ಮಾಧ್ಯಮ ನೀತಿಸಂಹಿತೆ ಮತ್ತು ನೈತಿಕತೆಯ ಕುರಿತಂತೆ ಬ್ರಿಟನ್ನಿನ ಪ್ರಮುಖ ಟಿ.ವಿ. ಚಾನೆಲ್ ಆದ ‘ಚಾನೆಲ್ 4’ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಅದರ ಪತ್ರಕರ್ತ ಜಾನ್‍ಸ್ಕೋ ಎಂಬವರು ವಾರಗಳ ಹಿಂದೆ ಗಾಝಾಕ್ಕೆ ಭೇಟಿ ಕೊಟ್ಟಿದ್ದರು. ಮರಳುವಾಗ, 'ದಿ ಚಿಲ್ಡ್ರನ್ ಆಫ್ ಗಾಝಾ' ಎಂಬ ಮೂರೂವರೆ ನಿಮಿಷಗಳ ವೀಡಿಯೋ ಚಿತ್ರೀಕರಣವನ್ನು ತಂದಿದ್ದರು. ಎಂತಹವರ ಮನಸ್ಸನ್ನೂ ನಾಟಬಲ್ಲಷ್ಟು ಪ್ರಭಾವಶಾಲಿಯಾಗಿದ್ದ ಆ ಪುಟ್ಟ
ವೀಡಿಯೋದಲ್ಲಿ ಗಾಝಾದ ಗಾಯಗೊಂಡ ಪುಟ್ಟ ಪುಟ್ಟ ಮಕ್ಕಳಿದ್ದರು. ಅಲ್ಲಿನ ಆಸ್ಪತ್ರೆಗಳಿಗೆ
ಭೇಟಿ ಕೊಟ್ಟಾಗ ಕಂಡುಬಂದ ದೃಶ್ಯಗಳಿಂದ ಪ್ರಭಾವಿತಗೊಂಡು ಅವರು ಆ ವೀಡಿಯೋ
ಚಿತ್ರೀಕರಿಸಿದ್ದರು. ಆ ದೃಶ್ಯಗಳನ್ನು ಮರೆತು ತನ್ನಿಂದ ಬದುಕಲು ಸಾಧ್ಯವಿಲ್ಲ ಎಂದೂ
ಅವರು ಹೇಳಿದ್ದರು. ಆದರೆ ‘ಚಾನೆಲ್ 4’ ಅದನ್ನು ಪ್ರಸಾರ ಮಾಡಲಿಲ್ಲ. ಜಾನ್ ಸ್ನೋ ಆ
ವೀಡಿಯೋವನ್ನು ಇಂಟರ್‍ನೆಟ್‍ನಲ್ಲಿ (ಸಾಮಾಜಿಕ ತಾಣಗಳಲ್ಲಿ) ಹಂಚಿಕೊಂಡರು. ಎರಡು
ವಾರಗಳೊಳಗೆ ಒಂದು ಮಿಲಿಯನ್‍ಗಿಂತಲೂ ಅಧಿಕ ಮಂದಿ ಅದನ್ನು ವೀಕ್ಷಿಸಿದರು. ಹಂಚಿಕೊಂಡರು.
ಮಾತ್ರವಲ್ಲ, ‘ಚಾನೆಲ್ 4’ ನಿಲುವನ್ನು ಬಲವಾಗಿ ಪ್ರಶ್ನಿಸಿದರು. ‘ಮೂರೂವರೆ ನಿಮಿಷಗಳ ಈ
ವೀಡಿಯೋವನ್ನು ಪ್ರಸಾರ ಮಾಡದಷ್ಟು ಚಾನೆಲ್ ಬ್ಯುಸಿಯಾಗಿದೆಯೇ ಎಂಬಲ್ಲಿಂದ ಹಿಡಿದು,
ಪ್ರಸಾರ ಮಾಡದಂಥ ಯಾವ ಅಂಶಗಳು ವೀಡಿಯೋದಲ್ಲಿವೆ’ ಎಂಬಲ್ಲಿವರೆಗೆ ಹತ್ತು-ಹಲವು
ಪ್ರಶ್ನೆಗಳು ಚಾನೆಲ್‍ಗೆ ಎದುರಾದುವು. ಆದರೆ ಚಾನೆಲ್ ತನ್ನನ್ನು ಸಮರ್ಥಿಸಿಕೊಂಡಿತು.
