|
ವಿಜಯಂತಿ ದೇವಿ ಮತ್ತು ಜೈಗೋವಿಂದ್ ಸಿಂಗ್ |
ಬಿಹಾರದಲ್ಲಿ ಕಳೆದವಾರ ಅಪರೂಪದ ವಿವಾಹವೊಂದು ಜರುಗಿತು. Bihar's bottles disappear and they wed again after 16 years ಎಂಬ ಶೀರ್ಷಿಕೆಯಲ್ಲಿ ದಿ ಹಿಂದೂ ಪತ್ರಿಕೆಯು ಸವಿಸ್ತಾರವಾಗಿ ಚಿತ್ರ ಸಮೇತ ಈ ವಿವಾಹದ ಬಗ್ಗೆ ವರದಿ ಮಾಡಿದೆ. 17 ವರ್ಷದ ಗುಡ್ಡಿ ಕುಮಾರಿ ಎಂಬ ಹುಡುಗಿ ಈ ಮದುವೆಯ ಆಮಂತ್ರಣ ಪತ್ರಿಕೆಯನ್ನು ಖುದ್ದಾಗಿ ಮನೆ ಮನೆಗೆ ಹಂಚಿದ್ದಳು. ಗುಡ್ಡಿಗೆ 1 ವರ್ಷವಾಗಿದ್ದಾಗ ಆಕೆಯ ಹೆತ್ತವರಾದ ವಿಜಯಂತಿ ದೇವಿ ಮತ್ತು ಜೈಗೋವಿಂದ್ ಸಿಂಗ್‍ರು ಪರಸ್ಪರ ಬೇರ್ಪಟ್ಟಿದ್ದರು. ಈ ಅಗಲುವಿಕೆಗೆ ಮದ್ಯಪಾನವೇ ಮುಖ್ಯ ಕಾರಣವಾಗಿತ್ತು. ಜೈಗೋವಿಂದ್ ಸಿಂಗ್‍ರು ಮದ್ಯಪಾನವನ್ನು ಚಟವಾಗಿಸಿಕೊಂಡಿದ್ದರು. ಕುಟುಂಬವನ್ನು ಅದು ತೀವ್ರವಾಗಿ ಬಾಧಿಸಿತು. ವಿಜಯಂತಿ ಕಾದಳು. ಮದ್ಯಪಾನವನ್ನು ಬಿಟ್ಟು ಬಿಡುವಂತೆ ಗಂಡನಲ್ಲಿ ವಿನಂತಿಸಿದಳು. ವಿವಿಧ ರೀತಿಯಲ್ಲಿ ಪ್ರಯತ್ನಿಸಿ ನೋಡಿದಳು. ಕೊನೆಗೆ ಗಂಡ ಬದಲಾಗಲಾರ ಎಂದು ಸ್ಪಷ್ಟವಾದಾಗ ಗಂಡನಿಂದಲೇ ದೂರವಾದಳು. ಇದೀಗ ಅವರು ಮತ್ತೆ ಮರು ಮದುವೆಯಾಗಿ ಒಂದಾಗಿದ್ದಾರೆ. ಬಿಹಾರ ಸರಕಾರವು ಎಪ್ರಿಲ್ 5ರಿಂದ ಜಾರಿಗೊಳಿಸಿದ ಸಂಪೂರ್ಣ ಪಾನ ನಿಷೇಧವು ಅವರಿಬ್ಬರನ್ನು ಮದುವೆ ಮಂಟಪದಲ್ಲಿ ಸಾರ್ವಜನಿಕರ ಮುಂದೆ ಮತ್ತೆ ಅದ್ದೂರಿಯಾಗಿ ಜೋಡಿಸಿದೆ. ತಾನಿನ್ನು ಕುಡಿಯಲಾರೆ ಎಂದು ಗೋವಿಂದ್ ಸಿಂಗ್ ಶಪಥ ತೊಟ್ಟಿದ್ದಾರೆ. ನಿಜವಾಗಿ, ಮಂಡ್ಯದ ಶಕೀಲ್ ಮತ್ತು ಆಶಿತಾರ ಪ್ರೇಮ ವಿವಾಹಕ್ಕಿಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬೇಕಿದ್ದ ವಿವಾಹ ಇದು. ಹರೆಯದ ಗಂಡು ಮತ್ತು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ಮತ್ತು ಧರ್ಮದ ಹಂಗಿಲ್ಲದೇ ವೈವಾಹಿಕ ಸಂಬಂಧದಲ್ಲಿ ಏರ್ಪಡುವುದಕ್ಕೆ ತೀರ್ಮಾನಿಸುವುದೆಲ್ಲ ಭಾರತದ ಸದ್ಯದ ಸಾಮಾಜಿಕ ವಾತಾವರಣದಲ್ಲಿ ಅಸಹಜವೂ ಅಲ್ಲ, ಅತಿರೇಕದ್ದೂ ಅಲ್ಲ. ಪ್ರೇಮ ವಿವಾಹಕ್ಕೆ ಅವುಗಳದ್ದೇ ಆದ ಇತಿ ಮತ್ತು ಮಿತಿಗಳಿವೆ. ವೈವಾಹಿಕ ಜೀವನದ ಬಗ್ಗೆ ಕನಸುಗಳನ್ನಷ್ಟೇ ಕಟ್ಟಿಕೊಂಡಿರುವ ಮತ್ತು ಪ್ರಾಯೋಗಿಕವಾಗಿ ಏನೇನೂ ಅನುಭವವಿಲ್ಲದ ಜೋಡಿಯೊಂದರ ವಿವಾಹಕ್ಕೆ ಹೋಲಿಸಿದರೆ, ವಿಜಯಂತಿ ಮತ್ತು ಜೈಗೋವಿಂದ್ ಸಿಂಗ್‍ರ ಮರುವಿವಾಹ ಹೆಚ್ಚು ಪ್ರಸ್ತುತವಾದುದು. ಇವರಲ್ಲಿ ಜೀವನಾನುಭವವಿದೆ. ಸಾಮಾಜಿಕ ಕಟ್ಟುಪಾಡುಗಳ ಅರಿವಿದೆ. ದಾಂಪತ್ಯ ಸಂಬಂಧದ ಕುರುಹಾಗಿ ಒಂದು ಮಗು ಇದೆ. ವೈವಾಹಿಕ ಅನುಭವವಿದೆ. ಹೀಗೆ ದಾಂಪತ್ಯ ಸಂಬಂಧದಲ್ಲಿ ಅನುಭವವಿರುವ ಜೋಡಿಯೊಂದು ಮದ್ಯಪಾನದ ಕಾರಣಕ್ಕಾಗಿ ಬೇರ್ಪಡುವುದು ಮತ್ತು ಅದನ್ನು ತ್ಯಜಿಸಿದ ಕಾರಣಕ್ಕಾಗಿ ಮತ್ತೆ ಒಂದಾಗುವುದೆಂದರೆ ಅದು ಹರೆಯದ ಆಕರ್ಷಣೆಗಿಂತ ಗಂಭೀರವಾದುದು. ಮದ್ಯ ಕೇಂದ್ರಿತ ಭಾರತೀಯ ಸಾಮಾಜಿಕ ಜೀವನ ಕ್ರಮದ ಸರಿ-ತಪ್ಪುಗಳನ್ನು ವಿಮರ್ಶೆಗೆ ಒಡ್ಡುವಂತಹದ್ದು. ಅಷ್ಟಕ್ಕೂ, ಮದ್ಯಪಾನದ ಕಾರಣಕ್ಕಾಗಿ ಬೇರ್ಪಟ್ಟ ದಂಪತಿಗಳಲ್ಲಿ ವಿಜಯಂತಿ ಮತ್ತು ಜೈಗೋವಿಂದ್‍ರು ಮೊದಲಿಗರೇನೂ ಅಲ್ಲ. ಬಹುಶಃ, ವಿಜಯಂತಿಗೆ ತನ್ನ ಮಗುವಿನೊಂದಿಗೆ ಪ್ರತ್ಯೇಕ ಜೀವನ ನಡೆಸುವ ಅವಕಾಶವಾದರೂ ಸಿಕ್ಕಿದೆ. ಈ ಅವಕಾಶವೂ ದಕ್ಕದ ಕೋಟ್ಯಂತರ ವಿಜಯಂತಿಯರು ಈ ದೇಶದಲ್ಲಿದ್ದಾರೆ. ಸಂಜೆಯಾಗುತ್ತಲೇ ಈ ವಿಜಯಂತಿಯರ ಎದೆಬಡಿತ ವೇಗವನ್ನು ಪಡಕೊಳ್ಳತೊಡಗುತ್ತದೆ. ಮಕ್ಕಳು ಒಳಕೋಣೆಯ ಬಾಗಿಲ ಸಂದನ್ನು