ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂಬುದು ರಾಧೆ ಮಾ ಮೂಲಕ ಮತ್ತೊಮ್ಮೆ ಸಾಬೀತುಗೊಂಡಿದೆ. ನಿಜವಾಗಿ, ದೇವರಾಗಲು ಹೊರಟು ವಿಫಲರಾದ ಮನುಷ್ಯರ ಪಟ್ಟಿಯಲ್ಲಿ ರಾಧೆ ಮಾರ ಹೆಸರು ಮೊದಲಿನದ್ದೇನೂ ಅಲ್ಲ. ಕೊನೆಯದ್ದಾಗುವ ಸಾಧ್ಯತೆಯೂ ಇಲ್ಲ. ಈ ಹಿಂದೆ ಪುಟ್ಟಪರ್ತಿಯ ಸಾಯಿಬಾಬ ಅವರು ದೇವನ ಜಿಜ್ಞಾಸೆಯೊಂದನ್ನು ಹುಟ್ಟುಹಾಕಿದ್ದರು. ಅವರು ಜೀವಂತ ಇದ್ದಾಗ ಅನೇಕರ ಪಾಲಿಗೆ ದೇವರಾಗಿದ್ದರು. ಅವರ ವ್ಯಕ್ತಿತ್ವ, ಸಮಾಜ ಸೇವೆ, ಪವಾಡವನ್ನು ನೋಡಿದ ಇಲ್ಲವೇ ಆಲಿಸಿದ ಮಂದಿ ಸಾಯಿಬಾಬ ಮನುಷ್ಯರಲ್ಲ ಎಂದು ತೀರ್ಮಾನಿಸಿದರು. ಅವರ ಫೆÇೀಟೋ ಇಟ್ಟು ಪೂಜಿಸತೊಡಗಿದರು. ಆದರೆ ಅವರು ಯಾವಾಗ ಅನಾರೋಗ್ಯಪೀಡಿತರಾದರೋ ಅದೇ ಜನ ಆಸ್ಪತ್ರೆಯ ಹೊರಗೆ ನಿಂತು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸತೊಡಗಿದರು. ಒಂದು ರೀತಿಯಲ್ಲಿ, ಜೀವಂತವಿದ್ದಾಗ ಅವರ ಸುತ್ತ ಯಾವೆಲ್ಲ ಭ್ರಮೆಗಳು ಹರಡಿಕೊಂಡಿದ್ದುವೋ ಅವೆಲ್ಲವೂ ಆಸ್ಪತ್ರೆಯ ತುರ್ತು ನಿಗಾ ಕೋಣೆಯಲ್ಲಿ ಅವರು ಉಸಿರಾಟಕ್ಕೆ ಸಂಕಟಪಡುತ್ತಿದ್ದಾಗಲೇ ಬಹುತೇಕ ಕಳಚಿ ಬಿದ್ದಿದ್ದುವು. ಹಾಗೆಯೇ ಆಸ್ಪತ್ರೆಯ ಹೊರಗೆ ನಿಂತು ದೇವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ ಭಕ್ತರ ದೃಶ್ಯವು ‘ಮನುಷ್ಯ ದೇವನಾಗಲು ಸಾಧ್ಯವಿಲ್ಲ' ಎಂದು ನಂಬಿಕೊಂಡವರನ್ನು ಅಪಾರ ಜಿಜ್ಞಾಸೆಗೆ ಒಳಪಡಿಸಿತ್ತು. ಕಾಯಿಲೆಯನ್ನು ಗುಣಪಡಿಸಬೇಕಾದವರೇ ಕಾಯಿಲೆಪೀಡಿತರಾಗಿ ಆಸ್ಪತ್ರೆ ಸೇರುವುದಾದರೆ ಅವರು ದೇವರಾಗುವುದಾದರೂ ಹೇಗೆ? 