Monday, 12 August 2013

ನಾಪತ್ತೆಯಾಗುವ ಪಾಂಡೆ ಮತ್ತು ಗುಜರಾತ್ ಮಾದರಿ


   ‘ನಾಪತ್ತೆ’ ಆಗುವವರಿಗೆ ಗುಜರಾತ್ ರಾಜ್ಯವು ಎಷ್ಟೊಂದು ಸುರಕ್ಷಿತ ತಾಣ ಎಂಬುದನ್ನು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪಿ.ಪಿ. ಪಾಂಡೆಯವರು ಕಳೆದ ಎರಡ್ಮೂರು ತಿಂಗಳಿನಿಂದ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣದಲ್ಲಿ ಅವರ ವಿರುದ್ಧ ಸಿಬಿಐಯು ಆರೋಪ ಪಟ್ಟಿ ಸಲ್ಲಿಸಿದ ಕೂಡಲೇ ಅವರು ನಾಪತ್ತೆಯಾಗಿದ್ದರು. ಮೊನ್ನೆ ಮೊನ್ನೆಯಂತೆ ಸ್ಟ್ರೆಚರ್‍ನಲ್ಲಿ ಮಲಗಿಕೊಂಡು ದಿಢೀರ್ ಆಗಿ ಸಿಬಿಐ ನ್ಯಾಯಾಲಯದಲ್ಲಿ ಹಾಜರಾದರು. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆದರೆ ಅರ್ಜಿ ತಿರಸ್ಕøತಗೊಂಡ ಕೂಡಲೇ ಆಸ್ಪತ್ರೆಯಿಂದ ಅವರು ಪುನಃ ನಾಪತ್ತೆಯಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕನೊಬ್ಬನಿಗೆ ಗುಜರಾತ್‍ನಲ್ಲಿ ಇಷ್ಟೊಂದು ದೀರ್ಘ ಅವಧಿವರೆಗೆ ತಲೆಮರೆಸಿಕೊಂಡು ಬದುಕಲು ಸಾಧ್ಯ ಎಂದಾದರೆ ‘ಮೋದಿ ಮಾದರಿಯ' ಅರ್ಥವಾದರೂ ಏನು? ಆ ಮಾದರಿಯಲ್ಲಿ ಏನೆಲ್ಲ, ಯಾವುದೆಲ್ಲ ಒಳಗೊಂಡಿದೆ? ಇಶ್ರತ್ ಜಹಾನ್‍ಳನ್ನು ರಾತೋರಾತ್ರಿ ಪತ್ತೆ ಹಚ್ಚಿ ಎನ್‍ಕೌಂಟರ್ ಮಾಡುವಷ್ಟು ನಿಪುಣರಾಗಿರುವ ಗುಜರಾತ್ ಪೊಲೀಸರಿಗೆ, ಪಾಂಡೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆಂದರೆ ಏನರ್ಥ? ಇಷ್ಟಕ್ಕೂ, ಇಶ್ರತ್‍ ಜಹಾನ್, ಪ್ರಾಣೇಶ್ ಪಿಳ್ಳೆ ಎಂಬವರೆಲ್ಲ ಪಾಂಡೆಯಂತೆ  ಪರಿಚಿತರಲ್ಲವಲ್ಲ. ಅವರೆಲ್ಲ ತೀರಾ ಸಾಮಾನ್ಯರಲ್ಲಿ ಸಾಮಾನ್ಯರು. ನಾಪತ್ತೆಯಾಗಿರುವರೆಂದು ಹೇಳಿ ಅವರ ಪೋಟೋವನ್ನು ರೈಲು, ಬಸ್ಸು ನಿಲ್ದಾಣಗಳಲ್ಲಿ ತೂಗು