Thursday, 31 March 2016

 ಹ್ಯಾಪಿ ಗುಡ್‍ಫ್ರೈಡೇ?

  ದುಃಖಿಸಬೇಕಾದ ಕಡೆ ಸುಖಿಸುವ ಮತ್ತು ಗೌರವಿಸಬೇಕಾದ ಕಡೆ ದಮನಿಸುವ ಹೊಸ ಪರಂಪರೆಯನ್ನು ಬಿಜೆಪಿ ಮತ್ತು ಪರಿವಾರ ಹುಟ್ಟು ಹಾಕಿದೆ. ಈ ಹಿಂದೆ ತೀರಾ ಸಣ್ಣ ಮಟ್ಟದಲ್ಲಿ ಮತ್ತು ಕದ್ದು ಮುಚ್ಚಿ ಮಾಡಲಾಗುತ್ತಿದ್ದ ಈ ವಿಕೃತಿಯನ್ನು ಇವತ್ತು ಅದ್ದೂರಿಯಾಗಿ ನಿರ್ವಹಿಸಲಾಗುತ್ತಿದೆ. ಸಾಹಿತಿ ಅನಂತಮೂರ್ತಿಯವರ ಸಾವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಕೃತಿಗೆ ದೇಶ ಸಾಕ್ಷಿಯಾಗಿತ್ತು. ಗಣರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿಯೂ ಗಾಂಧೀಜಿಯವರ ಹತ್ಯೆಯನ್ನು ಸಂಭ್ರಮದ ದಿನವನ್ನಾಗಿಯೂ ಇತ್ತೀಚೆಗಷ್ಟೇ ಇಲ್ಲಿ ಆಚರಿಸಲಾಯಿತು. ವಿಕೃತಿಯ ಈ ಪಟ್ಟಿ ತೀರಾ ದೊಡ್ಡದು. ಕಳೆದವಾರ ಕ್ರೈಸ್ತ ಬಂಧುಗಳು ಗುಡ್‍ಫ್ರೈಡೇಯನ್ನು ಆಚರಿಸಿದರು. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಶೋಕತಪ್ತ ದಿನವಾಗಿ ಗುಡ್‍ಫ್ರೈಡೇ ಗುರುತಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿಯವರ ಸಚಿವ ಸಂಪುಟದ ಮೂವರು ಹಿರಿಯ ಸಚಿವರು ತಮ್ಮ ಖುಷಿಯನ್ನು ಟ್ವೀಟರ್‍ನ ಮೂಲಕ ಹಂಚಿಕೊಂಡರು. ಹ್ಯಾಪಿ ಗುಡ್‍ಫ್ರೈಡೇ ಎಂದು ಗೆಳೆಯರಿಗೆ ಶುಭಾಶಯ ಕೋರಿದರು. ರೈಲ್ವೆ ಸಚಿವ ಸುರೇಶ್ ಪ್ರಭು, ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್.. ಹೀಗೆ ಖುಷಿಪಟ್ಟವರಲ್ಲಿ ಪ್ರಮುಖರು. ಸಚಿವರುಗಳಿಗಾದ ಈ ಸಂತಸ ಸುದ್ದಿಯಾಗುತ್ತಿದ್ದಂತೆಯೇ ಹಿರಿಯ ಕ್ಯಾಥೋಲಿಕ್ ಧರ್ಮಗುರು ಪೌಲ್ ಟೆಲಿಕಟ್ಟ್ ಆಘಾತ ವ್ಯಕ್ತಪಡಿಸಿದರು. ದುಃಖಿಸಬೇಕಾದ ಕಡೆ ಸುಖಿಸಿದವರ ತಿಳುವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಚಿವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳೂ ವ್ಯಕ್ತವಾದುವು. ಅಷ್ಟಕ್ಕೂ, ಗುಡ್‍ಫ್ರೈಡೇಯ ಹಿನ್ನೆಲೆ ಮತ್ತು ಮಹತ್ವದ ಅರಿವಿನ ಕೊರತೆಯೇ ಈ ಟ್ವೀಟ್‍ಗಳಿಗೆ ಕಾರಣ ಎಂದು ಈ ಸಚಿವರುಗಳನ್ನು ಒಂದೊಮ್ಮೆ ಸಮರ್ಥಿಸಿಕೊಳ್ಳಬಹುದಾದರೂ ಇವರು ಪ್ರತಿನಿಧಿಸುವ ಪಕ್ಷ ಮತ್ತು ಅದರ ಬೆಂಬಲಿಗರು ಈ ಹಿಂದೆ ನಡೆಸಿರುವ ಮತ್ತು ಈಗ ನಡೆಸುತ್ತಿರುವ ವಿಕೃತಿಗಳನ್ನು ಪರಿಗಣಿಸಿದರೆ ಇದನ್ನು ಅಷ್ಟು ಸರಳವಾಗಿ ನೋಡುವಂತಿಲ್ಲ. ಪ್ರಮಾದ, ಎಡವಟ್ಟು ಮುಂತಾದ ಸಾಧು ಪದಗಳನ್ನು ಬಳಸಿ ಇದನ್ನು ಲಘೂಕರಿಸುವಂತೆಯೂ ಇಲ್ಲ. ವಿಕೃತಿಯು ಅಭ್ಯಾಸವಾಗಿ ಬಿಟ್ಟರೆ ಕ್ರಮೇಣ ಅದು ಮನಸ್ಥಿತಿಯಾಗಿ ಬದಲಾಗಿ ಬಿಡುತ್ತದೆ. ಆ ಬಳಿಕ ತನಗೆ ಒಪ್ಪಿತವಲ್ಲದ ಎಲ್ಲವನ್ನೂ ಬಲವಂತದಿಂದ ದಮನಿಸುವ ಪ್ರವೃತ್ತಿ ಬೆಳೆಯುತ್ತದೆ. ಜೆ.ಎನ್.ಯು. ಪ್ರಕರಣ ಇದಕ್ಕೆ ಅತ್ಯುತ್ತಮ ಉದಾಹರಣೆ. 120 ಕೋಟಿಗಿಂತಲೂ ಅಧಿಕ ಜನರಿರುವ ದೇಶವೊಂದರಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ವೇಮುಲ, ಕನ್ಹಯ್ಯ, ಉಮರ್ ಖಾಲಿದ್ ಮುಂತಾದವರು ಪ್ರತಿಪಾದಿಸುವ ಸಿದ್ಧಾಂತವನ್ನು ಉಳಿದೆಲ್ಲ ಭಾರತೀಯರು ಒಪ್ಪಿಕೊಳ್ಳಬೇಕೆಂದು ಯಾರೂ ಬಲವಂತಪಡಿಸುತ್ತಲೂ ಇಲ್ಲ. ಆದರೆ ಸಂವಿಧಾನಬದ್ಧ ಎಲ್ಲ ವಿಚಾರಧಾರೆಗೂ ಸಮಾನ ಗೌರವ ಮತ್ತು ಸ್ಪೇಸ್ ನೀಡಬೇಕಾದುದು ಎಲ್ಲರ ಕರ್ತವ್ಯ. ಆದರೆ ಬಿಜೆಪಿ ಮತ್ತು ಬಳಗ ಈ ಸ್ಪೇಸ್ ಅನ್ನೇ ಜನರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಭಾರತ್ ಮಾತಾಕಿ ಜೈ, ದೇಶಪ್ರೇಮ-ದೇಶದ್ರೋಹ, ಗೋಮಾಂಸ, ವಂದೇಮಾತರಂ.. ಮುಂತಾದ ವಿಷಯಗಳಲ್ಲಿ ಅದು ತನ್ನ ವಿಚಾರಧಾರೆಯನ್ನು ಈ ದೇಶದ ಮುಂದೆ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ಅದನ್ನು ಒಪ್ಪದವರನ್ನು ನಿರ್ದಯವಾಗಿ ದಮನಿಸುವ ಕ್ರೌರ್ಯವನ್ನು ಮೆರೆದಿದೆ. ಕನ್ಹಯ್ಯ, ಉಮರ್ ಖಾಲಿದ್, ಅನಿರ್ಬನ್‍ರನ್ನು ಅದು ದೇಶದ್ರೋಹದ ಹೆಸರಲ್ಲಿ ಜೈಲಿಗಟ್ಟಿತು. ಎಸ್.ಎ.ಆರ್. ಗೀಲಾನಿಯನ್ನೂ ಕಂಬಿಯೊಳಕ್ಕೆ ನೂಕಿತು. ಹಾಗಂತ, ನಿಜಕ್ಕೂ ಅವರದ್ದು ದೇಶದ್ರೋಹಿ ಕೃತ್ಯವೇ, ದೇಶದ್ರೋಹಕ್ಕಿರುವ ಮಾನದಂಡಗಳು ಏನೆಲ್ಲ.. ಎಂಬ ಬಹುಮುಖ್ಯ ಪ್ರಶ್ನೆಗೆ ಅದು ಎಲ್ಲೂ ಮುಖಾಮುಖಿಯಾಗದೇ ಭಾವನಾತ್ಮಕ ಉತ್ತರಗಳನ್ನು ಕೊಡತೊಡಗಿತು. ಇವರೆಲ್ಲ ಜೈಲಿಗೆ ಹೋದಷ್ಟೇ ಶೀಘ್ರವಾಗಿ ಹೊರಗೂ ಬಂದರು. ಇದೇ ವೇಳೆ, ಶ್ರೀಶ್ರೀ ರವಿಶಂಕರ್ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದರು. ಬಿಜೆಪಿಗೆ ನಿಜಕ್ಕೂ ತಾನು ಪ್ರತಿಪಾದಿಸುವ ‘ದೇಶಪ್ರೇಮಿ' ವಿಚಾರಧಾರೆಯ ಬಗ್ಗೆ ಕಳಕಳಿ ಇದ್ದಿದ್ದೇ ಆಗಿದ್ದರೆ ಮತ್ತು ದೇಶದ್ರೋಹಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳನ್ನು ಅದು ಹೊಂದಿದ್ದೇ ಆಗಿದ್ದರೆ, ಜೈಲಿನಿಂದ ಹೊರಬಂದ ಕನ್ಹಯ್ಯನನ್ನೂ ಜೈಲಿಗೇ ಹೋಗದ ರವಿಶಂಕರ್‍ರನ್ನೂ ಸೈದ್ಧಾಂತಿಕವಾಗಿ ಮುಖಾಮುಖಿಗೊಳಿಸಿ ವಿಶ್ಲೇಷಿಸಬೇಕಿತ್ತು. ಕನ್ಹಯ್ಯ ಗುಂಪಿನ ಮೇಲೆ ಕೈಗೊಂಡ ಉಗ್ರ ಕ್ರಮಗಳನ್ನು ಯಾಕೆ ರವಿಶಂಕರ್ ಮೇಲೆ ಕೈಗೊಂಡಿಲ್ಲವೆಂಬುದಕ್ಕೆ ಸೈದ್ಧಾಂತಿಕ ಉತ್ತರಗಳನ್ನು ನೀಡಬೇಕಿತ್ತು. ಒಂದು ವೇಳೆ, ಇಂಥ ಚರ್ಚೆಗಳಿಗೆ ಪ್ರಾಮಾಣಿಕವಾಗಿ ಅದು ತೆರೆದುಕೊಳ್ಳುತ್ತಿದ್ದರೆ, ದೇಶದ್ರೋಹ ಒಂದೇ ಅಲ್ಲ, ಆಹಾರ, ಸಂಸ್ಕ್ರತಿ ಸಹಿತ ಎಲ್ಲವನ್ನೂ ಸಂವಿಧಾನದ ಆಧಾರದಲ್ಲಿ ಚರ್ಚಿಸುವುದಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಬಿಜೆಪಿ ಇಂಥ ಸಂದರ್ಭಗಳಲ್ಲಿ ಅತ್ಯಂತ ಬೇಜವಾಬ್ದಾರಿ ನಿಲುವುಗಳನ್ನೇ ಪ್ರದರ್ಶಿಸಿದೆ. ಅಂದಹಾಗೆ, ಗೋಸಾಗಾಟ, ಗೋಮಾಂಸ ಸೇವನೆ.. ಮುಂತಾದುವುಗಳ ಹೆಸರಲ್ಲಿ ಈ ದೇಶದಲ್ಲಾಗುತ್ತಿರುವ ಯಾವ ಹಲ್ಲೆ, ಹತ್ಯೆಗೂ ಅದು ಖಂಡನೆಯ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಅದರ ಬದಲು ಅದು ಹಲ್ಲೆಕೋರರನ್ನೇ ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತದೆ. ಅನೈತಿಕ ಪೊಲೀಸ್‍ಗಿರಿಯ ಸಂದರ್ಭದಲ್ಲೂ ಅದರ ನಿಲುವು ಇದಕ್ಕಿಂತ ಭಿನ್ನವಾಗಿಲ್ಲ. ತನ್ನ ನಿಲುವನ್ನು ಬಲವಂತದಿಂದ ಜಾರಿಗೊಳಿಸುವ ಮತ್ತು ತನ್ನ ನಿಲುವಿಗೆ ಸಡ್ಡು ಹೊಡೆಯುವಂತಹ ಪ್ರಕರಣಗಳನ್ನು ನಿರ್ದಯೆಯಿಂದ ದಮನಿಸುವ ಕೆಟ್ಟ ಗುಣವೊಂದು ಅದರಲ್ಲಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸುತ್ತಿಲ್ಲ. ದೇಶದ ಬಹುಸಂಸ್ಕ್ರತಿಯ ಬಗ್ಗೆ ಅಥವಾ ಹಿಂದೂ ಧರ್ಮದ ಸಹಿಷ್ಣುತೆಯ ಬಗ್ಗೆ ಅದು ಭಾಷಣ ಮಾಡುವುದಕ್ಕೂ ಕಾರ್ಯತಃ ಅದು ನಡಕೊಳ್ಳುವುದಕ್ಕೂ ಇರುವ ಅಂತರ ಬಹಳ ದೊಡ್ಡದು. ಇದನ್ನು ನಾವು ಕೇವಲ ದ್ವಂದ್ವ ಎಂಬ ಸಾಧು ಪದದ ಮೂಲಕ ಕರೆದು ಸುಮ್ಮನಾಗುವಂತಿಲ್ಲ. ದ್ವಂದ್ವ ನಿಲುವಿನಲ್ಲಿ ಅಸಹಿಷ್ಣುತೆಗಿಂತಲೂ ಪಲಾಯನವಾದದ ವಾಸನೆಯೇ ಹೆಚ್ಚಿರುತ್ತದೆ. ಆ ಸಂದರ್ಭದ ಇಕ್ಕಟ್ಟನ್ನು ತಪ್ಪಿಸಿಕೊಳ್ಳುವುದಕ್ಕಾಗಿ ತನ್ನದೇ ಹಿಂದಿನ ಧೋರಣೆಯನ್ನು ತ್ಯಜಿಸುವ ವಿಧಾನ ಅದು. ಬಿಜೆಪಿ ಪ್ರದರ್ಶಿಸುತ್ತಿರುವುದು ಈ ಸಂದರ್ಭ ಸಾಧಕತನ ನಿಲುವನ್ನಲ್ಲ. ಈ ನಿಲುವಿನಲ್ಲಿ ಪಲಾಯನವಾದವೂ ಇಲ್ಲ. ಅದು ಗೊತ್ತಿದ್ದೇ ಮತ್ತು ಖಚಿತತೆಯೊಂದಿಗೆಯೇ ಇಂಥ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಭಿನ್ನ ವಿಚಾರಧಾರೆ ಎಂಬೊಂದು ನೆಲೆಗಟ್ಟನ್ನೇ ಬುಡಸಮೇತ ಕೀಳುವ ಅತ್ಯಂತ ಅಸಹಿಷ್ಣು ನೀತಿಯಿದು. ಈ ನೀತಿ ಎಷ್ಟು ಅಪಾಯಕಾರಿಯೆಂದರೆ ಅದು ತನ್ನನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲ, ಆ ಸಮರ್ಥನೆಗೆ ಪೂರಕವಾಗಿ ಯಾವ ವಿಕೃತಿಗೂ ಮುಂದಾಗುತ್ತದೆ. ಸಂವಿಧಾನವನ್ನು ಬೇಕಾದಾಗ ಬೇಕಾದಂತೆ ಉಪಯೋಗಿಸುತ್ತದೆ. ತನ್ನ ವಿಚಾರಧಾರೆಗೆ ಸಂವಿಧಾನ ವಿರುದ್ಧವೆಂದಾದರೆ ಸಂವಿಧಾನದ ಹೆಸರೆತ್ತದೆಯೇ ದೇಶ, ಸಂಸ್ಕ್ರತಿ, ಪರಂಪರೆ, ಧರ್ಮ.. ಎಂಬಿತ್ಯಾದಿ ಪವಿತ್ರ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸಿ ಸಂವಿಧಾನ ಚರ್ಚೆಗೆ ಒಳಗಾಗದಂತೆ ಅಥವಾ ಇವೆಲ್ಲವೂ ಸಂವಿಧಾನದ ಹೊರಗೆ ಇತ್ಯರ್ಥವಾಗಬೇಕಾದ ವಿಷಯಗಳೆಂಬಂತೆ ಭ್ರಮೆ ಮೂಡಿಸುತ್ತದೆ. ಕನ್ಹಯ್ಯ ಮತ್ತು ಬಳಗವನ್ನು ಇವತ್ತು ಅದು ಬೇಟೆಯಾಡುತ್ತಿರುವುದು ಇದೇ ‘ಭ್ರಮಾ’ ಸಂವಿಧಾನದ ಆಧಾರದಲ್ಲಿ. ಈಗಾಗಲೇ ಇದರ ಅಪಾಯಕ್ಕೆ ಶಾರುಖ್, ಅಮೀರ್, ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾದತ್.. ಮುಂತಾದ ಅನೇಕರು ಗುರಿಯಾಗಿದ್ದಾರೆ. ‘ತಾನೇ ಸರಿ ಇತರೆಲ್ಲರೂ ತಪ್ಪು' ಎಂಬ ಮನಸ್ಥಿತಿ ನಿಜಕ್ಕೂ ಅತ್ಯಂತ ಅಪಾಯಕಾರಿ. ವಿಕೃತಿಯೇ ವಿಚಾರಧಾರೆಯಾದರೆ, ಶೋಕಕ್ಕೂ ಸುಖಪಡಲಾಗುತ್ತದೆ. ಕ್ರೌರ್ಯವನ್ನೂ ಗೌರವಿಸಲಾಗುತ್ತದೆ. ಗುಡ್‍ಫ್ರೈಡೇಯಂದು ಸಂತಸ ಹಂಚಿಕೊಂಡಿರುವುದರಲ್ಲಿ ಪರೋಕ್ಷ
ವಾಗಿ ವ್ಯಕ್ತವಾಗುವುದೂ ಇದುವೇ.

