ಸಂಸ್ಕಾರ, ಭಾರತೀಪುರ, ಭವ, ಅವಸ್ಥೆ, ದಿವ್ಯ, ಘಟಾಶ್ರಾದ್ಧ, ಮೌನಿ... ಮುಂತಾದ ಮೇರು ಸಾಹಿತ್ಯ ಕೃತಿಗಳಿಗಿಂತಲೂ ಆಚೆಗೆ; ಸಾಮಾಜಿಕ ಸ್ಥಿತ್ಯಂತರ, ತಲ್ಲಣಗಳಿಗೆ ಸದಾ ಸ್ಪಂದಿಸಿ ತನ್ನ ಇರುವನ್ನು ಮತ್ತು ವಿಚಾರವನ್ನು ದೇಣಿಗೆ ನೀಡುತ್ತಿದ್ದ ಯು.ಆರ್. ಅನಂತಮೂರ್ತಿಯವರು ಆಗಸ್ಟ್ 22 ಹೊರಟು ಹೋಗುವುದಕ್ಕಿಂತ ಎರಡು ದಿನಗಳ
ಮುಂಚಿತವಾಗಿ- ತಫ್ಹೀಮುಲ್ ಕುರ್ ಆನ್ (ಕುರ್‍ಆನ್ ಕನ್ನಡಾನುವಾದ), ‘ಇಸ್ಲಾಮ್ ಸಂಶಯಗಳ ಸುಳಿಯಲ್ಲಿ’, ‘ತಲಾಕ್’, ‘ಮಹಿಳೆ ಇಸ್ಲಾಮಿನಲ್ಲಿ’, ‘ಭಾರತೀಯ ಸಂಸ್ಕ್ರಿತಿಯ ಅಂತರ್ಧಾರೆಗಳು’, ‘ಧಾರ್ಮಿಕ ಸೌಹಾರ್ದ’... ಮುಂತಾದ 60ಕ್ಕಿಂತಲೂ ಅಧಿಕ ಕೃತಿಗಳನ್ನು ಕನ್ನಡ ಜನತೆಗೆ ನೀಡಿದ ಮತ್ತು ‘ಆದರ್ಶಪ್ರಾಯ’ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದ್ದ ಸನ್ಮಾರ್ಗ ವಾರ ಪತ್ರಿಕೆಯ ಗೌರವ ಸಂಪಾದಕರಾದ ನೂರ್ ಮುಹಮ್ಮದ್ ರು ಆಗಸ್ಟ್ 19ರಂದು ಹೊರಟು ಹೋದರು. ಬಹುಶಃ ಹೋಲಿಕೆಗೆ ಹೊಂದಿಬರದ ಎರಡು ವ್ಯಕ್ತಿತ್ವಗಳಿವು. ತಮ್ಮ ಆದರ್ಶ ಜಗತ್ತನ್ನು ಪ್ರತಿಪಾದಿಸಲು ಇವರಿಬ್ಬರು ಆಯ್ಕೆ ಮಾಡಿಕೊಂಡದ್ದು ಭಿನ್ನ ದಾರಿಗಳನ್ನೇ. ಗಾಂಧೀಜಿ-ಲೋಹಿಯಾರ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ಧರಣಿ ಮಂಡಲದ ಹಸುವನ್ನು ಎದೆಗಿಳಿಸಿಕೊಂಡು ಜಗಳ, ತಿಕ್ಕಾಟ, ಪ್ರತಿಭಟನೆ, ಒದ್ದಾಟಗಳೊಂದಿಗೆ ಬೆಳೆದ ಅನಂತಮೂರ್ತಿಯವರಿಗಿಂತ ಭಿನ್ನವಾಗಿ ಪವಿತ್ರ ಕುರ್‍ಆನನ್ನೇ ಪ್ರಬಲ ಆದರ್ಶವಾಗಿ ಆಯ್ಕೆ ಮಾಡಿಕೊಂಡವರು ನೂರ್ ಮುಹಮ್ಮದ್. ಆದರ್ಶದ ವಿಚಾರದಲ್ಲಿ ನೂರ್‍ರೊಂದಿಗೆ ತಿಕ್ಕಾಟ ಇರಲಿಲ್ಲ. ಆದರೆ, ಈ ಆದರ್ಶವನ್ನು ಒಪ್ಪಿಕೊಂಡ ಮಂದಿಯ ಅನಾದರ್ಶ ಜೀವನದ ಬಗ್ಗೆ ಅವರಲ್ಲಿ ಪ್ರತಿಭಟನೆಯಿತ್ತು. ಅದನ್ನು ಜೀರ್ಣಿಸಿಕೊಳ್ಳಲಾಗದೆ ಬದುಕಿನುದ್ದಕ್ಕೂ ಒದ್ದಾಡಿದರು. ಬರೆದರು. ತನ್ನ ಆದರ್ಶಪ್ರಾಯ ಜಗತ್ತನ್ನು ತನ್ನ ಮನೆ, ಪರಿಸರ, ಸಮಾಜದಲ್ಲಿ ನಿಜಗೊಳಿಸಲು ಅವಿಶ್ರಾಂತ ದುಡಿದರು. ಮೌಲಾನಾ ಮೌದೂದಿಯವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ಆ ಆದರ್ಶ ಜಗತ್ತಿನ ಸ್ಥಾಪನೆಗಾಗಿ ಜಮಾಅತೆ ಇಸ್ಲಾವಿೂ ಹಿಂದನ್ನು ನೆಚ್ಚಿಕೊಂಡರು. ಸೈದ್ಧಾಂತಿಕವಾಗಿ ಗೊಂದಲಗಳಿಲ್ಲದ, ವೈಚಾರಿಕವಾಗಿ ನಿಖರತೆಯಿರುವ ಸೀದಾ-ಸಾದಾ ವ್ಯಕ್ತಿತ್ವ ಅವರದು. ಅನಂತಮೂರ್ತಿಯವರೂ ಒಂದು ಕಲ್ಯಾಣ ಸಮಾಜದ ಕನಸು ಕಂಡವರು. ತನ್ನ ಅಗ್ರಹಾರದ ಮಠದಲ್ಲಿ ನಡೆಯುತ್ತಿದ್ದ ದ್ವೈತ-ಅದ್ವೈತದ ನಡುವಿನ ವಾದಗಳನ್ನು ಕೇಳಿಸಿಕೊಂಡು ಪ್ರಶ್ನೆಗಳೊಂದಿಗೆ ಹಿಂದಿರುಗುತ್ತಿದ್ದವರು. ಭೂಮಿ ಗುಂಡಾಗಿದೆಯೇ-ಚಪ್ಪಟೆಯಾಗಿದೆಯೇ ಎಂಬ ಚರ್ಚೆ, ವಾಗ್ವಾದಗಳು ತನ್ನ ಮಠದಲ್ಲಿ ನಡೆಯುತ್ತಿದ್ದುವು ಎಂದು ಅವರು ಜ್ಞಾನಪೀಠ ಪುರಸ್ಕಾರದ ಸಂದರ್ಭದಲ್ಲಿ ನೀಡಿದ ಭಾಷಣದಲ್ಲಿ ಹೇಳಿಕೊಂಡಿದ್ದರು. ತನ್ನ ತಂದೆಯ ಆಲೋಚನೆಗಳು ಎಷ್ಟು ಗೊಂದಲಕಾರಿಯಾಗಿದ್ದುವು ಎಂಬುದನ್ನು ಅವರು ಎಷ್ಟು ಚೆಲುವಾಗಿ ಆ ಭಾಷಣದಲ್ಲಿ ವ್ಯಾಖ್ಯಾನಿಸಿದ್ದರೆಂದರೆ, ತಂದೆಯ ತಲೆಯ ಮೇಲಿನ ಕೂದಲು ಕೆಲವೊಮ್ಮೆ ಮಡಿವಂತರಂತೆಯೂ ಕೆಲವೊಮ್ಮೆ ಆಧುನಿಕರಂತೆಯೂ ಕಾಣುತ್ತಿತ್ತು ಎಂದಿದ್ದರು. ನಿಜವಾಗಿ, ಅನಂತಮೂರ್ತಿಯವರು ಈ ಸಮಾಜವನ್ನು ಸದಾ ಪ್ರಶ್ನಾರ್ಹರಾಗಿ ಮತ್ತು ಚರ್ಚಾರ್ಹರಾಗಿ ಕಾಡಿರುವುದಕ್ಕೆ ಮುಖ್ಯ ಕಾರಣ, ಸಮಾಜದ ಜೀವನ ಕ್ರಮಗಳೇ. ಊರಿನಲ್ಲಿ ಕಾಣಿಸಿಕೊಂಡ ಪ್ಲೇಗ್‍ಗೆ ಚಿಕಿತ್ಸೆ ನೀಡಲು ಅಗ್ರಹಾರಕ್ಕೆ ಬಂದ ವೈದ್ಯರೋರ್ವರು ಅಸ್ಪ್ರಶ್ಯ ಕೇರಿಗೆ ಹೋಗಲು ನಿರಾಕರಿಸಿದುದು ಅವರ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು. ‘ಸಂಸ್ಕಾರ’ ಅವರೊಳಗಿನ ಈ ಎಲ್ಲ ಆಕ್ರೋಶ, ಪ್ರಶ್ನೆ, ಆದರ್ಶ ಕಲ್ಪನೆಯ ಕೂಸು ಎನ್ನಬೇಕು. ಈ ಸಮಕಾಲೀನ ಸಮಾಜದಲ್ಲಂತೂ ಅವರು ಈ ಸಮಾಜಕ್ಕೆ ಇನ್ನಷ್ಟು ಹತ್ತಿರವಾದರು. ಅವರಿಲ್ಲದ ಅಥವಾ ಸ್ಪಂದಿಸದ ಚರ್ಚೆಯೊಂದು ಅಪೂರ್ಣ ಅನ್ನಿಸುವಷ್ಟರ ಮಟ್ಟಿಗೆ ಅವರು ಪ್ರಭಾವ ಬೆಳೆಸಿಕೊಂಡರು. ಅವರು ಮೋದಿಯನ್ನೂ ಬಿಡಲಿಲ್ಲ. ಭೈರಪ್ಪರನ್ನೂ ಬಿಡಲಿಲ್ಲ. ಕನ್ನಡ ಮಾಧ್ಯಮ ಶಾಲೆಗಳೂ ಪಠ್ಯ ಪುಸ್ತಕ ಬದಲಾವಣೆಗಳೂ ಅವರ ಚರ್ಚಾ ವ್ಯಾಪ್ತಿಗೆ ಬಂದುವು. ದುರಂತವೇನೆಂದರೆ, ಅವರ ಆಲೋಚನಾ ಧಾಟಿಗೂ ವಾಸ್ತವಕ್ಕೂ ನಡುವೆ ಇರುವ ಅಪಾರವಾದ ನಂಟನ್ನು ಕಂಡು ಕನಲಿದ ಒಂದು ವರ್ಗವು ಅವರ ವಿಚಾರಧಾರೆಯನ್ನೇ ತಿರುಚುವ ಯತ್ನ ಮಾಡಿದುವು. ವೇದಿಕೆಯ ಮೇಲಿಂದ ಅವರು ಏನನ್ನು ಹೇಳುತ್ತಾರೋ ಅದಕ್ಕೆ ಆ ವೇದಿಕೆಗಿಂತಲೂ ಕಿರಿದಾದ ಅರ್ಥ ಬರುವಂತೆ ವ್ಯಾಖ್ಯಾನಿಸಿದುವು. ಆ ವ್ಯಾಖ್ಯಾನದ ಸುತ್ತಲೇ ಸಾರ್ವಜನಿಕರು ಆಲೋಚಿಸುವಂಥ ಸನ್ನಿವೇಶ ಗಳನ್ನು ಸೃಷ್ಟಿಸಿದುವು. ಆದ್ದರಿಂದಲೇ, ‘ಮೋದಿ ಪ್ರಧಾನಿಯಾದ ಭಾರತದಲ್ಲಿ ಇರಲು ತಾನು ಇಚ್ಛಿಸುವುದಿಲ್ಲ' ಎಂದ ಅವರ ಮಾತು ‘ಅಕಾಲಿಕ ಮತ್ತು ಅಸಂಬದ್ಧ'ವೆಂಬಂತೆ ಚಿತ್ರಿತವಾದದ್ದು ಮತ್ತು ಮೋದಿ ಬೆಂಬಲಿಗರು ಅವರಿಗೆ ‘ಪಾಕ್' ವಿಮಾನ ಯಾನದ ಟಿಕೆಟ್ ಕಳುಹಿಸಿಕೊಡುವಷ್ಟು ವಿಪರೀತ ಮಟ್ಟಕ್ಕೆ ತಲುಪಿದ್ದು. ನಿಜವಾಗಿ ‘ಪದ್ಯ ಬರೆವ ಬಗೆ' ಎಂಬ ಲೇಖನವನ್ನು ಬರೆದವರು ಅನಂತಮೂರ್ತಿ. ಪದ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಅದರಲ್ಲಿ ಅವರು ವ್ಯಾಖ್ಯಾನಿಸಿದ್ದರು. ಆದರೆ, ಅವರ ಮಾತಿನ ಆಳ, ವಿಸ್ತಾರ ಮತ್ತು ಗಹನತೆಯನ್ನು ಗ್ರಹಿಸುವಲ್ಲಿ ಆಧುನಿಕ ತಲೆಮಾರು ಸೋತಿದ್ದನ್ನು ನೋಡಿದರೆ, ‘ಮಾತು ಬಗೆವ ಬಗೆ' ಎಂಬ ಲೇಖನವನ್ನು ಬರೆಯ ಬೇಕಿತ್ತೇನೋ ಎಂದನಿಸುತ್ತದೆ.
ತನ್ನ ಇಷ್ಟದ ಸಮಾಜದ ಸ್ಥಾಪನೆಗಾಗಿ ವಾಗ್ವಾದದ ಶೈಲಿಯನ್ನು ನೆಚ್ಚಿಕೊಂಡವರು ಅನಂತಮೂರ್ತಿ. ಅದಕ್ಕಾಗಿ ಜಗಳಗಂಟರು, ವಿವಾದ ಪುರುಷರು ಆಗಲೂ ಅವರು ಸಿದ್ಧರಾದರು. ನೂರ್ ಮುಹಮ್ಮದ್‍ರ ದಾರಿ ಇದಕ್ಕಿಂತ ಭಿನ್ನ. ಅವರು ನೇರ ಮತ್ತು ನಿಖರ ಭಾಷೆಯನ್ನು ಬಳಸಿಕೊಂಡರು. ವಿವಾದಕ್ಕೆ ಹೇತುವಾಗಬಲ್ಲ ಮತ್ತು ಗ್ರಹಿಕೆಯಲ್ಲಿ ಎಡವಬಲ್ಲ ಭಾಷೆಯನ್ನಾಗಲಿ, ಶೈಲಿಯನ್ನಾಗಲಿ ಅವರು ಆಯ್ಕೆ ಮಾಡಿಕೊಳ್ಳಲಿಲ್ಲ. ಅನಂತಮೂರ್ತಿಯವರಿಗೆ ಮಾತುಗಾರಿಕೆ ರಕ್ತಗತವಾಗಿತ್ತು. ವೇದಿಕೆಯಲ್ಲಿ ಅವರಿದ್ದಾರೆಂದರೆ ಉಳಿದವರ ಮಾತುಗಳೆಲ್ಲವೂ ಸೋಲುತ್ತಿದ್ದುವು. ನೂರ್ ಮುಹಮ್ಮದ್‍ರಿಗೆ ವೇದಿಕೆ ಎಂದರೇನೇ ಅಲರ್ಜಿ. ಅನಂತಮೂರ್ತಿಯವರ ಮಾತುಗಳನ್ನು ಸಭಿಕರಲ್ಲಿ ಒಂದಾಗಿ ಆಲಿಸಿ ಹೋದವರು ಅವರು. ಬರಹ ಶೈಲಿ, ಆಲೋಚನಾ ಧಾಟಿ, ವಿಚಾರಧಾರೆ, ಜೀವನ ಕ್ರಮ.. ಎಲ್ಲರಲ್ಲೂ ಅವರಿಬ್ಬರೂ ಭಿನ್ನ ಆಯ್ಕೆಗಳನ್ನು ಮಾಡಿಕೊಂಡಿದ್ದಾರಾದರೂ ಫ್ಯಾಸಿಝಂನ ವಿಷಯದಲ್ಲಿ ಅವರಿಬ್ಬರ ನಿಲುವುಗಳೂ ಒಂದು ಗೂಡುತ್ತಿದ್ದುವು. ಫ್ಯಾಸಿಝಂ ಎಂಬುದು ಸರ್ವ ಕಲ್ಯಾಣ ಕನಸುಗಳಿಗೂ ವೈರಿ ಎಂದು ಅವರಿಬ್ಬರೂ ಬಲವಾಗಿ ನಂಬಿದ್ದರು. ಮನುಷ್ಯ ಸಮಾನತೆಯ ಕುರಿತಂತೆ ನೂರ್ ಮುಹಮ್ಮದ್ ಮತ್ತು