Tuesday, 25 November 2014

ಭಯೋತ್ಪಾದನೆಯ ಆರೋಪದಿಂದ ಮದ್ರಸಗಳನ್ನು ಪಾರುಗೊಳಿಸಿದ ಬಾಬಾ ರಾಮ್‍ಪಾಲ್

   ವಿದ್ಯಾರ್ಥಿ ಸಂಘಟನೆಯಾದ ಎಸ್‍ಐಓವು (ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ), ಕಳೆದವಾರ ಬೆಂಗಳೂರಿನಲ್ಲಿ, `ಮದ್ರಸಗಳ ಪ್ರಸಕ್ತ ಸ್ಥಿತಿಗತಿಯ' ಕುರಿತಂತೆ ಸರ್ವೇ ಆಧಾರಿತ ವರದಿಯ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಅದೇ ದಿನ ಮಾಧ್ಯಮಗಳಲ್ಲಿ ಶಸ್ತ್ರಾಸ್ತ್ರಗಳ ವಿವರಗಳು ಪ್ರಕಟವಾಗಿದ್ದುವು. ಹರ್ಯಾಣದ ಸ್ವಘೋಷಿತ ದೇವಮಾನವ ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳ ವಿವರಗಳಾಗಿದ್ದುವು ಅವು. ಏರ್‍ಗನ್‍ಗಳು, ರಿವಾಲ್ವರ್‍ಗಳು, ಗ್ರೆನೇಡ್‍ಗಳು, ಸಿಡಿಮದ್ದುಗಳು, ಪೆಟ್ರೋಲ್ ಬಾಂಬ್, ಆ್ಯಸಿಡ್ ತುಂಬಿದ ಬ್ಯಾಗುಗಳು, ಆ್ಯಸಿಡ್ ಸಿರಿಂಜ್, 800 ಲೀಟರ್ ಡೀಸೆಲ್, ಮೆಣಸಿನ ಪುಡಿ.. ಸಹಿತ ಶಸ್ತ್ರಾಸ್ತ್ರಗಳ ಕಾರ್ಖಾನೆಯಲ್ಲಿ ಇರಬಹುದಾದ ಎಲ್ಲವೂ ಅಲ್ಲಿದ್ದುವು. ಒಂದು ವೇಳೆ ಆ ವಸ್ತುಗಳಲ್ಲಿ ಕೆಲವೇ ಕೆಲವು ವಸ್ತುಗಳಾದರೂ ಯಾವುದಾದರೊಂದು ಮದ್ರಸದಲ್ಲಿ ಪತ್ತೆಯಾಗಿರುತ್ತಿದ್ದರೆ ಬೆಂಗಳೂರಿನ ಆ ಕಾರ್ಯಕ್ರಮದ ಪರಿಸ್ಥಿತಿ ಏನಾಗಿರುತ್ತಿತ್ತು? ಮಾಧ್ಯಮಗಳು ಆ ಕಾರ್ಯಕ್ರಮದ ಸಂಘಟಕರನ್ನು ಹೇಗೆಲ್ಲ ಮುತ್ತಿಕೊಳ್ಳುತ್ತಿದ್ದವು? ಆ ಇಡೀ ಚರ್ಚಾಗೋಷ್ಠಿಯನ್ನೇ ಭಯೋತ್ಪಾದಕ ಕಾರ್ಯಕ್ರಮವಾಗಿ ಚಿತ್ರಿಸಲು ಏನೆಲ್ಲ ಪದ ಪ್ರಯೋಗ, ಶೀರ್ಷಿಕೆಗಳು ರಚಿತವಾಗುತ್ತಿದ್ದುವು? ರಾಜ್ಯಾದ್ಯಂತದ 84 ಮದ್ರಸಗಳ ಮೇಲೆ ಸರ್ವೆ ನಡೆಸಿ ತಯಾರಿಸಲಾದ ವರದಿಗೆ ಅವು ಏನೆಂದು ಶೀರ್ಷಿಕೆ ಕೊಡುತ್ತಿದ್ದುವು? ದುರಂತ ಏನೆಂದರೆ, ಮದ್ರಸ ಭಯೋತ್ಪಾದನೆಯ ಬಗ್ಗೆ ಮಾತಾಡುವ ಗೃಹ ಸಚಿವ ರಾಜನಾಥ್ ಸಿಂಗ್‍ರು ಈ ಶಸ್ತ್ರಾಸ್ತ್ರಗಳ ಕುರಿತಂತೆ ಇನ್ನೂ ಮೌನ ಮುರಿದಿಲ್ಲ. ಆಶ್ರಮಗಳು ಭಯೋತ್ಪಾದಕರ ಅಡಗುತಾಣವಾಗುತ್ತಿವೆಯೇ ಎಂಬೊಂದು ಅನುಮಾನಿತ ಹೇಳಿಕೆಯನ್ನು ಹೊರಡಿಸುವುದಕ್ಕೆ ಪೂರಕ ವಾತಾವರಣವಿದ್ದಾಗ್ಯೂ ಅವರು ತುಟಿ ಬಿಚ್ಚುತ್ತಿಲ್ಲ. ಮಾಧ್ಯಮಗಳು ನ್ಯಾಯಪಾಲನೆಯಲ್ಲಿ ಎಷ್ಟು ನಿಷ್ಠವಾಗಿವೆಯೆಂದರೆ, ಆ ಶಸ್ತ್ರಾಸ್ತ್ರಗಳಲ್ಲಿ ಅವುಗಳಿಗೆ ಅನುಮಾನವೇ ಬರುತ್ತಿಲ್ಲ. ಮದ್ರಸಕ್ಕೆ ಹೋಗುವ ಪುಟ್ಟ ಮಕ್ಕಳ ಟೊಪ್ಪಿಯೊಳಗೆ ಬಾಂಬಿದೆಯೇ ಎಂಬ ಪತ್ತೆದಾರಿಕೆಯಲ್ಲಿ ತೊಡಗಿದ್ದವರೆಲ್ಲ ರಾಮ್‍ಪಾಲ್‍ರ ಶಸ್ತ್ರಾಸ್ತ್ರವನ್ನು ಮುಂದಿಟ್ಟುಕೊಂಡು `ಆಶ್ರಮ ಭಯೋತ್ಪಾದನೆಯ' ಬಗ್ಗೆ ಭೀತಿಯನ್ನೂ ವ್ಯಕ್ತಪಡಿಸುತ್ತಿಲ್ಲ. ದೇಶಾದ್ಯಂತದ ಆಶ್ರಮಗಳೆಲ್ಲ ತನಿಖೆಗೆ ಒಳಗಾಗಲಿ ಎಂಬ ಹಕ್ಕೊತ್ತಾಯಗಳು ಮಾಧ್ಯಮಗಳಿಂದಾಗಲಿ, ಮದ್ರಸ ಭಯೋತ್ಪಾದನೆ ಎಂಬ ಪದವನ್ನು ಸೃಷ್ಟಿಸಿದವರಿಂದಾಗಲಿ ಕೇಳಿ ಬರುತ್ತಿಲ್ಲ. ಇವತ್ತು ರಾಮ್‍ಪಾಲ್ ಆಶ್ರಮದ ಶಸ್ತ್ರಾಸ್ತ್ರಗಳು ಮತ್ತು ಅಲ್ಲಿನ ಬೆಳವಣಿಗೆಗಳೆಲ್ಲ ಕೇವಲ ಆ ಆಶ್ರಮಕ್ಕೆ ಮಾತ್ರ ಸೀಮಿತಗೊಂಡು ಬಿಟ್ಟಿವೆ. ಮದ್ರಸ ಭಯೋತ್ಪಾದನೆಯ ಚರ್ಚೆಯು ದೇಶಾದ್ಯಂತದ ಮದ್ರಸಗಳನ್ನು ಒಳಗೊಳಿಸಿದಂತೆ ಹಾಗೂ ಪ್ರತಿ ಗಲ್ಲಿಯಲ್ಲಿ ಟೋಪಿ ಇಟ್ಟ ಪುಟ್ಟ ಮಗು ಮತ್ತು ಬಡ ಮೌಲಾನ ಕೆಂಗಣ್ಣಿಗೆ ಗುರಿಯಾದಂತೆ ಯಾವ ಆಶ್ರಮಗಳೂ  ಗುರಿಯಾಗುತ್ತಿಲ್ಲ. ಮದ್ರಸ ಭಯೋತ್ಪಾದನೆಯಂತೆ ಆಶ್ರಮ ಭಯೋತ್ಪಾದನೆ ಎಂಬ ಚೆಂದದ ಶೀರ್ಷಿಕೆಯಲ್ಲಿ ಚಾನೆಲ್‍ಗಳು ಚರ್ಚೆಯನ್ನೂ ಹಮ್ಮಿಕೊಳ್ಳುತ್ತಿಲ್ಲ.
