ಇತರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ವೈದ್ಯ ಕ್ಷೇತ್ರಕ್ಕೆ ಸಮಾಜದಲ್ಲಿ ವಿಶೇಷವಾದ ಮನ್ನಣೆಯಿದೆ. ಇದಕ್ಕೆ; ವೈದ್ಯರು ಪ್ರಯಾಣಿಸುವ ಕಾರು, ಅವರು ಧರಿಸುವ ಬಿಳಿಕೋಟು, ಸ್ಟೆತೋಸ್ಕೋಪ್‍ಗಳು ಕಾರಣವಲ್ಲ. ದುಬಾರಿ ವಾಹನದಲ್ಲಿ ಪ್ರಯಾಣಿಸುವವರು, ಅದ್ದೂರಿ ಉಡುಪು ಧರಿಸುವವರು, ಲಕ್ಷಾಂತರ ದುಡ್ಡಿರುವವರು ಸಮಾಜದಲ್ಲಿ ಅನೇಕರಿದ್ದಾರೆ. ಆದರೆ ಅವರಾರಿಗೂ ಸಿಗದ ಗೌರವ ಮತ್ತು ಕೃತಜ್ಞತಾಭಾವವೊಂದನ್ನು ವೈದ್ಯಲೋಕ ಈಗಲೂ ಪಡಕೊಳ್ಳುತ್ತಿದೆ. ಈ ಸಮಾಜದ ಪಾಲಿಗೆ ತೀರಾ ಅಪರಿಚಿತವಾಗಿರುವ ವ್ಯಕ್ತಿಯಿಂದ ಹಿಡಿದು ರಿಲಯನ್ಸ್ ನ ಅಂಬಾನಿಯ ವರೆಗೆ, ಎಲ್ಲರ ಮೇಲೂ ವೈದ್ಯರಿಗೆ ಒಂದು ಮಿತಿಯಲ್ಲಿ ಹಿಡಿತವಿದೆ. ಕೂಲಿ ಮಾಡುವ ಅನಕ್ಷರಸ್ಥ ವ್ಯಕ್ತಿ ತನ್ನ ಪತ್ನಿಯನ್ನೋ ಮಗನನ್ನೋ ವೈದ್ಯರ ಕೈಗೆ ಒಪ್ಪಿಸಿದ ಬಳಿಕ ನಿರಾಳವಾಗುತ್ತಾನೆ. ಆ ವರೆಗೆ ಆತನನ್ನು ಆವರಿಸಿದ್ದ ಆತಂಕಗಳನ್ನು ವೈದ್ಯರ ನಾಲ್ಕು ಭರವಸೆಯ ಮಾತುಗಳು ತೊಲಗಿಸಿಬಿಡುತ್ತವೆ. ತನ್ನವರ ಕಾಯಿಲೆಯನ್ನು ಗುಣಪಡಿಸುವಲ್ಲಿ ಈ ವೈದ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬ ತುಂಬು ಭರವಸೆಯೊಂದಿಗೆ ಆತ ಆಸ್ಪತ್ರೆಯ ಹೊರಗೆ ಕಾಯುತ್ತಿರುತ್ತಾನೆ. ದಿನಸಿ ಅಂಗಡಿಯಲ್ಲಿ ಅಥವಾ ವಾರದ ಸಂತೆಯಲ್ಲಿ ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡಿಯೇ ಆಹಾರ ವಸ್ತುಗಳನ್ನು ಖರೀದಿಸುವವನು ಕೂಡ, ಮೆಡಿಕಲ್ ಶಾಪ್‍ಗಳಲ್ಲಿ ಚೌಕಾಸಿಗಿಳಿಯುವುದಿಲ್ಲ. ಸಕ್ಕರೆ ಮುಗಿದಿದೆ ಎಂದೋ ಹೆಸ್ರುಬೇಳೆ ತನ್ನಿ ಎಂದೋ ಪತ್ನಿ ಹೇಳಿದರೆ ಸಿಡಿಮಿಡಿಗೊಂಡು ಮಾರುಕಟ್ಟೆಗೆ ಹೋಗುವವನೂ ವೈದ್ಯರ ಔಷಧ ಚೀಟಿಗೆ ಸಿಡಿಮಿಡಿಗೊಳ್ಳುವುದಿಲ್ಲ. ಯಾಕೆಂದರೆ, ಸಮಾಜದಿಂದ ವೈದ್ಯ ಕ್ಷೇತ್ರ ಬಹುತೇಕ ಅಪರಿಚಿತವಾಗಿಯೇ ಉಳಿದಿದೆ. ಅಲ್ಲಿನ ಭಾಷೆ, ತುರ್ತು, ಉಡುಪು.. ಎಲ್ಲವುಗಳ ಬಗ್ಗೆಯೂ ಸಮಾಜದಲ್ಲೊಂದು ಕುತೂಹಲವಿದೆ. ಬಹುಶಃ ಸಮಾಜದ ಈ ಅಜ್ಞಾನ ಮತ್ತು ಕುತೂಹಲಗಳು ಅನೇಕ ಬಾರಿ ವೈದ್ಯಕೀಯ ಕ್ಷೇತ್ರವು ನಿರ್ಲಜ್ಜೆಯಿಂದ ವರ್ತಿಸುವುದಕ್ಕೆ ಕಾರಣವೂ ಆಗಿದೆ. ಕಳೆದವಾರ ಮಂಗಳೂರಿನಲ್ಲಿ ನಡೆದ ಪ್ರಕರಣವೊಂದು ಇದನ್ನು ಮತ್ತಷ್ಟು ಖಚಿತಪಡಿಸಿದೆ.
2010 ಫೆ. 22ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗರ್ಭಕೋಶದ ಗಡ್ಡೆ ಶಸ್ತ್ರಚಿಕಿತ್ಸೆಗೆ ಒಳಗಾದ ಹಫ್ಸಾ ಎಂಬ ಮಹಿಳೆಯೋರ್ವರು ಅದೇ ಮಾರ್ಚ್ 11ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ಆದರೆ ಆ ಬಳಿಕವೂ ಆಪರೇಶನ್ ನಡೆದ ಜಾಗದಲ್ಲಿ ನೋವು ಕಾಣಿಸುತ್ತಿದ್ದುದರಿಂದ ಹಲವು ಬಾರಿ ಆಸ್ಪತ್ರೆಗೆ ಭೇಟಿಯನ್ನೂ ನೀಡಿದ್ದರು. ಕಳೆದ ವಾರ ಎಕ್ಸ್ ರೇ ಮತ್ತು ಸ್ಕ್ಯಾನ್ ನಡೆಸಿದಾಗ ಹೊಟ್ಟೆಯ ಒಳಗಡೆ ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಕತ್ತರಿ ಪತ್ತೆಯಾಯಿತು ಮಾತ್ರವಲ್ಲ, ಇನ್ನೊಂದು ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಯಿತು.
ಅಷ್ಟಕ್ಕೂ, ಕಳೆದ ನಾಲ್ಕು ವರ್ಷಗಳಿಂದ ಕತ್ತರಿಯನ್ನು ಹೊಟ್ಟೆಯಲ್ಲಿಟ್ಟುಕೊಂಡು ಬದುಕಿದ ಆ ಮಹಿಳೆಯನ್ನೊಮ್ಮೆ ಊಹಿಸಿ. ಆಕೆ ಅನುಭವಿಸಿದ ಸಂಕಟಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಕೊಡಲು ಏನು ಪರಿಹಾರವಿದೆ? ಆಪರೇಶನ್ ಎಂಬ ಪ್ರಕ್ರಿಯೆಯೇ ತೀರಾ ಸೂಕ್ಷ್ಮವಾದದ್ದು. ಮೈಯೆಲ್ಲಾ ಕಣ್ಣಾಗಿ ನಡೆಸುವಂಥದ್ದು. ಆ ಸಂದರ್ಭದಲ್ಲಿ ವೈದ್ಯ ಬರೇ ಬಿಳಿಕೋಟು, ಕೆಲವು ಉಪಕರಣಗಳನ್ನು ಹೊಂದಿರುವ ಮನುಷ್ಯನಷ್ಟೇ ಆಗಿರುವುದಿಲ್ಲ. ಆಗ ರೋಗಿಯು ಆತನ ಮೇಲೆ ಪರಕಾಯ ಪ್ರವೇಶ ಮಾಡಿರುತ್ತಾನೆ/ಳೆ. ರೋಗಿಯ ಸಂಕಟ ವೈದ್ಯನ ಸಂಕಟವೂ ಆಗಿರುತ್ತದೆ. ರೋಗಿಯ ಭಾವನೆ ವೈದ್ಯನ ಭಾವನೆಯೂ ಆಗಿರುತ್ತದೆ. ತನ್ನೆದುರು ಶಸ್ತ್ರಚಿಕಿತ್ಸೆಗಾಗಿ ಮಲಗಿದ ವ್ಯಕ್ತಿಯ ಮಕ್ಕಳು ತನ್ನದೇ ಮಕ್ಕಳಾಗಿ ವೈದ್ಯನ ಮುಂದೆ ಸುಳಿಯುತ್ತಾರೆ. ರೋಗಿ ಧನಿಕನೋ ಬಡವನೋ ಎಂಬ ಆಲೋಚನೆಗಿಂತ ಆಚೆ, ಈತನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಪ್ರಜ್ಞೆ ಆತನನ್ನು ಮತ್ತೆ ಮತ್ತೆ ಕಾಡುತ್ತಿರುತ್ತದೆ. ಶಸ್ತ್ರಚಿಕಿತ್ಸೆ ವಿಫಲವಾದರೂ ಸಫಲವಾದರೂ ಆ ಎರಡೂ ಸಂದರ್ಭಗಳ ಸಂಕಟ ಅಥವಾ ಖುಷಿಯನ್ನು ರೋಗಿಯಂತೆಯೇ ವೈದ್ಯನೂ ಅನುಭವಿಸುತ್ತಾನೆ.. ಇಂಥ ಹತ್ತು-ಹಲವು ಕರುಣಾಮಯಿ ಕಲ್ಪನೆಗಳೊಂದಿಗೆ ಸಮಾಜ ಇವತ್ತೂ ವೈದ್ಯ ಕ್ಷೇತ್ರವನ್ನು ಆರಾಧನಾ ಭಾವದಿಂದ ನೋಡುತ್ತಿದೆ. ಅಷ್ಟಕ್ಕೂ, ಇಂಥವರು ಇಲ್ಲ ಎಂದಲ್ಲ. ಅವರ ಸಂಖ್ಯೆ ಎಷ್ಟಿದೆ ಎಂಬುದಷ್ಟೇ ಮುಖ್ಯ. ದುರಂತ ಏನೆಂದರೆ, ವೈದ್ಯಕೀಯ ಕ್ಷೇತ್ರದ ಈ ಸುಂದರ ಮುಖಕ್ಕೆ ಕೆಲವು ವೈದ್ಯರು ಇವತ್ತು ಕುರೂಪದ ಬಣ್ಣ ಬಳಿಯುತ್ತಿದ್ದಾರೆ. ಸಮಾಜ ಈ ಕ್ಷೇತ್ರದ ಮೇಲೆ ಏನೆಲ್ಲ ಭರವಸೆಗಳನ್ನು ಇಟ್ಟಿದೆಯೋ ಅವೆಲ್ಲಕ್ಕೂ ನಿರ್ದಯೆಯಿಂದ ಕತ್ತರಿ ಪ್ರಯೋಗಿಸುವ ಸಾಹಕ್ಕೆ ಇಳಿದಿದ್ದಾರೆ. ಬರೇ ದುಡ್ಡೊಂದನ್ನೇ ಧ್ಯೇಯವಾಗಿಸಿಕೊಂಡ ಮತ್ತು ಅದರಾಚೆಗೆ ಬಿಳಿ ಕೋಟಿಗೂ ಇನ್ನಿತರ ಕೋಟುಗಳಿಗೂ ಯಾವುದೇ ವ್ಯತ್ಯಾಸ ಇಲ್ಲವೆಂಬಂತೆ ನಡಕೊಳ್ಳುವ ವೈದ್ಯರುಗಳೂ ತಯಾರಾಗುತ್ತಿದ್ದಾರೆ. ಮನುಷ್ಯ ಹಸಿವಿನಿಂದ ಇರಬಲ್ಲ, ಆದರೆ ಕಾಯಿಲೆಯನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲವಲ್ಲ. ಇದು ವೈದ್ಯಕೀಯ ಕ್ಷೇತ್ರಕ್ಕೂ ಗೊತ್ತು. ಹೊಟ್ಟೆಯ ಹಸಿವಿಗೆ ಖರ್ಚು ಮಾಡಲು ಹಿಂದು-ಮುಂದು ನೋಡುವ ಕುಟುಂಬವೂ ಕಾಯಿಲೆಯಿಂದ ಗುಣಮುಖಗೊಳ್ಳುವುದಕ್ಕಾಗಿ ಇರುವುದೆಲ್ಲವನ್ನೂ ಖರ್ಚು ಮಾಡಲು ಮುಂದಾಗುತ್ತದೆ. ಆರೋಗ್ಯಕ್ಕೆ ಸಮಾಜ ಕೊಡುತ್ತಿರುವ ಈ ಪ್ರಾಶಸ್ತ್ಯ ಇತರೆಲ್ಲರಿಗಿಂತ ಹೆಚ್ಚು ಮನದಟ್ಟಾಗಿರುವುದು ವೈದ್ಯಕೀಯ ಕ್ಷೇತ್ರಕ್ಕೇ. ಅಲ್ಲದೇ ಈ ಕ್ಷೇತ್ರವು ‘ಸಾಲ ಕೊಡುವುದಿಲ್ಲ' ಎಂಬ ಬೋರ್ಡನ್ನೂ ನೇತುಹಾಕಿಕೊಂಡಿದೆ. ಸಾಮಾನ್ಯ ಬಡವನೊಬ್ಬ ದಿನಸಿ ಅಂಗಡಿಯಲ್ಲಿ ಸಾಲ ಮಾಡುವಂತೆ ಆಸ್ಪತ್ರೆಗಳಲ್ಲಿ ಸಾಲ ಮಾಡುವಂತಿಲ್ಲ. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ‘ಮುಂದಿನ ತಿಂಗಳು ದುಡ್ಡು ಪಾವತಿಸುವೆ' ಎಂದು ಹೇಳುವಂತಿಲ್ಲ. ಎಲ್ಲಿಂದಲೋ ಕಾಡಿ-ಬೇಡಿಯೋ ಏನನ್ನಾದರೂ ಅಡವಿಟ್ಟೋ ಆಸ್ಪತ್ರೆಗಳಿಗೆ ದುಡ್ಡು ಪಾವತಿಸಿ ಮರಳುವ ಕಾಯಿಲೆ ಪೀಡಿತರು ಆ ಸಂದರ್ಭದಲ್ಲೂ ಖುಷಿ ವ್ಯಕ್ತಪಡಿಸುವುದಕ್ಕೆ ಕಾರಣ ಏನೆಂದರೆ ತಾವು ಕಾಯಿಲೆಯಿಂದ ಮುಕ್ತವಾಗಿದ್ದೇವೆ ಎಂಬುದು