ಸಾರ್ವಜನಿಕರು ಪತ್ರಕರ್ತರನ್ನು ನೋಡಿ ಹೇಳುವಂಥ ಸನ್ನಿವೇಶ ಸೃಷ್ಟಿಯಾಗಿ ಬಿಟ್ಟರೆ ಏನಾಗಬಹುದು? ಈಗಾಗಲೇ ಝೀ ಟಿ.ವಿ.ಯ ಸಂಪಾದಕರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಿಜವಾಗಿ, ಪತ್ರಿಕಾರಂಗ ಸುದ್ದಿಯಲ್ಲಿರಬೇಕಾದುದು ಕೊಲೆ ಆರೋಪಿಯಾಗಿಯೋ, ಭ್ರಷ್ಟಾಚಾರಿಯಾಗಿಯೋ ಅಲ್ಲ. ಸಮಾಜದ ಅಂಕು-ಡೊಂಕುಗಳಿಗೆ ಕನ್ನಡಿ ಹಿಡಿಯುವವರು ಸ್ವಯಂ ಅಂಕು-ಡೊಂಕಾಗಿದ್ದರೆ ಸಮಾಜ ಅವರ ಬಗ್ಗೆ ಯಾವ ಬಗೆಯ ಅಭಿಪ್ರಾಯವನ್ನು ಇಟ್ಟುಕೊಳ್ಳಬಹುದು?
ಜೆಸಿಂತಾಳ ಸಾವು ಪ್ರತಿಯೋರ್ವ ಪತ್ರಕರ್ತೆ/ರ್ತನನ್ನೂ ಚಿಂತನೆಗೆ ಒಳಪಡಿಸಬೇಕು. 'ಸುಳ್ಳಿನ ಪತ್ರಿಕೋದ್ಯಮದಲ್ಲಿ ತನ್ನ ಪಾತ್ರ ಏನಿದೆ' ಎಂಬ ಬಗ್ಗೆ ಎದೆಗೆ ಕೈಯಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾಕೆಂದರೆ ಒಂದೇ ಒಂದು ಸುಳ್ಳು ವಾಕ್ಯವು ಸಾವಿರಾರು ಮಂದಿಯ ಸಾವಿಗೆ, ದುಃಖಕ್ಕೆ, ಕಣ್ಣೀರಿಗೆ ಕಾರಣವಾಗಬಹುದು. ಆದ್ದರಿಂದ ಪತ್ರಕರ್ತ/ರ್ತೆ ಸತ್ಯವಂತನಾಗಲಿ. ಜೆಸಿಂತಾಳ ಆತ್ಮಹತ್ಯೆ ಪತ್ರಿಕಾ ರಂಗವನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗಲಿ.
No comments:
Post a Comment