Thursday, 19 December 2013

ಮಕ್ಕಳಿಲ್ಲದ, ಹೆತ್ತವರೂ ಆಗದ ಅವರು..

   ಕುಟುಂಬ ಎಂಬ ಪದಕ್ಕೆ ಡಿಕ್ಷನರಿಯಲ್ಲಿ, ‘ಮನೆಯೊಳಗಿರುವ ತಂದೆ-ತಾಯಿ, ಪತ್ನಿ-ಮಕ್ಕಳು ಮೊದಲಾದ ಎಲ್ಲ ಸಂಬಂಧಿಕರು..’ ಎಂಬ ಅರ್ಥ ಇದೆ. ಇಂಥ ಹಲವು ಕುಟುಂಬಗಳು ಒಟ್ಟು ಸೇರಿ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮದುವೆ, ಮುಂಜಿ, ಹೆರಿಗೆ, ಬಾಣಂತನಗಳು ಆ ಸಮಾಜದ ಭಾಗವಾಗುತ್ತದೆ. ಶಾಲೆ-ಕಾಲೇಜುಗಳು ಅಸ್ತಿತ್ವಕ್ಕೆ ಬರುತ್ತವೆ. ಗರ್ಭಿಣಿ ಪತ್ನಿಯನ್ನು ಪತಿ ನಿತ್ಯ ಕಣ್ತುಂಬಿಕೊಳ್ಳುತ್ತಾನೆ. ಆಕೆಯ ಹೊಟ್ಟೆಗೆ ತಲೆಯಿಟ್ಟು ಮಗುವಿನೊಂದಿಗೆ ಮಾತಾಡುತ್ತಾನೆ. ಮಗು ಹೆಣ್ಣೋ-ಗಂಡೋ ಎಂಬ ಚರ್ಚೆ-ತಮಾಷೆಗಳು ಅವರಿಬ್ಬರ ನಡುವೆ ನಡೆಯುತ್ತದೆ. ಆಕೆಯ ಸಂಕಟ, ಹೆರಿಗೆಯ ದಿನಾಂಕ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಹೆರಿಗೆಗಾಗಿ ದಾಖಲಾಗಬೇಕಾದ ಆಸ್ಪತ್ರೆ.. ಎಲ್ಲವೂ ಮನೆಯಲ್ಲಿ ಚರ್ಚೆಗೊಳಗಾಗುತ್ತದೆ. ಅತ್ತೆ-ಮಾವ, ನಾದಿನಿ, ಮೈದುನ.. ಎಲ್ಲರ ಕುತೂಹಲ-ಕಾಳಜಿಯ ಕೇಂದ್ರವಾಗಿ ಗರ್ಭಿಣಿ ಮಾರ್ಪಡುತ್ತಾಳೆ. ಅತ್ತೆ ಮನೆಯಲ್ಲೂ, ತವರು ಮನೆಯಲ್ಲೂ ಆಕೆಯದೇ ಸುದ್ದಿ. ಇನ್ನು, ಪ್ರಸವವಾದರಂತೂ ಈ ಎರಡು ಕುಟುಂಬಗಳಲ್ಲಿ ಮಾತ್ರವಲ್ಲ, ಆ ಕುಟುಂಬಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲ ಕುಟುಂಬಗಳೂ ಸಂತಸ ವ್ಯಕ್ತಪಡಿಸುತ್ತವೆ. ಶುಭಾಶಯ ಕೋರುವುದು, ಸಿಹಿ ಹಂಚುವುದು ನಡೆಯುತ್ತದೆ. ಬಳಿಕ ಮಗುವಿಗೆ ಹೆಸರಿಡುವ ಸಂಭ್ರಮ. ಮಗು ನಡೆದಂತೆ ಮನೆಯವರೂ ನಡೆಯುತ್ತಾರೆ. ಅದು ಮಾತಾಡಿದಂತೆ ಮನೆಯವರೂ ಮಾತಾಡುತ್ತಾರೆ. ಮನೆಯೊಳಗಿನ ಸಣ್ಣ ಪುಟ್ಟ ಮನಸ್ತಾಪಗಳನ್ನೆಲ್ಲ ಮಗು ತನ್ನ ಮುಗ್ಧತನದ ಮೂಲಕ ನಿವಾರಿಸಿ ಬಿಡುತ್ತದೆ. ಮಗು ಬೆಳೆದಂತೆ ಶಾಲೆಗೆ ಸೇರಿಸಲಾಗುತ್ತದೆ. ಮಗು ಶಾಲೆಯಲ್ಲಿ ಕಲಿತದ್ದನ್ನು, ಆಡಿದ್ದನ್ನು ಮನೆಯಲ್ಲಿ ಬಂದು ಹೇಳುವಾಗ, ಒಂದು ಬಗೆಯ ಕಲರವ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಮಗು ಬೆಳೆಯುವುದು, ಉದ್ಯೋಗಿಯಾಗುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಾಗುವುದು ಮತ್ತು ಅಜ್ಜ-ಅಜ್ಜಿಯಾಗಿ ಅಪ್ಪ-ಅಮ್ಮ ಪರಿವರ್ತಿತಗೊಳ್ಳುವುದು.. ಇಂಥ ಪ್ರಕ್ರಿಯೆಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರುತ್ತದೆ. ಒಂದು ವೇಳೆ, ಇಂಥ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದೇ ಹೋದರೆ ಏನಾದೀತು? ಗಂಡು-ಗಂಡನ್ನೇ ವಿವಾಹವಾಗುವುದು ಅಥವಾ ಹೆಣ್ಣು-ಹೆಣ್ಣನ್ನೇ ವಿವಾಹವಾಗುವುದಾದರೆ ಈ ಸಮಾಜದ ಅಸ್ತಿತ್ವ ಎಲ್ಲಿಯ ವರೆಗೆ ಉಳಿದೀತು? ಗಂಡು-ಗಂಡಿನ ಅಥವಾ ಹೆಣ್ಣು-ಹೆಣ್ಣಿನ ಸಂಬಂಧದಿಂದ ಲೈಂಗಿಕ ಸುಖಗಳ ವಿನಿಮಯ ನಡೆಯಬಲ್ಲುದೇ ಹೊರತು ಮಾನವ ಜನಾಂಗದ ವಿಸ್ತರಣೆಯಲ್ಲವಲ್ಲ. ಅಲ್ಲಿ ಗರ್ಭಧಾರಣೆಯಿಲ್ಲ. ಪತಿ-ಪತ್ನಿ ಎಂಬ ಎರಡು ನೈಸರ್ಗಿಕ ಪ್ರಬೇಧಗಳಿಲ್ಲ. ಮಗುವಿನ ಜನನವಿಲ್ಲ. ಆದ್ದರಿಂದಲೇ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಂಬ ಅಪ್ಯಾಯಮಾನವಾದ ಗುರುತುಗಳಿಗೂ ಅವಕಾಶ ಇಲ್ಲ. ಇಬ್ಬರ ಸಂಬಂಧದೊಂದಿಗೆ ಪ್ರಾರಂಭವಾಗಿ ಅವರೊಂದಿಗೇ ಕೊನೆಗೊಳ್ಳುವ ಒಂದು ಜೀವನ ಕ್ರಮವು ಭವಿಷ್ಯದಲ್ಲಿ ಎಂಥ ವಾತಾವರಣವನ್ನು ಉಂಟು ಮಾಡೀತು? ಮಾನವ ಸಂತತಿಯ ವಿಸ್ತರಣೆ ಎಂಬುದು ಪ್ರಕೃತಿಯ ಸಹಜ ನಿಯಮ. ಮಾನವರಲ್ಲೂ ಪ್ರಾಣಿಗಳಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುವುದರಿಂದಲೇ ನಾಡು ಮತ್ತು ಕಾಡಿನಲ್ಲಿ ಜೀವಂತಿಕೆ ತುಂಬಿಕೊಂಡಿದೆ. ಅಂದಹಾಗೆ, ಹುಲಿಯ ಸಂತತಿಯನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯವಸ್ಥೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದು ಆಗಾಗ ಸುದ್ದಿಗೊಳಗಾಗುತ್ತಿರುತ್ತವೆ. ಬೇರೆ ಬೇರೆ ತಳಿಯ ಹುಲಿ, ಸಿಂಹಗಳ ಸಂಖ್ಯೆಯನ್ನು ಎಣಿಸುವ ಮತ್ತು ಅದರ ವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ, ಗಂಡು ಹುಲಿ ಹೆಣ್ಣಿನ ಬದಲು ಗಂಡನ್ನೇ ಆಯ್ಕೆ ಮಾಡಿಕೊಳ್ಳುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಹುಲಿಗಳ ಸಂತತಿಯ ಗತಿ ಏನಾಗಬಹುದು? ಕೆಲವು ವರ್ಷಗಳಲ್ಲೇ ಹುಲಿ, ಸಿಂಹಗಳು ಇತಿಹಾಸದ ಪುಟ ಸೇರುವುದಕ್ಕೆ ಸಾಧ್ಯವಿದೆಯಲ್ಲವೇ? ಹೀಗಿರುವಾಗ, ಮಾನವ ಸಂತತಿಯನ್ನೇ ಬೆಳೆಸದ ಸಲಿಂಗ ರತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸಿದರೆ ಭವಿಷ್ಯದ ಅನಾಹುತಕ್ಕೆ ಯಾರು ಹೊಣೆ ಹೊರಬೇಕು?
 ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಮಾನವ ಸಂತತಿಯ ವೃದ್ಧಿಗಷ್ಟೇ ಕಾರಣವಾಗುವುದಲ್ಲ, ಸಮಾಜದಲ್ಲಿ ಜವಾಬ್ದಾರಿಯ ಪ್ರಜ್ಞೆ, ಕರುಣೆ, ಅನುಕಂಪ, ಮಾನವೀಯತೆಯ ಪ್ರಜ್ಞೆಯನ್ನೂ ಅದು ಬೆಳೆಸುತ್ತದೆ. ದಾಂಪತ್ಯ ಎಂಬುದು ಬರೇ ದೈಹಿಕ ಸುಖಕ್ಕಷ್ಟೇ ಮೀಸಲಾದ ಸಂಬಂಧ ಅಲ್ಲ. ಅಲ್ಲಿ ಪರಸ್ಪರ ಜವಾಬ್ದಾರಿಯಿದೆ. ಕೊಡು-ಕೊಳ್ಳುವಿಕೆಯಿದೆ. ಪ್ರೀತಿ-ಅನುಕಂಪಗಳ ಒರತೆಯಿದೆ. ಪತಿ-ಪತ್ನಿಯರಾಗಿ, ಹೆತ್ತವರಾಗಿ, ಅಜ್ಜ-ಅಜ್ಜಿಯರಾಗಿ ದಂಪತಿಗಳು ಮಾರ್ಪಡುವ ಒಂದು ಅದ್ಭುತ ಪರಿಕಲ್ಪನೆಯನ್ನು ಸಲಿಂಗರತಿಯ ಜೋಡಿಗಳಿಂದ ನಿರೀಕ್ಷಿಸಲು ಸಾಧ್ಯವೇ? ಅಲ್ಲಿ ಹೊಣೆಗಾರಿಕೆಗಳು ಕಡಿಮೆ. ಲೈಂಗಿಕ ಸುಖಕ್ಕಿಂತ ಹೊರತಾದ ಇನ್ನಾವ ಉದ್ದೇಶಗಳೂ ಆ ಜೋಡಿಗಳ ನಡುವೆ ಇರುವ ಸಾಧ್ಯತೆ ಇಲ್ಲ. ಮಕ್ಕಳ ಜನನಕ್ಕೆ ಅವಕಾಶವೇ ಇಲ್ಲದಿರುವುದರಿಂದ ಸಾಮಾಜಿಕ ಜವಾಬ್ದಾರಿಗಳೂ ಇರುವುದಿಲ್ಲ. ಶಾಲೆಗಳ ಅಗತ್ಯವೂ ಇಲ್ಲ. ಒಂದು ಬಗೆಯ ಒಣ ವಾತಾವರಣವನ್ನು ಸೃಷ್ಟಿ ಮಾಡುವ ಈ ಮಾದರಿಯ ಜೀವನ ವಿಧಾನವನ್ನು ನಾವು ಬೆಂಬಲಿಸತೊಡಗಿದರೆ ಅದರಿಂದ ಸಮಾಜಕ್ಕಾಗುವ ಲಾಭವಾದರೂ ಏನು?
   ನಿಜವಾಗಿ, ಹೆಣ್ಣು-ಹೆಣ್ಣಿನಿಂದ ಮತ್ತು ಗಂಡು-ಗಂಡಿನಿಂದ ಆಕರ್ಷಣೆಗೆ ಒಳಗಾಗುವುದು ಮತ್ತ ದೈಹಿಕ ಸಂಬಂಧವನ್ನು ಬೆಳೆಸುವುದೆಲ್ಲ ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯೇನಲ್ಲ. ಅನಾದಿ ಕಾಲದಿಂದಲೂ ಇಂಥ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿದೆ. ಮಾತ್ರವಲ್ಲ, ಧರ್ಮ ಅದನ್ನು ಅಪರಾಧವೆಂದೇ ಪರಿಗಣಿಸಿದೆ (ಪವಿತ್ರ ಕುರಾನ್  29:28-29) ಇಷ್ಟಕ್ಕೂ, ಯಾವುದೇ ಒಂದು ಕ್ರಿಯೆಗೂ ಬಲವಾದ ಅಡಿಪಾಯ ಇರಲೇಬೇಕು. ನಿದ್ದೆಗೆ, ಊಟಕ್ಕೆ, ದುಡಿಮೆಗೆ, ಮದುವೆಗೆ.. ಹೀಗೆ ಎಲ್ಲದಕ್ಕೂ ಅದರದೇ ಆದ ಉದ್ದೇಶ, ಫಲಿತಾಂಶಗಳು ಇರುತ್ತವೆ. ನಿದ್ದೆ ಮಾಡುವುದರಿಂದ ಮರುದಿನದ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಊಟ ಮಾಡದೇ ಇದ್ದರೆ ಮರುದಿನ ಹುರುಪಿನಿಂದ ಬದುಕಲು ಸಾಧ್ಯವಾಗುವುದಿಲ್ಲ. ದುಡಿಮೆಯ ಉದ್ದೇಶ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದುಕನ್ನು ಸಂತಸವಾಗಿಡುವುದೂ ಆಗಿರುತ್ತದೆ. ಕೇವಲ ದೈಹಿಕ ಸುಖವನ್ನು ಪಡಕೊಳ್ಳುವ ಉದ್ದೇಶಕ್ಕಿಂತಲೂ ಬದುಕಿನ ಸೌಂದರ್ಯ, ಸಂತಾನ ವೃದ್ಧಿಯ ಗುರುತರ ಹೊಣೆಗಾರಿಕೆಯೂ ಮದುವೆಗಿದೆ. ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳಲ್ಲಿ ಒಂದು ತತ್ವವಿದೆ. ಹೊಣೆಗಾರಿಕೆಯಿದೆ. ಆದರೆ ಗಂಡು-ಗಂಡು ಜೋಡಿಯಾಗಿ ದಂಪತಿಗಳಂತೆ ಬದುಕುವುದರ ಹಿಂದೆ ದೈಹಿಕ ಸುಖದ ವಿನಿಮಯದ ಹೊರತಾದ ಇನ್ನಾವ ತರ್ಕಗಳೂ ಕಾಣಿಸುತ್ತಿಲ್ಲ. ಆ ಸುಖವನ್ನು ಪಡಕೊಂಡ ಬಳಿಕ ಏನು ಎಂಬ ಪ್ರಶ್ನೆಗೆ ಯಾವ ಉತ್ತರವೂ ಲಭಿಸುತ್ತಿಲ್ಲ. ಒಂದು ವೇಳೆ ಅವರಿಬ್ಬರ ದೈಹಿಕ ಸೌಂದರ್ಯ ಕ್ಷೀಣಿಸಿದ ಮೇಲೆ ಆ ಸಂಬಂಧ ಎಲ್ಲಿಯ ವರೆಗೆ ಬಾಳಿಕೆ ಕಂಡೀತು? ಆಕರ್ಷಣೆ ಕಳಕೊಂಡ ಬಳಿಕ ಅವರಿಬ್ಬರೂ ಬೇರೆ ಬೇರೆಯಾದರೆ, ಅವರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಕ್ಕಳಿಲ್ಲದ, ಹೆತ್ತವರೂ ಆಗದ ಇವರಿಂದ ಸಮಾಜದ ಅಭಿವೃದ್ದಿsಗೆ ಯಾವ ಕೊಡುಗೆಯಿರುತ್ತದೆ? ಒಣಗಿದ ಗದ್ದೆಗಳು, ಮುಚ್ಚಿದ ಮನೆಗಳು, ಉದ್ಯೋಗಿಗಳಿಲ್ಲದ ಕಾರ್ಖಾನೆಗಳ ಒಂದು ಚಿತ್ರಣವನ್ನು ಕಲ್ಪಿಸಿಕೊಂಡರೇನೇ ಸಲಿಂಗ ರತಿಯ ಅನಾಹುತ ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನಗಳು ನಡೆಯಬೇಕಾಗಿದೆ. ಇದಕ್ಕೆ ಬೆಂಬಲ ಸಿಗದಂಥ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲದೇ ಹೋದರೆ ಚೈತನ್ಯವನ್ನು ಕಳೆದುಕೊಂಡ ಒಣ ಮನುಷ್ಯರನ್ನಷ್ಟೇ ಭವಿಷ್ಯದಲ್ಲಿ ನೋಡಬೇಕಾದೀತು.   