ಆಶ್ರಯಿಸತೊಡಗುತ್ತಾರೆ. ಗಂಡನೆಂಬ ಜೈಗೋವಿಂದರು ಯಾವಾಗ ತಮ್ಮ ಮೇಲೆ ಪ್ರತಾಪವನ್ನು ತೋರಿಸುವರೋ ಎಂಬ ಭೀತಿ ಇಡೀ ಮನೆಯನ್ನು ಆವರಿಸಿರುತ್ತದೆ. ಒಂದು ಕಡೆ ಕಂಠಪೂರ್ತಿ ನಶೆ ಏರಿಸಿ ಬರುವ ಗಂಡ, ಇನ್ನೊಂದು ಕಡೆ ಆ ನಶೆಯ ಸರ್ವ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆಯಲ್ಲಿ ಪತ್ನಿ ಮತ್ತು ಮಕ್ಕಳು. ಇಂಥದ್ದೊಂದು ಒತ್ತಡದಲ್ಲಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಪ್ರತಿನಿತ್ಯ ನರಳುತ್ತಿರುವಾಗ ನಾವು ಯಾವುದಕ್ಕಾಗಿ ಧರಣಿ ಕೂರಬೇಕು? ಯಾವ ವಿಷಯವನ್ನು ಎತ್ತಿಕೊಂಡು ಪ್ರತಿಭಟನೆ ಮಾಡಬೇಕು? ಮಂಡ್ಯದಲ್ಲಿ ಆಶಿತಾಳ ಮನೆಯ ಮುಂದೆ ಧರಣಿ ಕೂತವರು ಮತ್ತು ಆಕೆಯ ಮದುವೆಯನ್ನು ಹಿಂದೂ ಧರ್ಮಕ್ಕಾಗುವ ಅವಮಾನವೆಂದು ವ್ಯಾಖ್ಯಾನಿಸಿ ಬಂದ್‍ಗೆ ಕರೆಕೊಟ್ಟವರೆಲ್ಲ ಯಾಕೆ ಈ ವಿಷಯವಾಗಿ ಪ್ರತಿಭಟನೆ ಕೈಗೊಳ್ಳುತ್ತಿಲ್ಲ? ಹಿಂದೂ ಧರ್ಮದ ಸೌಂದರ್ಯವನ್ನು ನಾಶ ಮಾಡುವ ಖಾತೆಯೆಂದು ಸಾರಿ ಅಬಕಾರಿ ಖಾತೆಯ ಸಚಿವರ ಮನೆ ಮುಂದೆ ಧರಣಿಯನ್ನೇಕೆ ಏರ್ಪಡಿಸುತ್ತಿಲ್ಲ? ಒಮ್ಮೆ, ಆಶಿತಾ ಮತ್ತು ಶಕೀಲ್ ಜೋಡಿಯನ್ನು ಹಾಗೂ ದಮಯಂತಿ ಮತ್ತು ಜೈಗೋವಿಂದ್ ಸಿಂಗ್ ಜೋಡಿಯನ್ನು ಮುಖಾಮುಖಿಗೊಳಿಸಿ ಪ್ರಶ್ನಿಸಿಕೊಳ್ಳಿ. ಸಾಮಾಜಿಕವಾಗಿ ಯಾವುದು ಆತಂಕಕಾರಿ? ಶಕೀಲ್-ಆಶಿತಾರ ಮಾದರಿಯು ಈ ದೇಶದಲ್ಲಿ ಸಮೂಹ
|
ಶಕೀಲ್ ಮತ್ತು ಆಶಿತಾ |
ಸನ್ನಿಯಾಗಿ ಮಾರ್ಪಡಬಹುದು ಮತ್ತು ಧರ್ಮಗಳೆಲ್ಲ ಛಿನ್ನ-ಭಿನ್ನವಾಗಿ ನಾಶವಾಗಬಹುದು ಎಂದು ಸ್ವತಃ ಈ ಮದುವೆಯ ವಿರುದ್ಧ ಬಂದ್‍ಗೆ ಕರೆ ಕೊಟ್ಟವರೇ ವಾದಿಸಲಾರರು. ಯಾಕೆಂದರೆ ಪ್ರೀತಿ-ಪ್ರೇಮಕ್ಕೆ ಅದರದ್ದೇ ಆದ ಇತಿ-ಮಿತಿಗಳಿವೆ. ಪ್ರೇಮ ವಿವಾಹದಿಂದಾಗಿ ಧರ್ಮವೊಂದು ನಾಶವಾಗಿ ಬಿಡುತ್ತದೆ ಎಂದು ಹೇಳುವುದು ಅತ್ಯಂತ ಅವೈಜ್ಞಾನಿಕ ಮತ್ತು ಅವಿವೇಕತನದ್ದು. ಹರೆಯದ ಆಕರ್ಷಣೆಯ ಮೇಲೆ ಯಾವ ಧರ್ಮವೂ ಅವಲಂಬಿತವಾಗಿಲ್ಲ. ಧರ್ಮವೊಂದು ಅಪಾಯಕ್ಕೆ ಸಿಲುಕಿಕೊಳ್ಳುವ ಸಂದರ್ಭ ಯಾವುದೆಂದರೆ, ಧರ್ಮದ ಮೂಲಭೂತ ಪ್ರತಿಪಾದನೆಗಳು ವ್ಯಾಪಕ ಮಟ್ಟದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವಾಗ. ಕುಡಿತ ಈ ದೇಶದಲ್ಲಿ ಇವತ್ತು ಮಾಡುತ್ತಿರುವುದು ಈ ನಾಶವನ್ನೇ. ಕುಡಿತದ ಅಮಲು ಹರೆಯದ ಆಕರ್ಷಣೆಯ ‘ಅಮಲಿ'ನಷ್ಟು ಅಲ್ಪಕಾಲಿಕವಲ್ಲ. ಹರೆಯದ ಅಮಲಿನಲ್ಲಿ ಸಿಲುಕಿ ವೈವಾಹಿಕ ಸಂಬಂಧದಲ್ಲಿ ಏರ್ಪಡುವವರನ್ನು ಬಳಿಕ ಜವಾಬ್ದಾರಿಯು ಕಟ್ಟಿ ನಿಲ್ಲಿಸುತ್ತದೆ. ಮಕ್ಕಳು, ಕುಟುಂಬ, ಗೌರವಾನ್ವಿತ ಜೀವನ ಮುಂತಾದದ ಗುರಿಗಳು ಈ ಸಂಬಂಧವನ್ನು ಮತ್ತಷ್ಟು ಭದ್ರಪಡಿಸುತ್ತಾ ಸಾಗುತ್ತದೆ. ಇದಕ್ಕೆ ಹೋಲಿಸಿದರೆ ಕುಡಿತದ ಅಮಲು ಇದಕ್ಕೆ ತೀರಾ ವಿರುದ್ಧವಾದುದು. ಅದು ವೈವಾಹಿಕ ಜೀವನದ ಸೌಂದರ್ಯವನ್ನೇ ಕೆಡಿಸುತ್ತದೆ. ಬೇಜವಾಬ್ದಾರಿತನವನ್ನು ಬೆಳೆಸುತ್ತದೆ. ಮಕ್ಕಳನ್ನು ಅನಾಥಗೊಳಿಸುತ್ತದೆ. ಅನಾರೋಗ್ಯಕ್ಕೆ, ವೈಧವ್ಯದ ಬದುಕಿಗೆ ದಾರಿ ತೆರೆಯುತ್ತದೆ. ನಿಜವಾಗಿ, ಸುಖೀ ಕುಟುಂಬ ಎಂಬುದು ಯಾವುದೇ ಧರ್ಮದ ಮೂಲಭೂತ ಬೇಡಿಕೆ. ಮೌಲ್ಯಗಳಿಂದ ತುಂಬಿ ತುಳುಕುವ ಕುಟುಂಬಗಳೇ ಧರ್ಮದ ನಿಜ ಮಾದರಿಗಳು. ಆದರೆ ಕುಡಿತ ಈ ಮೂಲಭೂತ ಅಂಶವನ್ನೇ ನಾಶ ಮಾಡುತ್ತದೆ. ಅದು ಸ್ವತಃ ಕುಡುಕನನ್ನು ಮಾತ್ರವಲ್ಲ, ಮಕ್ಕಳು, ಮಡದಿ, ಕುಟುಂಬ, ಸಮಾಜ ಸಹಿತ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿಬಿಡುವಷ್ಟು ಅಪಾಯಕಾರಿ ಸಾಮರ್ಥ್ಯವನ್ನು ಪಡೆದಿದೆ.
ದುರಂತ ಏನೆಂದರೆ, ಧರ್ಮರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವವರೆಲ್ಲ ಧರ್ಮದ ಪಾಲಿಗೆ ನಿಜಕ್ಕೂ ಅಪಾಯಕಾರಿಯಾಗಿರುವ ಕುಡಿತದ ಬಗ್ಗೆ ಗಾಢ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ. ಆಶಿತಾ ಮತ್ತು ಶಕೀಲ್‍ರ ಮದುವೆಯ ವಿಷಯದಲ್ಲಿ ಪ್ರತಿಭಟನೆ ವ್ಯಕ್ತಪಡಿಸಲು ತೋರಿದ ಆಸಕ್ತಿಯ ಹತ್ತು ಶೇಕಡಾದಷ್ಟಾದರೂ ಈ ಕುಡಿತದ ವಿಷಯದಲ್ಲಿ ತೋರಿಸಿರುತ್ತಿದ್ದರೆ ಎಷ್ಟು ವಿಜಯವಂತಿಯರು ಖುಷಿಪಡುತ್ತಿದ್ದರು? ಗುಡ್ಡಿ ಕುಮಾರಿಯಂಥ ಎಷ್ಟು ಹೆಣ್ಣು ಮಕ್ಕಳ ಬದುಕು ಸುಂದರಗೊಳ್ಳುತ್ತಿತ್ತು? ಪಾನ ನಿಷೇಧ ಘೋಷಿಸಲಾದ ಈ ಸಣ್ಣ ಅವಧಿಯಲ್ಲೇ ಬಿಹಾರದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಅಲ್ಲಿನ ಸರಕಾರವೇ ಹೇಳಿಕೊಂಡಿದೆ. ಮದುವೆ ಸಮಾರಂಭಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ. ನಶೆಯೇರಿಸಿ ಮತ್ತು ಸಮಯ ಪ್ರಜ್ಞೆಯಿಲ್ಲದೇ ಬರುತ್ತಿದ್ದ ವರನ ಕಡೆಯವರ ಹುಚ್ಚಾಟಗಳೂ ಕಡಿಮೆಯಾಗಿವೆ. ಸಾಮಾನ್ಯವೆಂಬಂತಿದ್ದ ‘ಮದುವೆ ಪಾರ್ಟಿ ಘರ್ಷಣೆ'ಗಳು ಇಲ್ಲವಾಗುತ್ತಿವೆ. ಆದ್ದರಿಂದ, ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳ ಸಂಕೇತವಾಗಿ ವಿಜಯವಂತಿ ಮತ್ತು ಜೈಗೋವಿಂದ್ ಸಿಂಗ್‍ರ ಮರು ಮದುವೆಯನ್ನು ನಾವು ಗುರುತಿಸಬಹುದು. ಆದರೆ ಶಕೀಲ್-ಆಶಿತಾರ ಬೆನ್ನು ಬಿದ್ದವರು ಇದರಲ್ಲಿ ಈವರೆಗೆ ಯಾವ ಆಸಕ್ತಿಯನ್ನೂ ತೋರಿಸಿಲ್ಲ. ಯಾಕೆಂದರೆ ಅವರ ಜೊತೆ ಧರ್ಮವಿಲ್ಲ.
No comments:
Post a Comment