Wednesday, 22 February 2017

ಪಚ್ಚ ಚೆಡಿ ಎಂಬ ಎಲೆ ಮತ್ತು ಎತ್ತಿನಹೊಳೆ

        ಕಾಡು ಮತ್ತು ನಾಡು ಸದಾ ಸುದ್ದಿಯಲ್ಲಿರುವ ಎರಡು ಕ್ಷೇತ್ರಗಳು. ನಾಡಿನಲ್ಲಿರುವ ಮನುಷ್ಯರ ಕುತೂಹಲವು ಅವರನ್ನು ಕಾಡು ಪ್ರವೇಶಿಸುವಂತೆ ಮಾಡಿದರೆ, ಕಾಡಿನಲ್ಲಿರುವ ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡೋ ಅಥವಾ ದಾರಿ ತಪ್ಪಿಯೋ ನಾಡು ಪ್ರವೇಶಿಸುತ್ತವೆ. ಹೀಗೆ ಒಂದು ಕಡೆ ಕುತೂಹಲ ಮತ್ತು ಇನ್ನೊಂದು ಕಡೆ ಆಹಾರ ಹುಡುಕಾಟದ ಈ ಆಟ ನಡೆಯುತ್ತಲೇ ಇದೆ. ಇತ್ತೀಚೆಗೆ ವಿಜ್ಞಾನಿಗಳ ಒಂದು ತಂಡ ಕೇರಳದ ಪಶ್ಚಿಮ ಘಟ್ಟವನ್ನು ಪ್ರವೇಶಿಸಿತು. ಅದರ ನೇತೃತ್ವವನ್ನು ವಹಿಸಿದ್ದು ರಾಜಶೇಖರನ್ ಎಂಬವರು. ಆ ತಂಡದಲ್ಲಿ ಕಾಡುತ್ಪನ್ನಗಳ ಬಗ್ಗೆ, ಅಲ್ಲಿರುವ ಗಿಡಗಳ ಬಗ್ಗೆ ಮತ್ತು ಕಾಡಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕುತೂಹಲ ಇತ್ತೇ ಹೊರತು ಇದಮಿತ್ಥಂ ಅನ್ನುವ ಗುರಿಯೇನೂ ಇರಲಿಲ್ಲ. ಈ ತಂಡ ಕಾಡಿನಲ್ಲಿ ಬದುಕುತ್ತಿರುವ ಆದಿವಾಸಿಗಳನ್ನೂ ಭೇಟಿಯಾಯಿತು. ಕುಟ್ಟಮಲ ಕುಣಿಯನ್ ಎಂಬ ಹಿರಿಯ ಆದಿವಾಸಿ ಇವರಲ್ಲಿ ಒಬ್ಬರು. ಕೋಲಾನೈಕನ್ ಆದಿವಾಸಿ ಪಂಗಡಕ್ಕೆ ಸೇರಿರುವ ಆ ವ್ಯಕ್ತಿಯ ಎದೆಯ ಉದ್ದಕ್ಕೂ ಗಂಭೀರ ಗಾಯದ ಗುರುತು ಕಾಣಿಸುತ್ತಿತ್ತು. ವಿಜ್ಞಾನಿಗಳ ತಂಡ ಆ ಬಗ್ಗೆ ಕುತೂಹಲ ವ್ಯಕ್ತಪಡಿಸಿತು. ಆಗ ಆ ಹಿರಿಯ ವ್ಯಕ್ತಿ ಒಂದು ಘಟನೆಯನ್ನು ವಿವರಿಸಿದರು. ಆ ವ್ಯಕ್ತಿಯ ಮಟ್ಟಿಗೆ ಅದೊಂದು ಸಾಮಾನ್ಯ ಘಟನೆ. ಕೆಲವು ವರ್ಷಗಳ ಹಿಂದೆ ಅವರ ಮೇಲೆ ಕರಡಿಯೊಂದು ದಾಳಿ ನಡೆಸಿತ್ತು. ಪರಸ್ಪರ ಘರ್ಷಣೆಗಳೂ ನಡೆದುವು. ಒಂದು ಹಂತದಲ್ಲಿ ಕರಡಿಯು ಈ ಕುಟ್ಟುಮಲ ಕುಣಿಯನ್‍ರನ್ನು ನೆಲಕ್ಕೆ ಬೀಳಿಸಿತು. ಎದೆಯನ್ನು ಸೀಳುವ ಪ್ರಯತ್ನ ನಡೆಸಿತು. ಎದೆಗೆ ಚುಚ್ಚಿದ ಪರಿಣಾಮದಿಂದ ರಕ್ತ ಹರಿಯಿತು. ಆದರೂ ಕುಣಿಯನ್ ಮೇಲೆದ್ದು ನಿಂತರಲ್ಲದೇ ಪ್ರತಿ ಹೋರಾಟದ ಮೂಲಕ ಕರಡಿಯನ್ನು ಸಾಯಿಸಿದರು. ಬಳಿಕ ಎದೆಯ ಉದ್ದಕ್ಕೂ ಆದ ಆಳ ಗಾಯಕ್ಕೆ ‘ಪಚ್ಚ ಚೆಡಿ’ (Neurocalyx calycinus ) ಎಂಬ ಹೆಸರಿನ ಎಲೆಗಳಿಂದ ಮಾಡಲಾದ ನಾಟಿಮದ್ದನ್ನು ಹಚ್ಚಿದರು. ಗಾಯವು ಸಂಪೂರ್ಣವಾಗಿ ಗುಣವಾಯಿತು. ಕುಣಿಯನ್‍ರ ಮಾತಿನಿಂದ ಪ್ರಭಾವಿತವಾದ ಈ ತಂಡ, ಆ ಗಿಡಮೂಲಿಕೆಯ ಮೇಲೆ ಸಂಶೋಧನೆಯನ್ನು ಕೈಗೊಂಡಿತು. ಸಾಮಾನ್ಯವಾಗಿ ಸುಸಜ್ಜಿತ ಆಸ್ಪತ್ರೆಯಲ್ಲಿ ದೊಡ್ಡಮಟ್ಟದ ಚಿಕಿತ್ಸೆಯನ್ನು ಪಡೆಯಬೇಕಿದ್ದ ವ್ಯಕ್ತಿಯೋರ್ವ ಕೇವಲ ಗಿಡಮೂಲಿಕೆಯಿಂದ ಗುಣಮುಖನಾಗುವುದನ್ನು ಆ ತಂಡಕ್ಕೆ ಸುಲಭದಲ್ಲಿ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಶೋಧನೆ ಮುಂದುವರಿದಂತೆ ವಿಜ್ಞಾನಿಗಳೂ ಅಚ್ಚರಿಪಟ್ಟರು. ಆ ಗಿಡಮೂಲಿಕೆಯ ಪೇಟೆಂಟ್‍ಗೆ ಅರ್ಜಿ ಹಾಕಿದರು. ವಿಶೇಷ ಏನೆಂದರೆ, ಆ ಗಿಡಮೂಲಿಕೆಯಲ್ಲಿ ಒಂದಕ್ಕಿಂತ ಹೆಚ್ಚು ರೋಗನಿವಾರಕ ಗುಣಗಳಿದ್ದುವು. ಅದರಲ್ಲಿ ಕ್ಯಾನ್ಸರ್ ವಿರೋಧಿ ಅಂಶವೂ ಒಂದು. ಗಾಯಗಳು, ಸುಟ್ಟ ಗಾಯಗಳನ್ನು ಒಣಗಿಸುವ ಪರಿಣಾಮಕಾರಿ ಅಂಶಗಳು ಈ ಗಿಡಮೂಲಿಕೆಯಲ್ಲಿದ್ದುವು. ರಾಸಾಯನಿಕಗಳನ್ನು ಬಳಸಿ ಮಾಡಲಾಗುವ ಔಷಧಿಗಳಷ್ಟೇ ಸಾಮರ್ಥ್ಯವು ಈ ಗಿಡಮೂಲಿಕೆಯಲ್ಲಿರುವುದನ್ನೂ ಆ ವಿಜ್ಞಾನಿಗಳ ಗುಂಪು ಪತ್ತೆ ಹಚ್ಚಿತು. ಕೇರಳದ ನೀಲಾಂಬರ ಅರಣ್ಯದಲ್ಲಿ ಪತ್ತೆ ಹಚ್ಚಲಾದ ಪಚ್ಚ ಚೆಡಿ ಎಂಬ ಹೆಸರಿನ ಈ ಗಿಡಮೂಲಿಕೆಯ ಮೇಲೆ ಸದ್ಯ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
     ಕಾಡಿನ ಕುರಿತಂತೆ ನಾಡಿನಲ್ಲಿರುವ ಅನೇಕರಲ್ಲಿ ಒಂದು ಉಡಾಫೆಯ ನಿಲುವು ಇದೆ. ಪಶ್ಚಿಮ ಘಟ್ಟ ನಾಶದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವಾಗಲೂ ಈ ಉಡಾಫೆತನ ವ್ಯಕ್ತಗೊಳ್ಳುವುದಿದೆ. ಅರಣ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡದ ಅಭಿವೃದ್ಧಿ ಪರಿಕಲ್ಪನೆ ಇವತ್ತಿನದು. ಎಲ್ಲವನ್ನೂ ಭೋಗದ ದೃಷ್ಟಿಯಿಂದ ವ್ಯಾಖ್ಯಾನಿಸುವ ಕಲೆ ನಾಡು ಜೀವಿಗೆ ಕರಗತವಾಗಿದೆ. ಕಾಂಕ್ರೀಟು ನಾಡಿಗಾಗಿ ಮರಗಳು ನಾಶವಾಗುತ್ತವೆ. ಭೂ ಸಂಪತ್ತಿಗಾಗಿ ಅರಣ್ಯವೇ ಬರಡಾಗುತ್ತದೆ. ಅರಣ್ಯಗಳ ದೌರ್ಬಲ್ಯ ಏನೆಂದರೆ, ಅವುಗಳಿಗೆ ಮಾತು ಬರದೇ ಇರುವುದು. ಪಶ್ಚಿಮ ಘಟ್ಟವನ್ನೇ ಎತ್ತಿಕೊಳ್ಳಿ. ಅಲ್ಲಿಯ ಪ್ರಾಕೃತಿಕ ಸಂಪತ್ತು ಯಾವ ಬಗೆಯದು? ಏನೆಲ್ಲ ಗಿಡಮೂಲಿಕೆಗಳು ಅಲ್ಲಿರಬಹುದು? ನಮ್ಮ ಅರಿವಿಗೆ ಬಾರದ ಎಷ್ಟೆಲ್ಲ ಪ್ರಾಣಿ ಸಂಕುಲಗಳು, ಸಸ್ಯ ಪ್ರಭೇದಗಳು ಅಲ್ಲಿರಬಹುದು? ಮನುಷ್ಯ ಪ್ರಕೃತಿಬದ್ಧವಾಗಿ ಬದುಕಿದರೆ, ಕಾಯಿಲೆಗಳಿಗೆ ಮದ್ದನ್ನೂ ಪ್ರಕೃತಿಯೇ ಒದಗಿಸಬಲ್ಲುದು. ನಾಡು ಮತ್ತು ಕಾಡು ಪರಸ್ಪರ ಪೂರಕವಾದುದು. ಒಂದು ಇನ್ನೊಂದನ್ನು ಅವಲಂಬಿಸಿಕೊಂಡೇ ಜೀವಿಸುತ್ತವೆ. ಅಷ್ಟಕ್ಕೂ, ಪಶ್ಚಿಮಘಟ್ಟವನ್ನು ಸೀಳಿ ಎತ್ತಿನಹೊಳೆ ಯೋಜನೆಯ ಜಾರಿಗೆ ನಾವೊಂದು ದಾರಿಯನ್ನು ಕಂಡುಕೊಂಡೆವು ಎಂದೇ ಇಟ್ಟುಕೊಳ್ಳೋಣ. ಆದರೆ ಈ ದಾರಿ ಎಷ್ಟೆಲ್ಲ ಸಸ್ಯ ಪ್ರಭೇದಗಳ ಕೊಲೆಗೆ ಕಾರಣವಾಗಬಹುದು? ಪ್ರಾಣಿ, ಕೀಟ ಪ್ರಬೇಧಗಳ ನಾಶಕ್ಕೆ ಹೇತುವಾಗಬಹುದು? ಅರಣ್ಯವೆಂದರೆ ನೀರಿನ ಉಗಮ ಭೂಮಿ. ಅರಣ್ಯವನ್ನೇ ಸೀಳುವುದರಿಂದ ಅಥವಾ ಅದರ ಮೇಲೆ ದಾಳಿ ಮಾಡುವುದರಿಂದ ಈ ನೀರ ಒರತೆಯ ಮೇಲೆ ಏನೆಲ್ಲ ಪರಿಣಾಮಗಳಾಗಬಹುದು? ಕಾಡು ಎಂಬುದು ನಾಡಿನಲ್ಲಿರುವ ಜೀವಿಗಳು ಬೇಕಾಬಿಟ್ಟಿಯಾಗಿ ಬಳಸಬಹುದಾದ ಉಂಬಳಿ ಭೂಮಿಯೇನೂ ಅಲ್ಲವಲ್ಲ.
     ತಂತ್ರಜ್ಞಾನಗಳ ಮೇಲೆ ಮಾನವನ ವಿಪರೀತ ಅವಲಂಬನೆಯು ಎರಡು ರೀತಿಯ ಅಡ್ಡ ಪರಿಣಾಮಗಳಿಗೆ ಕಾರಣವಾಯಿತು. ಒಂದು- ಅದು ಕಾಡು ನಾಶಕ್ಕೆ ವೇಗವನ್ನು ಒದಗಿಸಿದರೆ ಇನ್ನೊಂದು- ಕಾಂಕ್ರೀಟು ಜಗತ್ತಿಗೆ ದೊಡ್ಡ ರೀತಿಯಲ್ಲಿ ಅಡಿಪಾಯವನ್ನು ಹಾಕಿತು. ಕಾಂಕ್ರೀಟು ಜಗತ್ತಿಗೆ ಬೇಕಾದ ಸಂಪನ್ಮೂಲಗಳಿರುವುದು ಭೂಮಿಯ ಎದೆಯಲ್ಲಿ. ಅದನ್ನು ಸೀಳುವುದರ ಹೊರತು ಕಾಂಗ್ರೀಟು ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುಲಭ ಪರಿಹಾರವಾಗಿ ಕಾಣಿಸಿದ್ದು ಕಾಡುಗಳು. ಅವುಗಳ ಮೇಲೆ ದಾಳಿ ನಡೆಸಿದರೆ, ಸೀಳಿದರೆ ಅಥವಾ ಅದರೊಳಗಿರುವ ಸಂಪನ್ಮೂಲವನ್ನು ಕಿತ್ತುಕೊಂಡರೂ ಅದು ಪ್ರತಿಭಟಿಸುವ ಸ್ಥಿತಿಯಲ್ಲಿ ಇಲ್ಲ ಎಂಬುದು ನಾಡುಜೀವಿಗಳಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಕಾಡು ಕೇಂದ್ರಿತ ಅಭಿವೃದ್ಧಿ ಚಟುವಟಿಕೆಗಳು ಎಗ್ಗಿಲ್ಲದೇ ನಡೆದುವು. ಕಾಡನ್ನು ನಾಶ ಮಾಡಿ ನಾಡು ಕಟ್ಟುವ ನೀಲನಕ್ಷೆಗಳು ತಯಾರಾದುವು. ಈ ಅಭಿವೃದ್ಧಿಯ ಹೊಡೆತಕ್ಕೆ ಸಿಕ್ಕಿ ದಿಕ್ಕು ತಪ್ಪಿದ ಪ್ರಾಣಿಗಳನ್ನು ‘ಊರಿಗೆ ದಾಳಿಯಿಟ್ಟ ಪ್ರಾಣಿ’ಗಳ ಪಟ್ಟಿಗೆ ಸೇರಿಸಲಾಯಿತು. ಕ್ರಮೇಣ ಊರಿನ ವಾತಾವರಣ ಹದಗೆಡತೊಡಗಿತು. ಕಂಡೂ ಕೇಳರಿಯದ ಹೊಸ ಬಗೆಯ ರೋಗಗಳು ನಾಡಲ್ಲಿ ಕಾಣಿಸಿಕೊಳ್ಳತೊಡಗಿದುವು. ಈ ರೋಗವನ್ನು ಗುಣಪಡಿಸುವುದಕ್ಕಾಗಿ ಸಂಶೋಧನೆಗಳು ನಡೆದುವು. ದುಬಾರಿ ಬೆಲೆಯ ಔಷಧಿಗಳು ಮಾರುಕಟ್ಟೆಗೆ ಬಂದುವು. ಒಂದು ಕಡೆ ಮಾನವನೇ ತಂತ್ರಜ್ಞಾನದ ಬಲದಿಂದ ಕಾಡು ನಾಶದಲ್ಲಿ ತೊಡಗಿದ. ದುಡ್ಡು ಸಂಪಾದಿಸಿದ. ಇನ್ನೊಂದು ಕಡೆ, ಆ ನಾಶದ ಅಡ್ಡಪರಿಣಾಮವಾಗಿ ಕಾಣಿಸಿಕೊಂಡ ರೋಗಗಳಿಗೆ ಆ ದುಡ್ಡನ್ನು ವ್ಯಯ ಮಾಡುವ ಸಂದಿಗ್ಧಕ್ಕೂ ಸಿಲುಕಿದ. ಪ್ರಾಕೃತಿಕ ಸಮತೋಲನದ ಮೇಲೆ ಆಗುವ ಬಾಹ್ಯ ದಾಳಿಯ ಫಲಿತಾಂಶ ಇದು. ಆದ್ದರಿಂದ,
     ಕೇರಳದ ನೀಲಾಂಬರ ಅರಣ್ಯದಲ್ಲಿ ಸಿಕ್ಕ ‘ಪಚ್ಚ ಚೆಡಿ’ಯನ್ನು ನಮ್ಮ ಅಭಿವೃದ್ಧಿ ಪರಿಕಲ್ಪನೆಗೆ ಮುಖಾಮುಖಿಯಾಗಿಟ್ಟು ನೋಡಬೇಕಾಗಿದೆ. ಅರಣ್ಯವೆಂದರೆ ಬರೇ ಮರಗಳಲ್ಲ. ಅದು ನಾಡಿನ ಆರೋಗ್ಯವನ್ನು ಕಾಪಾಡುವ ಅಮೂಲ್ಯ ಸಂಪತ್ತು. ಮಾನವನು ಯಂತ್ರದ ಮುಷ್ಠಿಯಿಂದ ಹೊರಬಂದು ಚಿಂತಿಸಿದರೆ ಇದು ಖಂಡಿತ ಅರ್ಥವಾಗುತ್ತದೆ.


