Friday, 27 May 2016

ತಲಾಕ್: ಚಲಾವಣೆಯಲ್ಲಿರುವ ಸುಳ್ಳು ಮತ್ತು ನಿದ್ದೆಯಲ್ಲಿರುವ ಸತ್ಯ

       ಮುಸ್ಲಿಮರಿಗೆ ಸಂಬಂಧಿಸಿ ಈ ದೇಶದಲ್ಲಿ ಕೆಲವು ಕುತೂಹಲಕಾರಿ ಅಭಿಪ್ರಾಯಗಳಿವೆ. ವರ್ಷಪೂರ್ತಿ ಚರ್ಚಿಸಿದರೂ ಆಸಕ್ತಿಗೆ ಭಂಗ ಉಂಟಾಗದಷ್ಟು ಅಪಾರ ವಿಷಯ ಸಂಪತ್ತನ್ನು ಈ ಸಮುದಾಯ ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದು ಪ್ರಾಮಾಣಿಕವಾಗಿ ನಂಬಿದವರು ಈ ದೇಶದಲ್ಲಿದ್ದಾರೆ. ಜಿಹಾದ್, ನಿಕಾಹ್, ತಲಾಕ್, ಖುಲಾ, ಫಸ್ಕ್, ಶರೀಅತ್, ಅಲ್ಲಾಹು, ಮದ್ರಸ, ಮಸೀದಿ, ಕುರ್‍ಆನ್, ಪ್ರವಾದಿ ಮುಹಮ್ಮದ್(ಸ).. ಮುಂತಾದುವುಗಳೆಲ್ಲ ಅವರ ಪಾಲಿಗೆ ಇನ್ನೂ ಗೋಣಿಚೀಲದೊಳಗಡೆಯೇ ಇದೆ. ಅವರಿಗೆ ಯಾರೂ ಅದನ್ನು ಸರಿಯಾಗಿ ಕಟ್ಟು ಬಿಚ್ಚಿ ತೋರಿಸಿಲ್ಲ ಅಥವಾ ಅವರು ನೋಡಲು ಬಯಸುತ್ತಿಲ್ಲ. ಕೆಲವರು ಗೋಣಿಚೀಲದೊಳಗೆ ಏನೇನಿವೆ ಮತ್ತು ಅವು ಎಷ್ಟು ಅಪಾಯಕಾರಿ ಎಂಬುದಾಗಿ ಹೊರಗಡೆಯಿಂದಲೇ ವಿವರಿಸುತ್ತಾರೆ. ಇನ್ನೂ ಕೆಲವರು ಭಾಗಶಃ ಕಟ್ಟನ್ನು ಬಿಚ್ಚಲು ಪ್ರಯತ್ನಿಸಿದ್ದಾರೆ ಮತ್ತು ತಾವು ಕಂಡಿರುವುದಕ್ಕಿಂತ ಕಾಣದಿರುವುದರ ಮೇಲೆಯೇ ಕುತೂಹಲಕಾರಿ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನು, ಈ ಗೋಣಿಚೀಲದ ಕಟ್ಟನ್ನು ಅಧಿಕೃತವಾಗಿ ಬಿಚ್ಚ ಬೇಕಾದವರು ಮತ್ತು ಅದರೊಳಗಡೆ ಇರುವುದನ್ನೆಲ್ಲ ಸಮಾಜದ ಮುಂದೆ ಪ್ರದರ್ಶಿಸಬೇಕಾದವರಲ್ಲೂ ಹಿಂಜರಿಕೆಯೋ ಜಿಪುಣತೆಯೋ ಏನೋ ಒಂದು ಕಾಣಿಸುತ್ತದೆ. ಅವರ ಮಾತುಗಳಲ್ಲಿ ಅಸ್ಪಷ್ಟತೆ ಇಣುಕುತ್ತದೆ. ಕಾಲ, ಪರಿಸ್ಥಿತಿ, ಸನ್ನಿವೇಶಗಳಿಗೆ ಸಂಪೂರ್ಣ ಬೆನ್ನು ಹಾಕಿಕೊಂಡು ಅವರು ಕೊಡುವ ಕೆಲವೊಂದು ವಿವರಗಳು ಇಡೀ ಗೋಣಿಚೀಲವನ್ನೆ ಡೈನೋಸರ್‍ನಂತೆ ಬಿಂಬಿಸುತ್ತಿವೆ. ಅದರೊಳಗಡೆಯಿರುವ ವಸ್ತುಗಳನ್ನು ಟೈಂಬಾಂಬ್‍ನಂತೆ ಪರಿಚಯಿಸುತ್ತಿವೆ. ಈ ಗೊಂದಲಕಾರಿ ವಾತಾವರಣದ ಕಾರಣದಿಂದಾಗಿಯೇ ಜೈಪುರದ ಅಫ್ರೀನ್ ರಹ್ಮಾನ್ ಎಂಬ ಮಹಿಳೆ ಕಳೆದವಾರ ಸುದ್ದಿಗೀಡಾಗಿದ್ದಾಳೆ. ತನ್ನ ಗಂಡ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿದ ತಲಾಕ್ ತಲಾಕ್ ತಲಾಕ್ ಅನ್ನು ಪ್ರಶ್ನಿಸಿ ಆಕೆ ಸುಪ್ರೀಮ್ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾಳೆ. ‘ಈ ತಲಾಕ್ (ವಿಚ್ಛೇದನ) ಅಸಿಂಧು, ಅಧರ್ಮ, ಅಸ್ವೀಕಾರಾರ್ಹ..’ ಎಂದಾಕೆ ವಾದಿಸಿದ್ದಾಳೆ. ನಿಜವಾಗಿ, ಆಕೆಯ ವಾದದಲ್ಲಿ ಕುತೂಹಲಕಾರಿಯಾದುದೇನೂ ಇಲ್ಲ. ನಿಕಾಹ್ (ಮದುವೆ) ಎಂಬ ಇಸ್ಲಾಮೀ ಕಾನೂನುಬದ್ಧ ಒಪ್ಪಂದವು ಒಂದು ಸ್ಪೀಡ್ ಪೋಸ್ಟ್ ನಲ್ಲಿ ಮುರಿಯುವಷ್ಟು ದುರ್ಬಲವಲ್ಲ. ನಿಕಾಹ್‍ಗೆ ಷರತ್ತುಗಳಿವೆ. ತಲಾಕ್‍ಗೂ ಷರತ್ತುಗಳಿವೆ. ಈ ಷರತ್ತುಗಳನ್ನು ಪುರುಷ ಹೇಗೆ ಬೇಕಾದರೂ ಉಲ್ಲಂಘಿಸಬಹುದು ಎಂಬ ಉದಾರ ನಿಲುವು ಇಸ್ಲಾಮೀ ವಿವಾಹ ಸಂಹಿತೆಯಲ್ಲಿ ಎಲ್ಲೂ ಇಲ್ಲ. ನಿಜವಾಗಿ, ವಿಚ್ಛೇದನದ ವಿಷಯದಲ್ಲಿ ಇಸ್ಲಾಮ್ ಅತ್ಯಂತ ಉದಾರ ನೀತಿಯನ್ನು ತಳೆದಿರುವುದು ಮಹಿಳೆಯರ ಬಗ್ಗೆಯೇ. ಮಾತ್ರವಲ್ಲ, ಇಸ್ಲಾಮೀ ವಿವಾಹ ಸಂಹಿತೆಯನ್ನು ಮಹಿಳಾ ಪರ ಎಂದೂ ಹೇಳಬಹುದು. ಅಂದಹಾಗೆ, ಪತಿಯು ವಿವಾಹ ವಿಚ್ಛೇದನ ನೀಡುವುದಕ್ಕೆ ‘ತಲಾಕ್’ ಎಂದು ಹೇಳುವಾಗ, ಪತ್ನಿಯು ಪತಿಯಿಂದ ವಿವಾಹ ವಿಚ್ಛೇದನವನ್ನು ಕೋರುವುದಕ್ಕೆ ಖುಲಾ ಎಂದು ಹೇಳಲಾಗುತ್ತದೆ. ಇಲ್ಲಿ, ಬಹುಮುಖ್ಯವಾದ ವಿಷಯವೊಂದಿದೆ. ಪುರುಷನು ಮೂರು ಬಾರಿ ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿಬಿಡುವ ಪದ್ಧತಿಯನ್ನು ಪವಿತ್ರ ಕುರ್‍ಆನ್ ಎಲ್ಲೂ ಪ್ರಸ್ತುತಪಡಿಸಿಯೇ ಇಲ್ಲ. ಅದು ವಿಚ್ಛೇದನಕ್ಕೆ ಅತ್ಯಂತ ಪ್ರಾಯೋಗಿಕ ಮತ್ತು ಪ್ರಾಕೃತಿಕವೆನ್ನಬಹುದಾದ ಮಾನದಂಡಗಳನ್ನು ನಿಶ್ಚಯಿಸಿದೆ. ಪುರುಷನು ಒಮ್ಮೆಗೆ ಒಂದು ತಲಾಕನ್ನು ಮಾತ್ರ ಹೇಳಬಹುದು. ಈ ತಲಾಕ್‍ಗಿಂತಲೂ ಮೊದಲು ಅವರಿಬ್ಬರ (ಪತಿ-ಪತ್ನಿ) ನಡುವೆ ಎರಡೂ ಕಡೆಯವರಿಂದ ರಾಜಿ ಪಂಚಾಯಿತಿಕೆಗಳು ನಡೆಯಬೇಕು. ಮಾತುಕತೆ, ಸಮಜಾಷಿಕೆಗಳು ಏರ್ಪಡಬೇಕು. ಇದರಿಂದಲೂ ಆತ ತೃಪ್ತನಾಗದಿದ್ದರೆ ಒಂದು ತಲಾಕ್ ಹೇಳಬೇಕು. ಹಾಗೆ ಹೇಳುವುದರಿಂದ ಪತಿ-ಪತ್ನಿಯರ ನಡುವೆ ವಿವಾಹ ವಿಚ್ಛೇದನವೇನೂ ಆಗುವುದಿಲ್ಲ. ಹಾಗೆ ತಲಾಕ್ ಹೇಳಿಕ ಬಳಿಕವೂ ಪತಿ-ಪತ್ನಿ ಒಂದೇ ಮನೆಯಲ್ಲಿ ಉಳಿಯಬೇಕು. ಪತಿ-ಪತ್ನಿಯರಾಗಿಯೇ ಬಾಳಬೇಕು. ಹೀಗೆ ಮುಟ್ಟಿನ ಅವಧಿಯ ವರೆಗೆ (ಒಂದು ತಿಂಗಳು) ಮುಂದುವರಿದರೆ ಮತ್ತು ಆತ ತನ್ನ ನಿಲುವಿನಲ್ಲಿ ಸ್ಥಿರವಾಗಿದ್ದರೆ ಎರಡನೇ ತಲಾಕ್ ಹೇಳಬೇಕು. ಒಂದು ವೇಳೆ ಈ ಅವಧಿಯ ಒಳಗೆ ಅವರಿಬ್ಬರ ನಡುವೆ ಅನುರಾಗ ಉಂಟಾಗಿ, ದೈಹಿಕ ಸಂಪರ್ಕ ಏರ್ಪಟ್ಟರೆ ತಲಾಕ್ ಅನೂರ್ಜಿತಗೊಳ್ಳುತ್ತದೆ. ಹೀಗೆ ಸಾಗುವ ಈ ವಿಚ್ಛೇದನ ಪ್ರಕ್ರಿಯೆಗೆ  ಕನಿಷ್ಠವೆಂದರೆ 3 ತಿಂಗಳಾದರೂ ಬೇಕು. ಗರಿಷ್ಠ ಎಷ್ಟೂ ಆಗಬಹುದು. (ಅಧ್ಯಾಯ ಅನ್ನಿಸಾ ಮತ್ತು ಅತ್ತಲಾಕ್)
