Thursday, 26 November 2015

ಗೋಡೆಯಲ್ಲಿ ತೂಗುವ 'ಚೌಕಟ್ಟಿನೊಳಗಿನ ಚಿತ್ರ'ವಾಗಿ ಕಳೆದುಹೋಗುವುದೇ ಗೋವು?


       ರಾಜಸ್ಥಾನದ ಜೈಪುರದಲ್ಲಿ ಕಳೆದ ವಾರ ನಡೆದ ಘಟನೆಯೊಂದು ಗೋವನ್ನು ಮತ್ತೊಮ್ಮೆ ಚರ್ಚೆಗೆ ಎಳೆದು ತಂದಿದೆ. ಜೈಪುರದ ಜವಾಹರ್ ಕಲಾ ಕೇಂದ್ರದಲ್ಲಿ ಕಲಾ ಸಮ್ಮೇಳನವೊಂದು ನಡೆಯುತ್ತಿತ್ತು. ಸಿದ್ಧಾರ್ಥ ಕರಾರ್‍ವಲ್ ಎಂಬ ಕಲಾವಿದರು ರಚಿಸಿದ ಪ್ಲಾಸ್ಟಿಕ್ ಗೋವನ್ನು ಅದರಲ್ಲಿ ಪ್ರದರ್ಶಿಸಲಾಯಿತು. ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅನಾಹುತಗಳನ್ನು ಬಿಂಬಿಸುವುದು ಅದರ ಉದ್ದೇಶವಾಗಿತ್ತು. ಪ್ಲಾಸ್ಟಿಕ್ ತಿಂದು ಗೋವುಗಳು ಸಾವನ್ನಪ್ಪುತ್ತಿರುವುದೂ ಸೇರಿದಂತೆ ಪ್ರಾಣಿಗಳ ಮೇಲೆ ಪ್ಲಾಸ್ಟಿಕ್ ಬೀರುವ ಅಡ್ಡ ಪರಿಣಾಮವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ ಗುರಿಯನ್ನು ಆ ಪ್ಲಾಸ್ಟಿಕ್ ಗೋವು ಹೊಂದಿತ್ತು. ಆ ಕಾರಣದಿಂದಲೇ ಆ ಗೋವಿಗೆ ಬಲೂನ್ ಕಟ್ಟಿ ಸುಮಾರು 50 ಅಡಿ ಎತ್ತರದಲ್ಲಿ ಹಾರಿಸಲಾಯಿತು. ಇದಾದ ಅರ್ಧ ಗಂಟೆಯೊಳಗೆ ಅಲ್ಲಿಗೆ ಬಲಪಂಥೀಯ ಗುಂಪುಗಳು ಆಗಮಿಸಿದುವು. ಪ್ಲಾಸ್ಟಿಕ್ ಗೋವಿನ ಹಾರಾಟವನ್ನು ಹಿಂಪಡೆಯುವಂತೆ ಆಗ್ರಹಿಸಿದುವು. ಅವರ ಹಿಂದೆಯೇ ಅಲ್ಲಿಗೆ ಮಹೇಂದ್ರ ಗುಪ್ತಾ ಎಂಬ ಅಧಿಕಾರಿಯ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು ಹಾರಾಡುತ್ತಿದ್ದ ಪ್ಲಾಸ್ಟಿಕ್ ಗೋವನ್ನು ಬಲವಂತದಿಂದ ಇಳಿಸಿದರು. ಅದನ್ನು ಕಲೆ ಎಂದು ಒಪ್ಪಲು ಮಹೇಂದ್ರ ಗುಪ್ತಾ ನಿರಾಕರಿಸಿದರು. ಅದು ಭಾವನೆಗೆ ಧಕ್ಕೆ ತರುತ್ತದೆ ಎಂದು ವಾದಿಸಿದರು. ಅಲ್ಲದೇ, ‘ಸಂದರ್ಭ್ ಇಂಟರ್‍ನ್ಯಾಶನಲ್ ಆರ್ಟಿಸ್ಟ್ ರೆಸಿಡೆನ್ಸಿ’ಯ ಅನಿಶ್ ಅಹ್ಲುವಾಲಿಯ ಮತ್ತು ಚಿಂತನ್ ಉಪಾಧ್ಯಾಯ ಎಂಬ ಕಲಾವಿದರನ್ನು ಅಲ್ಲಿಂದ ಬಂಧಿಸಿ ಕರೆದೊಯ್ದು 3 ಗಂಟೆಗಳ ಕಾಲ ಬಂಧನದಲ್ಲಿರಿಸಿದರು. ಘಟನೆ ವಿವಾದದ ಸ್ವರೂಪವನ್ನು ಪಡೆಯುತ್ತಿರುವಂತೆಯೇ ಮುಖ್ಯಮಂತ್ರಿ ವಸುಂಧರಾ ರಾಜೇ ಕ್ಷಮೆ ಯಾಚಿಸಿದರು. ಮಹೇಂದ್ರ ಗುಪ್ತಾರನ್ನು ಹುದ್ದೆಯಿಂದ ವಜಾಗೊಳಿಸಿದರು. ನಿಜವಾಗಿ, ಈ ಪ್ರಕರಣವು ಬಾಹ್ಯನೋಟಕ್ಕೆ ಇಲ್ಲಿಗೇ ಕೊನೆಗೊಂಡಂತೆ ಕಂಡರೂ ಒಂದು ರೀತಿಯಲ್ಲಿ ಈ ಕೊನೆಯೇ ಕೆಲವಾರು ಪ್ರಶ್ನೆಗಳಿಗೆ ಆರಂಭವನ್ನೂ ಒದಗಿಸುತ್ತದೆ. ಗೋವನ್ನು ಗೌರವಿಸುವ ಶಿಷ್ಠ ಮಾದರಿಗಳು ಯಾವುವು? ಪ್ಲಾಸ್ಟಿಕ್ ತಿಂದು ಗೋವುಗಳು ಸಾಯುತ್ತಿರುವುದನ್ನು ಅಭಿವ್ಯಕ್ತಪಡಿಸುವ ಕಲೆಯಲ್ಲಿ ಪೊಲೀಸ್ ಅಧಿಕಾರಿಯೋರ್ವರು ‘ಭಾವನೆಗೆ ಧಕ್ಕೆ’ಯನ್ನು ಪತ್ತೆ ಹಚ್ಚುತ್ತಾರಾದರೆ, ಅವರ ‘ಭಾವನೆ' ರೂಪ ಪಡೆದದ್ದಾದರೂ ಎಲ್ಲಿ? ಹಾಗಂತ, ಬಲಪಂಥೀಯ ಗುಂಪುಗಳಿಗೆ ಅವುಗಳದ್ದೇ ಆದ ರಾಜಕೀಯ ಮತ್ತು ಇನ್ನಿತರ ಉದ್ದೇಶಗಳಿರಬಹುದು. ಅವನ್ನು ಈಡೇರಿಸಿಕೊಳ್ಳುವಲ್ಲಿ ಸಂದರ್ಭಾನುಸಾರ ಅವು ಪ್ರಯತ್ನಗಳನ್ನೂ ನಡೆಸುತ್ತಿರಬಹುದು. ಆದರೆ, ಇಂಥ ಗುಂಪುಗಳ ಭಾವನೆಯು ಪೊಲೀಸ್ ಅಧಿಕಾರಿಯ ಭಾವನೆಯೂ ಆಗಿ ಪರಿವರ್ತನೆ ಆಗಬಾರದಲ್ಲವೇ? ಆ ಗುಂಪುಗಳು ಆಲೋಚಿಸಿದಂತೆಯೇ ಅಧಿಕಾರಿಯೂ ಆಲೋಚಿಸುವುದಾದರೆ, ಅದರ ಪರಿಣಾಮ ಏನಾಗಬಹುದು? ಅಂದಹಾಗೆ, ಇದು ಕೇವಲ ಈ ‘ಪ್ಲಾಸ್ಟಿಕ್ ಗೋವು’ ಪ್ರಕರಣಕ್ಕೆ ಮಾತ್ರ ಸಂಬಂಧಿಸಿ ಹುಟ್ಟಿಕೊಳ್ಳುವ ಪ್ರಶ್ನೆಗಳಲ್ಲ. ವಾರಗಳ ಹಿಂದಷ್ಟೇ ದೆಹಲಿಯ ಪೊಲೀಸರೂ ಹೀಗೆಯೇ ವರ್ತಿಸಿದ್ದರು. ಸಂಘಪರಿವಾರದ ದೂರನ್ನು ಯಥಾವತ್ತಾಗಿ ಸ್ವೀಕರಿಸಿ ‘ಕೇರಳ ಭವನದ' ಮೇಲೆ ದಾಳಿ ನಡೆಸಿದ್ದರು. ಅನೈತಿಕ ಗೂಂಡಾಗಿರಿ, ಮತಾಂತರ, ಕೋಮುಗಲಭೆ.. ಮುಂತಾದ ದೂರುಗಳ ಸಂದರ್ಭಗಳಲ್ಲೆಲ್ಲಾ ಪೊಲೀಸ್ ಇಲಾಖೆಯಿಂದ ಇಂಥ ವರ್ತನೆಗಳು ಪದೇ ಪದೇ ಮರುಕಳಿಸುತ್ತಿವೆ. ಯಾಕೆ ಹೀಗೆ? ಪೊಲೀಸ್ ಇಲಾಖೆಯು ಸನ್ನಿವೇಶವನ್ನು ತನ್ನ ಭಾವನೆಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆಯೇ ಅಥವಾ ಘಟನೆಯನ್ನು ಪರಾಮರ್ಶಿಸುವಲ್ಲಿ ಮತ್ತು ನ್ಯಾಯಕ್ಕೆ ನಿಷ್ಠವಾಗುವಲ್ಲಿ ಎಡವುತ್ತಿದೆಯೇ? ಅಷ್ಟಕ್ಕೂ,  