85 ವರ್ಷದ ಸಾಮಾನ್ಯ ವ್ಯಕ್ತಿಗೆ ಬಾಧಿಸುವ ಸಹಜ ಕಾಯಿಲೆಗಳು ಬಾಬಾರನ್ನೂ ಆಕ್ರಮಿಸಿದ್ದುವು. ಕೊನೆಗೆ ಬಾಬಾ ಸಾವಿಗೀಡಾದಾಗ ಅವರ ಬಗ್ಗೆ ಇದ್ದ ದೇವ ಕಲ್ಪನೆಯ ಪ್ರಭಾವಳಿ ಇನ್ನಷ್ಟು ಚಿಕ್ಕದಾಯಿತು. 2011ರಲ್ಲಿ ಸಾಯಿಬಾಬ ಬಿಟ್ಟು ಹೋದ ಈ ದೇವ ಪ್ರಶ್ನೆಯನ್ನು ರಾಧೆ ಮಾ ಮತ್ತೆ ಜೀವಂತಗೊಳಿಸಿದ್ದಾರೆ. 8 ವರ್ಷದವಳಿದ್ದಾಗಲೇ ತಾಯಿಯನ್ನು ಕಳಕೊಂಡ, 10ನೇ ತರಗತಿ ವರೆಗೆ ಓದಿದ ಮತ್ತು 18 ವರ್ಷದಲ್ಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ ಸುಖ್ವಿಂದರ್ ಕೌರ್ ಆ ಬಳಿಕ ರಾಧೆ ಮಾ ಆದರು. ಸಿನಿಮಾ ನಿರ್ದೇಶಕ ಸುಭಾಷ್ ಘಾಯ್, ಬಿಜೆಪಿ ಸಂಸದ ಮನೋಜ್ ತಿವಾರಿ, ಪ್ರಹ್ಲಾದ್ ಕಕ್ಕರ್ ಸೇರಿದಂತೆ ದೊಡ್ಡದೊಂದು ಭಕ್ತಗಣವನ್ನು ಸಂಪಾದಿಸಿದರು. ಮುಂಬೈಯ ಪ್ರಸಿದ್ಧ ಜಾಹೀರಾತು ನಿರ್ವಾಹಕ ಸಂಜೀವ್ ಗುಪ್ತಾರು ಮುಂಬೈ ಉದ್ದಕ್ಕೂ ರಾಧೆ ಮಾರ ಬೃಹತ್ ಕಟೌಟ್‍ಗಳನ್ನು ನಿಲ್ಲಿಸಿದರು. ಬಂಗಲೆಯನ್ನು ನಿರ್ಮಿಸಿಕೊಟ್ಟರು. ತನ್ನ ಎಡಗೈಗೆ ಮಾರ ಟ್ಯಾಟೂವನ್ನು ಹಾಕಿಸಿಕೊಂಡರು. ಹೀಗೆ ರಾಧೆ ಮಾ ದೇವರಾಗುತ್ತಾ ಬೆಳೆದರು. ಇತ್ತೀಚೆಗೆ ತನ್ನ ಸಂದರ್ಶನ ನಡೆಸುತ್ತಿದ್ದಾಗಲೇ ಸಂದರ್ಶಕನನ್ನು ಅವರು ಚುಂಬಿಸಿದ್ದು ಸುದ್ದಿಯಾಗಿತ್ತು. ಅಷ್ಟಕ್ಕೂ, ರಾಧೆ ಮಾರ ಆಶೀರ್ವಾದದ ವಿಧಾನವೇ ಆಲಿಂಗನ ಮತ್ತು ಚುಂಬನ. ಇದೀಗ ಈ ದೇವರು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದಾರೆ. ವರದಕ್ಷಿಣೆ ಹಿಂಸೆ, ರೈತರನ್ನು