Tuesday, 28 October 2014

ಪ್ರಾಣಿಗಳು ತಯಾರಿಸುವ ಪಟ್ಟಿ ಮತ್ತು ಬಾಬಾ ರಾಮ್‍ದೇವ್

   ಆಸ್ಟ್ರೇಲಿಯಾದಿಂದ ಎರಡು ಸುದ್ದಿಗಳು ಹೊರಬಿದ್ದಿವೆ. ಎರಡು ಕೂಡ ಮನುಷ್ಯರಿಗೆ ಸಂಬಂಧಿಸಿದ್ದು. ಬಡಿತ ನಿಲ್ಲಿಸಿದ ಹೃದಯಕ್ಕೆ ಚೇತರಿಕೆ ನೀಡಿ ಅದನ್ನು ಮತ್ತೊಬ್ಬರಿಗೆ ಕಸಿ ಮಾಡಬಹುದು ಎಂಬುದನ್ನು ಅಲ್ಲಿನ ವೈದ್ಯರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ, ಹಾಗೆ ಕಸಿ ಮಾಡಿಸಿಕೊಂಡ ಮೂವರು ಹೃದ್ರೋಗಿಗಳು ಈಗ ಚೇತರಿಸುತ್ತಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನೂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೊಂದು ಸುದ್ದಿ ಕೂಡ ಅಲ್ಲಿಯದೇ. 13 ಮಿಲಿಯನ್ ವರ್ಷಗಳ ಮೊದಲು ಕಾಂಗರೂ ಪ್ರಾಣಿ ಮತ್ತು ಮನುಷ್ಯ ಮುಖಾಮುಖಿಯಾದ ಸುದ್ದಿಯದು. ಮನುಷ್ಯ ಆ ನಾಡನ್ನು ಪ್ರವೇಶಿಸುವ ಮೊದಲು ಕಾಂಗರೂಗಳು ನೆಗೆದು ಚಲಿಸುತ್ತಿರಲಿಲ್ಲ. ಮನುಷ್ಯನಂತೆಯೇ ನಡೆಯುತ್ತಿದ್ದುವು. ಅದು ಭಾರೀ ಗಾತ್ರ ಮತ್ತು ತೂಕವನ್ನು ಹೊಂದಿದ್ದುವು. ಆದರೆ ಮನುಷ್ಯನ ಪ್ರವೇಶವಾದ ಬಳಿಕ ಅವುಗಳು ನಿಧಾನಕ್ಕೆ ಅಳಿಯತೊಡಗಿದುವು. ಮನುಷ್ಯ ತನ್ನ ಸ್ವಾರ್ಥಕ್ಕೋ ದುರಾಸೆಗೋ ಅವುಗಳ ನಿರ್ನಾಮದಲ್ಲಿ ಸಕ್ರಿಯನಾದ. ಅಂತಿಮವಾಗಿ ಆ ಪ್ರಬೇಧವೇ ಅಳಿದು ಹೋಗಿ ಈಗಿನ ನೆಗೆಯುವ ಚಿಕ್ಕ ಗಾತ್ರದ ಕಾಂಗರೂಗಳು ಹೊಸ ರೂಪದಲ್ಲಿ ಜನ್ಮ ತಾಳಿದುವು ಎಂದು ವಿಜ್ಞಾನಿಗಳು ತಮ್ಮ ಸಂಶೋಧನಾ ವರದಿಯಲ್ಲಿ ವಿವರಿಸಿದ್ದಾರೆ.
 ನಿಜವಾಗಿ, ಮನುಷ್ಯ ಮತ್ತು ಪ್ರಾಣಿಗಳು ನಿತ್ಯ ಮುಖಾಮುಖಿಯಾಗಿಯೇ ಬದುಕುತ್ತಿವೆ. ಮಾತ್ರವಲ್ಲ, ಹೆಚ್ಚಿನೆಲ್ಲ ಮುಖಾಮುಖಿಗಳಲ್ಲಿ ಪ್ರಾಣಿಗಳು ಸೋಲನ್ನೊಪ್ಪಿಕೊಳ್ಳುತ್ತಲೂ ಇವೆ. ಪ್ರಾಣಿಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿಟ್ಟು ದುಡ್ಡು ಮಾಡುವವನೂ ಮನುಷ್ಯನೇ. ಬೃಹತ್ ಗಾತ್ರದ ಆನೆಗಳನ್ನು ಪಳಗಿಸಿ ತನ್ನ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುವವನೂ ಮನುಷ್ಯನೇ. ತನ್ನ ಸಂವಹನಕ್ಕಾಗಿ ಮೊಬೈಲ್ ಟವರ್‍ಗಳನ್ನು ನಿಲ್ಲಿಸಿ ಹಕ್ಕಿ ಸಂಕುಲಗಳನ್ನು ನಾಶ ಮಾಡುತ್ತಿರುವವನೂ ಮನುಷ್ಯನೇ. ಪ್ರಾಣಿಗಳು ಇವತ್ತಿನ ಜಗತ್ತಿನಲ್ಲಿ ಮನರಂಜನೆಗೆ ಬಳಕೆಯಾಗುತ್ತಿವೆ. ಅವುಗಳನ್ನು ಎದುರು-ಬದುರು ನಿಲ್ಲಿಸಿ ಹೊಡೆದಾಡಿಸಲಾಗುತ್ತದೆ. ಸ್ಪರ್ಧೆಗೆ ಕಟ್ಟಿ ಜೂಜು ನಡೆಸಲಾಗುತ್ತದೆ. ಜಲ್ಲಿಕಟ್ಟು, ಕೋಳಿಕಟ್ಟು, ಕಂಬಳಗಳಲ್ಲಿ ಅವು ಮನುಷ್ಯನ ಬಯಕೆಯಂತೆ ಓಡುತ್ತವೆ, ಕಾದಾಡುತ್ತವೆ, ಸಾಯುತ್ತವೆ. ಆದರೆ ಇದಕ್ಕೆ ಭಿನ್ನವಾದ ವಾತಾವರಣವೊಂದನ್ನು ಹುಟ್ಟು ಹಾಕಲು ಪ್ರಾಣಿಗಳಿಗೆ ಈ ವರೆಗೆ ಸಾಧ್ಯವಾಗಿಲ್ಲ. ಅವು ಮನುಷ್ಯನನ್ನು ಕೂಡಿ ಹಾಕುವ ಮನುಷ್ಯ ಸಂಗ್ರಹಾಲಯವನ್ನು ಸ್ಥಾಪಿಸಿಲ್ಲ. ಜಲ್ಲಿಕಟ್ಟು, ಕಂಬಳಗಳನ್ನು ಮನುಷ್ಯನಿಗಾಗಿ ಹುಟ್ಟು ಹಾಕಿಲ್ಲ. ಆತನನ್ನು ಎತ್ತಿಕೊಂಡು ಸರ್ಕಸ್ ಕಂಪೆನಿಯನ್ನೋ ಹೊಡೆದಾಟದ ಪಂದ್ಯಗಳನ್ನೋ ಅವು  ಏರ್ಪಡಿಸಿಲ್ಲ. ಒಂದು ವೇಳೆ,  ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಪ್ರಕೃತಿಯು ಪ್ರಾಣಿ ಜಗತ್ತಿಗೂ ಅನುಗ್ರಹಿಸಿರುತ್ತಿದ್ದರೆ ಪ್ರಪಂಚದ ಸ್ಥಿತಿ-ಗತಿಗಳು ಹೇಗಿರುತ್ತಿತ್ತು? ಮನುಷ್ಯನನ್ನು ಯಾವ ಪ್ರಾಣಿ ಯಾವೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತಿತ್ತು?
 ದುರಂತ ಏನೆಂದರೆ, ಮನುಷ್ಯ ಪ್ರಾಣಿಲೋಕವನ್ನು ಮಾತ್ರ ಮುಖಾಮುಖಿಗೊಳ್ಳುತ್ತಿರುವುದಲ್ಲ. ಆತ/ಕೆ ಪ್ರತಿದಿನ ಮನುಷ್ಯರನ್ನೂ ಮುಖಾಮುಖಿಯಾಗುತ್ತಿರುತ್ತಾನೆ. ಇಲ್ಲಿ ಪ್ರತಿಭಾವಂತರು, ಬುದ್ಧಿವಂತರು, ಕೋಮುವಾದಿಗಳು, ವಂಚಕರು, ಕ್ರೂರಿಗಳು, ಜನಾಂಗ ದ್ವೇಷಿಗಳು.. ಮುಂತಾದ ಅನೇಕ ರೀತಿಯ ಮನುಷ್ಯರಿದ್ದಾರೆ. ಮನುಷ್ಯ ಜಗತ್ತಿನ ದೌರ್ಬಲ್ಯ ಏನೆಂದರೆ, ಮನುಷ್ಯರ ನಡುವೆ ಇಷ್ಟೆಲ್ಲ ವಿಭಾಗಗಳಿದ್ದರೂ ಅವುಗಳನ್ನು ಪತ್ತೆ ಹಚ್ಚುವುದಕ್ಕೆ ಸರಿಯಾದ ಹೆಸರುಗಳಿಲ್ಲ ಎಂಬುದು. ಪ್ರಾಣಿ ಜಗತ್ತಿನಲ್ಲಿರುವ ಕ್ರೂರ ಪ್ರಾಣಿಗಳ ಬಗ್ಗೆ ಪ್ರಸ್ತಾಪವಾದ ಕೂಡಲೇ ಚಿರತೆ, ಹುಲಿ, ಸಿಂಹ, ಕರಡಿ ಮುಂತಾದ ಹೆಸರುಗಳು ಮುಂದೆ ಬರುತ್ತವೆ. ಹಾಗೆಯೇ ಬುದ್ಧಿವಂತ ಪ್ರಾಣಿ, ಸಾಧು ಪ್ರಾಣಿಗಳ ಪ್ರಸ್ತಾಪವಾದಾಗಲೂ ಕೆಲವು ಪ್ರಾಣಿಗಳು ನಮ್ಮ ಮುಂದೆ ಸುಳಿದಾಡುತ್ತವೆ. ಆದರೆ ಮನುಷ್ಯರಲ್ಲಿ ಭ್ರಷ್ಟ ಮನುಷ್ಯ, ಕೋಮುವಾದಿ ಮನುಷ್ಯ, ಕ್ರೂರಿ ಮನುಷ್ಯ... ಎಂದು ಮುಂತಾಗಿ ಪ್ರತ್ಯೇಕವಾಗಿ ಗುರುತಿಸಿಬಿಡುವುದಕ್ಕೆ ಯಾವ ಏರ್ಪಾಡುಗಳೂ ಇಲ್ಲ. ಮನುಷ್ಯರಲ್ಲಿ ಹುಲಿಯಂಥ ಮನುಷ್ಯ, ಚಿರತೆಯಂಥವ, ನರಿಯಂಥ ಮನುಷ್ಯ ಖಂಡಿತ ಇದ್ದಾರೆ. ಆದರೂ ಅವರು ಆ ಗುರುತನ್ನು ಮರೆಮಾಚಿಕೊಂಡು ಮನುಷ್ಯರ ಗುಂಪಿನಲ್ಲಿ ಸಹಜವಾಗಿ ಇದ್ದುಬಿಡುತ್ತಾರೆ. ಅಣ್ಣಾ ಹಜಾರೆ, ಬಾಬಾ ರಾಮ್‍ದೇವ್, ಸತ್ಯಾರ್ಥಿ, ಹಿರೇಮಠ್, ಮೋದಿ, ಮನ್‍ಮೋಹನ್ ಸಿಂಗ್, ಉಮಾ ಭಾರತಿ, ಮಮತಾ ಬ್ಯಾನರ್ಜಿ.. ಇವರೆಲ್ಲ ಮನುಷ್ಯರೇ. ಆದರೆ ಹುಲಿ, ಜಿಂಕೆ, ಇಲಿ, ಚಿರತೆಗಳನ್ನು ಅವುಗಳ ಸ್ವಭಾವಕ್ಕನುಗುಣವಾಗಿ ಹೆಸರಿಸಿದಂತೆ ಇವರನ್ನೂ ಹೆಸರಿಸಬಯಸಿದರೆ ಇವರೆಲ್ಲರೂ ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳಬೇಕಾದೀತು. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ‘ಕಪ್ಪು ಹಣ'ಕ್ಕಾಗಿ ಧರಣಿ ಕೂತ ಬಾಬಾ ರಾಮ್‍ದೇವ್‍ರನ್ನೇ ಎತ್ತಿಕೊಳ್ಳಿ. ಮನ್‍ಮೋಹನ್ ಸಿಂಗ್‍ರ ಸರಕಾರವನ್ನು ಅವರು ಯಾವೆಲ್ಲ ಪದಗಳಿಂದ ಟೀಕಿಸುತ್ತಿದ್ದರು? ಕಪ್ಪು ಹಣವನ್ನು ವಾಪಾಸು ಪಡೆಯುವುದರಿಂದ ಈ ದೇಶದಲ್ಲಿ ಆಗಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಷ್ಟೆಲ್ಲ ಮಾತಾಡಿದ್ದರು? ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತರಿಸದೇ ಹೋರಾಟ ಕಣದಿಂದ ವಿರಮಿಸುವುದಿಲ್ಲ ಎಂದು ಹೇಳಿದ್ದೂ ಅವರೇ. ತನ್ನ ಹೋರಾಟ ಬರೇ ದೇಶಹಿತದಿಂದ ರೂಪುಗೊಂಡಿದ್ದೇ ಹೊರತು ಇದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೊಂಡದ್ದೂ ಅವರೇ. ಆದರೆ, ಮೋದಿ ಸರಕಾರ ರಚನೆಯಾದಂದಿನಿಂದ ಅವರು ಹೋರಾಟ ಕಣದಲ್ಲಿ ಕಾಣಿಸಿಕೊಂಡೇ ಇಲ್ಲ. ಕಪ್ಪು ಹಣದ ವಿಷಯದಲ್ಲಿ ಮನ್‍ಮೋಹನ್ ಸರಕಾರದ ನಿಲುವನ್ನೇ ಮೋದಿ ಸರಕಾರ ತೋರುತ್ತಿರುವಾಗಲೂ ಅವರು ಮೌನ ಮುರಿಯುತ್ತಿಲ್ಲ. ಏನಿದರ ಅರ್ಥ? ಅವರ ಗುರಿ ಇದ್ದುದು ಕಪ್ಪು ಹಣದ ವಾಪಾಸಿನ ಮೇಲೋ ಅಥವಾ ಮನ್‍ಮೋಹನ್ ಸರಕಾರದ ಮೇಲೋ? ಅಷ್ಟಕ್ಕೂ, ಕಪ್ಪು ಹಣದ ವಿಷಯದಲ್ಲಿ ಅವರು ಕೇವಲ ಮಾತಾಡಿದ್ದಲ್ಲ. ರಾಮ್‍ಲೀಲಾ ಮೈದಾನದಲ್ಲಿ ಒಂದು ಜನಸಮೂಹವನ್ನು ಸೇರಿಸಿದ್ದರು. ಒಂದು ವೇಳೆ ತನ್ನ ಹೋರಾಟ ಮೋದಿಯವರನ್ನು ಅಧಿಕಾರಕ್ಕೇರಿಸುವುದೇ ಹೊರತು ಕಪ್ಪು ಹಣದ ವಾಪಸಲ್ಲ ಎಂದು ಹೇಳಿರುತ್ತಿದ್ದರೆ, ಅಂದು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಖಂಡಿತ ಸಾಧ್ಯವಿರಲಿಲ್ಲ. ಒಂದು ರೀತಿಯಲ್ಲಿ, ಅವರು ಹೊರಗೊಂದು ಮನುಷ್ಯರಾಗಿದ್ದುಕೊಂಡೇ ಒಳಗೊಂದು ಮನುಷ್ಯರೂ ಆಗಿದ್ದರು. ಹೊರಗಿನ ಮನುಷ್ಯ ಎಷ್ಟು ಸಾಧುವೋ ಅಷ್ಟೇ ಒಳಗಿನ ಮನುಷ್ಯ ವಂಚಕನಾಗಿದ್ದ. ಆದರೆ ಸೇರಿದ ಮಂದಿಗೆ ಹೊರಗಿನ ಮನುಷ್ಯನಷ್ಟೇ ಗೋಚರಿಸುತ್ತಿದ್ದ.
 ಒಂದು ಕಡೆ, ಮನುಷ್ಯನ ಬೌದ್ಧಿಕ ಸಾಮರ್ಥ್ಯವು ವಿಕಸಿಸುತ್ತಲೇ ಇದೆ. ಬಡಿತ ನಿಲ್ಲಿಸಿದ ಹೃದಯಕ್ಕೆ ಚೇತರಿಕೆ ಕೊಡುವಷ್ಟು ಆತ ಪ್ರತಿಭಾವಂತ. ಅದರ ಜೊತೆಗೇ ಅತ್ಯಂತ ಅವಿಕಸಿತ ಆಲೋಚನೆಗಳನ್ನೂ ಪೂರ್ವಗ್ರಹಗಳನ್ನೂ ಪೋಷಿಸಿಕೊಂಡು ಬರುತ್ತಿರುವವನೂ ಈತನೇ/ಈಕೆಯೇ. ಬುದ್ಧಿವಂತ ಪ್ರಾಣಿಯಾದ ಮನುಷ್ಯನ ಈ ದೌರ್ಬಲ್ಯಗಳೇ ಇವತ್ತು ರಕ್ತಪಾತಕ್ಕೂ ಮೌಲ್ಯಪತನಕ್ಕೂ ಕ್ರೌರ್ಯಕ್ಕೂ ಕಾರಣವಾಗಿದೆ. ಒಂದು ವೇಳೆ ಸ್ವಭಾವಕ್ಕೆ ಅನುಗುಣವಾಗಿ ಮನುಷ್ಯರಿಗೆ ಹೆಸರು ಕೊಡುವ ಹೊಣೆಯನ್ನು ಪ್ರಾಣಿ ಜಗತ್ತು ವಹಿಸಿಕೊಂಡಿರುತ್ತಿದ್ದರೆ ಬಾಬಾ ರಾಮ್‍ದೇವ್‍ರಿಗೆ ಅವು ಕೊಡಬಹುದಾದ ಹೆಸರು ಏನಾಗಿರುತ್ತಿತ್ತು? ‘ಕಪಟ ಪ್ರಾಣಿ'ಗಳು ಎಂಬೊಂದು ವಿಭಾಗವನ್ನು ತಯಾರಿಸಿ ಅದರಲ್ಲಿ ಮೊದಲ ಹೆಸರಾಗಿ ಅವರನ್ನೇ ನಮೂದಿಸುತ್ತಿತ್ತೋ ಏನೋ.

Wednesday, 22 October 2014

‘ಭಾರತ್ ಮಾತಾಕಿ ಜೈ’ಯ ಒತ್ತಡ ಮತ್ತು ಐಸಿಸ್‍ನ ಬಾವುಟ

   ಕಾಶ್ಮೀರದಲ್ಲಿ ಕಳೆದವಾರ ಕಾಣಿಸಿಕೊಂಡ ಬಾವುಟವೊಂದು ಮಾಧ್ಯಮಗಳ ಕುತೂಹಲವನ್ನು ಕೆರಳಿಸಿವೆ. ಕೆಲವು ಪತ್ರಿಕೆಗಳು ಈ ಬಾವುಟವನ್ನು ಮುಂದಿಟ್ಟುಕೊಂಡು ಸಂಪಾದಕೀಯ ಬರೆದಿವೆ. ಇರಾಕ್ ಮತ್ತು ಸಿರಿಯದಲ್ಲಿ ಸುದ್ದಿಯಲ್ಲಿರುವ ಐಸಿಸ್‍ನ (ISIS) ಬಾವುಟವನ್ನು ಕಾಶ್ಮೀರದ ಯುವಕರು ಪ್ರದರ್ಶಿಸಿರುವುದನ್ನು ಅಲ್ ಕಾಯಿದಾ ಮುಖಂಡ ಜವಾಹಿರಿಯ ಇತ್ತೀಚಿನ ಟೇಪಿನೊಂದಿಗೆ ಜೋಡಿಸಿ ಕೆಲವರು ಚರ್ಚಿಸುತ್ತಿದ್ದಾರೆ. ‘ಐಸಿಸ್ ಭಾರತಕ್ಕೂ ಕಾಲಿಟ್ಟಿತೇ' ಅನ್ನುವ ಶೀರ್ಷಿಕೆಯಲ್ಲಿ ಟಿ.ವಿ. ಚಾನೆಲ್‍ಗಳು ಸುದ್ದಿಯನ್ನೂ ಪ್ರಸಾರ ಮಾಡಿವೆ. ಈ ಮೊದಲೂ ತಮಿಳ್ನಾಡಿನಲ್ಲಿ ಮತ್ತು ಕಾಶ್ಮೀರದಲ್ಲಿ ಈ ಬಾವುಟ ಹಾರಾಡಿತ್ತು ಎಂಬ ವಾದಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಅನಾಗರಿಕತೆ ಮತ್ತು ಮಾನವ ಹತ್ಯೆಯ ಸುದ್ದಿಗಳನ್ನಷ್ಟೇ ಕೊಡುತ್ತಿರುವ ಐಸಿಸ್ ಎಂಬ ಗುಂಪಿಗೆ ಭಾರತದಲ್ಲೂ ಬೆಂಬಲಿಗರಿರುವರೋ ಎಂಬ ಅನುಮಾನವೊಂದನ್ನು ಹುಟ್ಟುಹಾಕುವ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಂತೆ ಕಾಣುತ್ತಿದೆ.
 ಎರಡು ವರ್ಷಗಳ ಹಿಂದಿನವರೆಗೂ ಈ ದೇಶದಲ್ಲಿ ಲಷ್ಕರೆ ತ್ವಯ್ಯಿಬ, ಹರ್ಕತುಲ್ ಮುಜಾಹಿದೀನ್, ಇಂಡಿಯನ್ ಮುಜಾಹಿದೀನ್.. ಮುಂತಾದ ಹೆಸರುಗಳೇ ಸುದ್ದಿಯಲ್ಲಿದ್ದುವು. ಇವುಗಳ ಅಸ್ತಿತ್ವ, ಅನುಯಾಯಿಗಳ ಸಂಖ್ಯೆ, ಅವುಗಳ ಮನುಷ್ಯ ವಿರೋಧಿ ಧೋರಣೆ ಮುಂತಾದುವುಗಳು ಹತ್ತು-ಹಲವು ಬಾರಿ ಇಲ್ಲಿ ಚರ್ಚೆಗೀಡಾದುವು. ಭಾರತೀಯ ಮುಸ್ಲಿಮರನ್ನು ಭಯೋತ್ಪಾದಕರೆಂದೋ ಅದರ ಬೆಂಬಲಿಗರೆಂದೋ ಕರೆಯುವುದಕ್ಕೆ ಆ ಹೆಸರುಗಳು ಬಳಕೆಯಾದುವು. ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ.. ಎಂದೂ ವ್ಯಾಖ್ಯಾನಿಸಲಾಯಿತು. ಆದರೆ ಇವತ್ತು ಈ ಲಷ್ಕರ್-ಮುಜಾಹಿದೀನ್‍ಗಳ ಪತ್ತೆಯೇ ಇಲ್ಲ. ಮಾಧ್ಯಮಗಳಲ್ಲಿ ಅಪ್ಪಿ-ತಪ್ಪಿಯೂ ಅವುಗಳ ಹೆಸರು ಕಾಣಿಸಿಕೊಳ್ಳುತ್ತಿಲ್ಲ. ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಅಸ್ತಿತ್ವಕ್ಕೆ ಬಂದ ಈ ಲಷ್ಕರ್‍ಗಳು ಮತ್ತು ಅವುಗಳ ಉಗ್ರವಾದಿ ಕಾರ್ಯಕರ್ತರು ಸದ್ಯ ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಅನ್ನುವುದರ ಸುತ್ತ ಚರ್ಚೆಗಳೂ ನಡೆಯುತ್ತಿಲ್ಲ. ಆದರೆ ಇವುಗಳ ಸ್ಥಾನದಲ್ಲಿ ಇವತ್ತು ಐಸಿಸ್ ಎಂಬ ಹೊಸ ಹೆಸರು ಕಾಣಿಸಿಕೊಳ್ಳತೊಡಗಿದೆ. ಈ ಐಸಿಸ್‍ನ ಮೇಲೆ ಇವತ್ತು ಹೊರಿಸಲಾಗಿರುವ ಆರೋಪಗಳನ್ನು ಪರಿಗಣಿಸಿದರೆ, ಅದು ಮೆದುಳು ಸ್ವಸ್ಥ ಇರುವ ಮನುಷ್ಯರ ಗುಂಪು ಎಂದು ನಂಬುವುದಕ್ಕೇ ಕಷ್ಟವಿದೆ. ಸುನ್ನಿಗಳ ಹೊರತಾದ ಎಲ್ಲರನ್ನೂ ಅದು ಕೊಲ್ಲುತ್ತಿದೆ. ಪತ್ರಕರ್ತರು, ಸೇವಾ ಕಾರ್ಯಕರ್ತರ ಕತ್ತು ಸೀಳಿ ವೀಡಿಯೋ ಬಿಡುಗಡೆಗೊಳಿಸುತ್ತಿದೆ. ಬಹುದೇವಾರಾಧಕರಾದ ಯಜೀದಿಗಳನ್ನು ಸತಾಯಿಸುತ್ತಿದೆ. ಮಹಿಳೆಯರನ್ನು ಗುಲಾಮರನ್ನಾಗಿ ಬಳಸಿಕೊಳ್ಳುತ್ತಿದೆ. ಮಾತ್ರವಲ್ಲ, ಈ ಗುಂಪಿನ ನಾಯಕ ಅಬೂಬಕರ್ ಬಗ್ದಾದಿಯು 2004ರಲ್ಲಿ ಬರೆದ ಮತ್ತು ‘ದಿ ಮ್ಯಾನೇಜ್‍ಮೆಂಟ್ ಆಫ್  ಸೆವೇಜೆರಿ' ಎಂಬ ಹೆಸರಲ್ಲಿ 2006ರಲ್ಲಿ ಇಂಗ್ಲಿಷ್‍ಗೆ ಅನುವಾದಗೊಂಡ ಪುಸ್ತಕದ ವಿವರಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ವಿಲಿಯಂ ಮೆಕಾಂಟ್ ಎಂಬವರು ಅನುವಾದಿಸಿದ ಆ ಪುಸ್ತಕದಲ್ಲಿ ಇವೆ ಎಂದು ಹೇಳಲಾಗುತ್ತಿರುವ ಅಂಶಗಳನ್ನು ನೋಡಿದರೆ, ಆರೋಗ್ಯವಂತ ಮನುಷ್ಯನೊಬ್ಬ ಹಾಗೆಲ್ಲ ಬರೆಯಬಹುದು ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ. ದುರಂತ ಏನೆಂದರೆ, ಅಬೂಬಕರ್ ಬಗ್ದಾದಿಯ ಐಸಿಸ್‍ನ ಬಗ್ಗೆ, ಆತನ ಖಿಲಾಫತ್ ಘೋಷಣೆಯ ಬಗ್ಗೆ ಮತ್ತು ರಕ್ತದಾಹದ ಬಗ್ಗೆ ಧಾರಾಳ ವಿವರಗಳನ್ನೂ ಸಂಶೋಧಿತ ವರದಿಗಳನ್ನೂ ಒದಗಿಸುತ್ತಿರುವ ಮಾಧ್ಯಮ ಜಗತ್ತು ಆತನ ಹಿನ್ನೆಲೆಯ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಎರಡು ವರ್ಷಗಳ ಹಿಂದೆ ದಿಢೀರ್ ಆಗಿ ಚರ್ಚೆಗೆ ಬಂದ ಈ ವ್ಯಕ್ತಿಯು ಮೊದಲು ಎಲ್ಲಿದ್ದ, ಏನಾಗಿದ್ದ ಎಂಬುದನ್ನು ಚರ್ಚೆಗೆ ಒಳಪಡಿಸುತ್ತಿಲ್ಲ. ಗ್ವಾಂಟನಾಮೋ ಜೈಲಲ್ಲಿದ್ದ ಈತನನ್ನು ಅಮೇರಿಕ ಯಾವ ಕಾರಣಕ್ಕಾಗಿ ಬಿಡುಗಡೆಗೊಳಿಸಿತು ಅನ್ನುವುದು ಈ ವರೆಗೂ ಬಹಿರಂಗವಾಗಿಲ್ಲ. ಐಸಿಸ್ ಇವತ್ತು ಬಳಸುತ್ತಿರುವ ಆಯುಧಗಳು ಎಷ್ಟು ಆಧುನಿಕವಾದವು ಎಂದರೆ, ಸಿರಿಯಾ ಅಥವಾ ಇರಾಕ್‍ನ ಸರಕಾರಗಳಿಗೂ ಅದನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆಯುಧಗಳನ್ನು ಸ್ವಯಂ ಉತ್ಪಾದಿಸುವ ವೈಜ್ಞಾನಿಕ ಬಲವಾಗಲಿ, ಸುಸಜ್ಜಿತ ಕಾರ್ಖಾನೆಯಾಗಲಿ ಇಲ್ಲದ ಗುಂಪೊಂದು  ಆಧುನಿಕ ಆಯುಧಗಳನ್ನು ಪಡೆಯುತ್ತಿರುವುದು ಎಲ್ಲಿಂದ? ಅರಬ್ ರಾಷ್ಟ್ರಗಳ ಹೆಸರಲ್ಲಿ ಮೂರನೆಯ ಶಕ್ತಿಯೊಂದು ಐಸಿಸ್ ಅನ್ನು ನಿಯಂತ್ರಿಸುತ್ತಿದೆಯೇ, ಅದರ ಉದ್ದೇಶ ಏನಿರಬಹುದು?
 ನಿಜವಾಗಿ, ಯಾವುದೇ ಒಂದು ಬಾವುಟವನ್ನು ಹೊಲಿಯುವುದಕ್ಕೋ ಪ್ರದರ್ಶಿಸುವುದಕ್ಕೋ ಕಷ್ಟವೇನೂ ಇಲ್ಲ. ಆದರೆ ಅದನ್ನು ಹೊಲಿಯುವವರಿಗೆ ಮತ್ತು ಪ್ರದರ್ಶಿಸುವವರಿಗೆ ತಾನು ಯಾವುದನ್ನು ಹೊಲಿಯುತ್ತಿದ್ದೇನೆ ಮತ್ತು ಪ್ರದರ್ಶಿಸುತ್ತಿದ್ದೇನೆ ಅನ್ನುವ ಎಚ್ಚರಿಕೆ ಇರಬೇಕು. ಐಸಿಸ್ ಎಂಬುದು ಕಾಶ್ಮೀರ ಎಂದಲ್ಲ, ಈ ಜಗತ್ತಿನ ಯಾವ ಮೂಲೆಯಲ್ಲಿರುವ ಮುಸ್ಲಿಮರ ಸಮಸ್ಯೆಗಳಿಗೂ ಪರಿಹಾರ ಅಲ್ಲ. ಅದರ ಹೆಸರಲ್ಲಿ ವರದಿಯಾಗುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ ಅದು ಈ ಗೋಲದಿಂದ ಅತ್ಯಂತ ಶೀಘ್ರ ನಿರ್ನಾಮವಾಗಬೇಕಾದ ಗುಂಪು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಂದಹಾಗೆ, ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯದ, ಜನಾಂಗ ಭೇದದ ಧೋರಣೆಯನ್ನು ತಳೆಯಲಾಗುತ್ತಿದೆ, ಹತ್ಯಾಕಾಂಡಕ್ಕೆ ಗುರಿಪಡಿಸಲಾಗುತ್ತಿದೆ, ಸದಾ ಭಯದ ವಾತಾವರಣದಲ್ಲಿ ಬದುಕುವಂತೆ ಮತ್ತು ಆರ್ಥಿಕವಾಗಿ ಸಮರ್ಥರಾಗದಂತೆ ಕೋಮುಗಲಭೆಗಳ ಮೂಲಕವೋ ಇನ್ನಿತರ ಷಡ್ಯಂತ್ರಗಳ ಮೂಲಕವೋ ತಡೆಲಾಗುತ್ತಿದೆ ಎಂಬುದೆಲ್ಲ ನಿಜ. ಆದರೆ ಅದಕ್ಕೆ ಐಸಿಸ್ ಅಥವಾ ಇನ್ನಿತರ ಉಗ್ರವಾದಿ ಆಲೋಚನೆಗಳು ಪರಿಹಾರ ಅಲ್ಲ. ಐಸಿಸ್ ಅನ್ನು ಈ ದೇಶದಲ್ಲಿ ನಿಷೇಧಿಸಲಾಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಅದರ ಬಾವುಟ ಹಾರಾಡಿಸುವುದನ್ನು ಸಮರ್ಥಿಸಲೂ ಸಾಧ್ಯವಿಲ್ಲ. ಕೋಮುವಾದಿಗಳು ಈ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೋ ಅದರ ಎಷ್ಟೋ ಪಾಲು ಅಧಿಕ ಸಂಖ್ಯೆಯಲ್ಲಿ ಕೋಮುವಾದದ ವಿರೋಧಿಗಳು ಈ ದೇಶದಲ್ಲಿದ್ದಾರೆ. ವಿವಿಧ ಧರ್ಮೀರಿರುವ ಈ ದೇಶದಲ್ಲಿ ಅತ್ಯಂತ ಉತ್ತಮವಾದ ಸಂವಿಧಾನವೂ ಇದೆ. ಇಲ್ಲಿನ ಕೋರ್ಟುಗಳೂ ಅನೇಕ ಬಾರಿ ಕೋಮುವಾದಿ ಆಲೋಚನೆಗಳಿಗೆ, ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆ ನೀಡಿವೆ. ಸರ್ವರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸುವುದಕ್ಕೆ ಸಭೆ, ಸೆಮಿನಾರ್, ರಾಲಿಗಳೂ ಇಲ್ಲಿ ನಡೆಯುತ್ತಿವೆ. ಒಂದು ರೀತಿಯಲ್ಲಿ, ದಮನಿತರ ಪರ ಮತ್ತು ದಂಗೆಕೋರರ ವಿರುದ್ಧವಿರುವ ಒಂದು ವಾತಾವರಣ ಇವತ್ತು ಈ ದೇಶದಲ್ಲಿದೆ. ಹೀಗಿರುವಾಗ ಈ ಯಾವ ಗುಣವನ್ನೂ ಹೊಂದಿಲ್ಲದ ಐಸಿಸ್ ಅನ್ನು ಯುವಕರು ಬೆಂಬಲಿಸುತ್ತಾರೆಂದರೆ, ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲ  ಹೇಳುವಂತೆ, ಅವರನ್ನು ಮೂರ್ಖರೆಂದಲ್ಲದೇ ಇನ್ನೇನೆಂದು ಕರೆಯಬೇಕು?
 ಈ ದೇಶದಲ್ಲಿ ಮುಸ್ಲಿಮರಿಗೆ ಎರಡು ಸವಾಲುಗಳು ಸದಾ ಎದುರಾಗುತ್ತಲೇ ಇರುತ್ತವೆ. ಒಂದು ದೇಶಪ್ರೇಮದ್ದಾದರೆ ಇನ್ನೊಂದು ಭಯೋತ್ಪಾದನೆಯದ್ದು. ಈ ಎರಡು ಅಸ್ತ್ರಗಳನ್ನು ಎತ್ತಿಕೊಂಡು ಮುಸ್ಲಿಮರನ್ನು ಇರಿಯುವುದಕ್ಕೆ ಕೋಮುವಾದಿಗಳು ಸಂದರ್ಭಗಳನ್ನು ಹುಡುಕುತ್ತಲೇ ಇರುತ್ತಾರೆ. ಪ್ರತಿದಿನ ಬೆಳಿಗ್ಗೆದ್ದ ಕೂಡಲೇ ಭಾರತ್ ಮಾತಾ ಕಿ ಜೈ ಎಂದು ಘೋಷಿಸಿಯೇ ಮುಸ್ಲಿಮರು ನಿತ್ಯದ ಕರ್ಮಗಳನ್ನು ನಿರ್ವಹಿಸಬೇಕು ಎಂದು ಅವರು ಒತ್ತಡ ಹಾಕುತ್ತ್ತಿದ್ದಾರೆ. ಮದ್ರಸಗಳಲ್ಲಿ ರಾಷ್ಟ್ರಧ್ವಜ ಅರಳುತ್ತದೋ ಇಲ್ಲವೋ ಎಂಬುದನ್ನು ಕ್ಯಾಮರಾ ಹಿಡಿದುಕೊಂಡು ಅವರು ಪತ್ತೆದಾರಿಕೆ ನಡೆಸುತ್ತಿದ್ದಾರೆ. ಬಾಂಬ್ ಸ್ಫೋಟಗಳು ನಡೆದ ತಕ್ಷಣ ಮುಸ್ಲಿಮರಿಂದ ಅವರು ಖಂಡನೆಯನ್ನು ನಿರೀಕ್ಷಿಸುತ್ತಾರೆ.. ಆದರೂ ಇವಾವುವೂ ಐಸಿಸ್‍ನ ಬಾವುಟವನ್ನು ಪ್ರದರ್ಶಿಸುವುದಕ್ಕೆ ಸಮರ್ಥನೆ ಆಗುವುದಿಲ್ಲ. ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣದಿಂದ ನೊಂದು ಅದಕ್ಕೆ ಪ್ರತಿರೋಧವೆಂಬಂತೆ ಈ ಬಾವುಟವನ್ನು ಹಾರಿಸಲಾಗಿದೆ ಎಂದು ಹೇಳುವುದರಲ್ಲಿ ನಿಜ ಇದೆಯಾದರೂ ಅದು ಸಂಪೂರ್ಣ ಒಪ್ಪತಕ್ಕದ್ದಲ್ಲ. ಐಸಿಸ್ ಇಸ್ಲಾಮನ್ನು ಯಾವ ರೀತಿಯಲ್ಲೂ ಪ್ರತಿನಿಧಿಸುತ್ತಿಲ್ಲ. ಆದ್ದರಿಂದಲೇ ಅದರ ಬಾವುಟವನ್ನು ಪ್ರದರ್ಶಿಸುವುದು ತಪ್ಪು, ಆಕ್ಷೇಪಾರ್ಹ ಮತ್ತು ಖಂಡನೀಯ. ಅನ್ಯಾಯವನ್ನು ನ್ಯಾಯಯುತ ವಿಧಾನದ ಮೂಲಕ ಪ್ರಶ್ನಿಸಬೇಕೇ ಹೊರತು ಅನ್ಯಾಯಯುತವಾಗಿ ಅಲ್ಲ.

Wednesday, 15 October 2014

ಧರ್ಮರಕ್ಷಣೆಯ ನಿಜರೂಪವನ್ನು ತೋರಿಸಿಕೊಟ್ಟ ಶಾಂತಲಿಂಗೇಶ್ವರ ಸ್ವಾಮಿ

ಇಬ್ರಾಹೀಮ್
   ಅಕ್ಟೋಬರ್ 5 ಯಾವುದಾದರೂ ರಾಷ್ಟ್ರ ನಾಯಕರ ಜಯಂತಿಯದ್ದೋ ಧಾರ್ಮಿಕವಾಗಿ ವಿಶೇಷ ಆಚರಣೆಗಳದ್ದೋ ದಿನಾಂಕವಲ್ಲ. ಕ್ಯಾಲೆಂಡರ್‍ನಲ್ಲಿ ಆ ದಿನಕ್ಕೆ ಯಾವ ಮಹತ್ವವೂ ಇಲ್ಲ. ವಾರದ ಏಳು ದಿನಗಳಲ್ಲಿ ಒಂದು ದಿನವನ್ನಷ್ಟೇ ಸೂಚಿಸುವ ಆ ದಿನದಂದು ಗುಲ್ಬರ್ಗಾ ಜಿಲ್ಲೆಯ ಅಲಂದ್ ತಾಲೂಕಿನ ನಿಂಬಾಳ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ‘ಮದ್ಯಮುಕ್ತ ಗ್ರಾಮ’ ಯೋಜನೆಗೆ ಒಂದು ವರ್ಷ ತುಂಬಿದ ನೆನಪಲ್ಲಿ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಒಂದು ಬಗೆಯ ತೃಪ್ತಿ, ನೆಮ್ಮದಿಯ ವಾತಾವರಣ ಆ ಸಭೆಯನ್ನಿಡೀ ಆವರಿಸಿಕೊಂಡಿತ್ತು. ಅದಕ್ಕೆ ಕಾರಣವೂ ಇದೆ.
 2013 ಅಕ್ಟೋಬರ್ 5ರಂದು ಶಾಂತಲಿಂಗೇಶ್ವರ ಮಠದ ಶಾಂತಲಿಂಗೇಶ್ವರ ಸ್ವಾಮಿಯವರ ನೇತೃತ್ವದಲ್ಲಿ ನಿಂಬಾಳ ಗ್ರಾಮವನ್ನು ಮದ್ಯಮುಕ್ತಗೊಳಿಸುವ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿತ್ತು. ಹೊರಗೆ ಕುಡಿದು ಊರಿಗೆ ಬರುವವರ ಮೇಲೂ ನಿಗಾ ಇಡುವುದಕ್ಕೆ ಮತ್ತು ಅವರಿಂದ ದಂಡ ವಸೂಲಿ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಮನೆಯ ಪುರುಷರನ್ನು ಮದ್ಯ ಚಟದಿಂದ ಬಿಡಿಸುವಲ್ಲಿ ಮಹಿಳೆಯರು ಸಹಕರಿಸದಿದ್ದರೆ ತಾನು ಗ್ರಾಮಕ್ಕೆ ಭೇಟಿ ನೀಡುವುದಿಲ್ಲ ಎಂದು ಸ್ವಾವಿೂಜಿಗಳು ಬೆದರಿಕೆ ಹಾಕಿದ್ದರು. ಮಹಿಳೆಯರು ಜಾಗೃತರಾದದ್ದೇ ತಡ, ಗ್ರಾಮದಲ್ಲಿದ್ದ 3 ಮದ್ಯದಂಗಡಿಗಳು ಬಾಗಿಲು ಮುಚ್ಚಿದುವು. ಹೊರಗೆಲ್ಲೋ ಕುಡಿದು ಬರುವವರ ಮೇಲೆ ನಿಗಾವಿರಿಸಿದ್ದರಿಂದಾಗಿ ಕಳೆದೊಂದು ವರ್ಷದಲ್ಲಿ ದಂಡ ರೂಪದಲ್ಲಿ 50 ಸಾವಿರ ರೂಪಾಯಿ ಸಂಗ್ರಹವಾಗಿದೆ. ಮಾತ್ರವಲ್ಲ, ಇವತ್ತು ನಿಂಬಾಳ ಗ್ರಾಮವು ಮದ್ಯಮುಕ್ತ ಮತ್ತು ಕುಡುಕ ಮುಕ್ತ ಗ್ರಾಮವಾಗಿ ಗುರುತಿಸಿಕೊಂಡಿದೆ.
 ನಿಜವಾಗಿ, ನಿಂಬಾಳ ಗ್ರಾಮವನ್ನು ಶಾಂತಲಿಂಗೇಶ್ವರ ಸ್ವಾಮಿಯವರು ಮದ್ಯಮುಕ್ತಗೊಳಿಸಿದ್ದು ಪವಾಡದಿಂದಲ್ಲ, ಬದ್ಧತೆಯಿಂದ. ಅಷ್ಟಕ್ಕೂ, ಈ ದೇಶದಲ್ಲಿ ಎಷ್ಟೆಷ್ಟು ಗ್ರಾಮಗಳಿವೆಯೋ ಅದಕ್ಕಿಂತಲೂ ಹೆಚ್ಚು ದೇವಾಲಯ, ಮಸೀದಿ, ಬಸದಿ, ಚರ್ಚ್‍ಗಳಿವೆ. ಈ ಧಾರ್ಮಿಕ ಕೇಂದ್ರಗಳಲ್ಲಿ ಯಾವ ಕೇಂದ್ರವೂ ಮದ್ಯದ ಪರ ಮಾತಾಡುವುದೂ ಇಲ್ಲ. ಬಹುತೇಕ ಇಂಥ ಕೇಂದ್ರಗಳಲ್ಲಿ ವಾರಕ್ಕೊಮ್ಮೆಯಾದರೂ ಭಕ್ತರು ಸೇರುವ ಮತ್ತು ಧಾರ್ಮಿಕ ನಾಯಕರಿಂದ ಪ್ರವಚನವನ್ನೋ ಉಪದೇಶಗಳನ್ನೋ ಆಲಿಸುವ ಸಂದರ್ಭಗಳೂ ಇರುತ್ತವೆ. ಆದರೂ ಯಾಕೆ ಕೆಡುಕು ವಿರೋಧಿ ಆಂದೋಲನವೊಂದನ್ನು ಕೈಗೊಳ್ಳುವುದಕ್ಕೆ ಇವುಗಳಿಗೆ ಸಾಧ್ಯವಾಗುತ್ತಿಲ್ಲ? ಅಂದಹಾಗೆ, ಸ್ವಾವಿೂಜಿಯನ್ನೋ ಮೌಲಾನಾರನ್ನೋ ಅಥವಾ ಫಾದರ್‍ಗಳನ್ನೋ ಗೌರವಿಸುವಷ್ಟು ಈ ಸಮಾಜ ರಾಜಕಾರಣಿಗಳನ್ನು ಗೌರವಿಸುವುದಿಲ್ಲ. ಒಂದು ಅಪಾರ ಜನಸಂದಣಿಯನ್ನು ಯಾವ ದುಡ್ಡಿನ ಆಮಿಷವೂ ಒಡ್ಡದೇ ಒಟ್ಟು ಸೇರಿಸುವ ಸಾಮರ್ಥ್ಯ  ಅವರಲ್ಲಿದೆ. ಅವರನ್ನು ಸಮಾಜ ಆಲಿಸುತ್ತದೆ. ಅವರ ಮಾತನ್ನು ಪಾಲಿಸುತ್ತದೆ. ಇಷ್ಟಿದ್ದೂ ಈ ಕೇಂದ್ರಗಳೆಲ್ಲ ದುರ್ಬಲವಾಗಿ ಗುರುತಿಸಿಕೊಂಡಿರುವುದೇಕೆ? ಇವತ್ತು ಈ ದೇಶದ ಕೋಟ್ಯಂತರ ಮನೆಗಳು ಹರಿಸುತ್ತಿರುವ ಕಣ್ಣೀರಿನಲ್ಲಿ ಮದ್ಯಕ್ಕೆ, ವರದಕ್ಷಿಣೆಗೆ  ಮತ್ತು ಕೋಮುಗಲಭೆಗಳಿಗೆ ಪ್ರಮುಖ ಪಾತ್ರವಿದೆ. ಹಾಗಿದ್ದೂ, ಇವುಗಳ  ವಿರುದ್ಧ ಯಾಕೆ ಜಾಗೃತಿ ಕಾರ್ಯಕ್ರಮಗಳು ಹುಟ್ಟಿಕೊಳ್ಳುತ್ತಿಲ್ಲ?
 ಇವತ್ತು ಧರ್ಮರಕ್ಷಣೆಯ ಬಗ್ಗೆ ಧಾರಾಳ ಭಾಷಣ, ಲೇಖನಗಳು ಪ್ರಕಟವಾಗುತ್ತಿವೆ. ಧಾರ್ಮಿಕ ಕೇಂದ್ರಗಳಲ್ಲಿ ಮೈ ನವಿರೇಳಿಸುವ ಉಪದೇಶಗಳನ್ನು ನೀಡಲಾಗುತ್ತಿದೆ. ದುರಂತ ಏನೆಂದರೆ, ಧರ್ಮರಕ್ಷಣೆ ಎಂಬುದು ಇನ್ನೊಂದು ಧರ್ಮವನ್ನು ವೈರಿಯಂತೆ ಕಾಣುವ ಮತ್ತು ಆಯುಧಗಳನ್ನು ಎತ್ತಿಕೊಳ್ಳುವುದರ ಹೆಸರು ಎಂದೇ ತಿಳಿದುಕೊಳ್ಳಲಾಗಿದೆ. ಇನ್ನೊಂದು ಧರ್ಮದವರ ಮೇಲಿನ ಹಲ್ಲೆ, ಹತ್ಯೆಯನ್ನು ಧರ್ಮರಕ್ಷಣೆಯ ಹಾದಿಯಲ್ಲಿನ ಯಶಸ್ಸು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಾತ್ರವಲ್ಲ, ಹಾಗೆ ಹಲ್ಲೆ  ನಡೆಸುವುದಕ್ಕೆ ಎಷ್ಟು ಯುವಕರು ಬೇಕಾದರೂ ನಮ್ಮಲ್ಲಿದ್ದಾರೆ. ಸೆ. 25ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸವಿೂಪದ ಕುಕ್ಕಿಲದ ಇಬ್ರಾಹೀಮ್ ಎಂಬ ಯುವಕನಿಗೆ ಕೊಣಾಜೆ ಸವಿೂಪದ ಗ್ರಾಮಚಾವಡಿಯ ಬಳಿ ಚೂರಿಯಿಂದ ಇರಿಯಲಾಯಿತು. ಯುವಕ ಆ ಪರಿಸರಕ್ಕೆ ತೀರಾ ಹೊಸಬ. ಅಲ್ಲಿ ಆತನ ಮಾವನ ಮನೆಯಿದೆ ಎಂಬುದನ್ನು ಬಿಟ್ಟರೆ ಅಲ್ಲಿಗೂ ಆತನಿಗೂ ಬೇರೆ ಯಾವ ನಂಟೂ ಇಲ್ಲ. ಆತನ ಬೈಕ್‍ನ ಸಂಖ್ಯೆ 786 ಆಗಿದ್ದುದು ಮತ್ತು ಗಡ್ಡ ಬೆಳೆಸಿದ್ದುದೇ ಆತನ ಅಪರಾಧವಾಗಿತ್ತು. ಓರ್ವ ಅಮಾಯಕನಾಗಿ ಆ ಘಟನೆ ಆತನ ಮೇಲೆ ಬೀರುವ ಪರಿಣಾಮ  ಯಾವ ಬಗೆಯದು? ಈತ ಬೈಕಲ್ಲಿ ಹೋಗುತ್ತಿರುವಾಗಲೇ ಹಿಂಬದಿಯಿಂದ ಬೈಕಲ್ಲಿ ಬಂದವರು ಇರಿದು ಚೂರಿ ತೋರಿಸಿ ಹೊರಟು ಹೋದದ್ದು ಯಾವ ದ್ವೇಷದಿಂದ? ಅದರಿಂದ ಧರ್ಮಕ್ಕೆ ಯಾವ ಲಾಭವಿದೆ? ತೋಳಿನ ಎರಡೂ ನರಗಳು ತುಂಡಾಗಿರುವ ಮತ್ತು ಹೊಟ್ಟೆಯಿಂದ ಬೆನ್ನಿನ ವರೆಗೆ 20 ಹೊಲಿಗೆಗಳನ್ನು ಹಾಕಿರುವ ಸ್ಥಿತಿಯಲ್ಲಿ ಬದುಕುತ್ತಿರುವ ಆ ಯುವಕನ ಪ್ರಶ್ನೆಗಳಿಗೆ ಹಲ್ಲೆಕೋರರು ಕೊಡಬಹುದಾದ ಉತ್ತರಗಳೇನು? ಲಕ್ಷವನ್ನೂ ದಾಟಿದ ಖರ್ಚು, ದೈಹಿಕ ಮತ್ತು ಮಾನಸಿಕವಾಗಿ ಆಗಿರುವ ಗಾಯಕ್ಕೆ ಹಲ್ಲೆಕೋರರಲ್ಲಿ ಏನು ಸಮರ್ಥನೆಯಿದೆ? ಅಷ್ಟಕ್ಕೂ, ಇಬ್ರಾಹೀಮ್‍ನ ಜಾಗದಲ್ಲಿ ಗಣೇಶನನ್ನು  ಇಟ್ಟು ನೋಡಿದರೂ ಇವೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಧರ್ಮಗಳೇಕೆ ಚೂರಿ-ತಲವಾರುಗಳ ಮೂಲಕ ಮಾತಾಡುತ್ತಿವೆ? ಮುಸ್ಲಿಮನಿಗೆ ಹಿಂದೂ ಇರಿಯುವುದು ಅಥವಾ ಹಿಂದೂವಿಗೆ ಮುಸ್ಲಿಮ್ ಇರಿಯುವುದೆಲ್ಲ ಆಯಾ ಧರ್ಮಗಳಿಗೆ ಲಾಭ ತಂದು ಕೊಡಬಹುದೇ? ದ್ವೇಷ-ಅಸಹನೆಗಳಿಗೆ ಮಾತ್ರ ಕಾರಣವಾಗುವ ಇಂಥ ಪ್ರಕರಣಗಳಲ್ಲಿ ಯುವಕರು ನಂಬಿಕೆ ಇಟ್ಟುಕೊಳ್ಳುತ್ತಿರುವುದೇಕೆ? ನಿಜವಾಗಿ, ಒಂದು ಧರ್ಮದ ಅಸ್ತಿತ್ವಕ್ಕೆ ದೊಡ್ಡ ಅಪಾಯ ಎದುರಾಗಿರುವುದೇ ಮದ್ಯಪಾನ, ವರದಕ್ಷಿಣೆ, ಅನೈತಿಕತೆ, ಕೋಮುವಾದಗಳಂಥ ಸಾಮಾಜಿಕ ಕೆಡುಕುಗಳಿಂದ. ಇವು ಸಮಾಜದಲ್ಲಿ ಪ್ರಾಬಲ್ಯ ಸ್ಥಾಪಿಸಿರುವಷ್ಟು ದಿನ ಧರ್ಮದ ಪ್ರಸ್ತುತತೆ ಪ್ರಶ್ನಾರ್ಹವಾಗುತ್ತಲೇ ಇರುತ್ತದೆ. ಇಂಥ ಸ್ಥಿತಿಯಲ್ಲಿ, ಕುಡಿದು ಧರ್ಮರಕ್ಷಣೆಗೆ ಇಳಿಯುವ, ವರದಕ್ಷಿಣೆ ಪಡೆದು ಧರ್ಮ ಬೋಧನೆ ಮಾಡುವ, ಅನ್ಯ ಧರ್ಮೀಯರನ್ನು ದ್ವೇಷಿಸುತ್ತಲೇ ಮನುಷ್ಯತ್ವದ ಬಗ್ಗೆ ಮಾತಾಡುವ ಮಂದಿ ಸೃಷ್ಟಿಯಾಗುತ್ತಲೇ ಹೋಗುತ್ತಾರೆ. ಅಷ್ಟಕ್ಕೂ, ನಮ್ಮ ರಾಜ್ಯದ ಎಲ್ಲ ಗ್ರಾಮಗಳೂ ನಿಂಬಾಳ ಗ್ರಾಮವನ್ನು ಮಾದರಿಯಾಗಿ ಎತ್ತಿಕೊಳ್ಳುವ ಸನ್ನಿವೇಶವೊಂದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರತಿ ಮಸೀದಿ, ದೇವಾಲಯ, ಚರ್ಚ್‍ಗಳು ಜಂಟಿಯಾಗಿ ಮದ್ಯಮುಕ್ತ, ವರದಕ್ಷಿಣೆ ಮುಕ್ತ ಮತ್ತು ಕೋಮುದ್ವೇಷ  ಮುಕ್ತ ಗ್ರಾಮದ ಯೋಜನೆಯೊಂದಿಗೆ ಬೀದಿಗಿಳಿಯುವುದನ್ನು ಕಲ್ಪಿಸಿಕೊಳ್ಳಿ. ಆ ವಾತಾವರಣ ಹೇಗಿರಬಹುದು?
 ಮಾನವನ ಅಸ್ತಿತ್ವ ಈ ಭೂಮಿಯಲ್ಲಿ ಇರುವವರೆಗೆ ಒಳಿತು ಮತ್ತು ಕೆಡುಕಿನ ಅಸ್ತಿತ್ವ ಇದ್ದೇ ಇರುತ್ತದೆ. ಒಳಿತನ್ನು ಪ್ರೀತಿಸುವವರು ಇರುವಂತೆಯೇ ಕೆಡುಕನ್ನು ಪ್ರೀತಿಸುವವರೂ ಇರುತ್ತಾರೆ. ಆದರೆ ಕೆಡುಕನ್ನು ಪ್ರೀತಿಸುವವರಲ್ಲಿ ಒಂದು ಅಂಜಿಕೆಯಿರುತ್ತದೆ. ತಾನು ಮದ್ಯಪಾನಿ ಎಂದು ಮದ್ಯಪಾನ ಮಾಡುವವ ಎದೆತಟ್ಟಿ ಹೇಳಿಕೊಳ್ಳುವುದಿಲ್ಲ. ವರದಕ್ಷಿಣೆ ಪಡೆದವ ಆ ಸಂಗತಿಯನ್ನು ಸಮಾಜದಿಂದ ಮುಚ್ಚಿಟ್ಟುಕೊಂಡೇ ಬದುಕುತ್ತಿರುತ್ತಾನೆ. ಅಪ್ಪಟ ಕೋಮುವಾದಿ ಕೂಡ ತಾನು ಹಾಗಲ್ಲ ಎಂದು ನಂಬಿಸಲು ಹೆಣಗುತ್ತಿರುತ್ತಾನೆ. ಒಂದು ರೀತಿಯಲ್ಲಿ ಕೆಡುಕಿನ ಜೊತೆ ಅಂಜಿಕೆ ಮತ್ತು ಭಯ ಜೋಡಿಕೊಂಡೇ ಇರುತ್ತದೆ. ಆದರೆ ಒಳಿತಿಗೆ ಈ ಯಾವ ದೌರ್ಬಲ್ಯಗಳೂ ಇಲ್ಲ. ಆದರೂ ಒಳಿತಿನ ಪ್ರತಿಪಾದಕರು ಅಂಜಿಕೊಳ್ಳುತ್ತಲೂ ಕೆಡುಕಿನ ಬೆಂಬಲಿಗರು ರಾಜಾರೋಷವಾಗಿಯೂ ತಿರುಗುತ್ತಿರುವುದನ್ನು ಏನೆಂದು ಕರೆಯಬೇಕು? ಇದು ಯಾರ ಅಸಾಮರ್ಥ್ಯ? ಅಂದಹಾಗೆ, ನಿಂಬಾಳ ಗ್ರಾಮಕ್ಕೆ ಮದ್ಯ ವಿರೋಧಿ ಅಭಿಯಾನ ಕೈಗೊಳ್ಳಲು ಮತ್ತು ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಎಂದಾದರೆ ಇತರ ಗ್ರಾಮಗಳಿಗೂ ಅದು ಸಾಧ್ಯವಾಗಬಾರದೆಂದಿಲ್ಲವಲ್ಲ. ನಿಂಬಾಳ ಗ್ರಾಮದಲ್ಲಿ ಇಲ್ಲದ ಕೋಮು ವೈರಸ್‍ನ ಹಾವಳಿ ದಕ್ಷಿಣ ಕನ್ನಡ ಸಹಿತ ಕೆಲವಾರು ಜಿಲ್ಲೆಗಳಲ್ಲಿ  ತೀವ್ರ ಮಟ್ಟದಲ್ಲಿದೆ. ಈ ವೈರಸ್ ಎಲ್ಲ ಧರ್ಮಗಳ ವೈರಿ ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ, ಅದರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಕಷ್ಟವೇನೂ ಇಲ್ಲ. ನಿಂಬಾಳ ಗ್ರಾಮದಂತೆ ರಾಜ್ಯದ  ಪ್ರತಿ ಗ್ರಾಮವನ್ನೂ ಮದ್ಯ ಮುಕ್ತ ಮತ್ತು ಕೋಮುದ್ವೇಷ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಸರ್ವ ಧರ್ಮಗಳ ಪ್ರಮುಖರೂ ಒಂದಾಗಿಬಿಟ್ಟರೆ ದೊಡ್ಡದೊಂದು ಬದಲಾವಣೆಯನ್ನು ಖಂಡಿತ ನಿರೀಕ್ಷಿಸಬಹುದು.
 ಏನೇ ಆಗಲಿ, ನಿಂಬಾಳ ಗ್ರಾಮವನ್ನು ಮದ್ಯಮುಕ್ತಗೊಳಿಸಲು ಯಶಸ್ವಿಯಾದ ಜನತೆಯನ್ನು ಮತ್ತು ಶಾಂತಲಿಂಗೇಶ್ವರ ಸ್ವಾಮಿಯನ್ನು ನಾವು ಅಭಿನಂದಿಸಬೇಕಾಗಿದೆ. ಅವರೊಂದು ಮಾದರಿ ಗ್ರಾಮವನ್ನು ಕಟ್ಟಿ ಈ ರಾಜ್ಯಕ್ಕೆ ಅರ್ಪಿಸಿದ್ದಾರೆ. ಆ ಮಾದರಿಯನ್ನು ಎದುರಿಟ್ಟುಕೊಂಡು ಮದ್ಯಮುಕ್ತ, ವರದಕ್ಷಿಣೆ  ಮತ್ತು ಕೋಮುದ್ವೇಷ ಮುಕ್ತ ಗ್ರಾಮಗಳನ್ನು  ಕಟ್ಟಲು ನಾವು ಪ್ರಯತ್ನಿಸಬೇಕಾಗಿದೆ. ಇನ್ನೊಬ್ಬನಿಗೆ ಇರಿಯುವ, ಇನ್ನೊಂದು ಧರ್ಮವನ್ನು ದ್ವೇಷಿಸುವವರು ಯಾರೇ ಇರಲಿ, ಅವರೆಲ್ಲ ನಿಂಬಾಳ ಗ್ರಾಮವನ್ನು ತಮ್ಮ ಧರ್ಮ ರಕ್ಷಣೆಗೆ ಮಾದರಿಯಾಗಿ ಎತ್ತಿಕೊಳ್ಳಬೇಕಾಗಿದೆ.

Wednesday, 8 October 2014

ದೇಶಪ್ರೇಮದ ಅಮಲಿನಲ್ಲಿ ದೇಶದ್ರೋಹಿಯಾದ ಸಲ್ಮಾನ್

   ಕೇರಳದ 25 ವರ್ಷ ಪ್ರಾಯದ ಸಲ್ಮಾನ್ ಎಂಬ ಯುವಕನು ನಮ್ಮ ದೇಶಪ್ರೇಮ ಮತ್ತು ದೇಶಾಭಿಮಾನದ ಪರಿಕಲ್ಪನೆಯ ಸುತ್ತ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾನೆ. ಆಗಸ್ಟ್ 18ರಂದು ಸಲ್ಮಾನ್ ಮತ್ತು ಇತರ 5 ಮಂದಿ ಗೆಳೆಯರು ತಿರುವನಂತಪುರದ ಸಿನಿಮಾ ಥಿಯೇಟರ್‍ಗೆ ಪ್ರವೇಶಿಸಿದ್ದಾರೆ. ಪ್ರತಿ ಶೋದ (ದೇಖಾವೆ) ಬಳಿಕ ರಾಷ್ಟ್ರಗೀತೆ ನುಡಿಸುವುದು ಕೇರಳದ ಥಿಯೇಟರ್‍ಗಳಲ್ಲಿ ವಾಡಿಕೆ. ಆದರೆ ಸಲ್ಮಾನ್ ಮತ್ತು ಗೆಳೆಯರು ರಾಷ್ಟ್ರಗೀತೆಯ ಸಮಯದಲ್ಲಿ ಎದ್ದು ನಿಲ್ಲಲಿಲ್ಲ. ಇದನ್ನು ಇತರ ಸಭಿಕರು ಆಕ್ಷೇಪಿಸಿದಾಗ ಮಾತಿನ ಚಕಮಕಿಗಳು ನಡೆದುವು. ಬಳಿಕ ಒಂದು ದಿನ ಮಧ್ಯರಾತ್ರಿ ಮನೆಗೆ ನುಗ್ಗಿದ ಪೊಲೀಸರು ಸಲ್ಮಾನ್‍ನನ್ನು ಬಂಧಿಸಿದರು. ಆತನ ಮೇಲೆ ದೇಶದ್ರೋಹದ (Sedition) ಕೇಸು ದಾಖಲಿಸಿದರಲ್ಲದೇ ಫೇಸ್‍ಬುಕ್‍ನಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಅವಮಾನಿಸುವ ಸ್ಟೇಟಸ್ ಹಾಕಿದ್ದಾನೆ ಎಂಬ ಆರೋಪದಲ್ಲಿ ಐಟಿ ಕಾಯ್ದೆಯ ಪ್ರಕಾರ ಇನ್ನೊಂದು ಮೊಕದ್ದಮೆಯನ್ನೂ ಹೂಡಿದರು. ಒಂದು ತಿಂಗಳ ಕಾಲ ಸಲ್ಮಾನ್ ಜೈಲಲ್ಲಿದ್ದ. ಇದೇ ವೇಳೆ ಇತರ ಐದು ಮಂದಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹರಿಹರ ಶರ್ಮಾ ಎಂಬ ಗೆಳೆಯ ನಿರೀಕ್ಷಣಾ ಜಾವಿೂನು ಪಡೆದುಕೊಂಡ. ಪ್ರಕರಣವು ಕೇರಳದಲ್ಲಿ ಪ್ರತಿಭಟನೆ ಮತ್ತು ತೀವ್ರ ವಾಗ್ವಾದಕ್ಕೆ ಕಾರಣವೂ ಆಯಿತು. ಜಾವಿೂನು ಪಡೆದು ಹೊರಬಂದ ಸಲ್ಮಾನ್, ಪೊಲೀಸರು ಮತ್ತು ಜೈಲಧಿಕಾರಿಗಳಿಂದ ತನಗಾದ ಅನುಭವವನ್ನು ಮಾಧ್ಯಮದ ಮುಂದೆ ಹೇಳಿಕೊಂಡ. ತನ್ನನ್ನು ಮುಸ್ಲಿಮ್ ಭಯೋತ್ಪಾದಕ ಮತ್ತು ಪಾಕ್ ಗೂಢಚರ ಎಂದು ಪೊಲೀಸರು ನಿಂದಿಸಿರುವುದಾಗಿಯೂ ಆತ ಆಪಾದಿಸಿದ.
 ಅಂದಹಾಗೆ, ರಾಷ್ಟ್ರಗೀತೆಯನ್ನು ಗೌರವಿಸಬೇಕಾದುದು ಪ್ರತಿಯೋರ್ವ ನಾಗರಿಕನ ಕರ್ತವ್ಯ. ಇದಕ್ಕೆ ಸಲ್ಮಾನ್ ಆಗಲಿ ಹರಿಹರ ಶರ್ಮಾ ಆಗಲಿ ಹೊರತಲ್ಲ. ರಾಷ್ಟ್ರಗೀತೆ ಎಂಬುದು ಮೋಹನ್ ಲಾಲ್‍ನದ್ದೋ ಮಮ್ಮುಟಿಯದ್ದೋ ಸಿನಿಮಾದ ಹಾಡಿನಂತಲ್ಲ. ಅದಕ್ಕೆ ಅದರದ್ದೇ ಆದ ಗೌರವ ಮತ್ತು ಸ್ಥಾನಮಾನವಿದೆ. ಅದು ಒಂದು ದೇಶವನ್ನು ಮತ್ತು ಅದರ ಸಂಸ್ಕ್ರಿತಿಯನ್ನು ಪ್ರತಿನಿಧಿಸುತ್ತದೆ. ಈ ಅರಿವು ಮತ್ತು ಎಚ್ಚರಿಕೆ ಸಲ್ಮಾನ್ ಹಾಗೂ ಗೆಳೆಯರ ಬಳಗದಲ್ಲಿ ಇರಲೇಬೇಕಿತ್ತು. ರಾಷ್ಟ್ರಗೀತೆಯನ್ನು ಥಿಯೇಟರ್ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ನುಡಿಸುವುದು ಕಡ್ಡಾಯವಲ್ಲ ಎಂಬ ಕೇಂದ್ರ ಸರಕಾರದ ಆದೇಶವನ್ನು ಮುಂದುಮಾಡಿ, ಈ ಘಟನೆಯನ್ನು ಸಮರ್ಥಿಸುವುದು ಸರಿಯೂ ಆಗುವುದಿಲ್ಲ. ಆದರೆ ಸಲ್ಮಾನ್‍ನ ಬಂಧನಕ್ಕೆ ಕೇವಲ ‘ಎದ್ದು ನಿಂತಿಲ್ಲ' ಎಂಬುದೊಂದೇ ಕಾರಣವೇ ಅಥವಾ ಆತನ ಧರ್ಮವೂ ಆ ಬಂಧನದ ಹಿಂದಿದೆಯೇ? ಉಳಿದ ಐದು ಮಂದಿಯ ಮನೆಗೆ ಮಧ್ಯರಾತ್ರಿ ದಾಳಿ ಮಾಡದ ಪೊಲೀಸರು, ಈತನನ್ನೇ ಆ ದಾಳಿಗೆ ಆಯ್ಕೆ ಮಾಡಿಕೊಂಡಿದ್ದೇಕೆ? ಮುಸ್ಲಿಮ್ ಭಯೋತ್ಪಾದಕ ಮತ್ತು ಪಾಕ್ ಗೂಢಚರ ಎಂದಿರುವುದರ ಅರ್ಥವೇನು? ಒಂದು ವೇಳೆ ಈ ಬಂಧನಕ್ಕೆ ಧರ್ಮದ ಬಣ್ಣವೇ ಇಲ್ಲ ಎಂದಾದರೆ ಆತನನ್ನು ನಕ್ಸಲೀಯ ಎಂದೋ ಚೀನಾ ಗೂಢಚರ ಎಂದೋ ಕರೆಯಬಹುದಿತ್ತಲ್ಲವೇ? ಅಲ್ಲದೇ, ಆತನ ಮೇಲೆ ಆ ಘಟನೆಯ ಹೊರತು ಇನ್ನಾವ ಆರೋಪಗಳೂ ಇರಲಿಲ್ಲ. ಈ ಹಿಂದೆ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪವೂ ಇಲ್ಲ. ಇಷ್ಟಿದ್ದೂ ಆತನನ್ನು ಭಯೋತ್ಪಾದಕನೆಂದು ಕರೆದಿರುವುದು ಮತ್ತು ದೇಶದ್ರೋಹದ ಮೊಕದ್ದಮೆ ದಾಖಲಿಸಿರುವುದಕ್ಕೆಲ್ಲ ಏನೆನ್ನಬೇಕು?
 ದೇಶಪ್ರೇಮ ಎಂಬುದು ಬರೇ ಒಂದು ಪದವಾಗಿ ಮತ್ತು ಪ್ರಾಯೋಗಿಕತೆಯ ಪ್ರಜ್ಞೆಯಾಗಿ - ಹೀಗೆ ಎರಡು ರೀತಿಯಲ್ಲಿ ಈ ದೇಶದಲ್ಲಿ ಇವತ್ತು ಚಲಾವಣೆಯಲ್ಲಿದೆ. ಒಂದು ಪದವೆಂಬ ನೆಲೆಯಲ್ಲಿ ದೇಶಪ್ರೇಮಕ್ಕೆ ಕರ್ತವ್ಯ ಮತ್ತು ಹೊಣೆಗಾರಿಕೆಗಳೇನೂ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಈ ‘ದೇಶಪ್ರೇಮ' ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಜಾಗೃತಗೊಳ್ಳಬಹುದು. ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸುವುದೂ ದೇಶಪ್ರೇಮವಾಗುತ್ತದೆ. ಮದ್ರಸಾಗಳನ್ನು ಭಯೋತ್ಪಾದಕ ಕೇಂದ್ರ ಎನ್ನುವುದು, ಮುಸ್ಲಿಮ್ ಐಡೆಂಟಿಟಿಯನ್ನು ಪ್ರಶ್ನಿಸುವುದು, ಭಯೋತ್ಪಾದಕರೆನ್ನುವುದು.. ಎಲ್ಲವೂ ದೇಶಪ್ರೇಮದ ಭಾಗವಾಗಿ ಗುರುತಿಗೀಡಾಗುತ್ತದೆ. ಈ ದೇಶಪ್ರೇಮ ತೀರಾ ಸುಲಭದ್ದು. ವರ್ಷದಲ್ಲಿ ಎರಡು ಬಾರಿ ಭಾರತದ ತ್ರಿವರ್ಣ ಹಾರಿಸುವುದು ಮತ್ತು  ಮೊಗಲರು ಹಾಗೂ ಇನ್ನಿತರ ಮುಸ್ಲಿಮ್ ದೊರೆಗಳನ್ನು ದೂಷಿಸುವುದರಿಂದ ದೇಶಪ್ರೇಮದ ಬೇಡಿಕೆ ಪೂರ್ತಿಯಾಗುತ್ತದೆ. ಆದರೆ ಒಂದು ಪ್ರಾಯೋಗಿಕ ಪ್ರಜ್ಞೆಯೆಂಬ ನೆಲೆಯಲ್ಲಿ ‘ದೇಶಪ್ರೇಮ'ವು ಇಷ್ಟು ಸರಳ ಮತ್ತು ಸುಲಭವಾಗಿಲ್ಲ. ಅದಕ್ಕೂ ಈ ದೇಶಕ್ಕೂ ಮತ್ತು ಇಲ್ಲಿನ ಜನರಿಗೂ ಬಿಡಿಸಲಾರದ ನಂಟಿದೆ. ಈ ದೇಶದ ಸಂವಿಧಾನವನ್ನು ಮತ್ತು ಅದು ಪ್ರತಿಪಾದಿಸುವ ಸಮಾನತೆಯನ್ನು ಈ ದೇಶಪ್ರೇಮ ಗೌರವಿಸುತ್ತದೆ. ಸಕ್ರಮ ಮತ್ತು ಅಕ್ರಮ ಎರಡೂ ಸಂದರ್ಭದಲ್ಲೂ ಅದು ಕಾನೂನನ್ನು ಗೌರವಿಸುತ್ತದೆ. ಈ ದೇಶದ ಪ್ರತಿಯೋರ್ವ ನಾಗರಿಕನ ಜೀವ, ಸೊತ್ತು, ಮಾನ, ಹಕ್ಕುಗಳನ್ನು ಅದು ಗೌರವಾರ್ಹ ಎಂದು ಪ್ರತಿಪಾದಿಸುತ್ತದೆ. ಪ್ರತಿಭೆಯಲ್ಲಾಗಲಿ, ಅಪರಾಧದಲ್ಲಾಗಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬಿತ್ಯಾದಿ ವಿಭಜನೆ ಮಾಡುವುದನ್ನು ಅದು ದೇಶದ್ರೋಹತನ ಎಂದೇ ಕರೆಯುತ್ತದೆ. ನಿಜವಾಗಿ, ಈ ದೇಶಪ್ರೇಮದ ಪ್ರತಿಪಾದಕರಿಗೆ ಮಚ್ಚು, ಲಾಂಗು, ಬಂದೂಕುಗಳ ಅಗತ್ಯವಿಲ್ಲ. ಪ್ರಚೋದಕ ಭಾಷಣಗಳನ್ನು ಮಾಡಬೇಕಾಗಿಯೂ ಇಲ್ಲ. ಆದರೆ ಬರೇ ಪದವಾಗಿರುವ ದೇಶಪ್ರೇಮಕ್ಕೆ ಇವೆಲ್ಲವುಗಳ ಅಗತ್ಯವಿದೆ. ಅದು ಜೀವಂತವಾಗಿರುವುದೇ ಕಾನೂನುಬಾಹಿರ ಚಟುವಟಿಕೆಗಳ ಮೂಲಕ. ನಿಜವಾಗಿ, ಸಲ್ಮಾನ್ ಪ್ರಕರಣ ಚರ್ಚಾರ್ಹವಾಗಬೇಕಾದದ್ದು ಈ ಹಿನ್ನೆಲೆಯಲ್ಲೇ. ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಅಧಿಕಾರ ಲಭ್ಯವಾಗಿರುವಾಗ ಮತ್ತು ಸರಕಾರಿ ವಾಹಿನಿಯಾದ ದೂರದರ್ಶನದಲ್ಲೇ ಭಾಗವತ್‍ರಂಥವರಿಗೆ ಭಾಷಣದ ಅವಕಾಶ ಸಿಗುತ್ತಿರುವಾಗ ಇಂಥ ಪ್ರಕರಣಗಳನ್ನು ಆಕಸ್ಮಿಕ ಎಂದು ಹೇಳುವಂತಿಲ್ಲ. ಈ ರೀತಿಯ ದೇಶಪ್ರೇಮದಲ್ಲೊಂದು ಅಮಲಿದೆ. ಈ ಅಮಲು ಸರಿ-ತಪ್ಪುಗಳನ್ನು ಕಡೆಗಣಿಸುವಷ್ಟು ಅಪಾಯಕಾರಿಯಾದದ್ದು. ಅದು ವ್ಯವಸ್ಥೆಯನ್ನು ಆವರಿಸಿಕೊಂಡು ಬಿಟ್ಟರೆ, ಗಂಭೀರವಲ್ಲದ ಪ್ರಕರಣವೂ ಗಂಭೀರವಾಗುತ್ತದೆ. ಸಾಮಾನ್ಯ ಕ್ರಿಮಿನಲ್ ಪ್ರಕರಣವೂ ದೇಶದ್ರೋಹವಾಗುತ್ತದೆ. ವ್ಯಕ್ತಿಯ ಚರ್ಮ, ಧರ್ಮ ನೋಡಿಕೊಂಡು ಪ್ರಕರಣವು ಭೀಕರ ಅಥವಾ ಸಾಮಾನ್ಯವಾಗಿ ವಿಭಜನೆಗೊಳ್ಳುತ್ತದೆ.
 ನಿಜವಾಗಿ, ದೇಶಪ್ರೇಮ, ದೇಶಾಭಿಮಾನ, ಸಮಾನ ಸ್ವಾತಂತ್ರ್ಯ.. ಮುಂತಾದುವುಗಳೆಲ್ಲ ವಿಸ್ತೃತ ಅರ್ಥವುಳ್ಳವು. ಆದರೆ ಅದನ್ನು ಈ ದೇಶದ ಒಂದು ವರ್ಗ ಅತ್ಯಂತ ಸೀಮಿತ ಅರ್ಥಕ್ಕೆ ಇಳಿಸಿ ಬಿಟ್ಟಿದೆ. ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತಲೇ ಈ ವರ್ಗ ಕಾನೂನುಬಾಹಿರ ಕೃತ್ಯಗಳಲ್ಲೂ ಭಾಗಿಯಾಗುತ್ತವೆ ಮತ್ತು ಬಹಿರಂಗವಾಗಿಯೇ ಈ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತವೆ. ಸಲ್ಮಾನ್ ಪ್ರಕರಣವನ್ನು ವಿಶ್ಲೇಷಿಸುವಾಗ ಈ ದ್ವಂದ್ವವೂ ಚರ್ಚೆಗೊಳಗಾಗಬೇಕಾದುದು ಅತಿ ಅಗತ್ಯ. ಆದ್ದರಿಂದ ರಾಷ್ಟ್ರಗೀತೆಯನ್ನು ಗೌರವಿಸದ ಸಲ್ಮಾನ್‍ನ ವರ್ತನೆಯನ್ನು ಖಂಡಿಸುತ್ತಲೇ, ಆತನೊಂದಿಗೆ ವ್ಯವಸ್ಥೆ ನಡೆದುಕೊಂಡ ರೀತಿಯನ್ನೂ ನಾವು ಪ್ರಶ್ನಿಸಬೇಕಾಗುತ್ತದೆ.