|
ಕೆ.ಪಿ. ಪೊನ್ನಾರ್ ಮತ್ತು ಕೃತಿಕಾ |
ಮಾನವ ಪ್ರಾಣದ ನೆಲೆ, ಬೆಲೆ ಮತ್ತು ಗೌರವದ ಕುರಿತಂತೆ ನಮ್ಮನ್ನು ಗಂಭೀರ ಚಿಂತನೆಗೆ ಒತ್ತಾಯಿಸುವ ಘಟನೆಗಳು ಕಳೆದವಾರ ಸಂಭವಿಸಿವೆ. ಕೆ.ಪಿ. ಪೊನ್ನಾರ್ ಎಂಬ 31 ವರ್ಷದ ಇಂಜಿನಿಯರ್ ಯುವಕ ಚೆನ್ನೈಯ
ಅಪೋಲೋ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಕಳೆದವಾರ ಲವಲವಿಕೆಯಿಂದ ಮಾತಾಡಿದ್ದಾನೆ.
ಹೀಗೆ ಮಾತಾಡುವುದಕ್ಕಿಂತ ಮೊದಲು 6 ವರ್ಷಗಳ ವರೆಗೆ ಆತ ಬದುಕು ಭಾರವಾಗಿ ಮಲಗಿದ್ದ.
ಸಾವನ್ನು ಗೆಲ್ಲಲಾರೆನೇನೋ ಅನ್ನುವ ಭೀತಿಯೊಂದಿಗೆ ಆಸ್ಪತ್ರೆಯ ಮಂಚದಲ್ಲಿ 6 ವರ್ಷಗಳನ್ನು
ದೂಡಿದ್ದ. ಆತನ ಹೃದಯ ಮತ್ತು ಪಿತ್ತಕೋಶ ಎರಡೂ ಸಂಪೂರ್ಣ ನಿಷ್ಕ್ರಿಯಗೊಂಡಿದ್ದುವು.
ಅದನ್ನು ಕಿತ್ತುಹಾಕಲೇಬೇಕಿತ್ತು ಮತ್ತು ದಾನಿಗಳಿಂದ ಪಡೆದ ಹೃದಯ ಮತ್ತು ಪಿತ್ತಕೋಶವನ್ನು
ಬದಲಿಯಾಗಿ ಜೋಡಿಸಿದರೆ ಮಾತ್ರ ಆತ ಬದುಕುಳಿಯಬಹುದಿತ್ತು. ಆದರೆ ಈ ಶಸ್ತ್ರಚಿಕಿತ್ಸೆ
ಅತ್ಯಂತ ಅಪಾಯಕಾರಿ. ಜಾಗತಿಕವಾಗಿಯೇ ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ಇಂಥ ದುಬಾರಿ
ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ಹೀಗಿರುತ್ತಾ, ಮೆದುಳು ಸತ್ತ ಓರ್ವ ರೋಗಿಯ ಹೃದಯ
ಮತ್ತು ಪಿತ್ತಕೋಶವನ್ನು ಪಡೆದು ಅದನ್ನು ಪೊನ್ನಾರ್‍ಗೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು
ಕಳೆದವಾರ ಕೈಗೊಳ್ಳಲಾಯಿತು. ಸರ್ಜನ್‍ಗಳ ನಾಲ್ಕು ತಂಡ ಸತತ 8 ಗಂಟೆಗಳ ದೀರ್ಘ ಅವಧಿಯ
ವರೆಗೆ ಶಸ್ತ್ರಚಿಕಿತ್ಸೆಯಲ್ಲಿ ನಿರತವಾದುವು. ಆ 8 ಗಂಟೆಗಳ ಉದ್ದಕ್ಕೂ ಪೊನ್ನಾರ್‍ನ
ಕುಟುಂಬದಲ್ಲಿ ಆತಂಕ ಮತ್ತು ಭೀತಿ ತುಂಬಿಕೊಂಡಿದ್ದುವು. ಆ ಒಂದು ಜೀವಕ್ಕಾಗಿ ಒಂದು
ಕುಟುಂಬ ಮಾತ್ರವಲ್ಲ, ಇಡೀ ಆಸ್ಪತ್ರೆಯೇ ಪ್ರಾರ್ಥಿಸುವಷ್ಟರ ಮಟ್ಟಿಗೆ ವಾತಾವರಣ
ಭಾವುಕವಾಗಿತ್ತು. ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಅಮೇರಿಕದಲ್ಲಿ 12 ಕೋಟಿ
ರೂಪಾಯಿ ವೆಚ್ಚ ತಗಲಬಹುದಾದ ಶಸ್ತ್ರಚಿಕಿತ್ಸೆಯನ್ನು 43 ಲಕ್ಷಗಳಲ್ಲಿ ಮಾಡಿ
ಮುಗಿಸಿರುವುದಾಗಿ ಆಸ್ಪತ್ರೆ ಹೇಳಿಕೊಂಡಿತು. ಪೊನ್ನಾರ್ ಮಾಧ್ಯಮಗಳೊಂದಿಗೆ ಮಾತಾಡಿದ.
ತಂಗಿ ಕೃತಿಕಾ ತನ್ನಣ್ಣನ ಅರಳಿದ ಕಣ್ಣುಗಳನ್ನು ತುಂಬಿಕೊಂಡು ಭಾವುಕಳಾದಳು.
ದುರಂತ ಏನೆಂದರೆ, ಅಣ್ಣ ಮರಳಿ ಸಿಕ್ಕಿದ ಖುಷಿಯನ್ನು ತಂಗಿಯೋರ್ವಳು ಅಪೋಲೋ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿರುವಾಗ ಇತ್ತ ಕರ್ನಾಟಕದಲ್ಲಿ ಇಂಥ ಅಣ್ಣಂದಿರನ್ನು ಸಾಯಿಸುವ ಚಳವಳಿ ನಡೆಯುತ್ತಿತ್ತು. ಮಡಿಕೇರಿ ಮತ್ತು ಮಂಗಳೂರಿನಲ್ಲಿ 4 ಮಂದಿ ಅಣ್ಣಂದಿರನ್ನು ಹತ್ಯೆ ಮಾಡಲಾಯಿತು. ಹಲವಾರು ಅಣ್ಣಂದಿರಿಗೆ ಚೂರಿ ಹಾಕಲಾಯಿತು. 