ಅಬ್ದುಲ್ ಕಾದರ್ |
ಸೆ. 14ರ ಸುದ್ದಿಯಂತೂ ಇದಕ್ಕಿಂತಲೂ ಭೀಕರವಾದುದು. ದುಬೈಗೆ ತೆರಳುವುದಕ್ಕಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಕಾಸರಗೋಡಿನ ಅಬ್ದುಲ್ ಕಾದರ್ ಎಂಬ ಯುವಕ ಗಂಟೆಯೊಳಗೆ ಭಯೋತ್ಪಾದಕನಾಗಿ ಬದಲಾಗಿದ್ದ. ಆತನ ಮೇಲೆ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಮತ್ತು ಸಿರಿಯನ್ ಉಗ್ರವಾದಿಗಳೊಂದಿಗೆ ಸಂಬಂಧ ಇರುವ ಭಯೋತ್ಪಾದಕನೆಂಬ ಆರೋಪ ಹೊರಿಸಿ ಮಾಧ್ಯಮಗಳು ಹಬ್ಬ ಆಚರಿಸಿದವು. ಅಷ್ಟಕ್ಕೂ, ಭಯೋತ್ಪಾದಕನೆಂದು ಗುರುತಿಸಿಕೊಳ್ಳುವುದಕ್ಕೆ ಓರ್ವ ವ್ಯಕ್ತಿಯಲ್ಲಿ ಇರಬೇಕಾದ ಅರ್ಹತೆಗಳೇನು? ಮುಸ್ಲಿಮ್ ಹೆಸರು, ಉಗುರುಸುತ್ತಿಗೆ ಬಳಸುವ ಔಷಧಿ (ಹೈಡ್ರೋಜನ್ ಪೆರಾಕ್ಸೈಡ್), ಕೆಟ್ಟು ಹೋದ ಬ್ಯಾಟರಿ, ಟ್ಯಾಬ್... ಇವು ಭಯೋತ್ಪಾದಕ ಉಪಕರಣಗಳೇ? ಇವುಗಳ ಆಧಾರದಲ್ಲಿ ಓರ್ವನನ್ನು ಶಂಕಿತ ಭಯೋತ್ಪಾದಕ ಎಂದು ಕರೆಯಬಹುದೇ? ವಿಮಾನ ನಿಲ್ದಾಣದಲ್ಲಿರುವ ಕೇಂದ್ರೀಯ ಸುರಕ್ಷತಾ ಪಡೆ(ಸಿಐಎಸ್‍ಎಫ್)ಯ ಅಧಿಕಾರಿಗಳಿಗೆ ಬಾಂಬ್‍ಗೆ ಬಳಸುವ ಅಮೊನಿಯಂ ನೈಟ್ರೇಟ್ ಯಾವುದು ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಯಾವುದು ಎಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲವೇ? ಮಂಗಳೂರಿನ ವಿಮಾನ ನಿಲ್ದಾಣದಿಂದ ವಿದೇಶಗಳಿಗೆ ಹಾರುವವರಲ್ಲಿ ಅಬ್ದುಲ್ ಕಾದರ್ ಮೊದಲಿಗನೇನೂ ಅಲ್ಲ. ದಿನನಿತ್ಯ ಅನೇಕರು ಮಂದಿ ಅಲ್ಲಿಂದ ವಿಮಾನವೇರುತ್ತಾರೆ. ವಿವಿಧ ಲಗೇಜುಗಳನ್ನು ತರುತ್ತಾರೆ. ಅಲ್ಲದೆ ಭಯೋತ್ಪಾದಕರ ಕುರಿತಂತೆ ಮಂಗಳೂರು ವಿಮಾನ ನಿಲ್ದಾಣವು ಸಾಕಷ್ಟು ಎಚ್ಚರಿಕೆಯಿಂದಿರುವ ತಾಣವೂ ಹೌದು. ಹೀಗಿರುವಾಗ, ಇಲ್ಲಿರುವ ಅಧಿಕಾರಿಗಳಿಗೆ ಉಗುರುಸುತ್ತಿನ ಔಷಧಿ ಯಾವುದು ಅಮೊನಿಯಂ ನೈಟ್ರೇಟ್ ಯಾವುದು ಎಂಬ ಬಗ್ಗೆಯೂ ತಿಳುವಳಿಕೆ ಇಲ್ಲ ಎಂದರೆ ಏನರ್ಥ? ನಿಜ, ಅಬ್ದುಲ್ ಕಾದರ್‍ನಿಗೆ ತನ್ನಲ್ಲಿರುವ ವಸ್ತುವಿನ ಬಗ್ಗೆ ಗೊತ್ತಿರಲಿಲ್ಲ. ಆತನಿಗೆ ಆ ವಸ್ತುವನ್ನು ಕೊಟ್ಟಿರುವ ನೆರೆಮನೆಯವರು ಅದರ ಬಗ್ಗೆ ಹೇಳಿಯೂ ಇರಲಿಲ್ಲ. ಇಷ್ಟು ಮಾತ್ರಕ್ಕೆ ಅದನ್ನು ಸ್ಫೋಟಕ ಉಪಕರಣ ಎಂದು ಅಧಿಕಾರಿಗಳು ಘೋಷಿಸುವುದು ಸಮರ್ಥನೀಯವೇ? ಅದು ಸ್ಫೋಟಕ ವಸ್ತುವೇ ಯಾಕಾಗಬೇಕಿತ್ತು? ಇನ್ನಿತರ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳೂ ಆಗಬಹುದಿತ್ತಲ್ಲವೇ ಅಥವಾ ತಪಾಸಣೆಯವರೆಗೂ ಮಾಧ್ಯಮಗಳಿಗೆ `ಸ್ಫೋಟಕ' ಸುದ್ದಿಯನ್ನು ಅಧಿಕಾರಿಗಳು ಕೊಡದೇ ಇರಬಹುದಿತ್ತಲ್ಲವೇ? ಯಾಕೆ ಈ ಸಂಯಮವನ್ನು ಅಧಿಕಾರಿಗಳು ತೋರ್ಪಡಿಸಲಿಲ್ಲ, ಅಬ್ದುಲ್ ಕಾದರ್ ಎಂಬ ಹೆಸರನ್ನು ನೋಡಿಯೋ ಅಥವಾ ತಮಾಷೆಯೋ?