 ನಿಜವಾಗಿ, ಮದ್ರಸ ಭಯೋತ್ಪಾದನೆ, ಆಶ್ರಮ ಭಯೋತ್ಪಾದನೆ ಮುಂತಾದ ಪದ ಪ್ರಯೋಗಗಳೇ ತಪ್ಪು. ಮದ್ರಸಗಳು, ಆಶ್ರಮಗಳು, ಇಗರ್ಜಿ, ಮಸೀದಿ, ಮಂದಿರಗಳೆಲ್ಲ ಪವಿತ್ರ ಭಾವನೆಯ ಸಂಕೇತಗಳು. ಮಾರುಕಟ್ಟೆಗೆ ಪ್ರವೇಶಿಸಿದಂತೆ ಯಾರೂ ಮಂದಿರಕ್ಕೆ ಪ್ರವೇಶಿಸುವುದಿಲ್ಲ. ಮಸೀದಿಗೆ ತೆರಳುವಾಗ ಇರುವ ಭಕ್ತಿ ಭಾವನೆಯು ಮದುವೆ ಸಭಾಂಗಣಕ್ಕೆ ಹೋಗುವಾಗ ಇರುವುದಿಲ್ಲ. ಆದರೆ ಪತ್ರಿಕೋದ್ಯಮದ ತುರ್ತುಗಳು ಮತ್ತು ಮನುಷ್ಯ ವಿರೋಧಿ ಮನಸುಗಳು ಒಟ್ಟುಗೂಡಿ ಈ ಪವಿತ್ರ ಸಂಕೇತಗಳನ್ನೇ ಭೀತಿಕಾರಕಗೊಳಿಸುವಲ್ಲಿ ಒಂದು ಹಂತದವರೆಗೆ ಇವತ್ತು ಯಶಸ್ವಿಯಾಗಿವೆ. ಈ ದೇಶದ ಯಾವ ಮದ್ರಸದಲ್ಲೂ ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿ ಸಿಕ್ಕಂತಹ ವಸ್ತುಗಳು ಈ ವರೆಗೂ ಸಿಗದಿದ್ದರೂ ಅವುಗಳನ್ನು ಸೂಜಿಮೊನೆಯಲ್ಲಿ ನಿಲ್ಲಿಸಿರುವುದಕ್ಕೆ ಈ ಕಾರಣಕ್ಕಿಂತ ಹೊರತಾದುದು ಏನೂ ಕಾಣಿಸುತ್ತಿಲ್ಲ. ಅಂದ ಹಾಗೆ, ಈ ದೇಶದ ಹೆಚ್ಚಿನೆಲ್ಲಾ ಮದ್ರಸಗಳ ಸ್ಥಿತಿ ಅತ್ಯಂತ ಶೋಚನೀಯವಾದದ್ದು. ಮೂಲಭೂತ ಸೌಕರ್ಯಗಳು ಇಲ್ಲದ, ಆಟದ ಮೈದಾನಗಳಂತಹ ವಿದ್ಯಾರ್ಥಿಸ್ನೇಹಿ ಪರಿಸರ ಇಲ್ಲದ, ಬಡ ಡೆಸ್ಕು, ಬೆಂಚು, ಕಪ್ಪು ಬೋರ್ಡು, ಚಾಕುಪೀಸುಗಳ ಪುಟ್ಟ ಜಗತ್ತಿನಲ್ಲಿ ಅವು ಉಸಿರಾಡುತ್ತಿವೆ. ಹೆಚ್ಚಿನೆಲ್ಲವೂ `ಬಡತನ ರೇಖೆಗಿಂತ' ಕೆಳಗಿರುವವುಗಳೇ. ಅಲ್ಲಿ ಕಲಿಸುವ ಮೌಲಾನರು ಕೂಡಾ ಬಡತನದ ಹಿನ್ನೆಲೆಯವರೇ. ಆರ್ಥಿಕವಾಗಿ ತೀರಾ ಸೋತು ಹೋಗಿರುವ ಒಂದು ಸಮುದಾಯದ ಕಲಿಕಾ ಕೇಂದ್ರಗಳು (ಮದ್ರಸಗಳು) ಎಲ್ಲ ಆಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿರುವುದಕ್ಕೆ ಸಾಧ್ಯವೂ ಇಲ್ಲ. ಸಾಚಾರ್ ಸಮಿತಿಯ ವರದಿಯಲ್ಲಿ ಮುಸ್ಲಿಮರ ಸ್ಥಾನವು ದಲಿತರಿಗಿಂತ ಕೆಳಗಿರುವಾಗ ಆ ಸಮುದಾಯ ನಡೆಸುವ ಮದ್ರಸಗಳಾಗಲಿ ಮಸೀದಿಗಳಾಗಲಿ ಈ ಸ್ಥಾನದಿಂದ ಮೇಲೇರಿ ಗುರುತಿಸಿಕೊಳ್ಳುವುದನ್ನು ಯಾರೂ ಊಹಿಸಲಾರರು. ಒಂದು ರೀತಿಯಲ್ಲಿ, ಈ ದೇಶದ ಹೆಚ್ಚಿನೆಲ್ಲಾ ಮದ್ರಸಗಳಲ್ಲಿ ಕಲಿಸುವ ಮೌಲಾನಗಳಲ್ಲಿ ಮತ್ತು ಅಲ್ಲಿನ ಸೌಲಭ್ಯಗಳಲ್ಲಿ ದೊಡ್ಡದೊಂದು ಬಡತನದ ಛಾಯೆಯಿದೆ. ಇಂತಹ ಸ್ಥಿತಿಯಲ್ಲಿ, ಅವು ಬಾಂಬ್ ತಯಾರಿಕೆಯನ್ನು ಕಲಿಸುತ್ತವೆ ಎಂಬ ಆರೋಪವೇ ಅತ್ಯಂತ ಹೇಯವಾದದ್ದು. ಆದರೂ ದೇಶದಲ್ಲಿ ಅಂಥದ್ದೊಂದು ಆರೋಪವನ್ನು ಯಶಸ್ವಿಯಾಗಿ ಹೊರಿಸಲಾಗಿದೆ. ಕರ್ನಾಟಕದಲ್ಲಿರುವ ಎಲ್ಲ ಮದ್ರಸಗಳ ಒಟ್ಟು ಆಸ್ತಿಗೆ ಸಮಾನವಾಗುವಷ್ಟು ಸಂಪತ್ತನ್ನು ಕೇವಲ ಬಾಬಾ ರಾಮ್‍ಪಾಲ್‍ರ ಆಶ್ರಮವೊಂದೇ ಹೊಂದಿದ್ದರೂ ಮದ್ರಸಗಳು ಭಯೋತ್ಪಾದಕವಾಗಿಯೂ ರಾಮ್‍ಪಾಲ್‍ರ ಆಶ್ರಮ ಕ್ರಿಮಿನಲ್ ಆರೋಪಗಳಿಗಾಗಿಯೂ ಗುರುತಿಸಿಕೊಳ್ಳುತ್ತಿವೆ. ಬಹುಶಃ ಬಡ ಮದ್ರಸಗಳು ಮತ್ತು ಅದರ ಪುಟ್ಟ ಮಕ್ಕಳಿಗಿಲ್ಲದ ಕೆಲವೊಂದು ವಿಶೇಷತೆಗಳು ಇಂಥ ಆಶ್ರಮಗಳಿಗಿರುವುದೇ ಇದಕ್ಕೆ ಕಾರಣ. ಆಶ್ರಮಗಳಿಗಿರುವ ರಾಜಕೀಯ ಪ್ರಭಾವ ಮದ್ರಸಗಳಿಗಿಲ್ಲ. ಬೇಕಾದಾಗ ರಾಜಕೀಯ ಪಕ್ಷಗಳಿಗೆ ಕಪ್ಪುಹಣ ಒದಗಿಸುವ ತಾಕತ್ತೂ ಅವುಗಳಿಗಿಲ್ಲ. ವಿಜೃಂಭಣೆಯ ಕಾರ್ಯಕ್ರಮಗಳನ್ನು ನಡೆಸುವ ಸಂಪತ್ತೂ ಅವುಗಳ ಬಳಿಯಿಲ್ಲ. ಇಷ್ಟೆಲ್ಲ ದೌರ್ಬಲ್ಯಗಳನ್ನು ಹೊಂದಿರುವ ಕೇಂದ್ರಗಳು ವ್ಯವಸ್ಥೆಯ ಅವಕೃಪೆಗಲ್ಲದೇ ಕೃಪೆಗೆ ಪಾತ್ರವಾಗುವುದನ್ನು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಊಹಿಸುವುದು ತೀರಾ ಕಷ್ಟ.
   ಅಂದಹಾಗೆ, ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಿವರಗಳು ಪ್ರಕಟವಾದ ದಿನವೇ ಮದ್ರಸಗಳ ಸ್ಥಿತಿಗತಿಗಳ ಕುರಿತಂತೆ ಸರ್ವೇ ಆಧಾರಿತ ವರದಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡದ್ದು ಕಾಕತಾಳೀಯವೇ ಆಗಿರಬಹುದು. ಆದರೆ, ಕೆಲವೊಮ್ಮೆ ಅಂಥ ಕಾಕತಾಳೀಯದಲ್ಲೂ ಸೂಕ್ಷ್ಮ ಸಂದೇಶಗಳಿರುತ್ತವೆ. ಮದ್ರಸಗಳನ್ನು ಕೆಲವು ವರ್ಷ ಗಳಿಂದ ಭೂತಗನ್ನಡಿಯಿಟ್ಟು ನೋಡುತ್ತಿದ್ದವರಿಗೆ ರಾಮ್‍ಪಾಲ್ ಒಂದು ಸವಾಲು ಎಸೆದಿದ್ದಾರೆ. ನಿಮ್ಮ ಭೂತಗನ್ನಡಿ ಎಷ್ಟು ಪ್ರಾಮಾಣಿಕವಾಗಿದೆ ಎಂಬುದೇ ಆ ಸವಾಲು. ಮದ್ರಸಗಳ ಮೇಲೆ ಪತ್ತೆದಾರಿ ಕ್ಯಾಮರಾ ಇಟ್ಟವರು ಮತ್ತು ಇಡಬಯಸುವವರು ಈ ಸವಾಲನ್ನು ಅತ್ಯಂತ ಪ್ರಾಮಾಣಿಕತೆಯಿಂದ ಸ್ವೀಕರಿಸಬೇಕಾಗಿದೆ. ಭಯೋತ್ಪಾದನೆ, ಅತ್ಯಾಚಾರ, ಹತ್ಯಾಕಾಂಡ ಕೋಮುವಾದ... ಇವೆಲ್ಲ ಯಾವುದಾದರೊಂದು ಧಾರ್ಮಿಕ ಪಾಠ ಪುಸ್ತಕದ ಉತ್ಪನ್ನವಲ್ಲ. ಅದೊಂದು ಮನಸ್ಥಿತಿ. ಆ ಮನಸ್ಥಿತಿಯ ಹುಟ್ಟಿಗೆ ಮನೆ, ಪರಿಸರ, ಸಹವಾಸ ಮತ್ತಿತರ ಸಂಗತಿಗಳು ಕಾರಣವೇ ಹೊರತು ನಿರ್ದಿಷ್ಟ ಧರ್ಮಗಳೋ ಅದರ ಕಲಿಕಾ ಕೇಂದ್ರಗಳೋ ಅಲ್ಲ. ಬಂಧನದ ಮೂಲಕ ರಾಮ್‍ಪಾಲ್ ಸಾರಿದ ಈ ಸಂದೇಶವನ್ನು ಮದ್ರಸ ಭಯೋತ್ಪಾದನೆ ಎಂಬ ಸುಳ್ಳು ಭೂತವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಬ್ಬಿಸುತ್ತಿರುವ ಎಲ್ಲರೂ ಕೇಳಿಸಿಕೊಳ್ಳಬೇಕು. ಕೆಡುಕುನ್ನು ನಿರ್ದಿಷ್ಟ ಧರ್ಮಕ್ಕೆ ಅಥವಾ ಸಂಕೇತಗಳಿಗೆ ಸೇರಿಸದೆಯೇ ಜಾತ್ಯತೀತವಾಗಿ ನೋಡುವ ಪ್ರಾಮಾಣಿಕತೆ ಬೆಳೆದು ಬರಬೇಕು. ಮದ್ರಸದ ಕುರಿತಾದ ವರದಿಯ ಮೂಲಕ ಇಂಥದ್ದೊಂದು ಅವಲೋಕನಕ್ಕೆ ಪ್ರೇರಣೆ ಕೊಟ್ಟ ಎಸ್.ಐ.ಓ.ವನ್ನು ಅಭಿನಂದಿಸೋಣ. ಹಾಗೆಯೇ ರಾಮ್‍ಪಾಲ್‍ರಿಗೆ ಕೃತಜ್ಞತೆ ಸಲ್ಲಿಸೋಣ.

Wednesday, 19 November 2014

ಪ್ರತಿ ಪ್ರತಿಭಟನೆಯ ಅಗತ್ಯವನ್ನು ಸಾರಿದ ನಂದಿತಾ ಪ್ರಕರಣ

   
ತೀರ್ಥಹಳ್ಳಿ ಶಾಂತವಾಗಿದೆ. ನಂದಿತಾ ಎಂಬ ಮಗುವಿನ ಮೃತದೇಹವನ್ನು ನೆಪವಾಗಿಟ್ಟುಕೊಂಡು ನಿರ್ದಿಷ್ಟ ಮನೆಗಳಿಗೆ ಕಲ್ಲೆಸೆದವರು, ವಾಹನಗಳಿಗೆ ಬೆಂಕಿ ಕೊಟ್ಟವರು ಮತ್ತು ಅವಾಚ್ಯ ಪದಗಳನ್ನು ಬಳಸಿದವರೆಲ್ಲ ಈಗ ಮೌನವಾಗಿದ್ದಾರೆ. ಸಿಓಡಿ ತನಿಖೆಯ ಒಂದೊಂದೇ ವಿವರಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಲೂ ಇವೆ. ನಂದಿತಾ ಪ್ರಕರಣವನ್ನು ಅವರು ಹಿಂದೂ ಮುಸ್ಲಿಮ್ ಆಗಿ ವಿಭಜಿಸಿದ್ದರು. ಆ ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಡೆತ್‍ನೋಟ್ ಆಕೆ ಬರೆದೇ ಇಲ್ಲ ಎಂದು ಹೇಳಿದ್ದರು. ಬಹುಶಃ, ಬದುಕಿರುವಾಗ ನಂದಿತಾ ಇಷ್ಟಪಡದೇ ಇರಬಹುದಾದ ವಾತಾವರಣವನ್ನು ಆಕೆಯ ಜಡದೇಹವನ್ನು ಮುಂದಿಟ್ಟುಕೊಂಡು ಅವರೆಲ್ಲ ಸೃಷ್ಟಿ ಮಾಡಿದರು. ಆ ಸಾವಿನ ಹೊಣೆಯನ್ನು ಮುಸ್ಲಿಮ್ ಸಮುದಾಯ ಹೊರಬೇಕು ಎಂಬ ರೀತಿಯಲ್ಲಿ ಆರೋಪಗಳೂ ಪ್ರಚಾರಗಳೂ ನಡೆದುವು. ಆದ್ದರಿಂದ, ಇದೀಗ ಸೃಷ್ಟಿಯಾಗಿರುವ ಶಾಂತ ವಾತಾವರಣವನ್ನು ಆ ಒಟ್ಟು ಪ್ರಕರಣದ ಅವಲೋಕನಕ್ಕಾಗಿ ಬಳಸಿಕೊಳ್ಳಬೇಕಿದೆ. ಮಗು ಯಾರದ್ದಾದರೂ ಮಗುವೇ. ಮಗುವಿನ ಹೆಸರು ‘ನಂದಿತಾ' ಎಂದಿರುವ ಕಾರಣಕ್ಕಾಗಿ ಆಕೆಯನ್ನು ಹಿಂದೂವಾಗಿಸುವುದು ಅಥವಾ ಆರೋಪಿಯ ಹೆಸರು ಸುಹಾನ್ ಎಂದಿದೆ ಎಂಬ ಕಾರಣಕ್ಕಾಗಿ ಆತನನ್ನು ಮುಸ್ಲಿಮ್ ಆಗಿಸುವುದು ಮತ್ತು ಈ ಆಧಾರದಲ್ಲಿಯೇ ಇಡೀ ಘಟನೆಯನ್ನು ನಾವು ಮತ್ತು ಅವರು ಎಂದು ವಿಭಜಿಸಿ ನೋಡುವುದೆಲ್ಲ ಧರ್ಮಗಳಿಗೆ ಮಾತ್ರವಲ್ಲ, ಆಯಾ ಧರ್ಮಗಳು ಸಾರುವ ಮಾನವತೆಯ ಸಂದೇಶಗಳಿಗೂ ವಿರುದ್ಧ. ಓರ್ವ ಸಂತ್ರಸ್ತೆ ಎಂಬ ನೆಲೆಯಲ್ಲಿ ನಂದಿತಾ ಎಲ್ಲರ ಮಗಳು. ಆದ್ದರಿಂದಲೇ ಆಕೆಯ ಮೇಲಾದ ಅನ್ಯಾಯವು ಹಿಂದೂ-ಮುಸ್ಲಿಮ್ ಎಂಬ ವರ್ಗೀಕರಣವಿಲ್ಲದೆ ಎಲ್ಲರ ಖಂಡನೆಗೂ ಅರ್ಹವಾದದ್ದು. ನಿಜವಾಗಿ, ನಂದಿತಾ ಪ್ರಕರಣದಲ್ಲಿ ಪ್ರತಿಭಟನೆಗೆ ಇಳಿಯಬೇಕಾದದ್ದು ಹಿಂದೂಗಳೋ ಮುಸ್ಲಿಮರೋ ಕ್ರೈಸ್ತರೋ ಆಗಿರಲಿಲ್ಲ. ಈ ವಿಭಜನೆಯ ಹಂಗಿಲ್ಲದೇ ಮನುಷ್ಯರೆಂಬ ನೆಲೆಯಲ್ಲಿ ಒಂದುಗೂಡಲು ಎಲ್ಲರಿಗೂ ಸಾಧ್ಯವಾಗಬೇಕಿತ್ತು. ದುರಂತ ಏನೆಂದರೆ, ಇವತ್ತು ಅನ್ಯಾಯಗಳೂ ಪ್ರತಿಭಟನೆಗಳೂ ವರ್ಗೀಕರಣಗೊಂಡುಬಿಟ್ಟಿವೆ. ಪ್ರತಿಭಟನೆ ಹಮ್ಮಿಕೊಳ್ಳುವವರಲ್ಲೂ ಬೇರೆ ಬೇರೆ ಉದ್ದೇಶಗಳಿವೆ. ಆ ಉದ್ದೇಶಗಳು ಕೆಲವೊಮ್ಮೆ ಎಷ್ಟು ಅಪಾಯಕಾರಿ ಎಂದರೆ ಅಂಥ ಪ್ರತಿಭಟನೆಯಲ್ಲಿ ಸ್ವತಃ ಸಂತ್ರಸ್ತ ಕುಟುಂಬವೇ ಭಾಗವಹಿಸಲಾರದಷ್ಟು. ಹೀಗಿರುವಾಗ, ಬೇರೆ ಬೇರೆ ಧರ್ಮಗಳಲ್ಲಿ ಗುರುತಿಸಿಕೊಂಡಿರುವ ಮಂದಿ ಆ ಗುರುತನ್ನು ಬದಿಗಿಟ್ಟು ಒಂದಾಗಬೇಕೆನ್ನುವ ಆಶಯವನ್ನು ಅಷ್ಟು ಸುಲಭದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ತೀರ್ಥಹಳ್ಳಿಯ ಪ್ರಕರಣವನ್ನೇ ಎತ್ತಿಕೊಳ್ಳಿ. ಆ ಪ್ರತಿಭಟನೆಯ ಗುರಿ ಏನಿತ್ತು? ಪ್ರತಿಭಟನಾಕಾರರ ಹಾವ-ಭಾವಗಳು ಹೇಗಿದ್ದುವು? ಅಲ್ಲಿ ಕೇಳಿ ಬರುತ್ತಿರುವ ಘೋಷಣೆಗಳು ಏನಾಗಿದ್ದುವು? ನಂದಿತಾಳ ಸಾವಿಗೆ ಕಾರಣ ಏನೆಂಬುದು ಖಚಿತಗೊಳ್ಳುವ ಮೊದಲೇ ಅವರು ಕಾರಣವನ್ನು ಪತ್ತೆಹಚ್ಚಿದವರಂತೆ ವರ್ತಿಸಿದ್ದರಲ್ಲದೇ ಅನ್ಯಾಯವನ್ನು ಖಂಡಿಸಬಯಸುವ ಮುಸ್ಲಿಮ್, ಕ್ರೈಸ್ತ ಮತ್ತು ಹಿಂದೂಗಳ ದೊಡ್ಡದೊಂದು ವರ್ಗವು ಅದರಲ್ಲಿ ಭಾಗವಹಿಸದಷ್ಟು ಆ ಪ್ರತಿಭಟನೆಯನ್ನು ಅವರು ಹದಗೆಡಿಸಿಬಿಟ್ಟಿದ್ದರು. ಇಡೀ ಪ್ರತಿಭಟನೆ ಏಕಮುಖವಾಗಿತ್ತು. ನಂದಿತಾಳ ಭಾವನೆಗಳನ್ನು ಪ್ರತಿನಿಧಿಸುವ ಏನೇನೂ ಅಲ್ಲಿರಲಿಲ್ಲ. ನಂದಿತಾ ಇಲ್ಲದ ಮನೆಯನ್ನು ಕಲ್ಪಿಸಿ ಕಣ್ಣೀರಾಗುವ ಹೆತ್ತವರಿಗೆ ಸಾಂತ್ವನವಾಗಬಹುದಾದದ್ದೂ ಅಲ್ಲಿರಲಿಲ್ಲ. ಯಾಕೆ ಹೀಗಾಯಿತೆಂದರೆ, ಪ್ರತಿಭಟನೆಯ ಕೇಂದ್ರೀಯ ಉದ್ದೇಶ ನಂದಿತಾ ಆಗಿಯೇ ಇರಲಿಲ್ಲ. ರಾಜಕೀಯ ಮತ್ತಿತರ ಅಂಶಗಳು ನಂದಿತಾಳ ನೆಪದಲ್ಲಿ ಮುನ್ನೆಲೆಗೆ ಬಂದುವು. ನಿಂದನೆ, ಬೈಗುಳ, ಬೆಂಕಿಯಿಡುವಿಕೆಗಳೆಲ್ಲ ಅದರದ್ದೇ ಉತ್ಪನ್ನ. ನಿಜವಾಗಿ, ಒಂದು ಮಗುವಿಗೆ ಸಲ್ಲಿಸುವ ಶ್ರದ್ಧಾಂಜಲಿಯ ಸ್ವರೂಪ ಈ ರೀತಿಯಲ್ಲಿರಬಾರದಿತ್ತು. ಸಮಾಜದ ಸರ್ವರೂ ಪಾಲುಗೊಳ್ಳುವ ಮತ್ತು ಮಗುವಿನ ಮೇಲಾದ ಅನ್ಯಾಯವನ್ನು ಏಕಧ್ವನಿಯಲ್ಲಿ ಪ್ರಶ್ನಿಸುವ ವಾತಾವರಣವೊಂದು ಕಾಣಿಸಿಕೊಳ್ಳಬೇಕಿತ್ತು. ಸದ್ಯ ತಣ್ಣಗಾಗಿರುವ ತೀರ್ಥಹಳ್ಳಿಯನ್ನು ಎದುರಿಟ್ಟುಕೊಂಡು ನಾವೆಲ್ಲ ಇಂಥ ಸಾಧ್ಯತೆಗಳ ಬಗ್ಗೆ ಚರ್ಚಿಸಬೇಕಿದೆ.