43 ಲಕ್ಷ ತೆತ್ತು ಅಣ್ಣನನ್ನು ಉಳಿಸಿಕೊಂಡ ತಂಗಿ ಒಂದು ಕಡೆಯಾದರೆ ದ್ವೇಷದ ಅಮಲು ಹತ್ತಿಸಿಕೊಂಡವರಿಂದ ತಂಗಿ, ತಾಯಂದಿರನ್ನು ಅನಾಥಗೊಳಿಸುವ ಪ್ರಯತ್ನ ಇನ್ನೊಂದು ಕಡೆ. ಯಾಕೆ ಈ ದ್ವಂದ್ವ? ಹಾಗಂತ, ಪ್ರಾಣ ಎಷ್ಟು ಅಮೂಲ್ಯ ಅನ್ನುವುದಕ್ಕೆ ಕೇವಲ ಪೊನ್ನಾರ್ ಓರ್ವನೇ ಉದಾಹರಣೆ ಅಲ್ಲ, ನಮ್ಮ ಸುತ್ತ-ಮುತ್ತಲಿನ ಆಸ್ಪತ್ರೆಗಳಲ್ಲಿರುವ ಅಸಂಖ್ಯ ರೋಗಿಗಳೇ ಅದಕ್ಕೆ ಪರಮ ಪುರಾವೆ. ಹಿರಿ ಜೀವಗಳಿಂದ ಹಿಡಿದು ಪುಟಾಣಿಗಳ ವರೆಗೆ ಬದುಕುವುದಕ್ಕಾಗಿ ಎಲ್ಲೆಡೆ ಹೋರಾಟಗಳು ನಡೆಯುತ್ತಿವೆ. ಪ್ರತಿದಿನ ಕೋಟ್ಯಂತರ ರೂಪಾಯಿಗಳು ಈ ಒಂದೇ ಕಾರಣಕ್ಕಾಗಿ ಖರ್ಚಾಗುತ್ತಿವೆ. ‘ಇನ್ನು ಬದುಕಿ ಉಳಿಯುವುದಕ್ಕೆ ಸಾಧ್ಯವೇ ಇಲ್ಲ' ಎಂದು ಆಸ್ಪತ್ರೆಯಿಂದ ವೈದ್ಯರು ಮನೆಗೆ ಕಳುಹಿಸಿಕೊಟ್ಟ ರೋಗಿಯಲ್ಲೂ ಎಲ್ಲೋ ಒಂದು ಮೂಲೆಯಲ್ಲಿ ಬದುಕಿ ಉಳಿಯುವ ಭರವಸೆ ಇರುತ್ತದೆ. ಇನ್ನೂ ನಡೆಯಲಾರದ ಮತ್ತು ಮಾತನಾಡಲಾರದ ಶಿಶುವಿನ ಕಾಲಬುಡದಲ್ಲಿ ಕೂತು ತಾಯಿ ಮಗುವಿನ ರೋಗ ಶಮನಕ್ಕಾಗಿ ಕಣ್ಣೀರಿಳಿಸುತ್ತಾಳೆ. ‘ಗುಣಮುಖವಾದರೂ ಪತಿಯಿಂದ ಇನ್ನು ದುಡಿಯಲು ಸಾಧ್ಯವಿಲ್ಲ’ ಎಂದು ಗೊತ್ತಿದ್ದೂ ಪತಿ ಗುಣಮುಖವಾಗಲೆಂದು ಪತ್ನಿ ಪ್ರಾರ್ಥಿಸುತ್ತಾಳೆ. ನಮ್ಮ ಅಕ್ಕ-ಪಕ್ಕದಲ್ಲಿ, ಸಂಬಂಧಿಕರಲ್ಲಿ ಅಥವಾ ಆಸ್ಪತ್ರೆಗಳಲ್ಲಿ ನಿತ್ಯ ಕಾಣಸಿಗುವ ದೃಶ್ಯಗಳಿವು. ರಕ್ತ ಚೆಲ್ಲುವವರಿಗೆ ಇವು ಯಾಕೆ ಅರ್ಥವಾಗುತ್ತಿಲ್ಲ? ಮಾನವ ಪ್ರಾಣದ ಬೆಲೆ ಜುಜುಬಿ ಆಗಿರುತ್ತಿದ್ದರೆ ಅದನ್ನು ಉಳಿಸಿಕೊಳ್ಳುವುದಕ್ಕೇಕೆ ಆಸ್ಪತ್ರೆಗಳಲ್ಲಿ ಈ ಮಟ್ಟದ ಪ್ರಯತ್ನಗಳು ನಡೆಯುತ್ತಿತ್ತು? 43 ಲಕ್ಷದ ಹಂಗೇ ಇಲ್ಲದೆ ಕೃತಿಕಾ ಏಕೆ ತನ್ನನ್ನು ಕಣ್ತುಂಬಿಕೊಳ್ಳುತ್ತಿದ್ದಳು? ‘ಇನ್ನು ದುಡಿದು ಕೊಡಲಾರ' ಎಂದು ಖಚಿತವಾಗಿ ಗೊತ್ತಿದ್ದೂ ವೃದ್ಧ ಜೀವಕ್ಕಾಗಿ, ಅಂಗವಿಕಲ ಶಿಶುವಿಗಾಗಿ ಅಥವಾ ಜೀವಚ್ಛವವಾದ ಮಗನಿಗಾಗಿ ಓರ್ವ ತಾಯಿ, ಪತ್ನಿ, ಮಕ್ಕಳೇಕೆ ಪ್ರಾರ್ಥಿಸುತ್ತಾರೆ? ಚೂರಿಯನ್ನು ಹಿಡಿಯುವ ಕೈಗಳೇಕೆ ಹೀಗೆ ಆಲೋಚಿಸುತ್ತಿಲ್ಲ? ಚೂರಿಗೆ ಧರ್ಮ ಇಲ್ಲ. ಜೀವವೂ ಇಲ್ಲ. ಅದು ತನಗೆ ಒಪ್ಪಿಸಿದ ಕೆಲಸವನ್ನು ನಾಜೂಕಾಗಿ ಮಾಡುತ್ತದೆ. ಆದರೆ ಚೂರಿಯನ್ನು ಹಿಡಿಯುವ ಕೈ ಹಾಗಲ್ಲ. ಆ ಕೈಗೆ ಧರ್ಮ ಇದೆ. ಸರಿ-ತಪ್ಪುಗಳ ಪರಿಜ್ಞಾನ ಇದೆ. ಪಾಪ-ಪುಣ್ಯಗಳೇನೆಂಬುದೂ ಗೊತ್ತಿದೆ. ತಾನು ಹಾಕುವ ಚೂರಿಯಿಂದ ಓರ್ವ ಹೆಣ್ಣು ವಿಧವೆಯಾಗಬಹುದು. ಮಕ್ಕಳು ಅನಾಥರಾಗಬಹುದು. ಒಂದು ಮನೆಯ ಏಕೈಕ ಆದಾಯ ಮೂಲವೇ ಕಳೆದು ಹೋಗಬಹುದು. ಕೃತಿಕಾಳಂಥ ತಂಗಿಗೆ ಅಣ್ಣನೋರ್ವ ಶಾಶ್ವತವಾಗಿ ಇಲ್ಲವಾಗಬಹುದು.. ಇವೆಲ್ಲ ಇರಿಯುವ ಕೈಗಳಿಗೆ ಗೊತ್ತಿಲ್ಲವೇ? ಗೊತ್ತಿದ್ದೂ ಅವರು ಹೀಗೆಲ್ಲ ಮಾಡುತ್ತಿದ್ದಾರೆಂದರೆ, ಅವರೊಳಗೆ ತುಂಬಿಕೊಂಡಿರುವ ವಿಷ ಯಾವುದು? ಆ ವಿಷವನ್ನು ತುಂಬಿಸಿರುವವರು ಯಾರು? ಅವರ ಉದ್ದೇಶವೇನು? ಅವರು ಆ ವಿಷವನ್ನು ಎಲ್ಲಿಂದ ಪಡಕೊಂಡಿದ್ದಾರೆ? ಧರ್ಮದಿಂದಲೇ? ಹೌದು ಎಂದಾದರೆ, ಆ ಧರ್ಮವಾದರೂ ಯಾವುದು? ಯಾವ ತಂಗಿಯೂ ತಮ್ಮನೂ ತಾಯಿಯೂ ತಂದೆಯೂ ಪತಿಯೂ ಬಯಸದ ಮತ್ತು ಮನಸಾರೆ ದ್ವೇಷಿಸುವ ಆ ವಿಷವೇಕೆ ನಮ್ಮ ನಡುವೆ ಮತ್ತೆ ಮತ್ತೆ ಪ್ರಾಬಲ್ಯವನ್ನು ಸ್ಥಾಪಿಸುತ್ತಿದೆ?