ಹಾಕಲಾಗಿಲ್ಲ. ಪತ್ರಿಕೆಗಳಲ್ಲಿ ಅವರ ಪೋಟೋ ಪ್ರಕಟ ಆಗಿಲ್ಲ. ಹಾಗಿದ್ದರೂ ಅವರನ್ನು ಪತ್ತೆ ಹಚ್ಚುವ ಸಾಮರ್ಥ್ಯ  ಗುಜರಾತ್ ಪೊಲೀಸ್ ಇಲಾಖೆಗೆ ಇದೆಯೆಂದ ಮೇಲೆ, ಗುಜರಾತ್‍ನಾದ್ಯಂತ ಸಣ್ಣ ಮಕ್ಕಳಿಗೂ ಮುಖ ಪರಿಚಯ ಇರುವ ಪಾಂಡೆ ಯಾಕೆ ಪತ್ತೆಯಾಗುತ್ತಿಲ್ಲ? ಮೋದಿಯವರು ಮಾದರಿ ಎಂದು ಹೇಳುತ್ತಾರಲ್ಲ, ಯಾವುದನ್ನು? ಈ ಪೊಲೀಸ್ ಇಲಾಖೆಯನ್ನೇ? ಇಂಥದ್ದೊಂದು ಅದಕ್ಷ  ಇಲಾಖೆಯನ್ನು ಕಟ್ಟಿ ಬೆಳೆಸಿರುವ ಮೋದಿಯವರು ಒಂದು ವೇಳೆ ಪ್ರಧಾನಿಯಾದರೆ ಈ ದೇಶದ ಪೊಲೀಸ್ ಇಲಾಖೆಗಳ ಸ್ಥಿತಿ ಏನಾದೀತು? ಕ್ರಿಮಿನಲ್‍ಗಳು, ಕೊಲೆ ಆರೋಪಿಗಳೆಲ್ಲ ನಾಪತ್ತೆಯಾಗುತ್ತಾ, ಸಾಮಾನ್ಯರು ಎನ್‍ಕೌಂಟರ್‍ಗೆ ಒಳಗಾಗುವ ವಾತಾವರಣ ಸೃಷ್ಟಿಯಾಗದೇ? ಒಂದು ನಾಪತ್ತೆ ಪ್ರಕರಣವನ್ನೇ ನಿಭಾಯಿಸಲಾಗದ ಮೋದಿಯವರು ಈ ವಿಶಾಲ ದೇಶವನ್ನು ಹೇಗೆ ತಾನೇ ಮುನ್ನಡೆಸಿಯಾರು?  
   ನಿಜವಾಗಿ, ಬಿಜೆಪಿ ಈ ದೇಶದಲ್ಲಿ ಹತ್ತಾರು ಪ್ರತಿಭಟನೆಗಳನ್ನು ನಡೆಸಿದೆ. ದೆಹಲಿ ಅತ್ಯಾಚಾರದಿಂದ ಹಿಡಿದು ಉಡುಪಿ ಅತ್ಯಾಚಾರದ ವರೆಗೆ ಧರಣಿ, ರಾಲಿಗಳನ್ನು ನಡೆಸಿದೆ. ಅಕ್ರಮ ಗೋಸಾಗಾಟಗಾರರನ್ನು ಬಂಧಿಸುವಂತೆ ಅದು ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಅಂದಹಾಗೆ, ಇಂಥ ಅಪರಿಚಿತ ಅಪರಾಧಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ಈ ಮಟ್ಟದ ಆಕ್ರೋಶ ಇರುವುದನ್ನು ತಪ್ಪು ಅನ್ನಬೇಕಿಲ್ಲ. ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕು. ದೇಶವು ಕ್ರಿಮಿನಲ್‍ಗಳ, ಕಳ್ಳಕಾಕರ, ಅತ್ಯಾಚಾರಿ ಗಳ ಪಾಲಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಯಾರು ಪ್ರದರ್ಶಿಸಿದರೂ ಅದು