Wednesday, 23 March 2016

ನಕಾರಾತ್ಮಕತೆಯ ಪ್ರಾಬಲ್ಯ ಮತ್ತು ಒಂದು ಸಂಶೋಧನೆ

       ಕಳೆದವಾರ ಎರಡು ಪ್ರಮುಖ ಘಟನೆಗಳು ಜರುಗಿದುವು. ಇವುಗಳಲ್ಲಿ ಒಂದು ಘಟನೆಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯವಾದರೆ, ಇನ್ನೊಂದು ಘಟನೆ ಹತ್ತಾರು ಸುದ್ದಿಗಳ ಮಧ್ಯೆ ಕೇವಲ ಒಂದು ಸುದ್ದಿಯಾಗುವ ಭಾಗ್ಯವನ್ನಷ್ಟೇ ಕಂಡು ಸತ್ತು ಹೋಯಿತು. ಮಾರ್ಚ್ 15ರಂದು ರಾಜಸ್ಥಾನದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ 4 ಮಂದಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಬಲಪಂಥೀಯ ದುಷ್ಕರ್ಮಿಗಳಿಂದ ಹಲ್ಲೆ ನಡೆಯಿತು. ಇವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸವನ್ನು ಬೇಯಿಸುತ್ತಿದ್ದರು ಎಂಬುದು ಈ ಹಲ್ಲೆಗೆ ಕಾರಣವನ್ನಾಗಿ ಕೊಡಲಾಯಿತು. ಪೊಲೀಸರು ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನೇ ಬಂಧಿಸಿದರು. ಮರುದಿನ ಅವರಿಗೆ ಜಾಮೀನು ನೀಡುವಾಗ, 'ಆರು ತಿಂಗಳುಗಳ ಕಾಲ ನಿಮ್ಮ ಮೇಲೆ ನಿಗಾ ಇಡಲಾಗುವುದು' ಎಂದು ಕೋರ್ಟು ಎಚ್ಚರಿಸಿತು. ಇದರ ಜೊತೆಜೊತೆಗೇ ಅಲ್ಲಿನ ಪ್ರಾಣಿ ಸಾಕಾಣಿಕಾ ಇಲಾಖೆಯಿಂದ ಹೊರಬಿದ್ದ ಸಂಶೋಧನಾ ವರದಿಯು ಆ ಇಡೀ ಘಟನೆಯು ಪೂರ್ವಗ್ರಹ ಪೀಡಿತವಾದುದು ಎಂಬುದಾಗಿ ಸಾರಿತು. ‘ಅವರು ಬೇಯಿಸುತ್ತಿದ್ದುದು ಗೋಮಾಂಸವಲ್ಲ, ಆಡಿನ ಮಾಂಸ’ ಎಂಬುದಾಗಿ ಅದು ಮಾಂಸ ಪರೀಕ್ಷೆಯ ಬಳಿಕ ಘೋಷಿಸಿತು. ಈ ಎಲ್ಲವೂ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಯಿತು. ಟಿ.ವಿ. ಚಾನೆಲ್‍ಗಳು ಈ ಸುದ್ದಿಯನ್ನಾಧರಿಸಿ ಚರ್ಚೆಗಳನ್ನು ಏರ್ಪಡಿಸಿದುವು. ಪತ್ರಿಕೆಗಳಲ್ಲೂ ಸಾಕಷ್ಟು ಕವರೇಜ್ ಲಭ್ಯವಾದುವು. ಇದಾಗಿ ಮೂರು ದಿನಗಳ ಬಳಿಕ ಮಾರ್ಚ್ 20ರಂದು ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿ ಭವನ ಇದಕ್ಕೆ ಸಾಕ್ಷಿಯಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಆಗಿರಬಹುದಾದ ಹೊಸ ಸಂಶೋಧನೆಗಳನ್ನು ಪ್ರದರ್ಶಿಸಲು ರಾಷ್ಟ್ರಪತಿ ಭವನವು ಆಹ್ವಾನಿಸಿತ್ತು. ಅದರಂತೆ 114 ಸಂಶೋಧನೆಗಳ ಪಟ್ಟಿಯಲ್ಲಿ 6ನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಐಐಟಿ ಕಾನ್ಪುರ, ಜಮ್ಮು ಕೇಂದ್ರೀಯ ವಿಶ್ವ ವಿದ್ಯಾನಿಲಯ, ಐಐಟಿ ಮದ್ರಾಸ್, ಎನ್ಐಟಿ ತಿರುಚಿನಾಪಳ್ಳಿ, ಐಐಟಿ ದೆಹಲಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯಗಳು ಈ ಪ್ರದರ್ಶನಕ್ಕೆ ಆಯ್ಕೆಯಾದುವು. ಜಾಮಿಯಾದ ಹುಮಾ ಪರ್ವೇಝï, ಫೈಝ ಜಮಾಲ್ ಮತ್ತು ಫರಾಜ್  ಖಾನ್ ಎಂಬೀ ವಿದ್ಯಾರ್ಥಿಗಳು 'ಇನ್ನೋಕಾರ್ಟ್' ಎಂಬ ಪರಿಸರ ಸ್ನೇಹಿ ತಳ್ಳುಗಾಡಿಯನ್ನು ಪ್ರದರ್ಶಿಸಿ ವಿಶೇಷ ಗೌರವಕ್ಕೆ ಪಾತ್ರರಾದರು. ಇದು ಆಹಾರ ಮಾರಾಟ ಮಾಡುವ ತಳ್ಳುಗಾಡಿ. ಇದರಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆಯಿದೆ. ಮೇಲೆ ಮುಚ್ಚಿಗೆಯ ವ್ಯವಸ್ಥೆ ಇದೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿಡಲು ಎರಡು ಪ್ರತ್ಯೇಕ ವಿಭಾಗಗಳ ಜೊತೆಗೇ ಮುಚ್ಚಿಗೆಯ ಮೇಲೆ ಸೌರ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ‘ಇನ್ನೋಕಾರ್ಟ್’ ಭಾರತದ ಬೀದಿ ಆಹಾರ ಮಾರಾಟ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. ವಿವಿಯ ಆವರಣದ ರಸ್ತೆಗಳಲ್ಲಿರುವ ಕ್ಯಾಂಟೀನಿನ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿಸಿ ಈ ತಳ್ಳುಗಾಡಿಯನ್ನು ಪರೀಕ್ಷಿಸುತ್ತೇವೆ ಮತ್ತು ಪೇಟೆಂಟ್‍ಗಾಗಿ ಅರ್ಜಿ ಹಾಕುತ್ತೇವೆ ಎಂದು ಈ ಉತ್ಸಾಹಿ ಮಕ್ಕಳು ಹೇಳಿಕೊಂಡಿದ್ದಾರೆ. ಆದರೆ ಈ ಸಂಶೋಧನೆಯ ಬಗ್ಗೆ ಮಾಧ್ಯಮಗಳು ಬಹುತೇಕ ಶೂನ್ಯ ಕುತೂಹಲವನ್ನು ವ್ಯಕ್ತಪಡಿಸಿದುವು. ತೀರಾ ಸಣ್ಣ ಸುದ್ದಿಯ ಗೌರವವನ್ನಷ್ಟೇ ಅವು ಇದಕ್ಕೆ ಕೊಟ್ಟವು. ಕೆಲವು ಪತ್ರಿಕೆಗಳಂತೂ ಇದಕ್ಕೆ ಸುದ್ದಿಯಾಗುವ ಭಾಗ್ಯವನ್ನೂ ಕರುಣಿಸಲಿಲ್ಲ. ಅಷ್ಟಕ್ಕೂ, ಮಾಧ್ಯಮಗಳ ಮಟ್ಟಿಗೆ ಈ ಸಂಶೋಧನೆಯಲ್ಲಿ ಸೆನ್ಸೇಷನಲ್ ಅನ್ನುವುದು ಏನೂ ಇಲ್ಲ. ಒಂದು ತಳ್ಳುಗಾಡಿ, ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ.. ಇಷ್ಟನ್ನು ಬಿಟ್ಟರೆ ಉಳಿದಂತೆ ಈ ಸುದ್ದಿ ಗೊಂಚಲಿನಲ್ಲಿ ಭಾರತ್ ಮಾತಾಕಿ ಜೈ, ಪಾಕಿಸ್ತಾನ್ ಜಿಂದಾಬಾದ್, ಖಾಕಿ ಚಡ್ಡಿ-ಕಂದು ಪ್ಯಾಂಟು, ದೇಶದ್ರೋಹ-ದೇಶಪ್ರೇಮ, ಗೋಮಾಂಸ.. ಮುಂತಾದುವುಗಳಲ್ಲಿರುವ ಆಕರ್ಷಣೆಯೇನೂ ಈ ಸಂಶೋಧನೆಯಲ್ಲಿಲ್ಲವಲ್ಲ.
  ನಿಜವಾಗಿ, ವಿವಾದಾತ್ಮಕವಲ್ಲದ ಮತ್ತು ಸಕಾರಾತ್ಮಕವಾದ ಸುದ್ದಿಗಳಿಗೆ ಪ್ರಾಮುಖ್ಯತೆಯನ್ನು ಕೊಡುವುದು ಮತ್ತು ಅವುಗಳ ಮೇಲೆ ಚರ್ಚೆ-ಸಂವಾದಗಳನ್ನು ಏರ್ಪಾಡು ಮಾಡುವುದು ದಡ್ಡತನ ಎಂದು ಕರೆಸಿಕೊಳ್ಳುವಷ್ಟು ಇವತ್ತು ಅಪ್ರಸ್ತುತ ಅನಿಸಿಕೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಇವತ್ತು ಸುದ್ದಿಯೊಂದು ಗಮನ ಸೆಳೆಯಬೇಕಾದರೆ ಅದು ಮುಸ್ಲಿಮರಿಗೆ ಸಂಬಂಧಿಸಿರಬೇಕು ಮತ್ತು ಸಂಘಪರಿವಾರ ಅದರಲ್ಲಿ ಭಾಗಿಯಾಗಿರಬೇಕು ಎಂಬ ಅಲಿಖಿತ ನಿಯಮ ಗೊತ್ತಿದ್ದೋ  ಗೊತ್ತಿಲ್ಲದೆಯೋ ಜಾರಿಯಲ್ಲಿದೆ. ಗೋಸಾಗಾಟ, ಗೋಮಾಂಸ, ದೇಶದ್ರೋಹ, ಭಯೋತ್ಪಾದನೆ ಮುಂತಾದುವುಗಳೇ ಈ ದೇಶದಲ್ಲಿ ಇವತ್ತು ಸದಾ ಬ್ರೇಕಿಂಗ್ ನ್ಯೂಸ್. ಇಲ್ಲೆಲ್ಲಾ  ಮುಸ್ಲಿಮರ ಪಾತ್ರ ಯಾವಾಗಲೂ ನಕಾರಾತ್ಮಕ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸಿ ಅವರನ್ನು