   ಅಂದಹಾಗೆ, ನಂದಿತಾಳ ಮೇಲೆ ಅನ್ಯಾಯ ಎಸಗಿದವರಿಗೆ ಶಿಕ್ಷೆ ಆಗುವುದಷ್ಟೇ ಇವತ್ತಿನ ಅಗತ್ಯ ಅಲ್ಲ, ಆಕೆಯ ಹೆಸರಲ್ಲಿ ಅನ್ಯಾಯ ಎಸಗಿದವರಿಗೆ ಶಿಕ್ಷೆ ಆಗಬೇಕಾದುದೂ ಅಷ್ಟೇ ಅಗತ್ಯ. ವಿಶೇಷ ಏನೆಂದರೆ, ಈ ದೇಶದಲ್ಲಿ ಇಂಥ ವಿಭಜನವಾದಿ ಪ್ರತಿಭಟನೆಗಳು ಆಗಾಗ ನಡೆಯುವುದಿದೆ. ತೀರ್ಥಹಳ್ಳಿಗಿಂತ ನಾಲ್ಕೈದು ತಿಂಗಳ ಮೊದಲು ಉತ್ತರ ಪ್ರದೇಶದ ವಿೂರತ್‍ನಲ್ಲೂ ಇಂಥದ್ದೇ ಪ್ರತಿಭಟನೆ ನಡೆದಿತ್ತು. ಪ್ರೀತಿಸಿದ ಎರಡು ಜೀವಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಅದಕ್ಕೆ ಲವ್ ಜಿಹಾದ್ ಎಂಬೊಂದು ಹೆಸರನ್ನು ಕೊಟ್ಟು ಇಡೀ ರಾಜ್ಯವನ್ನೇ ಅಲುಗಾಡಿಸಲಾಗಿತ್ತು. ಸತ್ಯಾಸತ್ಯತೆ ಬಹಿರಂಗವಾಗುವುದಕ್ಕಿಂತ ಮೊದಲೇ ಪ್ರತಿಭಟನಾಕಾರರು ಇಡೀ ಪ್ರಕರಣವನ್ನು ತನಿಖೆ ನಡೆಸಿದವರಂತೆ ವರ್ತಿಸಿದ್ದರು. ನಿರ್ದಿಷ್ಟ ಧರ್ಮವನ್ನು ನಿಂದಿಸುವುದಕ್ಕೆ ಆ ಘಟನೆಯನ್ನು ಬಳಸಿಕೊಂಡಿದ್ದರು. ‘ಬಹು ಬನಾವೋ ಭೇಟಿ ಬಚಾವೋ’ ಎಂಬ ಅಭಿಯಾನವನ್ನು ಆ ಘಟನೆಯ ನೆಪದಲ್ಲಿ ಹಮ್ಮಿಕೊಂಡಿದ್ದರು. ನಮ್ಮ ಈಶ್ವರಪ್ಪನವರಂತೆ ಸಂಸದರಾದ ಮಹಂತ ಅವೈದ್ಯನಾಥ್ ಅಲ್ಲಿ ಮಾತಾಡಿದ್ದರು. ಹೀಗೆ ವಿೂರತ್ ನಗರ ಉರಿದ ಬಳಿಕ ಸತ್ಯವು ಬಹಿರಂಗವಾಯಿತು. ಸುಳ್ಳು ಹೇಳಿಕೆ ಕೊಡುವಂತೆ ಯುವತಿಯ ತಂದೆಗೆ ಲಂಚ ಕೊಡಲಾದದ್ದೂ ಸೇರಿ ಆ ಇಡೀ ವಾಸ್ತವಾಂಶಗಳು ಬೆಳಕಿಗೆ ಬಂದುವು. ಆದರೆ ಅವು ದೊಡ್ಡ ಸದ್ದು ಮಾಡಲಿಲ್ಲ. ದಿನಂಪ್ರತಿ ಸ್ವಲ್ಪಸ್ವಲ್ಪವೇ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿ ತಣ್ಣಗಾಗಿ ಬಿಟ್ಟವು. ತೀರ್ಥಹಳ್ಳಿ ಕೂಡ ಸದ್ಯ ಅದೇ ಹಾದಿಯಲ್ಲಿ ಸಾಗುತ್ತಿರುವಂತಿದೆ. ಉದ್ವಿಗ್ನಗೊಂಡಿದ್ದ ತೀರ್ಥಹಳ್ಳಿ ಇವತ್ತು ಶಾಂತವಾಗಿದೆ. ಈ ವಾತಾವರಣದಲ್ಲಿ ನಂದಿತಾಳಿಗೆ ಸಂಬಂಧಿಸಿ ನಿಜ ವರದಿಗಳು ದಿನಂಪ್ರತಿ ವರದಿಯಾಗುತ್ತಿವೆ. ಒಂದು ರೀತಿಯಲ್ಲಿ, ತೀರ್ಥಹಳ್ಳಿಯನ್ನು ಉರಿಸಿದ ಪ್ರತಿಭಟನಾಕಾರರನ್ನು ಪ್ರಶ್ನಿಸಬೇಕಾದ ಸಂದರ್ಭ ಇದು. ನಂದಿತಾಳ ಮೇಲಾಗಿರಬಹುದಾದ ಅನ್ಯಾಯವನ್ನು ಸರ್ವ ಧರ್ಮೀಯರೂ ತಮ್ಮ ಮಗಳ ಮೇಲಿನ ಅನ್ಯಾಯ ಎಂದು ಪರಿಗಣಿಸಿ ಆಕೆಯ ಹೆಸರಲ್ಲಿ ತೀರ್ಥಹಳ್ಳಿಯನ್ನು ಉರಿಸಿದವರ ಉದ್ದೇಶ ಶುದ್ಧಿಯನ್ನು ಏಕಧ್ವನಿಯಲ್ಲಿ ಪ್ರಶ್ನಿಸಬೇಕಾಗಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕಾಗಿದೆ. ಸಮಾಜದ ಹಿತದೃಷ್ಟಿಯಿಂದ ಇಂಥದ್ದೊಂದು ಪ್ರತಿ ಪ್ರತಿಭಟನೆಯ ಅಗತ್ಯ ಇವತ್ತು ಬಹಳ ಇದೆ. ಸಮಾಜವನ್ನು ವಿಭಜಿಸುವ ಪ್ರತಿಭಟನೆಗಳಿಗೆ ಸಮಾಜದಿಂದ ಸವಾಲು ಎದುರಾಗುವುದು ಒಂದು ಆರೋಗ್ಯಕರ ಬೆಳವಣಿಗೆ. ಒಂದು ಘಟನೆಗೆ ಸುಳ್ಳು ಸ್ವರೂಪವನ್ನು ಕೊಟ್ಟು ಸಮಾಜವನ್ನು ವಿಭಜಿಸಿದವರನ್ನು ಸತ್ಯ ಸುದ್ದಿ ಹೊರಬಿದ್ದ ಬಳಿಕ ತರಾಟೆಗೆತ್ತಿಕೊಳ್ಳುವುದರಿಂದ ದೊಡ್ಡದೊಂದು ಬದಲಾವಣೆ ಸಾಧ್ಯವಿದೆ. ಹೀಗೆ ಮಾಡಿದರೆ, ವದಂತಿಗಳನ್ನು ಹರಡುವವರು ಆ ಬಳಿಕ ತುಸು ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಅವಕಾಶವಿದೆ. ಅದೇ ರೀತಿ ವ್ಯವಸ್ಥೆಯ ಮೇಲೂ ಈ ಕುರಿತಂತೆ ಒತ್ತಡ ಹೇರಬೇಕಾಗಿದೆ. ಅನ್ಯಾಯವನ್ನು ಒಂದು ನಿರ್ದಿಷ್ಟ ಸಮುದಾಯದ ಮೇಲೆ ಹೇರಿ ರಾಜಕೀಯವೋ ಇನ್ನಾವುದೋ ಲಾಭವನ್ನು ಪಡಕೊಳ್ಳುವುದಕ್ಕೆ ಪ್ರಯತ್ನಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಅಗತ್ಯವೂ ಇದೆ. ಇಲ್ಲದಿದ್ದರೆ ಈ ಸಮಾಜವನ್ನು ಉದ್ವಿಗ್ನಗೊಳಿಸುವುದಕ್ಕೆ ನಾಳೆ ಇನ್ನೊಂದು ಪ್ರಕರಣ ಹೇತುವಾಗಬಹುದು. ಸತ್ಯದ ಎದೆಗೆ ತುಳಿದಂತೆ ಅದರ ವ್ಯಾಖ್ಯಾನಗಳು ನಡೆಯಬಹುದು. ಮತ್ತೆ ಕಲ್ಲೆಸೆತ, ಬೆಂಕಿ, ಕರ್ಫ್ಯೂಗಳಿಗೂ ಅದು ಕಾರಣವಾಗಬಹುದು. ಅದಾಗುವುದಕ್ಕಿಂತ ಮೊದಲು ಪ್ರತಿ ಪ್ರತಿಭಟನೆಗಳ ಏರ್ಪಾಡುಗಳು ನಡೆಯಬೇಕು. ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಗುರುತುರಹಿತ ಪಾಲುಗೊಳ್ಳುವಿಕೆಗಳು ಆ ಪ್ರತಿಭಟನೆಯಲ್ಲಿ ನಡೆಯಬೇಕು. ಸುಳ್ಳನ್ನು ಹರಡಿ ಸಮಾಜವನ್ನು ಉದ್ವಿಗ್ನಗೊಳಿಸುವವರನ್ನು ಬಹುಸಂಖ್ಯಾತ ಸಮಾಜವು ತಿರಸ್ಕರಿಸುವುದಕ್ಕೆ ಮುಂದಾಗುವಷ್ಟು ಆ ಪ್ರತಿಭಟನೆ ಪ್ರಭಾವಶಾಲಿಯಾಗಬೇಕು. ನಂದಿತಾ ಪ್ರಕರಣವು ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗುವುದಾದರೆ ಖಂಡಿತ ಆ ಸಾವನ್ನು ಬಲಿದಾನವೆಂದೇ ಸ್ವೀಕರಿಸಿ ಗೌರವಿಸೋಣ.