ನಿಜವಾಗಿ, ಚೂರಿ ಹಾಕುವವರು ಮತ್ತು ಇರಿತಕ್ಕೊಳಗಾಗುವವರು ಇಬ್ಬರೂ ಈ ಸಮಾಜದ್ದೇ ಪ್ರತಿನಿಧಿಗಳು. ಅದರ ನಡುವೆ ಇರಬಹುದಾದ ವ್ಯತ್ಯಾಸ ಏನೆಂದರೆ, ಹೆಸರು, ನಂಬಿಕೆ ಮತ್ತು ವೇಷ ಭೂಷಣ ಮಾತ್ರ. ಅದರ ಹೊರತಾಗಿ ಚೂರಿ ಹಾಕುವವನ ರಕ್ತಕ್ಕೂ ಇರಿತಕ್ಕೊಳಗಾಗುವವರ ರಕ್ತಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಹಸಿವಾದಾಗ ಇಬ್ಬರೂ ಆಹಾರವನ್ನೇ ಸೇವಿಸುತ್ತಾರೆ. ಸೇವಿಸುವ ಆಹಾರದಲ್ಲಿ ವ್ಯತ್ಯಾಸ ಇರಬಹುದು. ಆದರೆ ಹಸಿವಿನಲ್ಲಿ ವ್ಯತ್ಯಾಸ ಇಲ್ಲ. ಬಾಯಾರಿದಾಗ ಇಬ್ಬರೂ ನೀರನ್ನೇ ಕುಡಿಯುತ್ತಾರೆ. ಕುಡಿಯುವ ನೀರಿನಲ್ಲಿ ವ್ಯತ್ಯಾಸ ಇರಬಹುದು. ಆದರೆ ಬಾಯಾರಿಕೆಯಲ್ಲಿ ವ್ಯತ್ಯಾಸ ಇಲ್ಲ. ಅಣ್ಣ, ತಂಗಿ, ತಮ್ಮ, ತಾಯಿ, ತಂದೆ, ಮಗು, ಪತ್ನಿ.. ಇಂಥದ್ದೊಂದು ಪರಿವಾರ ಇಬ್ಬರಿಗೂ ಇರುತ್ತದೆ. ತಂಗಿಯ ಕಣ್ಣೀರನ್ನು ಸಹಿಸಲು ಅಣ್ಣನಿಗೆ ಸಾಧ್ಯವಾಗುವುದಿಲ್ಲ. ಮಗ ಸಂಕಟ ಪಡುವುದನ್ನು ತಾಯಿಯಿಂದ ನೋಡಲಾಗುವುದಿಲ್ಲ. ಪತ್ನಿ-ಮಕ್ಕಳು ಸದಾ ನೆಮ್ಮದಿಯಿಂದಿರಬೇಕೆಂದು ಪತಿ ಬಯಸುತ್ತಾನೆ. ಇಂಥ ಬಯಕೆ ಮತ್ತು ಭಾವನೆಗಳು ಎಲ್ಲ ಕುಟುಂಬಗಳಲ್ಲೂ ಇರುತ್ತದೆ. ಅದಕ್ಕೆ ಹಿಂದೂ-ಮುಸ್ಲಿಮ್ ಎಂಬುದಿಲ್ಲ. ಕಳೆದ ವಾರ ಸಾವಿಗೀಡಾದ ಕುಟ್ಟಪ್ಪ, ರಾಜು, ಸುಹೈಲ್ ಮತ್ತು ಹರೀಶ್‍ರನ್ನೇ ಎತ್ತಿಕೊಳ್ಳಿ. ಅವರ ಕುಟುಂಬದ ಕಣ್ಣೀರಿನಲ್ಲಿ ನಮಗೆ ಯಾವ ಬಣ್ಣ ಕಾಣಿಸುತ್ತದೆ? ಗಾಯಗೊಂಡವರ ಸಂಕಟಗಳಲ್ಲಿ ಯಾವ ಧರ್ಮ ಕಾಣಿಸುತ್ತದೆ? ಒಂದು ವೇಳೆ ಅವರ ಹೆಸರನ್ನು ಉಲ್ಲೇಖಿಸದೆಯೇ ಅವರ ನೋವುಗಳನ್ನು ಮಾತ್ರ ದಾಖಲಿಸಿದರೆ ಅದನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಸಾಧ್ಯವೇ? ‘ಈ ಮಾತು ಹಿಂದೂವಿನದ್ದು, ಈ ಮಾತು ಮುಸ್ಲಿಮನದ್ದು’ ಎಂದು ವಿಷ ಕೊಟ್ಟವರು ಪತ್ತೆ ಹಚ್ಚಬಲ್ಲರೇ? ಅಷ್ಟಕ್ಕೂ, ಮಾನವರ ನೋವು, ಕಣ್ಣೀರು, ಭಾವನೆಗಳ ಮಧ್ಯೆ ವಿಭಜನೆಯೇ ಸಾಧ್ಯವಿಲ್ಲದಷ್ಟು ಸಾಮ್ಯತೆ ಇರುವಾಗ ಯಾಕೆ ಈ ದ್ವೇಷ? ಯಾಕೆ ಈ ರಕ್ತಪಾತ? ಮಾನವ ಪ್ರಾಣವನ್ನು ಉಳಿಸುವುದಕ್ಕಾಗಿ ಒಂದು ಕಡೆ ಸಂಶೋಧನೆಗಳ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ರಕ್ತದ ಕ್ಯಾನ್ಸರ್‍ಗೆ
|
ಬಂಟ್ವಾಳದ ಮೃತ ಹರೀಶ್ ನ ಪಾರ್ಶ್ವವಾಯು ಪೀಡಿತ ತಂದೆ ಮತ್ತು ತಾಯಿ |
ಪರಿಣಾಮಕಾರಿ ಔಷಧವನ್ನು ಕಂಡು ಹುಡುಕಿರುವುದಾಗಿ ಲಂಡನ್ನಿನ ಲೀಸೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಘೋಷಿಸಿದ್ದೂ ಕಳೆದ ವಾರವೇ. ಅದಕ್ಕಾಗಿ ಅವರು ಕಳೆದ ಮೂರು ವರ್ಷಗಳಿಂದ ಪ್ರಯತ್ನಪಟ್ಟಿದ್ದಾರೆ. ಇನ್ನೊಂದು ಕಡೆ ಹೆಸರು ಮತ್ತು ನಂಬಿಕೆ ಬೇರೆ ಎಂಬ ಏಕೈಕ ಕಾರಣಕ್ಕಾಗಿ ಈ ಬಹು ಅಮೂಲ್ಯ ಪ್ರಾಣವನ್ನೇ ಕಸಿಯುತ್ತಿದ್ದೇವೆ. ಹೊಂಚು ಹಾಕಿ ಇರಿಯುತ್ತಿದ್ದೇವೆ. ಒಂದು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲು ಸಿದ್ಧವಿರುವ ನಾವೇ ಕೆಲವೊಮ್ಮೆ ಧರ್ಮದ ಹೆಸರಲ್ಲಿ ಇವೇ ಪ್ರಾಣವನ್ನು ಏಕಿಷ್ಟು ಅಗ್ಗಗೊಳಿಸುತ್ತಿದ್ದೇವೆ? ಧರ್ಮ ಅಷ್ಟೂ ಕ್ರೂರಿಯೇ, ಮನುಷ್ಯ ವಿರೋಧಿಯೇ? ಅಣ್ಣನ ಪ್ರಾಣ ಉಳಿಯಿತೆಂದು ಸಂತಸದಿಂದ ಕಣ್ತುಂಬಿಕೊಂಡ ಕೃತಿಕಾ ಮತ್ತೆ ಮತ್ತೆ ನೆನಪಾಗುತ್ತಾಳೆ. ಚೂರಿ ಹಿಡಿಯುವ ಅಣ್ಣಂದಿರಿಗೆ ಕೃತಿಕಾ ಅರ್ಥವಾಗಲಿ.