Monday, 13 February 2017

ಕಲ್ಲಡ್ಕವನ್ನು ಪ್ರತಿನಿಧಿಸಬೇಕಾದವರು ಯಾರು?


      ಕಲ್ಲಡ್ಕ - ಎರಡು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಅದರಲ್ಲಿ ಒಂದು ಕಾರಣವನ್ನು ವಿಕಿಪೀಡಿಯಾ ಹೇಳುತ್ತದೆ. ಗೂಗಲ್‍ನಲ್ಲಿ ಕಲ್ಲಡ್ಕ ಎಂದು ಬರೆದರೆ ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಒಂದು ಊರು ಎಂಬ ಮಾಹಿತಿ ಸಿಗುತ್ತದೆ. ಅದರ ಜೊತೆಗೇ KT (ಕಲ್ಲಡ್ಕ ಟೀ) ಬಹಳ ಹೆಸರುವಾಸಿ ಎಂದೂ ಅದು ಹೇಳುತ್ತದೆ. ಇನ್ನೊಂದು ಕಾರಣವನ್ನು ಸಮಾಜ ಹೇಳುತ್ತದೆ. ಅದು ಕಲ್ಲಡ್ಕ ಪ್ರಭಾಕರ ಭಟ್. ಈ ವರೆಗೆ ಕಲ್ಲಡ್ಕವು ಈ ಎರಡು ಕಾರಣಗಳ ಸುತ್ತಲೇ ಚರ್ಚೆಗೆ ಒಳಗಾಗುತ್ತಿತ್ತು. ವಾದ-ಪ್ರತಿವಾದ, ವಾಗ್ವಾದ, ಶ್ಲಾಘನೆಗಳಲ್ಲಿ ಕಲ್ಲಡ್ಕ ಟೀ (KT) ಮತ್ತು ಪ್ರಭಾಕರ ಭಟ್ಟರೇ ಕೇಂದ್ರ ಸ್ಥಾನದಲ್ಲಿದ್ದರು. ಆದರೆ ಕಳೆದವಾರ ಈ ರಂಗಮಂಟಪಕ್ಕೆ ವೆಂಕಪ್ಪ ಪೂಜಾರಿ ಎಂಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೋರ್ವರು ದಿಢೀರ್ ಪ್ರವೇಶಗೈದರು. ಮಾತ್ರವಲ್ಲ, ಕಲ್ಲಡ್ಕವನ್ನು ಪ್ರತಿನಿಧಿಸುವುದಕ್ಕೆ ಕಲ್ಲಡ್ಕ ಟೀ ಮತ್ತು ಪ್ರಭಾಕರ ಭಟ್ಟರಲ್ಲಿ ಯಾರು ಸೂಕ್ತ ಎಂಬುದನ್ನು ಅತ್ಯಂತ ಮನೋಜ್ಞವಾಗಿ ಸಮಾಜದ ಮುಂದಿಟ್ಟರು.
      ಮೇಸ್ತ್ರಿ ಕೆಲಸವನ್ನು ಬಲ್ಲ ವೆಂಕಪ್ಪ ಪೂಜಾರಿಯವರು 2016 ಮೇ ತಿಂಗಳಲ್ಲಿ ಉದ್ಯೋಗಕ್ಕೆಂದು ಕತರ್ ದೇಶಕ್ಕೆ ತೆರಳುತ್ತಾರೆ. ಓರ್ವ ಮಧ್ಯವಯಸ್ಕ ವ್ಯಕ್ತಿಯಾಗಿ ಮತ್ತು ಕಲ್ಲಡ್ಕದ ನಿವಾಸಿಯಾಗಿ ವೆಂಕಪ್ಪ ಪೂಜಾರಿಯವರಿಗೆ ಕಲ್ಲಡ್ಕ ಏನೆಂಬುದು ಚೆನ್ನಾಗಿಯೇ ಗೊತ್ತು. ಕಲ್ಲಡ್ಕ ಟೀ ಮತ್ತು ಪ್ರಭಾಕರ ಭಟ್ - ಎರಡರ ಬಗ್ಗೆಯೂ ಗೊತ್ತು. ಕರ್ನಾಟಕಕ್ಕೆ ಮಾತ್ರವಲ್ಲ, ಜಗತ್ತಿಗೇ KT ಒಂದು ವಿಶಿಷ್ಟ ಕೊಡುಗೆ. ಅದರಲ್ಲಿ ವಿಶೇಷ ಸ್ವಾದ ಇದೆ. ತಯಾರಿಯಲ್ಲಿ ಹೊಸತನವಿದೆ. ಅದು ಎಲ್ಲರನ್ನೂ ಸ್ವಾಗತಿಸುತ್ತದೆ. ಎಲ್ಲರನ್ನೂ ತೃಪ್ತಿಪಡಿಸುತ್ತದೆ. ಧರ್ಮ-ಜಾತಿ-ಕುಲ-ಗೋತ್ರ-ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲರೊಳಗೊಂದಾಗುವ ವಿಶಿಷ್ಟ ಗುಣವೊಂದು KTಯಲ್ಲಿದೆ. ಆದ್ದರಿಂದಲೇ, KTಯನ್ನು ಮಾರುವ ಕಲ್ಲಡ್ಕದ ನಿರ್ದಿಷ್ಟ ಹೊಟೇಲಿಗೆ ಮುಸ್ಲಿಮರೂ ಭೇಟಿ ಕೊಡುತ್ತಾರೆ. ಹಿಂದೂಗಳೂ ಭೇಟಿ ಕೊಡುತ್ತಾರೆ. ಮಹಿಳೆಯರೂ ಮಕ್ಕಳೂ ಪರಿಚಿತರೂ ಅಪರಿಚಿತರೂ.. ಎಲ್ಲರೂ KTಯನ್ನು ಪ್ರೀತಿಸುತ್ತಾರೆ. ಆದರೆ, ಇದಕ್ಕೆ ಯಾವ ರೀತಿಯಲ್ಲೂ ಹೊಂದದ ವ್ಯಕ್ತಿತ್ವ ಪ್ರಭಾಕರ ಭಟ್ಟರದ್ದು. ಅವರು ಮಾತಾಡಿದರೆ ಉಳಿದವರ ಮನಸ್ಸು ಮುದುಡುತ್ತದೆ. ಅವರ ಮಾತುಗಳು ಮುಸ್ಲಿಮರನ್ನು
   
