Thursday, 23 June 2016

ಚೂರಿಯನ್ನು ಜೇಬೊಳಗಿಟ್ಟವರು ಮತ್ತು ಪದೇ ಪದೇ ಇರಿತಕ್ಕೊಳಗಾಗುವವರು..


     ಕಳೆದವಾರ ಫ್ರಾನ್ಸ್ ನ ನೇತೃತ್ವದಲ್ಲಿ 29 ರಾಷ್ಟ್ರಗಳು ಒಟ್ಟು ಸೇರಿ ನಡೆಸಿದ ಸಭೆಯ ಬಗ್ಗೆ ಫೆಲೆಸ್ತೀನ್ ವ್ಯಕ್ತಪಡಿಸಿರುವ ನಿರಾಶಾಜನಕ ಪ್ರತಿಕ್ರಿಯೆಯೇ ಅದರ ಸದ್ಯದ ಸ್ಥಿತಿ-ಗತಿಯನ್ನು ಹೇಳುತ್ತದೆ. ಫೆಲೆಸ್ತೀನಿಯರು ಯಾರ ಮೇಲೂ ನಂಬಿಕೆ ಇಡದಷ್ಟು ವಿಶ್ವಾಸ ದ್ರೋಹಕ್ಕೆ ಒಳಗಾಗಿದ್ದಾರೆ. ಗೆಳೆಯರ ವೇಷ ತೊಟ್ಟವರಲ್ಲಿ ಹೆಚ್ಚಿನವರೂ ಇರಿದಿದ್ದಾರೆ. ‘ಶಾಂತಿ ಮಾತುಕತೆ’, ‘ಶಾಂತಿ ಸಭೆ’, ‘ಶಾಂತಿ ಒಪ್ಪಂದ’.. ಮುಂತಾದುವುಗಳೆಲ್ಲ ಅವರನ್ನು ಎಷ್ಟರ ಮಟ್ಟಿಗೆ ಸಿನಿಕತನಕ್ಕೆ ತಳ್ಳಿಬಿಟ್ಟಿದೆಯೆಂದರೆ, ಇವೆಲ್ಲ ಫೆಲೆಸ್ತೀನನ್ನು ಇಂಚಿಂಚಾಗಿ ಇಸ್ರೇಲಿಗೆ ಒಪ್ಪಿಸಿಬಿಡುವ ಪ್ರಕ್ರಿಯೆಯ ಜಾಣ ನಡೆ ಎಂದೇ ಅಂದುಕೊಳ್ಳುವಷ್ಟು. ಆದ್ದರಿಂದಲೇ, ಕಳೆದ ವಾರ ಫ್ರಾನ್ಸ್ ನೇತೃತ್ವದಲ್ಲಿ ನಡೆದ 29 ರಾಷ್ಟ್ರಗಳ ಸಭೆಯಲ್ಲಿ ಫೆಲೆಸ್ತೀನ್ ಭಾಗಿಯಾಗಿಲ್ಲ. ಫೆಲೆಸ್ತೀನ್‍ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡುವುದು, ಇಸ್ರೇಲ್ ಮತ್ತು ಫೆಲೆಸ್ತೀನ್ ರಾಷ್ಟ್ರಗಳಿಗೆ ಜೆರುಸಲೇಮ್ ಅನ್ನೇ ರಾಜಧಾನಿಯಾಗಿಸುವುದು ಹಾಗೂ ಈ ವರ್ಷದ ಕೊನೆಯಲ್ಲಿ ಇನ್ನೊಂದು ಸಭೆಯನ್ನು ಏರ್ಪಡಿಸುವ ಗುರಿಯೊಂದಿಗೆ ಸಭೆ ಮುಕ್ತಾಯವನ್ನು ಕಂಡಿದೆ.