ಹಲ್ಲೆಗೋ ಹತ್ಯೆಗೋ ಒಳಪಡಿಸುವುದು ಬಲಪಂಥೀಯ ದುಷ್ಕರ್ಮಿಗಳ ತಂತ್ರಗಾರಿಕೆ. ಈ ವಿಷಯವನ್ನೆತ್ತಿಕೊಂಡು ಮಾಧ್ಯಮಗಳು ಆ ಬಳಿಕ ಚರ್ಚೆಯನ್ನೇರ್ಪಡಿಸುತ್ತವೆ. ಜಾತ್ಯತೀತವಾದಿಗಳು ಈ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ದುಷ್ಕರ್ಮಿಗಳು ಹಸಿ ಹಸಿ ಸುಳ್ಳನ್ನು ಹೇಳಲು ಈ ಚರ್ಚಾ ವೇದಿಕೆಯನ್ನು ದುರುಪಯೋಗಿಸುತ್ತಾರೆ. ಕೊನೆಗೆ ಕೋಣ ಸಾಗಾಟವು ಗೋಸಾಗಾಟವಾಗಿ ಪರಿವರ್ತನೆಯಾಗುತ್ತದೆ. ಆಡಿನ ಮಾಂಸವು ಗೋಮಾಂಸವಾಗುತ್ತದೆ. ಹಸಿರು ಧ್ವಜವು ಪಾಕಿಸ್ತಾನದ ಧ್ವಜವಾಗಿ ಮಾರ್ಪಡುತ್ತದೆ. ಥಳಿತಕ್ಕೊಳಗಾದವರು ಅಪರಾಧಿಗಳಾಗಿಯೂ ಥಳಿಸಿದವರು ನ್ಯಾಯವಂತರಾಗಿಯೂ ಬಿಂಬಿತರಾಗುತ್ತಾರೆ. ಒಂದು ಬಗೆಯ ಕೋಮುಧ್ರುವೀಕರಣಕ್ಕೆ ಇಂಥ ಚರ್ಚೆಗಳು ಬಹುತೇಕ ಬಾರಿ ವೇದಿಕೆಯಾಗುತ್ತಿವೆಯೇ ಹೊರತು, ಸಕಾರಾತ್ಮಕ ಫಲಿತಾಂಶಗಳನ್ನು ತರುವಲ್ಲಿ ವಿಫಲವಾಗುತ್ತಿವೆಯೇನೋ ಎಂದು ಅನಿಸುತ್ತಿದೆ. ಬಹುಶಃ ಸಕಾರಾತ್ಮಕ ಸುದ್ದಿಗಳ ಮೇಲಿನ ಚರ್ಚೆಯನ್ನು ತಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಬಲಪಂಥೀಯರು ಇಂಥ ಘಟನೆಗಳನ್ನು ಹುಟ್ಟು ಹಾಕುತ್ತಿದ್ದಾರೋ ಎಂಬ ಅನುಮಾನವೂ ಮೂಡುತ್ತಿದೆ. ಹೀಗೆ ಮುಸ್ಲಿಮರೆಂದರೆ ನಕಾರಾತ್ಮಕತೆ, ನಕಾರಾತ್ಮಕತೆಯೆಂದರೆ ಮುಸ್ಲಿಮರು ಎಂಬೊಂದು ವಾತಾವರಣದ ಸೃಷ್ಟಿಗೆ ಒಂದು ಗುಂಪು ತೀವ್ರ ಪರಿಶ್ರಮ ನಡೆಸುತ್ತಿರುವುದರ ಮಧ್ಯೆ, ಸಕಾರಾತ್ಮಕವಾದುದನ್ನು ಚರ್ಚೆಗೆ ಎತ್ತಿಕೊಳ್ಳಬೇಕಾದ ತುರ್ತೊಂದು ಸಮಾಜದ ಮೇಲಿದೆ. ಒಂದು ಕಡೆ ಮೋದಿ ಸರಕಾರವು ಜಾಮಿಯಾ ಮಿಲ್ಲಿಯ ಮತ್ತು ಅಲೀಘಡ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಈ ಕುರಿತಂತೆ ಸುಪ್ರೀಮ್ ಕೋರ್ಟಿನಲ್ಲಿಯೇ ತನ್ನ ಇಂಗಿತವನ್ನು ಅದು ವ್ಯಕ್ತಪಡಿಸಿದೆ. ಇನ್ನೊಂದು ಕಡೆ ಜಾಮಿಯಾದ ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ದೇಶವೇ ಹೆಮ್ಮೆ ಪಡಬಹುದಾದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಈ ಸುದ್ದಿ ಯಾಕೆ ಮಹತ್ವಪೂರ್ಣ ಎಂದರೆ, ಮುಸ್ಲಿಮ್ ಎಂಬ ಐಡೆಂಟಿಟಿಯನ್ನೇ ದೇಶದ್ರೋಹವಾಗಿಯೋ ಅಸಹಿಷ್ಣುವಾಗಿಯೋ ಅಥವಾ ಅನುಮಾನಿತವಾಗಿಯೋ ಕಾಣಲಾಗುತ್ತಿರುವ ಈ ಹೊತ್ತಿನಲ್ಲಿ ಈ ಸಾಧನೆಯನ್ನು ಮಾಡಲಾಗಿದೆ ಎಂಬುದರಿಂದಾಗಿ. ಸಹಜ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತೀರಾ ಕಲುಷಿತಗೊಂಡಿರುವ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತುಂಬಾ ವ್ಯತ್ಯಾಸ ಇದೆ. ಆದ್ದರಿಂದಲೇ ಈ ಸಂಶೋಧನೆಯು ಪ್ರಾಮುಖ್ಯತೆಯನ್ನು ಪಡೆಯಬೇಕಿತ್ತು ಎಂದು ಮಾತ್ರವಲ್ಲ, ಮಾಧ್ಯಮಗಳು ಈ ಸುದ್ದಿಯ ಹಿನ್ನೆಲೆಯಲ್ಲಿ ಸಕಾರಾತ್ಮಕ ಚರ್ಚೆಯೊಂದನ್ನು ಹುಟ್ಟುಹಾಕುವುದಕ್ಕೂ ಪ್ರಯತ್ನಿಸಬೇಕಾಗಿತ್ತು ಎಂದು ಅನಿಸುವುದು. ಇಂದಿನ ಮುಸ್ಲಿಮ್ ಪ್ರತಿಕೂಲ ಪರಿಸ್ಥಿತಿಯಲ್ಲಿ ‘ಇನ್ನೋಕಾರ್ಟ್' ಸುದ್ದಿಯು ಚರ್ಚೆಗೆ ಒಳಗಾಗುತ್ತಿದ್ದರೆ ಅದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗುವುದಕ್ಕೂ ಅವಕಾಶ ಇತ್ತು. ಅಲ್ಲದೇ ಬಲಪಂಥೀಯರ ಉದ್ದೇಶವನ್ನು ವಿಫಲಗೊಳಿಸುವುದಕ್ಕೂ ಅದು ನೆರವಾಗುತ್ತಿತ್ತು. ದುರಂತ ಏನೆಂದರೆ, ಇವತ್ತು ವಿಷಯವೊಂದು ಚರ್ಚಾಸ್ಪದವಾಗಬೇಕಾದರೆ ಅದರಲ್ಲಿ ನಕಾರಾತ್ಮಕತೆ ಇರಲೇಬೇಕು ಎಂಬ ನಿಯಮವಿದೆ. ಆದ್ದರಿಂದ, ಇದನ್ನು ಮೀರುವ ಸಾಹಸ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಸಮಾಜ ನಕಾರಾತ್ಮಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇಲ್ಲದಿಲ್ಲ.

Wednesday, 16 March 2016

ಬದಲಾಗಬೇಕಾದ್ದು ಬಾಹ್ಯವಲ್ಲ, ಅಂತರಂಗ...

        ಶಿಶುವೊಂದು ಬೆಳೆಯುತ್ತಾ ಹೋದಂತೆ ಪ್ಯಾಂಪರ್ಸ್‍ನಿಂದ ಅಂಡರ್‍ವೇರ್‍ಗೆ, ಅಂಡರ್‍ವೇರ್‍ನಿಂದ ಚಡ್ಡಿಗೆ, ಚಡ್ಡಿಯಿಂದ ಪ್ಯಾಂಟ್, ಚೂಡಿದಾರ್, ಲಂಗಧಾವಣಿ, ಸೀರೆ ಅಥವಾ ಲುಂಗಿ ಇತ್ಯಾದಿ ಇತ್ಯಾದಿಗಳಿಗೆ ತನ್ನ ಉಡುಪನ್ನು ಬದಲಾಯಿಸುತ್ತಾ ಹೋಗುವುದು ಸಹಜ. ಆದ್ದರಿಂದಲೇ ಈ ಪ್ರಕ್ರಿಯೆಗೆ ಸಮಾಜ ಆಶ್ಚರ್ಯ ಪಟ್ಟದ್ದೂ ಇಲ್ಲ, ಆತಂಕದಿಂದ ನೋಡಿದ್ದೂ ಇಲ್ಲ. ಆದರೆ, ಚಡ್ಡಿಯನ್ನೋ ಪ್ಯಾಂಟನ್ನೋ ಧರಿಸಿ ಓಡಾಡಬೇಕಾದ ಪ್ರಾಯದ ಹುಡುಗನೋರ್ವ ಪ್ಯಾಂಪರ್ಸ್‍ಗೇ ಜೋತುಬಿದ್ದರೆ ಮತ್ತು ಹಠ ಹಿಡಿದು ಅದನ್ನೇ ಧರಿಸಿ ಓಡಾಡತೊಡಗಿದರೆ ಅದು ಅಸಹಜವಾಗಿ ಕಾಣುತ್ತದೆ. ಮಧ್ಯ ವಯಸ್ಕನೋರ್ವ ಚಡ್ಡಿಯನ್ನೇ ಶಾಶ್ವತ ಉಡುಪಾಗಿ ಆಯ್ಕೆ ಮಾಡಿಕೊಂಡಾಗಲೂ ಇಂಥದ್ದೊಂದು ಕುತೂಹಲ ಹುಟ್ಟುವುದಿದೆ. ಹಾಗಂತ, ಮಧ್ಯವಯಸ್ಕನ ಈ ಉಡುಪು ತಮಾಷೆ, ವ್ಯಂಗ್ಯ, ಅಪಹಾಸ್ಯಕ್ಕೆ ಒಳಗಾಗಬೇಕಾದ ಅಗತ್ಯ ಖಂಡಿತ ಅಲ್ಲ. ಆಯ್ಕೆಯ ಸ್ವಾತಂತ್ರ್ಯ ಇರುವಲ್ಲಿ ಅದನ್ನು ಗೌರವಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಎಚ್ಚರಿಕೆ ಜಾಗೃತವಾಗಿರುವುದರಿಂದಲೇ ಆರೆಸ್ಸೆಸ್ ಕಳೆದ 90 ವರ್ಷಗಳಿಂದ ಸಮವಸ್ತ್ರವಾಗಿ ಪಾಲಿಸುತ್ತಾ ಬಂದಿರುವ ಖಾಕಿ ಚಡ್ಡಿಯನ್ನು ಬಹುಸಂಖ್ಯಾತ ಸಮಾಜ ತಮಾಷೆಗೆ ಬಳಸಿಕೊಂಡಿಲ್ಲ. ಕೆಲವರು ಆರೆಸ್ಸೆಸ್ಸನ್ನು ಗುರುತಿಸುವುದಕ್ಕೆ ಚಡ್ಡಿಯನ್ನು ಸಂಕೇತ ನಾಮವಾಗಿ ಬಳಕೆ ಮಾಡಿದ್ದರೂ ಚಡ್ಡಿಯ ಕಾರಣಕ್ಕಾಗಿಯೇ ಆರೆಸ್ಸೆಸ್ ಟೀಕೆಗೆ ಒಳಗಾಗಿದ್ದು ತೀರಾ ತೀರಾ ಕಡಿಮೆ. ಸಮವಸ್ತ್ರವು ಧರ್ಮ ಇಲ್ಲವೇ ಸಂಘಟನೆಗೆ ಸಂಬಂಧಿಸಿ ತೀರಾ ಖಾಸಗಿಯಾದದ್ದು. ಒಂದು ಸಂಘಟನೆ ಸಮವಸ್ತ್ರವಾಗಿ ಯಾವ ಉಡುಪನ್ನು, ಯಾವ ಬಣ್ಣವನ್ನು ಮತ್ತು