ಇರಿಯುವಂತಿರುತ್ತದೆ. ಮಹಿಳೆಯರನ್ನು ಅವಮಾನಿಸುವಂತಿರುತ್ತದೆ. ಮಸೀದಿ, ಮದ್ರಸ, ಶರೀಅತ್, ಬುರ್ಖಾ, ಇಸ್ಲಾಮ್, ಮುಸ್ಲಿಮರ ತೆಗಳಿಕೆ ಇರುತ್ತದೆ. ಉದ್ದೇಶಪೂರ್ವಕ ಸುಳ್ಳುಗಳಿರುತ್ತದೆ. ಮುಸ್ಲಿಮ್ ಮತ್ತು ಇಸ್ಲಾಮನ್ನು ತೆಗಳುವುದನ್ನೇ ಅವರು ‘ಭಾಷಣ’ ಮಾಡಿಕೊಂಡಿರುತ್ತಾರೆ. ‘ಮುಸ್ಲಿಮರೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಡಿ’ ಎಂದು ನೇಮೋತ್ಸವ, ಜಾತ್ರೋತ್ಸವ, ಹಿಂದೂ ಸಮಾಜೋತ್ಸವಗಳಲ್ಲಿ ಅವರು ಬಹಿರಂಗವಾಗಿ ಕರೆ ಕೊಡುತ್ತಾರೆ. ಕಲ್ಲಡ್ಕದ ಹೃದಯ ಭಾಗದಲ್ಲಿದ್ದು ಸಮಾಜದ ಹೃದಯವನ್ನೇ ಒಡೆಯುವ ಕರೆಗಳು ಅಸಂಖ್ಯ ಬಾರಿ ಅವರಿಂದ ಹೊರಟಿವೆ. ಅವರ ಪ್ರತಿ ಮಾತೂ ಸಮಾಜವನ್ನು ಹಿಂದೂ ಮತ್ತು ಮುಸ್ಲಿಮ್ ಆಗಿ ಸದಾ ವಿಭಜಿಸುತ್ತಿರುತ್ತದೆ. ಕತರ್‍ಗೆ ಹೊರಟು ನಿಂತ ವೆಂಕಪ್ಪ ಪೂಜಾರಿಯವರು ಇದನ್ನು ಚೆನ್ನಾಗಿಯೇ ಬಲ್ಲರು. ಭಟ್ಟರ ಮಾತು ಮತ್ತು ಚಿತಾವಣೆಯಿಂದಾಗಿ ಕಲ್ಲಡ್ಕ ಎಷ್ಟು ಬಾರಿ ಉದ್ವಿಘ್ನಗೊಂಡಿದೆ ಹಾಗೂ ಏನೇನು ಅನಾಹುತಗಳಾಗಿವೆ ಎಂಬುದಕ್ಕೂ ಅವರು ಸಾಕ್ಷಿಯಾದವರು. KT ಪ್ರಸ್ತುತಪಡಿಸುವ ‘ಸರ್ವೇಜನಃ ಸುಖಿನೋ ಭವಂತು’ ಎಂಬ ಮನುಷ್ಯ ಪ್ರೇಮಿ ಮೌಲ್ಯವನ್ನು ‘ಮುಸ್ಲಿಮ್ ಜನಃ ಅಸುಖಿನೋ ಭವಂತು’ ಎಂದು ತಿರುಚುತ್ತಿರುವವರು ಪ್ರಭಾಕರ ಭಟ್ಟರು. ತನ್ನ ಊರು ಇಂಥ ವ್ಯಕ್ತಿಯೋರ್ವರಿಗೆ ಆಶ್ರಯ ನೀಡಿದೆ ಮತ್ತು ಅವರನ್ನು ಅನುಸರಿಸುವ ಒಂದು ವರ್ಗವೂ ಇಲ್ಲಿದೆ ಎಂಬುದು ಗೊತ್ತಿದ್ದುದರಿಂದಲೇ ವೆಂಕಪ್ಪ ಪೂಜಾರಿಯವರು ಕತರ್‍ನಲ್ಲಿ ಗೊಂದಲಕ್ಕೆ ಒಳಗಾದುದು. ಒಂದು ಕಡೆ, ತಾನು ಕೆಲಸ ನಿರ್ವಹಿಸುತ್ತಿದ್ದ ಕಂಪೆನಿ ಎರಡೇ ತಿಂಗಳಲ್ಲಿ ಬಾಗಿಲು ಮುಚ್ಚಿದೆ. ಸಂಬಳವನ್ನೂ ಪಾವತಿಸಿಲ್ಲ. ಇನ್ನೊಂದು ಕಡೆ, ತನ್ನ ಪಾಸ್‍ಪೋರ್ಟ್ ಮಾಲಕನ ಕೈಯಲ್ಲಿದೆ. ಆತ ಎಲ್ಲಿದ್ದಾನೋ ಗೊತ್ತಿಲ್ಲ. ಉಳಿದುಕೊಂಡಿದ್ದ ರೂಂನ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಕೈಯಲ್ಲಿ ಬಿಡಿಗಾಸೂ ಇಲ್ಲದೇ, ಹೊಟ್ಟೆ ತುಂಬಿಸುವುದಕ್ಕಾಗಿ ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ, ಗುಜರಿ ಅಂಗಡಿಗೆ ಮಾರಬೇಕಾದ ಮತ್ತು ರಾತ್ರಿಯನ್ನು ಮೋಂಬತ್ತಿ ಉರಿಸಿ ಕಳೆಯಬೇಕಾದ ದಯನೀಯ ಸ್ಥಿತಿಯಲ್ಲಿ ವೆಂಕಪ್ಪ ಪೂಜಾರಿಯವರನ್ನು ಅತ್ಯಂತ ಕಾಡಿರಬಹುದಾದ ವ್ಯಕ್ತಿತ್ವವೆಂದರೆ ಪ್ರಭಾಕರ ಭಟ್ಟರದ್ದು. ಯಾಕೆಂದರೆ, ಭಟ್ಟರು ಪ್ರತಿಪಾದಿಸುವ ಜೀವನ ಸೂತ್ರದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಮಾತ್ರವಲ್ಲ, ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಪಣತೊಟ್ಟ ಸಮುದಾಯವಾಗಿ ಅವರು ಮುಸ್ಲಿಮರನ್ನು ಚಿತ್ರಿಸುತ್ತಿದ್ದರು. ಆದ್ದರಿಂದ, ವೆಂಕಪ್ಪ ಪೂಜಾರಿಯವರಲ್ಲಿ ಮುಸ್ಲಿಮರ ಬಗ್ಗೆ ಒಂದಿಷ್ಟು ಆತಂಕ ಮನೆ ಮಾಡಿದ್ದಿದ್ದರೆ ಅದನ್ನು ಅಸಹಜ ಎನ್ನಬೇಕಾಗಿಲ್ಲ. ಅದೇ ವೇಳೆ, ತನ್ನೂರಿನ ಪ್ರಭಾಕರ ಭಟ್ಟರಿಂದ ತನಗೆ ನೆರವು ಲಭ್ಯವಾದೀತು ಎಂಬ ನಿರೀಕ್ಷೆಯನ್ನು ಅವರು ಇಟ್ಟುಕೊಂಡಿದ್ದರೂ ಅದೂ ಅಸಾಧುವಲ್ಲ. ಆದರೆ ಕತರ್‍ನಲ್ಲಿರುವ ಕಲ್ಲಡ್ಕದ ಆಸುಪಾಸಿನ ಕೆಲವು ಮುಸ್ಲಿಮ್ ಯುವಕರು ಒಂದು ದಿನ ಅವರನ್ನು ಹುಡುಕಿಕೊಂಡು ಬಂದರು. ಇಂಡಿಯನ್ ಸೋಶಿಯಲ್ ಫಾರಂ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡಿರುವ ಈ ಯುವಕರು ವೆಂಕಪ್ಪ ಪೂಜಾರಿಯವರನ್ನು ತಮ್ಮ ಮನೆಯ ಸದಸ್ಯನಂತೆ ತಮ್ಮ ಮನೆಯಲ್ಲೇ ಇರಿಸಿಕೊಂಡರು. ಸುಡಾನ್ ಮೂಲದ ಕಂಪೆನಿಯ ಮಾಲಕನನ್ನು ಸಂಪರ್ಕಿಸಿ ಪಾಸ್‍ಪೋರ್ಟ್ ಅನ್ನು ಮರಳಿಸಿದರು. ಭಾರತಕ್ಕೆ ಮರಳಲು ವೆಂಕಪ್ಪ ಪೂಜಾರಿಯವರಿಗಿದ್ದ ಕಾನೂನು ತೊಡಕನ್ನು ನಿವಾರಿಸಿದರು. ವಿಮಾನದ ಟಿಕೇಟನ್ನು ಖರೀದಿಸಿ ಊರಿಗೆ ಕಳುಹಿಸಿಕೊಟ್ಟರು. ವಿಶೇಷ ಏನೆಂದರೆ, ಈ ಇಡೀ ಪ್ರಕ್ರಿಯೆಯಲ್ಲಿ ಪ್ರಭಾಕರ ಭಟ್ಟರ ಪಾತ್ರ ಶೂನ್ಯಾತಿ ಶೂನ್ಯ. ಕನಿಷ್ಠ ವೆಂಕಪ್ಪ ಪೂಜಾರಿಯವರನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಟ್ಟ ಮುಸ್ಲಿಮ್ ಯುವಕರಿಗೆ ಅವರು ಕೃತಜ್ಞತೆಯನ್ನೂ ಸಲ್ಲಿಸಿಲ್ಲ. ವೆಂಕಪ್ಪರನ್ನು ಭೇಟಿಯಾದ ಬಗ್ಗೆ ವಿವರಗಳು ಈವರೆಗೂ ಲಭ್ಯವಾಗಿಲ್ಲ. ಆದ್ದರಿಂದಲೇ,
      ಸಾಧ್ಯವಾದರೆ ವೆಂಕಪ್ಪ ಪೂಜಾರಿಯವರು ಭಟ್ಟರನ್ನೊಮ್ಮೆ ಭೇಟಿಯಾಗಬೇಕು. ನಿಮ್ಮ ನೀತಿ-ಸಂಹಿತೆ ಎಷ್ಟು ಅಪಾಯಕಾರಿ ಮತ್ತು ಯಾವ ಕಾರಣಕ್ಕಾಗಿ ಅದು ಮನುಷ್ಯ ವಿರೋಧಿ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಬೇಕು. ನಿಜವಾಗಿ, ವೆಂಕಪ್ಪ ಪೂಜಾರಿ ‘ಧರ್ಮ’ದ ಸಂಕೇತ. ಪ್ರಭಾಕರ ಭಟ್ ಪ್ರತಿಪಾದಿಸುತ್ತಿರುವುದು ‘ಅಧರ್ಮ’ ಎಂಬುದನ್ನು ಸಾರುತ್ತಿರುವುದರ ಸಂಕೇತವೂ ಹೌದು. ಅಷ್ಟಕ್ಕೂ, ಹಿಂದೂ ಎಂಬ ಕಾರಣಕ್ಕಾಗಿ ವೆಂಕಪ್ಪ ಪೂಜಾರಿಯವರನ್ನು ಆ ಮುಸ್ಲಿಮ್ ಯುವಕರು ತಿರಸ್ಕರಿಸಿರುತ್ತಿದ್ದರೆ ಖಂಡಿತ ಅದು ಅಧರ್ಮ ಆಗುತ್ತಿತ್ತು. ಕ್ರೌರ್ಯ ಎನಿಸಿಕೊಳ್ಳುತ್ತಿತ್ತು. ಆದ್ದರಿಂದಲೇ ಮುಸ್ಲಿಮ್ ಯುವಕರು ಅಭಿನಂದನೆಗೆ ಅರ್ಹರು. ಪ್ರಭಾಕರ್ ಭಟ್ ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದರ ತಪ್ಪುಗಳನ್ನು ಆ ಮುಸ್ಲಿಮ್ ಯುವಕರು ಅತ್ಯಂತ ನಯವಾಗಿ ಸ್ಪಷ್ಟಪಡಿಸಿದ್ದಾರೆ.
      ಯಾವ ಊರಲ್ಲಿ ಮನುಷ್ಯದ್ವೇಷಿ ಸಿದ್ಧಾಂತವನ್ನು ಪ್ರತಿಪಾದಿಸಲಾಗುತ್ತಿದೆಯೋ ಅದೇ ಊರಲ್ಲಿ ಆ ಸಿದ್ಧಾಂತದ ಪರಾಜಯವನ್ನು ಬಿಂಬಿಸುವ ಪ್ರತ್ಯಕ್ಪ ಸಾಕ್ಷಿಯಾಗಿ ನಾವು ವೆಂಕಪ್ಪ ಪೂಜಾರಿಯವರನ್ನು ಪರಿಗಣಿಸಬೇಕು. ಅವರು ಮನುಷ್ಯಪ್ರೇಮಿ ಸಿದ್ಧಾಂತದ ರಾಯಭಾರಿ. ಮುಸ್ಲಿಮರು ಮತ್ತು ಹಿಂದೂಗಳು ವೈರಿಗಳಾಗಬಾರದು ಎಂಬುದನ್ನು ಸಾರುವ ಸಂಕೇತ. KTಯ ಗುಣವೂ ಅದುವೇ. ಅದರ ಸ್ವಾದಕ್ಕೆ ಧರ್ಮ ಭೇದವಿಲ್ಲ. ಅದು ಮನುಷ್ಯರೆಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಇದನ್ನು ಸಹಿಸದವರೇ ಪ್ರಭಾಕರ್ ಭಟ್ ಆಗುತ್ತಾರೆ. ಅವರನ್ನು ವೆಂಕಪ್ಪ ಪೂಜಾರಿಯಂಥ ಸಾಮಾನ್ಯರಲ್ಲಿ ಸಾಮಾನ್ಯರು ಮತ್ತೆ ಮತ್ತೆ ಸೋಲಿಸುತ್ತಲೂ ಇರುತ್ತಾರೆ. ಅಧರ್ಮ ಸೋಲಲೇಬೇಕಾದದ್ದು. ಅದು ಸದಾ ಸೋಲುತ್ತಲೇ ಇರಲಿ.


Tuesday, 7 February 2017

ಮೂತ್ರದಲ್ಲಿ ಚಿನ್ನ ಹುಡುಕುವವರ ಮಧ್ಯೆ...

      ಚಂದ್ರನ ಅಂಗಳದಲ್ಲಿ ಕೊನೆಯ ಬಾರಿ ಹೆಜ್ಜೆ ಊರಿದ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅಮೇರಿಕದ ಗಗನಯಾತ್ರಿ ಯುಗೆನೆ ಸೆರ್ನಾನ್ ಅವರ ನಿಧನದ ಎರಡು ದಿನಗಳ ಬಳಿಕ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಸಂಬಂಧಿಸಿ ಹೊಸ ಸಾಹಸವೊಂದಕ್ಕೆ ಕೈ ಹಾಕಿರುವ ಸುದ್ದಿ ಪ್ರಕಟವಾಗಿದೆ. ಈ ಸಾಹಸಕ್ಕೆ ವಿಜ್ಞಾನಿಗಳು ಹವಾಯಿ ದ್ವೀಪವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರು ಸಮುದ್ರದಿಂದ 8,200 ಅಡಿ ಎತ್ತರದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಗೋಲಾಕೃತಿಯ ಗುಮ್ಮಟವನ್ನು ತಯಾರಿಸಿದ್ದಾರೆ. ಮುಂದಿನ 8 ತಿಂಗಳ ಕಾಲ 6 ಮಂದಿ ವಿಜ್ಞಾನಿಗಳು ಅದರೊಳಗೆ ಸಂಶೋಧನೆಯಲ್ಲಿ ನಿರತರಾಗುತ್ತಾರೆ. ಇದರ ಸಂಪೂರ್ಣ ವೆಚ್ಚವನ್ನು ಅಮೇರಿಕದ ವ್ಯೋಮ ಯಾನ ಸಂಸ್ಥೆ ‘ನಾಸಾ’ ಭರಿಸಲಿದೆ. ಮಂಗಳಗ್ರಹ ಯಾತ್ರೆಯ ಸುತ್ತ ಸಂಶೋಧನೆಯಲ್ಲಿ ತೊಡಗುವುದು ಇದರ ಉದ್ದೇಶ. ಮುಂದಿನ 8 ತಿಂಗಳ ಕಾಲ ಈ 6 ಮಂದಿ ವಿಜ್ಞಾನಿಗಳು ಹೊರ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿರುತ್ತಾರೆ. ತಾವು ವಾಸಿಸುವ ಗುಮ್ಮಟದೊಳಗೆ ಮಂಗಳ ಗ್ರಹದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿಕೊಂಡು ನಡೆಸುವ ಅಧ್ಯಯನ ಇದು. ಮಾನವ ಸಹಿತ ಮುಂದಿನ ಮಂಗಳ ಯಾನಕ್ಕೆ ನೆರವಾಗುವ ಗುರಿಯನ್ನು ವಿಜ್ಞಾನ ವಲಯ ಈ ಮೂಲಕ ಇಟ್ಟುಕೊಂಡಿದೆ.
        ನಿಜವಾಗಿ, ವರ್ಷದ 365 ದಿನಗಳಲ್ಲಿ ಅತ್ಯಂತ ಕಡಿಮೆ ಸುದ್ದಿಯಲ್ಲಿರುವ ಕ್ಷೇತ್ರವೆಂದರೆ ಅದು ವಿಜ್ಞಾನ ಕ್ಷೇತ್ರ. ರಾಜಕಾರಣಿಗಳು, ಸ್ವಘೋಷಿತ ಧರ್ಮರಕ್ಷಕರು, ಮಾನವ ದ್ವೇಷಿಗಳು.. ಇತ್ಯಾದಿಗಳು ಈ ಕ್ಷೇತ್ರದಲ್ಲಿ ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಥಟ್ಟನೆ ಹೇಳಿ ಬಿಡಬಹುದಾದರೂ ಇದುವೇ ಅಂತಿಮ ಅಲ್ಲ. ನಾವು ಇವತ್ತು ಅತ್ಯಂತ ಹೆಚ್ಚು ಅವಲಂಬಿತವಾಗಿರುವ ಮೊಬೈಲ್‍ನಿಂದ ಹಿಡಿದು ಟಿ.ವಿ.ಯ ವರೆಗೆ, ಕಂಪ್ಯೂಟರ್-ಇಂಟರ್‍ನೆಟ್‍ನಿಂದ ತೊಡಗಿ ಔಷಧಗಳ ವರೆಗೆ.. ಇವು ಯಾವುವೂ ರಾಜಕಾರಣಿಗಳ ನೇರ ಕೊಡುಗೆ ಅಲ್ಲ. ‘ಗೋವಿನ ಮೂತ್ರದಲ್ಲಿ ಚಿನ್ನದ ಅಂಶ ಇದೆ’ ಎಂದು ಓರ್ವ ರಾಜಕಾರಣಿ ಹೇಳಬಹುದೇ ಹೊರತು ಓರ್ವ ವಿಜ್ಞಾನಿ ಥಟ್ಟನೆ ಹೇಳಿಬಿಡಲಾರ. ಯಾಕೆ ಹೇಳಲಾರ ಅಂದರೆ, ಆತನ ಎದುರು ತಕ್ಷಣದ ಲಾಭ ಎಂಬುದಿಲ್ಲ. ಆತನಿಗೆ ಓಟು ಬೇಕಾಗಿಲ್ಲ. ಚಪ್ಪಾಳೆ ಗಿಟ್ಟಿಸಬಹುದಾದಂತಹ ಮಾತುಗಳು ಬೇಕಾಗಿಲ್ಲ. ಒಂದು ವಸ್ತುವಿನ ಸಂಶೋಧನೆಗಾಗಿ ಓರ್ವ ವಿಜ್ಞಾನಿ ವರ್ಷಗಳನ್ನು ಸವೆಸಿರುತ್ತಾನೆ. ಅಧ್ಯಯನಕ್ಕಾಗಿ ತನ್ನನ್ನೇ ಅರ್ಪಿಸಿರುತ್ತಾನೆ. ದುಡಿಮೆ, ದುಡಿಮೆ ಮತ್ತು ದುಡಿಮೆ.. ಇದು ವಿಜ್ಞಾನ ಕ್ಷೇತ್ರದ ಅತಿ ಮಹತ್ವಪೂರ್ಣ ಧ್ಯೇಯವಾಕ್ಯ. ಅದರ ಒಂದು ಸಣ್ಣ ಉದಾಹರಣೆಯನ್ನಷ್ಟೇ ನಾವು ಹವಾಯಿ ದ್ವೀಪದ ಸಂಶೋಧನಾ ಪ್ರಕ್ರಿಯೆಯಲ್ಲಿ ಕಾಣುತ್ತಿರುವುದು. ರಾತ್ರಿ ಬೆಳಗಾಗುವುದರೊಳಗೆ ಸ್ಟೀವ್ ಜಾಬ್ಸ್ ಗೆ ಐಪೋನನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗಿಲ್ಲ. ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಮಂಡಿಸುವುದರ ಹಿಂದೆ ನ್ಯೂಟನ್ ಅನೇಕ ನಿದ್ದೆಗಳನ್ನು ಕಳೆದಿರಬಹುದು. ಎಷ್ಟೋ ಏಕಾಂತದ ದಿನಗಳನ್ನು ಕಂಡಿರಬಹುದು. ಒಂದು ಮಾವು ತಲೆಗೆ ಬಿದ್ದ ತಕ್ಷಣ ನ್ಯೂಟನ್ ವಿಜ್ಞಾನಿಯಾಗುವುದಕ್ಕೆ ಸಾಧ್ಯವಿಲ್ಲ. ಆತ ಒಂದು ಗುಂಗಿನಲ್ಲಿದ್ದ. ಆ ಗುಂಗು ವರ್ಷಗಳ ವರೆಗೂ ಮುಂದುವರಿದಿರಬಹುದು. ಆ ದಿನಗಳಲ್ಲೆಲ್ಲ ಮಾವು ಮೇಲಿನಿಂದ ಕೆಳಕ್ಕೆ ಬೀಳುತ್ತಲೇ ಇತ್ತು. ಆದರೆ, ಒಂದು ಸಂದರ್ಭದಲ್ಲಿ ಆತನ ಹುಡುಕಾಟದ ಮನಸ್ಸನ್ನು ಅದು ತಾಗಿತು. ಒಂದು ವೇಳೆ, ನ್ಯೂಟನ್‍ನಲ್ಲಿ ರಾಜಕಾರಣಿಯ ಮನಸ್ಸಿರುತ್ತಿದ್ದರೆ ಏನಾಗುತ್ತಿತ್ತು? ಪ್ರತಿದಿನ ಆತ ಒಂದೊಂದು ಹೇಳಿಕೆಯನ್ನು ಕೊಡುವ ಸಕಲ ಸಾಧ್ಯತೆಯೂ ಇತ್ತು. ತಾನೊಂದು ಸಂಶೋಧನೆಯಲ್ಲಿದ್ದೇನೆ ಎಂದು ಒಂದು ದಿನ ಹೇಳುತ್ತಿದ್ದ. ಮರುದಿನ ಮತ್ತೊಂದು ಹೇಳಿಕೆಯನ್ನು ನೀಡುತ್ತಿದ್ದ. ಕೊನೆಗೆ ಸಂಶೋಧನೆ ಬಿಟ್ಟು ಜನಪ್ರಿಯ ಸುದ್ದಿ ಸೃಷ್ಟಿಸುವುದನ್ನೇ ಪೂರ್ಣಕಾಲಿಕ ಸಂಶೋಧನೆಯನ್ನಾಗಿ ಮಾಡಿಕೊಳ್ಳುತ್ತಿದ್ದ.
ರಾಜಕಾರಣಿಗಳು ಯಾವ ಪ್ರಾಣಿಯ ಮೂತ್ರದಲ್ಲಿ ಯಾವ್ಯಾವ ದಿವ್ಯೌಷಧವನ್ನು ಬೇಕಾದರೂ ಪತ್ತೆ ಹಚ್ಚಬಹುದು. ಆದರೆ ವಿಜ್ಡಾನ ಕ್ಷೇತ್ರದಿಂದ ಈ ಪವಾಡ ಸಾಧ್ಯವಿಲ್ಲ. ಅಲ್ಲಿ ದುಡಿಮೆ ಇದೆ. ಪ್ರಾಮಾಣಿಕ ಶ್ರಮ ಇದೆ. ಸದ್ಯದ ತುರ್ತು ಅಗತ್ಯ ಏನೆಂದರೆ, ಈ ಕ್ಷೇತ್ರವನ್ನು ಜನಪ್ರಿಯಗೊಳಿಸುವುದು. ಮಾನವ ದ್ವೇಷಿಗಳು, ಸ್ವಘೋಷಿತ ಧರ್ಮರಕ್ಷಕರ ಹಿಂಬಾಲಕರಾಗದಂತೆ ಆಧುನಿಕ ತಲೆಮಾರನ್ನು ತಡೆಯುವುದು. ಒಂದು ಕಡೆ ಅತ್ಯಂತ ಸುದ್ದಿಯಲ್ಲಿರುವ ರಾಜಕೀಯದಂಥ ಕ್ಷೇತ್ರವಿದ್ದರೆ, ಇನ್ನೊಂದು ಕಡೆ, ಸಂಪೂರ್ಣ ಕತ್ತಲು ಕವಿದಂತೆ ಕಾಣಿಸುವ ಸುದ್ದಿಯೇ ಇರದ ಕ್ಷೇತ್ರವೊಂದಿದೆ. ಆಧುನಿಕ ತಲೆಮಾರಿನ ಮಟ್ಟಿಗೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವಾಗ ಅವರು ಸುದ್ದಿಯಲ್ಲಿರುವುದರತ್ತ ಆಕರ್ಷಿತರಾಗುವುದು ಸಹಜ. ಆದ್ದರಿಂದ ಸುದ್ದಿಯಲ್ಲಿರದ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ತುರ್ತಾಗಿ ಆಗಬೇಕಾಗಿದೆ.


