ರಮೇಶ್ ನಾಯ್ಕ |
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..
ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.
ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.
ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ' ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು
.
No comments:
Post a Comment