      ಬಲಪಂಥೀಯ ಗುಂಪುಗಳು ಗೋವಿನ ಸುತ್ತ ಈ ಬಗೆಯ ಬೇಲಿಯನ್ನು ಹಾಕತೊಡಗಿದರೆ, ಭವಿಷ್ಯದಲ್ಲಿ ಗೋವುಗಳ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನಾಗಿರಬಹುದು? ಗೋವನ್ನು ರೂಪಕವಾಗಿಯೋ ಕಲಾ ಪ್ರಕಾರದಲ್ಲೋ ಅಥವಾ ಇನ್ನಿತರ ರೂಪದಲ್ಲೋ ಅಭಿವ್ಯಕ್ತಗೊಳಿಸುವುದನ್ನೇ ತಡೆಯುವುದು ಗೋವುಗಳಿಗೆ ಲಾಭ ತಂದುಕೊಟ್ಟೀತೇ? ಗೋವಿನ ಕುರಿತಂತೆ ಗೌರವಾದರದ ಮತ್ತು ಆರಾಧನೆಯ ಮಾತುಗಳೇನೇ ಇರಲಿ, ಅದನ್ನು ಪ್ರಾಣಿಗಳ ಗುಂಪಿನಿಂದ ಹೊರಗಿಟ್ಟು ನೋಡಲು ಸಾಧ್ಯವಿಲ್ಲ. ತನ್ನನ್ನು ಆರಾಧಿಸಲಾಗುತ್ತಿದೆ ಎಂಬುದನ್ನು ಅರಿಯದಷ್ಟೂ ಮುಗ್ಧತನ ಅವಕ್ಕಿದೆ. ಅದು ಗದ್ದೆಯನ್ನು ಉಳುತ್ತದೆ. ಹಾಲೂ ಕೊಡುತ್ತದೆ. ಆಹಾರವೂ ಆಗುತ್ತದೆ. ಹೈನುದ್ಯಮವು ಈ ದೇಶದಲ್ಲಿ ಇವತ್ತು ಬೃಹತ್ ಮಾರುಕಟ್ಟೆ ಸ್ವರೂಪವನ್ನು ಪಡೆದುಕೊಂಡಿದ್ದರೆ ಅದರ ಮೂಲ ಬಂಡವಾಳವೇ ಗೋವು. ಅದು ಅತ್ಯಂತ ಉಪಯುಕ್ತ ಪ್ರಾಣಿ ಎಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ, ಈ ಉಪಯುಕ್ತ ಪ್ರಾಣಿಯನ್ನು ಗೌರವಿಸುವ ವಿಧಾನ ಹೇಗೆ? ಪ್ಲಾಸ್ಟಿಕ್ ಗೋವನ್ನು ಹಾರಿಸುವುದಕ್ಕೆ ತಡೆ ಒಡ್ಡುವ ಮನಸ್ಥಿತಿಯು ಅಂತಿಮವಾಗಿ ಗೋವನ್ನು ಯಾವ ಸ್ಥಿತಿಗೆ ತಲುಪಿಸೀತು? ಗೋವನ್ನು ಮುಟ್ಟಿದರೂ ತಪ್ಪು, ಅದರ ಚಿತ್ರ ಬಿಡಿಸಿದರೂ ತಪ್ಪು, ಆಟಿಕೆಯಾಗಿ ಬಳಕೆಯಾದರೂ ತಪ್ಪು.. ಎಂಬ ವಾತಾವರಣ ಸೃಷ್ಟಿಯಾಗುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳಿ. ಅದು ಗೋವುಗಳಿಗೆ ಲಾಭ ತಂದುಕೊಡಬಹುದೇ?  
     ನಿಜವಾಗಿ, ಆರಾಧನೆಯ ಉಚ್ಛ್ರಾಯ ಹಂತಕ್ಕೆ ಪ್ರಾಣಿಯೊಂದು ತಲುಪುವುದೆಂದರೆ, ಅದರರ್ಥ ಆ ಪ್ರಾಣಿ ವಿನಾಶದ ಅಂಚಿಗೆ ತಲುಪುತ್ತಿದೆ ಎಂದೂ ಆಗುತ್ತದೆ. ಗೋವು ಅನಾದಿ ಕಾಲದಿಂದಲೇ ಭಾರತೀಯ ಉಪಭೂಖಂಡದ ಅತಿ ಉಪಯುಕ್ತ ಪ್ರಾಣಿ. ಅದು ಜನರ ಭಾವ ಮತ್ತು ಭಕುತಿಗೆ ತಕ್ಕಂತೆ ಉಪಯೋಗವಾಗುತ್ತಲೇ ಬಂದಿದೆ. ಆದರೆ ಇವತ್ತು ಗೋವಿನ ಸುತ್ತ ಒಂದು ಮಿಥ್ಯ ಪ್ರಭಾವಳಿಯನ್ನು ಸೃಷ್ಟಿಸಲಾಗಿದೆ. ಅತಿರಂಜಿತ ಕತೆಗಳನ್ನು ಹುಟ್ಟುಹಾಕಲಾಗಿದೆ. ಗೋವಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ವೈಭವೀಕರಿಸಿ ಹೇಳಲಾಗುತ್ತಿದೆ. ಇದರಿಂದ ಆಗುವ ಹಾನಿಯೆಂದರೆ, ಗೋವು ದಿನೇ ದಿನೇ ಜನರಿಂದ ದೂರವಾಗುತ್ತಾ ಹೋಗುವುದು. ಹಾಗಂತ, ಸಾಮಾನ್ಯ ಮಂದಿ ಗೋವನ್ನು ಸಾಕುವುದು ಬರೇ ಶ್ರದ್ಧಾ ಭಕ್ತಿಯಿಂದ ಖಂಡಿತ ಅಲ್ಲ. ಗೋವಿನ ನಾನಾ ಬಗೆಯ ಉಪಯೋಗಗಳೇ ಅದರ ಸಾಕಾಣಿಕೆಗೆ ಪ್ರಮುಖ ಪ್ರೇರಣೆ. ಗೋವನ್ನು ಖರೀದಿಸುವ, ಸಾಕುವ ಮತ್ತು ಮಾರುವ ಒಂದು ಪ್ರಕ್ರಿಯೆಯಿಂದಾಗಿಯೇ ಗೋವುಗಳು ಈವರೆಗೂ ಜನರ ನಡುವಿನ ಪ್ರಾಣಿಯಾಗಿ ಉಳಿದುಕೊಂಡಿದೆ. ಗೋವು ಸಂತತಿಯ ಉಳಿವು ಮತ್ತು ವೃದ್ಧಿಯಲ್ಲೂ ಈ ಪ್ರಕ್ರಿಯೆಯೇ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದೆ. ಇವತ್ತು ಏಕಾಏಕಿ ಈ ಪ್ರಕ್ರಿಯೆಯನ್ನೇ ರದ್ದುಗೊಳಿಸಲು ಹೊರಟರೆ ಜನರು