ಯುಗೆನೆ ಸೆರ್ನಾನ್
          ಜಗತ್ತು ಹೊಸ ಹೊಸ ಸೌಲಭ್ಯಗಳಿಂದ ಶ್ರೀಮಂತಗೊಳ್ಳುತ್ತಿರುವುದರ ಜೊತೆಗೇ ಅದರ ಅಡ್ಡ ಪರಿಣಾಮಗಳ ಆಘಾತದಿಂದ ಸಂಕಟ ಪಡುತ್ತಲೂ ಇದೆ. ಹೊಸ ಹೊಸ ಕಾಯಿಲೆಗಳು ಪರಿಚಿತವಾಗುತ್ತಿವೆ. ಮಣ್ಣು, ನೀರು, ವಾಯು ಮಲಿನವಾಗುತ್ತಿದೆ. ಉಸಿರಾಡುವ ಗಾಳಿಯಿಂದ ಹಿಡಿದು ತಿನ್ನುವ ಆಹಾರದ ವರೆಗೆ ಎಲ್ಲವೂ ವರ್ಜಿಸಲೇ ಬೇಕಾದ ಪಟ್ಟಿಯಲ್ಲಿ ಸ್ಥಾನ ಪಡಕೊಳ್ಳುತ್ತಿವೆ. ಅದರ ಜೊತೆಗೇ ಯಾವುದನ್ನೂ ವರ್ಜಿಸಲೇಬಾರದಂತಹ ಅನಿವಾರ್ಯತೆಯೂ ಎಲ್ಲರ ಎದುರಿದೆ. ಇದರ ಮಧ್ಯೆಯೇ ರಾಜಕಾರಣಿ ಎಂಬ ಇನ್‍ಸ್ಟಂಟ್ ವಿಜ್ಞಾನಿ, ವಿಜ್ಞಾನದ ಹೆಸರಲ್ಲಿ ದಿನಕ್ಕೊಂದು ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿರುತ್ತಾರೆ. ಅವರಿಗೆ ತಮ್ಮ ಗುರಿಯತ್ತ ಸಾಗುವುದಕ್ಕೆ ಅಂಥ ಸುಳ್ಳುಗಳ ಅಗತ್ಯವಿರುತ್ತದೆ. ಇವೆಲ್ಲವುಗಳ ನಡುವೆಯೇ ಹೊಸ ಪೀಳಿಗೆಯಲ್ಲಿ ವಿಜ್ಞಾನ ಕ್ಷೇತ್ರವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಖ್ಯವಾಗಿ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಂಶೋಧನಾ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನ ಆಗಬೇಕು. ಪ್ರತಿಯೊಂದರಲ್ಲೂ ಕುತೂಹಲವನ್ನು ಹುಟ್ಟಿಸಬೇಕು. ಹೊಸತಿನ ಬಗ್ಗೆ ಆಲೋಚಿಸುವ ಮತ್ತು ಕಂಡು ಹುಡುಕುವ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ನಮಗೆ ಸದ್ಯ ಕುತೂಹಲಭರಿತ ಮಕ್ಕಳ ಅಗತ್ಯ ಇದೆ. ಶ್ರಮ ವಹಿಸಿ ದುಡಿಯುವ ಪೀಳಿಗೆಯ ಜರೂರತ್ತು ಇದೆ. ಒಂದು ದೇಶ ಬರೇ ರಾಜಕಾರಣಿಗಳಿಂದ ನಡೆಯಲಾರದು. ಒಂದು ವೇಳೆ ನಡೆದರೂ ಆ ನಡೆ ಪ್ರಚಲಿತ ಜಗತ್ತಿಗೆ ಹೋಲಿಸಿದರೆ ನೂರಾರು ವರ್ಷಗಳಷ್ಟು ಪುರಾತನ ಕಾಲದ್ದಾಗಿರಬಹುದು. ಜಗತ್ತನ್ನು ಆಧುನಿಕಗೊಳಿಸುವವರು ವಿಜ್ಞಾನಿಗಳು. ವಿಜ್ಞಾನಿಗಳೆಂದರೆ, ಹೊಸತನ್ನು ಕೊಡಲೇ ಬೇಕಾದವರು ಎಂದಲ್ಲ. ಒಂದು ಗುರಿಯನ್ನು ನಿಗದಿಪಡಿಸಿ ಅದರ ಸಾಕಾರಕ್ಕಾಗಿ ಶ್ರಮ ವಹಿಸಿ ದುಡಿಯುವವರು ಎಂದರ್ಥ. ತಮ್ಮ ಶ್ರಮದ ಮೇಲೆ ಅಪಾರ ಭರವಸೆಯನ್ನು ಇಟ್ಟವರು. ಈ ದೇಶಕ್ಕೆ ಸದ್ಯ ಈ ವರ್ಗದ ಅಗತ್ಯ ಇದೆ. ಆದ್ದರಿಂದಲೇ, ವಿಜ್ಞಾನ ಕ್ಷೇತ್ರವನ್ನು ಈಗಾಗಲೇ ಜನಪ್ರಿಯವಾಗಿರುವ ಕ್ಷೇತ್ರಕ್ಕೆ ಪರ್ಯಾಯವಾಗಿ ಬೆಳೆಸಬೇಕಾಗಿದೆ. ಹೊಸ ತಲೆಮಾರಿನ ಆದ್ಯತೆಯ ಪಟ್ಟಿಯಲ್ಲಿ ವಿಜ್ಞಾನ ಪ್ರಥಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗಿದೆ. ಹವಾಯಿ ದ್ವೀಪದಲ್ಲಿ ಸಮುದ್ರ ಮಟ್ಟದಿಂದ 8,200 ಅಡಿ ಎತ್ತರದಲ್ಲಿ ಎಲ್ಲರಿಂದಲೂ ಎಲ್ಲದರಿಂದಲೂ ಕಳಚಿಕೊಂಡು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ನಿಜಕ್ಕೂ ಸುದ್ದಿಯಲ್ಲಿರುವುದಕ್ಕೆ ಅರ್ಹರಾದವರು. ಅವರ ಬದ್ಧತೆ, ತ್ಯಾಗ ಖಂಡಿತ ಅಭಿನಂದನಾರ್ಹ.

ಒಂದು ತಪರಾಕಿಯ ಸುತ್ತ..