Tuesday, 11 November 2014

ಜನನ ಪ್ರಕ್ರಿಯೆಯೇ ನಿಂತು ಹೋಗುವ ಜೀವನಕ್ರಮವನ್ನು ಬೆಂಬಲಿಸಬೇಕೇ?

    
   ಮೊನ್ನೆ ಅಕ್ಟೋಬರ್ 30ರಂದು ಅಮೇರಿಕದ ಬ್ಲೂಮ್‍ಬರ್ಗ್ ಬಿಸಿನೆಸ್ ವೀಕ್ ಪತ್ರಿಕೆಯಲ್ಲಿ ಪ್ರಕಟವಾದ ಬರಹವೊಂದಕ್ಕೆ ಪ್ರತಿಕ್ರಿಯೆಯಾಗಿ ಮರುದಿನ ಅಕ್ಟೋಬರ್ 31ರಂದು ರಶ್ಯದಲ್ಲಿ ಸ್ಮಾರಕವೊಂದನ್ನು ಉರುಳಿಸಲಾಯಿತು. ವಿಶ್ವಪ್ರಸಿದ್ಧ ಆ್ಯಪಲ್ ಕಂಪೆನಿಯ ಸ್ಥಾಪಕ ಅಮೇರಿಕದ ಸ್ಟೀವ್ ಜಾಬ್ಸ್ ರ ಈ ಸ್ಮಾರಕವನ್ನು ರಶ್ಯಾದ ಸೈಂಟ್ ಪೀಟರ್ಸ್‍ಬರ್ಗ್ ಕಾಲೇಜಿನ ಎದುರುಗಡೆ  2013 ಜನವರಿಯಲ್ಲಿ ಸ್ಥಾಪಿಸಲಾಗಿತ್ತು. ಸ್ಟೀವ್ ಜಾಬ್ಸ್ ರಿಗೆ ಜಾಗತಿಕವಾಗಿಯೇ ವಿಶೇಷ ಮನ್ನಣೆಯಿದೆ. ಅವರ ಸುತ್ತ ಬೆರಗಿನ ನೂರಾರು ಕತೆಗಳಿವೆ. ಶೂನ್ಯದಿಂದ ಒಂದು ಕಂಪೆನಿಯನ್ನು ಕಟ್ಟಿ ಬೆಳೆಸುವಲ್ಲಿ ಅವರು ತೋರಿದ ತಾಳ್ಮೆ, ಬುದ್ಧಿವಂತಿಕೆ, ಶ್ರಮ, ಉತ್ಸಾಹಗಳೆಲ್ಲ ಇವತ್ತು ಕೋಟ್ಯಂತರ ಮಂದಿಯನ್ನು ಪ್ರಭಾವಿತಗೊಳಿಸಿವೆ. ವರ್ಷಗಳ ಹಿಂದೆ ಕ್ಯಾನ್ಸರ್‍ನಿಂದಾಗಿ ಅವರು ಮೃತಪಟ್ಟಾಗ ಝೆಪ್ಸ್(ZEFS) ಎಂಬ ಹೆಸರಿನ ರಶ್ಯಾದ ಉದ್ಯಮಿಗಳ ಸಂಘಟನೆಯು ಅವರನ್ನು ಸ್ಮಾರಕವಾಗಿ ನಿಲ್ಲಿಸಬೇಕೆಂದು ತೀರ್ಮಾನಿಸಿತು. ಅದರಂತೆ ಎರಡು ವಿೂಟರ್ ಎತ್ತರದ ಮತ್ತು ಐ ಪೋನ್ (i Phone) ಆಕೃತಿಯ ಸ್ಮಾರಕವು 2013 ಜನವರಿಯಲ್ಲಿ ಸೈಂಟ್ ಪೀಟರ್ಸ್‍ಬರ್ಗ್‍ನಲ್ಲಿ ತಲೆ ಎತ್ತಿತು. ರಶ್ಯಾ ಮತ್ತು ಅಮೇರಿಕದ ಮಧ್ಯೆ ಸಂಬಂಧ ಉತ್ತಮವಾಗಿಲ್ಲದಿದ್ದರೂ ಜಾಬ್ಸ್ ಆ ಸಂಬಂಧಗಳಾಚೆಗೆ ಪ್ರಭಾವವನ್ನು ಬೀರಿದ್ದ. ಆದರೆ ಅದೇ ಆ್ಯಪಲ್ ಕಂಪೆನಿಯ ನೂತನ ಮುಖ್ಯಸ್ಥ (ಸಿಇಓ) ಅಮೇರಿಕದ ಟಿಮ್ ಕುಕ್‍ರು ತಾನು ಸಲಿಂಗ ಕಾಮಿ (ಗೇ) ಎಂದು ಬಿಸಿನೆಸ್ ವೀಕ್ ಪತ್ರಿಕೆಯಲ್ಲಿ ಮೊನ್ನೆ ಅಕ್ಟೋಬರ್ 30ರಂದು ಘೋಷಿಸಿದರು. ತನ್ನ ರಾಜ್ಯವಾದ ಅಲಬಾಮದಲ್ಲಿ ‘ಗೇ' ಮದುವೆಗೆ ಅನುಮತಿಯಿಲ್ಲದಿರುವುದನ್ನು ಅವರು ಟೀಕಿಸಿದರು. ಸಲಿಂಗ ಕಾಮವು ತನ್ನ ಹಕ್ಕು ಮತ್ತು ಸ್ವಾತಂತ್ರ್ಯ ಎಂದು ಅವರು ಪ್ರತಿಪಾದಿಸಿದರು. ಇದರ ಮರುದಿನವೇ ಜಾಬ್ಸ್ ರ ಸ್ಮಾರಕವನ್ನು ರಶ್ಯಾದಲ್ಲಿ ಉರುಳಿಸಲಾಯಿತು. ಸಲಿಂಗ ಕಾಮದ ಪರ ಪ್ರಚಾರಾಂದೋಲನವನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕೆಂದು ಝೆಪ್ಸ್ ಆಗ್ರಹಿಸಿತು. ಒಂದು ವೇಳೆ ಸ್ಟೀವ್ ಜಾಬ್ಸ್ ರ ಪ್ರತಿಮೆಯನ್ನು ತೆರವುಗೊಳಿಸದಿದ್ದರೆ ಅದು ಮುಂದೆ ಸಲಿಂಗ ಹೋರಾಟಕ್ಕೆ ಪ್ರೇರಣೆ ನೀಡಲು ಅವಕಾಶವಿದೆ ಎಂದೂ ಅದು ವಾದಿಸಿತು.