Thursday, 12 December 2013

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ರಮೇಶ್ ನಾಯ್ಕ
    ಈ ಸುದ್ದಿಗಳನ್ನು ಓದಿ
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..
   ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.
   ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.
   ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ' ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು
.

Wednesday, 4 December 2013

ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಅನುಮಾನಗಳು

ಏ.ಕೆ. ಗಂಗೂಲಿ
ಪ್ರಕರಣವೊಂದರ ಸರಿ-ತಪ್ಪುಗಳನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ತೆಗೆದುಕೊಳ್ಳಲೇ ಬೇಕಾದ ಎಚ್ಚರಿಕೆಗಳು ಯಾವುವು? ಯಾವುದೇ ಒಂದು ಪ್ರಕರಣಕ್ಕೆ ಹೊರಗೆ ಕಾಣುವ ಮುಖವಷ್ಟೇ ಇರಬೇಕೆಂದಿಲ್ಲವಲ್ಲ. ಕಾಣದ್ದೂ ಇರಬಹುದಲ್ಲವೇ? ಆ ಕಾಣದ ಮುಖವನ್ನು ಪತ್ತೆ ಹಚ್ಚದೆಯೇ ಅಥವಾ ಆ ಬಗ್ಗೆ ಅನುಮಾನಿಸದೆಯೇ ಖಚಿತ ಅಭಿಪ್ರಾಯ ವ್ಯಕ್ತಪಡಿಸುವ ವಿಧಾನವನ್ನು ಏನೆಂದು ಕರೆಯಬೇಕು? ಅದರಿಂದಾಗಿ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿಗಳಿಗೆ ನಾವು ಯಾವ ಪರಿಹಾರ ಕೊಡಬಲ್ಲೆವು? ತರುಣ್ ತೇಜ್‍ಪಾಲ್ ಮತ್ತು ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಏ.ಕೆ. ಗಂಗೂಲಿ ಅವರ ಮೇಲೆ ಕೇಳಿ ಬಂದ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಆ ಬಗ್ಗೆ ಸುಪ್ರೀಮ್ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅಲ್ತಮಷ್ ಕಬೀರ್ ಮತ್ತು ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಂಥದ್ದೊಂದು ಚರ್ಚೆಗೆ ವೇದಿಕೆ ಒದಗಿಸಿದೆ.
   ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಕೂಡಲೇ ಆ ಆರೋಪವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದೇ? ಆರೋಪ ಹೊರಿಸಿದವರನ್ನು ಮುಗ್ಧೆ, ಸಂತ್ರಸ್ತೆ ಮತ್ತು ಆರೋಪಕ್ಕೀಡಾದವರನ್ನು ಪರಮದುಷ್ಟ ಎಂದು ಹಣೆಪಟ್ಟಿ ಹಚ್ಚುವುದು ನೈತಿಕವಾಗಿ ಸರಿಯೇ? ಅಂಥ ಆರೋಪಗಳಲ್ಲೂ ದುರುದ್ದೇಶ ಇರಬಾರದು ಎಂದಿದೆಯೇ? ಹಾಗಂತ, ಲೈಂಗಿಕ ದೌರ್ಜನ್ಯದ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಪ್ರಕರಣಗಳೂ ಈ ಪಟ್ಟಿಯಲ್ಲಿ ಸೇರಿವೆ ಎಂದಲ್ಲ. ಲೈಂಗಿಕ ದೌರ್ಜನ್ಯ ಎಂಬುದೇ ಓರ್ವ ಹೆಣ್ಣಿನ ಮಟ್ಟಿಗೆ ಅತಿ ಹೀನ ಮತ್ತು ಸದಾ ಕಾಡುವ ಹಿಂಸೆಯಾಗಿರುತ್ತದೆ. ಒಂದು ವೇಳೆ ಆಕೆ ಅಂಥ ದೌರ್ಜನ್ಯವನ್ನು ಬಹಿರಂಗಪಡಿಸದೇ ಒಳಗೊಳಗೇ ಸಹಿಸಿಕೊಂಡು ಬದುಕಿದರೆ ಸಮಾಜಕ್ಕೆ ಗೊತ್ತಾಗದೇ ಇರಬಹುದು. ಆದರೆ ಆ ಕ್ರೌರ್ಯ ಆಕೆಯನ್ನು ಜೀವನಪೂರ್ತಿ ನೆರಳಾಗಿ ಕಾಡುತ್ತಿರುತ್ತದೆ. ಕೂತಲ್ಲಿ, ನಿಂತಲ್ಲಿ, ನಿದ್ದೆಯಲ್ಲಿ, ಒಂಟಿತನದ ಸಂದರ್ಭದಲ್ಲಿ ಅದು ಮತ್ತೆ ದೌರ್ಜನ್ಯ ನಡೆಸು ತ್ತಲೇ ಇರುತ್ತದೆ. ಅದು ಬಿಟ್ಟು, ಈ ಕ್ರೌರ್ಯವೆಸಗಿದ ವ್ಯಕ್ತಿಗೆ ಶಿಕ್ಷೆಯಾಗಬೇಕೆಂದು ಆಕೆ ತೀರ್ಮಾನಿಸಿದರೆ ಅಲ್ಲೂ ಸಮಸ್ಯೆ ಎದುರಾಗುತ್ತದೆ. ಆವರೆಗೆ ತನಗಷ್ಟೇ ಗೊತ್ತಿದ್ದ ಕ್ರೌರ್ಯವೊಂದು ಸಮಾಜದ ಪಾಲಾಗುತ್ತದೆ. ಮಾಧ್ಯಮಗಳು ಅದನ್ನು ಹೊತ್ತು ತಿರುಗುತ್ತವೆ. ಗೆಳತಿಯರು, ನೆರೆಕರೆಯವರು ವಿಚಿತ್ರವಾಗಿ ನೋಡತೊಡಗುತ್ತಾರೆ. ವಿವಾಹದ ಸಂದರ್ಭದಲ್ಲೂ ‘ಅತ್ಯಾಚಾರ ಸಂತ್ರಸ್ತೆ' ಎಂಬ ಐಡೆಂಟಿಟಿ ಹಲವು ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಹೀಗಿರುವಾಗ, ತನ್ನದೇ ಆದ ಮತ್ತು ತನಗಷ್ಟೇ ಗೊತ್ತಿರುವ ಒಂದು ಕ್ರೌರ್ಯವನ್ನು ತನಗೆ ಗುರುತು-ಪರಿಚಯವೇ ಇಲ್ಲದ ಇತರರಿಗೆ ತಿಳಿಸುವುದು ಮತ್ತು ಕೋರ್ಟಿನ ಮೊರೆ ಹೋಗುವುದೆಲ್ಲ ಸಣ್ಣ ಸಂಗತಿಯಲ್ಲ. ಅದಕ್ಕೆ ಅಪಾರ ಧೈರ್ಯ, ಛಲದ ಅಗತ್ಯವಿದೆ. ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಇಂಥ ದೌರ್ಜನ್ಯ ಆರೋಪಗಳಿಗೆ ಇರಬಹುದಾದ ಇನ್ನೊಂದು ಮುಖದ ಬಗ್ಗೆಯೂ ಅಷ್ಟೇ ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ.