ಯಾವ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೊರಗಿನಿಂದ ನಿರ್ದೇಶಿಸುವುದು ಅವುಗಳ ಆಂತರಿಕ ವಿಷಯದಲ್ಲಿ ಮಧ್ಯ ಪ್ರವೇಶಿಸಿದಂತೆ. ಉಡುಪಿನ ಉದ್ದಳತೆಯ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವನ್ನು ವ್ಯಕ್ತಪಡಿಸುವುದಕ್ಕೆ ಒಂದು ಚೌಕಟ್ಟನ್ನು ಸಮಾಜ ಸದಾ ಪಾಲಿಸುತ್ತಲೇ ಬಂದಿದೆ. ಈ ಆಧಾರದಲ್ಲಿ ಹೇಳುವುದಾದರೆ, ಖಾಕಿ ಚಡ್ಡಿಯಿಂದ ಕಂದು ಬಣ್ಣದ ಪ್ಯಾಂಟ್‍ಗೆ ಆರೆಸ್ಸೆಸ್ ತನ್ನ ಸಮವಸ್ತ್ರವನ್ನು ಬದಲಿಸುವುದು ಪಕ್ಕಾ ಆಂತರಿಕ ವಿಷಯ. ಸಾರ್ವಜನಿಕವಾಗಿ ಚರ್ಚಿಸಬೇಕಾದಷ್ಟು ಮಹತ್ವಪೂರ್ಣವಲ್ಲದ್ದು ಎಂದೂ ಹೇಳಬಹುದು. ಆದರೆ ಆರೆಸ್ಸೆಸ್‍ನ ಮಟ್ಟಿಗೆ ಇಷ್ಟನ್ನೇ ಹೇಳಿ ಪೂರ್ಣ ವಿರಾಮ ಹಾಕಬಹುದೇ? ಕಳೆದ 90 ವರ್ಷಗಳಿಂದ ಅದು ಈ ದೇಶದಲ್ಲಿ ಹೇಗೆಲ್ಲ ಗುರುತಿಗೀಡಾಗಿದೆ? ದೇಶದ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಮತ್ತಿತರ ವಿಷಯಗಳಲ್ಲಿ ಅದು ಯಾವೆಲ್ಲ ಪಾತ್ರವನ್ನು ನಿಭಾಯಿಸಿದೆ? ಸಾವರ್ಕರ್, ಗೋಲ್ವಾಲ್ಕರ್, ಹೆಗ್ಡೇವಾರ್‍ಗಳಿಂದ ಹಿಡಿದು ಈಗಿನ ಭಾಗವತ್‍ವರೆಗೆ ಅವರು ವ್ಯಕ್ತಪಡಿಸುತ್ತಾ ಬಂದ ಅಭಿಪ್ರಾಯ, ಸಿದ್ಧಾಂತ, ವಿಚಾರಗಳು ಏನು? ಇತರೆಲ್ಲ ಸಂಘಟನೆಗಳಂತೆ ಆರೆಸ್ಸೆಸ್ಸನ್ನೂ ಸಾಮಾನ್ಯ ಸಂಘಟನೆಯಾಗಿ ಕಾಣಬಹುದೇ?
  ಮುಹಮ್ಮದ್ ಅಲಿ ಜಿನ್ನಾಗಿಂತ ಮೊದಲೇ ದ್ವಿ ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಆರೆಸ್ಸೆಸ್. ಈ ಕುರಿತಂತೆ ದೇಶದಲ್ಲಿ ಧಾರಾಳ ಚರ್ಚೆಗಳು ಈಗಾಗಲೇ ನಡೆದಿವೆ. ಬ್ರಿಟಿಷರೊಂದಿಗೆ ಕೈ ಜೋಡಿಸಿದ ಆರೋಪ ಸಾವರ್ಕರ್ ಮೇಲಿದೆ. ಹಿಟ್ಲರ್ ಮತ್ತು ಮುಸ್ಸೋಲಿನಿಯಿಂದ ಆರೆಸ್ಸೆಸ್ ಪ್ರಭಾವಿತವಾಗಿರುವುದನ್ನು ಮತ್ತು ಅವರದೇ ಜನಾಂಗೀಯ ಸಿದ್ಧಾಂತವನ್ನು ಅದು ಭಾರತಕ್ಕೆ ಹೊಂದಿಸಿಕೊಂಡು ಪ್ರತಿಪಾದಿಸುತ್ತಿರುವುದನ್ನು ಸಾಬೀತುಪಡಿಸುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲದಷ್ಟು ಇವತ್ತು ಸ್ಪಷ್ಟವಾಗಿದೆ. ಇದರ ನಾಯಕರು ಇಟಲಿಗೆ ತೆರಲಿ ಮುಸೋಲಿನಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆತನ ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕಡ ತಂದು ತಮ್ಮ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದಾರೆ. ಗಾಂಧೀಜಿಯವರನ್ನು ಕೊಂದ ಆರೋಪವನ್ನು ಹೊತ್ತುಕೊಂಡಿರುವುದೂ ಇದೇ ಆರೆಸ್ಸೆಸ್. ಆ ಕಾರಣಕ್ಕಾಗಿಯೇ ಅದು ನಿಷೇಧಕ್ಕೂ ಒಳಪಟ್ಟಿತು. ಆರೆಸ್ಸೆಸ್‍ನ ಸ್ವಾತಂತ್ರ್ಯಪೂರ್ವ ಇತಿಹಾಸವೇ ಇಷ್ಟು ಉಜ್ವಲವಾಗಿರುವಾಗ ಇನ್ನು ಸ್ವಾತಂತ್ರ್ಯಾನಂತರದ ಇತಿಹಾಸವನ್ನು ವಿವರವಾಗಿ ಮಂಡಿಸಬೇಕಿಲ್ಲವಲ್ಲ. ಲಕ್ಷಕ್ಕಿಂತಲೂ ಅಧಿಕ ಶಾಖೆಗಳಿರುವ ಮತ್ತು 60ಕ್ಕಿಂತಲೂ ಅಧಿಕ ಉಪ ಸಂಘಟನೆಗಳನ್ನು ಹೊಂದಿರುವ ಆರೆಸ್ಸೆಸ್, ಹಿಂದೂ ರಾಷ್ಟ್ರ ಕಲ್ಪನೆಯೊಂದಿಗೆ ಹುಟ್ಟಿಕೊಂಡಿದೆ. ಈ ರಾಷ್ಟ್ರ ಕಲ್ಪನೆ ಎಷ್ಟು ಅಪಾಯಕಾರಿಯೆಂದರೆ, ಈ ಹಿಂದೂ ರಾಷ್ಟ್ರದಲ್ಲಿ ಸರ್ವರೂ ಸಮಾನರಲ್ಲ. ಮುಸ್ಲಿಮರು, ಕ್ರೈಸ್ತರೆಲ್ಲ ಇಲ್ಲಿ ದ್ವಿತೀಯ ದರ್ಜೆಯ ನಾಗರಿಕರು. ಆರ್ಯ ಜನಾಂಗೀಯ ಮೇಲ್ಮೆಯನ್ನು ಬಹಿರಂಗವಾಗಿ ಇವತ್ತು ಅದು ಪ್ರತಿಪಾದಿಸದಿದ್ದರೂ ಆಂತರಿಕವಾಗಿ ಅದರ ನಡೆ-ನುಡಿಗಳು ಅದನ್ನೇ ಬಿಂಬಿಸುತ್ತವೆ ಎಂದು ಹೇಳಲಾಗುತ್ತದೆ. ಈ ದೇಶದ ದಲಿತ, ಕೊರಗ, ದುರ್ಬಲ, ಆದಿವಾಸಿ ಜನಾಂಗಗಳ ಆರಾಧನಾ ಪದ್ಧತಿಯನ್ನು ಮತ್ತು ಆರಾಧ್ಯರನ್ನು ಅನಾಮತ್ತಾಗಿ ಆಪೋಶನ ಪಡಕೊಂಡ ಮತ್ತು ಪಡಕೊಳ್ಳುತ್ತಿರುವ ಆರೋಪವೂ ಆರೆಸ್ಸೆಸ್‍ನ ಮೇಲಿದೆ. ವರ್ಣಾಶ್ರಮವನ್ನು ವೃತ್ತಿಸೂಚಕವೆಂದು ವ್ಯಾಖ್ಯಾನಿಸುತ್ತಾ ಯಾರಿಗೆ ಬೇಕಾದರೂ ಬ್ರಾಹ್ಮಣನಾಗಬಹುದು ಎಂದು ಅದು ಸಮರ್ಥಿಸಿಕೊಳ್ಳುತ್ತದೆ. ಆದರೆ ಅದರ ಲಕ್ಷಾಂತರ ಶಾಖೆಗಳಲ್ಲಿ ಒಬ್ಬನೇ ಒಬ್ಬ ದಲಿತನನ್ನಾದರೂ ಬ್ರಾಹ್ಮಣನಾಗಿ ಪರಿವರ್ತಿಸಲಾಗಿದೆಯೇ ಎಂಬ ಪ್ರಗತಿಪರರ ಪ್ರಶ್ನೆಗೆ ಈ ವರೆಗೂ ಅದರಿಂದ ಸಮರ್ಪಕ ಉತ್ತರ ಬಂದೇ ಇಲ್ಲ. ನಾಲ್ಕೈದು ತಿಂಗಳ ಹಿಂದಷ್ಟೇ ಅದು ಮೀಸಲಾತಿಯ ವಿರುದ್ಧ ಮಾತಾಡಿತ್ತು. ದಲಿತ ಸಮುದಾಯದ ಆಹಾರ ಪದ್ಧತಿಯನ್ನು ದೈವವಿರೋಧಿಯಾಗಿ ಬಣ್ಣಿಸಿ ನಿಷೇಧ ಹೇರಲು ಒತ್ತಾಯಿಸುತ್ತಿರುವುದೂ ಈ ಸಂಘಟನೆಯೇ. ಈ ದೇಶದಲ್ಲಿ ನಡೆದ ಹೆಚ್ಚಿನೆಲ್ಲ ಹತ್ಯಾಕಾಂಡಗಳ ಕುರಿತಂತೆ ಆರೆಸ್ಸೆಸ್ಸನ್ನು ಆರೋಪಿ ದೃಷ್ಟಿಯಿಂದಲೇ ನೋಡಲಾಗುತ್ತಿದೆ. ಅದರ ಗರಡಿಯಲ್ಲಿ ಪಳಗಿದ ರಾಜಕೀಯ ಅಥವಾ ಸಾಮಾಜಿಕ ನಾಯಕರು ಪ್ರತಿ ಸಂದರ್ಭದಲ್ಲೂ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಿಯೇ ಮಾತಾಡುತ್ತಾರೆ. ಮುಸ್ಲಿಮರನ್ನು ತುಚ್ಛೀಕರಿಸುತ್ತಾರೆ. ಸಮ್ಜೋತಾ ಎಕ್ಸ್ ಪ್ರೆಸ್, ಮಕ್ಕಾ, ಮಾಲೆಗಾಂವ್ ಮುಂತಾದ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೂ ಆರೆಸ್ಸೆಸ್‍ಗೂ ನಂಟಿದೆ ಎಂದು ಅನೇಕ ಬಾರಿ ಈ ದೇಶದ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಒಂದು ರೀತಿಯಲ್ಲಿ, ಆರೆಸ್ಸೆಸ್ ತನ್ನ ಹುಟ್ಟಿನಿಂದ ಈವತ್ತಿನವರೆಗೂ ಇಬ್ಬಗೆಯ ನೀತಿಯನ್ನು ಅಳವಡಿಸುತ್ತಲೇ ಬಂದಿದೆ. ಕನ್ಹಯ್ಯಾ ಕುಮಾರ್‍ನನ್ನು ದೇಶದ್ರೋಹಿ ಎಂದು ಕರೆದಿರುವ ಇದೇ ಸಂಘಟನೆ ಶ್ರೀಶ್ರೀ ರವಿಶಂಕರ್ ಅವರ 'ಪಾಕಿಸ್ತಾನ್ ಜಿಂದಾಬಾದ್'ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಅದು ನ್ಯಾಯವನ್ನು ಪ್ರತಿಪಾದಿಸುವ ಪ್ರತಿ ಸಂದರ್ಭದಲ್ಲೂ ತನ್ನವರು ಮತ್ತು ಇತರರು ಎಂಬ ಮಾನದಂಡವನ್ನು ಸದಾ ಪಾಲಿಸುತ್ತಲೇ ಬಂದಿವೆ.
