Tuesday, 28 April 2015

  ಸುಳ್ಳಿನ ಮುಖವಾಡವನ್ನು ಕಿತ್ತೊಗೆದ ಗೋವು ಮತ್ತು ಹೆಣ್ಣು

    ಕಳೆದವಾರ ಎರಡು ಗಮನಾರ್ಹ ಸುದ್ದಿಗಳು ಪ್ರಕಟವಾದುವು. ಒಂದು ಗೋಮಾಂಸಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ಭ್ರೂಣಹತ್ಯೆಗೆ ಸಂಬಂಧಿಸಿದ್ದು. ಗೋವನ್ನು ಮತ್ತು ಹೆಣ್ಣನ್ನು ಪೂಜನೀಯವಾಗಿ ಕಾಣುವ ದೇಶ ಎಂಬ ನೆಲೆಯಲ್ಲಿ ಈ ಸುದ್ದಿಗಳು ಗಮನಾರ್ಹವಷ್ಟೇ ಅಲ್ಲ, ಮಹತ್ವಪೂರ್ಣ ಮತ್ತು ಅತಿ ಗಂಭೀರವಾದುದು. ಗೋಹತ್ಯೆಯನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವುದು ಮತ್ತು ಅದನ್ನು ಚುನಾವಣಾ ಅಜೆಂಡಾವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಮುಂದಿರಿಸಿದ್ದು ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ. ಅಕ್ರಮ ಗೋ ಸಾಗಾಟದ ಹೆಸರಲ್ಲಿ ಹಲ್ಲೆ ನಡೆಸುವವರಲ್ಲಿ ಬಿಜೆಪಿ ಕಾರ್ಯಕರ್ತರಿದ್ದಾರೆ. ಗೋವಿಗೆ ಹಿಂದೂ ಧರ್ಮದಲ್ಲಿರುವ ಪ್ರಾಮುಖ್ಯತೆಯ ಕುರಿತಂತೆ ಭಾವುಕ ಭಾಷಣ ಮಾಡುವವರಲ್ಲೂ ಆ ಪಕ್ಷದವರಿದ್ದಾರೆ. ಯಾವುದೇ ಪ್ರತಿಭಟನೆ ಅಥವಾ ಅಭಿಯಾನವನ್ನು ಗೋಪೂಜೆಯ ಮೂಲಕ ಆರಂಭಿಸುವ ಕ್ರಮವೂ ಆ ಪಕ್ಷದಲ್ಲಿದೆ. ಆದ್ದರಿಂದಲೇ, ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಈ ದೇಶ ಗೋಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ಜಿಗಿದಿದೆ ಎಂಬ ಕಳೆದವಾರದ ಸುದ್ದಿಯು ಆಶ್ಚರ್ಯಕರವಾಗಿ ಕಾಣಿಸುತ್ತದೆ. ಜಾಗತಿಕ ಗೋಮಾಂಸ ರಫ್ತಿನ ಬಗ್ಗೆ ಅಮೇರಿಕದ ಕೃಷಿ ಇಲಾಖೆಯು (USDA) ಕಳೆದವಾರ ವರದಿಯನ್ನು ಪ್ರಕಟಿಸಿದ್ದು, ಅದರ ಪ್ರಕಾರ, ಭಾರತವು ಗೋಮಾಂಸ ರಫ್ತಿನಲ್ಲಿ ಬ್ರೆಝಿಲನ್ನು ಹಿಂದಿಕ್ಕಿದೆ. ಈ ವರ್ಷ ಭಾರತದಿಂದ ಅತೀ ಹೆಚ್ಚು ಗೋಮಾಂಸ ರಫ್ತಾಗಬಹುದೆಂಬ ನಿರೀಕ್ಷೆಯನ್ನೂ ಅದು ವ್ಯಕ್ತಪಡಿಸಿದೆ. ಈ ಬೆಳವಣಿಗೆಗೆ ಏನೆನ್ನಬೇಕು? ಒಂದು ಕಡೆ ಗೋವಿನ ಬಗ್ಗೆ ಅತೀವ ಕಾಳಜಿಯನ್ನು