ಗೋವನ್ನು ನೋಡುವ ವಿಧಾನವೇ ಬದಲಾಗಬಹುದು. ಅದನ್ನು ಪ್ಲಾಸ್ಟಿಕ್ ಕಲಾಕೃತಿಯಾಗಿ ರಚಿಸುವುದಕ್ಕೂ ಅಡ್ಡಿಪಡಿಸುವಂತಹ ‘ಗೋಪ್ರೇಮ'ದಿಂದ ಅಡ್ಡಿಪಡಿಸುವವರಿಗೆ ರಾಜಕೀಯ ಲಾಭ ಎಷ್ಟು ಸಿಗುತ್ತದೋ ಗೊತ್ತಿಲ್ಲ, ಆದರೆ ಗೋವುಗಳಂತೂ ವಿನಾಶದ ಅಂಚಿಗೆ ತಲುಪಲೇಬೇಕಾದ ಅನಿವಾರ್ಯತೆಗೆ
ಸಿಲುಕಬಹುದು. ಸಾಮಾನ್ಯವಾಗಿ ಹಾಲು ಕೊಡುವುದನ್ನು ನಿಲ್ಲಿಸಿದ ಹಸುವು ಮುಂದಿನ 10 ವರ್ಷಗಳ ವರೆಗಾದರೂ ಬದುಕಿರುತ್ತದೆ. ಈ 10 ವರ್ಷ ಗೋವನ್ನು ಸಾಕುವ ಸಾಮರ್ಥ್ಯ ಮತ್ತು ಆರ್ಥಿಕ ಬಲ ಎಷ್ಟು ಮಂದಿಗೆ ಇರಬಹುದು? ಬರೇ ಶ್ರದ್ಧೆಯಿಂದ ಗೊಡ್ಡು ಹಸುವನ್ನು ಸಾಕುವ ಎಷ್ಟು ಮಂದಿ ಇವತ್ತು ಈ ದೇಶದಲ್ಲಿದ್ದಾರೆ? ಗೋ ಸಾಕಾಣಿಕೆದಾರರ ಮೇಲೆ ಗೊಡ್ಡು ಹಸುವನ್ನೂ ಸಾಕುವ ಮತ್ತು ಮಾರಾಟ ಮಾಡಲಾಗದಂಥ ಅನಿವಾರ್ಯತೆಯನ್ನು ಸೃಷ್ಟಿಸಿದರೆ ಅಂತಿಮವಾಗಿ ಅದು ಗೋವನ್ನು ಸಾಕುವವರೇ ಅಪರೂಪವಾಗುವಂತಹ ಹಂತಕ್ಕೆ ಕೊಂಡೊಯ್ಯಬಹುದು. ಕೊನೆಗೆ ಗೋವೂ ಚೌಕಟ್ಟಿನೊಳಗಿನ ಗೋಡೆಚಿತ್ರವಾಗಿ ಮಾತ್ರ ಉಳಿಯುವ ಮತ್ತು ಬೆಳಗ್ಗೆಯೋ ರಾತ್ರಿಯೋ ಪೂಜೆಗೊಳ್ಳುವ ಸ್ಥಿತಿಗೆ ತಲುಪಬಹುದು. ಇವತ್ತು ಗೋವಿನ ಹೆಸರಲ್ಲಿ ನಡೆಯುತ್ತಿರುವ ಉನ್ಮಾದಿತ ಪ್ರಕ್ರಿಯೆಗಳು ಈ ಅಪಾಯವನ್ನೇ ಸೂಚಿಸುತ್ತಿವೆ. ಜೈಪುರದ ‘ಪ್ಲಾಸ್ಟಿಕ್ ಗೋವು' ಇದರ ರೂಪಕ ಅಷ್ಟೇ.




No comments:

Post a Comment