ಮಾತ್ರ. ಸಾಲ ಕೊಡದಿದ್ದರೂ ವೈದ್ಯರಿಗೆ ಅವರು ನಮ್ರತೆಯಿಂದ ಕೃತಜ್ಞತೆ ಅರ್ಪಿಸುತ್ತಾರೆ. ನಿಜವಾಗಿ, ಇಂಥ ಭಾವುಕ ಕ್ಷಣಗಳನ್ನು ಕಳೆದವಾರ ನಡೆದಂಥ ‘ಕತ್ತರಿ' ಪ್ರಕರಣಗಳು ಮತ್ತೆ ಮತ್ತೆ ಪ್ರಶ್ನೆಗೊಡ್ಡುತ್ತಲೇ ಹೋಗುತ್ತಿವೆ. ವೈದ್ಯಲೋಕದ ಎಡವಟ್ಟಿನಿಂದ ಬದುಕನ್ನೇ ಕಳಕೊಂಡ ಅಥವಾ ಕಾಯಿಲೆ ಉಲ್ಬಣಗೊಂಡ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಆದ್ದರಿಂದ, ಇಂಥ ಪ್ರಕರಣಗಳನ್ನು ‘ವೈದ್ಯರ ನಿರ್ಲಕ್ಷ್ಯ' ಎಂಬ ಪುಟ್ಟ ಪದದೊಳಗೆ ಅಡಗಿಸಿಟ್ಟು ಸುಮ್ಮನಾಗುವುದಕ್ಕೆ ಬಿಡಬಾರದು. ವೈದ್ಯಕೀಯ ಕ್ಷೇತ್ರದ ಪ್ರಮಾದ ಇತರ ಕ್ಷೇತ್ರಗಳ ಪ್ರಮಾದದಂತೆ ಖಂಡಿತ ಅಲ್ಲ. ವೈದ್ಯನ ತಪ್ಪು ಒಂದಿಡೀ ಕುಟುಂಬವನ್ನೇ ಬೀದಿಪಾಲು ಮಾಡುವುದಕ್ಕೂ ಸಾಧ್ಯವಿದೆ. `ಹಫ್ಸಾ' ಅದಕ್ಕೆ ಇತ್ತೀಚಿನ ಉದಾಹರಣೆ ಅಷ್ಟೇ. ಆಕೆಯ ಹೊಟ್ಟೆಯೊಳಗಿನಿಂದ ಕತ್ತರಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದ ಸುದ್ದಿಯನ್ನು ಮಾಧ್ಯಮಗಳು '
ವೈದ್ಯರ ದಿನ'ವಾದ ಜುಲೈ 1ರಂದೇ ಪ್ರಕಟಿಸಿವೆ. ಬಹುಶಃ ಬೇಜವಾಬ್ದಾರಿ ವೈದ್ಯ ಲೋಕಕ್ಕೆ ಓರ್ವ ರೋಗಿ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಇದು. ಆದ್ದರಿಂದ, ಈ ಕತ್ತರಿಯ ನಕಲೊಂದನ್ನು ಎಲ್ಲ ವೈದ್ಯರೂ ತಮ್ಮ ಬಳಿ ಸದಾ ಇಟ್ಟುಕೊಳ್ಳಬೇಕು. ಒತ್ತಡಗಳ ಸಂದರ್ಭಗಳಲ್ಲಿ ಆಗಬಹುದಾದ ಎಡವಟ್ಟುಗಳಿಂದ ಪಾರಾಗಲು ಹಫ್ಸಾಳ ಈ `ಕತ್ತರಿ' ಎಚ್ಚರಿಕೆಯ ಗಂಟೆಯಾಗಬೇಕು. ಇನ್ನಾವ ರೋಗಿಯನ್ನೂ `ಹಫ್ಸಾ' ಮಾಡಲಾರನೆಂಬ ಪ್ರತಿಜ್ಞೆಯನ್ನು ಎಲ್ಲ ವೈದ್ಯರೂ ಕೈಗೊಳ್ಳಬೇಕು.

No comments:
Post a Comment