ಅದು ಪ್ರತಿಪಾದಿಸುವ ದೇಶಪ್ರೇಮ, ಸಂಸ್ಕೃತಿ, ಧರ್ಮ, ನಾಗರಿಕತೆ, ಸ್ವಾತಂತ್ರ್ಯ ಮುಂತಾದ ಎಲ್ಲದಕ್ಕೂ ನಾವು ಕಲ್ಪಿಸಿಕೊಂಡಿರುವ ಮತ್ತು ಸಂವಿಧಾನ ಕೊಡಮಾಡಿರುವ ಅರ್ಥಕ್ಕಿಂತ ಭಿನ್ನವಾದದ್ದೊಂದು ಆಯಾಮವಿದೆ. ಬಾಹ್ಯನೋಟಕ್ಕೆ ಅದು ಭಾರತೀಯ ಸಂಸ್ಕೃತಿ ಎಂದು ಹೇಳುತ್ತಿದ್ದರೂ ಆಂತರಿಕವಾಗಿ ಆ ಸಂಸ್ಕೃತಿ ಪೂರ್ಣವಾಗಿ ಆರ್ಯನ್ ಸಂಸ್ಕೃತಿಯ ಕುರಿತಾಗಿರುವುದಾಗಿ ಅದರ ಒಳಹೊಕ್ಕು ಹೊರಬಂದ ನಾಯಕರು ಬಹಿರಂಗಪಡಿಸುತ್ತಿರುತ್ತಾರೆ. ಆರೆಸ್ಸೆಸ್‍ನ ಈ ಒಳಗೊಂದು ಹೊರಗೊಂದು ನೀತಿಯೇ ಅದರ ಮೇಲೆ ಸಾರ್ವಜನಿಕ ಗುಮಾನಿಯನ್ನು ಹೆಚ್ಚಿಸಿದೆಯೆಂದು ಖಂಡಿತ ಹೇಳಬಹುದು. ಆರೆಸ್ಸೆಸ್ ತೀರಾ ಸಾಧುವಲ್ಲ. ಅದು ಸರ್ವ ಸಮಾನತೆಯ ಪ್ರತಿಪಾದಕವೂ ಅಲ್ಲ. ಅದು ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಕಳೆದ 90 ವರ್ಷಗಳಲ್ಲಿ ಅದರ ಮೇಲೆ ಕೇಳಿ ಬಂದಿರುವ ದೂರು ಹಾಗೂ ಅದರ ಕಾರ್ಯಕರ್ತರು ಮತ್ತು ನಾಯಕರ ನಡವಳಿಕೆಗಳು ಅದು ಖಾಕಿ ಚಡ್ಡಿಯಿಂದ ಕಂದು ಬಣ್ಣಕ್ಕೆ ಸಮವಸ್ತ್ರ ಬದಲಿಸಿದಷ್ಟು ಅಹಿಂಸಾತ್ಮಕವಾದುದಲ್ಲ. ಪ್ರತಿ ಹೆಜ್ಜೆಯಲ್ಲೂ ಅದರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವ ಗುರುತುಗಳಿವೆ. ಆದ್ದರಿಂದ ಆರೆಸ್ಸೆಸ್ ಖಾಕಿಯಿಂದ ಕಂದುಬಣ್ಣಕ್ಕೆ ತಿರುಗುವುದರಿಂದ ಈ ಎಲ್ಲ ಕಳಂಕಗಳು ಕಳೆದು ಹೋಗುವುದಿಲ್ಲ. ತನ್ನ ಧೋರಣೆ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕೈಬಿಡದ ಹೊರತು ಉಡುಪಿನ ಬಣ್ಣ ಮತ್ತು ಉದ್ದಳತೆಯಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಂಘಟನೆಯ ಧೋರಣೆ ಬದಲಾಗದಿದ್ದರೆ ಚಡ್ಡಿಯೋ ಪ್ಯಾಂಟೋ ಖಾಕಿಯೋ ಕಂದೋ ಯಾವ ಬಣ್ಣವಾದರೇನು? ಅದರಿಂದ ಈ ದೇಶಕ್ಕೆ ಆಗುವ ಲಾಭವೇನು? ಮೊದಲು ಅದರ ಧೋರಣೆ ಬದಲಾಗಲಿ. ಬಳಿಕ ‘ಬಣ್ಣ'ವನ್ನು ಬದಲಾಯಿಸಿಕೊಳ್ಳಲಿ.

Friday, 4 March 2016

ನಾಶವಾಗಬೇಕಾದದ್ದು ಧರ್ಮವೋ?

       ಸಂಸದರೋರ್ವರ ಮತಿಗೆಟ್ಟ ಹೇಳಿಕೆಯನ್ನು ಸಂಪಾದಕೀಯಕ್ಕೆ  ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದು ಉಚಿತವೋ ಅಥವಾ ಹಾಗೆ ಮಾಡುವುದು ಸಂಪಾದಕೀಯದ
ಘನತೆಗೆ ಕಳಂಕವೋ ಎಂಬ ಬಗ್ಗೆ ಒಂದಕ್ಕಿಂತ ಹೆಚ್ಚು ಬಾರಿ ಆಲೋಚಿಸಿ ಕೊನೆಗೆ ಅವರೆತ್ತಿದ ವಿಷಯವು ಅವರ ಸಡಿಲ ನಾಲಗೆಯಷ್ಟು ಹಗುರವಲ್ಲವಾದುದರಿಂದ ಆ ಬಗ್ಗೆ ಪ್ರತಿಕ್ರಿಯಿಸಲೇಬೇಕಾದ ಅಗತ್ಯ ತಲೆದೋರಿತು. ಭಯೋತ್ಪಾದನೆಗೂ ಧರ್ಮಕ್ಕೂ ನಂಟಿದೆಯೇ? ಇದ್ದರೆ ಆ ನಂಟು ಯಾವ ಬಗೆಯದು? ಅಂಥದ್ದೊಂದು ನಂಟನ್ನು ಏರ್ಪಡಿಸಿದವರು ಯಾರು? ಧಾರ್ಮಿಕ ವಿದ್ವಾಂಸರೇ, ಧರ್ಮಗ್ರಂಥಗಳೇ ಅಥವಾ ಸ್ವತಃ ಭಯೋತ್ಪಾದಕರೇ? ಅಷ್ಟಕ್ಕೂ, ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರು ಭಯೋತ್ಪಾದನೆಯನ್ನು ನೋಡುವ ಬಗೆ ಹೇಗೆ? ಬಾಂಬ್ ಸ್ಫೋಟ, ಹತ್ಯೆ, ಅತ್ಯಾಚಾರ, ಹಿಂಸೆ.. ಇತ್ಯಾದಿ ಇತ್ಯಾದಿಗಳನ್ನೇ ಅವರು ಭಯೋತ್ಪಾದನೆ ಅನ್ನುತ್ತಾರಾದರೆ, ಇವೇನು ಇವತ್ತು ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಾಗಿಯಷ್ಟೇ ಉಳಿದಿದೆಯೇ? ಹಿಂಸೆ, ಅತ್ಯಾಚಾರ, ಹತ್ಯೆ ಯಾವ ಧರ್ಮದ ಗುರುತು? ಇಸ್ಲಾಮ್‍ನದ್ದೇ, ಹಿಂದೂ ಧರ್ಮದ್ದೇ ಅಥವಾ ಕ್ರೈಸ್ತ-ಬೌದ್ಧ, ಯಹೂದಿ ಧರ್ಮದ್ದೇ? ಮೀಸಲಾತಿಯನ್ನು ಆಗ್ರಹಿಸಿ ಜಾಟ್ ಸಮುದಾಯದವರು ಕಳೆದ ವಾರ ಹರ್ಯಾಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ 17 ಸಾವಿರ ಮರಗಳ ಮಾರಣ ಹೋಮ ನಡೆದಿದೆ ಎಂದು ಜಿಂದ್, ಬಿವಾನಿ, ಹಿಸ್ಸಾರ್, ಜಜ್ಜಾರ್, ಸೋನಿಪತ್‍ನ ಅರಣ್ಯಾಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಮರಗಳನ್ನು ಕಡಿದು ರಸ್ತೆಗೆ ಹಾಕಲಾಗಿತ್ತು. ಇದಕ್ಕಿಂತಲೂ ಭೀಭತ್ಸಕರ ಸಂಗತಿ ಏನೆಂದರೆ, ಹೀಗೆ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡ ವಾಹನಗಳಿಂದ ಅನೇಕ ಮಹಿಳೆಯರನ್ನು ಪಕ್ಕದ ಹೊಲಗಳಿಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ ಎಂಬುದು. ಅನಂತ ಕುಮಾರ್ ಹೆಗಡೆಯವರ ಪ್ರಕಾರ ಇದು ಯಾವ ಕೆಟಗರಿಯಲ್ಲಿ ಬರುತ್ತದೆ? ಈ ಕೃತ್ಯವನ್ನು ಎಸಗಿದವರ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಕೃತ್ಯಗಳಿಗಿರುವ ಪರಿಹಾರ’ ಎಂದು ಹೇಳಬಹುದೇ? ಹೆಗಡೆ ಅವರ ಜಾತಿಯನ್ನು ನೇಪಾಳದಲ್ಲಿ ಪ್ರತಿನಿಧಿಸುವ ‘ಮಾಧೇಶಿ’ಗಳು ಎರಡು ತಿಂಗಳುಗಳ ಕಾಲ ಭಾರತ-ನೇಪಾಳದ ಗಡಿಯಲ್ಲಿ ರಸ್ತೆ ತಡೆ ನಿರ್ಮಿಸಿದ್ದರು. ಭಾರತದಿಂದ ನೇಪಾಳಕ್ಕೆ ಆಹಾರ, ತೈಲ ಸಹಿತ ದಿನ ಬಳಕೆಯ ಪ್ರತಿಯೊಂದು ವಸ್ತುವೂ ಸರಬರಾಜಾಗುವ ಏಕೈಕ ರಸ್ತೆಯನ್ನು ಮುಚ್ಚಿದ್ದರು. ಇದರಿಂದಾಗಿ ನೇಪಾಳದ ಮಾರುಕಟ್ಟೆ ಬಹುತೇಕ ಹದಗೆಟ್ಟಿತ್ತು. ನೇಪಾಳೀಯರು ಆಹಾರ ಮತ್ತಿತರ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸಿದರು. ಅಲ್ಲಿನ ಜನರು ಪ್ರಸಕ್ತ ಸಂವಿಧಾನಕ್ಕೆ ಬೆಂಬಲ ಸೂಚಿಸಿದುದೇ ಈ ಪ್ರತಿಭಟನೆಗೆ ಕಾರಣವಾಗಿತ್ತು. ನರೇಂದ್ರ ಮೋದಿ ಸರಕಾರದ ಪರೋಕ್ಷ ಬೆಂಬಲದಿಂದಾಗಿಯೇ ಇಷ್ಟು ದೀರ್ಘ ಅವಧಿಯ ರಸ್ತೆ ತಡೆ ನಿರ್ಮಿಸಲು ಮಾಧೇಶಿಗಳಿಗೆ ಸಾಧ್ಯವಾಗಿದೆ ಎಂದು ನೇಪಾಳ ಸರಕಾರವೇ ಆರೋಪಿಸಿತ್ತು. ಇದರ ದೃಢೀಕರಣವೆಂಬಂತೆ ಮಾಧೇಶಿ ನಾಯಕರು ಭಾರತಕ್ಕೆ ಬಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರನ್ನು ಭೇಟಿಯಾದರು. ಒಂದು ಜನತೆಯ ಮೇಲೆ ಎರಡು ತಿಂಗಳ ಕಾಲ ಆಹಾರ ಭಯೋತ್ಪಾದನೆಯನ್ನು ಹೇರಿದ ಬಗ್ಗೆ ಅನಂತ ಕುಮಾರ್ ಅವರ ನಿಲುವೇನು? ಈ ಕೃತ್ಯ ಅವರ ಪ್ರಕಾರ ಯಾವ ವಿಭಾಗದಲ್ಲಿ ಬರುತ್ತದೆ? ಮಾಧೇಶಿಗಳ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಭಯೋತ್ಪಾದನೆಗಿರುವ ಪರಿಹಾರ’ ಎಂದು ಹೇಳುತ್ತಾರಾ? ದಾದ್ರಿ, ಮುಝಫ್ಫರ್ ನಗರ್, ಗುಜರಾತ್‍ಗಳಲ್ಲಿ ನಡೆದಿರುವುದೇನೆಂಬುದು ಹೆಗಡೆಯವರಿಗೆ ಚೆನ್ನಾಗಿ ಗೊತ್ತು. ಅಲ್ಲಿ ಯಾವ ಬಗೆಯ ಭಯದ ವಾತಾವರಣವನ್ನು ಹುಟ್ಟು ಹಾಕಲಾಗಿತ್ತು ಮತ್ತು ಅದರ ರೂವಾರಿಗಳು ಯಾರು ಎಂಬುದನ್ನು ವಿವರಿಸಬೇಕಾದ ಅಗತ್ಯವೂ ಇಲ್ಲ. ಮಾಯಾ ಕೊಡ್ನಾನಿ, ಬಾಬು ಭಜರಂಗಿ ಸಹಿತ ಗುಜರಾತ್  ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲುದಾರರಾದ ದೊಡ್ಡದೊಂದು ಗುಂಪು ಇವತ್ತು ಯಾವ್ಯಾವ ಜೈಲುಗಳಲ್ಲಿವೆ ಮತ್ತು ಇವರ ಬಗ್ಗೆ ನ್ಯಾಯಾಲಯಗಳು ಏನೇನು ಹೇಳಿವೆ ಎಂಬುದನ್ನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾದ್ವಿ ಪ್ರಜ್ಞಾಸಿಂಗ್, ಪುರೋಹಿತ್, ಆಸೀಮಾನಂದರುಗಳು ಕಳೆದ ನಾಲ್ಕೈದು ವರ್ಷಗಳಿಂದ ಆರೋಪವನ್ನು ಹೊತ್ತು ಜೈಲಲ್ಲಿದ್ದಾರೆ ಎಂಬುದನ್ನು ಹೆಗಡೆಯವರು ಚೆನ್ನಾಗಿಯೇ ಬಲ್ಲರು. ಇಷ್ಟಿದ್ದೂ ಹೆಗಡೆಯವರು ತೀರಾ ಅಜ್ಞಾನಿಯಂತೆ ಮತ್ತು ಎಲ್‍ಕೆಜಿ ಮಗುವಿನಂತೆ ಮಾತಾಡಿರುವುದಕ್ಕೆ ಕಾರಣ ಏನು? ಸಿರಿಯಾ, ಇರಾಕ್, ಯಮನ್ ಮತ್ತಿತರ ಕಡೆ ನಡೆಯುತ್ತಿರುವ ಹಿಂಸೆ, ಹತ್ಯೆ, ಸಾಮೂಹಿಕ ವಲಸೆಗಳನ್ನು ನೋಡಿ ಹೆಗಡೆಯವರು ಈ ನಿರ್ಧಾರಕ್ಕೆ ಬಂದಿರುವರಾದರೆ, ತಮ್ಮ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಅವರಿಗೆ ಹೇಳಬೇಕಾಗುತ್ತದೆ. ಅರಬ್ ವಲಯದ ಹಿಂಸಾಚಾರಗಳಿಗೆ ಭೌಗೋಳಿಕವಾದ ಕಾರಣ ಇದೆ. ರಾಜ ಪ್ರಭುತ್ವದ ವಿರುದ್ಧ ಸಿಡಿದೆದ್ದ ಪ್ರಜಾ ಚಳವಳಿಯು ಕ್ರಮೇಣ ಹಳಿತಪ್ಪಿ ವಿಧ್ವಂಸಕ ಶಕ್ತಿಗಳು ಆಪೋಶನ ಪಡೆದುದರ ಫಲಿತಾಂಶ ಅದು. ಅಲ್ಲಿನ ಸಂಘರ್ಷವೇ ಗೋಜಲುಗಳ ಗುಢಾಣ. ಯಾರು ಸಾಚಾ ಯಾರು ನಕಲಿ ಎಂಬುದನ್ನು ತಕ್ಷಣಕ್ಕೆ ತೀರ್ಮಾನಿಸದಷ್ಟು ಆ ‘ರಣಾಂಗಣ’ ಮನುಷ್ಯ ವಿರೋಧಿಯಾಗಿ ಬಿಟ್ಟಿದೆ. ಬಾಹ್ಯನೋಟಕ್ಕೆ, ರಶ್ಯಾವು ಅಸದ್‍ರ ಪರ ಮತ್ತು ಐಸಿಸ್‍ನ ವಿರುದ್ಧ ಹೋರಾಡುತ್ತಿದೆ. ಅಮೇರಿಕವಾದರೋ ಅಸದ್‍ರ ವಿರುದ್ಧ ಮತ್ತು ಐಸಿಸ್‍ನೊಂದಿಗೆ ಮೃದುವಾಗಿ ವರ್ತಿಸುತ್ತಿದೆ. ಸಂಪೂರ್ಣ ಆಂತರಿಕವಾಗಿರುವ ಯಮನ್ ಸಂಘರ್ಷದಲ್ಲಿ ಸೌದಿ ಒಂದು ಪಕ್ಷವನ್ನು ಬೆಂಬಲಿಸುತ್ತಿದೆ. ಅಷ್ಟಕ್ಕೂ ಐಸಿಸ್‍ಗೆ, ಯಮನ್‍ನ ಆಡಳಿತ ವಿರೋಧಿ ಗುಂಪಿಗೆ, ಕುರ್ದ್‍ಗಳಿಗೆ, ಶಿಯಾ-ಸುನ್ನಿ ಜಗಳಕೋರರಿಗೆ ಶಸ್ತ್ರಾಸ್ತ್ರ ಸರಬರಾಜು ಎಲ್ಲಿಂದ? ಅವರ ಆದಾಯ ಮೂಲ ಯಾವುದು? ಒಂದು ರಾಷ್ಟ್ರಕ್ಕೇ ಸವಾಲು ಒಡ್ಡಬಹುದಾದಷ್ಟು ಆಧುನಿಕ ಶಸ್ತ್ರಾಗಳು ಈ ಸಾಮಾನ್ಯ ಜನರ ಗುಂಪಿಗೆ ಸರಬರಾಜು ಮಾಡುತ್ತಿರುವವರು ಯಾರು, ಅವರ ಉದ್ದೇಶವೇನು ಎಂಬುದನ್ನೆಲ್ಲ ಸಂಸದರಾಗಿರುವ ಅನಂತ ಹೆಗಡೆಯವರಿಗೆ ವಿವರಿಸಬೇಕಿಲ್ಲ. ಅರಬ್ ವಲಯ ಸಂಘರ್ಷ ಪೀಡಿತವಾಗಿರುವಷ್ಟೂ ದಿನ ಅಮೆರಿಕ ಸಹಿತ ಯುರೋಪಿಯನ್ ರಾಷ್ಟ್ರಗಳು ಸುಖವಾಗಿರುತ್ತವೆ. ಅವುಗಳ ಅರ್ಥವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆ. ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಮಾರಾಟ ಭರ್ಜರಿಯಾಗಿ ನಡೆಯುತ್ತಿರುತ್ತದೆ. ಬಹುಶಃ ಇಸ್ರೇಲ್‍ನ್ನು ಅರಬ್ ಜಗತ್ತಿನ ನಡುವೆ ಹುಟ್ಟು ಹಾಕಿರುವುದರ ಹಿಂದಿನ ಉದ್ದೇಶ ಇದುವೇ ಇರಬೇಕು. ಎಲ್ಲಿಯವರೆಗೆ ಇಸ್ರೇಲ್‍ನ ಅಸ್ತಿತ್ವ ಇರುತ್ತದೋ ಅಲ್ಲಿಯವರೆಗೆ ಅರಬ್ ಜಗತ್ತಿನಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇಸ್ರೇಲ್ ಪರ, ವಿರುದ್ಧ ಮತ್ತು ತಟಸ್ಥ ಎಂಬುದಾಗಿ ಅರಬ್ ಜಗತ್ತು ವಿಭಜನೆಗೊಳ್ಳುವುದು ಮತ್ತು ಆ ಕಾರಣದಿಂದಾಗಿಯೇ ಪರಸ್ಪರ ಸದಾ ಸಂದೇಹದಿಂದಲೇ ಬದುಕುವುದು ಅನಿವಾರ್ಯವಾಗುತ್ತದೆ. ಈ ವಾತಾವರಣವು ಶಸ್ತ್ರಾಸ್ತ್ರ ಖರೀದಿಗೆ ಪೈಪೋಟಿಯನ್ನು ಪ್ರಚೋದಿಸುತ್ತದೆ. ಈ ವಾತಾವರಣವನ್ನು ಒಪ್ಪದ ಮಂದಿ ಪ್ರತಿಭಟನೆಗಿಳಿಯುತ್ತಾರೆ. ಈ ಪ್ರತಿಭಟನೆಯನ್ನು ಇನ್ನಾರೋ ಹೈಜಾಕ್ ಮಾಡುತ್ತಾರೆ. ಅವರ ಕೈಗೆ ಆಧುನಿಕ ಶಸ್ತ್ರಾಸ್ತ್ರಗಳು ಬರುತ್ತವೆ. ಅಂದಹಾಗೆ, ಈ ಪ್ರಕ್ರಿಯೆಯನ್ನು ನಾವು ಅರಬ್ ಜಗತ್ತಿಗೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ಮುಂದೊಂದು ದಿನ ಭಾರತೀಯ ಉಪಭೂಖಂಡದಲ್ಲೂ ಇಸ್ರೇಲ್‍ನಂಥ ಖೊಟ್ಟಿ ರಾಷ್ಟ್ರವೊಂದನ್ನು ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳು ಹುಟ್ಟು ಹಾಕಬಹುದು. ಪಾಕ್‍ನ ಭಾಗವಾಗಿರುವ ಬಲೂಚಿಸ್ತಾನ ಮತ್ತು ಅದರ ವಶದಲ್ಲಿರುವ ಕಾಶ್ಮೀರವನ್ನು ಒಟ್ಟು ಸೇರಿಸಿ ಪ್ರತ್ಯೇಕ ರಾಷ್ಟ್ರ ಕಟ್ಟುವ ಯೋಜನೆ ರೂಪಿಸಬಹುದು. ಈ ಎರಡೂ ಪ್ರದೇಶಗಳು ಚೀನಾದ ಗಡಿಯನ್ನು ಹಂಚಿಕೊಂಡಿದ್ದು, ಇಂಥದ್ದೊಂದು ರಾಷ್ಟ್ರ ಅಸ್ತಿತ್ವಕ್ಕೆ ಬಂದರೆ ಭಾರತಕ್ಕೆ ಚೀನಾದ ಭೀತಿ ಕಡಿಮೆಯಾಗುತ್ತದೆ, ಚೀನಾದೊಂದಿಗೆ ಗಡಿ ಹಂಚುವಿಕೆಯೂ ತಪ್ಪುತ್ತದೆ ಎಂದು ಅದು ನಂಬಿಸಬಹುದು. ಆ ಬಳಿಕ ಈ ‘ಕೂಸ’ನ್ನು ಇಟ್ಟುಕೊಂಡು ಭಾರತ-ಪಾಕ್-ಚೀನಾಗಳ ಮಧ್ಯೆ ಸಂದೇಹವನ್ನು ಹುಟ್ಟಿಸಿ ಶಸ್ತ್ರಾಸ್ತ್ರ ಮಾರಾಟಕ್ಕೆ ಚಾಲನೆ ಕೊಡಬಹುದು. ಬಹುಶಃ ಇಂಥದ್ದೊಂದು ಸಮೀಕರಣವನ್ನು ಅನಂತ ಹೆಗಡೆಯವರು ಮಾಡಿರುವರೋ ಇಲ್ಲವೋ ಆದರೆ, ಇದು ಅಸಂಭವವಲ್ಲ. ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಇಂಥದ್ದೊಂದು ಸಂಭವನೀಯತೆಯನ್ನು ಉಡಾಫೆಯಿಂದ ನಿರ್ಲಕ್ಷಿಸಬೇಕಾಗಿಯೂ ಇಲ್ಲ. ಒಂದು ವೇಳೆ, ಆ ಸಂದರ್ಭದಲ್ಲಿ ಇಲ್ಲಿ ಹುಟ್ಟಿಕೊಳ್ಳಬಹುದಾದ ಪ್ರತಿಭಟನೆ ಮತ್ತು ಆ ಪ್ರತಿಭಟನೆಯನ್ನು ಶಸ್ತ್ರಾಸ್ತ್ರ ವ್ಯಾಪಾರಿಗಳು ಹೈಜಾಕ್ ಮಾಡಿ ಹಿಂಸಾತ್ಮಕಗೊಳಿಸಿದರೆ ಏನಾಗಬಹುದು? ಆ ಖರೀದಿಗೊಂಡ ಪ್ರತಿಭಟನಾಕಾರರ ಉಡುಪು, ಧಾರ್ಮಿಕ ಚಿಹ್ನೆ, ಭಾಷೆಯನ್ನು ನೋಡಿಕೊಂಡು ಅವರ ಧರ್ಮದ ಮೇಲೆ ಆ ಹಿಂಸೆಯ ಆರೋಪವನ್ನು ಹೊರಿಸಬಹುದೇ? ಅವರ ಧರ್ಮವೇ ಅದಕ್ಕೆ ಕಾರಣ ಎಂದು ಹೇಳಬಹುದೇ?
        ಹಿಂಸಾನಿರತರು ಪೈಜಾಮ, ಗಡ್ಡ ಧರಿಸಿದ್ದಾರೆಂದೂ ಅಲ್ಲಾಹು ಅಕ್ಬರ್ ಹೇಳುತ್ತಾರೆಂದೂ ವಾದಿಸಿ, ಅವರ ಕೃತ್ಯಗಳಿಗೆ ಇಸ್ಲಾಮೇ ಕಾರಣ ಎಂದು ಹೇಳುವುದು ಅತ್ಯಂತ ಬೇಜವಾಬ್ದಾರಿ ನಿಲುವಾಗುತ್ತದೆ. ಅತ್ಯಾಚಾರ ನಡೆಸುವ ಮತ್ತು ಭ್ರೂಣವನ್ನು ಕತ್ತಿಯ ಮೊನೆಗೆ ಸಿಕ್ಕಿಸಿ ಸಂಭ್ರಮಿಸುವ ವ್ಯಕ್ತಿ ‘ಹರಹರ ಮಹಾದೇವ್’ ಎಂದು ಘೋಷಿಸುವುದರಿಂದ ಅದು ಹಿಂದೂ ಧರ್ಮದ ಕೃತ್ಯವಾಗುತ್ತದೆಯೇ? ಆ ಕಾರಣಕ್ಕಾಗಿ ಹಿಂದೂ ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದೇ?  ಆದ್ದರಿಂದ ಅನಂತ ಕುಮಾರ್ ಹೆಗಡೆಯವರ ಮಾತು ಅತ್ಯಂತ ಖಂಡನೀಯ. ಓರ್ವ ಸಂಸದರಾಗಿ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು. ನಿಜವಾಗಿ, ನಾಶ ಮಾಡಬೇಕಾದದ್ದು ಧರ್ಮವನ್ನಲ್ಲ, ಧರ್ಮಾಂಧತೆಯನ್ನು. ಈ ಧರ್ಮಾಂಧತೆ ಎಲ್ಲ ಧರ್ಮಾನುಯಾಯಿಗಳಲ್ಲೂ ಇವೆ. ‘ಹೆಗಡೆ’ ತನ್ನ ಬಣ್ಣದ ಕನ್ನಡಕವನ್ನು ಕಳಚಿಟ್ಟು ನೋಡಲಿ.