ವೀಡಿಯೋವನ್ನು ಪ್ರಸಾರ ಮಾಡುವುದರಿಂದ ಪಕ್ಷಪಾತ ಎಸಗಿದಂತಾಗುತ್ತದೆ ಎಂದು ಅದು
ಅಭಿಪ್ರಾಯಪಟ್ಟಿತು. ಆ ಚಿತ್ರೀಕರಣದಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು
ನುಣುಚಿಕೊಂಡಿತು. ಆದರೆ ಚಾನೆಲ್‍ನ ಈ ನಿಲುವನ್ನು ಲಂಡನ್ನಿನ ಪ್ರಸಿದ್ಧ ಗಾರ್ಡಿಯನ್
ಪತ್ರಿಕೆಯಲ್ಲಿ ಜೇಮ್ಸ್ ಬೆಲ್ ಎಂಬ ಪತ್ರಕರ್ತ (Perils of enforcing neutrality in
war reporting) ಖಾರವಾಗಿ ಪ್ರಶ್ನಿಸಿದರು.
ಚಾನೆಲ್ ಈ ನೈತಿಕ ಗೆರೆಯನ್ನು ಪ್ರತಿದಿನವೂ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
‘ಪ್ರಚಲಿತ ವಿದ್ಯಮಾನ’ ಎಂಬ ಕಾರ್ಯಕ್ರಮದಲ್ಲಿ ಅದು ತನ್ನ ವರದಿಗಾರರಿಂದ ನೇರ
ಮಾಹಿತಿಯನ್ನು ಕೋರುತ್ತದೆ. ಅವರ ಮಾಹಿತಿಯ ಆಧಾರದಲ್ಲಿ ವಿಶ್ಲೇಷಣೆ ನಡೆಸುತ್ತದೆ. ಆಗ
ಎದುರಾಗದ ಸ್ಪಷ್ಟತೆಯ ಸಮಸ್ಯೆಯು ಈ ಮೂರೂವರೆ ನಿಮಿಷಗಳ ವೀಡಿಯೋದಲ್ಲೇಕೆ ಎದುರಾಯಿತು
ಎಂದವರು ಪ್ರಶ್ನಿಸಿದರು.
ನಿಜವಾಗಿ, ಮಾಧ್ಯಮಗಳ ನೈತಿಕತೆ ಪ್ರಶ್ನೆಗೀಡಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಪಬ್ಲಿಕ್ ಟಿ.ವಿ.ಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿರುವ ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟುರವರು ಕಳೆದ ವಾರ ಫೇಸ್‍ಬುಕ್‍ನಲ್ಲಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆ ಕಾರ್ಯಕ್ರಮದ ಕುರಿತಂತೆ ಸ್ಪಷ್ಟಪಡಿಸಿಕೊಳ್ಳಲು ಮಟ್ಟು ಅವರು ಚಾನೆಲ್‍ನ ಪ್ರಧಾನ ಸಂಪಾದಕ ರಂಗನಾಥ್‍ರಿಗೆ ದೂರವಾಣಿ ಕರೆ ಮಾಡಿದ್ದು ಮತ್ತು ರಂಗನಾಥ್ ರು, ‘ತಾನು ಶೌಚಾಲಯದಲ್ಲಿದ್ದು 15 ನಿಮಿಷಗಳ ಬಳಿಕ ಕರೆ ಮಾಡುವುದಾಗಿ ಹೇಳಿ’ ಬಳಿಕ ಕರೆಯನ್ನೇ ಮಾಡದಿದ್ದುದನ್ನು ಹಂಚಿಕೊಂಡಿದ್ದರು. ಒಂದು ರೀತಿಯಲ್ಲಿ, ‘ಚಾನೆಲ್ 4’ನಿಂದ ಹಿಡಿದು ಸ್ಥಳೀಯ ಚಾನೆಲ್ ವರೆಗೆ ಅಥವಾ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆಯಿಂದ ಹಿಡಿದು ಸ್ಥಳೀಯ ಮಟ್ಟದ ಪತ್ರಿಕೆಯ ವರೆಗೆ ಮಾಧ್ಯಮ ಜಗತ್ತು ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗುತ್ತಲೇ ಇದೆ. ಮಾಧ್ಯಮಗಳ ಮೌಲ್ಯನಿಷ್ಠೆ, ಬದ್ಧತೆ, ನಿಷ್ಪಕ್ಷಪಾತತ್ವವು ಹೆಜ್ಜೆಹೆಜ್ಜೆಗೂ ಪ್ರಶ್ನೆಗೀಡಾಗುತ್ತಿವೆ. ಒಂದು ವೇಳೆ, ಜಾನ್ ಸ್ನೋರು ಗಾಝಾದ ಬದಲು ಇರಾಕಿಗೆ ಹೋಗಿರುತ್ತಿದ್ದರೆ ಮತ್ತು ಐಎಸ್‍ಐಎಸ್ ಗುಂಪಿನ ‘ಅಮಾನವೀಯ' ಕೃತ್ಯಕ್ಕೆ ಸಾಕ್ಷಿಯಾಗಬಲ್ಲ ದೃಶ್ಯಗಳನ್ನು ಸೆರೆ ಹಿಡಿದು ತರುತ್ತಿದ್ದರೆ ‘ಚಾನೆಲ್ 4’ನ ನಿಲುವು ಏನಿರುತ್ತಿತ್ತು? ಅದು ಸ್ಪಷ್ಟತೆಯ ನೆಪ ಒಡ್ಡಿ ವೀಡಿಯೋವನ್ನು ತಿರಸ್ಕರಿಸುತ್ತಿತ್ತೇ? ಸಿರಿಯಾದಲ್ಲಿ ಬಶ್ಶಾರುಲ್ ಅಸದ್‍ರ ಕ್ರೌರ್ಯಕ್ಕೆ ಸಾಕ್ಷಿ ಒದಗಿಸಬಲ್ಲ ಇಂಥದ್ದೇ ವೀಡಿಯೋ ಒಂದು ಚಾನೆಲ್‍ಗೆ ದೊರಕಿರುತ್ತಿದ್ದರೆ ಅದು ಏನು ಮಾಡುತ್ತಿತ್ತು? ಇರಾಕ್‍ನಲ್ಲೋ ಅಫಘಾನ್‍ನಲ್ಲೋ ಕಲ್ಲೆಸೆದು ಕೊಲ್ಲುವುದೆಂದು ಹೇಳಲಾಗುವ ವೀಡಿಯೋಗಳು ಕೆಲವೊಮ್ಮೆ ಚಾನೆಲ್‍ಗಳಲ್ಲಿ ಪ್ರಸಾರವಾಗುವುದಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ದೃಶ್ಯಗಳೂ ಬಿತ್ತರಗೊಳ್ಳುವುದಿದೆ. ಆದರೆ ಆ ಎಲ್ಲ ಸಂದರ್ಭಗಳಲ್ಲಿ ವೀಡಿಯೋಗಳ ಮೂಲವು ಸ್ಪಷ್ಟಗೊಂಡಿರುವುದೇ ಇಲ್ಲ. ಅಮೇರಿಕದ ಅವಳಿ ಕಟ್ಟಡ ಧ್ವಂಸಗೊಂಡ ಸುದ್ದಿಯನ್ನು ಫೆಲೆಸ್ತೀನಿಯರು ಸಂತೋಷ ಆಚರಿಸುವ ದೃಶ್ಯಗಳೊಂದಿಗೆ ಬಿಬಿಸಿಯಂಥ ಪ್ರಮುಖ ಮಾಧ್ಯಮವೇ ಈ ಹಿಂದೆ ಪ್ರಸಾರ ಮಾಡಿತ್ತು. ಅವಳಿ ಕಟ್ಟಡ ಉರುಳಿದುದಕ್ಕಾಗಿ ಫೆಲೆಸ್ತೀನಿಯರು ಸಂಭ್ರಮ ಪಡುತ್ತಿದ್ದಾರೆ ಎಂದೂ ಅದು ಹೇಳಿತ್ತು. ನಿಜವಾಗಿ, ಆ ಸಂತೋಷಾಚರಣೆಗೂ ಅವಳಿ ಕಟ್ಟಡದ ಉರುಳುವಿಕೆಗೂ ಯಾವ ಸಂಬಂಧವೂ ಇರಲಿಲ್ಲ. ಆ ದೃಶ್ಯ ಸೆಪ್ಟೆಂಬರ್ 11ರದ್ದೂ ಆಗಿರಲಿಲ್ಲ. ಯಾವಾಗಿನದ್ದೋ ಒಂದು ದೃಶ್ಯವನ್ನು ಇನ್ನಾವುದೋ ಘಟನೆಗೆ ಜೋಡಿಸಿ ಫೆಲೆಸ್ತೀನಿಯರನ್ನು ಉಗ್ರರು, ಭಯೋತ್ಪಾದಕರು ಎಂದು ಸಾರುವುದಕ್ಕೆ ಮಾಧ್ಯಮದ ಮಂದಿ ಹೆಣೆದ ತಂತ್ರವಾಗಿತ್ತದು. ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳದೇ ಮಾಧ್ಯಮ ಕ್ಷೇತ್ರವು ಪ್ರತಿನಿತ್ಯ ಧಾರಾಳ ಸುದ್ದಿ, ದೃಶ್ಯಗಳನ್ನು ಪ್ರಸಾರ ಮಾಡುತ್ತಿರುವಾಗ ಜಾನ್ ಸ್ನೋರ ಮೂರೂವರೆ ನಿಮಿಷಗಳ ಪುಟ್ಟ ವೀಡಿಯೋವೊಂದು ಆ ಮಟ್ಟದ ತಪಾಸಣೆಗೆ ಒಳಗಾಗಲು ಕಾರಣವೇನು?
ಮಾಧ್ಯಮ ಕ್ಷೇತ್ರವು ಎಷ್ಟು ಪವಿತ್ರ ಮತ್ತು ಅಪವಿತ್ರ ಎಂಬುದು ಅಸಂಖ್ಯ ಬಾರಿ ಈ ನೆಲದಲ್ಲಿ ಚರ್ಚೆಗೊಳಗಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಕಣ್ಮರೆಯಾಗುತ್ತಿರುವ ಪ್ರಾಮಾಣಿಕತೆಯು ಅಸಂಖ್ಯ ವಿಚಾರಗೋಷ್ಠಿ, ಸಭೆ, ಸಂವಾದ ಕಾರ್ಯಕ್ರಮಗಳಿಗೆ ವಸ್ತುವಾಗಿದೆ. ಭಯೋತ್ಪಾದನಾ ಘಟನೆಗಳ ಸಂದರ್ಭದಲ್ಲಿ ಮಾಧ್ಯಮಗಳು ಸುದ್ದಿ ಮೂಲವನ್ನು ಖಚಿತಪಡಿಸಿಕೊಳ್ಳದೇ ಬೇಕಾಬಿಟ್ಟಿ ನಡೆದುಕೊಂಡ ಬಗ್ಗೆ ಹಲವು ಕೃತಿಗಳೇ ಪ್ರಕಟವಾಗಿವೆ. ಮುತೀಉರ್ರಹ್ಮಾನ್ ಎಂಬ ಪತ್ರಕರ್ತ ಅನುಭವಿಸಿದ ನೋವುಗಳು ಓದುಗ ವಲಯದಲ್ಲಿ ಇವತ್ತೂ ಜೀವಂತವಾಗಿವೆ. ಅಷ್ಟಕ್ಕೂ, ಮಾಧ್ಯಮ ಮಂದಿಯೆಂದರೆ ಅಶಿಕ್ಷಿತರಲ್ಲ. ಒಂದು ಸುದ್ದಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ತಿಳುವಳಿಕೆಯಿಲ್ಲದ ವ್ಯಕ್ತಿಗಳೂ ಅಲ್ಲ. ಆದರೂ ಪ್ರಮಾದಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದೇಕೆ? ಪ್ರತಿ ಚಾನೆಲ್‍ಗೂ ಪತ್ರಿಕೆಗೂ ಸಮಾಜಮುಖಿ ಧ್ಯೇಯವಾಕ್ಯವೊಂದು ಇರುತ್ತದೆ. ಆದರೆ ಅನೇಕ ಬಾರಿ ಸುದ್ದಿಗಳು ಆ ಧ್ಯೇಯವಾಕ್ಯವನ್ನೇ ಅವಮಾನಿಸುವಂತಿರುತ್ತವೆ. ಸುದ್ದಿಗೆ ಸ್ಪಷ್ಟತೆ ಇರುವುದಿಲ್ಲ. ಮೂಲವು ಖಚಿತಗೊಂಡಿರುವುದಿಲ್ಲ. ಸುದ್ದಿಯು ತೀವ್ರ ಪಕ್ಷಪಾತದಿಂದಲೂ ಕೂಡಿರುತ್ತವೆ.