  ಅದೇ ವೇಳೆ, ಪತಿಯಿಂದ ವಿಚ್ಛೇದನವನ್ನು (ಖುಲಾ) ಕೋರುವ ಪತ್ನಿಯ ಮುಂದೆ ಇಷ್ಟೊಂದು ಕಠಿಣ ನಿಯಮಾವಳಿಗಳು ಇಲ್ಲವೇ ಇಲ್ಲ. ಅದು ತೀರಾ ಸರಳ ಮತ್ತು ಸರಾಗ. ತನಗೆ ಪತಿ ಇಷ್ಟವಾಗದಿದ್ದರೆ ವಿಚ್ಛೇದನ (ಖುಲಾ) ಕೊಡುವಂತೆ ಆಕೆ ಆತನಲ್ಲಿ ಕೋರಬಹುದು. ಆತ ಒಪ್ಪದಿದ್ದರೆ ನೇರವಾಗಿ ಖಾಝಿಯ ಬಳಿಗೆ ತೆರಳಿ ವಿವಾಹವನ್ನು ರದ್ದು(ಫಸ್ಕ್)ಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಗೆ ಗಂಟೆ, ದಿನ, ತಿಂಗಳು ಏನನ್ನೂ ನಿರ್ಧರಿಸಲಾಗಿಲ್ಲ. ವಿಷಾದ ಏನೆಂದರೆ, ತಲಾಕನ್ನು ಮಹಿಳಾ ವಿರೋಧಿ ಎಂದು ಹೇಳುವ ಮತ್ತು ಈ ವಾದವನ್ನು  ಸಮರ್ಥಿಸುವುದಕ್ಕಾಗಿ ಪುಟಗಟ್ಟಲೆ ಬರೆಯುವ ಯಾರೂ ಕೂಡ ಈ ಸತ್ಯವನ್ನು ಎಲ್ಲೂ ಹೇಳುತ್ತಲೇ ಇಲ್ಲ. ನಿಜವಾಗಿ, ಬೀದಿಗಿಳಿಯಬೇಕಾದದ್ದು ಹೆಣ್ಣಲ್ಲ, ಗಂಡು. ಪುರುಷನ ಪಾಲಿಗೆ ಅತಿ ಕಠಿಣ ಷರತ್ತುಗಳನ್ನು ಒಳಗೊಂಡಿರುವ ತಲಾಕ್ ಕ್ರಮವನ್ನು ಇವತ್ತು ಹೇಗೆ ತಿರುಚಿ ಬಿಡಲಾಗಿದೆಯೆಂದರೆ, ಈ ಭೂಮಿಯ ಮೇಲೆ ಮತ್ತು ಆಕಾಶದ ಕೆಳಗೆ ಇರುವ ಅತಿ ನೀಚ ಮಹಿಳಾ ಶೋಷಕ ಕಾನೂನು ಇಸ್ಲಾಮ್‍ನಲ್ಲಿದೆ ಎಂಬುದಾಗಿ. ಹಾಗಂತ, ಈ ತಪ್ಪು ತಿಳುವಳಿಕೆಗೆ ಮುಸ್ಲಿಮರ ಕೊಡುಗೆ ಖಂಡಿತ ಇದೆ. ತಲಾಕ್‍ನ ಅತ್ಯಂತ ಸುಂದರ ರೂಪವನ್ನು ಗೋಣಿಚೀಲದಲ್ಲಿ ಅವರು ಬಚ್ಚಿಟ್ಟಿದ್ದಾರೆ ಮತ್ತು ಅದರ ನಾಮಧಾರಿ ಅನುಯಾಯಿಗಳು ತಲಾಕ್‍ನ ಅತ್ಯಂತ ಕರಾಳ ರೂಪವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಸಂಗತಿ ಏನೆಂದರೆ, ಈ ಕರಾಳ ರೂಪವನ್ನೇ ತಲಾಕ್‍ನ ಅಧಿಕೃತ ರೂಪ ಮತ್ತು ಅತ್ಯಂತ ಸರಿಯಾದ ರೂಪ ಎಂದು ಕೆಲವರು ಪತ್ರಿಕೆಗಳಲ್ಲೂ ಟಿ.ವಿ.ಗಳಲ್ಲೂ ವೇದಿಕೆಗಳಲ್ಲೂ ಅತ್ಯಂತ ತಾರಕ ಧ್ವನಿಯಲ್ಲಿ ಘೋಷಿಸುತ್ತಿರುವುದು. ಇದೇ ಮಂದಿ ಸಮಾಜದ ಇನ್ನಿತರ ಘಟನೆಗಳಿಗೆ ಸಂಬಂಧಿಸಿ ಇಷ್ಟೊಂದು ಉಡಾಫೆಯ ನಿಲುವನ್ನು ಎಂದೂ ತಾಳುವುದಿಲ್ಲ. ಅವರು ಆ ಘಟನೆ ಅಧಿಕೃತವೋ ಅಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸಿಕೊಳ್ಳುತ್ತಾರೆ. ಆ ಘಟನೆಗಿರುವ ಕಾರಣಗಳನ್ನು ಪತ್ತೆಹಚ್ಚಲು ಶ್ರಮಿಸುತ್ತಾರೆ. ಅಧ್ಯಯನ ನಡೆಸುತ್ತಾರೆ. ಆದರೆ ತಲಾಕ್‍ನ ವಿಷಯದಲ್ಲಿ ಮಾತ್ರ ಇವರೆಲ್ಲ ಅಪ್ಪಟ ಸೋಮಾರಿಗಳಂತೆ ವರ್ತಿಸುತ್ತಾರೆ. ಆದ್ದರಿಂದಲೇ, ಈ ಬಗ್ಗೆ ಅನುಮಾನ ಮೂಡುವುದು. ಇತರ ಸಂದರ್ಭಗಳಲ್ಲಿ ಪಾದರಸದ ಚುರುಕುತನವನ್ನು ಪ್ರದರ್ಶಿಸುವ ಈ ಗುಂಪು, ತಲಾಕ್‍ನಂತಹ ಇಸ್ಲಾಮೀ ಪಾರಿಭಾಷಿಕಗಳ ವಿಷಯದಲ್ಲಿ ಮಾತ್ರ ಈ ಸೋಮಾರಿತನ ಪ್ರದರ್ಶಿಸುತ್ತಿರುವುದೇಕೆ? ನಿಜಕ್ಕೂ, ಇದು ಸೋಮಾರಿತನವೋ ಅಥವಾ ಉದ್ದೇಶಪೂರ್ವಕ ಅಸಡ್ಡೆಯೋ? ಹಾಗಂತ,
  ದುರುಪಯೋಗಕ್ಕೆ ಒಳಗಾಗುತ್ತಿರುವುದು ಬರೇ ತಲಾಕ್ ಮಾತ್ರವೇ? ಈ ದೇಶದಲ್ಲಿ ದುರುಪಯೋಗಕ್ಕೊಳಗಾಗದ ಕಾನೂನುಗಳಾದರೂ ಎಷ್ಟಿವೆ? ವರದಕ್ಷಿಣೆಯನ್ನು ಕಾನೂನುಬಾಹಿರವೆಂದು ಸಾರುವ ಕಾನೂನು ಈ ದೇಶದಲ್ಲಿದೆ. ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ಬಾಲ್ಯವಿವಾಹವನ್ನು ಕಾನೂನು ವಿರೋಧಿಯೆಂದು ಸಾರಲಾಗಿದೆ. 14 ವರ್ಷಕ್ಕಿಂತ ಕೆಳಗಿನವರ ದುಡಿತವನ್ನು ಇಲ್ಲಿನ ಕಾನೂನು ಅಪರಾಧವೆಂದು ಸಾರಿದೆ. ಭ್ರಷ್ಟಾಚಾರ ಅಪರಾಧವಾಗಿದೆ. ಅತ್ಯಾಚಾರ, ಕಳ್ಳತನ, ಗೃಹಹಿಂಸೆ, ತೆರಿಗೆ ವಂಚನೆ, ನಕಲಿ ಮತದಾನ, ನಕಲಿ ಪದವಿ.. ಎಲ್ಲವನ್ನೂ ಇಲ್ಲಿನ ಕಾನೂನು ಶಿಕ್ಷಾರ್ಹವೆಂದು  ಸಾರಿದೆ. ಆದರೆ ಈ ಕಾನೂನುಗಳನ್ನೆಲ್ಲ ಉಲ್ಲಂಘಿಸಲಾಗುತ್ತಿಲ್ಲವೇ? ವರದಕ್ಷಿಣೆ ವಿರೋಧಿ ಕಾನೂನಿನ ಹೊರತಾಗಿಯೂ ಇಲ್ಲಿ ವರದಕ್ಷಿಣೆ ಸಂಪ್ರದಾಯ ಅಸ್ತಿತ್ವದಲ್ಲಿದೆ ಎಂಬ ಕಾರಣವನ್ನು ಮುಂದೊಡ್ಡಿ ಆ ಕಾನೂನನ್ನೇ ಅಪರಾಧಿಗೊಳಿಸಬಹುದೇ? ಅತ್ಯಾಚಾರ ಪ್ರಕರಣಗಳನ್ನು ಕಾರಣವಾಗಿ ತೋರಿಸಿ ಅತ್ಯಾಚಾರಕ್ಕೆ ಸಂಬಂಧಿಸಿದ ಸರ್ವ ಪರಿಚ್ಛೇದಗಳನ್ನೂ ನಾಲಾಯಕ್ಕು ಎಂದು ಘೋಷಿಸಿಬಿಡಬಹುದೇ? ಅತ್ಯಾಚಾರಕ್ಕೆ ಪ್ರಚಲಿತ ಕಾನೂನೇ ಕಾರಣ ಎಂದು ಷರಾ ಬರೆದು ಬಿಡಬಹುದೇ? ಏರುತ್ತಿರುವ ಭ್ರಷ್ಟಾಚಾರ, ಗೃಹಹಿಂಸೆ, ಭಯೋತ್ಪಾದನೆ, ಕೋಮುವಾದ.. ಮುಂತಾದುವುಗಳನ್ನೆಲ್ಲ ನಾವು ಏನೆಂದು ವ್ಯಾಖ್ಯಾನಿಸಬಹುದು? ಅವುಗಳ ಹೊಣೆಯನ್ನು ಆಯಾ ಕಾನೂನುಗಳ ಮೇಲೆ ಹೊರಿಸಬಹುದೇ? ಅವನ್ನೇ ರದ್ದುಪಡಿಸಬೇಕು ಎಂದು ಒತ್ತಾಯಿಸಬಹುದೇ? ಅಷ್ಟಕ್ಕೂ,
  ಕಾನೂನುಗಳ ದುರುಪಯೋಗಕ್ಕೆ ಹೊಣೆಯಾಗಿಸಬೇಕಾದುದು ಆಯಾ ಕಾನೂನುಗಳನ್ನೋ ಅಥವಾ ದುರುಪಯೋಗಿಸಿದವರನ್ನೋ? ತಲಾಕ್‍ಗೆ ಸಂಬಂಧಿಸಿ ಆಗುವ ಚರ್ಚೆಗಳೆಲ್ಲ ಯಾಕೆ ಯಾವಾಗಲೂ ದಿಕ್ಕು ತಪ್ಪುತ್ತಿವೆ? ದುರುಪಯೋಗಿಸಿದವರ ಬದಲು ಕಾನೂನನ್ನೇ ಯಾಕೆ ಅಪರಾಧಿಯಾಗಿ ಕಾಣಲಾಗುತ್ತಿದೆ?  ತಲಾಕ್ ಸಹಿತ ಇಸ್ಲಾಮೀ ಪಾರಿಭಾಷಿಕಗಳ ಕುರಿತಂತೆ ತೋಚಿದಂತೆ ಹೇಳುವ ಉಡಾಫೆತನ ಯಾಕೆ ಸೃಷ್ಟಿಯಾಗಿದೆ? ಇದಕ್ಕೆ ನಾಮಧಾರಿ ಮುಸ್ಲಿಮರು ಮತ್ತು ಮಾಧ್ಯಮದವರ ಕೊಡುಗೆಗಳು ಏನೆಲ್ಲ? ಈ ಬಗ್ಗೆ ಗಂಭೀರ ಅವಲೋಕನ ನಡೆಯಲಿ.