ಅನಂತಮೂರ್ತಿಯರ ಮಧ್ಯೆ ಯಾವ ಭಿನ್ನತೆಯೂ ಇರಲಿಲ್ಲ. ಅಪ್ಪಟ ಬ್ರಾಹ್ಮಣರಾಗಿದ್ದೂ ಬ್ರಾಹ್ಮಣ್ಯದ ತಪ್ಪು ಆಚಾರ-ಅವಿಕಸಿತ ನಿಲುವುಗಳನ್ನು ಪ್ರಶ್ನಿಸುತ್ತಾ ಅನಂತಮೂರ್ತಿ ‘ಸಂಸ್ಕಾರ' ರಚಿಸಿದಂತೆ ಮುಸ್ಲಿಮ್ ಸಮುದಾಯದ ಒಳಗಿದ್ದುಕೊಂಡೇ ಮುಸ್ಲಿಮರ ತಪ್ಪು ಆಚರಣೆಗಳನ್ನು ನೂರ್ ಮುಹಮ್ಮದ್ ಪ್ರಶ್ನಿಸಿದರು. ‘ಆದರ್ಶ ಸಮಾಜ'ವಾಗಬೇಕಿದ್ದ ಸಮೂಹವೊಂದು ಅನಾದರ್ಶ ಕಳೆಗಳೊಂದಿಗೆ ಬದುಕುತ್ತಿರುವುದನ್ನು ವಿವಿಧ ಕೃತಿಗಳ ಮೂಲಕ ಪ್ರತಿಭಟಿಸಿದರು. ಫ್ಯಾಸಿಝಂನ ಬಗ್ಗೆ ನೂರ್ ಮುಹಮ್ಮದ್ ಎಷ್ಟು ಸೂಕ್ಷ್ಮವಾಗಿದ್ದರೆಂದರೆ, ನಿಧನಕ್ಕಿಂತ ಎರಡು ದಿನಗಳ ಮೊದಲಷ್ಟೇ- ಬೈಠಕ್, ಪಥಸಂಚಲನ.. ಮುಂತಾದ ಕೆಲವಾರು ಪದಗಳನ್ನು ಎತ್ತಿ ಹೇಳುತ್ತಾ ಅದರ ಫ್ಯಾಸಿಸ್ಟ್ ಹಿನ್ನೆಲೆಯನ್ನು ಪರಿಚಯಿಸಿದ್ದರು.
ಒಂದು ರೀತಿಯಲ್ಲಿ, ವ್ಯಕ್ತಿತ್ವ, ಅಭಿರುಚಿ, ಖ್ಯಾತಿ, ವಿವಾದ, ವಿಚಾರಧಾರೆ.. ಮುಂತಾದುವುಗಳಲ್ಲಿ ಅಪಾರ ಅಂತರಗಳಿದ್ದರೂ ಮನುಷ್ಯ ಸಮಾನತೆ ಮತ್ತು ಸರ್ವರಿಗೂ ಸಮಾನ ಸ್ವಾತಂತ್ರ್ಯ ಇರುವ ಕಲ್ಯಾಣ ರಾಷ್ಟ್ರವೊಂದರ ನಿರ್ಮಾಣದ ವಿಷಯದಲ್ಲಿ ನೂರ್ ಮತ್ತು ಮೂರ್ತಿ ಇಬ್ಬರೂ ಒಂದೇ ದನಿಯಾಗಿದ್ದರು. ಒಬ್ಬರು ಅದಕ್ಕಾಗಿ ತಿಕ್ಕಾಟ, ವಾಗ್ವಾದ, ಒದ್ದಾಟಗಳ ದಾರಿ ಕಂಡುಕೊಂಡರೆ ಇನ್ನೊಬ್ಬರು ಇದಕ್ಕೆ ವಿರುದ್ಧ ದಾರಿಯನ್ನು ತುಳಿದರು. ಇಬ್ಬರಲ್ಲೂ ಅಸ್ಪೃಶ್ಯತೆ ಇಲ್ಲದ ಜಗತ್ತಿನ ಕನಸಿತ್ತು. ಮಹಿಳಾ ದೌರ್ಜನ್ಯ, ಅಸಮಾನತೆ, ದಬ್ಬಾಳಿಕೆ, ಭ್ರೂಣಹತ್ಯೆಗಳಿಲ್ಲದ ಆದರ್ಶವಿತ್ತು. ಆ ಆದರ್ಶವನ್ನು ಪ್ರತಿಪಾದಿಸಿಕೊಂಡೇ ಅವರಿಬ್ಬರೂ ಬಾಳಿದರು. ಬರೆದರು. ಪ್ರತಿಭಟಿಸಿದರು. ಹೊರಟು ಹೋದರು.