   ನಿಜವಾಗಿ, ಪ್ರಸಿದ್ಧಿಯ ತುತ್ತ ತುದಿಯಲ್ಲಿರುವವರನ್ನು ಒಂದೇ ಏಟಿಗೆ ಬೀಳಿಸುವ ಸಾಮರ್ಥ್ಯ  ಇರುವುದು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ. ಅದು ವ್ಯಕ್ತಿಯನ್ನು ಜರ್ಝರಿತಗೊಳಿಸುತ್ತದೆ. ಸಮಾಜಕ್ಕೆ ಮುಖ ತೋರಿಸದಷ್ಟು ಕುಗ್ಗಿಸುತ್ತದೆ. ಮಾತ್ರವಲ್ಲ, ಮಾಧ್ಯಮಗಳು ಕೂಡ ಆರೋಪವನ್ನು ಖಚಿತಪಡಿಸಿಕೊಳ್ಳದೆಯೇ ತಕ್ಷಣ ಸುದ್ದಿಗೆ ಮಸಾಲೆ ಅರೆಯುತ್ತದೆ. ಗಂಗೂಲಿಯವರನ್ನೇ ಎತ್ತಿ ಕೊಳ್ಳೋಣ. ಪ್ರಕರಣಕ್ಕೆ ಒಂದು ವರ್ಷ ಸಂದಿದೆ. ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬರುವುದಕ್ಕೆ ಕಾರಣ ಏನು? ನಿರ್ಭಯಳ ಪರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದೌರ್ಜನ್ಯ ನಡೆದಿದೆ ಎಂದಾದರೆ ಅದನ್ನು ಬಹಿರಂಗಪಡಿಸುವುದಕ್ಕೆ ಆ ಸಂದರ್ಭಕ್ಕಿಂತ ಉತ್ತಮವಾದುದು ಇನ್ನಾವುದಿತ್ತು? ಕೇವಲ ಗಂಗೂಲಿಯವರ ಹುದ್ದೆ, ಪ್ರಭಾವಕ್ಕೆ ಮಣಿದು ಹೀಗೆ ತಡ ಮಾಡುವುದಕ್ಕೆ ಸಾಧ್ಯವಿದೆಯೇ? ಅಲ್ತಮಷ್ ಕಬೀರ್ ಕೂಡಾ ಈ ಆರೋಪದ ವಾಸ್ತವಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಂತ, ಗಂಗೂಲಿ ಇಲ್ಲಿ ಸಂಕೇತ ಮಾತ್ರ. ರಾಜಕೀಯ ಅಥವಾ ಇನ್ನಿತರ ದುರುದ್ದೇಶಗಳಿಂದ ಒಂದು ಸಾಮಾನ್ಯ ಪ್ರಕರಣವು ಅಸಾಮಾನ್ಯ ಪ್ರಕರಣವಾಗಿ ಬಿಡುವುದಕ್ಕೆ ಇವತ್ತು ಅವಕಾಶ ಇದೆ. ಸಹಮತದ ಸೆಕ್ಸ್‍ನಲ್ಲಿ ಏರ್ಪಟ್ಟ ಜೋಡಿಗಳು ಆ ಬಳಿಕ ವಿರಸದ ಕಾರಣದಿಂದಾಗಿ ಅತ್ಯಾಚಾರ ಮೊಕದ್ದಮೆ ಹೂಡಿದ್ದಿದೆ. ಸದ್ಯದ ದಿನಗಳು ಎಷ್ಟು ನಾಜೂಕಿನವು ಅಂದರೆ, ಯಾರನ್ನು ಬೇಕಾದರೂ ಖೆಡ್ಡಾಕ್ಕೆ ಬೀಳಿಸಬಹುದು ಎಂಬ ವಾತಾವರಣವಿದೆ. ಮದ್ಯ, ಮಾನಿನಿಯರ ಮುಖಾಂತರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ತೀರಾ ಕಷ್ಟದ್ದೆಂದು ಹೇಳುವಂತಿಲ್ಲ. ಅಷ್ಟಕ್ಕೂ, ತರುಣ್ ತೇಜ್‍ಪಾಲ್ ಪ್ರಕರಣ ದಲ್ಲಿ ಇಂಥದ್ದೊಂದು ಅನುಮಾನ ತಪ್ಪೇ ಎಂದು ಹೇಳುವಾಗಲೂ ‘ರಾಜಕೀಯ'ಕ್ಕೆ ಯಾವುದೂ ಅಸಾಧ್ಯವಲ್ಲ ಎಂಬುದು ಕೂಡಾ ಅಷ್ಟೇ ನಿಜವಾಗಿದೆ.
   ತೇಜ್‍ಪಾಲ್ ಮತ್ತು ಗಂಗೂಲಿ ಪ್ರಕರಣಗಳು ಹೇಗೆ ಕೊನೆ ಮುಟ್ಟುತ್ತೋ ಗೊತ್ತಿಲ್ಲ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪ್ರಸಿದ್ಧ ವ್ಯಕ್ತಿಗಳೇ. ಅಲ್ಲದೇ ಅವರ ಮೇಲೆ ಆರೋಪ ಹೊರಿಸಿದವರು ಹೊರಗಿನವರಲ್ಲ, ಜೊತೆಗೇ ಕೆಲಸ ಮಾಡುತ್ತಿರುವವರು. ಮೋದಿಯವರ ‘ಅಕ್ರಮ ಬೇಹುಗಾರಿಕೆ' ಪ್ರಕರಣವು ಬಹಿರಂಗವಾದ ಬೆನ್ನಿಗೇ ಈ ಎರಡೂ ಪ್ರಕರಣಗಳು ಬಹಿರಂಗಗೊಂಡಿವೆ ಎಂಬುದೂ ಬಹಳ ಮುಖ್ಯ. ಭಾವಿ ಪ್ರಧಾನಿ ಅಭ್ಯರ್ಥಿ ಒಳಗೊಂಡಿರುವ ಪ್ರಕರಣದ ಕಾವನ್ನು ತಗ್ಗಿಸುವುದಕ್ಕಾಗಿ ತೇಜ್‍ಪಾಲ್ ಪ್ರಕರಣವನ್ನು ಉಬ್ಬಿಸಲಾಯಿತೇ? ಅಕ್ರಮ ಬೇಹುಗಾರಿಕಾ ಪ್ರಕರಣದ ಯುವತಿಗೂ ಮೋದಿಯವರಿಗೂ ನಡುವೆ ಇದ್ದ ಸಂಬಂಧವೇನು ಎಂಬ ಬಗ್ಗೆ ಮಾಧ್ಯಮಗಳು ಕುತೂಹಲ ವ್ಯಕ್ತಪಡಿಸುವ ಹೊತ್ತಿನಲ್ಲೇ ತೇಜ್‍ಪಾಲ್ ಹೆಜ್ಜೆ ತಪ್ಪಿರುವ ಪ್ರಕರಣವು ಸುದ್ದಿ ಮಾಡಿರುವುದರಲ್ಲಿ ಯಾವ ಅನುಮಾನಕ್ಕೂ ಅವಕಾಶ ಇಲ್ಲವೇ? ಅವರನ್ನು ಬೇಕೆಂತಲೇ ಹೆಜ್ಜೆ ತಪ್ಪಿಸಲಾಯಿತೇ ಅಥವಾ ಹೆಜ್ಜೆ ತಪ್ಪಿದ ಅವರನ್ನು ಬಳಸಿಕೊಳ್ಳಲಾಯಿತೇ?
    ರಾಜಕೀಯ ವಾತಾವರಣವು ಅತಿಹೀನ ಸ್ಥಿತಿಗೆ ತಲುಪಿರುವ ಇಂದಿನ ದಿನಗಳಲ್ಲಿ ಯಾವುದನ್ನೂ ನೇರವಾಗಿ ನಂಬುವಂಥ ಸ್ಥಿತಿಯಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಈ ಸಾಲಿಗೆ ಸೇರುತ್ತಿರು ವುದು ವಿಷಾದನೀಯ. ಆದರೆ, ಹಾಗೆ ಅನುಮಾನಿಸುವುದಕ್ಕೆ ಸದ್ಯದ ದಿನಗಳು ಒತ್ತಾಯಿಸುತ್ತಿವೆ ಅನ್ನುವುದನ್ನು ತಿರಸ್ಕರಿಸುವಂತಿಲ್ಲ.