ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗಿರುವ ಹಿರಿಯರ ಬಗ್ಗೆ ದೇಶದ ಗಮನ ಹರಿಯುವಂತೆ ಮಾಡುವಲ್ಲಿ ಮಹಾತ್ಮಾ ಗಾಂಧಿಯವರ ಮೊಮ್ಮಗ ಕಾನೂಭಾಯಿ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಮೇ 16ರಂದು ಹೆಚ್ಚಿನ ಪತ್ರಿಕೆಗಳಲ್ಲಿ ಎರಡು ಪೋಟೋಗಳು ಪ್ರಕಟವಾಗಿವೆ. ಒಂದು, ಕಾನೂಭಾಯಿ ರಾಮದಾಸ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮೊಬೈಲ್‍ನಲ್ಲಿ ಮಾತಾಡುವುದಾದರೆ ಇನ್ನೊಂದು, ನರೇಂದ್ರ ಮೋದಿಯವರು ತಮ್ಮ ವೃದ್ಧ ತಾಯಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ತಮ್ಮ ಮನೆಯ ಉದ್ಯಾನವನದಲ್ಲಿ ಸುತ್ತಾಡಿಸುವುದು. ತಾಯಿಗೆ ಉದ್ಯಾನವನದ ಸೌಂದರ್ಯವನ್ನು ವಿವರಿಸಿಕೊಡುವ ಮಗನಾಗಿ ನರೇಂದ್ರ ಮೋದಿಯವರು ಇಷ್ಟವಾಗುತ್ತಾರೆ. ಈ ಇಷ್ಟಕ್ಕೆ ಇನ್ನೊಂದು ಕಾರಣವೂ ಇದೆ. ಮೇ 14ರಂದು ದಿ ಹಿಂದೂ ಪತ್ರಿಕೆಯು ತನ್ನ ಮುಖಪುಟದಲ್ಲಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಮಹಾತ್ಮಾ ಗಾಂಧಿಯವರ ಮೊಮ್ಮಗ (ಮಗ ಮೋಹನ್‍ದಾಸ್‍ರ ಮಗ) 87 ವರ್ಷದ ಕಾನೂಭಾಯಿ ಗಾಂಧಿ ಮತ್ತು ಅವರ ಪತ್ನಿ 85 ವರ್ಷದ ಶಿವಲಕ್ಷ್ಮಿ ಗಾಂಧಿಯವರು ದೆಹಲಿಯ ಗುರು ವಿಶ್ರಾಮ್ ಎಂಬ ವೃದ್ಧಾಶ್ರಮವನ್ನು ಸೇರಿಕೊಂಡಿದ್ದಾರೆ ಎಂಬುದೇ ಆ ಸುದ್ದಿ. ಈ ಸುದ್ದಿಗೆ ಪೂರಕವಾಗಿ ಅದು ವಿಸ್ತೃತ ವರದಿಯನ್ನೂ ಪ್ರಕಟಿಸಿತ್ತು. 