Thursday, 31 March 2016

 ಹ್ಯಾಪಿ ಗುಡ್‍ಫ್ರೈಡೇ?

  ದುಃಖಿಸಬೇಕಾದ ಕಡೆ ಸುಖಿಸುವ ಮತ್ತು ಗೌರವಿಸಬೇಕಾದ ಕಡೆ ದಮನಿಸುವ ಹೊಸ ಪರಂಪರೆಯನ್ನು ಬಿಜೆಪಿ ಮತ್ತು ಪರಿವಾರ ಹುಟ್ಟು ಹಾಕಿದೆ. ಈ ಹಿಂದೆ ತೀರಾ ಸಣ್ಣ ಮಟ್ಟದಲ್ಲಿ ಮತ್ತು ಕದ್ದು ಮುಚ್ಚಿ ಮಾಡಲಾಗುತ್ತಿದ್ದ ಈ ವಿಕೃತಿಯನ್ನು ಇವತ್ತು ಅದ್ದೂರಿಯಾಗಿ ನಿರ್ವಹಿಸಲಾಗುತ್ತಿದೆ. ಸಾಹಿತಿ ಅನಂತಮೂರ್ತಿಯವರ ಸಾವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಕೃತಿಗೆ ದೇಶ ಸಾಕ್ಷಿಯಾಗಿತ್ತು. ಗಣರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿಯೂ ಗಾಂಧೀಜಿಯವರ ಹತ್ಯೆಯನ್ನು ಸಂಭ್ರಮದ ದಿನವನ್ನಾಗಿಯೂ ಇತ್ತೀಚೆಗಷ್ಟೇ ಇಲ್ಲಿ ಆಚರಿಸಲಾಯಿತು. ವಿಕೃತಿಯ ಈ ಪಟ್ಟಿ ತೀರಾ ದೊಡ್ಡದು. ಕಳೆದವಾರ ಕ್ರೈಸ್ತ ಬಂಧುಗಳು ಗುಡ್‍ಫ್ರೈಡೇಯನ್ನು ಆಚರಿಸಿದರು. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಶೋಕತಪ್ತ ದಿನವಾಗಿ ಗುಡ್‍ಫ್ರೈಡೇ ಗುರುತಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿಯವರ ಸಚಿವ ಸಂಪುಟದ ಮೂವರು ಹಿರಿಯ ಸಚಿವರು ತಮ್ಮ ಖುಷಿಯನ್ನು ಟ್ವೀಟರ್‍ನ ಮೂಲಕ ಹಂಚಿಕೊಂಡರು. ಹ್ಯಾಪಿ ಗುಡ್‍ಫ್ರೈಡೇ ಎಂದು ಗೆಳೆಯರಿಗೆ ಶುಭಾಶಯ ಕೋರಿದರು. ರೈಲ್ವೆ ಸಚಿವ ಸುರೇಶ್ ಪ್ರಭು, ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್.. ಹೀಗೆ ಖುಷಿಪಟ್ಟವರಲ್ಲಿ ಪ್ರಮುಖರು. ಸಚಿವರುಗಳಿಗಾದ ಈ ಸಂತಸ ಸುದ್ದಿಯಾಗುತ್ತಿದ್ದಂತೆಯೇ ಹಿರಿಯ ಕ್ಯಾಥೋಲಿಕ್ ಧರ್ಮಗುರು ಪೌಲ್ ಟೆಲಿಕಟ್ಟ್ ಆಘಾತ ವ್ಯಕ್ತಪಡಿಸಿದರು. ದುಃಖಿಸಬೇಕಾದ ಕಡೆ ಸುಖಿಸಿದವರ ತಿಳುವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಚಿವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳೂ ವ್ಯಕ್ತವಾದುವು. ಅಷ್ಟಕ್ಕೂ, ಗುಡ್‍ಫ್ರೈಡೇಯ ಹಿನ್ನೆಲೆ ಮತ್ತು ಮಹತ್ವದ ಅರಿವಿನ ಕೊರತೆಯೇ ಈ ಟ್ವೀಟ್‍ಗಳಿಗೆ ಕಾರಣ ಎಂದು ಈ ಸಚಿವರುಗಳನ್ನು ಒಂದೊಮ್ಮೆ ಸಮರ್ಥಿಸಿಕೊಳ್ಳಬಹುದಾದರೂ ಇವರು ಪ್ರತಿನಿಧಿಸುವ ಪಕ್ಷ ಮತ್ತು ಅದರ ಬೆಂಬಲಿಗರು ಈ ಹಿಂದೆ ನಡೆಸಿರುವ ಮತ್ತು ಈಗ ನಡೆಸುತ್ತಿರುವ ವಿಕೃತಿಗಳನ್ನು ಪರಿಗಣಿಸಿದರೆ ಇದನ್ನು ಅಷ್ಟು ಸರಳವಾಗಿ ನೋಡುವಂತಿಲ್ಲ. ಪ್ರಮಾದ, ಎಡವಟ್ಟು ಮುಂತಾದ ಸಾಧು ಪದಗಳನ್ನು ಬಳಸಿ ಇದನ್ನು ಲಘೂಕರಿಸುವಂತೆಯೂ ಇಲ್ಲ. ವಿಕೃತಿಯು ಅಭ್ಯಾಸವಾಗಿ ಬಿಟ್ಟರೆ ಕ್ರಮೇಣ ಅದು ಮನಸ್ಥಿತಿಯಾಗಿ ಬದಲಾಗಿ ಬಿಡುತ್ತದೆ. ಆ ಬಳಿಕ ತನಗೆ ಒಪ್ಪಿತವಲ್ಲದ ಎಲ್ಲವನ್ನೂ ಬಲವಂತದಿಂದ ದಮನಿಸುವ ಪ್ರವೃತ್ತಿ ಬೆಳೆಯುತ್ತದೆ. ಜೆ.ಎನ್.ಯು. ಪ್ರಕರಣ ಇದಕ್ಕೆ ಅತ್ಯುತ್ತಮ ಉದಾಹರಣೆ. 120 ಕೋಟಿಗಿಂತಲೂ ಅಧಿಕ ಜನರಿರುವ ದೇಶವೊಂದರಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ವೇಮುಲ, ಕನ್ಹಯ್ಯ, ಉಮರ್ ಖಾಲಿದ್ ಮುಂತಾದವರು ಪ್ರತಿಪಾದಿಸುವ ಸಿದ್ಧಾಂತವನ್ನು ಉಳಿದೆಲ್ಲ ಭಾರತೀಯರು ಒಪ್ಪಿಕೊಳ್ಳಬೇಕೆಂದು ಯಾರೂ ಬಲವಂತಪಡಿಸುತ್ತಲೂ ಇಲ್ಲ. ಆದರೆ ಸಂವಿಧಾನಬದ್ಧ ಎಲ್ಲ ವಿಚಾರಧಾರೆಗೂ ಸಮಾನ ಗೌರವ ಮತ್ತು ಸ್ಪೇಸ್ ನೀಡಬೇಕಾದುದು ಎಲ್ಲರ ಕರ್ತವ್ಯ. ಆದರೆ ಬಿಜೆಪಿ ಮತ್ತು ಬಳಗ ಈ ಸ್ಪೇಸ್ ಅನ್ನೇ ಜನರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಭಾರತ್ ಮಾತಾಕಿ ಜೈ, ದೇಶಪ್ರೇಮ-ದೇಶದ್ರೋಹ, ಗೋಮಾಂಸ, ವಂದೇಮಾತರಂ.. ಮುಂತಾದ ವಿಷಯಗಳಲ್ಲಿ ಅದು ತನ್ನ ವಿಚಾರಧಾರೆಯನ್ನು ಈ ದೇಶದ ಮುಂದೆ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ಅದನ್ನು ಒಪ್ಪದವರನ್ನು ನಿರ್ದಯವಾಗಿ ದಮನಿಸುವ ಕ್ರೌರ್ಯವನ್ನು ಮೆರೆದಿದೆ. ಕನ್ಹಯ್ಯ, ಉಮರ್ ಖಾಲಿದ್, ಅನಿರ್ಬನ್‍ರನ್ನು ಅದು ದೇಶದ್ರೋಹದ ಹೆಸರಲ್ಲಿ ಜೈಲಿಗಟ್ಟಿತು. ಎಸ್.ಎ.ಆರ್. ಗೀಲಾನಿಯನ್ನೂ ಕಂಬಿಯೊಳಕ್ಕೆ ನೂಕಿತು. ಹಾಗಂತ, ನಿಜಕ್ಕೂ ಅವರದ್ದು ದೇಶದ್ರೋಹಿ ಕೃತ್ಯವೇ, ದೇಶದ್ರೋಹಕ್ಕಿರುವ ಮಾನದಂಡಗಳು ಏನೆಲ್ಲ.. ಎಂಬ ಬಹುಮುಖ್ಯ ಪ್ರಶ್ನೆಗೆ ಅದು ಎಲ್ಲೂ ಮುಖಾಮುಖಿಯಾಗದೇ ಭಾವನಾತ್ಮಕ ಉತ್ತರಗಳನ್ನು ಕೊಡತೊಡಗಿತು. ಇವರೆಲ್ಲ ಜೈಲಿಗೆ ಹೋದಷ್ಟೇ ಶೀಘ್ರವಾಗಿ ಹೊರಗೂ ಬಂದರು. ಇದೇ ವೇಳೆ, ಶ್ರೀಶ್ರೀ ರವಿಶಂಕರ್ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದರು. ಬಿಜೆಪಿಗೆ ನಿಜಕ್ಕೂ ತಾನು ಪ್ರತಿಪಾದಿಸುವ ‘ದೇಶಪ್ರೇಮಿ' ವಿಚಾರಧಾರೆಯ ಬಗ್ಗೆ ಕಳಕಳಿ ಇದ್ದಿದ್ದೇ ಆಗಿದ್ದರೆ ಮತ್ತು ದೇಶದ್ರೋಹಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳನ್ನು ಅದು ಹೊಂದಿದ್ದೇ ಆಗಿದ್ದರೆ, ಜೈಲಿನಿಂದ ಹೊರಬಂದ ಕನ್ಹಯ್ಯನನ್ನೂ ಜೈಲಿಗೇ ಹೋಗದ ರವಿಶಂಕರ್‍ರನ್ನೂ ಸೈದ್ಧಾಂತಿಕವಾಗಿ ಮುಖಾಮುಖಿಗೊಳಿಸಿ ವಿಶ್ಲೇಷಿಸಬೇಕಿತ್ತು. ಕನ್ಹಯ್ಯ ಗುಂಪಿನ ಮೇಲೆ ಕೈಗೊಂಡ ಉಗ್ರ ಕ್ರಮಗಳನ್ನು ಯಾಕೆ ರವಿಶಂಕರ್ ಮೇಲೆ ಕೈಗೊಂಡಿಲ್ಲವೆಂಬುದಕ್ಕೆ ಸೈದ್ಧಾಂತಿಕ ಉತ್ತರಗಳನ್ನು ನೀಡಬೇಕಿತ್ತು. ಒಂದು ವೇಳೆ, ಇಂಥ ಚರ್ಚೆಗಳಿಗೆ ಪ್ರಾಮಾಣಿಕವಾಗಿ ಅದು ತೆರೆದುಕೊಳ್ಳುತ್ತಿದ್ದರೆ, ದೇಶದ್ರೋಹ ಒಂದೇ ಅಲ್ಲ, ಆಹಾರ, ಸಂಸ್ಕ್ರತಿ ಸಹಿತ ಎಲ್ಲವನ್ನೂ ಸಂವಿಧಾನದ ಆಧಾರದಲ್ಲಿ ಚರ್ಚಿಸುವುದಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಬಿಜೆಪಿ ಇಂಥ ಸಂದರ್ಭಗಳಲ್ಲಿ ಅತ್ಯಂತ ಬೇಜವಾಬ್ದಾರಿ ನಿಲುವುಗಳನ್ನೇ ಪ್ರದರ್ಶಿಸಿದೆ. ಅಂದಹಾಗೆ, ಗೋಸಾಗಾಟ, ಗೋಮಾಂಸ ಸೇವನೆ.. ಮುಂತಾದುವುಗಳ ಹೆಸರಲ್ಲಿ ಈ ದೇಶದಲ್ಲಾಗುತ್ತಿರುವ ಯಾವ ಹಲ್ಲೆ, ಹತ್ಯೆಗೂ ಅದು ಖಂಡನೆಯ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಅದರ ಬದಲು ಅದು ಹಲ್ಲೆಕೋರರನ್ನೇ ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತದೆ. ಅನೈತಿಕ ಪೊಲೀಸ್‍ಗಿರಿಯ ಸಂದರ್ಭದಲ್ಲೂ ಅದರ ನಿಲುವು ಇದಕ್ಕಿಂತ ಭಿನ್ನವಾಗಿಲ್ಲ. ತನ್ನ ನಿಲುವನ್ನು ಬಲವಂತದಿಂದ ಜಾರಿಗೊಳಿಸುವ ಮತ್ತು ತನ್ನ ನಿಲುವಿಗೆ ಸಡ್ಡು ಹೊಡೆಯುವಂತಹ ಪ್ರಕರಣಗಳನ್ನು ನಿರ್ದಯೆಯಿಂದ ದಮನಿಸುವ ಕೆಟ್ಟ ಗುಣವೊಂದು ಅದರಲ್ಲಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸುತ್ತಿಲ್ಲ. ದೇಶದ ಬಹುಸಂಸ್ಕ್ರತಿಯ ಬಗ್ಗೆ ಅಥವಾ ಹಿಂದೂ ಧರ್ಮದ ಸಹಿಷ್ಣುತೆಯ ಬಗ್ಗೆ ಅದು ಭಾಷಣ ಮಾಡುವುದಕ್ಕೂ ಕಾರ್ಯತಃ ಅದು ನಡಕೊಳ್ಳುವುದಕ್ಕೂ ಇರುವ ಅಂತರ ಬಹಳ ದೊಡ್ಡದು. ಇದನ್ನು ನಾವು ಕೇವಲ ದ್ವಂದ್ವ ಎಂಬ ಸಾಧು ಪದದ ಮೂಲಕ ಕರೆದು ಸುಮ್ಮನಾಗುವಂತಿಲ್ಲ. ದ್ವಂದ್ವ ನಿಲುವಿನಲ್ಲಿ ಅಸಹಿಷ್ಣುತೆಗಿಂತಲೂ ಪಲಾಯನವಾದದ ವಾಸನೆಯೇ ಹೆಚ್ಚಿರುತ್ತದೆ. ಆ ಸಂದರ್ಭದ ಇಕ್ಕಟ್ಟನ್ನು ತಪ್ಪಿಸಿಕೊಳ್ಳುವುದಕ್ಕಾಗಿ ತನ್ನದೇ ಹಿಂದಿನ ಧೋರಣೆಯನ್ನು ತ್ಯಜಿಸುವ ವಿಧಾನ ಅದು. ಬಿಜೆಪಿ ಪ್ರದರ್ಶಿಸುತ್ತಿರುವುದು ಈ ಸಂದರ್ಭ ಸಾಧಕತನ ನಿಲುವನ್ನಲ್ಲ. ಈ ನಿಲುವಿನಲ್ಲಿ ಪಲಾಯನವಾದವೂ ಇಲ್ಲ. ಅದು ಗೊತ್ತಿದ್ದೇ ಮತ್ತು ಖಚಿತತೆಯೊಂದಿಗೆಯೇ ಇಂಥ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಭಿನ್ನ ವಿಚಾರಧಾರೆ ಎಂಬೊಂದು ನೆಲೆಗಟ್ಟನ್ನೇ ಬುಡಸಮೇತ ಕೀಳುವ ಅತ್ಯಂತ ಅಸಹಿಷ್ಣು ನೀತಿಯಿದು. ಈ ನೀತಿ ಎಷ್ಟು ಅಪಾಯಕಾರಿಯೆಂದರೆ ಅದು ತನ್ನನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲ, ಆ ಸಮರ್ಥನೆಗೆ ಪೂರಕವಾಗಿ ಯಾವ ವಿಕೃತಿಗೂ ಮುಂದಾಗುತ್ತದೆ. ಸಂವಿಧಾನವನ್ನು ಬೇಕಾದಾಗ ಬೇಕಾದಂತೆ ಉಪಯೋಗಿಸುತ್ತದೆ. ತನ್ನ ವಿಚಾರಧಾರೆಗೆ ಸಂವಿಧಾನ ವಿರುದ್ಧವೆಂದಾದರೆ ಸಂವಿಧಾನದ ಹೆಸರೆತ್ತದೆಯೇ ದೇಶ, ಸಂಸ್ಕ್ರತಿ, ಪರಂಪರೆ, ಧರ್ಮ.. ಎಂಬಿತ್ಯಾದಿ ಪವಿತ್ರ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸಿ ಸಂವಿಧಾನ ಚರ್ಚೆಗೆ ಒಳಗಾಗದಂತೆ ಅಥವಾ ಇವೆಲ್ಲವೂ ಸಂವಿಧಾನದ ಹೊರಗೆ ಇತ್ಯರ್ಥವಾಗಬೇಕಾದ ವಿಷಯಗಳೆಂಬಂತೆ ಭ್ರಮೆ ಮೂಡಿಸುತ್ತದೆ. ಕನ್ಹಯ್ಯ ಮತ್ತು ಬಳಗವನ್ನು ಇವತ್ತು ಅದು ಬೇಟೆಯಾಡುತ್ತಿರುವುದು ಇದೇ ‘ಭ್ರಮಾ’ ಸಂವಿಧಾನದ ಆಧಾರದಲ್ಲಿ. ಈಗಾಗಲೇ ಇದರ ಅಪಾಯಕ್ಕೆ ಶಾರುಖ್, ಅಮೀರ್, ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾದತ್.. ಮುಂತಾದ ಅನೇಕರು ಗುರಿಯಾಗಿದ್ದಾರೆ. ‘ತಾನೇ ಸರಿ ಇತರೆಲ್ಲರೂ ತಪ್ಪು' ಎಂಬ ಮನಸ್ಥಿತಿ ನಿಜಕ್ಕೂ ಅತ್ಯಂತ ಅಪಾಯಕಾರಿ. ವಿಕೃತಿಯೇ ವಿಚಾರಧಾರೆಯಾದರೆ, ಶೋಕಕ್ಕೂ ಸುಖಪಡಲಾಗುತ್ತದೆ. ಕ್ರೌರ್ಯವನ್ನೂ ಗೌರವಿಸಲಾಗುತ್ತದೆ. ಗುಡ್‍ಫ್ರೈಡೇಯಂದು ಸಂತಸ ಹಂಚಿಕೊಂಡಿರುವುದರಲ್ಲಿ ಪರೋಕ್ಷ
ವಾಗಿ ವ್ಯಕ್ತವಾಗುವುದೂ ಇದುವೇ.

No comments:

Post a Comment