Thursday, 19 May 2016

 ಭಿನ್ನಾಭಿಪ್ರಾಯಗಳ ನಡುವೆಯೂ ಇಷ್ಟವಾದ ನರೇಂದ್ರ ಮೋದಿ

        
      ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗಿರುವ ಹಿರಿಯರ ಬಗ್ಗೆ ದೇಶದ ಗಮನ ಹರಿಯುವಂತೆ ಮಾಡುವಲ್ಲಿ ಮಹಾತ್ಮಾ ಗಾಂಧಿಯವರ ಮೊಮ್ಮಗ ಕಾನೂಭಾಯಿ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಮೇ 16ರಂದು ಹೆಚ್ಚಿನ ಪತ್ರಿಕೆಗಳಲ್ಲಿ ಎರಡು ಪೋಟೋಗಳು ಪ್ರಕಟವಾಗಿವೆ. ಒಂದು, ಕಾನೂಭಾಯಿ ರಾಮದಾಸ್ ಗಾಂಧಿಯವರು ಪ್ರಧಾನಿ ನರೇಂದ್ರ  ಮೋದಿಯವರೊಂದಿಗೆ ಮೊಬೈಲ್‍ನಲ್ಲಿ ಮಾತಾಡುವುದಾದರೆ ಇನ್ನೊಂದು, ನರೇಂದ್ರ ಮೋದಿಯವರು ತಮ್ಮ ವೃದ್ಧ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ತಮ್ಮ ಮನೆಯ ಉದ್ಯಾನವನದಲ್ಲಿ ಸುತ್ತಾಡಿಸುವುದು. ತಾಯಿಗೆ ಉದ್ಯಾನವನದ ಸೌಂದರ್ಯವನ್ನು ವಿವರಿಸಿಕೊಡುವ ಮಗನಾಗಿ ನರೇಂದ್ರ ಮೋದಿಯವರು ಇಷ್ಟವಾಗುತ್ತಾರೆ. ಈ ಇಷ್ಟಕ್ಕೆ ಇನ್ನೊಂದು ಕಾರಣವೂ ಇದೆ. ಮೇ 14ರಂದು ದಿ ಹಿಂದೂ ಪತ್ರಿಕೆಯು ತನ್ನ ಮುಖಪುಟದಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಮಹಾತ್ಮಾ ಗಾಂಧಿಯವರ ಮೊಮ್ಮಗ (ಮಗ ಮೋಹನ್‍ದಾಸ್‍ರ ಮಗ) 87 ವರ್ಷದ ಕಾನೂಭಾಯಿ ಗಾಂಧಿ ಮತ್ತು ಅವರ ಪತ್ನಿ 85 ವರ್ಷದ ಶಿವಲಕ್ಷ್ಮಿ ಗಾಂಧಿಯವರು ದೆಹಲಿಯ ಗುರು ವಿಶ್ರಾಮ್ ಎಂಬ ವೃದ್ಧಾಶ್ರಮವನ್ನು ಸೇರಿಕೊಂಡಿದ್ದಾರೆ ಎಂಬುದೇ ಆ ಸುದ್ದಿ. ಈ ಸುದ್ದಿಗೆ ಪೂರಕವಾಗಿ ಅದು ವಿಸ್ತೃತ ವರದಿಯನ್ನೂ ಪ್ರಕಟಿಸಿತ್ತು. 125 ವೃದ್ಧರಿರುವ ಈ ಆಶ್ರಮದಲ್ಲಿ ಹೆಚ್ಚಿನವರಲ್ಲಿ ಒಂದೋ ಮಾನಸಿಕ ಅಸ್ವಸ್ಥರು ಅಥವಾ ಮರೆವು ರೋಗಕ್ಕೆ (ಅಲ್‍ಜೈಮರ್) ತುತ್ತಾದವರು. ಇವರಿಗೆ ಹೋಲಿಸಿದರೆ ಕಾನೂಭಾಯಿ ಮತ್ತು ಲಕ್ಷ್ಮೀ ಅತ್ಯಂತ ಆರೋಗ್ಯವಂತರು. ಬದುಕಿನ 40 ವರ್ಷಗಳನ್ನು ಇವರಿಬ್ಬರೂ ಅಮೇರಿಕದಲ್ಲಿ ಕಳೆದಿದ್ದಾರೆ. MIT ಪದವೀಧರರಾದ ಕಾನೂಭಾಯಿ ಅವರು ಅಮೇರಿಕದ ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ. ರಕ್ಷಣಾ ಇಲಾಖೆಯಲ್ಲಿ ದುಡಿದಿದ್ದಾರೆ. ಲಕ್ಷ್ಮಿಯವರ ಜೀವನಾನುಭವ ಕೂಡ ಬಹಳ ದೊಡ್ಡದು. ಬೋಸ್ಟನ್‍ನಲ್ಲಿ ಉಪನ್ಯಾಸಕಿಯಾಗಿ ಬಳಿಕ ಸಂಶೋಧಕಿಯಾಗಿ ಕೆಲಸ ಮಾಡಿದ್ದಾರೆ. ಇಸ್ರೇಲ್‍ನ ಈಗಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಕಾನೂಭಾಯಿಯವರು ಸಹಪಾಠಿಗಳು. ಇತ್ತೀಚೆಗೆ ಇವರಿಬ್ಬರನ್ನೂ ನೇತನ್ಯಾಹು ಅವರು ಇಸ್ರೇಲ್‍ಗೆ ಕರೆಸಿಕೊಂಡಿದ್ದರು. ನಾಥೂರಾಮ್ ಗೋಡ್ಸೆಯ ಗುಂಡಿಗೆ ಮಹಾತ್ಮಾ ಗಾಂಧಿ ಬಲಿಯಾಗುವಾಗ ಕಾನೂಭಾಯಿಗೆ 17 ವರ್ಷ. ಆದರೆ ಈ ಕಾನೂಭಾಯಿ ಪುಟ್ಟ ಹುಡುಗನಿದ್ದಾಗಲೇ ತನ್ನ ತುಂಟತನದಿಂದಾಗಿ ಈ ದೇಶಕ್ಕೆ ಪರಿಚಿತನಾಗಿದ್ದ. ಮಹಾತ್ಮಾ ಗಾಂಧಿಯವರು ಸಮುದ್ರ ದಂಡೆಯಲ್ಲಿ ನಡೆಯುತ್ತಿದ್ದಾಗ ಅವರ ಊರುಗೋಲನ್ನು ಕಿತ್ತು ಓಡಿದ ಬಾಲಕನಾಗಿ ಈ ದೇಶ ಅವನನ್ನು ಗುರುತಿಸಿತ್ತು. ಮಕ್ಕಳಿಲ್ಲದ ಈ ದಂಪತಿ 2014ರಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದರು. ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ವಿವಿಧ ವೃದ್ಧಾಶ್ರಮಗಳಲ್ಲಿ ಆಯುಷ್ಯ ಕಳೆದರು. ಕಳೆದ ವಾರ ದೆಹಲಿಯ ವೃದ್ಧಾಶ್ರಮಕ್ಕೆ ಸೇರಿಕೊಂಡಿರುವುದನ್ನು ದಿ ಹಿಂದೂ ಪತ್ತೆ ಹಚ್ಚಿದ ಕೂಡಲೇ ರಾಜಕೀಯ ನಾಯಕರು ಚುರುಕಾದರು. ಕೇಜ್ರಿವಾಲ್‍ರು ಈ ದಂಪತಿಗಳಿಗೆ ಸಕಲ ನೆರವನ್ನೂ ನೀಡುವ ಭರವಸೆ ನೀಡಿದರು. ನರೇಂದ್ರ ಮೋದಿಯವರಂತೂ ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಕಾನೂಭಾಯಿಯವರೊಂದಿಗೆ ಮೊಬೈಲ್‍ನಲ್ಲಿ ಗುಜರಾತಿ ಭಾಷೆಯಲ್ಲಿ ಮಾತಾಡಿದರು. ಹಾಗಂತ, ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ಆಶ್ರಮದಲ್ಲಿರುವಾಗ ಮಾತಾಡದ ನರೇಂದ್ರ ಮೋದಿಯವರಲ್ಲಿ ಈಗೇಕೆ ದಿಢೀರ್ ಆಗಿ ಪ್ರೇಮ ಉಕ್ಕಿತು ಎಂಬ ಪ್ರಶ್ನೆ ಸಹಜವಾದರೂ ಸದ್ಯಕ್ಕೆ ಈ ಪ್ರಶ್ನೆಯನ್ನು ಪಕ್ಕಕ್ಕಿಟ್ಟು, ಒಟ್ಟು ಬೆಳವಣಿಗೆಯನ್ನು ನೋಡಿದರೆ ಖುಷಿಯಾಗುತ್ತದೆ. ನರೇಂದ್ರ ಮೋದಿಯವರು ತನ್ನ ತಾಯಿಯನ್ನು ಸುತ್ತಾಡಿಸುವ ಪೋಟೋ ಮತ್ತು ಕಾನೂಭಾಯಿ ಮೊಬೈಲ್‍ನಲ್ಲಿ ಮಾತಾಡುವ ಪೋಟೋ ಎರಡೂ ಒಂದೇ ದಿನ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವುದರ ಹಿಂದೆ ರಾಜಕೀಯ ತಂತ್ರ ಇರಬಹುದಾದರೂ ಮೋದಿಯವರ ಪೋಟೋ ಅದರಾಚೆಗೂ ನಮ್ಮನ್ನು ಕೊಂಡೊಯ್ಯುತ್ತದೆ. ಓರ್ವ ವಿಧೇಯ ಮತ್ತು ಅತ್ಯಂತ ಪ್ರೇಮಮಯಿ ಮಗನಾಗಿ ಮೋದಿ ಥಟ್ಟನೆ ನಮ್ಮೊಳಗನ್ನು ಕಾಡುತ್ತಾರೆ. ಮೋದಿಯವರ ಬಗ್ಗೆ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇರಲಿ ಅದು ಅವರ ಒಳ್ಳೆಯ ಗುಣವನ್ನು ಟೀಕಿಸುವುದಕ್ಕೆ ಕಾರಣವಾಗಬೇಕಾದ ಅಗತ್ಯವಿಲ್ಲ.
  ಈ ದೇಶದಲ್ಲಿ ಹಿರಿಯರ ಬಗ್ಗೆ ಆಧುನಿಕ ತಲೆಮಾರಿನ ಆಲೋಚನೆಗಳು ಏನು ಮತ್ತು ಅವು ಎಷ್ಟು ಕಳವಳಕಾರಿ ಎಂಬುದು ಆಗಾಗ ಈ ದೇಶಕ್ಕೆ ಪರಿಚಯವಾಗುತ್ತಲೇ ಇದೆ. ಕಾನೂಭಾಯಿ ದಂಪತಿ ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೆ. ಅಷ್ಟಕ್ಕೂ, ಈ ದಂಪತಿಗೆ ಮಕ್ಕಳಿರಲಿಲ್ಲ ಎಂಬುದು ಅವರು ವೃದ್ಧಾಶ್ರಮ ಸೇರಿಕೊಂಡಿರುವುದಕ್ಕೆ ಸಮರ್ಥನೆ ಆಗುವುದಿಲ್ಲ. ವೃದ್ಧರನ್ನು ಸಾಕಬೇಕಾದ ಹೊಣೆಗಾರಿಕೆ ಯಾರದು, ಮಕ್ಕಳದ್ದು ಮಾತ್ರವೇ? ಮಕ್ಕಳೇ ಇಲ್ಲದಿದ್ದರೆ ಅವರನ್ನು ಸಾಕಬೇಕಾದದ್ದು ಯಾರು? ಅಂದಹಾಗೆ, ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ವೃದ್ಧಾಶ್ರಮಗಳನ್ನು ಕಟ್ಟಿಕೊಡಬಹುದು. ಅಲ್ಲಿ ಸವಲತ್ತುಗಳೂ ಇರಬಹುದು. ಆದರೆ ಇವು ವೃದ್ಧ ಜೀವಿಗಳನ್ನು ತೃಪ್ತಿಪಡಿಸಬಲ್ಲುದೇ? ಕಾನೂಭಾಯಿ ದಂಪತಿ ಸೇರಿಕೊಂಡಿರುವ ದೆಹಲಿಯ ಗುರುವಿಶ್ರಾಮ್ ಆಶ್ರಮವೇ ಇದಕ್ಕೆ ಸರಿಯಾದ ಉತ್ತರ. ಅಲ್ಲಿರುವ ಹೆಚ್ಚಿನವರು ಮಾನಸಿಕ ಸ್ಥಿಮಿತವನ್ನು ಕಳಕೊಂಡು ಬದುಕುತ್ತಿದ್ದಾರೆ. ಒಂದು ವೇಳೆ ಇದಕ್ಕಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆದರೆ, ಆ ವೃದ್ಧರ ಮಕ್ಕಳು ಅಥವಾ ಕುಟುಂಬಿಕರು ಮುಖ್ಯ ಅಪರಾಧಿಗಳಾಗಿ ಗುರುತಿಸಿಕೊಂಡಾರು.
   ನಿಜವಾಗಿ, ಹೆತ್ತವರು ತಮ್ಮ ಮಗುವಿನ ಸೇವೆಯನ್ನು ಗರ್ಭಧರಿಸಿದಂದಿನಿಂದಲೇ ಪ್ರಾರಂಭಿಸುತ್ತಾರೆ. ಪ್ರಸವಾನಂತರದ ಎರಡು ತಿಂಗಳ ಕಾಲ ಓರ್ವ ತಾಯಿ ಪಡುವ ಪಾಡು ಮತ್ತು ತನ್ನ ಮಗುವಿಗಾಗಿ ವಹಿಸುವ ಎಚ್ಚರಿಕೆಗಳು ಅನನ್ಯವಾದುದು. ಮಗುವಿನ ಅಳುವಿನಲ್ಲೇ  ಅದರ ಬೇಕು-ಬೇಡಗಳನ್ನು ತಿಳಿಯುವಷ್ಟು ತಾಯಿ ಚುರುಕಾಗುತ್ತಾಳೆ. ಮಗುವಿನೊಂದಿಗೆ ಮೌನದಲ್ಲಿ ಸಂಭಾಷಿಸುವಷ್ಟು ಹೃದಯ ಸಂಬಂಧವನ್ನು ಬೆಳೆಸುತ್ತಾಳೆ. ಮಗು ನಕ್ಕರೆ ಅದಕ್ಕೆ ವ್ಯಾಖ್ಯಾನ ಕೊಡುವುದು ತಾಯಿ. ಮಗು ಅತ್ತರೂ ತಾಯಿಯಲ್ಲೇ  ಉತ್ತರವಿರುತ್ತದೆ. ಮಗು ಕೆಮ್ಮಿದರೆ, ಹಠ ಹಿಡಿದರೆ, ಕಂಕುಳಲ್ಲೋ  ಕೆನ್ನೆ, ಕತ್ತಿನಲ್ಲೋ  ದದ್ದುಗಳು ಕಾಣಿಸಿಕೊಂಡರೆ, ವಾಂತಿ ಮಾಡಿದರೆ ಎಲ್ಲದಕ್ಕೂ ತಾಯಿಯಲ್ಲಿ ವಿವರಣೆಗಳಿರುತ್ತವೆ. ಇದು ಹೇಗೆ ಸಾಧ್ಯ ಎಂದರೆ, ತಾಯಿಗೆ ಮಗುವಿನೊಂದಿಗಿರುವ ಅಂತಃಕರಣದ ಸಂಬಂಧ. ಅಲ್ಲಿ ತಾಯಿ ಮತ್ತು ಮಗು ಬೇರೆ ಬೇರೆ ಆಗಿರುವುದಿಲ್ಲ. ಜೀವ ಎರಡಾದರೂ ದೇಹ ಒಂದೇ ಎಂಬಷ್ಟು ಆತ್ಮೀಯತೆ ಅಲ್ಲಿರುತ್ತದೆ. ಇಂಥ ಭಾವನಾತ್ಮಕ ಸಂಬಂಧದೊಂದಿಗೆ ಬೆಳೆವ ಮಗು ಮುಂದೆ ಎಷ್ಟೇ ದೊಡ್ಡದಾಗಲಿ ಮತ್ತು ಯಾವ ಹುದ್ದೆಯನ್ನೇ ಏರಲಿ, ತಂದೆ ಮತ್ತು ತಾಯಿಗೆ ಅದು ಮಗುವೇ. ದೂರದಲ್ಲೆಲ್ಲೋ ಇರುವ ಮಗು ಕರೆ ಮಾಡಿದರೆ ತಾಯಿ ಮತ್ತು ತಂದೆ ಮೊದಲು ವಿಚಾರಿಸುವುದು ಮಗುವಿನ ಆರೋಗ್ಯವನ್ನು. ಮೊಮ್ಮಕ್ಕಳನ್ನು. ಯಾಕೆಂದರೆ ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧ ಗಣಿತ ಪುಸ್ತಕದಂತೆ ಅಲ್ಲ. ಅದು ವ್ಯಾವಹಾರಿಕತೆಯಿಂದ ಹೊರತಾದುದು. ಅಲ್ಲಿ ಪರಸ್ಪರ ಸಹಕಾರ, ಸೇವೆ, ನಗು, ಹರಟೆಗಳಿರುತ್ತವೆ. ಹೆತ್ತವರು ತಮ್ಮ ವೃದ್ಧಾಪ್ಯದಲ್ಲಿ ಇವನ್ನು ಅನುಭವಿಸಿ, ಆನಂದಿಸಿಕೊಂಡು ಬದುಕುತ್ತಿರುತ್ತಾರೆ. ಒಂದು ವೇಳೆ, ನಾವು ಅವರನ್ನು ವೃದ್ಧಾಪ್ಯದ ಕಾರಣಕ್ಕಾಗಿ ಈ ವಾತಾವರಣದಿಂದ ಹೊರದಬ್ಬಿದರೆ ವೃದ್ಧಾಶ್ರಮಗಳೇನೋ ಆಶ್ರಯ ಕೊಟ್ಟಾವು. ಆದರೆ ಅವು ಮಾನಸಿಕ ನೆಮ್ಮದಿಯನ್ನು ಎಂದೂ ಕೊಡಲಾರವು. ಆದ್ದರಿಂದಲೇ, ವೃದ್ಧಾಶ್ರಮಗಳು ಮತ್ತು ಅದರಲ್ಲಿರುವ ಹಿರಿಯ ಜೀವಗಳ ಬಗ್ಗೆ ಸಮಾಜ ತೆರೆದ ಮನಸ್ಸಿನಿಂದ ಆಲೋಚಿಸಬೇಕು. ವೃದ್ಧಾಶ್ರಮಗಳಿಗೆ ವೃದ್ಧರ ಸೇರ್ಪಡೆ ಹೆಚ್ಚಾಗುತ್ತಿರುವುದರಲ್ಲಿ ಮಕ್ಕಳ ಪಾತ್ರ ಏನು? ಮಕ್ಕಳಿಲ್ಲದ ವೃದ್ಧರನ್ನು ಸಾಕಬೇಕಾದ ಹೊಣೆಗಾರಿಕೆ ಯಾರದು? ಕುಟುಂಬಿಕರ ಹೊಣೆಗಾರಿಕೆಗಳು ಏನೇನು? ಪವಿತ್ರ ಕುರ್‍ಆನ್ ವೃದ್ಧ ಹೆತ್ತವರನ್ನು ನಿರ್ಲಕ್ಷಿಸುವುದರ ವಿರುದ್ಧ ಅತ್ಯಂತ ಕಟು ಭಾಷೆಯಲ್ಲಿ ಮಾತಾಡಿದೆ. ಅವರ ವಿರುದ್ಧ ‘ಛೇ’ ಎಂಬ ಪದ ಬಳಸುವುದು ಕೂಡಾ ಅತ್ಯಂತ ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ. ಹೆತ್ತವರ ಕೋಪಕ್ಕೆ ತುತ್ತಾದ ಮಗ ಎಷ್ಟೇ ಧರ್ಮಬೀರುವಾಗಿದ್ದರೂ ಸ್ವರ್ಗ ಪ್ರವೇಶಿಸಲಾರ ಎಂದು ಎಚ್ಚರಿಸಿದೆ. ‘ಶಿಶುಪ್ರಾಯದಲ್ಲಿ ನನ್ನ ಮೇಲೆ ಅವರು ಕರುಣೆ ತೋರಿದಂತೆ ವೃದ್ಧಾಪ್ಯದಲ್ಲಿರುವ ಅವರ ಮೇಲೆ ನೀನು ಕರುಣೆ ತೋರು..’ ಎಂದು ದೇವನಲ್ಲಿ ಪ್ರಾರ್ಥಿಸಬೇಕೆಂದು ಮಕ್ಕಳಿಗೆ ಆಜ್ಞಾಪಿಸಿದೆ.   
ಕಾನೂಭಾಯಿ ಗಾಂಧಿ

          ಮನುಷ್ಯ ಸಂಬಂಧ ಎಂಬುದು ಅತ್ಯಂತ ಪವಿತ್ರವಾದುದು. ಆರೋಗ್ಯ ಉತ್ತಮವಾಗಿರುವಾಗ ಸಂಬಂಧ ಚೆನ್ನಾಗಿರುವುದು ಮತ್ತು ಆರೋಗ್ಯ ಕೈ ಕೊಟ್ಟಾಗ ಸಂಬಂಧ ಹದಗೆಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಮಕ್ಕಳು ಮತ್ತು ಹೆತ್ತವರ ನಡುವೆಯಂತೂ ಇಂಥ ಸಂಬಂಧ ಹೀನವಾದುದು. ಹೆತ್ತವರು ನಮ್ಮೆಲ್ಲ ಭೌತಿಕ ಲೆಕ್ಕಾಚಾರಗಳಿಗಿಂತ ಮಿಗಿಲಾದವರು. ಅವರನ್ನು ಹೊರೆ ಎಂದು ಭಾವಿಸುವ ಮಕ್ಕಳು ಮನುಷ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕೆ ಅರ್ಹರೇ ಅಲ್ಲ. ಈ ಎಲ್ಲ ಕಾರಣಗಳಿಂದಲೇ ನರೇಂದ್ರ ಮೋದಿಯವರ ಆ ತಾಯಿ ಪ್ರೇಮ ಇಷ್ಟವಾಗುತ್ತದೆ. ತಾಯಿಯನ್ನು ಗಾಲಿ ಕುರ್ಚಿಯಲ್ಲಿ ತಳ್ಳುತ್ತಾ ಹೋಗುವ ಓರ್ವ ವಿನೀತ ಮಗನಾಗಿ ಮೋದಿ ಈ ದೇಶದ ಸರ್ವ ಮಕ್ಕಳಿಗೂ ಮಾದರಿಯಾಗಲಿ. ವೃದ್ಧ ಹೆತ್ತವರನ್ನು ಪ್ರೀತಿಸುವುದಕ್ಕೆ ಆ ಪೋಟೋ ಎಲ್ಲ ಮಕ್ಕಳಿಗೂ ಪ್ರೇರಕವಾಗಲಿ.

Thursday, 12 May 2016

ಬೀಡಿಗೆ ಬೆಂಕಿ ಕೊಟ್ಟು ಚಳಿ ಕಾಯಿಸುವ ಬುದ್ಧಿವಂತರು..

        ಕಳೆದ ಒಂದೂವರೆ ತಿಂಗಳಿನಿಂದ ಈ ದೇಶದಲ್ಲಿ ಮುಷ್ಕರವೊಂದು ನಡೆಯುತ್ತಿದೆ. ಈ ಮುಷ್ಕರವನ್ನು ಘೋಷಿಸಿರುವುದು ತಂಬಾಕು ಉದ್ಯಮ ಮತ್ತು ಇದರ ನೇರ ಅಡ್ಡಪರಿಣಾಮಕ್ಕೆ ಒಳಗಾಗಿರುವುದು ಈ ದೇಶದ ಕೋಟ್ಯಂತರ ಬಡಪಾಯಿಗಳು. ಕಳೆದ ಒಂದೂವರೆ ತಿಂಗಳಿನಿಂದ ಬೀಡಿ ಉದ್ಯಮ ಮೌನವಾಗಿದೆ. ಬೀಡಿಯನ್ನು `ಅನ್ನ'ವಾಗಿ ನೆಚ್ಚಿಕೊಂಡವರು ಕೋಟ್ಯಂತರ ಮಂದಿಯಿದ್ದಾರೆ. ಇವರಲ್ಲಿ 99% ಮಂದಿಯೂ ತೀರಾ ತೀರಾ ಬಡವರು. ಮೂರು ಹೊತ್ತು ಹೊಟ್ಟೆ ತುಂಬಾ ಉಣ್ಣುವ ನಿರೀಕ್ಷೆ ಇಲ್ಲದವರು. ಬಡತನ ರೇಖೆಗಿಂತ ಕೆಳಗೆ ಜೀವಿಸುವವರು. ಆದ್ದರಿಂದಲೇ, ಬೀಡಿಯ ಮೇಲೆ `ನಿಧಾನ ಕೊಲೆಗಾರ' ಎಂಬ ಆರೋಪ ಪಟ್ಟಿಯನ್ನು ಹೊರಿಸಿ ಈ ಬಡಪಾಯಿಗಳನ್ನು ಕೊಲೆಗಾರರಂತೆಯೋ, ಅಪರಾಧಿಗಳಂತೆಯೋ ಪರಿಗಣಿಸುವುದು ಮತ್ತು ನಿರ್ಲಕ್ಷಿಸುವುದು ಕ್ರೂರವಾಗುತ್ತದೆ. ಬೀಡಿ ಉದ್ಯಮ ನಾಳೆ ಮುಷ್ಕರವನ್ನು ಹಿಂತೆಗೆದುಕೊಳ್ಳಬಹುದು. ಮಾತ್ರವಲ್ಲ ಮರುದಿನ ತನಗಾದ ನಷ್ಟವನ್ನು ಕೋಟಿಗಳಲ್ಲಿ ಮುಂದಿಡಬಹುದು. ಆದರೆ, ಈ ಬಡಪಾಯಿಗಳಿಗೆ ಕೋಟಿಗೆಷ್ಟು ಸೊನ್ನೆ ಎಂಬುದೇ ಬಹುತೇಕ ಗೊತ್ತಿರುವುದಿಲ್ಲ. ಅವರು ಪೈಸೆಗಳಲ್ಲಷ್ಟೇ ನಷ್ಟದ ವಿವರವನ್ನು ಕೊಡಬಹುದು. ಪೈಸೆಗಳು ಇವತ್ತಿನ ದಿನಗಳಲ್ಲಿ ತೀರಾ ಜುಜುಬಿಯಾಗಿರುವುದರಿಂದ ರಾಜಕಾರಣಿಗಳಾಗಲಿ ಮಾಧ್ಯಮಗಳಾಗಲಿ ಈ ವಿವರಗಳನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ತೀರಾ ಕಡಿಮೆ. ಹೀಗೆ ಕೋಟ್ಯಂತರ ಮಂದಿಯ ವಿಷಾದ ಗೀತೆ ಯಾರಿಗೂ ಕೇಳಿಸದೇ ಸತ್ತು ಹೋಗಬಹುದು.
  ಕೇಂದ್ರ ಸರಕಾರದ ಹೊಸ ಕಾನೂನನ್ನು ಖಂಡಿಸಿ ತುಂಬಾಕು ಉದ್ಯಮ ಮುಷ್ಕರಕ್ಕೆ ನಿಂತಿವೆ. ಬೀಡಿ ಮತ್ತು ಸಿಗರೇಟು ಪ್ಯಾಕುಗಳ ಶೇ. 85ರಷ್ಟು ಭಾಗದಲ್ಲಿ ಸರಕಾರಿ ಜಾಹೀರಾತನ್ನು ಮುದ್ರಿಸಬೇಕೆಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ‘ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬುದೇ ಈ ಜಾಹೀರಾತಿನ ಮರ್ಮ. ಆದರೆ ಇಷ್ಟು ದೊಡ್ಡ ಜಾಹೀರಾತನ್ನು ಪ್ರಕಟಿಸುವುದು ಅಸಾಧ್ಯ ಎಂದು ಬೀಡಿ ಮತ್ತು ಸಿಗರೇಟು ಉದ್ಯಮ ವಾದಿಸುತ್ತಿದೆ. ಬೀಡಿ ಪ್ಯಾಕೇಟ್‍ಗಳ ಮೇಲೆ ಕಂಪೆನಿಯ ಹೆಸರು, ಬೆಲೆ ಮತ್ತಿತರ ವಿಷಯಗಳನ್ನು ಮುದ್ರಿಸಬೇಕಾಗುತ್ತದೆ. ಬಾಳಿಕೆಯ ದಿನಾಂಕವನ್ನು ಬರೆಯಬೇಕಾಗುತ್ತದೆ. ಇವಕ್ಕೆಲ್ಲ 15% ಜಾಗ ಸಾಕಾಗದು ಎಂಬುದು ಅವುಗಳ ವಾದ. ಈ ವಾದ ಮತ್ತು ಪ್ರತಿವಾದಗಳ ನೇರ ಆಘಾತಕ್ಕೆ ಇವತ್ತು ಬೀಡಿ ಎಲೆ ಕೃಷಿಕರು ಮತ್ತು ಬೀಡಿ ಕಾರ್ಮಿಕರು ತುತ್ತಾಗಿದ್ದಾರೆ. ಹಾಗಂತ, ನಾವು ಈ ಇಡೀ ಬೆಳವಣಿಗೆಯ ವೀಕ್ಷಕರಾಗಿಯೇ ಉಳಿಯಬೇಕಿಲ್ಲ. ಈಗಾಗಲೇ ಬೀಡಿ-ಸಿಗರೇಟು ಪ್ಯಾಕ್‍ಗಳಲ್ಲಿ ಚಿಕ್ಕದಾಗಿ ಈ ಜಾಹೀರಾತು ಪ್ರಕಟವಾಗುತ್ತಿದೆ. ಹೀಗಿರುವಾಗ ಈ ಜಾಹೀರಾತಿನ ಗಾತ್ರವನ್ನು ದೊಡ್ಡದಾಗಿಸಿ ಎಂದು ಸರಕಾರ ಕೇಳಿಕೊಳ್ಳುವುದು ಕಂಪೆನಿಗಳ ಪಾಲಿಗೆ ಅಚ್ಚರಿಯ ವಿಷಯವಾಗುತ್ತದೆ ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದಲೇ, ಈ ಮುಷ್ಕರವನ್ನು ಬರೇ ಜಾಹೀರಾತು ಪ್ರಕರಣವಾಗಿ ಮಾತ್ರ ಕಾಣುವುದು ಅವಸರದ ತೀರ್ಮಾನವಾಗಿ ಬಿಡುವ ಅಪಾಯವೂ ಇದೆ. ಈ ಮುಷ್ಕರದ ಹಿಂದೆ ಕಂಪೆನಿಗಳದ್ದೇ ಆದ ಇತರ ಒಳ ಉದ್ದೇಶಗಳೂ ಇರಬಹುದು. ಬೀಡಿ ಕಾರ್ಮಿಕರನ್ನು ಸತಾಯಿಸುವ ಮೂಲಕ ಅವರು ಮುಂದೆ ಬೆಲೆ ಏರಿಕೆ, ಭತ್ಯೆಗಳಿಗೆ ಒತ್ತಾಯಿಸದಂತೆ  ಬೆದರಿಸುವ  ತಂತ್ರಗಳೂ ಇರಬಹುದು. ಆದರೆ ಇಲ್ಲಿ ಇನ್ನೊಂದು ಬಹುಮುಖ್ಯ ಪ್ರಶ್ನೆಯಿದೆ. 85% ಭಾಗದಲ್ಲಿ ತಂಬಾಕು ವಿರೋಧಿ ಜಾಹೀರಾತನ್ನು ಮುದ್ರಿಸುವುದರಿಂದ ಪ್ರಯೋಜನವಾಗಬಹುದೇ? ಇದು ತಂಬಾಕು ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾದೀತೇ? ಅಷ್ಟಕ್ಕೂ, 'ಮದ್ಯಪಾನ ಆರೋಗ್ಯಕ್ಕೆ ಹಾನಿಕರ..'  ಎಂಬ ಸಾಧು ಜಾಹೀರಾತಿನಿಂದ ಹಿಡಿದು ‘ಮದ್ಯ ಕುಟುಂಬವನ್ನೇ ನಾಶಪಡಿಸುತ್ತದೆ..’ ಎಂಬ ಭಯಭರಿತ ಜಾಹೀರಾತಿನ ವರೆಗೆ ಎಷ್ಟೆಲ್ಲ ಮದ್ಯವಿರೋಧಿ ಜಾಹೀರಾತುಗಳು ಈ ದೇಶದಲ್ಲಿಲ್ಲ? ಮದ್ಯದ ಬಾಟಲಿಗಳಲ್ಲಿ ಕಡ್ಡಾಯವಾಗಿ ಮದ್ಯವಿರೋಧಿ ಜಾಹೀರಾತನ್ನು ಮುದ್ರಿಸಿಯೂ ಅವುಗಳ ಖರೀದಿಯಲ್ಲಿ ಇಳಿಕೆ ಆಗುತ್ತಿದೆಯೇ? ಬೀಡಿ ಸೇದುವ ಯಾವ ಗ್ರಾಹಕ ಅದರ ಪ್ಯಾಕೆಟನ್ನು ಗಮನಿಸುತ್ತಾನೆ? ಪ್ಯಾಕೆಟ್‍ನಲ್ಲಿ ಏನಿದೆ ಎಂದು ನೋಡಿ, ಅದರ ಆಧಾರದಲ್ಲಿ ಸೇದುವ ಅಥವಾ ಸೇದದೇ ಇರುವ ಬುದ್ಧಿವಂತ ಗ್ರಾಹಕರು ಮದ್ಯ ಮತ್ತು ತಂಬಾಕು ಉತ್ಪನ್ನಗಳಿಗದ್ದಾರೆಯೇ?
  ತಮಾಷೆ ಏನೆಂದರೆ, ಮದ್ಯ ಅಥವಾ ತಂಬಾಕು ಉತ್ಪನ್ನಗಳು ಮನುಷ್ಯ ಸೇವನೆಗೆ ಅಪಾಯಕಾರಿ ಎಂದು ಹೇಳುವುದು ಸರಕಾರವೇ. ಹಾಗಂತ, ಅದನ್ನು ಆರೋಗ್ಯವಂತ ಮನುಷ್ಯರಿಗೆ ಹಂಚುವುದೂ ಸರಕಾರವೇ. ಇದು ದ್ವಂದ್ವವೋ ಮುಠ್ಠಾಳತನವೋ? ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬ ಮಾತಿಗೆ ಅನ್ವರ್ಥವೆಂಬಂತೆ ನಡಕೊಳ್ಳುತ್ತಿರುವ ಈ ವ್ಯವಸ್ಥೆಯನ್ನು ಪ್ರಶ್ನಿಸದೆಯೇ, ಬರೇ ಬೀಡಿಯನ್ನೋ ಮದ್ಯವನ್ನೋ ದೂಷಿಸುವುದು ತರ್ಕರಹಿತವೆನಿಸುತ್ತದೆ. ಮದ್ಯದ ಬಾಟಲಿಗಳ ಮೇಲೋ ಬೀಡಿ-ಸಿಗರೇಟ್ ಪ್ಯಾಕೆಟ್‍ಗಳ ಮೇಲೋ ಸರಕಾರಿ ಜಾಹೀರಾತು ಪ್ರಕಟಿಸುವುದರಿಂದ ಗ್ರಾಹಕರ ಮೇಲೆ ಭಾರೀ ಪ್ರಮಾಣದ ಜಾಗೃತಿ ಉಂಟಾಗಬಹುದು ಎಂದು ತಂಬಾಕು ಕಂಪೆನಿಗಳು ಬಿಡಿ ಸ್ವತಃ ಸರಕಾರವೇ ಭಾವಿಸಿರುವುದಕ್ಕೆ ಸಾಧ್ಯವಿಲ್ಲ. ಮದ್ಯ ಮತ್ತು ತಂಬಾಕು ಪದಾರ್ಥಗಳೆಲ್ಲ ಊಟ, ಪರೋಟ, ಚಪಾತಿಗಳಂತೆ ಹೊಟ್ಟೆ ತುಂಬಿಸುವವುಗಳಲ್ಲ ಎಂಬುದು ಅದರ ತಯಾರಕರಿಗೆ ಚೆನ್ನಾಗಿ ಗೊತ್ತು. ಅದೊಂದು ಬಗೆಯ ಅಮಲು. ಅಮಲು ಎಂಬುದು ಜಾಹೀರಾತಿಗೆ ಬೆದರುವಷ್ಟು ಪುಕ್ಕಲು ಅಲ್ಲ. ಒಂದು ವೇಳೆ ಈ ಅಮಲು  ಚಟವಾಗಿ ಮಾರ್ಪಟ್ಟರೆ ಬಳಿಕ ಇಡೀ ಮದ್ಯದ ಬಾಟಲಿಯಲ್ಲಿ ಅಥವಾ ತಂಬಾಕು ಉತ್ಪನ್ನಗಳ ಪ್ಯಾಕೆಟ್‍ನಲ್ಲಿ ಮಾನವ ಅಸ್ಥಿಪಂಜರದ ಪೋಟೋ ಹಾಕಿದರೂ ಅದು ಗ್ರಾಹಕರ ಮೇಲೆ ಪರಿಣಾಮ ಬೀರುವುದಕ್ಕೆ ಸಾಧ್ಯವೂ ಇಲ್ಲ. ತಂಬಾಕು ಉತ್ಪನ್ನಗಳ ಗ್ರಾಹಕರು ಮಸಾಲೆದೋಸೆ ಗ್ರಾಹಕರಂತೆ ಅಲ್ಲವಲ್ಲ. ಬೆಲೆಗೆ ಬೆದರದಷ್ಟು ಅವರು ಅದರ ಅಪ್ಪಟ ಆರಾಧಕರಾಗಿರುತ್ತಾರೆ. ಪ್ಯಾಕೆಟ್‍ನಲ್ಲಿ ನೀವು ಏನೇ ಮುದ್ರಿಸಿ ಅದಕ್ಕೆ ಕುರುಡಾಗುವಷ್ಟು ಗುಂಡಿಗೆಯನ್ನು ಅವರು ಗಟ್ಟಿ ಮಾಡಿಕೊಂಡಿರುತ್ತಾರೆ. ಆದ್ದರಿಂದಲೇ, ಈ 85% ಜಾಹೀರಾತು ಎಂಬ ಕಾನೂನಿನ ಉದ್ದೇಶಶುದ್ಧಿಯೇ ಅನುಮಾನಕ್ಕೊಳಗಾಗುವುದು. ಸರಕಾರ ಈ ವಿಷಯದಲ್ಲಿ ಪ್ರಾಮಾಣಿಕವಾಗಿದೆಯೇ ಅಥವಾ ಅಂತಾರಾಷ್ಟ್ರೀಯ ಒತ್ತಡಗಳನ್ನು ನಿಭಾಯಿಸುವುದಕ್ಕಾಗಿ ಹೀಗೆ ಆದೇಶ ಹೊರಡಿಸಿದೆಯೇ ಅಥವಾ ಇದು ಸರಕಾರ ಮತ್ತು ತಂಬಾಕು ಕಂಪೆನಿಗಳು ಜೊತೆಯಾಗಿಯೇ ಹೆಣೆದ ತಂತ್ರವೇ? ಸರಕಾರಕ್ಕೆ ತಂಬಾಕು ಕಂಪೆನಿಗಳೇ ಇಂಥದ್ದೊಂದು ಜಾಹೀರಾತು ಐಡಿಯಾವನ್ನು ಕೊಟ್ಟಿರಬಹುದೇ? ತಂಬಾಕು ಸಂಬಂಧಿ ರೋಗಗಳನ್ನು ತಡೆಗಟ್ಟುವುದಕ್ಕೆ ಸರಕಾರ ಗರಿಷ್ಠ ಕ್ರಮ ಕೈಗೊಂಡಿದೆ ಎಂದು ಜನರೆದುರು ವಾದಿಸುವುದಕ್ಕೆ ಪುರಾವೆಯಾಗಿ ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆಯೇ? ಈ ಮೂಲಕ ತಂಬಾಕು ಪದಾರ್ಥಗಳನ್ನು  ನಿಷೇಧಿಸುವಂತೆ ಆಗ್ರಹಿಸಿ ಜನರು ಬೀದಿಗಿಳಿಯದಂತೆ ತಡೆಯುವ ಮತ್ತು ಈ ಜಾಹೀರಾತನ್ನು ತೋರಿಸಿ ಅವರನ್ನು ಮಣಿಸುವ ತಂತ್ರ ಇದರ ಹಿಂದಿರಬಹುದೇ?
  ನಿಜವಾಗಿ, ಒಂದು ವ್ಯವಸ್ಥೆಗೆ ಜನರ ಆರೋಗ್ಯದ ಮೇಲೆ ಪ್ರಾಮಾಣಿಕ ಕಾಳಜಿ ಇದೆಯೆಂದಾದರೆ, ಮೊತ್ತಮೊದಲು
ಅನಾರೋಗ್ಯಕ್ಕೆ ಕಾರಣವಾಗುವ ವಸ್ತುಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿರುತ್ತದೆ. ಮದ್ಯವಾಗಲಿ, ತಂಬಾಕು ಉತ್ಪನ್ನಗಳಾಗಲಿ ಎಲ್ಲವೂ ಈ ವ್ಯಾಪ್ತಿಗೆ ಒಳಪಡುವ ವಸ್ತುಗಳು. ಆದರೆ ಸರಕಾರ ಇವುಗಳನ್ನು ಎಷ್ಟು ಮುದ್ದಿನಿಂದ ಸಾಕುತ್ತಿದೆಯೆಂದರೆ, ಅದು ಹೊರಡಿಸುವ ಸಕಲ ಆದೇಶಗಳೂ ಈ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಒದಗಿಸುವಂತಿರುತ್ತದೆ. ಈ ಸರಕಾರಿ ಜಾಹೀರಾತೂ ಅದರಿಂದ ಹೊರತಲ್ಲ. ಬಾಹ್ಯನೋಟಕ್ಕೆ ಇದು ಸಕಾರಾತ್ಮಕವಾಗಿ ಕಂಡರೂ ಆಂತರಿಕವಾಗಿ ಅದರಲ್ಲಿ ಸ್ವರಕ್ಷಣೆಯ ನಕಾರಾತ್ಮಕತೆಯೇ ತುಂಬಿದೆ. ಗ್ರಾಹಕರ ಮೇಲೆ ಇಂಥ ಜಾಹೀರಾತುಗಳು ಯಾವ ಪರಿಣಾಮವನ್ನೂ ಬೀರಲಾರದು ಎಂಬುದು ಸ್ವತಃ ಸರಕಾರಕ್ಕೂ ಗೊತ್ತಿದೆ. ಕಂಪೆನಿಗಳಿಗೂ ಗೊತ್ತಿದೆ. ಒಂದು ರೀತಿಯಲ್ಲಿ, ಇದು ಜನಮರುಳು ಜಾಹೀರಾತು. ಸರಕಾರ ಮತ್ತು ತಂಬಾಕು ಉದ್ಯಮ ಜೊತೆ ಸೇರಿ ಆಡುವ ಚದುರಂಗದಾಟ. ಈ ಆಟದಲ್ಲಿ ಸರಕಾರ ಮತ್ತು ಕಂಪೆನಿಗಳು ಸದಾ ಗೆಲ್ಲುತ್ತಿರುತ್ತವೆ. ಬಡಪಾಯಿ ಕಾರ್ಮಿಕರು ಮತ್ತು ಗ್ರಾಹಕರು ಆರೋಗ್ಯ ಕೆಡಿಸಿಕೊಂಡು ಸಾಯುತ್ತಿರುತ್ತಾರೆ.

Thursday, 5 May 2016

.ಉಳ್ಳಾಲ: ಚೂರಿಗೆ ಅಂಟಿರುವ ಅಮಲು ಯಾವುದು?

        1. ಮೇಸ್ತ್ರಿ, ಕೂಲಿ ಕಾರ್ಮಿಕ, ಕೋಳಿ ಸಾಗಾಟದ ವಾಹನದಲ್ಲಿ ಚಾಲಕ, ಕೋಳಿ ಅಂಗಡಿಯಲ್ಲಿ ನೌಕರ, ಪೈಂಟರ್..
  2. ಪ್ಲಂಬರ್, ಪೈಂಟರ್, ಪಿಯು ವ್ಯಾಸಂಗ, ಡಿಪ್ಲೋಮಾ ವ್ಯಾಸಂಗ..
  ಇವೇನೂ ಉದ್ಯೋಗ ವಾರ್ತೆಯಲ್ಲ ಅಥವಾ ವಿದೇಶಗಳಲ್ಲಿ ಖಾಲಿಯಿರುವ ಹುದ್ದೆಗಳ ವಿವರ ಪಟ್ಟಿಯೂ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಉಳ್ಳಾಲದ ಆಸುಪಾಸಿನಲ್ಲಿ ಇಬ್ಬರು ಅಮಾಯಕರನ್ನು ಇರಿದು ಕೊಲೆಗೈದ ಆರೋಪಿಗಳ ಉದ್ಯೋಗಗಳಿವು. ಸಂಖ್ಯೆ 1ರಲ್ಲಿ ಮುಸ್ಲಿಮ್ ನಾಮಧಾರಿ ಆರೋಪಿಗಳ ವೃತ್ತಿ ವಿವರಣೆಯನ್ನು ನೀಡಲಾಗಿದ್ದರೆ ಸಂಖ್ಯೆ 2ರಲ್ಲಿ ಹಿಂದೂ ನಾಮಧಾರಿ ಆರೋಪಿಗಳ ವೃತ್ತಿ ವಿವರಗಳನ್ನು ನೀಡಲಾಗಿದೆ. ವಿಶೇಷ ಏನೆಂದರೆ, ಆರೋಪಿಗಳು ತಮ್ಮ ಹೆಸರುಗಳನ್ನು ಹಿಂದೂ ಮತ್ತು ಇಸ್ಲಾಮ್ ಧರ್ಮದಲ್ಲಿ ನೋಂದಾಯಿಸಿಕೊಂಡಿದ್ದರೂ ಅವರು ಮಾಡುತ್ತಿರುವ ವೃತ್ತಿಗಳಲ್ಲಿ ಬಹುತೇಕ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರೂ ತೀರಾ ತಳಮಟ್ಟದ ಮತ್ತು ಶ್ರಮದಾಯಕ ವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಇಬ್ಬರಂತೂ ವಿದ್ಯಾರ್ಥಿಗಳು. ಈ ಬಡಪಾಯಿಗಳು ಈ ಇರಿಯುವ ಕ್ರೌರ್ಯದಲ್ಲಿ ತೊಡಗಿಸಿಕೊಂಡದ್ದೇಕೆ? ಸ್ವಇಚ್ಛೆಯಿಂದ ಅವರು ಇರಿದರೇ ಅಥವಾ ಅವರಿಂದ ಈ ಕ್ರೌರ್ಯವನ್ನು ಮಾಡಿಸಲಾಯಿತೇ? ಒಂದು ವೇಳೆ ಸ್ವಇಚ್ಛೆಯೇ ಈ ಪ್ರಾಣಹರಣಕ್ಕೆ ಕಾರಣ ಎಂದಾದರೆ, ಅಂಥದ್ದೊಂದು ಅನಾಹುತಕಾರಿ ಇಚ್ಛೆ ಅವರಲ್ಲಿ ಹುಟ್ಟಿಕೊಂಡದ್ದು ಹೇಗೆ? ಯಾಕೆ? ಸಾವನ್ನು ತನ್ನ ಧರ್ಮದವ ಮತ್ತು ಬೇರೆ ಧರ್ಮದವ ಎಂದು ವಿಂಗಡಿಸಿ ಅನುಭವಿಸಲು ಈ ಬಡಪಾಯಿಗಳನ್ನು ತಯಾರುಗೊಳಿಸಿದ್ದು ಯಾವುದು? ಮನೆಯೇ, ಪರಿಸರವೇ, ಧರ್ಮವೇ, ಕಲಿಕೆಯೇ, ಸಂಘಟನೆಗಳೇ? ಹಾಗಂತ, ಸ್ವಇಚ್ಛೆ ಅಲ್ಲ ಎಂಬುದು ಇದಕ್ಕೆ ಉತ್ತರವಾದರೂ ಪ್ರಶ್ನೆಗಳ ಪಟ್ಟಿಯೇನೂ ಪುಟ್ಟದಾಗುವುದಿಲ್ಲ. ಹಾಗಾದರೆ, ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಆ ಹೊರಗಿನ ವ್ಯಕ್ತಿಗಳು ಯಾರು, ಅವರ ಉದ್ದೇಶವೇನು, ಅವರು ಎಲ್ಲಿರುತ್ತಾರೆ, ಏನು ಮಾಡುತ್ತಾರೆ, ಇದರಿಂದ ಅವರಿಗಿರುವ ಲಾಭಗಳೇನು.. ಹೀಗೆ ಪ್ರಶ್ನೆಗಳ ಸರಮಾಲೆ ಎದುರುಗೊಳ್ಳುತ್ತದೆ. ಅಷ್ಟಕ್ಕೂ, ಹಿಂದೂವನ್ನು ಮುಸ್ಲಿಮ್ ಮತ್ತು ಮುಸ್ಲಿಮನನ್ನು ಹಿಂದೂ ಕೊಲ್ಲುವುದರಿಂದ ಆಯಾ ಧರ್ಮಗಳಿಗೆ ಯಾವ ಲಾಭವೂ ಇಲ್ಲ ಎಂಬುದು ಬುದ್ಧಿ ಸ್ವಸ್ಥ ಇರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಒಂದು ವೇಳೆ ಹಿಂದೂವನ್ನು ಹಿಂದೂ ಎಂಬ ಕಾರಣಕ್ಕಾಗಿ ಇರಿದು ಕೊಲ್ಲುವುದು ಮುಸ್ಲಿಮನ ಪಾಲಿಗೆ ಅತ್ಯಂತ ಪುಣ್ಯದಾಯಕ ಮತ್ತು ಸ್ವರ್ಗಕ್ಕೆ ಕೊಂಡೊಯ್ಯುವ ಕೆಲಸವೇ ಆಗಿರುತ್ತಿದ್ದರೆ, ಈ ಇರಿಯುವ ವೃತ್ತಿಯಲ್ಲಿ ಮುಂಚೂಣಿಯಲ್ಲಿರಬೇಕಾದುದು ಪ್ಲಂಬರ್‍ಗಳೋ, ಪೈಂಟರ್ ಗಳೋ, ಮೇಸ್ತ್ರಿಗಳೋ, ಕೋಳಿ ಸಾಗಾಟಗಾರರೋ ಆಗಿರಲಿಲ್ಲ. ಮುಸ್ಲಿಮ್ ವಿದ್ವಾಂಸರು, ಪಂಡಿತರು, ಮಸೀದಿಯ ಧರ್ಮಗುರುಗಳು ಮುಂತಾದವರೇ ಆಗಿರುತ್ತಿದ್ದರು. ಆದರೆ ಪ್ರತಿಬಾರಿಯೂ ಈ ನಿರೀಕ್ಷೆ ಸುಳ್ಳಾಗುತ್ತಿದೆ. ಸಮಾಜದ ತೀರಾ ತಳಮಟ್ಟದಲ್ಲಿ ಬದುಕುವ ಮತ್ತು ವೈಟ್ ಕಾಲರ್ ಉದ್ಯೋಗಿಯಲ್ಲದವರೇ ಈ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಎಪ್ರಿಲ್ 2ನೇ ವಾರದಲ್ಲಿ ಉಳ್ಳಾಲದಲ್ಲಿ ರಾಜು ಕೋಟ್ಯಾನ್ ಎಂಬವರ ಹತ್ಯೆ ನಡೆಯಿತು. ಇದರ ಆರೋಪದಲ್ಲಿ ಸಂಖ್ಯೆ 1ರಲ್ಲಿ ಸೂಚಿತ ವೃತ್ತಿಯಲ್ಲಿರುವ ಮುಸ್ಲಿಮ್ ನಾಮಧಾರಿಗಳನ್ನು ಬಂಧಿಸಲಾಯಿತು. ಇದಾಗಿ ಎರಡು ವಾರಗಳಲ್ಲಿ ನಾಲ್ಕೈದು ಮುಸ್ಲಿಮ್ ಯುವಕರು ಇರಿತಕ್ಕೊಳಗಾದರು. ಸೈಫಾನ್ ಎಂಬ ಯುವಕ ಸಾವಿಗೀಡಾದ. ನಿಜವಾಗಿ, ಸಾವಿಗೀಡಾದ ಸೈಫಾನ್ ಮತ್ತು ರಾಜುಗಾಗಲಿ, ಸೈಫಾನ್ ಗೆ ಇರಿದವರಿಗಾಗಲಿ ಅಥವಾ ಇರಿತಕ್ಕೊಳಗಾದವರಿಗಾಗಲಿ ಪರಸ್ಪರ ಪರಿಚಯವೋ ಸಂಬಂಧವೋ ದ್ವೇಷವೋ ಏನೇನೂ ಇರಲಿಲ್ಲ. ಹೀಗೆ ಕಾರಣವಿಲ್ಲದೇ ದ್ವೇಷಿಸುವ ಮತ್ತು ದ್ವೇಷವಿಲ್ಲದೇ ಇರಿಯುವ ಈ ಮನಸ್ಥಿತಿಗೆ 'ದರ್ಮ ಕಾರಣ' ಎಂದು ಹೇಳಬಹುದೇ? ಹಾಗೆ ಹೇಳುವುದು ನಿಜಕ್ಕೂ ನ್ಯಾಯಬದ್ಧವೇ? ಹಾಗಂತ, ಈ ಇರಿತದಲ್ಲಿ ಭಾಗಿಯಾದ ಆರೋಪಿಗಳೆಲ್ಲ ನಿಷ್ಠಾವಂತ ಧರ್ಮಾನುಯಾಯಿಗಳಾಗಿರುವರೇ? ಇತರ ಧರ್ಮೀಯ ಗೆಳೆಯರನ್ನೇ ಹೊಂದಿಲ್ಲದ, ಅವರ ಬಳಿ ನೌಕರಿ ಮಾಡದ, ಅವರ ಅಂಗಡಿಗಳಿಗೆ ಭೇಟಿಯನ್ನೇ ಕೊಡದ ಮತ್ತು ಸಂಪರ್ಕವನ್ನೇ ಇರಿಸದಷ್ಟು ಅತಿ ಸ್ವಧರ್ಮ ನಿಷ್ಠರು ಇವರಾಗಿರುವರೇ? ಒಂದು ವೇಳೆ ಈ ಆರೋಪಿಗಳಲ್ಲಿ ಖಾಸಗಿಯಾಗಿ ಮಾತಾಡಿದರೆ, ಇವರ ಗೆಳೆಯರ ಪಟ್ಟಿಯಲ್ಲಿ ಅವರ ಧರ್ಮದವರಿಗಿಂತ ಇತರ ಧರ್ಮದ ಗೆಳೆಯರೇ ಹೆಚ್ಚಿರುವ ಸಾಧ್ಯತೆ ಇದೆ. ಅನೇಕ ಬಾರಿ ಇವು ಸಾಬೀತೂ ಗೊಂಡಿವೆ. ಆದ್ದರಿಂದಲೇ, ಆರೋಪಿಗಳನ್ನು ಇನ್ನೊಂದು ಧರ್ಮದ ಬದ್ಧ ವೈರಿಗಳೆಂದೋ ಅಥವಾ ಸ್ವ ಧರ್ಮದ ನಿಷ್ಠಾವಂತ ಕಾರ್ಯಕರ್ತರೆಂದೋ ತೀರ್ಮಾನಿಸಿ ಬಿಡುವುದು ಸೂಕ್ತವೆನಿಸುವುದಿಲ್ಲ. ಕೆಲವೊಮ್ಮೆ ಇಂಥ ತೀರ್ಮಾನಗಳೇ ಪ್ರಕರಣವನ್ನು ಇನ್ನಷ್ಟು ಜಟಿಲತೆಯೆಡೆಗೆ ಕೊಂಡೊಯ್ಯುವುದಕ್ಕೂ ಕಾರಣವಾಗುತ್ತದೆ. ಇದರರ್ಥ, ಇವರ ಬಗ್ಗೆ ಮೃದು ನೀತಿಯನ್ನು ತಳೆಯಬೇಕೆಂದಲ್ಲ. ‘ಯಾವುದೋ ಸಂಚಿನ ಬಲಿಪಶುಗಳು' ಎಂಬ ಪದಪುಂಜದ ಮೂಲಕ ಸೌಮ್ಯ ಭಾವನೆ ಹೊಂದಬೇಕೆಂದೂ ಅಲ್ಲ. ಇವರ ಬಗ್ಗೆ ಸಮಾಜ ಕಠಿಣ ಧೋರಣೆ ತಳೆಯಬೇಕೆಂಬ ಕಾರಣಕ್ಕಾಗಿಯೇ ಆರಂಭದಲ್ಲಿಯೇ ಇವರು ಯಾವ ಧರ್ಮದ ನಾಮಧಾರಿಗಳು ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಸಾವಿಗೀಡಾದವರು ಮತ್ತು ಇರಿತಕ್ಕೊಳಗಾದವರು ಯಾವ ಧರ್ಮದೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬುದನ್ನೂ ಸೂಚಿಸಲಾಗಿದ್ದೂ ಈ ಕಾರಣಕ್ಕಾಗಿಯೇ. ಆರೋಪಿಗಳನ್ನು ಮತ್ತು ಸಂತ್ರಸ್ತರನ್ನು ಸಮಾಜ ಸ್ಪಷ್ಟವಾಗಿ ಗುರುತಿಸಿ ವಿಭಜಿಸಬೇಕು ಮತ್ತು  ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅಪರಾಧಿಗಳನ್ನು ಶಿಕ್ಷಿಸಬೇಕು ಎಂಬ ಏಕೈಕ ಉದ್ದೇಶವೇ ಈ ಸ್ಪಷ್ಟೀಕರಣದ  ಹಿಂದಿದೆ. ಇವರನ್ನು ಪ್ರಚೋದಿಸಿದವರು ಯಾರೇ ಆಗಿರಲಿ ಮತ್ತು ಅವರ ಉದ್ದೇಶ ಏನೇ ಇರಲಿ ಅದರ ನೆಪದಲ್ಲಿ ಆರೋಪಿಗಳನ್ನು ಬಲಿಪಶುಗಳಂತೆ ಕರುಣೆಯಿಂದ ನೋಡಬೇಕಾದ ಅಗತ್ಯವೇ ಇಲ್ಲ. ಮನುಷ್ಯ ವಿರೋಧಿಗಳ ಬಗ್ಗೆ ಸಮಾಜ ಕಠಿಣ ನಿಲುವನ್ನು ತಳೆಯದೇ ಹೋದರೆ ಅದು ಮರಳಿ ಅಂಥದ್ದೇ ಕೃತ್ಯದಲ್ಲಿ ತೊಡಗಿಸುವುದಕ್ಕೆ ಅವರಲ್ಲಿ ಧೈರ್ಯ ತುಂಬುತ್ತದೆ. ಸದ್ಯ ‘ಕೋಮುಗಲಭೆ' ಎಂಬ ಬಿರುದು ಹೊತ್ತು ನಡೆಯುವ ಮನುಷ್ಯ ವಿರೋಧಿ ಕೃತ್ಯಗಳ ಹೆಚ್ಚಳದಲ್ಲಿ ಸಮಾಜದ ಈ ಸೌಮ್ಯ ಧೋರಣೆಗೂ ಖಂಡಿತ ಪಾತ್ರವಿದೆ. ಜೈಲಿಗೆ ಹೋದಷ್ಟೇ ವೇಗವಾಗಿ ಅವರು ಬಿಡುಗಡೆಗೊಳ್ಳುವುದು ಮತ್ತು ಒಂದಷ್ಟು ಹೆಚ್ಚೇ ಗೌರವದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುವುದೆಲ್ಲ ಈ ತಪ್ಪಿನ ಪರಿಣಾಮದಿಂದಲೇ ಆಗಿದೆ. ಧರ್ಮ ಬೇರೆ ಎಂಬ ಕಾರಣಕ್ಕಾಗಿ ಮನುಷ್ಯರನ್ನು ಇರಿದೋ ಕೊಲೆಗೈದೋ ಬಂಧನಕ್ಕೀಡಾದವರು ಅಥವಾ ತಲೆ ತಪ್ಪಿಸಿಕೊಂಡು ನಡೆಯುವವರನ್ನು ಸಮಾಜ ಯಾವ ಕಾರಣಕ್ಕೂ ಬೆಂಬಲಿಸಬಾರದು. ಈ ಕೃತ್ಯಕ್ಕೆ ಅವರನ್ನು ಯಾರೇ ಪ್ರಚೋದಿಸಿರಲಿ, ಇತರ ಯುವಕರಿಗೆ ಪಾಠವಾಗುವಂತೆ ಅವರನ್ನು ಸಮಾಜ ನಡೆಸಿಕೊಳ್ಳಬೇಕು. ಪ್ರಚೋದಕರಿದ್ದರೂ ಪ್ರಚೋದನೆಗೊಳಗಾಗದ ಯುವಕರ ತಯಾರಿಯ ದೃಷ್ಟಿಯಿಂದ ಸಮಾಜ ಇಷ್ಟು ಕಟುವಾಗಲೇ ಬೇಕಾದ ಅಗತ್ಯವಂತೂ ಖಂಡಿತ ಇದೆ.
  ನಿಜವಾಗಿ, ಹದಿಹರೆಯದ ಯುವಕರು ಇವತ್ತು ಚೂರಿಯನ್ನೋ ತಲವಾರನ್ನೋ ಎತ್ತಿಕೊಳ್ಳುವುದು ಧರ್ಮದ ಮೇಲಿನ ನಿಷ್ಠೆಯಿಂದಲ್ಲ, ಮಾದಕ ಪದಾರ್ಥ ಮತ್ತು ಮದ್ಯಪಾನದ ಅಮಲಿನಿಂದ. ಪರಿಚಯವೇ ಇಲ್ಲದ ಇನ್ನೊಬ್ಬನಿಗೆ ಚೂರಿಯಿಂದ ಇರಿಯುವ ಸಾಮರ್ಥ್ಯ ಮದ್ಯ ಮತ್ತು ಮಾದಕ ಪದಾರ್ಥಗಳ ಹೊರತು ಇನ್ನಾವುದಕ್ಕೂ ಇಲ್ಲ. ವ್ಯವಸ್ಥೆಗೂ ಇದು ಗೊತ್ತಿದೆ. ಈ ಚೂರಿಯಾಟವನ್ನು ಆಡಿಸುವವರಿಗೂ ಆಡುವವರಿಗೂ ಗೊತ್ತಿದೆ. ರಾಜಕೀಯದವರಿಗೂ ಧರ್ಮವನ್ನು ದುರ್ವ್ಯಾಖ್ಯಾನಿಸುವವರಿಗೂ ಗೊತ್ತಿದೆ. ಆದ್ದರಿಂದಲೇ, ಯಾವ ಸ್ವಾಮೀಜಿಗಳೂ ಯಾವ ಮೌಲಾನಾಗಳೂ ಈ ಚೂರಿ ಇರಿತದಲ್ಲಿ ಭಾಗಿಗಳಾಗುತ್ತಿರುವುದು ಕಾಣಿಸುತ್ತಿಲ್ಲ. ಮದ್ಯ ಮತ್ತು ಮಾದಕ ಪದಾರ್ಥಗಳನ್ನು ಸೇವಿಸುವ ತಳಮಟ್ಟದ ಯುವಕರೇ ಇಂಥ ಕ್ರೌರ್ಯದಲ್ಲಿ ಮತ್ತೆ ಮತ್ತೆ ಗುರುತಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋಗಿ ಮರಳಿ ಬಂದು ಮತ್ತದೇ ಕೃತ್ಯದಲ್ಲಿ ಮುಂದುವರಿಯುತ್ತಾರೆ. ಇದಕ್ಕೆ ತಡೆ ಬೀಳಲೇಬೇಕಿದೆ. ಇಂಥವರ ಬಗ್ಗೆ ನ್ಯಾಯಾಲಯ ಕಠಿಣವಾಗಿ ನಡೆದುಕೊಳ್ಳಬೇಕು. ಒಂದು ವೇಳೆ ದುರ್ಬಲ ಸಾಕ್ಷ್ಯಾಧಾರಗಳ ಆಧಾರದಲ್ಲಿ ಅವರು ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುತ್ತಾರಾದರೆ ಸಮಾಜವೇ ಅವರನ್ನು ಸಂಸ್ಕರಿಸುವ ಮತ್ತು ಸಂಸ್ಕರಣೆಗೆ ತಯಾರಿಲ್ಲದಿದ್ದರೆ ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಬೇಕು. ಜೊತೆಗೇ ಕಾರಣವಿಲ್ಲದೆಯೇ ದ್ವೇಷಿಸುವುದಕ್ಕೆ ಪ್ರಚೋದಿಸುವ ಮದ್ಯ ಮತ್ತು ಅಮಲು ಪದಾರ್ಥಗಳಿಗೆ ನಿಷೇಧ ಹೇರುವ ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ಲಂಬರ್, ಪೈಂಟರ್, ಮೇಸ್ತ್ರಿ, ಎಲೆಕ್ಟ್ರಿಕಲ್ಸ್.. ಮುಂತಾದ ವೃತ್ತಿ ಸೂಚಕ ನಾಮಗಳು 'ಚೂರಿಯ' ಪರ್ಯಾಯ ನಾಮಗಳಾಗಿ ಗುರುತಿಗೀಡಾಗುವ ಅಪಾಯವಿದೆ.
  ಸಾವಿಗೀಡಾದ ರಾಜು ಕೋಟ್ಯಾನ್ ಮತ್ತು ಸೈಫಾನ್ ರು ಕೋಮುಗಲಭೆ ಬಿರುದಾಂಕಿತ ಮನುಷ್ಯ ವಿರೋಧಿ ಇರಿತಗಳ ಕಟ್ಟಕಡೆಯ ಬಲಿಗಳಾಗಲಿ ಎಂದೇ ಹಾರೈಸೋಣ