ಶ್ಲಾಘನೀಯವೇ. ಆದರೆ, ಬಿಜೆಪಿ ಕಾರ್ಯಕರ್ತರ ಈ ನ್ಯಾಯ ಪ್ರಜ್ಞೆಯು ಪಾಂಡೆಯ ವಿಚಾರದಲ್ಲಿ ಮಾತ್ರ ಯಾಕೆ ನಾಪತ್ತೆಯಾಗಿದೆ? ದೆಹಲಿಯಲ್ಲಿ ಅತ್ಯಾಚಾರಕ್ಕೆ ಈಡಾದ ಯುವತಿಯಂತೆಯೇ ಇಶ್ರತ್ ಕೂಡಾ ಓರ್ವ ಹೆಣ್ಣು. ಆಕೆ ಅಪರಾಧಿ ಎಂದು ಈವರೆಗೂ ಸಾಬೀತಾಗಿಲ್ಲ. ಆ ಇಡೀ ಎನ್‍ಕೌಂಟರ್ ಪ್ರಕರಣವೇ ನಕಲಿ ಎಂದು ಬಹುತೇಕ ಇವತ್ತು ಖಚಿತವಾಗಿಬಿಟ್ಟಿದೆ. ಹೀಗಿರುವಾಗ ಯುವತಿಯನ್ನು ಕೊಂದ ಆರೋಪಿಯನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಯಾಕೆ ಅದು ಪ್ರತಿಭಟನೆ ಮಾಡುತ್ತಿಲ್ಲ? ಒಂದು ವೇಳೆ, ಪಾಂಡೆಯಂತೆ ಆರೋಪ ಹೊತ್ತುಕೊಂಡ ಅಧಿಕಾರಿಯೊಬ್ಬ ಬಿಹಾರದಲ್ಲೋ ದೆಹಲಿಯಲ್ಲೋ ನಾಪತ್ತೆಯಾಗುತ್ತಿದ್ದರೆ ಮೋದಿಯವರ ಕುಹುಕ ನುಡಿಗಳು ಹೇಗಿರುತ್ತಿತ್ತು? ಅದನ್ನು  ಯುಪಿಎಯ ವೈಫಲ್ಯಕ್ಕೆ ಪುರಾವೆಯಾಗಿ  ಅವರು ಉಲ್ಲೇಖಿಸುತ್ತಿರಲಿಲ್ಲವೇ? ದೇಶದೊಳಗೇ ಇರುವ ಅಧಿಕಾರಿಯನ್ನು ಪತ್ತೆ ಹಚ್ಚದವರು ಇನ್ನು ದಾವೂದ್ ಇಬ್ರಾಹೀಮ್‍ನನ್ನು ಪತ್ತೆ ಹಚ್ಚುತ್ತಾರಾ ಎಂದು ಪ್ರಶ್ನಿಸುತ್ತಿರಲಿಲ್ಲವೇ?
   ಪಾಂಡೆಯವರ ನಾಪತ್ತೆ ಪ್ರಕರಣವನ್ನು ಯಾವುದೋ ಓರ್ವ ಕಿಸೆಗಳ್ಳನ ನಾಪತ್ತೆಯಂತೆ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಹಿರಿಯ ಅಧಿಕಾರಿಯಾಗಿರುವ ಅವರು ನಾಪತ್ತೆಯಾಗುತ್ತಾರೆಂಬುದೇ ದೊಡ್ಡ ವಿಡಂಬನೆ. ನಡೆಯಲು ಸಾಧ್ಯವಿಲ್ಲದಷ್ಟು ಹೃದಯ ಬೇನೆಯಿರುವ ಓರ್ವ ವ್ಯಕ್ತಿ ನಾಪತ್ತೆಯಾಗುವುದು ಮತ್ತು ಅವರನ್ನು ಪತ್ತೆ ಹಚ್ಚುವಲ್ಲಿ ಒಂದಿಡೀ ವ್ಯವಸ್ಥೆ  ವೈಫಲ್ಯ ಅನುಭವಿಸುವುದೆಲ್ಲ ಗುಜರಾತ್ ಮಾದರಿ ಯಾಕೆ ಭಯಾನಕ ಅನ್ನುವುದಕ್ಕೆ ಉದಾಹರಣೆಯಾಗಿದೆ. ಅಲ್ಲಿ ಮೋದಿಗೆ ನಿಷ್ಠೆ ವ್ಯಕ್ತಪಡಿಸುವ ವ್ಯಕ್ತಿ ಸ್ಟ್ರೆಚರ್‍ನಲ್ಲಿ ಮಲಗಿದ್ದರೂ ನಾಪತ್ತೆಯಾಗುತ್ತಾನೆ. ನಿಜವಾಗಿ ಈ ಮಾದರಿಗೆ ಹೋಲಿಸಿದರೆ ಕರ್ನಾಟಕ ಮಾದರಿ ಎಷ್ಟೋ ಪಾಲು ಉತ್ತಮ. ಮೂಡಬಿದಿರೆಯ ಜೈನ ಬಸದಿಯಿಂದ ಆಭರಣಗಳನ್ನು ಹೊತ್ತೊಯ್ದ ಅಂತಾರಾಷ್ಟ್ರೀಯ ಕಳ್ಳನನ್ನು ಆಂಧ್ರ ಪ್ರದೇಶದಿಂದ ಪತ್ತೆ ಹಚ್ಚಿ ಕರೆ ತರಲು ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಂಡೆಗೆ ಹೋಲಿಸಿದರೆ ಈ ಕಳ್ಳ ತೀರಾ ಅಪರಿಚಿತ. ಆತ ಪ್ರತಿ ಸಂದರ್ಭದಲ್ಲೂ ವೇಷ ಬದಲಿಸುತ್ತಿದ್ದ. ತನ್ನ ಗುರುತು ಪತ್ತೆಯಾಗದಂತೆ ಜಾಗರೂಕತೆ ಪಾಲಿಸುತ್ತಿದ್ದ. ಇಷ್ಟೆಲ್ಲಾ ಅಡೆತಡೆಗಳಿದ್ದೂ ರಾಜ್ಯ ಪೊಲೀಸರು ಓರ್ವ ನಿಪುಣ ಕಳ್ಳನನ್ನು ಎರಡು ವಾರಗಳೊಳಗೆ ಬಂಧಿಸಿ ತರುತ್ತಾರೆಂದರೆ ಯಾಕೆ ಈ ಇಲಾಖೆ ಮೋದಿಯ ಪಾಲಿಗೆ ಮಾದರಿ ಆಗಬಾರದು?
   ಮೋದಿ ಈ ದೇಶದ ಮುಂದೆ ಯಾವ ಮಾದರಿಯನ್ನು ಇವತ್ತು ಪ್ರತಿಪಾದಿಸುತ್ತಿದ್ದಾರೋ ಅದರ ಇನ್ನೊಂದು ಮುಖವಾಗಿ ಪಾಂಡೆ ನಮ್ಮ ಮುಂದಿದ್ದಾರೆ. ಗುಜರಾತ್ ಮಾದರಿಯಲ್ಲಿ ಪಾಂಡೆಯಂಥವರು ಬಂಧನಕ್ಕೆ ಒಳಗಾಗುವುದಿಲ್ಲ ಎಂಬುದಷ್ಟೇ ಈ ಪ್ರಕರಣ ಸಾರುವುದಲ್ಲ ಬದಲು ಇಶ್ರತ್‍ಳಂಥ ಬಲಿಗಳು ಈ ಮಾದರಿಗೆ ಸದಾ ಅಗತ್ಯವಿರುತ್ತದೆ ಎಂಬುದನ್ನೂ ಇದು ಹೇಳುತ್ತದೆ. ಆದ್ದರಿಂದಲೇ, ಪಾಂಡೆ ನಾಪತ್ತೆಯನ್ನು ಕೇವಲ ಓರ್ವ ಅಧಿಕಾರಿಯ ನಾಪತ್ತೆ ಪ್ರಕರಣವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆ ನಾಪತ್ತೆಯ ಜೊತೆ ವ್ಯವಸ್ಥೆಗೂ ಪಾಲಿದೆ. ಈ ವಾಸ್ತವವನ್ನು ಅರಿತುಕೊಂಡರೆ ಗುಜರಾತ್ ಮಾದರಿ ಯಾವ ಕಾರಣಕ್ಕೆ ಈ ದೇಶದ ಪಾಲಿಗೆ ಮಾರಕ ಎಂಬುದು ಗೊತ್ತಾಗುತ್ತದೆ. ಈ ಮಾದರಿಯು ಪಾಂಡೆಯಂಥವರ ಅಡ್ಡೆಯಾಗಬಹುದೇ ಹೊರತು ಜನಸಾಮಾನ್ಯರ ಕನಸಿನ ರಾಷ್ಟ್ರವಾಗದು.


1 comment: