Wednesday, 15 October 2014

ಧರ್ಮರಕ್ಷಣೆಯ ನಿಜರೂಪವನ್ನು ತೋರಿಸಿಕೊಟ್ಟ ಶಾಂತಲಿಂಗೇಶ್ವರ ಸ್ವಾಮಿ

ಇಬ್ರಾಹೀಮ್
   ಅಕ್ಟೋಬರ್ 5 ಯಾವುದಾದರೂ ರಾಷ್ಟ್ರ ನಾಯಕರ ಜಯಂತಿಯದ್ದೋ ಧಾರ್ಮಿಕವಾಗಿ ವಿಶೇಷ ಆಚರಣೆಗಳದ್ದೋ ದಿನಾಂಕವಲ್ಲ. ಕ್ಯಾಲೆಂಡರ್‍ನಲ್ಲಿ ಆ ದಿನಕ್ಕೆ ಯಾವ ಮಹತ್ವವೂ ಇಲ್ಲ. ವಾರದ ಏಳು ದಿನಗಳಲ್ಲಿ ಒಂದು ದಿನವನ್ನಷ್ಟೇ ಸೂಚಿಸುವ ಆ ದಿನದಂದು ಗುಲ್ಬರ್ಗಾ ಜಿಲ್ಲೆಯ ಅಲಂದ್ ತಾಲೂಕಿನ ನಿಂಬಾಳ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ‘ಮದ್ಯಮುಕ್ತ ಗ್ರಾಮ’ ಯೋಜನೆಗೆ ಒಂದು ವರ್ಷ ತುಂಬಿದ ನೆನಪಲ್ಲಿ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಒಂದು ಬಗೆಯ ತೃಪ್ತಿ, ನೆಮ್ಮದಿಯ ವಾತಾವರಣ ಆ ಸಭೆಯನ್ನಿಡೀ ಆವರಿಸಿಕೊಂಡಿತ್ತು. ಅದಕ್ಕೆ ಕಾರಣವೂ ಇದೆ.
 2013 ಅಕ್ಟೋಬರ್ 5ರಂದು ಶಾಂತಲಿಂಗೇಶ್ವರ ಮಠದ ಶಾಂತಲಿಂಗೇಶ್ವರ ಸ್ವಾಮಿಯವರ ನೇತೃತ್ವದಲ್ಲಿ ನಿಂಬಾಳ ಗ್ರಾಮವನ್ನು ಮದ್ಯಮುಕ್ತಗೊಳಿಸುವ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿತ್ತು. ಹೊರಗೆ ಕುಡಿದು ಊರಿಗೆ ಬರುವವರ ಮೇಲೂ ನಿಗಾ ಇಡುವುದಕ್ಕೆ ಮತ್ತು ಅವರಿಂದ ದಂಡ ವಸೂಲಿ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಮನೆಯ ಪುರುಷರನ್ನು ಮದ್ಯ ಚಟದಿಂದ ಬಿಡಿಸುವಲ್ಲಿ ಮಹಿಳೆಯರು ಸಹಕರಿಸದಿದ್ದರೆ ತಾನು ಗ್ರಾಮಕ್ಕೆ ಭೇಟಿ ನೀಡುವುದಿಲ್ಲ ಎಂದು ಸ್ವಾವಿೂಜಿಗಳು ಬೆದರಿಕೆ ಹಾಕಿದ್ದರು. ಮಹಿಳೆಯರು ಜಾಗೃತರಾದದ್ದೇ ತಡ, ಗ್ರಾಮದಲ್ಲಿದ್ದ 3 ಮದ್ಯದಂಗಡಿಗಳು ಬಾಗಿಲು ಮುಚ್ಚಿದುವು. ಹೊರಗೆಲ್ಲೋ ಕುಡಿದು ಬರುವವರ ಮೇಲೆ ನಿಗಾವಿರಿಸಿದ್ದರಿಂದಾಗಿ ಕಳೆದೊಂದು ವರ್ಷದಲ್ಲಿ ದಂಡ ರೂಪದಲ್ಲಿ 50 ಸಾವಿರ ರೂಪಾಯಿ ಸಂಗ್ರಹವಾಗಿದೆ. ಮಾತ್ರವಲ್ಲ, ಇವತ್ತು ನಿಂಬಾಳ ಗ್ರಾಮವು ಮದ್ಯಮುಕ್ತ ಮತ್ತು ಕುಡುಕ ಮುಕ್ತ ಗ್ರಾಮವಾಗಿ ಗುರುತಿಸಿಕೊಂಡಿದೆ.
 ನಿಜವಾಗಿ, ನಿಂಬಾಳ ಗ್ರಾಮವನ್ನು ಶಾಂತಲಿಂಗೇಶ್ವರ ಸ್ವಾಮಿಯವರು ಮದ್ಯಮುಕ್ತಗೊಳಿಸಿದ್ದು ಪವಾಡದಿಂದಲ್ಲ, ಬದ್ಧತೆಯಿಂದ. ಅಷ್ಟಕ್ಕೂ, ಈ ದೇಶದಲ್ಲಿ ಎಷ್ಟೆಷ್ಟು ಗ್ರಾಮಗಳಿವೆಯೋ ಅದಕ್ಕಿಂತಲೂ ಹೆಚ್ಚು ದೇವಾಲಯ, ಮಸೀದಿ, ಬಸದಿ, ಚರ್ಚ್‍ಗಳಿವೆ. ಈ ಧಾರ್ಮಿಕ ಕೇಂದ್ರಗಳಲ್ಲಿ ಯಾವ ಕೇಂದ್ರವೂ ಮದ್ಯದ ಪರ ಮಾತಾಡುವುದೂ ಇಲ್ಲ. ಬಹುತೇಕ ಇಂಥ ಕೇಂದ್ರಗಳಲ್ಲಿ ವಾರಕ್ಕೊಮ್ಮೆಯಾದರೂ ಭಕ್ತರು ಸೇರುವ ಮತ್ತು ಧಾರ್ಮಿಕ ನಾಯಕರಿಂದ ಪ್ರವಚನವನ್ನೋ ಉಪದೇಶಗಳನ್ನೋ ಆಲಿಸುವ ಸಂದರ್ಭಗಳೂ ಇರುತ್ತವೆ. ಆದರೂ ಯಾಕೆ ಕೆಡುಕು ವಿರೋಧಿ ಆಂದೋಲನವೊಂದನ್ನು ಕೈಗೊಳ್ಳುವುದಕ್ಕೆ ಇವುಗಳಿಗೆ ಸಾಧ್ಯವಾಗುತ್ತಿಲ್ಲ? ಅಂದಹಾಗೆ, ಸ್ವಾವಿೂಜಿಯನ್ನೋ ಮೌಲಾನಾರನ್ನೋ ಅಥವಾ ಫಾದರ್‍ಗಳನ್ನೋ ಗೌರವಿಸುವಷ್ಟು ಈ ಸಮಾಜ ರಾಜಕಾರಣಿಗಳನ್ನು ಗೌರವಿಸುವುದಿಲ್ಲ. ಒಂದು ಅಪಾರ ಜನಸಂದಣಿಯನ್ನು ಯಾವ ದುಡ್ಡಿನ ಆಮಿಷವೂ ಒಡ್ಡದೇ ಒಟ್ಟು ಸೇರಿಸುವ ಸಾಮರ್ಥ್ಯ  ಅವರಲ್ಲಿದೆ. ಅವರನ್ನು ಸಮಾಜ ಆಲಿಸುತ್ತದೆ. ಅವರ ಮಾತನ್ನು ಪಾಲಿಸುತ್ತದೆ. ಇಷ್ಟಿದ್ದೂ ಈ ಕೇಂದ್ರಗಳೆಲ್ಲ ದುರ್ಬಲವಾಗಿ ಗುರುತಿಸಿಕೊಂಡಿರುವುದೇಕೆ? ಇವತ್ತು ಈ ದೇಶದ ಕೋಟ್ಯಂತರ ಮನೆಗಳು ಹರಿಸುತ್ತಿರುವ ಕಣ್ಣೀರಿನಲ್ಲಿ ಮದ್ಯಕ್ಕೆ, ವರದಕ್ಷಿಣೆಗೆ  ಮತ್ತು ಕೋಮುಗಲಭೆಗಳಿಗೆ ಪ್ರಮುಖ ಪಾತ್ರವಿದೆ. ಹಾಗಿದ್ದೂ, ಇವುಗಳ  ವಿರುದ್ಧ ಯಾಕೆ ಜಾಗೃತಿ ಕಾರ್ಯಕ್ರಮಗಳು ಹುಟ್ಟಿಕೊಳ್ಳುತ್ತಿಲ್ಲ?
 ಇವತ್ತು ಧರ್ಮರಕ್ಷಣೆಯ ಬಗ್ಗೆ ಧಾರಾಳ ಭಾಷಣ, ಲೇಖನಗಳು ಪ್ರಕಟವಾಗುತ್ತಿವೆ. ಧಾರ್ಮಿಕ ಕೇಂದ್ರಗಳಲ್ಲಿ ಮೈ ನವಿರೇಳಿಸುವ ಉಪದೇಶಗಳನ್ನು ನೀಡಲಾಗುತ್ತಿದೆ. ದುರಂತ ಏನೆಂದರೆ, ಧರ್ಮರಕ್ಷಣೆ ಎಂಬುದು ಇನ್ನೊಂದು ಧರ್ಮವನ್ನು ವೈರಿಯಂತೆ ಕಾಣುವ ಮತ್ತು ಆಯುಧಗಳನ್ನು ಎತ್ತಿಕೊಳ್ಳುವುದರ ಹೆಸರು ಎಂದೇ ತಿಳಿದುಕೊಳ್ಳಲಾಗಿದೆ. ಇನ್ನೊಂದು ಧರ್ಮದವರ ಮೇಲಿನ ಹಲ್ಲೆ, ಹತ್ಯೆಯನ್ನು ಧರ್ಮರಕ್ಷಣೆಯ ಹಾದಿಯಲ್ಲಿನ ಯಶಸ್ಸು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಾತ್ರವಲ್ಲ, ಹಾಗೆ ಹಲ್ಲೆ  ನಡೆಸುವುದಕ್ಕೆ ಎಷ್ಟು ಯುವಕರು ಬೇಕಾದರೂ ನಮ್ಮಲ್ಲಿದ್ದಾರೆ. ಸೆ. 25ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸವಿೂಪದ ಕುಕ್ಕಿಲದ ಇಬ್ರಾಹೀಮ್ ಎಂಬ ಯುವಕನಿಗೆ ಕೊಣಾಜೆ ಸವಿೂಪದ ಗ್ರಾಮಚಾವಡಿಯ ಬಳಿ ಚೂರಿಯಿಂದ ಇರಿಯಲಾಯಿತು. ಯುವಕ ಆ ಪರಿಸರಕ್ಕೆ ತೀರಾ ಹೊಸಬ. ಅಲ್ಲಿ ಆತನ ಮಾವನ ಮನೆಯಿದೆ ಎಂಬುದನ್ನು ಬಿಟ್ಟರೆ ಅಲ್ಲಿಗೂ ಆತನಿಗೂ ಬೇರೆ ಯಾವ ನಂಟೂ ಇಲ್ಲ. ಆತನ ಬೈಕ್‍ನ ಸಂಖ್ಯೆ 786 ಆಗಿದ್ದುದು ಮತ್ತು ಗಡ್ಡ ಬೆಳೆಸಿದ್ದುದೇ ಆತನ ಅಪರಾಧವಾಗಿತ್ತು. ಓರ್ವ ಅಮಾಯಕನಾಗಿ ಆ ಘಟನೆ ಆತನ ಮೇಲೆ ಬೀರುವ ಪರಿಣಾಮ  ಯಾವ ಬಗೆಯದು? ಈತ ಬೈಕಲ್ಲಿ ಹೋಗುತ್ತಿರುವಾಗಲೇ ಹಿಂಬದಿಯಿಂದ ಬೈಕಲ್ಲಿ ಬಂದವರು ಇರಿದು ಚೂರಿ ತೋರಿಸಿ ಹೊರಟು ಹೋದದ್ದು ಯಾವ ದ್ವೇಷದಿಂದ? ಅದರಿಂದ ಧರ್ಮಕ್ಕೆ ಯಾವ ಲಾಭವಿದೆ? ತೋಳಿನ ಎರಡೂ ನರಗಳು ತುಂಡಾಗಿರುವ ಮತ್ತು ಹೊಟ್ಟೆಯಿಂದ ಬೆನ್ನಿನ ವರೆಗೆ 20 ಹೊಲಿಗೆಗಳನ್ನು ಹಾಕಿರುವ ಸ್ಥಿತಿಯಲ್ಲಿ ಬದುಕುತ್ತಿರುವ ಆ ಯುವಕನ ಪ್ರಶ್ನೆಗಳಿಗೆ ಹಲ್ಲೆಕೋರರು ಕೊಡಬಹುದಾದ ಉತ್ತರಗಳೇನು? ಲಕ್ಷವನ್ನೂ ದಾಟಿದ ಖರ್ಚು, ದೈಹಿಕ ಮತ್ತು ಮಾನಸಿಕವಾಗಿ ಆಗಿರುವ ಗಾಯಕ್ಕೆ ಹಲ್ಲೆಕೋರರಲ್ಲಿ ಏನು ಸಮರ್ಥನೆಯಿದೆ? ಅಷ್ಟಕ್ಕೂ, ಇಬ್ರಾಹೀಮ್‍ನ ಜಾಗದಲ್ಲಿ ಗಣೇಶನನ್ನು  ಇಟ್ಟು ನೋಡಿದರೂ ಇವೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಧರ್ಮಗಳೇಕೆ ಚೂರಿ-ತಲವಾರುಗಳ ಮೂಲಕ ಮಾತಾಡುತ್ತಿವೆ? ಮುಸ್ಲಿಮನಿಗೆ ಹಿಂದೂ ಇರಿಯುವುದು ಅಥವಾ ಹಿಂದೂವಿಗೆ ಮುಸ್ಲಿಮ್ ಇರಿಯುವುದೆಲ್ಲ ಆಯಾ ಧರ್ಮಗಳಿಗೆ ಲಾಭ ತಂದು ಕೊಡಬಹುದೇ? ದ್ವೇಷ-ಅಸಹನೆಗಳಿಗೆ ಮಾತ್ರ ಕಾರಣವಾಗುವ ಇಂಥ ಪ್ರಕರಣಗಳಲ್ಲಿ ಯುವಕರು ನಂಬಿಕೆ ಇಟ್ಟುಕೊಳ್ಳುತ್ತಿರುವುದೇಕೆ? ನಿಜವಾಗಿ, ಒಂದು ಧರ್ಮದ ಅಸ್ತಿತ್ವಕ್ಕೆ ದೊಡ್ಡ ಅಪಾಯ ಎದುರಾಗಿರುವುದೇ ಮದ್ಯಪಾನ, ವರದಕ್ಷಿಣೆ, ಅನೈತಿಕತೆ, ಕೋಮುವಾದಗಳಂಥ ಸಾಮಾಜಿಕ ಕೆಡುಕುಗಳಿಂದ. ಇವು ಸಮಾಜದಲ್ಲಿ ಪ್ರಾಬಲ್ಯ ಸ್ಥಾಪಿಸಿರುವಷ್ಟು ದಿನ ಧರ್ಮದ ಪ್ರಸ್ತುತತೆ ಪ್ರಶ್ನಾರ್ಹವಾಗುತ್ತಲೇ ಇರುತ್ತದೆ. ಇಂಥ ಸ್ಥಿತಿಯಲ್ಲಿ, ಕುಡಿದು ಧರ್ಮರಕ್ಷಣೆಗೆ ಇಳಿಯುವ, ವರದಕ್ಷಿಣೆ ಪಡೆದು ಧರ್ಮ ಬೋಧನೆ ಮಾಡುವ, ಅನ್ಯ ಧರ್ಮೀಯರನ್ನು ದ್ವೇಷಿಸುತ್ತಲೇ ಮನುಷ್ಯತ್ವದ ಬಗ್ಗೆ ಮಾತಾಡುವ ಮಂದಿ ಸೃಷ್ಟಿಯಾಗುತ್ತಲೇ ಹೋಗುತ್ತಾರೆ. ಅಷ್ಟಕ್ಕೂ, ನಮ್ಮ ರಾಜ್ಯದ ಎಲ್ಲ ಗ್ರಾಮಗಳೂ ನಿಂಬಾಳ ಗ್ರಾಮವನ್ನು ಮಾದರಿಯಾಗಿ ಎತ್ತಿಕೊಳ್ಳುವ ಸನ್ನಿವೇಶವೊಂದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರತಿ ಮಸೀದಿ, ದೇವಾಲಯ, ಚರ್ಚ್‍ಗಳು ಜಂಟಿಯಾಗಿ ಮದ್ಯಮುಕ್ತ, ವರದಕ್ಷಿಣೆ ಮುಕ್ತ ಮತ್ತು ಕೋಮುದ್ವೇಷ  ಮುಕ್ತ ಗ್ರಾಮದ ಯೋಜನೆಯೊಂದಿಗೆ ಬೀದಿಗಿಳಿಯುವುದನ್ನು ಕಲ್ಪಿಸಿಕೊಳ್ಳಿ. ಆ ವಾತಾವರಣ ಹೇಗಿರಬಹುದು?
 ಮಾನವನ ಅಸ್ತಿತ್ವ ಈ ಭೂಮಿಯಲ್ಲಿ ಇರುವವರೆಗೆ ಒಳಿತು ಮತ್ತು ಕೆಡುಕಿನ ಅಸ್ತಿತ್ವ ಇದ್ದೇ ಇರುತ್ತದೆ. ಒಳಿತನ್ನು ಪ್ರೀತಿಸುವವರು ಇರುವಂತೆಯೇ ಕೆಡುಕನ್ನು ಪ್ರೀತಿಸುವವರೂ ಇರುತ್ತಾರೆ. ಆದರೆ ಕೆಡುಕನ್ನು ಪ್ರೀತಿಸುವವರಲ್ಲಿ ಒಂದು ಅಂಜಿಕೆಯಿರುತ್ತದೆ. ತಾನು ಮದ್ಯಪಾನಿ ಎಂದು ಮದ್ಯಪಾನ ಮಾಡುವವ ಎದೆತಟ್ಟಿ ಹೇಳಿಕೊಳ್ಳುವುದಿಲ್ಲ. ವರದಕ್ಷಿಣೆ ಪಡೆದವ ಆ ಸಂಗತಿಯನ್ನು ಸಮಾಜದಿಂದ ಮುಚ್ಚಿಟ್ಟುಕೊಂಡೇ ಬದುಕುತ್ತಿರುತ್ತಾನೆ. ಅಪ್ಪಟ ಕೋಮುವಾದಿ ಕೂಡ ತಾನು ಹಾಗಲ್ಲ ಎಂದು ನಂಬಿಸಲು ಹೆಣಗುತ್ತಿರುತ್ತಾನೆ. ಒಂದು ರೀತಿಯಲ್ಲಿ ಕೆಡುಕಿನ ಜೊತೆ ಅಂಜಿಕೆ ಮತ್ತು ಭಯ ಜೋಡಿಕೊಂಡೇ ಇರುತ್ತದೆ. ಆದರೆ ಒಳಿತಿಗೆ ಈ ಯಾವ ದೌರ್ಬಲ್ಯಗಳೂ ಇಲ್ಲ. ಆದರೂ ಒಳಿತಿನ ಪ್ರತಿಪಾದಕರು ಅಂಜಿಕೊಳ್ಳುತ್ತಲೂ ಕೆಡುಕಿನ ಬೆಂಬಲಿಗರು ರಾಜಾರೋಷವಾಗಿಯೂ ತಿರುಗುತ್ತಿರುವುದನ್ನು ಏನೆಂದು ಕರೆಯಬೇಕು? ಇದು ಯಾರ ಅಸಾಮರ್ಥ್ಯ? ಅಂದಹಾಗೆ, ನಿಂಬಾಳ ಗ್ರಾಮಕ್ಕೆ ಮದ್ಯ ವಿರೋಧಿ ಅಭಿಯಾನ ಕೈಗೊಳ್ಳಲು ಮತ್ತು ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಎಂದಾದರೆ ಇತರ ಗ್ರಾಮಗಳಿಗೂ ಅದು ಸಾಧ್ಯವಾಗಬಾರದೆಂದಿಲ್ಲವಲ್ಲ. ನಿಂಬಾಳ ಗ್ರಾಮದಲ್ಲಿ ಇಲ್ಲದ ಕೋಮು ವೈರಸ್‍ನ ಹಾವಳಿ ದಕ್ಷಿಣ ಕನ್ನಡ ಸಹಿತ ಕೆಲವಾರು ಜಿಲ್ಲೆಗಳಲ್ಲಿ  ತೀವ್ರ ಮಟ್ಟದಲ್ಲಿದೆ. ಈ ವೈರಸ್ ಎಲ್ಲ ಧರ್ಮಗಳ ವೈರಿ ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ, ಅದರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಕಷ್ಟವೇನೂ ಇಲ್ಲ. ನಿಂಬಾಳ ಗ್ರಾಮದಂತೆ ರಾಜ್ಯದ  ಪ್ರತಿ ಗ್ರಾಮವನ್ನೂ ಮದ್ಯ ಮುಕ್ತ ಮತ್ತು ಕೋಮುದ್ವೇಷ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಸರ್ವ ಧರ್ಮಗಳ ಪ್ರಮುಖರೂ ಒಂದಾಗಿಬಿಟ್ಟರೆ ದೊಡ್ಡದೊಂದು ಬದಲಾವಣೆಯನ್ನು ಖಂಡಿತ ನಿರೀಕ್ಷಿಸಬಹುದು.
 ಏನೇ ಆಗಲಿ, ನಿಂಬಾಳ ಗ್ರಾಮವನ್ನು ಮದ್ಯಮುಕ್ತಗೊಳಿಸಲು ಯಶಸ್ವಿಯಾದ ಜನತೆಯನ್ನು ಮತ್ತು ಶಾಂತಲಿಂಗೇಶ್ವರ ಸ್ವಾಮಿಯನ್ನು ನಾವು ಅಭಿನಂದಿಸಬೇಕಾಗಿದೆ. ಅವರೊಂದು ಮಾದರಿ ಗ್ರಾಮವನ್ನು ಕಟ್ಟಿ ಈ ರಾಜ್ಯಕ್ಕೆ ಅರ್ಪಿಸಿದ್ದಾರೆ. ಆ ಮಾದರಿಯನ್ನು ಎದುರಿಟ್ಟುಕೊಂಡು ಮದ್ಯಮುಕ್ತ, ವರದಕ್ಷಿಣೆ  ಮತ್ತು ಕೋಮುದ್ವೇಷ ಮುಕ್ತ ಗ್ರಾಮಗಳನ್ನು  ಕಟ್ಟಲು ನಾವು ಪ್ರಯತ್ನಿಸಬೇಕಾಗಿದೆ. ಇನ್ನೊಬ್ಬನಿಗೆ ಇರಿಯುವ, ಇನ್ನೊಂದು ಧರ್ಮವನ್ನು ದ್ವೇಷಿಸುವವರು ಯಾರೇ ಇರಲಿ, ಅವರೆಲ್ಲ ನಿಂಬಾಳ ಗ್ರಾಮವನ್ನು ತಮ್ಮ ಧರ್ಮ ರಕ್ಷಣೆಗೆ ಮಾದರಿಯಾಗಿ ಎತ್ತಿಕೊಳ್ಳಬೇಕಾಗಿದೆ.

No comments:

Post a Comment