 ಒಂದು ರೀತಿಯಲ್ಲಿ, ನೈತಿಕ-ಅನೈತಿಕಗಳು ಅನಾದಿ ಕಾಲದಿಂದಲೂ ಚರ್ಚೆಗೊಳಗಾಗುತ್ತಾ ಬಂದಿದೆ. ಜಗತ್ತು ಬೌದ್ಧಿಕವಾಗಿ ಮತ್ತು ತಾಂತ್ರಿಕವಾಗಿ ವಿಕಸಿತವಾದಂತೆಲ್ಲ ಇಂಥ ಚರ್ಚೆಗಳು ಬಿರುಸನ್ನು ಪಡೆಯುತ್ತಲೂ ಇವೆ. ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂಬುದು ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಚರ್ಚೆ. ಸಲಿಂಗ ಮದುವೆಗೆ ಅನುಮತಿ ನೀಡಬೇಕೆಂದು ಕೋರಿ ಈಗಾಗಲೇ ಸುಪ್ರೀಮ್ ಕೋರ್ಟಿಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಬಹುಶಃ, ಮುಂದಿನ ದಿನಗಳಲ್ಲಿ ಇಂಥ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲೂ ಬಹುದು. ಯಾಕೆಂದರೆ, ಪ್ರಕೃತಿ ನಿಯಮವನ್ನು ವಿೂರುವುದೇ ಬದುಕು ಎಂದು ಆಲೋಚಿಸುವ ಮತ್ತು ಅದನ್ನು ತನ್ನ ಸ್ವಾತಂತ್ರ್ಯವೆಂದು ಪ್ರತಿಪಾದಿಸುವ ಬೆಳವಣಿಗೆಗಳಿಗೆ ಆಧುನಿಕ ಜಗತ್ತಿನಲ್ಲಿ ಮಾನ್ಯತೆ ಲಭ್ಯವಾಗುತ್ತಿದೆ. ತೋಚಿದಂತೆ ಬದುಕುವುದನ್ನೇ ಜೀವನ ಕ್ರಮ ಎಂದು ಹೇಳಿಕೊಡಲಾಗುತ್ತಿದೆ. ಈ ಜೀವನ ಕ್ರಮದಲ್ಲಿ ವೇಶ್ಯಾವಾಟಿಕೆಯೂ ಸ್ವಾತಂತ್ರ್ಯ. ಸಲಿಂಗ ರತಿಯೂ ಸ್ವಾತಂತ್ರ್ಯ. ಲಿವ್ ಇನ್ ಟುಗೆದರೂ ಸ್ವಾತಂತ್ರ್ಯ. ಆದರೆ ಇವುಗಳ ಜೊತೆಗೇ ಕೆಲವು ಪ್ರಶ್ನೆಗಳೂ ಉದ್ಭವಿಸುತ್ತವೆ. ಇಂಥ ಸ್ವಾತಂತ್ರ್ಯಗಳು ಅಂತಿಮವಾಗಿ ಸಮಾಜವನ್ನು ಎಲ್ಲಿಗೆ ತಲುಪಿಸಬಲ್ಲುದು? ಜನನ ಮತ್ತು ಮರಣ ಎಂಬುದು ಪ್ರಕೃತಿ ನಿಯಮ. ಅದರಲ್ಲೊಂದು ಸಮತೋಲನದ ಉದ್ದೇಶವಿದೆ. ಆ ಸಮತೋಲನದ ಮೇಲೆ ಮಾನವ ಜಗತ್ತು ಸ್ವಾಮ್ಯವನ್ನು ಪಡಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಪ್ರಕೃತಿ ಮುನಿದಿದೆ. ತನ್ನ ಅಸಮಾಧಾನವನ್ನು ವಿವಿಧ ರೂಪದಲ್ಲಿ ಹೊರಗೆಡಹಿದೆ. ಕುಟುಂಬಕ್ಕೊಂದೇ ಮಗು ಎಂಬ ಕಾನೂನನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸಿದ ದೇಶ ಚೀನಾ. ಆ ನಿಯಮವು ಇವತ್ತು ಚೀನಾದ ಲಿಂಗಾನುಪಾತದಲ್ಲಿ ಎಷ್ಟು ಆಳವಾದ ಗಾಯವನ್ನು ಮೂಡಿಸಿಬಿಟ್ಟಿದೆಯೆಂದರೆ, ಇದೀಗ ಆ ನಿಯಮವನ್ನೇ ಸಡಿಲಿಸಬೇಕಾಗಿ ಬಂದಿದೆ. ಒಂದೇ ಮಗು ಎಂದಾಗ ಹೆಚ್ಚಿನ ಕುಟುಂಬಗಳೆಲ್ಲ ಗಂಡು ಮಗುವನ್ನೇ ಬಯಸಿದುವು. ಹೆಣ್ಣು ಮಕ್ಕಳನ್ನು ಹೊಟ್ಟೆಯಲ್ಲೇ ಕೊಲ್ಲುವ ಕ್ರೌರ್ಯಕ್ಕೂ ಅದು ಕಾರಣವಾಯಿತು. ಚೀನಾ ಎಂದಲ್ಲ ನಮ್ಮದೇ ದೇಶದ ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತಕ್ಕೆ ಪ್ರಕೃತಿ ವಿರೋಧಿ ಗಂಡು ಪ್ರೇಮವೇ ಕಾರಣವಾಗಿದೆ. ಹರ್ಯಾಣದಲ್ಲಿ ಇವತ್ತು ಹೆಣ್ಣಿನ ಬರ ಎಷ್ಟು ಬಿಗಡಾಯಿಸಿದೆ
ಟಿಮ್ ಕುಕ್‍
ಎಂದರೆ ಬಿಹಾರದಿಂದ ವಧುಗಳನ್ನು ಹರ್ಯಾಣಕ್ಕೆ ತಂದು ಮದುವೆ ಮಾಡಿಸಲಾಗುತ್ತಿದೆ. ವಧುಗಳ ಬರದಿಂದ ಹರ್ಯಾಣದ ಪುರುಷ ಜಗತ್ತು ಕಂಗೆಟ್ಟಿದೆ. ಇಂಥ ಸ್ಥಿತಿಯಲ್ಲಿ ಸಲಿಂಗ ಕಾಮದ ಕಾನೂನು ಬದ್ಧತೆಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಈ ಜೀವನ ಕ್ರಮದಲ್ಲಿ ಗಂಡು-ಗಂಡನ್ನು ವಿವಾಹವಾಗುತ್ತಾನೆ ಅಥವಾ ಒಟ್ಟಾಗಿ ಬದುಕುತ್ತಾನೆ. ದೈಹಿಕ ಸುಖವನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ.
 ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ ಪ್ರಕೃತಿಯೇ ಅನುರಾಗವನ್ನು ಇಟ್ಟಿದೆ. ಆ ಅನುರಾಗದ  ಹಿಂದೆ ಇರುವ ಉದ್ದೇಶವು ಕೇವಲ ದೈಹಿಕ ಸುಖವನ್ನು ಹಂಚಿಕೊಳ್ಳುವುದು ಮಾತ್ರವೇ ಅಲ್ಲ. ಆ ಅನುರಾಗದ ಮೂಲಕ ಜನನ ಪ್ರಕ್ರಿಯೆಗೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಮದುವೆ ಎಂಬ ಸಾಮಾಜಿಕ ಮಾನ್ಯತೆಯಡಿಯಲ್ಲಿ ಹೆಣ್ಣು-ಗಂಡು ಒಟ್ಟಾಗುತ್ತಾರೆ. ಆ ಮೂಲಕ ಭವಿಷ್ಯದ ಪೀಳಿಗೆಯ ಉದಯವನ್ನೂ ನಿರೀಕ್ಷಿಸಲಾಗುತ್ತದೆ. ಹೀಗೆ ಹೆಣ್ಣು-ಗಂಡು ಪರಸ್ಪರ ಆಕರ್ಷಿತಗೊಳ್ಳುವುದು, ಮದುವೆಯಲ್ಲಿ ಒಂದಾಗುವುದು ಮತ್ತು ಹೊಸ ಪೀಳಿಗೆಗೆ ಜನ್ಮ ಕೊಡುವ ಮೂಲಕ ಮಾನವ ಸಂತತಿಯ ಬೆಳವಣಿಗೆಯು ಮುಂದುವರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಸಲಿಂಗ ಮದುವೆಯಲ್ಲಿ ಈ ಪ್ರಕ್ರಿಯೆಗೆ ಅವಕಾಶಗಳೇ ಇಲ್ಲ. ಸಲಿಂಗ ಕಾಮ ಎಂಬುದು ಕೇವಲ ದೈಹಿಕ ಸುಖವನ್ನು ಅನುಭವಿಸುವುದಕ್ಕಿರುವ ಒಂದು ವೇದಿಕೆಯೇ ಹೊರತು ಅದರಿಂದ ಮಾನವ ಜಗತ್ತಿಗೆ ಯಾವ ಕೊಡುಗೆಯೂ ಸಿಗುವುದಿಲ್ಲ. ಅದೊಂದು ಒಣ ಬದುಕು. ಅಲ್ಲಿ ಮಕ್ಕಳಿಲ್ಲ. ಆದ್ದರಿಂದಲೇ ಆ ಬದುಕು ಅವರಲ್ಲಿಗೇ ಕೊನೆಗೊಳ್ಳುತ್ತದೆ. ಅಂದಹಾಗೆ, ಸಲಿಂಗ ಕಾಮವು ಸ್ವಾತಂತ್ರ್ಯದ ಹೆಸರಲ್ಲಿ ಕಾನೂನುಬದ್ಧಗೊಂಡರೆ, ಅದು ಬೀರುವ ಪರಿಣಾಮ ಹೇಗಿರಬಹುದು? ಸಲಿಂಗ ಮದುವೆಗಳು ಜನಪ್ರಿಯಗೊಳ್ಳುವುದರಿಂದ ಸಮಾಜದಲ್ಲಿ ಏನೇನು ಬದಲಾವಣೆಗಳಾಗಬಹುದು? ಗದ್ದೆಗಳು, ಕಾರ್ಖಾನೆಗಳು, ಶಾಲೆಗಳು ಸಹಿತ ವಿವಿಧ ಕ್ಷೇತ್ರಗಳ ಪರಿಸ್ಥಿತಿ ಹೇಗಿದ್ದೀತು? ಜನನ ಪ್ರಕ್ರಿಯೆ ನಿಂತು ಹೋದ ಅಥವಾ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಸಮಾಜದಲ್ಲಿ ಗದ್ದೆಯನ್ನು ಉಳುವವರಾದರೂ ಯಾರಿರುತ್ತಾರೆ? ಮಕ್ಕಳು, ಕುಟುಂಬ ಎಂಬೊಂದು ಪರಿಸರವೇ ಓರ್ವರನ್ನು ಗದ್ದೆ ಉಳುವುದಕ್ಕೆ, ಬೆಳೆ ಬೆಳೆಯುವುದಕ್ಕೆ ಅಥವಾ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಹೆಚ್ಚಿನ ಬಾರಿ ಪ್ರೇರೇಪಿಸುತ್ತದೆ. ಮಕ್ಕಳೇ ಇಲ್ಲದ ಕುಟುಂಬದಲ್ಲಿ ಕೃಷಿ ಚಟುವಟಿಕೆ, ಸಂಪಾದನೆಯ ಉತ್ಸಾಹ ಸಹಜವಾಗಿಯೇ ಕಡಿಮೆ. ಹಾಗೆಯೇ, ಯುವ ಪೀಳಿಗೆಯ ಅಭಾವದಿಂದಾಗಿ ಕಾರ್ಖಾನೆಗಳು ಮುಚ್ಚಬಹುದು. ಉತ್ಪಾದನಾ ರಂಗದಲ್ಲಿ ತೀವ್ರ ಕುಸಿತ
ಉಂಟಾಗಬಹುದು. ಶಾಲೆಗಳ ಅಗತ್ಯವೇ ಕಂಡುಬರಲಾರದು. ಅಂಥದ್ದೊಂದು ಸಾಧ್ಯಾಸಾಧ್ಯತೆ ಎದುರಿರುವುದರಿಂದಲೇ ಪವಿತ್ರ ಕುರ್‍ಆನ್ ಸಹಿತ ಧಾರ್ಮಿಕ ಗ್ರಂಥಗಳು ಸಲಿಂಗ ಕಾಮವನ್ನು ಕಠಿಣವಾಗಿ ವಿರೋಧಿಸಿವೆ. ಮಾತ್ರವಲ್ಲ, ಈ ಕೃತ್ಯವನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡಿದ್ದ ಲೂತ್ ಎಂಬ ಹೆಸರಿನ ಪುರಾತನ ಸಮೂಹವೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವುದನ್ನು (ಅಧ್ಯಾಯ 11) ವಿವರಿಸಿದೆ.
