ತೀರ್ಥಹಳ್ಳಿ ಶಾಂತವಾಗಿದೆ. ನಂದಿತಾ ಎಂಬ ಮಗುವಿನ ಮೃತದೇಹವನ್ನು ನೆಪವಾಗಿಟ್ಟುಕೊಂಡು ನಿರ್ದಿಷ್ಟ ಮನೆಗಳಿಗೆ ಕಲ್ಲೆಸೆದವರು, ವಾಹನಗಳಿಗೆ ಬೆಂಕಿ ಕೊಟ್ಟವರು ಮತ್ತು ಅವಾಚ್ಯ ಪದಗಳನ್ನು ಬಳಸಿದವರೆಲ್ಲ ಈಗ ಮೌನವಾಗಿದ್ದಾರೆ. ಸಿಓಡಿ ತನಿಖೆಯ ಒಂದೊಂದೇ ವಿವರಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಲೂ ಇವೆ. ನಂದಿತಾ ಪ್ರಕರಣವನ್ನು ಅವರು ಹಿಂದೂ ಮುಸ್ಲಿಮ್ ಆಗಿ ವಿಭಜಿಸಿದ್ದರು. ಆ ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಡೆತ್‍ನೋಟ್ ಆಕೆ ಬರೆದೇ ಇಲ್ಲ ಎಂದು ಹೇಳಿದ್ದರು. ಬಹುಶಃ, ಬದುಕಿರುವಾಗ ನಂದಿತಾ ಇಷ್ಟಪಡದೇ ಇರಬಹುದಾದ ವಾತಾವರಣವನ್ನು ಆಕೆಯ ಜಡದೇಹವನ್ನು ಮುಂದಿಟ್ಟುಕೊಂಡು ಅವರೆಲ್ಲ ಸೃಷ್ಟಿ ಮಾಡಿದರು. ಆ ಸಾವಿನ ಹೊಣೆಯನ್ನು ಮುಸ್ಲಿಮ್ ಸಮುದಾಯ ಹೊರಬೇಕು ಎಂಬ ರೀತಿಯಲ್ಲಿ ಆರೋಪಗಳೂ ಪ್ರಚಾರಗಳೂ ನಡೆದುವು. ಆದ್ದರಿಂದ, ಇದೀಗ ಸೃಷ್ಟಿಯಾಗಿರುವ ಶಾಂತ ವಾತಾವರಣವನ್ನು ಆ ಒಟ್ಟು ಪ್ರಕರಣದ ಅವಲೋಕನಕ್ಕಾಗಿ ಬಳಸಿಕೊಳ್ಳಬೇಕಿದೆ. ಮಗು ಯಾರದ್ದಾದರೂ ಮಗುವೇ. ಮಗುವಿನ ಹೆಸರು ‘ನಂದಿತಾ' ಎಂದಿರುವ ಕಾರಣಕ್ಕಾಗಿ ಆಕೆಯನ್ನು ಹಿಂದೂವಾಗಿಸುವುದು ಅಥವಾ ಆರೋಪಿಯ ಹೆಸರು ಸುಹಾನ್ ಎಂದಿದೆ ಎಂಬ ಕಾರಣಕ್ಕಾಗಿ ಆತನನ್ನು ಮುಸ್ಲಿಮ್ ಆಗಿಸುವುದು ಮತ್ತು ಈ ಆಧಾರದಲ್ಲಿಯೇ ಇಡೀ ಘಟನೆಯನ್ನು ನಾವು ಮತ್ತು ಅವರು ಎಂದು ವಿಭಜಿಸಿ ನೋಡುವುದೆಲ್ಲ ಧರ್ಮಗಳಿಗೆ ಮಾತ್ರವಲ್ಲ, ಆಯಾ ಧರ್ಮಗಳು ಸಾರುವ ಮಾನವತೆಯ ಸಂದೇಶಗಳಿಗೂ ವಿರುದ್ಧ. ಓರ್ವ ಸಂತ್ರಸ್ತೆ ಎಂಬ ನೆಲೆಯಲ್ಲಿ ನಂದಿತಾ ಎಲ್ಲರ ಮಗಳು. ಆದ್ದರಿಂದಲೇ ಆಕೆಯ ಮೇಲಾದ ಅನ್ಯಾಯವು