ನಮ್ಮ ನಡುವೆ ಇವತ್ತು ಎರಡು ರೀತಿಯ ಜೀವನ ದೃಷ್ಟಿಕೋನಗಳಿವೆ.
1. ಸಾಧನೆಗೆ ಹೆಣ್ಣು ತೊಡಕು ಎಂಬ ದೃಷ್ಟಿಕೋನ.
2. ವಿಧವೆ ಮತ್ತು ವಿಚ್ಛೇದಿತೆಯರ ಮರು ವಿವಾಹ ಅನಪೇಕ್ಷಿತ ಎಂಬ ನಿಲುವು.
ಮೊದಲ ದೃಷ್ಟಿಕೋನಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಜೊತೆ ಇದ್ದಾರೆ. ಇದಕ್ಕೆ ಇನ್ನಷ್ಟು ಸ್ಪಷ್ಟ ಉದಾಹರಣೆಯನ್ನು ಕೊಡಬೇಕೆಂದರೆ, ಆರೆಸ್ಸೆಸ್ ಇದೆ. ಇಬ್ಬರೂ ನೇರವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸುವ ನಿಲುವುಗಳು ಒಂದೇ- ಹೆಣ್ಣು ಸಾಧನೆಗೆ ಅಡ್ಡಿಯಾಗಿದ್ದಾಳೆ. ಆಕೆಯನ್ನು ಬದುಕಿನ ಭಾಗವಾಗಿ ಸ್ವೀಕರಿಸಿದರೆ ನಂಬಿದ ಸಿದ್ಧಾಂತವನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನರೇಂದ್ರ ಮೋದಿಯವರು ಜಶೋದಾ ಬೆನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಆರೆಸ್ಸೆಸ್‍ನ ಪ್ರಮುಖ ಹೊಣೆಗಾರರಂತೂ ಮದುವೆಯಾಗದೆಯೇ ಉಳಿಯುವುದನ್ನು ಮೌಲ್ಯವಾಗಿ ಸ್ವೀಕರಿಸಿಕೊಂಡರು. ಇನ್ನೊಂದು- ವಿಧವೆ ಮತ್ತು ವಿಚ್ಛೇದಿತೆಯರಿಗೆ ಸಂಬಂಧಿಸಿದ ನಿಲುವು. ಇಲ್ಲೂ ಘೋಷಿತ ಮತ್ತು ಅಘೋಷಿತ ನೀತಿ ಸಂಹಿತೆಗಳಿವೆ. ವಿಚ್ಛೇದಿತೆಯರು ಮತ್ತು ವಿಧವೆಯರು ಮರು ಮದುವೆಯಾಗುವುದು ಇವತ್ತಿನ ಸಮಾಜದಲ್ಲಿ ತೀರಾ ಸರಳ ಅಲ್ಲ. ಇವರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಆತಂಕ ಇದೆ. ಅಮಂಗಲೆಯರು, ಅಮಾನ್ಯರು, ಅಪಶಕುನರು.. ಮುಂತಾದ ಕಳಂಕಲೇಪಿತ ಬಿರುದುಗಳೊಂದಿಗೆ ಸಮಾಜ ಇವರನ್ನು