      ನಿಜವಾಗಿ, ಫೆಲೆಸ್ತೀನ್‍ನ ಪಾಲಿಗೆ ಸಭೆ ಮತ್ತು ಮಾತುಕತೆ ಹೊಸತಲ್ಲ. ಇಸ್ರೇಲ್ ಸ್ಥಾಪಿತಗೊಂಡಂದಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ಬಾರಿಯೂ ಸಭೆಯ ಮೊದಲು ಅಪಾರ ನಿರೀಕ್ಷೆಯನ್ನು ವ್ಯಕ್ತಪಡಿಸುವುದು ಮತ್ತು ಸಭೆಯ ಬಳಿಕ ಆ ನಿರೀಕ್ಷೆಯ ವ್ಯಾಪ್ತಿಯು ಕಿರಿದಾಗುತ್ತಾ ಹೋಗುವುದು ಫೆಲೆಸ್ತೀನ್‍ಗೆ ಅಭ್ಯಾಸವಾಗಿಬಿಟ್ಟಿದೆ. ಫೆಲೆಸ್ತೀನ್ ಮತ್ತು ಇಸ್ರೇಲ್‍ಗಳ ನಡುವೆ ಮಧ್ಯಸ್ಥಿಕೆದಾರರ ಮೂಲಕ ಅನೇಕ ಬಾರಿ ಮಾತುಕತೆ ನಡೆದಿದೆ. ಹೆಚ್ಚಿನ ಬಾರಿ ಮಧ್ಯಸ್ಥಿಕೆದಾರನೇ ಮನುಷ್ಯ ವೇಷದ ತೋಳ ಆಗಿದ್ದನ್ನೂ ಅದು ಗುರುತಿಸಿದೆ. ಯಾಸಿರ್ ಅರಾಫಾತ್‍ರು ಇಂಥ ತೋಳಗಳಿಂದ ಸಾಕಷ್ಟು ಅವಮಾನವನ್ನು ಎದುರಿಸಿದರು. ಸದ್ಯ 81 ವರ್ಷದ ಅಬ್ಬಾಸ್ ಇದ್ದಾರೆ. ‘ಇಸ್ರೇಲನ್ನು ಯಹೂದಿ ರಾಷ್ಟ್ರವೆಂದೂ ಮತ್ತು ಯಹೂದಿಗಳ ಮಾತೃಭೂಮಿ’ಯೆಂದೂ ಒಪ್ಪುವ ಫೆಲೆಸ್ತೀನ್ ಸರಕಾರದೊಂದಿಗೆ ಮಾತ್ರ ನೇರ ಮಾತುಕತೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳುತ್ತಿದ್ದಾರೆ. ನಿಜವಾಗಿ, ಫೆಲೆಸ್ತೀನ್‍ನೊಂದಿಗೆ ನೇರ ಮಾತುಕತೆ ಎಂಬುದೇ ಬೃಹತ್ ನಾಟಕ. ಇಸ್ರೇಲ್, ಬಲಿಷ್ಠ ರಾಷ್ಟ್ರ. ಇಡೀ ಪಶ್ಚಿಮೇಶ್ಯದಲ್ಲೇ  ಅಣ್ವಸ್ತ್ರ ಹೊಂದಿರುವ ಮತ್ತು ಅಮೇರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳ ಕೃಪಾಶೀರ್ವಾದ ಇರುವ ರಾಷ್ಟ್ರ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲನ್ನು ಖಂಡಿಸುವ ಯಾವ ನಿರ್ಣಯವನ್ನೂ ಅಂಗೀಕರಿಸಲು ಅಮೇರಿಕ ಈ ವರೆಗೆ ಅವಕಾಶ ಕೊಟ್ಟಿಲ್ಲ. ಡಜನ್‍ಗಟ್ಟಲೆ ವೀಟೋಗಳನ್ನು ಅದು ಇಸ್ರೇಲ್‍ನ ಕ್ರೌರ್ಯವನ್ನು ಮನ್ನಿಸುವುದಕ್ಕಾಗಿಯೇ ಚಲಾಯಿಸಿದೆ. ಶಾಂತಿ ಪ್ರಕ್ರಿಯೆಗೆ ಮರು ಚಾಲನೆ ಕೊಡಲು ಹೊರಟಿರುವ ಫ್ರಾನ್ಸ್ ಕೂಡಾ ಈ ವಿಷಯದಲ್ಲಿ ಹಿಂದೆಯೇನೂ ಅಲ್ಲ. ಕಳೆದ ಜನವರಿಯಲ್ಲಿ ಅದರ ವಿದೇಶಾಂಗ ಸಚಿವ ಲೆಫ್ಟಿನೆಂಟ್ ಪ್ಯಾರಿಸ್ ಅವರು ಫೆಲೆಸ್ತೀನಿಯರಿಗೆ ಬೆಂಬಲವಾಗಿ ಹೇಳಿಕೆಯೊಂದನ್ನು ಕೊಟ್ಟರು. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಫ್ರಾನ್ಸ್ ಪರಿಗಣಿಸುತ್ತದೆಂದು ಅವರು ಅಭಿಪ್ರಾಯ ಪಟ್ಟರು. ಈ ಹೇಳಿಕೆಯ ಬಳಿಕ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಆ ಬಳಿಕ ಈವರೆಗೆ ಸ್ವತಂತ್ರ ಫೆಲೆಸ್ತೀನ್‍ನ ಬಗ್ಗೆ ಫ್ರಾನ್ಸ್ ಈ ವರೆಗೆ ಹೇಳಿಕೆಯನ್ನೇ ಕೊಟ್ಟಿಲ್ಲ. ಇಷ್ಟೆಲ್ಲ ಅನುಕೂಲ ಇರುವ ಇಸ್ರೇಲ್ ಒಂದು ಕಡೆಯಾದರೆ, ಇನ್ನೊಂದು ಕಡೆ ರಾಷ್ಟ್ರದ ಸ್ಥಾನಮಾನವೂ ಇಲ್ಲದ ದುರ್ಬಲ ಫೆಲೆಸ್ತೀನ್. ಇಸ್ರೇಲ್ ಅನುಮತಿಸಿದರೆ ಮಾತ್ರ ಫೆಲೆಸ್ತೀನ್‍ಗೆ ವಿದ್ಯುತ್ ಇದೆ. ಇಸ್ರೇಲ್ ಒಪ್ಪಿದರೆ ಮಾತ್ರ ಆಹಾರ-ಸಾಮಗ್ರಿಗಳಿವೆ. ಪ್ರತಿಯೊಂದಕ್ಕೂ ಇಸ್ರೇಲ್‍ನ ಕೃಪೆಯನ್ನು ಅವಲಂಬಿಸಿಕೊಂಡಿರುವ ಫೆಲೆಸ್ತೀನ್ ಯಾವ ನೆಲೆಯಲ್ಲೂ ಇಸ್ರೇಲ್‍ಗೆ ಹೋಲಿಕೆಗೇ ಅರ್ಹವಲ್ಲ. ಇಂಥವರ ಮಧ್ಯೆ ನೇರ ಮಾತುಕತೆ ಅಂದರೇನು? ಅಂಥ ನೇರ ಮಾತುಕತೆಯಿಂದ ಆಗುವ ಪರಿಣಾಮಗಳು ಏನೇನು? ಅಲ್ಲಿಯ ನಿರ್ಣಯದಲ್ಲಿ ಯಾರ ಪ್ರಾಬಲ್ಯ ಇರಬಹುದು?
      ಇಸ್ರೇಲ್‍ನ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅನೇಕ ಬಾರಿ ನಿಯಮ ಉಲ್ಲಂಘನೆಗಳ ಪ್ರಸ್ತಾಪ ಆಗಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಅಮೇರಿಕದ ವೀಟೋ ಅದನ್ನು ರಕ್ಷಿಸುತ್ತಾ ಬಂದಿದೆ. ಗಾಝಾದಲ್ಲಿ ಯುದ್ಧಾಪರಾಧಗಳನ್ನು ಎಸಗಿದ ಗಂಭೀರ ಆರೋಪ ಅದರ ಮೇಲಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ವಿಧೇಯಕವನ್ನು ಪದೇ ಪದೇ ಉಲ್ಲಂಘಿಸಿ ಪಶ್ಚಿತ ದಂಡೆಯಲ್ಲಿ ಫೆಲೆಸ್ತೀನಿನ ಭೂಮಿಯನ್ನು ಅತಿಕ್ರಮಿಸುತ್ತಿರುವ ಆರೋಪವೂ ಇದೆ. ವಲಸಿಗ ಯಹೂದಿಯರಿಗಾಗಿ ವಸತಿಯನ್ನು ನಿರ್ಮಿಸುತ್ತಲೂ ಇದೆ. ಅಮೇರಿಕ ಸಹಿತ ಅದರ ಬೆಂಬಲಿಗ ರಾಷ್ಟ್ರಗಳ ವಿರೋಧದ ನಡುವೆಯೂ ಈ ವಸತಿ ನಿರ್ಮಾಣದಿಂದ ಅದು ಈಗಲೂ ಹಿಂದೆ ಸರಿದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಯಮಾನುಸಾರ ಇಸ್ರೇಲ್ ‘ಶಿಕ್ಷಾರ್ಹ’ ಅಪರಾಧಗಳನ್ನು ಎಸಗಿದೆ. ಹೀಗಿದ್ದೂ, ಇರಾನ್‍ನ ಮೇಲೆ ಮುಗಿಬಿದ್ದ ರಾಷ್ಟ್ರಗಳಾವುವೂ ಇಸ್ರೇಲ್‍ನ ಮೇಲೆ ಮುಗಿಬೀಳುತ್ತಿಲ್ಲವೇಕೆ? ಇರಾನ್‍ನ ಮೇಲೆ ಅಮೇರಿಕದ ನೇತೃತ್ವದಲ್ಲಿ ಹೇರಲಾದ ಒತ್ತಡಗಳ ಒಂದು ಶೇಕಡಾದಷ್ಟಾದರೂ ಇಸ್ರೇಲ್‍ನ ಮೇಲೆ ಹೇರಲು ಜಾಗತಿಕ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾದುದೇಕೆ? ವಿಶ್ವ ರಾಷ್ಟ್ರಗಳ ಒತ್ತಡ ಇರಾನ್‍ನ ಮೇಲೆ ಎಷ್ಟರ ಮಟ್ಟಿಗೆ ಇತ್ತೆಂದರೆ, ತನ್ನ ಉದ್ದೇಶಿತ  ಪರಮಾಣು ಚಟುವಟಿಕೆಯಲ್ಲಿ ಮೃದು ಧೋರಣೆಯನ್ನು ತಾಳಲೇಬೇಕಾದ ಅನಿವಾರ್ಯತೆಯೊಂದು ಅದಕ್ಕೆ ಎದುರಾಯಿತು. ತಾನು ವಿಶ್ವ ಭೂಪಟದಲ್ಲಿ ಒಂಟಿಯಾಗುವೆನೇ ಎಂದು ಭಯಪಡುವಷ್ಟು ಈ ಒತ್ತಡ ಇರಾನನ್ನು ಕಾಡಿತು. ವಿಶೇಷ ಏನೆಂದರೆ, ಈ ಒತ್ತಡ ಕಾರ್ಯಕ್ರಮದಲ್ಲಿ ಇರಾನ್‍ನ ಬೆಂಬಲಿಗ ರಾಷ್ಟ್ರಗಳಾದ ಚೀನಾ ಮತ್ತು ರಶ್ಯಾಗಳೇ ಅಮೇರಿಕದ ಜೊತೆ ಕೈ ಜೋಡಿಸಿದುವು. ಅಷ್ಟಕ್ಕೂ, ಇರಾನ್ ಅಣ್ವಸ್ತ್ರವನ್ನು ಉತ್ಪಾದಿಸಿಯೇ ಇರಲಿಲ್ಲ. ಅಣ್ವಸ್ತ್ರ ತಯಾರಿಸುವುದಕ್ಕೆ ಬೇಕಾಗುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಅದು ಅಭಿವೃದ್ಧಿಗೊಳಿಸುತ್ತಿದೆ ಎಂಬ ಆರೋಪವಷ್ಟೇ ಅದರ ಮೇಲಿತ್ತು. ಈ ನಡುವೆ ಇಸ್ರೇಲ್ ಅಭಿವೃದ್ಧಿಪಡಿಸಿರುವ ವೈರಸ್‍ಗಳು ಇರಾನ್‍ನ ಕೆಲವೊಂದು ಸೆಂಟ್ರಿಪ್ಯೂಜ್‍ಗಳನ್ನು ನಾಶ ಮಾಡುವಲ್ಲೂ ಯಶಸ್ವಿಯಾಗಿತ್ತು. ಇನ್ನೂ ಅಭಿವೃದ್ಧಿಪಡಿಸದ ಅಣ್ವಸ್ತ್ರದ ಹೆಸರಲ್ಲಿ ಇರಾನ್‍ನ ಮೇಲೆ ಒತ್ತಡ ಹೇರಲು ಮತ್ತು ಅದು ತನ್ನ ನೀತಿಯಲ್ಲಿ ಮೃದು ಧೋರಣೆಯನ್ನು ತಾಳುವಂತೆ ಮಾಡಲು ವಿಶ್ವ ರಾಷ್ಟ್ರಗಳಿಗೆ ಸಾಧ್ಯವಾಗುವುದಾದರೆ ಮತ್ತೇಕೆ ಫೆಲೆಸ್ತೀನಿನ ವಿಷಯದಲ್ಲಿ ಅದು ಸದಾ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಧೇಯಕವನ್ನು ಇಸ್ರೇಲ್ ಉಲ್ಲಂಘಿಸಿದಷ್ಟು ಸಂಖ್ಯೆಯಲ್ಲಿ ವಿಶ್ವದ ಇನ್ನಾವ ರಾಷ್ಟ್ರವೂ ಉಲ್ಲಂಘಿಸಿಲ್ಲ. ಪಶ್ಚಿಮೇಶ್ಯದಲ್ಲಿ ಅಣ್ವಸ್ತ್ರವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿರುವ ಏಕೈಕ ರಾಷ್ಟ್ರ ಅದೊಂದೇ. ಸಮೂಹನಾಶಕ ಅಸ್ತ್ರದ ಹೆಸರಲ್ಲಿ ಇರಾಕ್‍ನ ಮೇಲೆ ದಾಳಿ ನಡೆಸಿದ ಅಮೇರಿಕನ್ ನೇತೃತ್ವದ ವಿಶ್ವ ರಾಷ್ಟ್ರಗಳಿಗೆ ಇಸ್ರೇಲ್‍ನ ಮೇಲೆ ಕನಿಷ್ಠ ನಿರ್ಬಂಧವನ್ನೂ ಹೇರಲು ಅಸಾಧ್ಯವಾಗಿರುವುದು ಯಾಕೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಷ್ಟೇ ಎಚ್ಚರಿಕೆಯನ್ನು ಕೊಡಲಿ, ಅದಕ್ಕೆ ಕಿಮ್ಮತ್ತಿನ ಬೆಲೆಯನ್ನೂ ನೀಡದ ರಾಷ್ಟ್ರವೊಂದಿದ್ದರೆ ಅದು ಇಸ್ರೇಲೇ ಹೊರತು ಸಿರಿಯಾವೋ ಅಫಘಾನೋ ಇರಾನೋ ಅಲ್ಲ. ಆದರೆ ಇಸ್ರೇಲ್ ಹೊರತುಪಡಿಸಿದ ಉಳಿದೆಲ್ಲ ರಾಷ್ಟ್ರಗಳ ಮೇಲೆ ಮತ್ತೆ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಉದಾಹರಣೆಗಳಷ್ಟೇ ಸಿಗುತ್ತಿರುವುದೇಕೆ?. ಇಷ್ಟೆಲ್ಲ ನಗ್ನ ಸತ್ಯಗಳಿದ್ದೂ ಅವೇ ಹಳಸಲು ಶಾಂತಿ ಮಾತುಕತೆಗಳೇಕೆ? ಇವು ಯಾರನ್ನು ಸಂತೃಪ್ತಿಪಡಿಸಲು? ನಿಜಕ್ಕೂ ಇಂಥ ಪ್ರಕ್ರಿಯೆಗಳ ಹಿಂದಿರುವುದು ಸಮಸ್ಯೆಯನ್ನು ಬಗೆಹರಿಸುವ ಕಾಳಜಿಯೋ ಅಥವಾ ಇಸ್ರೇಲ್‍ನ ನಿಯಮ ಉಲ್ಲಂಘನೆಗಳು ಚರ್ಚೆಗೆ ಬರದಂತೆ ತಡೆಯುವುದೋ? ರಾಜಿ ಪಂಚಾಯಿತಿಕೆಯ ನೇತೃತ್ವವನ್ನು ಒಮ್ಮೆ ಅಮೇರಿಕ ವಹಿಸಿಕೊಂಡರೆ ಇನ್ನೊಮ್ಮೆ ಜರ್ಮನಿ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ವಹಿಸಿಕೊಳ್ಳುತ್ತವೆ. ಪ್ರತಿ ಬಾರಿಯೂ ಫೆಲೆಸ್ತೀನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಾಗ ಇಸ್ರೇಲ್ ಅಕ್ರಮ ವಸತಿ ನಿರ್ಮಾಣವನ್ನು ವಿಸ್ತರಿಸುವ ಮೂಲಕ ತಿರುಗೇಟು ನೀಡುತ್ತಲೇ ಬಂದಿದೆ. ಎಲ್ಲಿಯ ವರೆಗೆ ಈ ನಾಟಕ? ಅಂದಹಾಗೆ,
       ವಿಶ್ವರಾಷ್ಟ್ರಗಳು ಫೆಲೆಸ್ತೀನ್‍ಗೆ ಇರಿದೂ ಇರಿದೂ ಸದ್ಯ ಇರಿಯಲು ಜಾಗವೇ ಇಲ್ಲದಷ್ಟು ಗಾಯಗಳನ್ನು ಈಗಾಗಲೇ ಮಾಡಿಟ್ಟಿದೆ. ಈ ಇರಿತದ ನೋವನ್ನು ಅನುಭವಿಸಿ ಅನುಭವಿಸಿ ದಡ್ಡುಗಟ್ಟಿದ ಫೆಲೆಸ್ತೀನಿಗರ ದೇಹ ಸದ್ಯ ಮುಲಾಮನ್ನೂ ಚೂರಿಯೆಂದೇ ನಂಬುವಲ್ಲಿಗೆ ತಲುಪಿಬಿಟ್ಟಿದೆ. ಆದ್ದರಿಂದಲೇ, ಅದು ಕಳೆದವಾರ ನಡೆದ ಫ್ರಾನ್ಸ್ ನೇತೃತ್ವದ ಸಭೆಯಲ್ಲಿ ಭಾಗವಹಿಸಿಲ್ಲ. ಬಹುಶಃ ಅಲ್ಲಿ ಸೇರಿರುವ 29 ರಾಷ್ಟ್ರಗಳು ಅದರ ಪಾಲಿಗೆ 29 ಚೂರಿಗಳಾಗಿ ಕಾಣಿಸಿರುವ ಸಾಧ್ಯತೆ ಇದೆ. ಫೆಲೆಸ್ತೀನ್‍ಗಾಗಿರುವ ಇರಿತದ ಗಾಯಗಳನ್ನು ಎಣಿಸಿದರೆ ಅದರ ಈ ಗ್ರಹಿಕೆಯನ್ನು ಪ್ರಮಾದವೆನ್ನಲು ಸಾಧ್ಯವಿಲ್ಲ.

No comments:

Post a Comment