ವ್ಯಕ್ತಪಡಿಸುವ ಸರಕಾರ, ಇನ್ನೊಂದು ಕಡೆ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು - ಏನಿದರ ಅರ್ಥ? ಮಹಾರಾಷ್ಟ್ರದ ಬಿಜೆಪಿ ಸರಕಾರವು ಜಾನುವಾರು ಹತ್ಯೆಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಿದೆ. ಹರ್ಯಾಣದ ಬಿಜೆಪಿ ಸರಕಾರವು ಶೀಘ್ರವೇ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸಲಿದೆ. ಆದರೂ ಗೋಮಾಂಸದ ರಫ್ತಿನಲ್ಲಿ ಸತತ ಏರಿಕೆಯಾಗುತ್ತಿರುವುದು ಹೇಗೆ ಮತ್ತು ಏಕೆ? ಜನಸಾಮಾನ್ಯನಿಗೂ ಅರ್ಥವಾಗುವ ಒಂದು ಸರಳ ಲೆಕ್ಕಾಚಾರವಿದೆ. ಅದೇನೆಂದರೆ, ನೀವು ಬಟಾಟೆ ಉತ್ಪಾದನೆಗೆ ನಿಷೇಧ ವಿಧಿಸಿದರೆ ಆ ಬಳಿಕ ಬಟಾಟೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ. ಬೇರೆಡೆಗೆ ರಫ್ತಾಗುವುದಕ್ಕೆ ಸಾಧ್ಯವೂ ಇಲ್ಲ. ನಿಷೇಧಕ್ಕೆ ಒಳಗಾಗುವ ಎಲ್ಲ ವಸ್ತುಗಳ ಹಣೆಬರಹವೂ ಇದುವೇ. ಆದರೆ ಗೋಮಾಂಸದ ವಿಷಯದಲ್ಲಿ ಈ ಲೆಕ್ಕಾಚಾರ ದಿಕ್ಕು ತಪ್ಪುತ್ತಿರುವುದೇಕೆ? ನಿಷೇಧಕ್ಕೆ ಒಳಗಾದ ಮಾಂಸವೇ ಅತೀ ಹೆಚ್ಚು ರಫ್ತಾಗುತ್ತಿರುವುದರ ಹಿಂದಿನ ಕಾರಣಗಳೇನು? ಅಂದಹಾಗೆ, ಜಾನುವಾರು ಮಾಂಸವನ್ನು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡುವ ಈ ದೇಶದ ಪ್ರಮುಖ 6 ಕಂಪೆನಿಗಳಲ್ಲಿ ಸತೀಶ್ ಮತ್ತು ಅತುಲ್ ಅಗರ್ವಾಲ್‍ರ ಅಲ್ ಕಬೀರ್ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಸುನೀಲ್ ಕಪೂರ್ ಮಾಲಿಕತ್ವದ ಅರೇಬಿಯನ್ ಎಕ್ಸ್ ಪೋರ್ಟ್ಸ್  ಪ್ರೈವೇಟ್ ಲಿಮಿಟೆಡ್, ಮದನ್ ಅಬ್ಬೋಟ್ ಅವರ ಎಂ.ಕೆ.ಆರ್. ಫ್ರೋಝನ್ ಫುಡ್ ಎಕ್ಸ್ ಪೋರ್ಟ್ಸ್  ಪ್ರೈವೇಟ್ ಲಿಮಿಟೆಡ್ ಮತ್ತು ಎ.ಎಸ್. ಬಿಂದ್ರಾ ಅವರ ಪಿ.ಎಂ.ಎಲ್. ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ಗಳಿಗೆ ಜಾನುವಾರು ಎಲ್ಲಿಂದ ಸಾಗಾಟವಾಗುತ್ತಿದೆ? ಇಲ್ಲಿಗೆ ಸಾಗಾಟವಾಗುವ ಜಾನುವಾರುಗಳನ್ನೇಕೆ ತಡೆಹಿಡಿಯಲಾಗುತ್ತಿಲ್ಲ? ಈ ಕಂಪೆನಿಗಳ ಮೇಲೆ ದಾಳಿ ನಡೆಸಿ ಈ ಮಾಂಸೋದ್ಯಮವನ್ನು ತಡೆಯುವ ಪ್ರಯತ್ನಗಳೇಕೆ ನಡೆಯುತ್ತಿಲ್ಲ? ಈ ಕಂಪೆನಿಗಳ ಪರವಾನಿಗೆಯನ್ನು ನವೀಕರಿಸುತ್ತಿರುವವರು ಯಾರು? ಒಂದು ಕಡೆ ಗೋ ಹತ್ಯೆಯ ವಿರುದ್ಧ ಬಿಜೆಪಿ ಕಟು ಭಾಷೆಯಲ್ಲಿ ಮಾತಾಡುತ್ತದೆ. ಅದನ್ನು ಪೂಜನೀಯವೆಂದು ಘೋಷಿಸುತ್ತದೆ. ಆದರಿಸುತ್ತದೆ. ಇದನ್ನು ಗೌರವಿಸೋಣ. ಆದರೆ ಇನ್ನೊಂದು ಕಡೆ ಗೋ ಹತ್ಯೆಯನ್ನು ಬೃಹತ್ ಪ್ರಮಾಣದಲ್ಲಿ ನಡೆಸುವ ಮತ್ತು ವಿದೇಶಗಳಿಗೆ ಮಾಂಸ ರಫ್ತು ಮಾಡುವ ಕಂಪೆನಿಗಳ ಬಗ್ಗೆ ಇದೇ ಪಕ್ಷ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಹಾಗಂತ, ಈ ಕಂಪೆನಿಗಳೆಲ್ಲ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇರುವುದಲ್ಲವಲ್ಲ. ಮುಂಬಯಿ, ದೆಹಲಿ, ಚಂಡೀಗಢದಲ್ಲೂ ಈ ಕಂಪೆನಿಗಳ ಕಚೇರಿಗಳಿವೆ. ಹೀಗಿದ್ದೂ ಈ ಬಗ್ಗೆ ಯಾವ ಹೇಳಿಕೆಯನ್ನೂ ಬಿಜೆಪಿ ಹೊರಡಿಸುತ್ತಿಲ್ಲವೇಕೆ? ಅಥವಾ ಬಿಜೆಪಿಯ ಉದ್ದೇಶವು ಭಾರತೀಯರನ್ನು ಗೋಮಾಂಸ ಸೇವನೆಯಿಂದ ತಡೆಯುವುದು ಮಾತ್ರವೇ, ವಿದೇಶಗಳಿಗೆ ರಫ್ತು ಮಾಡುವುದರಿಂದ ತೊಂದರೆಯಿಲ್ಲ ಎಂದೇ?
 ದುರಂತ ಏನೆಂದರೆ, ಗೋಮಾಂಸದ ರಫ್ತಿನಲ್ಲಿ ದೇಶ ಬ್ರೆಝಿಲನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ತಲುಪಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಈ ದೇಶದಲ್ಲಿ ಹೆಣ್ಣಿನ ಸಂತತಿ ತೀವ್ರವಾಗಿ ನಶಿಸುತ್ತಿದೆಯೆಂಬ ಸುದ್ದಿ ಪ್ರಕಟವಾಗಿದೆ. 20ರ ಪ್ರಾಯದ 5.63 ಕೋಟಿ ಯುವಕರಿಗೆ ಅದೇ ಪ್ರಾಯದ ಯುವತಿಯರು ಕೇವಲ 2.02 ಕೋಟಿಯಷ್ಟೇ ಈ ದೇಶದಲ್ಲಿದ್ದಾರೆ. 30 ಮತ್ತು 40ರ ಪ್ರಾಯದ ಪುರುಷರಿಗೂ ಮತ್ತು ಅದೇ ಪ್ರಾಯದ ಮಹಿಳೆಯರಿಗೂ ಹೋಲಿಸಿದರೂ ಅಲ್ಲೂ ವಿಪರೀತ ಅಂತರ ಕಂಡುಬರುತ್ತಿದೆ. ಈ ವ್ಯತ್ಯಾಸ ಎಷ್ಟು ಗಂಭೀರ ಮಟ್ಟದಲ್ಲಿದೆಯೆಂದರೆ, ಮದುವೆ ವಯಸ್ಸಿನ 4.12 ಕೋಟಿ ಯುವಕರಿಗೆ ವಧುಗಳೇ ಇಲ್ಲ. 1970ರಿಂದ 1990ರ ನಡುವೆ ವ್ಯಾಪಕ ಪ್ರಮಾಣದಲ್ಲಿ ನಡೆದ ಭ್ರೂಣಹತ್ಯೆಯ ಪರಿಣಾಮ ಇದು. ಇವತ್ತೂ ಹೆಣ್ಣು ಭ್ರೂಣದ ಮೇಲೆ ಅಸಡ್ಡೆಯಿದೆ. ಗಂಡು ಭ್ರೂಣಕ್ಕೆ ವಿಪರೀತ ಮಹತ್ವವಿದೆ. ಅಲ್ಲದೇ ಜಾನುವಾರು ಹತ್ಯೆಗೆ 10 ವರ್ಷಗಳ ಶಿಕ್ಷೆಯಿರುವ ಈ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಈ ಯಾವ ಬೆದರಿಕೆಯೂ ಇಲ್ಲ. ಅಂದಹಾಗೆ, ಗೋವಿನ ಸಾಗಾಟ ಅಕ್ರಮವೋ ಸಕ್ರಮವೋ ಎಂಬುದನ್ನು ತಪಾಸಿಸುವುದಕ್ಕೆ ಇಲ್ಲಿ ಪೊಲೀಸರಷ್ಟೇ ಅಲ್ಲ, ಖಾಸಗಿ ತಂಡಗಳೂ ಇವೆ. ಅದಕ್ಕಾಗಿ ರಾತ್ರಿ ನಿದ್ದೆಗೆಟ್ಟು ಕಾಯುವವರಿದ್ದಾರೆ. ಹಲ್ಲೆ ನಡೆಸುವವರಿದ್ದಾರೆ. ಕಸಾಯಿಖಾನೆಗಳಿಗೆ ನುಗ್ಗಿ ದಾಂಧಲೆ ನಡೆಸುವವರಿದ್ದಾರೆ. ಆದರೆ ಹೆಣ್ಣು ಭ್ರೂಣಕ್ಕೆ ಈ ಯಾವ ರಕ್ಷಣೆಯೂ ಇಲ್ಲ. ಭ್ರೂಣ ಹತ್ಯೆ ನಡೆಸುವ ತಾಣಗಳ ಮೇಲೆ ದಾಳಿ ನಡೆಸುವವರಿಲ್ಲ. ಎಲ್ಲಿ ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ನಿದ್ದೆಗೆಟ್ಟು ಕಾಯುವವರಿಲ್ಲ. ಅಷ್ಟಕ್ಕೂ, ಕಾನೂನನ್ನು ಕೈಗೆತ್ತಿಕೊಳ್ಳುವುದು ಗೋವಿನ ವಿಷಯದಲ್ಲೂ ಭ್ರೂಣದ ವಿಷಯದಲ್ಲೂ ಅಪರಾಧವೇ. ಆದರೆ ಗೋವಿನ ವಿಷಯದಲ್ಲಿ ಈ ಅಪರಾಧವನ್ನು ಎಗ್ಗಿಲ್ಲದೇ ನಡೆಸುವವರು ಭ್ರೂಣಹತ್ಯೆಯ ಬಗ್ಗೆ ಯಾವ ಅಜೆಂಡಾವನ್ನೂ ಹೊಂದಿಲ್ಲ ಅನ್ನುವುದು ಏನನ್ನು ಸೂಚಿಸುತ್ತದೆ?
 ಗೋಮಾಂಸದ ರಫ್ತಿನಲ್ಲಿ ವೃದ್ಧಿ ಮತ್ತು ಹೆಣ್ಣಿನ ಸಂಖ್ಯೆಯಲ್ಲಿ ಕುಸಿತ - ನಿಜವಾಗಿ ಇವು ನಮ್ಮನ್ನು ಇವತ್ತು ತೀವ್ರವಾಗಿ ಕಾಡಬೇಕಿದೆ. ಗೋಮಾಂಸದಲ್ಲಿ ವೃದ್ಧಿಯಾಗಬಾರದೆಂಬುದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಬಯಕೆ. ಆದರೆ ಅದರಲ್ಲಿ ವೃದ್ಧಿಯಾಗುತ್ತಿದೆ. ಹೆಣ್ಣು ಭ್ರೂಣದ ಸಂಖ್ಯೆಯಲ್ಲಿ ಕುಸಿತವಾಗಬಾರದೆಂಬುದೂ ಆಡಳಿತದ ಬಯಕೆ. ಆದರೆ ಅದರಲ್ಲಿ ಕುಸಿತವಾಗುತ್ತಿದೆ. ಏನಿದರ ಅರ್ಥ? ಇದು ಸೂಚಿಸುವುದೇನನ್ನು? ಸರಕಾರ ಪ್ರಾಮಾಣಿಕವಾಗಿಲ್ಲ ಎಂಬುದರ ಹೊರತು ಬೇರೆ ಏನೆಂದು ಇದನ್ನು ವಿಶ್ಲೇಷಿಸಬೇಕು?

No comments:

Post a Comment