 ಏನೇ ಆಗಲಿ, ಪ್ರಕೃತಿ ಮತ್ತು ವಿಕೃತಿಗಳ ನಡುವೆ ಎಷ್ಟೆಲ್ಲ ಅರ್ಥ ವ್ಯತ್ಯಾಸ ಮತ್ತು ಭಾವ ವ್ಯತ್ಯಾಸಗಳಿವೆಯೋ ಅಷ್ಟೇ ವ್ಯತ್ಯಾಸ ಸಲಿಂಗ ಕಾಮ ಮತ್ತು ವ್ಯಕ್ತಿ ಸ್ವಾತಂತ್ರ್ಯದ ನಡುವೆಯೂ ಇದೆ. ಅವೆರಡರ ನಡುವೆ ಪರಸ್ಪರ ಸಂಧಿಸದಷ್ಟು ಅಂತರವಿದೆ. ಸ್ವಾತಂತ್ರ್ಯವು ಪ್ರಕೃತಿದತ್ತವಾದರೆ ಸಲಿಂಗ ಕಾಮವು ಪ್ರಕೃತಿ ವಿರೋಧಿ. ಅವೆರಡರ ನಡುವೆ ಸಂಘರ್ಷ ಏರ್ಪಡಬಹುದೇ ಹೊರತು ಸಹಮತವಲ್ಲ. ಟಿಮ್ ಕುಕ್‍ರ ಬರಹಕ್ಕೆ ಉರುಳಿದ ಸ್ಟೀವ್ ಜಾಬ್ಸ್ ರ ಸ್ಮಾರಕವೇ ಇದಕ್ಕೆ ಅತ್ಯುತ್ತಮ ಪುರಾವೆ.

Tuesday, 4 November 2014

ಒಂದು ಸಾವಿನ ಸುತ್ತ..

   ವಾರನ್ ಆ್ಯಂಡರ್ಸನ್ ಎಂಬ ಕಾರ್ಪೋರೇಟ್ ದೊರೆಯ ಸಾವು ಮತ್ತು ಅಂತ್ಯ ಸಂಸ್ಕಾರವು ಜಗತ್ತಿನ ಗಮನಕ್ಕೆ ಬಾರದೆಯೇ ನಡೆದು ಹೋಗಿದೆ. ಅಮೇರಿಕದ ಫ್ಲೋರಿಡಾದಲ್ಲಿರುವ ವೆರೋ ಬೀಚ್ ನರ್ಸಿಂಗ್ ಹೋಮ್‍ನಲ್ಲಿ ಸೆ. 29ರಂದು ಆತ ಮೃತಪಟ್ಟಿದ್ದರೂ ಅದನ್ನು ಆತನ ಕುಟುಂಬಸ್ಥರು ಒಂದು ತಿಂಗಳ ಬಳಿಕ ಮೊನ್ನೆ ಅಕ್ಟೋಬರ್ 31ರಂದು ಜಗತ್ತಿನ ಗಮನಕ್ಕೆ ತಂದಿದ್ದಾರೆ. ಮರುದಿನವೇ ಮಧ್ಯಪ್ರದೇಶದಲ್ಲಿ ರಾಲಿಗಳು ನಡೆದಿವೆ. ಆ ಸಾವನ್ನು ‘ದೇವನು ಕೊಟ್ಟ ಶಿಕ್ಷೆ' ಎಂದು ಆ ರಾಲಿಯಲ್ಲಿ ಬಣ್ಣಿಸಲಾಗಿದೆ. ನಿಜವಾಗಿ, 1984 ಡಿಸೆಂಬರ್ 2ರ ವರೆಗೆ ವಾರನ್ ಆ್ಯಂಡರ್ಸನ್ ಜಗತ್ತಿನ ಬಹುದೊಡ್ಡ ಗೌರವಾರ್ಹ ವ್ಯಕ್ತಿ. ಅತಿ ದೊಡ್ಡ ಕಾರ್ಪೋರೇಟ್ ಕುಳ. ಆತ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ನಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (CEO) ಬೆಳೆದು ಬಂದ ರೀತಿಯನ್ನು ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಅಮೇರಿಕದಲ್ಲೂ ಅತ್ಯಂತ ಅಚ್ಚರಿಯೊಂದಿಗೆ ವರ್ಣಿಸಲಾಗುತ್ತಿತ್ತು. ಆತ ಸಾಹಸಮಯ ಕತೆಯೊಂದರ ಪಾತ್ರವಾಗಿದ್ದ. ಅಮೇರಿಕಕ್ಕೆ ವಲಸೆ ಬಂದ ಕುಟುಂಬವೊಂದರಲ್ಲಿ 1921ರಲ್ಲಿ ಓರ್ವ ಕಾರ್ಪೆಂಟರ್‍ನ ಮಗನಾಗಿ ಜನಿಸಿದ್ದು, ಯೂನಿಯನ್ ಕಾರ್ಬೈಡ್ ಕಂಪೆನಿಯಲ್ಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದು ಮತ್ತು ಕ್ರಮೇಣ ಆ ಕಂಪೆನಿಯ ಸಿಇಓ ಆದದ್ದು.. ಎಲ್ಲವೂ ಹಲವಾರು ಭಾಷಣಗಳಿಗೆ ವಸ್ತುವಾಗಿತ್ತು. ಆ ಬಗ್ಗೆ ಬರಹಗಳೂ ಪ್ರಕಟವಾಗಿದ್ದುವು. ಆ್ಯಂಡರ್ಸನ್‍ನ ಆಕೃತಿಯು ಈ ಮಟ್ಟದಲ್ಲಿ ಅಜಾನುಬಾಹು ರೂಪ ಪಡೆದಿದ್ದರಿಂದಲೇ 1984 ಡಿ. 6ರಂದು ಭೋಪಾಲ್ ಅನಿಲ ದುರಂತ ಆರೋಪದಲ್ಲಿ ಆತನ ಬಂಧನವಾದಾಗ ಖ್ಯಾತ ಉದ್ಯಮಿ ಜೆ.ಆರ್.ಡಿ. ಟಾಟಾರವರು ಆಘಾತ ವ್ಯಕ್ತಪಡಿಸಿದ್ದು. ಆ್ಯಂಡರ್ಸನ್‍ನ ಬಂಧನವು ತನ್ನನ್ನು ಗಾಬರಿ ಮತ್ತು ಬೆರಗುಗೊಳಿಸಿದೆ ಎಂದವರು ಹೇಳಿದ್ದರು. ಭಾರತೀಯ ಉದ್ಯಮ ವಲಯವು ಬಂಧನವನ್ನು ಅನ್ಯಾಯದ ಕ್ರಮ ಎಂದು ಖಂಡಿಸಿದ್ದುವು. ಬಹುಶಃ ಬಂಧನದ ಮರುದಿನವೇ ಜಾವಿೂನು ಪಡೆದುಕೊಂಡು ಸರಕಾರ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಆತ ಅಮೇರಿಕಕ್ಕೆ ಹಾರಿರುವುದಕ್ಕೆ ಉದ್ಯಮ ವಲಯದ ಈ ಆಘಾತ, ಖಂಡನೆ, ಅಚ್ಚರಿಗಳು ದೊಡ್ಡ ಪಾತ್ರ ವಹಿಸಿರಬಹುದು. ಹಾಗೆ ತೆರಳಿದ ಆ್ಯಂಡರ್ಸನ್ ಮತ್ತೆಂದೂ ಭಾರತಕ್ಕೆ ಹಿಂದಿರುಗಲಿಲ್ಲ. ಭಾರತವು ಆತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತು. ಹಾಗೆ ಘೋಷಿಸುವಾಗ ಘೋಷಿಸಿದ ಭಾರತಕ್ಕೂ ಆತನನ್ನು ಸ್ವಾಗತಿಸಿದ ಅಮೇರಿಕಕ್ಕೂ ಆತ ಎಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬುದು ಚೆನ್ನಾಗಿ ಗೊತ್ತಿತ್ತು. ಅಂದಿನಿಂದ ಇಂದಿನ ವರೆಗೆ ಸುಮಾರು 30 ವರ್ಷಗಳು ಕಳೆದುಹೋಗಿವೆ. ಈ ಮಧ್ಯೆ ಅನೇಕ ಬಾರಿ ಭಾರತ ಮತ್ತು ಅಮೇರಿಕದ ಅಧಿಕಾರಿಗಳ ನಡುವೆ ಮಾತುಕತೆ ನಡೆದಿವೆ. ಎರಡೂ ದೇಶಗಳ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ. ಅಣು ತಂತ್ರಜ್ಞಾನ, ಶಸ್ತ್ರಾಸ್ತ್ರ, ವ್ಯಾಪಾರ ನೀತಿ.. ಸಹಿತ ಹತ್ತಾರು ಒಪ್ಪಂದಗಳು ಏರ್ಪಟ್ಟಿವೆ. ಆದರೂ ತನಿಖೆಗಾಗಿ ಆ್ಯಂಡರ್ಸನ್‍ನನ್ನು ಪಡೆದುಕೊಳ್ಳಲು ಭಾರತಕ್ಕೆ ಸಾಧ್ಯವಾಗಿಲ್ಲ. ಭಾರತದ ಅಧ್ಯಕ್ಷರು  ಅಮೇರಿಕಕ್ಕೆ ಭೇಟಿ ನೀಡುವ ಅಥವಾ ಅಮೇರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುವ ಸಂದರ್ಭಗಳಲ್ಲೆಲ್ಲಾ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಪ್ರತಿಭಟನೆ ನಡೆಯುತ್ತದೆ. 1984 ಡಿ. 3ರಂದು ನಡೆದ ಅನಿಲ ದುರಂತದಲ್ಲಿ ಸಾವಿಗೀಡಾದ ಸಾವಿರಾರು ಮಂದಿಯ ಕುಟುಂಬಸ್ಥರು, ಅಂಗವಿಕಲರಾದವರು, ವಿಷಾಂಶಗಳು ತುಂಬಿಕೊಂಡ ಭೂಮಿಯನ್ನು ಬಿಡಲೂ ಆಗದೆ ಇರಲೂ ಆಗದೆ ಸಂಕಟ ಪಡುವವರೆಲ್ಲ ಅಲ್ಲಿ ಆ್ಯಂಡರ್ಸನ್‍ನ ಫೋಟೋ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ವಿಕಾರವಾಗಿ ಬೆಳೆದ ತಲೆ, ಕಣ್ಣು, ಕಿವಿ, ದೇಹಗಳುಳ್ಳ ಮಕ್ಕಳನ್ನು ತಂದು ಮಾಧ್ಯಮಗಳ ಮುಂದೆ ಪ್ರದರ್ಶಿಸುತ್ತಾರೆ. ಆದರೆ ಕಾರ್ಪೋರೇಟ್ ಲಾಬಿಯ ಮುಂದೆ ಅವೆಲ್ಲವೂ ವಿಫಲವಾಗುತ್ತಲೇ ಹೋಗಿವೆ. ಇದೀಗ ಪ್ರಕೃತಿಯೇ ಆತನನ್ನು ಸೆಳೆದುಕೊಂಡಿದೆ. ‘ಭೋಪಾಲ್ ದುರಂತವು ಅವರನ್ನು ಹಲವು ವರ್ಷಗಳಿಂದ ಮಾನಸಿಕವಾಗಿ ಬೇಟೆಯಾಡುತ್ತಿತ್ತು’ ಎಂದು ಪತ್ನಿ ಲಿಯಾನ್‍ರು CBS ನ್ಯೂಸ್‍ಗೆ ಹೇಳಿದ್ದರಲ್ಲಿಯೇ ಆ್ಯಂಡರ್ಸನ್‍ನ ಪಾಪಪ್ರಜ್ಞೆ, ಮಾನಸಿಕ ಸಂಘರ್ಷವನ್ನು ಊಹಿಸಬಹುದು.