ನಿಜವಾಗಿ ಔಷಧಿ, ಟ್ಯಾಬ್, ಬ್ಯಾಟರಿಗಳನ್ನು ಸ್ಫೋಟಕ ವಸ್ತುಗಳೆಂದು ಮೊದಲು ಕರೆದುದು ಪತ್ರಕರ್ತರಲ್ಲ, ಅಧಿಕಾರಿಗಳು. ಅವರು ಅಂಥದ್ದೊಂದು ಸೂಚನೆಯನ್ನು ಪತ್ರಕರ್ತರಿಗೆ ರವಾನಿಸಿದ್ದಾರೆ. ಆ ಸುದ್ದಿಯನ್ನು ಪಡೆದುಕೊಂಡ ಪತ್ರಕರ್ತರು ಅದನ್ನು ಇನ್ನಷ್ಟು ಭೀಕರಗೊಳಿಸಿದ್ದಾರೆ. ಅಬ್ದುಕ್ ಕಾದರ್‍ನಿಗೂ ಸಿರಿಯನ್ ಹೋರಾಟಗಾರರಿಗೂ ನಡುವೆ ಸಂಬಂಧ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣವನ್ನೇ ಸ್ಫೋಟಿಸುವ ಸಂಚನ್ನು ಅವರು ಸೃಷ್ಟಿಸಿದ್ದಾರೆ. ಒಂದು ರೀತಿಯಲ್ಲಿ, ಪತ್ರಕರ್ತರ ನಡುವೆ ಎಂಥ ಭೀಕರ ಆತಂಕವಾದಿಗಳಿದ್ದಾರೋ ಅದಕ್ಕಿಂತಲೂ ಭೀಕರ ಭಯೋತ್ಪಾದಕರು ಅಧಿಕಾರಿ ವರ್ಗಗಳ ನಡುವೆಯೂ ಇದ್ದಾರೇನೋ ಅನ್ನುವ ಅನುಮಾನವೊಂದನ್ನು ಈ ಪ್ರಕರಣವು ಹುಟ್ಟು ಹಾಕಿದೆ. ಹಾಗಂತ, ಪತ್ರಕರ್ತರಿಗೆ ಅಧಿಕಾರಿಗಳಿಗಿಂತ ಹೆಚ್ಚಿನ ಸಾಮಾಜಿಕ ಬದ್ಧತೆಯಿದೆ. ಅಧಿಕಾರಿಗಳು ಏನನ್ನೇ ಹೇಳಲಿ, ಅವರು ಅದನ್ನು ವರದಿ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ತಾನು ಹೆಣೆಯುವ ಸುದ್ಧಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆಲೋಚಿಸಬೇಕಗುತ್ತದೆ. ಇಷ್ಟಿದ್ದೂ ಮತ್ತೆ ಮತ್ತೆ ಇಂಥ ತಪ್ಪುಗಳು ಸಂಭವಿಸುತ್ತಿರುವುದೇಕೆ? ಸಿರಿಯನ್ ಭಯೋತ್ಪಾದಕರೊಂದಿಗೆ ಅಬ್ದುಲ್ ಕಾದರ್‍ನಿಗೆ ಸಂಬಂಧ ಇದೆ ಎಂಬ ಹೇಯ ಸುಳ್ಳನ್ನು ಓರ್ವ ಪತ್ರಕರ್ತ ಯಾವ ಕಾರಣಕ್ಕಾಗಿ ಹೆಣೆದ? ಅದು ಆತನ ಸ್ವಯಂ ಸೃಷ್ಟಿಯೋ ಅಥವಾ ಅದರ ಹಿಂದೆ ಅಧಿಕಾರಿ ವರ್ಗಗಳ ಪಾತ್ರವಿದೆಯೊ? ಈ ದೇಶದಲ್ಲಿ ಓರ್ವನು ಭಯೋತ್ಪಾದನೆಯ ಆರೋಪ ಹೊತ್ತುಕೊಳ್ಳುವುದು ಕಳ್ಳತನದ್ದೋ ವಂಚನೆಯದ್ದೋ ಆರೋಪ ಹೊತ್ತುಕೊಂಡಂತೆ ಅಲ್ಲವಲ್ಲ. ಅದರಲ್ಲೂ ಹೆಸರು 'ಅಬ್ದುಲ್ ಕಾದರ್' ಎಂದಾದರೆ ಆ ಆರೋಪ ಎಷ್ಟು ಗಂಭೀರ ಸ್ವರೂಪವನ್ನು ಪಡಕೊಳ್ಳುತ್ತದೆ ಎಂಬುದು ಸುದ್ದಿ ತಯಾರಿಸುವ ಪತ್ರಕರ್ತನಿಗೂ ಗೊತ್ತು, ಅದನ್ನು ಪ್ರಕಟಿಸುವ ಸಂಪಾದಕನಿಗೂ ಗೊತ್ತು. ಹೀಗಿರುವಾಗ, ಓರ್ವ ಪತ್ರಕರ್ತ ಮತ್ತು ಪತ್ರಿಕೆಯು ಅಂಥ ಸುದ್ದಿಗಳನ್ನು ಪ್ರಕಟಿಸುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸುದ್ದಿಯಲ್ಲಿ ವಸ್ತುನಿಷ್ಠತೆಗೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಆದರೂ ಮಾಧ್ಯಮಗಳೇಕೆ ಪದೇ ಪದೇ ಎಡವುತ್ತಿವೆ?
ಪಿಂಕಿ ಪ್ರಮಾಣಿಕ್ |
ಪಿಂಕಿ ಪ್ರಮಾಣಿಕ್ ಮತ್ತು ಅಬ್ದುಲ್ ಕಾದರ್ ವಿಭಿನ್ನ ಧರ್ಮದ, ವಿಭಿನ್ನ ರಾಜ್ಯದ ಮತ್ತು ವಿಭಿನ್ನ ವೃತ್ತಿಯ ವ್ಯಕ್ತಿತ್ವಗಳಾದರೂ ಅನುಭವಿಸಿದ ಯಾತನೆಗಳು ಬಹುತೇಕ ಒಂದೇ. ಇಬ್ಬರ ಮಾನಹಾನಿಯಲ್ಲೂ ಪತ್ರಕರ್ತರಿಗೆ ಮತ್ತು ಅಧಿಕಾರಿಗಳಿಗೆ ಪಾತ್ರವಿದೆ. ಒಂದು ಪ್ರಕರಣವನ್ನು ಹೇಗೆ ಕೆಟ್ಟದಾಗಿ ನಿಭಾಯಿಸಬಹುದು ಎಂಬುದನ್ನು ಇವು ಸ್ಪಷ್ಟವಾಗಿ ಸೂಚಿಸುತ್ತವೆ. ಆದ್ದರಿಂದ ಇಂಥ ಪ್ರಕರಣಗಳ ಕುರಿತಂತೆ ಸರಕಾರವು ಕೂಲಂಕಷ ಅಧ್ಯಯನಕ್ಕೆ ಮುಂದಾಗಬೇಕು. ಪತ್ರಕರ್ತರು ಮತ್ತು ಅಧಿಕಾರಿಗಳ ನಡುವೆ ಇಂಥ ವೈರಸನ್ನು ಅಂಟಿಸಿಕೊಂಡವರ ಗುರುತು ಪತ್ತೆ ಹಚ್ಚಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯಾ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು. ಓದುಗರ ಪಾತ್ರವೂ ಇದರಲ್ಲಿ ಬಹಳ ಮುಖ್ಯ. ವೈರಸ್ ಪೀಡಿತರಿಂದ ಮಾಧ್ಯಮ ಮತ್ತು ಪೊಲೀಸ್ ವ್ಯವಸ್ಥೆಯನ್ನು ಪ್ರತ್ಯೇಕಿಸಲು ಸಂವಿಧಾನಬದ್ಧ ಸಕಲ ವಿಧಾನಗಳನ್ನೂ ಬಳಸಿಕೊಳ್ಳಬೇಕು. ನಾನು ಓದುವ ಮತ್ತು ನೋಡುವ ಮಾಧ್ಯಮ ವೈರಸ್ ಪೀಡಿತ ಪ್ರಮಾದಗಳಿಂದ ಮುಕ್ತವಾಗಿರಬೇಕು ಎಂಬ ಸೂಚನೆ ಮಾಧ್ಯಮ ಸಂಸ್ಥೆಗಳಿಗೆ ರವಾನೆಯಾಗಬೇಕು. ನಮಗೆ ಅಬ್ದುಲ್ ಕಾದರ್ ಬೇರೆಯಲ್ಲ, ಪಿಂಕಿಯೂ ಬೇರೆಯಲ್ಲ. ಅವರಿಬ್ಬರ ಮಾನವೂ ಗೌರವಾರ್ಹವಾದುದು.
No comments:
Post a Comment