      ಕಳೆದವಾರ ಮೂರು ವೀಡಿಯೋಗಳು ಬಿಡುಗಡೆಗೊಂಡುವು. ಚಿತ್ರೀಕರಣ, ಭಾಷಾ ಸ್ಪಷ್ಟತೆ ಮತ್ತು ಕ್ಯಾಮರಾ ಬಳಕೆಗೆ ಸಂಬಂಧಿಸಿ ಹೇಳುವುದಾದರೆ, ಇವು ಮೂರೂ ಕಳಪೆ ವೀಡಿಯೋಗಳೇ. ಪಾತ್ರಧಾರಿಗಳೂ ನಟರಾಗಿರಲಿಲ್ಲ. ತೇಜ್ ಬಹಾದ್ದೂರ್ ಯಾದವ್, ಯಜ್ಞ ಪ್ರತಾಪ್ ಸಿಂಗ್ ಮತ್ತು ನಾೈಕ್ ರಾಂ ಭಗತ್ ಎಂಬ ಮೂವರೂ ವೃತ್ತಿಪರ ನಟರೂ ಅಲ್ಲ, ಪರಿಣತ ವೀಡಿಯೋ ನಿರ್ಮಾಪಕರೂ ಅಲ್ಲ ಅಥವಾ ಪ್ರಸಿದ್ಧ ವ್ಯಕ್ತಿಗಳೂ ಅಲ್ಲ. ಆದರೆ ಈ ವೀಡಿಯೋಗಳು ಎಷ್ಟು ಜನಪ್ರಿಯ ಆಯಿತೆಂದರೆ, ತಾಂತ್ರಿಕವಾಗಿ ಅತ್ಯಂತ ಪರಿಣತ ತಂಡದವರು ನಿರ್ಮಿಸಿ ಬಿಡುಗಡೆಗೊಳಿಸುವ ಸಿನಿಮಾ ಟ್ರೇಲರ್‍ಗಿಂತಲೂ ಹೆಚ್ಚು. ಇದಕ್ಕಿರುವ ಏಕೈಕ ಕಾರಣ ಏನೆಂದರೆ, ಈ ದೇಶದಲ್ಲಿ ಚಾಲ್ತಿಯಲ್ಲಿರುವ ಕೆಲವು ಪರಮ ಸುಳ್ಳುಗಳು. ಈ ಸುಳ್ಳುಗಳನ್ನು ಚಾಲ್ತಿಗೆ ತಂದವರು ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರ. ಸೇನೆಯ ಬಗ್ಗೆ ಮಾತಾಡುವಾಗಲೆಲ್ಲ ಬಿಜೆಪಿ ಭಾವುಕವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗದ್ಗದಿತರಾಗುತ್ತಾರೆ. ‘ಗಡಿಯಲ್ಲಿ ಯೋಧರು ಎಚ್ಚರವಾಗಿರುವುದರಿಂದಲೇ ನಾವಿಲ್ಲಿ ಸುಖವಾಗಿ ನಿದ್ರಿಸುತ್ತೇವೆ..’ ಎಂಬ ಡಯಲಾಗು ಬಿಜೆಪಿಯ ಉನ್ನತ ನಾಯಕತ್ವದಿಂದ ಹಿಡಿದು ತಳಮಟ್ಟದ ಕಾರ್ಯಕರ್ತರ ವರೆಗೆ ಆಗಾಗ ಕೇಳಿ ಬರುತ್ತಲೇ ಇರುತ್ತವೆ. ‘ಬಿಜೆಪಿಯು ಯೋಧರ ಪರ ಮತ್ತು ಕಾಂಗ್ರೆಸ್ ಯೋಧರ ವಿರೋಧಿ’ ಎಂಬ ಸಂದೇಶ ರವಾನೆಗೂ ಬಿಜೆಪಿಯ ವರ್ತನೆಗಳು ಸಾಕಷ್ಟು ನೆರವಾಗಿವೆ. ‘ನಮ್ಮ ಯೋಧರ ಒಂದು ತಲೆಯು ಪಾಕಿಸ್ತಾನದ 10 ಯೋಧರ ತಲೆಗೆ ಸಮ’ ಎಂಬ ರೀತಿಯಲ್ಲಿ ಆಡಿದ್ದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ. ಆದ್ದರಿಂದಲೇ, ಮೇಲಿನ ಮೂರು ವೀಡಿಯೋಗಳು ತಾಂತ್ರಿವಾಗಿ ಕಳಪೆ ಗುಣಮಟ್ಟದ ಹೊರತಾಗಿಯೂ ವೈರಲ್ ಆದುವು. ‘ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯುವ ಯೋಧರ ಅನ್ನದ ಬಟ್ಟಲಿನಿಂದ ಆಹಾರವನ್ನೂ ಕಸಿಯಲಾಗುತ್ತಿದೆ..’ ಅನ್ನುವುದನ್ನು ದೇಶದ ಜನತೆಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ನರೇಂದ್ರ ಮೋದಿಯವರೇ ಪ್ರಧಾನಿಯಾಗಿದ್ದಾರೆ. ರಕ್ಷಣಾ ಸಚಿವ ಪಾರಿಕ್ಕರ್ ಅವರೂ ಕಾಂಗ್ರೆಸಿನವರಲ್ಲ. ಯೋಧರ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸುವ ಪಕ್ಷ ಅಧಿಕಾರದಲ್ಲಿದ್ದೂ ಯೋಧರಿಗೇಕೆ ಈ ಸ್ಥಿತಿ ಬಂದೊದಗಿದೆ? ನಮ್ಮ ಯೋಧರು ಸರ್ಜಿಕಲ್ ದಾಳಿ ನಡೆಸಿದ್ದು ಈ ಕರಕಲು ಪರೋಟ, ಕಳಪೆ ದಾಲ್ ಅನ್ನು ಸೇವಿಸಿಯೇ? ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವವರಿಗೆ ಕನಿಷ್ಠ ಉತ್ತಮ ಆಹಾರವನ್ನು ಒದಗಿಸುವ ಹೊಣೆಗಾರಿಕೆಯನ್ನೂ ಈ ಸರಕಾರ ಪ್ರದರ್ಶಿಸುವುದಿಲ್ಲವೆಂದರೆ, ಅದರ ಭಾವುಕತನ, ‘ಹತ್ತು ತಲೆಯ’ ಡಯಲಾಗ್‍ಗಳಿಗೆಲ್ಲ ಏನು ನೆಲೆ-ಬೆಲೆ ಇದೆ ಎಂದು ವೀಕ್ಷಕರು ಅಚ್ಚರಿಪಟ್ಟರು.
      ವಿಷಾದ ಏನೆಂದರೆ, ಯೋಧರ ಬಗ್ಗೆ ಮತ್ತು ಗಡಿಯಲ್ಲಿ ಅವರು ಚಳಿ-ಮಳೆ-ಬಿಸಿಲನ್ನೂ ಲೆಕ್ಕಿಸದೇ ದೇಶ ಕಾಯುವುದರ ಬಗ್ಗೆ ಅದ್ಭುತ ಭಾಷಣಗಳನ್ನು ಬಿಗಿಯುವ ಬಿಜೆಪಿ ಮತ್ತು ಅದರ ಪರಿವಾರದ ನಾಯಕರಲ್ಲಿ ಒಬ್ಬರೂ ಈ ವೀಡಿಯೋಗಳ ಬಗ್ಗೆ ಮಾತಾಡುತ್ತಿಲ್ಲ. ಅದರ ಬದಲು ಈ ವೀಡಿಯೋಗಳ ಗಂಭೀರತೆಯನ್ನು ತಗ್ಗಿಸುವ ಶ್ರಮಗಳನ್ನು ವಿವಿಧ ಮೂಲಗಳ ಮೂಲಕ ಅವರು ನಿರ್ವಹಿಸುತ್ತಿದ್ದಾರೆ. ಪ್ರಥಮವಾಗಿ ವೀಡಿಯೋವನ್ನು ಬಿಡುಗಡೆಗೊಳಿಸಿದ ಬಿಎಸ್‍ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್‍ರನ್ನು ಮದ್ಯವ್ಯಸನಿ, ಅವಿಧೇಯ ಎಂದೆಲ್ಲಾ ಸೇನೆಯ ವತಿಯಿಂದ ಹೇಳಿಸಿರುವುದು ಇದಕ್ಕೆ ಉತ್ತಮ ಪುರಾವೆ. ಈ ಮೊದಲು ‘ಏಕಶ್ರೇಣಿ, ಏಕ ಪಿಂಚಣಿ’ಗೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನ ಬಗ್ಗೆಯೂ ಇಂಥದ್ದೇ ತಂತ್ರವನ್ನು ಇವೇ ಮಂದಿ ಪ್ರದರ್ಶಿಸಿದ್ದರು. ಆ ಯೋಧರನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದರು. ಒಂದು ರೀತಿಯಲ್ಲಿ, ಇದು ಆ ಯೋಧರಿಗೆ ಮಾತ್ರ ಅಲ್ಲ, ನಮ್ಮ ಸೇನೆಗೇ ಮಾಡಿದ ಅವಮಾನವಾಗಿತ್ತು. ನಿಜವಾಗಿ, ‘ಏಕಶ್ರೇಣಿ, ಏಕ ಪಿಂಚಣಿ’ ಎಂಬುದು ಯಾವುದಾದರೂ ನಿರ್ದಿಷ್ಟ ಧರ್ಮದ, ಜಾತಿಯ, ಪಂಗಡದ ಬೇಡಿಕೆಯೇನೂ ಆಗಿರಲಿಲ್ಲ. ಗಡಿಯಲ್ಲಿ ನಿದ್ದೆಗೆಟ್ಟು ದೇಶ ಕಾಯ್ದ ‘ಯೋಧರು’ ಎಂಬ ವಿಶಾಲ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ನಿವೃತ್ತಿಯ ಬಳಿಕ ಅವರು ಸುಖವಾಗಿ ನಿದ್ದೆ ಮಾಡುವಂತೆ ಮತ್ತು ನೆಮ್ಮದಿಯಿಂದ ಬಾಳುವಂತೆ ಮಾಡುವ ಉದ್ದೇಶದ ಯೋಜನೆಯಾಗಿತ್ತು. ಆದರೆ ಬಿಜೆಪಿ ಈ ಬೇಡಿಕೆಯನ್ನು ಎಷ್ಟಂಶ ನಿರ್ಲಕ್ಷಿಸಿತೆಂದರೆ, ನಿವೃತ್ತ ಯೋಧ ಕೊನೆಗೆ ನಿರಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು. ಅಂದು ಆ ಯೋಧನ ಸಾವಿಗೆ ಬಿಜೆಪಿ ಒದಗಿಸಿದ ಕಾರಣವನ್ನೇ ಈಗ ಸೇನಾ ಮುಖ್ಯಸ್ಥರ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್‍ರ ಮುಖಾಂತರ ಯೋಧರಿಗೆ ಬೆದರಿಕೆಯನ್ನೂ ನೀಡಲಾಗಿದೆ.
      ಒಂದು ವೇಳೆ, ಸೇನೆಯಲ್ಲಿರುವ ಪ್ರತಿ ಯೋಧರ ಮನೆಗೆ ಭೇಟಿ ಕೊಡುವ ಯೋಜನೆಯನ್ನೇನೇದರೂ ನಾವು ಕೈಗೆತ್ತಿಕೊಂಡರೆ, ಹಳ್ಳಿ-ಗ್ರಾಮ-ತಾಲೂಕುಗಳ ಮೂಲೆಯಲ್ಲಿರುವ ಮನೆಯಂತಹ ಸಾಮಾನ್ಯ ಸೂರುಗಳೇ ನಮ್ಮನ್ನು ಸ್ವಾಗತಿಸಿಯಾವು. ರಾಜಕಾರಣಿಗಳು, ಆರ್ಥಿಕ ತಜ್ಞರು, ಕೈಗಾರಿಕೋದ್ಯಮಿಗಳ ಮಕ್ಕಳು ಸೇನೆಯಲ್ಲಿ ಕಾಣಿಸುವುದು ತೀರಾ ಅಪರೂಪ. ಶ್ರೀಮಂತರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದು ಬಹಳ ಬಹಳ ಕಡಿಮೆ. ಆದ್ದರಿಂದಲೇ, ಭಾರತೀಯ ಸೇನೆ ಎಂಬುದು ಬಹುಸಂಖ್ಯಾತ ಭಾರತೀಯರ ಪ್ರತಿನಿಧಿಯಾಗಿ ಗುರುತಿಸಿಕೊಂಡಿರುವುದು. ಅವರಿಗೆ ಬಡತನದ ಅರಿವಿದೆ. ಹಸಿವಿದ್ದು ಗೊತ್ತಿದೆ. ಹಳಸಲು ರೊಟ್ಟಿ, ದಾಲ್‍ಗಳ ಪರಿಚಯವೂ ಇದೆ. ಈ ಕಳಪೆಗಳನ್ನು ಸೇವಿಸಿಯೇ ಈ ಯೋಧರು ಅಂಬಾನಿ, ಅದಾನಿಗಳಿರುವ, ಶ್ರೀಮಂತ ರಾಜಕಾರಣಿಗಳಿರುವ; ಭ್ರಷ್ಟರು, ಕ್ರಿಮಿನಲ್‍ಗಳು, ಮನುಷ್ಯ ದ್ರೋಹಿಗಳೂ ಇರುವ ಭಾರತವೆಂಬ ವಿಶಾಲ ರಾಷ್ಟ್ರವನ್ನು ನಿದ್ದೆಗೆಟ್ಟು ಕಾಯುತ್ತಿದ್ದಾರೆ. ಈ ಸಹನೆಯನ್ನು ಶ್ರೀಮಂತರಿಂದ ನಿರೀಕ್ಷಿಸುವುದು ಬಹಳ ಕಷ್ಟ. ಚಿನ್ನದ ತಟ್ಟೆಯಲ್ಲಿ ಊಟ ಮಾಡಿದ ವ್ಯಕ್ತಿ, ಕರಕಲು ಪರೋಟವನ್ನು ಮತ್ತು ಕಳಪೆ ದಾಲ್ ಅನ್ನು ಹೊಟ್ಟೆಗಿಳಿಸುವುದಕ್ಕೆ ಒಪ್ಪಿಕೊಳ್ಳುತ್ತಾನೆಂದು ಹೇಳಲಾಗದು. ಬಹುಶಃ, ಭಾರತೀಯ ಸೇನೆಯಲ್ಲಿ ಶ್ರೀಮಂತ ಭಾರತೀಯರ ಪ್ರಾತಿನಿಧ್ಯ ಶೂನ್ಯ ಅನ್ನುವಷ್ಟು ಕಡಿಮೆಯಾಗಿರುವುದಕ್ಕೆ ಅದರಲ್ಲಿರುವ ಅಪಾಯ ಮತ್ತು ಸೌಲಭ್ಯಗಳ ಕೊರತೆಯೂ ಕಾರಣವಾಗಿರಬಹುದು. ಸಾಯುವುದಕ್ಕೆ ಸಿದ್ಧಗೊಳಿಸುವ ಮತ್ತು ಸಾವನ್ನು ವಿಜೃಂಭಿಸುವುದರ ಹೊರತಾಗಿ ಸೌಲಭ್ಯವಿಲ್ಲದ ಕ್ಷೇತ್ರವಾಗಿ ಅದು ಮಾರ್ಪಟ್ಟಿರುವುದೂ ಇನ್ನೊಂದು ಕಾರಣವಾಗಿರಬಹುದು. ಒಂದು ವೇಳೆ, ಶ್ರೀಮಂತರಿಗೆ ಸೇನೆ ಸೇರುವುದನ್ನು ಕಡ್ಡಾಯಗೊಳಿಸಿರುತ್ತಿದ್ದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತಿತ್ತು? ಕರಕಲು ಪರೋಟಗಳು ಯಾವ ಮಟ್ಟದ ಸುದ್ದಿಗೆ ಒಳಗಾಗುತ್ತಿತ್ತು ಅಥವಾ ಅಂತಹ ಪರೋಟಗಳು ಅಲ್ಲಿ ಲಭ್ಯವಿರುತ್ತಿತ್ತೇ? ಅಲ್ಲಿನ ಸೌಲಭ್ಯಗಳು ಎಷ್ಟು ಉನ್ನತ ಮಟ್ಟದವು ಆಗಿರುತ್ತಿತ್ತು? ಏಕಶ್ರೇಣಿ ಏಕ ಪಿಂಚಣಿಗಾಗಿ ನಿರಶನ ಕೈಗೊಳ್ಳಬೇಕಾದ ಅಗತ್ಯ ಬರುತ್ತಿತ್ತೇ?
      ಏನೇ ಆಗಲಿ, ಸದ್ಯ ಬಿಡುಗಡೆಗೊಂಡ ಮೂರು ವೀಡಿಯೋಗಳಲ್ಲಿ ಯೋಧರ ಸಂಕಟಗಳಷ್ಟೇ ಇರುವುದಲ್ಲ, ಯೋಧರಿಗಾಗಿ ಮೊಸಳೆ ಕಣ್ಣೀರು ಸುರಿಸಿದವರಿಗೆ ತಪರಾಕಿಯೂ ಇದೆ. ಯೋಧರ ಕತೆ ಹೇಳುತ್ತಾ ಭಾವುಕವಾಗುವ ಬಿಜೆಪಿ, ಅದರಾಚೆಗೆ ಅವರಿಗಾಗಿ ಏನನ್ನೂ ಮಾಡುತ್ತಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಕನಿಷ್ಠ ಯೋಧರ ಸ್ಥಿತಿ-ಗತಿಯ ಬಗ್ಗೆ ಪರಿಶೀಲನೆ ನಡೆಸುವ ಪ್ರಯತ್ನವನ್ನೂ ಅದು ನಡೆಸಿಲ್ಲ. ಆದ್ದರಿಂದಲೇ, ಯೋಧರಿಗೆ ನಿರಾಶೆಯಾಗಿದೆ. ತಮ್ಮನ್ನು ಈ ಸರಕಾರ ದುರುಪಯೋಗಪಡಿಸುತ್ತಿದೆ ಎಂಬುದು ಅರಿವಾಗಿದೆ. ಆ ಕಾರಣದಿಂದಲೇ ವೀಡಿಯೋಗಳು ಬಿಡುಗಡೆಗೊಂಡಿವೆ. ಸದ್ಯ ಕೇಂದ್ರ ಸರಕಾರವು ಆ ಯೋಧರ ಬಾಯಿ ಮುಚ್ಚಿಸುವ ಬದಲು ಸ್ವತಃ ಆತ್ಮಾವಲೋಕನ ನಡೆಸಲಿ. ನಿz್ದÉಗೆಟ್ಟು ದೇಶ ಕಾಯುವವರಿಗೆ ನೆಮ್ಮದಿಯನ್ನು ಒದಗಿಸಲಿ.