 ಭೋಪಾಲ್ ದುರಂತದ ಸಂತ್ರಸ್ತರು ಆ್ಯಂಡರ್ಸನ್‍ನ ಫೋಟೋವನ್ನು ಕೈಬಿಟ್ಟು ಇನ್ನು ಡೌ ಕೆಮಿಕಲ್ ಕಂಪೆನಿಯ ಮುಖ್ಯಸ್ಥ ಆ್ಯಂಡ್ರ್ಯೂ ಲಿವೆರಿಸ್‍ರ  ಫೋಟೋವನ್ನು ಎತ್ತಿಕೊಳ್ಳುವುದಾಗಿ ಘೋಷಿಸಿದ್ದಾರೆ. ಯಾಕೆ ಹೀಗೆ ಎಂದರೆ, ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಇವತ್ತು ಅಮೇರಿಕದ್ದೇ ಆದ ಡೌ ಕಂಪೆನಿ ಖರೀದಿಸಿದೆ. ಮಾತ್ರವಲ್ಲ, ದುರಂತದ ಬಗ್ಗೆ ತನಗಾವ ಹೊಣೆಗಾರಿಕೆಯೂ ಇಲ್ಲ ಎಂದೂ ಅದು ಹೇಳಿಕೊಂಡಿದೆ. ಒಂದು ರೀತಿಯಲ್ಲಿ, ಇದು ಬಹುತೇಕ ಎಲ್ಲ ಕಾರ್ಪೋರೇಟರ್‍ಗಳ ಮನಸ್ಥಿತಿ. ಅವರಿಗೆ ಈ ದೇಶದ ಮಣ್ಣು ಬೇಕು, ನೀರು ಬೇಕು, ಉದ್ಯಮ ಸ್ನೇಹಿ ವಾತಾವರಣ, ತೆರಿಗೆ ರಹಿತ ಸರಕಾರಿ ಸೌಲಭ್ಯಗಳು ಬೇಕು. ಆದರೆ ಜನರ ಆರೋಗ್ಯ, ಅಭಿವೃದ್ಧಿಯನ್ನು ಹೆಚ್ಚಿನ ಬಾರಿ ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಪಶ್ಚಿಮ ಬಂಗಾಲದ ಸಿಂಗೂರು, ಕೇರಳದ ಪ್ಲಾಚಿಮಾಡ, ತಮಿಳ್ನಾಡಿನ ಕುಡಂಕುಲಂ, ಮಹಾರಾಷ್ಟ್ರದ ಜೈತಾಪುರ, ನಮ್ಮದೇ ರಾಜ್ಯದ ಗದಗ, ದಕ್ಷಿಣ ಕನ್ನಡ.. ಎಲ್ಲೆಡೆಯೂ ಕಾರ್ಪೋರೇಟ್ ಉದ್ಯಮಗಳು ಜನಸಾಮಾನ್ಯರನ್ನು ಪೀಡಿಸಿವೆ. ಅವರ ಭೂಮಿಯನ್ನು ಕಬಳಿಸುವುದಕ್ಕಾಗಿ ರಾತೋರಾತ್ರಿ ಬುಲ್ಡೋಜರ್‍ಗಳನ್ನು ಹರಿಸಿವೆ. ಕೃಷಿ ಭೂಮಿ, ಫಲವತ್ತಾದ ತೋಟ, ಮನೆಗಳನ್ನು ಅವು ಧ್ವಂಸಗೊಳಿಸಿವೆ. ಜನರ ಸುರಕ್ಷಿತತೆಗಿಂತ ತಮ್ಮ ಉದ್ಯಮದ ಸುರಕ್ಷಿತತೆಯನ್ನೇ ಮುಖ್ಯವಾಗಿಸಿಕೊಂಡು ಕಾರ್ಯಾಚರಿಸುವ ಶೈಲಿ ಕಾರ್ಪೋರೇಟ್ ಕಂಪೆನಿಗಳದ್ದು. ಭೋಪಾಲ್ ದುರಂತದ ಹಿಂದೆಯೂ ಇಂಥದ್ದೇ ಒಂದು ಕತೆಯಿದೆ. ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ  ತಾಂತ್ರಿಕ ತೊಂದರೆಗಳಿರುವ ಬಗ್ಗೆ ಆ್ಯಂಡರ್ಸನ್‍ಗೆ ಆ ಮೊದಲೇ ಮಾಹಿತಿಯಿತ್ತು ಎಂದು ಹೇಳಲಾಗುತ್ತಿದೆ. ಸೋರಿಕೆ ಉಂಟಾದರೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವಿಷಯದಲ್ಲೂ ತೀವ್ರ ಅಸಡ್ಡೆ ವಹಿಸಲಾಗಿತ್ತು ಎಂಬ ಆರೋಪವೂ ಇದೆ. ತನ್ನ 65ನೇ ಹುಟ್ಟು ಹಬ್ಬದ ಆಚರಣೆಯ ಮತ್ತಿನಲ್ಲಿ ಆತ ಕಾರ್ಖಾನೆಯ ಲೋಪದೋಷಗಳನ್ನು ಕಡೆಗಣಿಸಿದ್ದ ಎಂಬ ಅಭಿಪ್ರಾಯವೂ ಇದೆ. ಅಂತೂ ಜಾಗತಿಕವಾಗಿಯೇ ಅತಿದೊಡ್ಡ ದುರಂತಕ್ಕೆ ಕಾರಣನಾದ ಆತ ಕೊನೆಯ ವರೆಗೂ ಯಾವ ವಿಚಾರಣೆ, ಶಿಕ್ಷೆಯೂ ಇಲ್ಲದೇ ಬದುಕಿದ್ದಾನೆ. ಒಂದು ವೇಳೆ, ಆ್ಯಂಡರ್ಸನ್ ಭಾರತದವನಾಗಿದ್ದು ಅನಿಲ ದುರಂತವು ಅಮೇರಿಕದ ನ್ಯೂಯಾರ್ಕ್‍ನಲ್ಲೋ ಫ್ಲೋರಿಡಾದಲ್ಲೋ ಸಂಭವಿಸಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಅಮೇರಿಕದಿಂದ ಆತ ತಪ್ಪಿಸಿಕೊಳ್ಳಲು ಸಾಧ್ಯವಿತ್ತೇ? ಒಂದು ವೇಳೆ ತಪ್ಪಿಸಿಕೊಂಡರೂ ಆತನನ್ನು ಮರಳಿಸುವಂತೆ ಭಾರತದ ಮೇಲೆ ಅದು ಒತ್ತಡ ಹಾಕುತ್ತಿರಲಿಲ್ಲವೇ? ಬಗ್ಗದಿದ್ದರೆ ಭಾರತಕ್ಕೆ ಕಾರ್ಪೋರೇಟ್ ಕಂಪೆನಿಗಳು ಕಾಲಿಡದಂತೆ ಅದು ನೋಡಿಕೊಳ್ಳುತ್ತಿರಲಿಲ್ಲವೇ? ದಿಗ್ಬಂಧನ ವಿಧಿಸುತ್ತಿರಲಿಲ್ಲವೇ?
 ಏನೇ ಆಗಲಿ, ಆ್ಯಂಡರ್ಸನ್‍ನ ಸಾವು ಎಲ್ಲ ಕಾರ್ಪೋರೇಟ್ ದೊರೆಗಳಿಗೂ ಪಾಠವಾಗಬೇಕು. ಅವರ ಹಣಬಲ, ಜನಬಲ, ಬುಲ್ಡೋಜರ್‍ಗಳನ್ನು ಎದುರಿಸುವ ಸಾಮರ್ಥ್ಯ ರೈತರ ನೇಗಿಲಿಗೆ, ಎತ್ತಿಗೆ ಅಥವಾ ಜನಸಾಮಾನ್ಯರ ಗುಡಿಸಲುಗಳಿಗೆ ಇಲ್ಲದೇ ಇರಬಹುದು. ಆದರೆ ತೋಳ್ಬಲವೊಂದೇ ಸಾಮರ್ಥ್ಯದ ಮಾನದಂಡವಲ್ಲ. ಕೆಲವೊಮ್ಮೆ ಕಣ್ಣೀರಿಗೂ ಪ್ರಾರ್ಥನೆಗೂ ಅದರ ನೂರು ಪಟ್ಟು ಅಧಿಕ ಸಾಮರ್ಥ್ಯ ಇರುತ್ತದೆ. ಆ್ಯಂಡರ್ಸನ್‍ನ ಕದ್ದು ಮುಚ್ಚಿದ ಬದುಕು ಮತ್ತು ರಹಸ್ಯ ಸಾವು ಇದನ್ನೇ ಹೇಳುತ್ತದೆ.