Tuesday, 15 September 2015

ವರ್ತಮಾನದ ತಲ್ಲಣಗಳು ಮತ್ತು ಹಾಜಿ..

     ವರ್ತಮಾನದ ತಲ್ಲಣಗಳ ನಡುವಿನಿಂದ ಮಕ್ಕಾಕ್ಕೆ ಹೊರಟು ಹೋಗುವ ಹಾಜಿ ಅಲ್ಲಿ  ಮುಖಾಮುಖಿಗೊಳ್ಳುವುದು ಯಾರನ್ನು, ಯಾವುದನ್ನು ಮತ್ತು ಯಾತಕ್ಕಾಗಿ? ಸಫಾ-ಮರ್ವಾ, ಅರಫಾ, ಹಜರುಲ್ ಅಸ್ವದ್, ಜಮರಾತ್, ಮುಝ್ದಲಿಫಾ.. ಇತ್ಯಾದಿಗಳನ್ನು ಹಾಜಿ ಮಕ್ಕಾದಲ್ಲಿ ಮುಖಾಮುಖಿಯಾಗುತ್ತಾನೆ/ಳೆ. ಆತ ಅಲ್ಲಿ ಕಣ್ಣೀರಾಗಬಲ್ಲ, ಪ್ರಾರ್ಥಿಸಬಲ್ಲ, ತನ್ಮಯತೆಯಿಂದ ಜಗವನ್ನೇ ಮರೆಯಬಲ್ಲ. ಅಷ್ಟಕ್ಕೂ, ಈ ಬಗೆಯ ಭಾವತೀವ್ರತೆಯನ್ನು ಹಾಜಿಯೊಳಗೆ ಹುಟ್ಟುಹಾಕಲು ಈ ಸಂಕೇತಗಳಿಗೆ ಹೇಗೆ ಸಾಧ್ಯವಾಗುತ್ತದೆ? ಒಂದು ವೇಳೆ, ಈ ಸಂಕೇತಗಳಗೆ ಭೂತಕಾಲವೊಂದು ಇಲ್ಲ ಎಂದಿಟ್ಟುಕೊಳ್ಳಿ. ಹಾಗಾದರೆ, ಜಮರಾತ್ ಅನ್ನು, ಸಫಾ-ಮರ್ವಾವನ್ನು, ಮುಝ್ದಲಿಫಾವನ್ನು.. ಆತ/ಕೆ ಯಾವ ರೀತಿಯಲ್ಲಿ ಮುಖಾಮುಖಿಯಾಗಬಹುದು? ನಿಜವಾಗಿ, ಭೂತಕಾಲವೊಂದು ಇಲ್ಲದೇ ಇರುತ್ತಿದ್ದರೆ ಸಫಾ-ಮರ್ವಾಕ್ಕೆ ಈ ವರ್ತಮಾನ ಕಾಲದಲ್ಲಿ ಯಾವ ಮಹತ್ವವೂ ಲಭಿಸುತ್ತಿರಲಿಲ್ಲ. ಜಮಾರಾತ್‍ಗೂ ಮುಝ್ದಲಿಫಾಕ್ಕೂ ಅರಫಾ ಮೈದಾನಕ್ಕೂ ಒಂದು ಭೂತಕಾಲವಿದೆ. ಈ ಭೂತಕಾಲದಿಂದಾಗಿಯೇ ಈ ವರ್ತಮಾನದಲ್ಲೂ ಇವುಗಳು ಮತ್ತು ಇಬ್ರಾಹೀಮ್(ಅ), ಇಸ್ಮಾಈಲ್(ಅ), ಹಾಜಿರಾ.. ನಮ್ಮನ್ನು ಕಾಡುವುದು. ಗತ ಇತಿಹಾಸವನ್ನು ಪಕ್ಕಕ್ಕಿಟ್ಟು ನೋಡಿದರೆ ನಮ್ರೂದ್ ಎಂಬುದು ಈ ವರ್ತಮಾನದಲ್ಲಿ ಬರೇ ಒಂದು ಹೆಸರು ಮಾತ್ರ. ಆದರೆ ನಮ್ರೂದ್‍ಗೊಂದು ಇತಿಹಾಸವಿದೆ. ಆ ಇತಿಹಾಸವೇ ಇವತ್ತು ನಮ್ರೂದ್‍ನನ್ನು ಪ್ರಸ್ತುತಗೊಳಿಸುತ್ತದೆ. ಬಹುಶಃ, ಈ ಮೇಲೆ ಉಲ್ಲೇಖಿಸಲಾದ ಸಂಕೇತಗಳನ್ನು ಮುಖಾಮುಖಿಗೊಳ್ಳುವಾಗ ಹಾಜಿಯು ಭಾವುಕವಾಗುವುದಿದ್ದರೆ, ಅವುಗಳ ಗತ ಇತಿಹಾಸವನ್ನು ಸ್ಮರಿಸಿಯೇ ಹೊರತು ವರ್ತಮಾನದ ಬರೇ ಸ್ಥಳಗಳಾಗಿ ಅಲ್ಲ. ಇಂಥ ಬೆಟ್ಟಗಳು, ಮೈದಾನಗಳು ಜಗತ್ತಿನಲ್ಲಿ ನೂರಾರು ಇವೆ. ಇಬ್ರಾಹೀಮ್, ಇಸ್ಮಾಈಲ್, ಹಾಜಿರಾ.. ಮುಂತಾದ ಹೆಸರುಗಳು ಜಗತ್ತಿನಲ್ಲಿ ಕೋಟ್ಯಂತರ ಇರಬಹುದು. ಆದರೆ ಅವಾವುವೂ ಹಾಜಿಯನ್ನು ಭಾವುಕಗೊಳಿಸುವುದೋ ಉನ್ಮಾದಗೊಳಿಸುವುದೋ ಮಾಡುತ್ತಿಲ್ಲ. ನಿಜವಾಗಿ, ಹಾಜಿ ವರ್ತಮಾನದಲ್ಲಷ್ಟೇ ಬದುಕುತ್ತಿಲ್ಲ. ಆತನ ಎದುರು ಭೂತ(ಗತ)ಕಾಲವೊಂದಿದೆ. ಆ ಕಾಲದ ದಟ್ಟ ಪ್ರಭಾವವೇ ಈ ವರ್ತಮಾನದಲ್ಲೂ ಆತನನ್ನು ಹಾಜಿಯನ್ನಾಗಿಸುತ್ತದೆ. ಗತದ ಸ್ಮರಣೆಯು ಆತ/ಕೆಯನ್ನು ತಲ್ಲಣಗೊಳಿಸುತ್ತದೆ. ಜಮಾರಾತ್‍ನಲ್ಲಿ ಕಂಭಗಳಿಗೆ ಕಲ್ಲೆಸೆಯುವ ಹಾಜಿಯನ್ನು ಗತ ಇತಿಹಾಸ ಗೊತ್ತಿಲ್ಲದ ಪ್ರವಾಸಿಯೋರ್ವ ನೋಡಿದರೆ ಅಚ್ಚರಿ ಪಡಬಲ್ಲ. ಯಾಕೆಂದರೆ, ಬರೇ ವರ್ತಮಾನದಲ್ಲಷ್ಟೇ ಬದುಕುವ ವ್ಯಕ್ತಿಗೆ ಅದು ಬರೇ ಕಂಬ ಮಾತ್ರ. ಆದರೆ ಹಾಜಿ ಗತ ಕಾಲದಲ್ಲೂ ಬದುಕುತ್ತಾನೆ. ಆದ್ದರಿಂದಲೇ ಆತ ಎಸೆಯುವುದು ಕಲ್ಲುಗಳನ್ನಲ್ಲ, ಆತನ ಗುರಿಯಲ್ಲಿರುವುದು ಕಂಬಗಳೂ ಅಲ್ಲ. ಹೀಗೆ ಹಾಜಿಯು ವರ್ತಮಾನ ಮತ್ತು ಭೂತಕಾಲವನ್ನು ಸಮನ್ವಯಗೊಳಿಸಿದ ಒಂದು ಅಪೂರ್ವ ಮಾದರಿಯಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ, ಹಾಜಿ ಇಲ್ಲಿ ಉತ್ತರಿಸಬೇಕಾದ ಒಂದು ಪ್ರಶ್ನೆಯಿದೆ. ಈ ಸಮನ್ವಯತೆ ಕೇವಲ ಹಜ್ಜ್ ಗೆ ಮಾತ್ರ ಯಾಕೆ ಸೀಮಿತಗೊಳ್ಳಬೇಕು? ಬದುಕಿನ ಇತರ ಸಂದರ್ಭಗಳಲ್ಲೂ ಯಾಕೆ ಅದು ಕಾಣಿಸಿಕೊಳ್ಳಬಾರದು? ಅಂದಹಾಗೆ, ಹಾಜಿ ಬದುಕುವ ಈ ವರ್ತಮಾನ ಕಾಲದಲ್ಲಿ ನೂರಾರು