ಆತ್ಮಹತ್ಯೆಗೆ ಪ್ರಚೋದನೆ, ಭಕ್ತರಿಗೆ ವಂಚನೆ ಸಹಿತ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೀಗ ರಾಧೆ ಮಾರು ತನ್ನ ಭಕ್ತರ ಮುಂದೆ ಕೆಲವು ಪ್ರಶ್ನೆಗಳೊಂದಿಗೆ ಹಾಜರಾಗಿದ್ದಾರೆ. ದೇವ ಮತ್ತು ಮನುಷ್ಯರ ನಡುವಿನ ವ್ಯತ್ಯಾಸಗಳೇನು? ತಿನ್ನುವ, ಕುಡಿಯುವ, ಅನಾರೋಗ್ಯಕ್ಕೆ ಒಳಗಾಗುವ, ನಿದ್ದೆ ಮಾಡುವ, ಪತಿ ಮತ್ತು ಮಕ್ಕಳನ್ನು ಹೊಂದುವ, ಸಾಯುವ.. ಹೀಗೆ ಒಂದು ಮಿತಿಯೊಳಗೆ ಬದುಕುವ ಮನುಷ್ಯನಿಗೂ ದೇವನಿಗೂ ಇರಬೇಕಾದ ಅಂತರಗಳೇನು? ದೇವನು ಈ ಕ್ರಿಯೆಗೆ ಅತೀತನಲ್ಲವೇ? ಮನುಷ್ಯನಿಗಿರುವಂತಹ ದೌರ್ಬಲ್ಯಗಳು ದೇವನಿಗೂ ಇರುವುದಾದರೆ ದೇವ ಯಾಕಿರಬೇಕು? ನಿದ್ದೆಯಿಲ್ಲದ, ಮಕ್ಕಳು, ಕುಟುಂಬ ಇಲ್ಲದ, ತಿನ್ನದ, ಬದುಕಿಸುವ ಮತ್ತು ಸಾಯಿಸುವ ಸಾಮರ್ಥ್ಯ ಇರುವ ಕಾಲಜ್ಞಾನಿಯಾಗಿರಬೇಡವೇ ದೇವ? ರಾಧೆ ಮಾರ ಮೂಲಕ ಈ ಪ್ರಶ್ನೆಯನ್ನು ನಾವು ಗಂಭೀರ ಚರ್ಚೆಗೆ ಎತ್ತಿಕೊಳ್ಳಬೇಕಾಗಿದೆ.
ನಿಜವಾಗಿ, ಭ್ರಷ್ಟ ರಾಜಕಾರಣಿಗಳು ಈ ಸಮಾಜದ ಪಾಲಿಗೆ ಎಷ್ಟು ಅಪಾಯಕಾರಿಗಳೋ ಅದಕ್ಕಿಂತಲೂ ಮನುಷ್ಯ ದೇವರುಗಳು ಹೆಚ್ಚು ಅಪಾಯಕಾರಿಗಳಾಗಿದ್ದಾರೆ. ರಾಜಕಾರಣಿಗಳನ್ನು ಭ್ರಷ್ಟರು ಎಂದು ಕರೆಯುವುದಕ್ಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಂದು ಹಂತದವರೆಗೆ ಸ್ವಾತಂತ್ರ್ಯ ಇದೆ. ಭ್ರಷ್ಟರನ್ನು ವೇದಿಕೆಯಲ್ಲಿ ನಿಂತು ಟೀಕಿಸುವುದಕ್ಕೂ ಇಲ್ಲಿ ಅವಕಾಶ ಇದೆ. ಆದರೆ ಮನುಷ್ಯ ದೇವರುಗಳು ಹಾಗಲ್ಲ. ಅವರು ತಮ್ಮ ಸುತ್ತ ಒಂದು ಪ್ರಭಾವಳಿಯನ್ನು ಬೆಳೆಸಿಕೊಂಡಿರುತ್ತಾರೆ. ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಮುಗ್ಧ ಭಕ್ತ ಸಮೂಹವನ್ನು ಸೃಷ್ಟಿಸಿರುತ್ತಾರೆ. ಆದ್ದರಿಂದಲೇ, ಕೆಲವರಿಗೆ ದೇವರಾಗಲು ವಿಪರೀತ ಆಸಕ್ತಿಯಿರುವುದು. ರಾಜಕಾರಣಿಗಳನ್ನೂ ಕಾಲಬುಡಕ್ಕೆ ಬರುವಂತೆ ಮಾಡುವ ಸಾಮಥ್ರ್ಯವಿರುವುದು ಮನುಷ್ಯ ದೇವರುಗಳಿಗೆ ಮಾತ್ರ. ಹಾಗಂತ, ಇವರಿಗೆ ನಿರ್ದಿಷ್ಟ ಧರ್ಮದ ಚೌಕಟ್ಟನ್ನು ನಾವು ಹಾಕಬೇಕಿಲ್ಲ. ಎಲ್ಲ ಧರ್ಮಗಳಲ್ಲೂ ದೇವ ಮಾನವರಾಗಲು ತವಕಿಸುವ ಮಂದಿ ಇದ್ದಾರೆ. ಕಾಯಿಲೆ ಪೀಡಿತ ಭಕ್ತರಿಗೆ ತಾಯಿತ, ನೂಲು, ಕುಂಕುಮಗಳನ್ನು ಕೊಟ್ಟು ಆಶೀರ್ವಾದ ಮಾಡುತ್ತಲೇ ತಮ್ಮ ಕಾಯಿಲೆಗೆ ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಿದ್ದಾರೆ. ಆದ್ದರಿಂದಲೇ, ದೇವನ ನಿಜವಾದ ಪರಿಚಯ ಸಮಾಜಕ್ಕೆ ಆಗಬೇಕಾದ ಅಗತ್ಯ ಇದೆ. ಮನುಷ್ಯನಿಗೂ ದೇವನಂತೆ ಹಸಿವಾಗುತ್ತದೆಂದಾದರೆ, ಅದು ದೇವನಾಗಲು ಸಾಧ್ಯವಿಲ್ಲ. ನಿದ್ದೆ ಮಾಡುವುದು ಮಾನವ ಸ್ವಭಾವ. ದುಡ್ಡು ಮಾಡುವುದೂ ಮನುಷ್ಯ ಗುಣ. ತಪ್ಪುಗಳನ್ನು ಮಾಡುವವನೇ ಮನುಷ್ಯ. ಕಾಯಿಲೆ ಬಾಧಿಸುವುದು, ಸಾಯುವುದು, ಆಸ್ತಿ-ಪಾಸ್ತಿಗಳ ಹಸಿವು ಇರುವುದು, ನಾಳೆ ಏನಾಗುತ್ತದೆಂಬುದರ ಅರಿವು ಇರದಿರುವುದು.. ಎಲ್ಲವೂ ಮನುಷ್ಯ ದೌರ್ಬಲ್ಯಗಳು. ಇವು ದೇವನಿಗೂ ಇದ್ದರೆ ಮತ್ತೆ ದೇವನ ಅಗತ್ಯವಾದರೂ ಏನಿರುತ್ತದೆ? ವಿಶೇಷ ಏನೆಂದರೆ, ರಾಧೆ ಮಾ ಸಹಿತ ಇವತ್ತು ನಮ್ಮ ನಡುವೆ ಯಾರೆಲ್ಲ ದೇವರಾಗಿ ಗುರುತಿಗೀಡಾಗಿದ್ದಾರೋ ಅವರೆಲ್ಲರಿಗೂ ಈ ದೌರ್ಬಲ್ಯಗಳಿವೆ ಎಂಬುದು. ನಿಜವಾಗಿ, ನಮ್ಮ ನಡುವೆ ಮನುಷ್ಯರಾಗಿ ಗುರುತಿಸಿಕೊಂಡು ಆ ಬಳಿಕ ದೇವರಾದವರೆಲ್ಲ ಆ ಪಟ್ಟಕ್ಕೆ ಏರಿದ ಬಳಿಕವೂ ಮೊದಲಿನ ಅಭ್ಯಾಸವನ್ನು ಬಿಟ್ಟಿದ್ದೇನೂ ಇಲ್ಲ. ಅವರು ದೇವರಾದ ಬಳಿಕವೂ ನಿದ್ದೆ ಮಾಡುತ್ತಾರೆ, ತಿನ್ನುತ್ತಾರೆ, ಕುಡಿಯುತ್ತಾರೆ, ಆರೋಪಗಳನ್ನು ಎದುರಿಸುತ್ತಾರೆ.. ಇದುವೇ ಅವರು ದೇವರಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಅಂದಹಾಗೆ, ದೇವನ ಫೋಸು ಕೊಟ್ಟು ಜನರನ್ನು ವಂಚಿಸುತ್ತಿರುವ ಕಪಟ ದೇವರುಗಳನ್ನೆಲ್ಲ ತಿರಸ್ಕರಿಸಿ, ‘ಮನುಷ್ಯ
ದೇವನಾಗಲು ಸಾಧ್ಯವಿಲ್ಲ’ ಎಂದು ಬಲವಾಗಿ ಘೋಷಿಸಬೇಕಾದ ಅಗತ್ಯ ಇವತ್ತು ಸಾಕಷ್ಟಿದೆ.
ಯಾಕೆಂದರೆ, ಧರ್ಮ ಇಲ್ಲವೇ ದೇವರ ಹೆಸರಲ್ಲಿ ಜನಸಾಮಾನ್ಯರನ್ನು ವಂಚಿಸುವಷ್ಟು ಸುಲಭದಲ್ಲಿ
ಇನ್ನಾವುದರಿಂದಲೂ ವಂಚಿಸಲು ಸಾಧ್ಯವಿಲ್ಲ ಎಂಬುದು ದೇವರಾಗಬಯಸುವ ಎಲ್ಲರಿಗೂ ಗೊತ್ತು.
ದೇವರ ಬಗ್ಗೆ ದುರ್ಬಲ ಕಲ್ಪನೆಗಳನ್ನು ಇಟ್ಟುಕೊಂಡಿರುವ ಮಂದಿಯನ್ನು ಇಂಥವರು ಸುಲಭದಲ್ಲಿ
ಬಲೆಗೆ ಬೀಳಿಸುತ್ತಲೂ ಇರುತ್ತಾರೆ. ರಾಧೆ ಮಾ ದೇವರಾದುದರ ಹಿಂದೆ ಇಂಥ ದೌರ್ಬಲ್ಯಗಳ
ಪಾತ್ರ ಖಂಡಿತಕ್ಕೂ ಇರಬಹುದು. ಇಂಥವರನ್ನು ಸೋಲಿಸಬೇಕಾದರೆ ದೇವನ ಅಸಲಿ ರೂಪದ ಬಗ್ಗೆ
ಸಮಾಜಕ್ಕೆ ಗೊತ್ತಿರಬೇಕಾದುದು ಅತೀ ಅಗತ್ಯ. ಈ ಅಸಲಿ ದೇವನನ್ನು ಪತ್ತೆ ಹಚ್ಚುವಲ್ಲಿ
ಜನರು ಯಶಸ್ವಿಯಾದರೆ ಆ ಬಳಿಕ ಮಾನವ ದೇವನಾಗಲು ಸಾಧ್ಯವಿಲ್ಲ ಮತ್ತು ಹಾಗೆ
ಘೋಷಿಸಿಕೊಂಡವರಿಗೆ ಭಕ್ತ ಸಮೂಹ ಸೃಷ್ಟಿಯಾಗಲೂ ಸಾಧ್ಯವಿಲ್ಲ.
No comments:
Post a Comment