ಮುಖ್ಯ ವಾಹಿನಿಯಿಂದ ಹೊರಗಿಟ್ಟಿದೆ ಮತ್ತು ಹೊರಗಿಡುತ್ತಿದೆ. ಅದೇ ವೇಳೆ ಪುರುಷನಿಗೆ ಈ ಸಮಸ್ಯೆ ಇಲ್ಲ. ಆತ ಅಮಂಗಲ ಆಗಲಾರ. ಬಹುಶಃ, ಭಾರತೀಯರ ಸಾಮಾಜಿಕ ಬದುಕನ್ನು ಅಧ್ಯಯನ ನಡೆಸುವ ಯಾರಿಗೇ ಆಗಲಿ ಸುಲಭದಲ್ಲೇ ಮನವರಿಕೆಯಾಗುವ ಅಂಶವಿದು. ಪ್ರವಾದಿ ಮುಹಮ್ಮದ್(ಸ) ಮುಖ್ಯವಾಗುವುದೂ ಇಲ್ಲೇ. ಅವರು ಈ ದೃಷ್ಟಿಕೋನಕ್ಕೆ ಪರ್ಯಾಯವಾದ ದೃಷ್ಟಿಕೋನವನ್ನು ಮಂಡಿಸಿದರು. ಮಾತ್ರವಲ್ಲ, ಪ್ರಯೋಗಕ್ಕೂ ಒಳಪಡಿಸಿದರು ಮತ್ತು ಯಶಸ್ವಿಯೂ ಆದರು. ಬಡ್ಡಿರಹಿತ ಮತ್ತು ಶೋಷಣೆರಹಿತ ಸಿದ್ಧಾಂತವನ್ನು ಅವರು ಮಕ್ಕಾ ಮತ್ತು ಮದೀನಾದಲ್ಲಿ ಪ್ರತಿಪಾದಿಸುವಾಗ ಅವರ ಜೊತೆ ಪತ್ನಿಯರಿದ್ದರು. ಮಕ್ಕಳಿದ್ದರು. ಅವರ ಈ ವಿಚಾರಧಾರೆಗೆ ಮೊದಲು ಬೆಂಬಲ ಸೂಚಿಸಿದ್ದೇ ಅವರ ಪತ್ನಿ. ಕೇವಲ 23 ವರ್ಷಗಳ ಸಣ್ಣ ಅವಧಿಯೊಳಗೆ ಅವರು ತನ್ನ ಆ ವಿಚಾರಧಾರೆಯನ್ನು ಮಕ್ಕಾ-ಮದೀನಾದ ಲಕ್ಷಾಂತರ ಮಂದಿಯ ವಿಚಾರಧಾರೆಯಾಗಿ ಬದಲಾಯಿಸಿದರು. ಐತಿಹಾಸಿಕವಾಗಿ ಅತ್ಯಂತ ಹೃಸ್ವ ಅವಧಿಯಲ್ಲಿ ಸಾಧಿಸಲಾದ ಮನಃಪರಿವರ್ತನೆ ಇದು. ಅವರು ಹೆಣ್ಣನ್ನು ತೊಡಕಾಗಿ ಪರಿಗಣಿಸಲಿಲ್ಲ. ಬೆಳಕಾಗಿ ಪರಿಗಣಿಸಿದರು. ಹೆಣ್ಣನ್ನು ಹೊರತುಪಡಿಸಿದ ಜೀವನ ಕ್ರಮವನ್ನು ಅವರು ಅಮಾನ್ಯಗೊಳಿಸಿದರು. ಅವರು ಮೊದಲು ವಿವಾಹವಾದದ್ದೇ ತನಗಿಂತ 15 ವರ್ಷ ಹಿರಿಯಳಾದ, ವಿಚ್ಛೇದಿತಳಾದ ಮತ್ತು ಮೂವರು ಮಕ್ಕಳ ತಾಯಿಯಾದ ಹೆಣ್ಣನ್ನು. ಆ ಮೂವರು ಮಕ್ಕಳನ್ನು ಪ್ರವಾದಿ ಎಷ್ಟಂಶ ಪ್ರೀತಿಸಿದರೆಂದರೆ, ಪ್ರವಾದಿಯವರನ್ನು(ಸ) ವಿರೋಧಿಗಳ ಹಲ್ಲೆಯಿಂದ ರಕ್ಷಿಸುವ ಭರದಲ್ಲಿ ಹಾರಿಸ್ ಎನ್ನುವ ಮಗ ಪ್ರಾಣವನ್ನೇ ಒತ್ತೆ ಇಟ್ಟರು. ಪ್ರವಾದಿ ಮದುವೆಯಾದವರ ಪಟ್ಟಿಯಲ್ಲಿ ಕನ್ಯೆ ಇರುವುದು ಒಬ್ಬರೇ. ಉಳಿದವರೆಲ್ಲ ಯೌವನವನ್ನು ದಾಟಿದ ವಿಧವೆಯರೋ ವಿಚ್ಛೇದಿತೆಯರೋ ಆಗಿದ್ದರು. ಒಂದು ರೀತಿಯಲ್ಲಿ, ಅವರು ವಿಧವೆಯರು ಮತ್ತು ವಿಚ್ಛೇದಿತೆಯನ್ನು ತನ್ನ ಕೌಟುಂಬಿಕ ವ್ಯಾಪ್ತಿಯೊಳಗೆ ತಂದರು. ಭದ್ರತೆಯನ್ನು ಮತ್ತು ಆಶ್ರಯವನ್ನು ಒದಗಿಸಿದರು. ಇದು ಅಂದಿನ ಕಾಲದಲ್ಲಿ ಅತ್ಯಂತ ಅಚ್ಚರಿಯ ನಡೆ. ವಿಧವೆಯರು ಮತ್ತು ವಿಚ್ಛೇದಿತೆಯರ ಬಗೆಗಿನ ಪ್ರವಾದಿಯವರ ಈ ದೃಷ್ಟಿಕೋನ ಅಂದಿನ ಸಮಾಜವನ್ನು ಎಷ್ಟಂಶ ಪ್ರಭಾವಿಸಿತೆಂದರೆ, ಸಮಾಜದ ಒಟ್ಟು ಚಿಂತನೆಯ ಧಾಟಿಯೇ ಬದಲಾಯಿತು. ಅದು ವಿಧವೆಯರು ಮತ್ತು ವಿಚ್ಛೇದಿತೆಯರ ಮದುವೆಗೆ ಆದ್ಯತೆಯನ್ನು ನೀಡುವಲ್ಲಿ ವರೆಗೆ ಬೆಳೆಯಿತು. ಅವರು ಮಂಗಳೆಯರಾದರು. ಮುಖ್ಯವಾಹಿನಿಯ ಜೊತೆಗೇ ಗುರುತಿಸಿಕೊಂಡರು.
ಸದ್ಯ ಹೆಣ್ಣು ಚರ್ಚೆಯಲ್ಲಿದ್ದಾಳೆ ಮತ್ತು ಈ ಚರ್ಚೆಯು ಪ್ರವಾದಿ ಮುಹಮ್ಮದ್‍ರನ್ನೇ(ಸ) ಅಪರಾಧಿ ಸ್ಥಾನದಲ್ಲಿ ಕೂರಿಸುವಷ್ಟು ಏಕಮುಖವಾಗಿ ನಡೆಯುತ್ತಿದೆ. ಹೆಣ್ಣನ್ನು ಅಡ್ಡಿಯೆಂದು ಪರಿಗಣಿಸಿ ದೂರ ತಳ್ಳಿದವರೇ ಪ್ರವಾದಿಯವರ ಮಹಿಳಾ ನಿಲುವನ್ನು ದೂರುತ್ತಿದ್ದಾರೆ. ವಿಧವೆ ಮತ್ತು ವಿಚ್ಛೇದಿತೆಯರನ್ನು ಅಮಂಗಲೆಯಾಗಿಸಿಕೊಂಡವರೇ ಈ ಮಹಿಳೆಯರಿಗೆ ಆಶ್ರಯವನ್ನು ನೀಡಿದ ವಿಚಾರಧಾರೆಯಲ್ಲಿ ಮಹಿಳಾ ಶೋಷಣೆಯನ್ನು ಹುಡುಕುತ್ತಿದ್ದಾರೆ.
ಸರಿ-ತಪ್ಪುಗಳನ್ನು ನೀವೇ ವಿಶ್ಲೇಷಿಸಿ.
No comments:
Post a Comment