125 ವೃದ್ಧರಿರುವ ಈ ಆಶ್ರಮದಲ್ಲಿ ಹೆಚ್ಚಿನವರಲ್ಲಿ ಒಂದೋ ಮಾನಸಿಕ ಅಸ್ವಸ್ಥರು ಅಥವಾ ಮರೆವು ರೋಗಕ್ಕೆ (ಅಲ್‍ಜೈಮರ್) ತುತ್ತಾದವರು. ಇವರಿಗೆ ಹೋಲಿಸಿದರೆ ಕಾನೂಭಾಯಿ ಮತ್ತು ಲಕ್ಷ್ಮೀ ಅತ್ಯಂತ ಆರೋಗ್ಯವಂತರು. ಬದುಕಿನ 40 ವರ್ಷಗಳನ್ನು ಇವರಿಬ್ಬರೂ ಅಮೇರಿಕದಲ್ಲಿ ಕಳೆದಿದ್ದಾರೆ. MIT ಪದವೀಧರರಾದ ಕಾನೂಭಾಯಿ ಅವರು ಅಮೇರಿಕದ ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ. ರಕ್ಷಣಾ ಇಲಾಖೆಯಲ್ಲಿ ದುಡಿದಿದ್ದಾರೆ. ಲಕ್ಷ್ಮಿಯವರ ಜೀವನಾನುಭವ ಕೂಡ ಬಹಳ ದೊಡ್ಡದು. ಬೋಸ್ಟನ್‍ನಲ್ಲಿ ಉಪನ್ಯಾಸಕಿಯಾಗಿ ಬಳಿಕ ಸಂಶೋಧಕಿಯಾಗಿ ಕೆಲಸ ಮಾಡಿದ್ದಾರೆ. ಇಸ್ರೇಲ್‍ನ ಈಗಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಕಾನೂಭಾಯಿಯವರು ಸಹಪಾಠಿಗಳು. ಇತ್ತೀಚೆಗೆ ಇವರಿಬ್ಬರನ್ನೂ ನೇತನ್ಯಾಹು ಅವರು ಇಸ್ರೇಲ್‍ಗೆ ಕರೆಸಿಕೊಂಡಿದ್ದರು. ನಾಥೂರಾಮ್ ಗೋಡ್ಸೆಯ ಗುಂಡಿಗೆ ಮಹಾತ್ಮಾ ಗಾಂಧಿ ಬಲಿಯಾಗುವಾಗ ಕಾನೂಭಾಯಿಗೆ 17 ವರ್ಷ. ಆದರೆ ಈ ಕಾನೂಭಾಯಿ ಪುಟ್ಟ ಹುಡುಗನಿದ್ದಾಗಲೇ ತನ್ನ ತುಂಟತನದಿಂದಾಗಿ ಈ ದೇಶಕ್ಕೆ ಪರಿಚಿತನಾಗಿದ್ದ. ಮಹಾತ್ಮಾ ಗಾಂಧಿಯವರು ಸಮುದ್ರ ದಂಡೆಯಲ್ಲಿ ನಡೆಯುತ್ತಿದ್ದಾಗ ಅವರ ಊರುಗೋಲನ್ನು ಕಿತ್ತು ಓಡಿದ ಬಾಲಕನಾಗಿ ಈ ದೇಶ ಅವನನ್ನು ಗುರುತಿಸಿತ್ತು. ಮಕ್ಕಳಿಲ್ಲದ ಈ ದಂಪತಿ 2014ರಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದರು. ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ವಿವಿಧ ವೃದ್ಧಾಶ್ರಮಗಳಲ್ಲಿ ಆಯುಷ್ಯ ಕಳೆದರು. ಕಳೆದ ವಾರ ದೆಹಲಿಯ ವೃದ್ಧಾಶ್ರಮಕ್ಕೆ ಸೇರಿಕೊಂಡಿರುವುದನ್ನು ದಿ ಹಿಂದೂ ಪತ್ತೆ ಹಚ್ಚಿದ ಕೂಡಲೇ ರಾಜಕೀಯ ನಾಯಕರು ಚುರುಕಾದರು. ಕೇಜ್ರಿವಾಲ್‍ರು ಈ ದಂಪತಿಗಳಿಗೆ ಸಕಲ ನೆರವನ್ನೂ ನೀಡುವ ಭರವಸೆ ನೀಡಿದರು. ನರೇಂದ್ರ ಮೋದಿಯವರಂತೂ ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಕಾನೂಭಾಯಿಯವರೊಂದಿಗೆ ಮೊಬೈಲ್‍ನಲ್ಲಿ ಗುಜರಾತಿ ಭಾಷೆಯಲ್ಲಿ ಮಾತಾಡಿದರು. ಹಾಗಂತ, ಒಂದೂವರೆ ವರ್ಷಗಳ ಕಾಲ ಗುಜರಾತ್‍ನ ಆಶ್ರಮದಲ್ಲಿರುವಾಗ ಮಾತಾಡದ ನರೇಂದ್ರ ಮೋದಿಯವರಲ್ಲಿ ಈಗೇಕೆ ದಿಢೀರ್ ಆಗಿ ಪ್ರೇಮ ಉಕ್ಕಿತು ಎಂಬ ಪ್ರಶ್ನೆ ಸಹಜವಾದರೂ ಸದ್ಯಕ್ಕೆ ಈ ಪ್ರಶ್ನೆಯನ್ನು ಪಕ್ಕಕ್ಕಿಟ್ಟು, ಒಟ್ಟು ಬೆಳವಣಿಗೆಯನ್ನು ನೋಡಿದರೆ ಖುಷಿಯಾಗುತ್ತದೆ. ನರೇಂದ್ರ ಮೋದಿಯವರು ತನ್ನ ತಾಯಿಯನ್ನು ಸುತ್ತಾಡಿಸುವ ಪೋಟೋ ಮತ್ತು ಕಾನೂಭಾಯಿ ಮೊಬೈಲ್‍ನಲ್ಲಿ ಮಾತಾಡುವ ಪೋಟೋ ಎರಡೂ ಒಂದೇ ದಿನ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವುದರ ಹಿಂದೆ ರಾಜಕೀಯ ತಂತ್ರ ಇರಬಹುದಾದರೂ ಮೋದಿಯವರ ಪೋಟೋ ಅದರಾಚೆಗೂ ನಮ್ಮನ್ನು ಕೊಂಡೊಯ್ಯುತ್ತದೆ. ಓರ್ವ ವಿಧೇಯ ಮತ್ತು ಅತ್ಯಂತ ಪ್ರೇಮಮಯಿ ಮಗನಾಗಿ ಮೋದಿ ಥಟ್ಟನೆ ನಮ್ಮೊಳಗನ್ನು ಕಾಡುತ್ತಾರೆ. ಮೋದಿಯವರ ಬಗ್ಗೆ ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇರಲಿ ಅದು ಅವರ ಒಳ್ಳೆಯ ಗುಣವನ್ನು ಟೀಕಿಸುವುದಕ್ಕೆ ಕಾರಣವಾಗಬೇಕಾದ ಅಗತ್ಯವಿಲ್ಲ.
ಈ ದೇಶದಲ್ಲಿ ಹಿರಿಯರ ಬಗ್ಗೆ ಆಧುನಿಕ ತಲೆಮಾರಿನ ಆಲೋಚನೆಗಳು ಏನು ಮತ್ತು ಅವು ಎಷ್ಟು ಕಳವಳಕಾರಿ ಎಂಬುದು ಆಗಾಗ ಈ ದೇಶಕ್ಕೆ ಪರಿಚಯವಾಗುತ್ತಲೇ ಇದೆ. ಕಾನೂಭಾಯಿ ದಂಪತಿ ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೆ. ಅಷ್ಟಕ್ಕೂ, ಈ ದಂಪತಿಗೆ ಮಕ್ಕಳಿರಲಿಲ್ಲ ಎಂಬುದು ಅವರು ವೃದ್ಧಾಶ್ರಮ ಸೇರಿಕೊಂಡಿರುವುದಕ್ಕೆ ಸಮರ್ಥನೆ ಆಗುವುದಿಲ್ಲ. ವೃದ್ಧರನ್ನು ಸಾಕಬೇಕಾದ ಹೊಣೆಗಾರಿಕೆ ಯಾರದು, ಮಕ್ಕಳದ್ದು ಮಾತ್ರವೇ? ಮಕ್ಕಳೇ ಇಲ್ಲದಿದ್ದರೆ ಅವರನ್ನು ಸಾಕಬೇಕಾದದ್ದು ಯಾರು? ಅಂದಹಾಗೆ, ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ವೃದ್ಧಾಶ್ರಮಗಳನ್ನು ಕಟ್ಟಿಕೊಡಬಹುದು. ಅಲ್ಲಿ ಸವಲತ್ತುಗಳೂ ಇರಬಹುದು. ಆದರೆ ಇವು ವೃದ್ಧ ಜೀವಿಗಳನ್ನು ತೃಪ್ತಿಪಡಿಸಬಲ್ಲುದೇ? ಕಾನೂಭಾಯಿ ದಂಪತಿ ಸೇರಿಕೊಂಡಿರುವ ದೆಹಲಿಯ ಗುರುವಿಶ್ರಾಮ್ ಆಶ್ರಮವೇ ಇದಕ್ಕೆ ಸರಿಯಾದ ಉತ್ತರ. ಅಲ್ಲಿರುವ ಹೆಚ್ಚಿನವರು ಮಾನಸಿಕ ಸ್ಥಿಮಿತವನ್ನು ಕಳಕೊಂಡು ಬದುಕುತ್ತಿದ್ದಾರೆ. ಒಂದು ವೇಳೆ ಇದಕ್ಕಿರುವ ಕಾರಣಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆದರೆ, ಆ ವೃದ್ಧರ ಮಕ್ಕಳು ಅಥವಾ ಕುಟುಂಬಿಕರು ಮುಖ್ಯ ಅಪರಾಧಿಗಳಾಗಿ ಗುರುತಿಸಿಕೊಂಡಾರು.
ನಿಜವಾಗಿ, ಹೆತ್ತವರು ತಮ್ಮ ಮಗುವಿನ ಸೇವೆಯನ್ನು ಗರ್ಭಧರಿಸಿದಂದಿನಿಂದಲೇ ಪ್ರಾರಂಭಿಸುತ್ತಾರೆ. ಪ್ರಸವಾನಂತರದ ಎರಡು ತಿಂಗಳ ಕಾಲ ಓರ್ವ ತಾಯಿ ಪಡುವ ಪಾಡು ಮತ್ತು ತನ್ನ ಮಗುವಿಗಾಗಿ ವಹಿಸುವ ಎಚ್ಚರಿಕೆಗಳು ಅನನ್ಯವಾದುದು. ಮಗುವಿನ ಅಳುವಿನಲ್ಲೇ ಅದರ ಬೇಕು-ಬೇಡಗಳನ್ನು ತಿಳಿಯುವಷ್ಟು ತಾಯಿ ಚುರುಕಾಗುತ್ತಾಳೆ. ಮಗುವಿನೊಂದಿಗೆ ಮೌನದಲ್ಲಿ ಸಂಭಾಷಿಸುವಷ್ಟು ಹೃದಯ ಸಂಬಂಧವನ್ನು ಬೆಳೆಸುತ್ತಾಳೆ. ಮಗು ನಕ್ಕರೆ ಅದಕ್ಕೆ ವ್ಯಾಖ್ಯಾನ ಕೊಡುವುದು ತಾಯಿ. ಮಗು ಅತ್ತರೂ ತಾಯಿಯಲ್ಲೇ ಉತ್ತರವಿರುತ್ತದೆ. ಮಗು ಕೆಮ್ಮಿದರೆ, ಹಠ ಹಿಡಿದರೆ, ಕಂಕುಳಲ್ಲೋ ಕೆನ್ನೆ, ಕತ್ತಿನಲ್ಲೋ ದದ್ದುಗಳು ಕಾಣಿಸಿಕೊಂಡರೆ, ವಾಂತಿ ಮಾಡಿದರೆ ಎಲ್ಲದಕ್ಕೂ ತಾಯಿಯಲ್ಲಿ ವಿವರಣೆಗಳಿರುತ್ತವೆ. ಇದು ಹೇಗೆ ಸಾಧ್ಯ ಎಂದರೆ, ತಾಯಿಗೆ ಮಗುವಿನೊಂದಿಗಿರುವ ಅಂತಃಕರಣದ ಸಂಬಂಧ. ಅಲ್ಲಿ ತಾಯಿ ಮತ್ತು ಮಗು ಬೇರೆ ಬೇರೆ ಆಗಿರುವುದಿಲ್ಲ. ಜೀವ ಎರಡಾದರೂ ದೇಹ ಒಂದೇ ಎಂಬಷ್ಟು ಆತ್ಮೀಯತೆ ಅಲ್ಲಿರುತ್ತದೆ. ಇಂಥ ಭಾವನಾತ್ಮಕ ಸಂಬಂಧದೊಂದಿಗೆ ಬೆಳೆವ ಮಗು ಮುಂದೆ ಎಷ್ಟೇ ದೊಡ್ಡದಾಗಲಿ ಮತ್ತು ಯಾವ ಹುದ್ದೆಯನ್ನೇ ಏರಲಿ, ತಂದೆ ಮತ್ತು ತಾಯಿಗೆ ಅದು ಮಗುವೇ. ದೂರದಲ್ಲೆಲ್ಲೋ ಇರುವ ಮಗು ಕರೆ ಮಾಡಿದರೆ ತಾಯಿ ಮತ್ತು ತಂದೆ ಮೊದಲು ವಿಚಾರಿಸುವುದು ಮಗುವಿನ ಆರೋಗ್ಯವನ್ನು. ಮೊಮ್ಮಕ್ಕಳನ್ನು. ಯಾಕೆಂದರೆ ಹೆತ್ತವರು ಮತ್ತು ಮಕ್ಕಳ ನಡುವಿನ ಸಂಬಂಧ ಗಣಿತ ಪುಸ್ತಕದಂತೆ ಅಲ್ಲ. ಅದು ವ್ಯಾವಹಾರಿಕತೆಯಿಂದ ಹೊರತಾದುದು. ಅಲ್ಲಿ ಪರಸ್ಪರ ಸಹಕಾರ, ಸೇವೆ, ನಗು, ಹರಟೆಗಳಿರುತ್ತವೆ. ಹೆತ್ತವರು ತಮ್ಮ ವೃದ್ಧಾಪ್ಯದಲ್ಲಿ ಇವನ್ನು ಅನುಭವಿಸಿ, ಆನಂದಿಸಿಕೊಂಡು ಬದುಕುತ್ತಿರುತ್ತಾರೆ. ಒಂದು ವೇಳೆ, ನಾವು ಅವರನ್ನು ವೃದ್ಧಾಪ್ಯದ ಕಾರಣಕ್ಕಾಗಿ ಈ ವಾತಾವರಣದಿಂದ ಹೊರದಬ್ಬಿದರೆ ವೃದ್ಧಾಶ್ರಮಗಳೇನೋ ಆಶ್ರಯ ಕೊಟ್ಟಾವು. ಆದರೆ ಅವು ಮಾನಸಿಕ ನೆಮ್ಮದಿಯನ್ನು ಎಂದೂ ಕೊಡಲಾರವು. ಆದ್ದರಿಂದಲೇ, ವೃದ್ಧಾಶ್ರಮಗಳು ಮತ್ತು ಅದರಲ್ಲಿರುವ ಹಿರಿಯ ಜೀವಗಳ ಬಗ್ಗೆ ಸಮಾಜ ತೆರೆದ ಮನಸ್ಸಿನಿಂದ ಆಲೋಚಿಸಬೇಕು. ವೃದ್ಧಾಶ್ರಮಗಳಿಗೆ ವೃದ್ಧರ ಸೇರ್ಪಡೆ ಹೆಚ್ಚಾಗುತ್ತಿರುವುದರಲ್ಲಿ ಮಕ್ಕಳ ಪಾತ್ರ ಏನು? ಮಕ್ಕಳಿಲ್ಲದ ವೃದ್ಧರನ್ನು ಸಾಕಬೇಕಾದ ಹೊಣೆಗಾರಿಕೆ ಯಾರದು? ಕುಟುಂಬಿಕರ ಹೊಣೆಗಾರಿಕೆಗಳು ಏನೇನು? ಪವಿತ್ರ ಕುರ್‍ಆನ್ ವೃದ್ಧ ಹೆತ್ತವರನ್ನು ನಿರ್ಲಕ್ಷಿಸುವುದರ ವಿರುದ್ಧ ಅತ್ಯಂತ ಕಟು ಭಾಷೆಯಲ್ಲಿ ಮಾತಾಡಿದೆ. ಅವರ ವಿರುದ್ಧ ‘ಛೇ’ ಎಂಬ ಪದ ಬಳಸುವುದು ಕೂಡಾ ಅತ್ಯಂತ ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ. ಹೆತ್ತವರ ಕೋಪಕ್ಕೆ ತುತ್ತಾದ ಮಗ ಎಷ್ಟೇ ಧರ್ಮಬೀರುವಾಗಿದ್ದರೂ ಸ್ವರ್ಗ ಪ್ರವೇಶಿಸಲಾರ ಎಂದು ಎಚ್ಚರಿಸಿದೆ. ‘ಶಿಶುಪ್ರಾಯದಲ್ಲಿ ನನ್ನ ಮೇಲೆ ಅವರು ಕರುಣೆ ತೋರಿದಂತೆ ವೃದ್ಧಾಪ್ಯದಲ್ಲಿರುವ ಅವರ ಮೇಲೆ ನೀನು ಕರುಣೆ ತೋರು..’ ಎಂದು ದೇವನಲ್ಲಿ ಪ್ರಾರ್ಥಿಸಬೇಕೆಂದು ಮಕ್ಕಳಿಗೆ ಆಜ್ಞಾಪಿಸಿದೆ.
ಕಾನೂಭಾಯಿ ಗಾಂಧಿ |
ಮನುಷ್ಯ ಸಂಬಂಧ ಎಂಬುದು ಅತ್ಯಂತ ಪವಿತ್ರವಾದುದು. ಆರೋಗ್ಯ ಉತ್ತಮವಾಗಿರುವಾಗ ಸಂಬಂಧ ಚೆನ್ನಾಗಿರುವುದು ಮತ್ತು ಆರೋಗ್ಯ ಕೈ ಕೊಟ್ಟಾಗ ಸಂಬಂಧ ಹದಗೆಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಮಕ್ಕಳು ಮತ್ತು ಹೆತ್ತವರ ನಡುವೆಯಂತೂ ಇಂಥ ಸಂಬಂಧ ಹೀನವಾದುದು. ಹೆತ್ತವರು ನಮ್ಮೆಲ್ಲ ಭೌತಿಕ ಲೆಕ್ಕಾಚಾರಗಳಿಗಿಂತ ಮಿಗಿಲಾದವರು. ಅವರನ್ನು ಹೊರೆ ಎಂದು ಭಾವಿಸುವ ಮಕ್ಕಳು ಮನುಷ್ಯರ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕೆ ಅರ್ಹರೇ ಅಲ್ಲ. ಈ ಎಲ್ಲ ಕಾರಣಗಳಿಂದಲೇ ನರೇಂದ್ರ ಮೋದಿಯವರ ಆ ತಾಯಿ ಪ್ರೇಮ ಇಷ್ಟವಾಗುತ್ತದೆ. ತಾಯಿಯನ್ನು ಗಾಲಿ ಕುರ್ಚಿಯಲ್ಲಿ ತಳ್ಳುತ್ತಾ ಹೋಗುವ ಓರ್ವ ವಿನೀತ ಮಗನಾಗಿ ಮೋದಿ ಈ ದೇಶದ ಸರ್ವ ಮಕ್ಕಳಿಗೂ ಮಾದರಿಯಾಗಲಿ. ವೃದ್ಧ ಹೆತ್ತವರನ್ನು ಪ್ರೀತಿಸುವುದಕ್ಕೆ ಆ ಪೋಟೋ ಎಲ್ಲ ಮಕ್ಕಳಿಗೂ ಪ್ರೇರಕವಾಗಲಿ.
No comments:
Post a Comment