ಗಾಝಾದ ಕುರಿತಂತೆ ಇವತ್ತು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಏನೆಲ್ಲ ಪ್ರಸಾರವಾಗಿವೆಯೋ ಅದಕ್ಕಿಂತ ಎಷ್ಟೋ ಪಟ್ಟು ಅಧಿಕ ಪ್ರಸಾರವಾಗದ, ಆದರೆ ಪ್ರಸಾರ ಆಗಲೇಬೇಕಾಗಿದ್ದ ಸುದ್ದಿಗಳೂ ಇವೆ. ‘ದಿ ಚಿಲ್ಡ್ರನ್ ಆಫ್ ಗಾಝಾ' ಎಂಬ ಪುಟ್ಟ ವೀಡಿಯೋ ಅದರ ಒಂದು ಅತಿ ಸಣ್ಣ ಸ್ಯಾಂಪಲ್ ಅಷ್ಟೇ. ಒಂದು ವೇಳೆ ಪ್ರಸಿದ್ಧ ಟಿ.ವಿ. ಮತ್ತು ಪತ್ರಿಕೆಗಳ ಸಂಪಾದಕರ ಕೊಠಡಿಯನ್ನು ತಪಾಸಿಸಿದರೆ, ಪ್ರಸಾರವಾಗದ ಇಂಥ ಅನೇಕ ವೀಡಿಯೋ ಮತ್ತು ಸುದ್ದಿಗಳ ರಾಶಿಗಳೇ ಸಿಗಬಹುದು. ಹಾಗಂತ, ಅವು ಪ್ರಕಟವಾಗದೇ ಇರುವುದಕ್ಕೆ ಅವುಗಳ ಮೂಲ ಖಚಿತಗೊಂಡಿಲ್ಲ ಎಂಬುದು ಕಾರಣ ಅಲ್ಲ. ಅವುಗಳು ಪ್ರಸಾರವಾದರೆ ಫೆಲೆಸ್ತೀನಿಯರಿಗೆ ಜಾಗತಿಕವಾಗಿ ಬೆಂಬಲ ವ್ಯಕ್ತವಾಗಬಹುದು ಎಂಬ ಭೀತಿಯೇ ಕಾರಣವಾಗಿದೆ. ಆದ್ದರಿಂದಲೇ ಅವು ಹಮಾಸನ್ನು ಉಗ್ರರ ಪಟ್ಟಿಯಲ್ಲಿಡುತ್ತವೆ ಮತ್ತು ಆ ಮೂಲಕ ಇಸ್ರೇಲಿನ ಕ್ರೌರ್ಯವನ್ನು ಉಗ್ರವಿರೋಧಿ ಹೋರಾಟವಾಗಿ ಬಿಂಬಿಸುವುದಕ್ಕೆ ನೆರವಾಗುತ್ತವೆ. ಇಂಥ ವಾತಾವರಣದಲ್ಲಿ 'ದಿ ಚಿಲ್ಡ್ರನ್ ಆಫ್ ಗಾಝಾ' ಪ್ರಸಾರವಾಗುವುದಾದರೂ ಹೇಗೆ?
ಏನೇ ಆಗಲಿ, ಜಾನ್ ಸ್ನೋರ ಮೂರೂವರೆ ನಿಮಿಷಗಳ ವೀಡಿಯೋವು ಮಾಧ್ಯಮ ಕ್ಷೇತ್ರದ ಕ್ರೂರ ಒಳ ಮನಸ್ಸನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ.
ಜಾನ್ ಸ್ನೋ |

No comments:
Post a Comment