ತಲ್ಲಣಗಳಿವೆ. ಬಡ್ಡಿಯಿದೆ, ವರದಕ್ಷಿಣೆಯಿದೆ, ವಂಚನೆಯಿದೆ, ಕೋಮುವಾದ, ಅನೈತಿಕತೆ, ಅಪನಂಬಿಕೆ, ಅನಾಚಾರ, ಅನೈಕ್ಯತೆ, ಶೋಷಣೆ.. ಇದೆ. ಹಸಿವು, ಕಣ್ಣೀರು ಇದೆ. ನಿಜವಾಗಿ, ಇವು ಮತ್ತು ಇನ್ನಿತರ ವರ್ತಮಾನದ ತಲ್ಲಣಗಳು ಹಾಜಿಯನ್ನು ತಟ್ಟಲೇ ಬೇಕು. ಸಫಾ-ಮರ್ವಾಗಳು ಅವುಗಳ ಗತ ಇತಿಹಾಸದಿಂದಾಗಿ ಹಾಜಿಯನ್ನು ಭಾವುಕಗೊಳಿಸುವುದಾದರೆ, ವರ್ತಮಾನದ ಈ ತಲ್ಲಣಗಳನ್ನು ಕೂಡ ಹಾಜಿಯು ಇತಿಹಾಸದ ಬೆಳಕಿನಲ್ಲಿ ಇಟ್ಟು ನೋಡಬೇಕು. ಹಾಗಾದಾಗ ಸಮಾಜದ ಬಡ್ಡಿಯಾಧಾರಿತ ಬದುಕು ಹಾಜಿಯೊಳಗೆ ತಲ್ಲಣಗಳನ್ನು ಹುಟ್ಟಿಸಬಹುದು. ಹಸಿವು, ಸೋರುವ ಮಾಡು, ವರದಕ್ಷಿಣೆ, ವಂಚನೆ.. ಎಲ್ಲವೂ ಹಾಜಿಯನ್ನು ಭಿನ್ನ ಭಾವದಲ್ಲಿ ತಟ್ಟಬಹುದು. ಇಬ್ರಾಹೀಮರ(ಅ) ಆಲೋಚನೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ಅವರು ಕಟ್ಟಬಯಸಿದ ಸಮಾಜವನ್ನು ಸ್ಥಾಪಿಸಲು ಹಾಜಿ ಪಣತೊಡಬಹುದು.
     ಓರ್ವ ವ್ಯಕ್ತಿ ಹಜ್ಜ್ ಗೆ ಕಡ್ಡಾಯವಾಗಿ ತೆರಳಬೇಕಾದುದು ಒಮ್ಮೆ ಮಾತ್ರ. ಹಾಗಂತ, ಆ ಬಳಿಕವೂ ಆತನಲ್ಲಿ ದುಡ್ಡು, ಆರೋಗ್ಯ, ಪ್ರತಿಭೆ ಎಲ್ಲವೂ ಇರಬಹುದು. ಆದರೂ ಆತ ಕಡ್ಡಾಯವಾಗಿ ಮತ್ತೊಮ್ಮೆ ಮಕ್ಕಾಕ್ಕೆ ತೆರಳಬೇಕಿಲ್ಲ. ಇದುವೇ ಓರ್ವ ಹಾಜಿಯ ಗುರಿಯನ್ನು ಸ್ಪಷ್ಟಪಡಿಸುತ್ತದೆ. ಹಾಜಿಯ ಚಟುವಟಿಕೆಯ ಕೇಂದ್ರ ಮಕ್ಕಾ ಅಲ್ಲ, ಆತನ ಊರು. ಆ ಊರನ್ನು ಮಕ್ಕಾ (ಶಾಂತಿಯ ಕೇಂದ್ರ) ಆಗಿಸುವುದೇ ಹಾಜಿಯ ಗುರಿ. ಅದಕ್ಕಾಗಿ ಪ್ರತಿಜ್ಞೆ ಕೈಗೊಳ್ಳುವ ಸಂದರ್ಭವೇ ಹಜ್ಜ್ ಯಾತ್ರೆ. ಒಂದು ವೇಳೆ, ಈ ಅರ್ಥದಲ್ಲಿ ನಮ್ಮ ಹಜ್ಜ್ ನಿರ್ವಹಣೆಯಾಗುವುದಾದರೆ ಒಂದು ದಿನ ಜಗತ್ತೇ `ಶಾಂತಿಯ ಕೇಂದ್ರ' ಆಗಬಹುದು. ಹಾಗಾಗಲಿ ಎಂದು ಹಾರೈಸೋಣ.

No comments:

Post a Comment