ಹಿಂದೂ-ಮುಸ್ಲಿಮ್ ಎಂಬ ವರ್ಗೀಕರಣವಿಲ್ಲದೆ ಎಲ್ಲರ ಖಂಡನೆಗೂ ಅರ್ಹವಾದದ್ದು. ನಿಜವಾಗಿ, ನಂದಿತಾ ಪ್ರಕರಣದಲ್ಲಿ ಪ್ರತಿಭಟನೆಗೆ ಇಳಿಯಬೇಕಾದದ್ದು ಹಿಂದೂಗಳೋ ಮುಸ್ಲಿಮರೋ ಕ್ರೈಸ್ತರೋ ಆಗಿರಲಿಲ್ಲ. ಈ ವಿಭಜನೆಯ ಹಂಗಿಲ್ಲದೇ ಮನುಷ್ಯರೆಂಬ ನೆಲೆಯಲ್ಲಿ ಒಂದುಗೂಡಲು ಎಲ್ಲರಿಗೂ ಸಾಧ್ಯವಾಗಬೇಕಿತ್ತು. ದುರಂತ ಏನೆಂದರೆ, ಇವತ್ತು ಅನ್ಯಾಯಗಳೂ ಪ್ರತಿಭಟನೆಗಳೂ ವರ್ಗೀಕರಣಗೊಂಡುಬಿಟ್ಟಿವೆ. ಪ್ರತಿಭಟನೆ ಹಮ್ಮಿಕೊಳ್ಳುವವರಲ್ಲೂ ಬೇರೆ ಬೇರೆ ಉದ್ದೇಶಗಳಿವೆ. ಆ ಉದ್ದೇಶಗಳು ಕೆಲವೊಮ್ಮೆ ಎಷ್ಟು ಅಪಾಯಕಾರಿ ಎಂದರೆ ಅಂಥ ಪ್ರತಿಭಟನೆಯಲ್ಲಿ ಸ್ವತಃ ಸಂತ್ರಸ್ತ ಕುಟುಂಬವೇ ಭಾಗವಹಿಸಲಾರದಷ್ಟು. ಹೀಗಿರುವಾಗ, ಬೇರೆ ಬೇರೆ ಧರ್ಮಗಳಲ್ಲಿ ಗುರುತಿಸಿಕೊಂಡಿರುವ ಮಂದಿ ಆ ಗುರುತನ್ನು ಬದಿಗಿಟ್ಟು ಒಂದಾಗಬೇಕೆನ್ನುವ ಆಶಯವನ್ನು ಅಷ್ಟು ಸುಲಭದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ತೀರ್ಥಹಳ್ಳಿಯ ಪ್ರಕರಣವನ್ನೇ ಎತ್ತಿಕೊಳ್ಳಿ. ಆ ಪ್ರತಿಭಟನೆಯ ಗುರಿ ಏನಿತ್ತು? ಪ್ರತಿಭಟನಾಕಾರರ ಹಾವ-ಭಾವಗಳು ಹೇಗಿದ್ದುವು? ಅಲ್ಲಿ ಕೇಳಿ ಬರುತ್ತಿರುವ ಘೋಷಣೆಗಳು ಏನಾಗಿದ್ದುವು? ನಂದಿತಾಳ ಸಾವಿಗೆ ಕಾರಣ ಏನೆಂಬುದು ಖಚಿತಗೊಳ್ಳುವ ಮೊದಲೇ ಅವರು ಕಾರಣವನ್ನು ಪತ್ತೆಹಚ್ಚಿದವರಂತೆ ವರ್ತಿಸಿದ್ದರಲ್ಲದೇ ಅನ್ಯಾಯವನ್ನು ಖಂಡಿಸಬಯಸುವ ಮುಸ್ಲಿಮ್, ಕ್ರೈಸ್ತ ಮತ್ತು ಹಿಂದೂಗಳ ದೊಡ್ಡದೊಂದು ವರ್ಗವು ಅದರಲ್ಲಿ ಭಾಗವಹಿಸದಷ್ಟು ಆ ಪ್ರತಿಭಟನೆಯನ್ನು ಅವರು ಹದಗೆಡಿಸಿಬಿಟ್ಟಿದ್ದರು. ಇಡೀ ಪ್ರತಿಭಟನೆ ಏಕಮುಖವಾಗಿತ್ತು. ನಂದಿತಾಳ ಭಾವನೆಗಳನ್ನು ಪ್ರತಿನಿಧಿಸುವ ಏನೇನೂ ಅಲ್ಲಿರಲಿಲ್ಲ. ನಂದಿತಾ ಇಲ್ಲದ ಮನೆಯನ್ನು ಕಲ್ಪಿಸಿ ಕಣ್ಣೀರಾಗುವ ಹೆತ್ತವರಿಗೆ ಸಾಂತ್ವನವಾಗಬಹುದಾದದ್ದೂ ಅಲ್ಲಿರಲಿಲ್ಲ. ಯಾಕೆ ಹೀಗಾಯಿತೆಂದರೆ, ಪ್ರತಿಭಟನೆಯ ಕೇಂದ್ರೀಯ ಉದ್ದೇಶ ನಂದಿತಾ ಆಗಿಯೇ ಇರಲಿಲ್ಲ. ರಾಜಕೀಯ ಮತ್ತಿತರ ಅಂಶಗಳು ನಂದಿತಾಳ ನೆಪದಲ್ಲಿ ಮುನ್ನೆಲೆಗೆ ಬಂದುವು. ನಿಂದನೆ, ಬೈಗುಳ, ಬೆಂಕಿಯಿಡುವಿಕೆಗಳೆಲ್ಲ ಅದರದ್ದೇ ಉತ್ಪನ್ನ. ನಿಜವಾಗಿ, ಒಂದು ಮಗುವಿಗೆ ಸಲ್ಲಿಸುವ ಶ್ರದ್ಧಾಂಜಲಿಯ ಸ್ವರೂಪ ಈ ರೀತಿಯಲ್ಲಿರಬಾರದಿತ್ತು. ಸಮಾಜದ ಸರ್ವರೂ ಪಾಲುಗೊಳ್ಳುವ ಮತ್ತು ಮಗುವಿನ ಮೇಲಾದ ಅನ್ಯಾಯವನ್ನು ಏಕಧ್ವನಿಯಲ್ಲಿ ಪ್ರಶ್ನಿಸುವ ವಾತಾವರಣವೊಂದು ಕಾಣಿಸಿಕೊಳ್ಳಬೇಕಿತ್ತು. ಸದ್ಯ ತಣ್ಣಗಾಗಿರುವ ತೀರ್ಥಹಳ್ಳಿಯನ್ನು ಎದುರಿಟ್ಟುಕೊಂಡು ನಾವೆಲ್ಲ ಇಂಥ ಸಾಧ್ಯತೆಗಳ ಬಗ್ಗೆ ಚರ್ಚಿಸಬೇಕಿದೆ.
ಅಂದಹಾಗೆ, ನಂದಿತಾಳ ಮೇಲೆ ಅನ್ಯಾಯ ಎಸಗಿದವರಿಗೆ ಶಿಕ್ಷೆ ಆಗುವುದಷ್ಟೇ ಇವತ್ತಿನ ಅಗತ್ಯ ಅಲ್ಲ, ಆಕೆಯ ಹೆಸರಲ್ಲಿ ಅನ್ಯಾಯ ಎಸಗಿದವರಿಗೆ ಶಿಕ್ಷೆ ಆಗಬೇಕಾದುದೂ ಅಷ್ಟೇ ಅಗತ್ಯ. ವಿಶೇಷ ಏನೆಂದರೆ, ಈ ದೇಶದಲ್ಲಿ ಇಂಥ ವಿಭಜನವಾದಿ ಪ್ರತಿಭಟನೆಗಳು ಆಗಾಗ ನಡೆಯುವುದಿದೆ. ತೀರ್ಥಹಳ್ಳಿಗಿಂತ ನಾಲ್ಕೈದು ತಿಂಗಳ ಮೊದಲು ಉತ್ತರ ಪ್ರದೇಶದ ವಿೂರತ್‍ನಲ್ಲೂ ಇಂಥದ್ದೇ ಪ್ರತಿಭಟನೆ ನಡೆದಿತ್ತು. ಪ್ರೀತಿಸಿದ ಎರಡು ಜೀವಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಅದಕ್ಕೆ ಲವ್ ಜಿಹಾದ್ ಎಂಬೊಂದು ಹೆಸರನ್ನು ಕೊಟ್ಟು ಇಡೀ ರಾಜ್ಯವನ್ನೇ ಅಲುಗಾಡಿಸಲಾಗಿತ್ತು. ಸತ್ಯಾಸತ್ಯತೆ ಬಹಿರಂಗವಾಗುವುದಕ್ಕಿಂತ ಮೊದಲೇ ಪ್ರತಿಭಟನಾಕಾರರು ಇಡೀ ಪ್ರಕರಣವನ್ನು ತನಿಖೆ ನಡೆಸಿದವರಂತೆ ವರ್ತಿಸಿದ್ದರು. ನಿರ್ದಿಷ್ಟ ಧರ್ಮವನ್ನು ನಿಂದಿಸುವುದಕ್ಕೆ ಆ ಘಟನೆಯನ್ನು ಬಳಸಿಕೊಂಡಿದ್ದರು. ‘ಬಹು ಬನಾವೋ ಭೇಟಿ ಬಚಾವೋ’ ಎಂಬ ಅಭಿಯಾನವನ್ನು ಆ ಘಟನೆಯ ನೆಪದಲ್ಲಿ ಹಮ್ಮಿಕೊಂಡಿದ್ದರು. ನಮ್ಮ ಈಶ್ವರಪ್ಪನವರಂತೆ ಸಂಸದರಾದ ಮಹಂತ ಅವೈದ್ಯನಾಥ್ ಅಲ್ಲಿ ಮಾತಾಡಿದ್ದರು. ಹೀಗೆ ವಿೂರತ್ ನಗರ ಉರಿದ ಬಳಿಕ ಸತ್ಯವು ಬಹಿರಂಗವಾಯಿತು. ಸುಳ್ಳು ಹೇಳಿಕೆ ಕೊಡುವಂತೆ ಯುವತಿಯ ತಂದೆಗೆ ಲಂಚ ಕೊಡಲಾದದ್ದೂ ಸೇರಿ ಆ ಇಡೀ ವಾಸ್ತವಾಂಶಗಳು ಬೆಳಕಿಗೆ ಬಂದುವು. ಆದರೆ ಅವು ದೊಡ್ಡ ಸದ್ದು ಮಾಡಲಿಲ್ಲ. ದಿನಂಪ್ರತಿ ಸ್ವಲ್ಪಸ್ವಲ್ಪವೇ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿ ತಣ್ಣಗಾಗಿ ಬಿಟ್ಟವು. ತೀರ್ಥಹಳ್ಳಿ ಕೂಡ ಸದ್ಯ ಅದೇ ಹಾದಿಯಲ್ಲಿ ಸಾಗುತ್ತಿರುವಂತಿದೆ. ಉದ್ವಿಗ್ನಗೊಂಡಿದ್ದ ತೀರ್ಥಹಳ್ಳಿ ಇವತ್ತು ಶಾಂತವಾಗಿದೆ. ಈ ವಾತಾವರಣದಲ್ಲಿ ನಂದಿತಾಳಿಗೆ ಸಂಬಂಧಿಸಿ ನಿಜ ವರದಿಗಳು ದಿನಂಪ್ರತಿ ವರದಿಯಾಗುತ್ತಿವೆ. ಒಂದು ರೀತಿಯಲ್ಲಿ, ತೀರ್ಥಹಳ್ಳಿಯನ್ನು ಉರಿಸಿದ ಪ್ರತಿಭಟನಾಕಾರರನ್ನು ಪ್ರಶ್ನಿಸಬೇಕಾದ ಸಂದರ್ಭ ಇದು. ನಂದಿತಾಳ ಮೇಲಾಗಿರಬಹುದಾದ ಅನ್ಯಾಯವನ್ನು ಸರ್ವ ಧರ್ಮೀಯರೂ ತಮ್ಮ ಮಗಳ ಮೇಲಿನ ಅನ್ಯಾಯ ಎಂದು ಪರಿಗಣಿಸಿ ಆಕೆಯ ಹೆಸರಲ್ಲಿ ತೀರ್ಥಹಳ್ಳಿಯನ್ನು ಉರಿಸಿದವರ ಉದ್ದೇಶ ಶುದ್ಧಿಯನ್ನು ಏಕಧ್ವನಿಯಲ್ಲಿ ಪ್ರಶ್ನಿಸಬೇಕಾಗಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕಾಗಿದೆ. ಸಮಾಜದ ಹಿತದೃಷ್ಟಿಯಿಂದ ಇಂಥದ್ದೊಂದು ಪ್ರತಿ ಪ್ರತಿಭಟನೆಯ ಅಗತ್ಯ ಇವತ್ತು ಬಹಳ ಇದೆ. ಸಮಾಜವನ್ನು ವಿಭಜಿಸುವ ಪ್ರತಿಭಟನೆಗಳಿಗೆ ಸಮಾಜದಿಂದ ಸವಾಲು ಎದುರಾಗುವುದು ಒಂದು ಆರೋಗ್ಯಕರ ಬೆಳವಣಿಗೆ. ಒಂದು ಘಟನೆಗೆ ಸುಳ್ಳು ಸ್ವರೂಪವನ್ನು ಕೊಟ್ಟು ಸಮಾಜವನ್ನು ವಿಭಜಿಸಿದವರನ್ನು ಸತ್ಯ ಸುದ್ದಿ ಹೊರಬಿದ್ದ ಬಳಿಕ ತರಾಟೆಗೆತ್ತಿಕೊಳ್ಳುವುದರಿಂದ ದೊಡ್ಡದೊಂದು ಬದಲಾವಣೆ ಸಾಧ್ಯವಿದೆ. ಹೀಗೆ ಮಾಡಿದರೆ, ವದಂತಿಗಳನ್ನು ಹರಡುವವರು ಆ ಬಳಿಕ ತುಸು ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಅವಕಾಶವಿದೆ. ಅದೇ ರೀತಿ ವ್ಯವಸ್ಥೆಯ ಮೇಲೂ ಈ ಕುರಿತಂತೆ ಒತ್ತಡ ಹೇರಬೇಕಾಗಿದೆ. ಅನ್ಯಾಯವನ್ನು ಒಂದು ನಿರ್ದಿಷ್ಟ ಸಮುದಾಯದ ಮೇಲೆ ಹೇರಿ ರಾಜಕೀಯವೋ ಇನ್ನಾವುದೋ ಲಾಭವನ್ನು ಪಡಕೊಳ್ಳುವುದಕ್ಕೆ ಪ್ರಯತ್ನಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಅಗತ್ಯವೂ ಇದೆ. ಇಲ್ಲದಿದ್ದರೆ ಈ ಸಮಾಜವನ್ನು ಉದ್ವಿಗ್ನಗೊಳಿಸುವುದಕ್ಕೆ ನಾಳೆ ಇನ್ನೊಂದು ಪ್ರಕರಣ ಹೇತುವಾಗಬಹುದು. ಸತ್ಯದ ಎದೆಗೆ ತುಳಿದಂತೆ ಅದರ ವ್ಯಾಖ್ಯಾನಗಳು ನಡೆಯಬಹುದು. ಮತ್ತೆ ಕಲ್ಲೆಸೆತ, ಬೆಂಕಿ, ಕರ್ಫ್ಯೂಗಳಿಗೂ ಅದು ಕಾರಣವಾಗಬಹುದು. ಅದಾಗುವುದಕ್ಕಿಂತ ಮೊದಲು ಪ್ರತಿ ಪ್ರತಿಭಟನೆಗಳ ಏರ್ಪಾಡುಗಳು ನಡೆಯಬೇಕು. ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಗುರುತುರಹಿತ ಪಾಲುಗೊಳ್ಳುವಿಕೆಗಳು ಆ ಪ್ರತಿಭಟನೆಯಲ್ಲಿ ನಡೆಯಬೇಕು. ಸುಳ್ಳನ್ನು ಹರಡಿ ಸಮಾಜವನ್ನು ಉದ್ವಿಗ್ನಗೊಳಿಸುವವರನ್ನು ಬಹುಸಂಖ್ಯಾತ ಸಮಾಜವು ತಿರಸ್ಕರಿಸುವುದಕ್ಕೆ ಮುಂದಾಗುವಷ್ಟು ಆ ಪ್ರತಿಭಟನೆ ಪ್ರಭಾವಶಾಲಿಯಾಗಬೇಕು. ನಂದಿತಾ ಪ್ರಕರಣವು ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗುವುದಾದರೆ ಖಂಡಿತ ಆ ಸಾವನ್ನು ಬಲಿದಾನವೆಂದೇ ಸ್ವೀಕರಿಸಿ ಗೌರವಿಸೋಣ.
No comments:
Post a Comment