Monday, 6 February 2017

ನಮ್ಮ ವಿವೇಚನೆಯ ಮಟ್ಟವನ್ನು ಅಳೆದ ವಾಟ್ಸಪ್ ವಧು

       ಸುದ್ದಿಯ ‘ಮೂಲ’ ಯಾಕೆ ಮಹತ್ವಪೂರ್ಣ ಎಂಬುದನ್ನು ಕಳೆದವಾರದ ಎರಡು ಸುದ್ದಿಗಳು ಮತ್ತೆ ಮತ್ತೆ ಸಾರಿದವು. ಎರಡೂ ಹೃದಯ ವಿದ್ರಾವಕ ಸುದ್ದಿಗಳೇ. ಒಂದು- ಪತಿ, ಪತ್ನಿ ಮತ್ತು ಕೂಲಿಯಾಳು ವಿದ್ಯುದಾಘಾತಕ್ಕೆ ತುತ್ತಾಗಿ ಪ್ರಾಣ ಬಿಟ್ಟ ಸುದ್ದಿ. ಇನ್ನೊಂದು, ಬೆಳಗ್ಗೆ 11 ಗಂಟೆಗೆ ನಿಖಾ (ಹಸೆಮಣೆ) ಆಗಬೇಕಾದ ವಧು, ಅದಕ್ಕಿಂತ ತುಸು ಮೊದಲು ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ಸುದ್ದಿ. ಎರಡೂ ಸುದ್ದಿಗಳ ಮೂಲ ದಕ್ಷಿಣ ಕನ್ನಡ ಜಿಲ್ಲೆ. ಮೊದಲ ಸುದ್ದಿ ಅತ್ಯಂತ ಸ್ಪಷ್ಟ, ನಿಖರ ಮತ್ತು ಸುದ್ದಿ ಮೂಲ ಅತ್ಯಂತ ಪ್ರಾಮಾಣಿಕ. ತೆಂಗಿನ ಮರದಲ್ಲಿ ಹಬ್ಬಿದ್ದ ಬಳ್ಳಿಯಿಂದ ಕಾಳು ಮೆಣಸನ್ನು ಕೀಳುವಾಗ ಕಬ್ಬಿಣದ ಏಣಿಯು ಜಾರಿ ವಿದ್ಯುತ್ ತಂತಿಯ ಮೇಲೆ ಬೀಳುತ್ತದೆ. ಕಾಳು ಮೆಣಸನ್ನು ಕೀಳುತ್ತಿದ್ದುದು ಸಂದೀಪ್ ಅನ್ನುವ ಕೂಲಿಯಾಳು. ಮನೆಯ ಮಾಲಿಕ ವೆಲೇರಿಯನ್ ಲೋಬೋ ಏಣಿಯನ್ನು ಹಿಡಿದಿದ್ದರು. ವಿದ್ಯುದಾಘಾತದಿಂದ ಲೋಬೋ ಕಿರುಚಿಕೊಂಡಾಗ ಅವರ ಪತ್ನಿ ಹೆಝ್ಮಿ ಲೋಬೋ ಅವರನ್ನು ರಕ್ಷಿಸಲು ಯತ್ನಿಸಿದರು. ಮೂವರೂ ಪ್ರಾಣ ಬಿಟ್ಟರು. ಈ ಸುದ್ದಿ ಮಾಧ್ಯಮಗಳಲ್ಲಿ ಚಿತ್ರಸಹಿತ ಪ್ರಕಟವಾಯಿತು. ಇದೇ ದಿನ ವಧು ಸಾವಿಗೀಡಾದ ಸುದ್ದಿಯೂ ವಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಹೆಣ್ಣು ಮತ್ತು ಗಂಡು ಜೊತೆಯಾಗಿ ಕುಳಿತಿರುವ ಪೋಟೋಗಳೂ ವಾಟ್ಸಪ್ ಮೂಲಕ ಪ್ರಕಟವಾಯಿತು. ‘ದೇವನ ಅನುಗ್ರಹ ಇರುತ್ತಿದ್ದರೆ ಇವರಿಬ್ಬರು ಇವತ್ತು ಪತಿ-ಪತ್ನಿ ಆಗಿರುತ್ತಿದ್ದರು’ ಎಂಬ ಇಮೋಶನ್ ಒಕ್ಕಣೆಗಳೂ ಅದರ ಜೊತೆಗಿದ್ದುವು. ಸೋಶಿಯಲ್ ಮೀಡಿಯಾಗಳ ಮೂಲಕ ದೇಶ-ವಿದೇಶಗಳ ಸಾವಿರಾರು ಮಂದಿಗೆ ಈ ಸುದ್ದಿ ತಲುಪಿತು. ರವಿವಾರದ ಕಲ್ಯಾಣ ಮಂಟಪಗಳು ಇದನ್ನೇ ಚರ್ಚಿಸಿದುವು. ದುರಂತ ಏನೆಂದರೆ, ಈ ಸುದ್ದಿಯನ್ನು ಸಾಬೀತುಪಡಿಸಬೇಕಾದ ಸಾಂದರ್ಭಿಕ ಸಾಕ್ಷ್ಯಗಳು ಅನುಮಾನಾಸ್ಪದವಾಗಿದ್ದುವು. ಸುದ್ದಿಯನ್ನು ತಯಾರಿಸಿದವರ ಬಗ್ಗೆ ಯಾವ ಸುಳಿವೂ ಇರಲಿಲ್ಲ. ಚಿತ್ರಗಳಿಗೆ ಅಧಿಕೃತತೆ ಇರಲಿಲ್ಲ. ಸುದ್ದಿಯ ಮೂಲ ಎಲ್ಲಿ, ಯಾರು, ವಧುವಿನ ವಿಳಾಸ ಇತ್ಯಾದಿಗಳ ಕುರಿತು ಯಾವ ಸ್ಪಷ್ಟತೆ ಇಲ್ಲದೆಯೂ ಸಾವಿರಾರು ಮಂದಿಯನ್ನು ಭಾವುಕಗೊಳಿಸಿದ ಸುದ್ದಿಯದು. ಅನೇಕರು ವಧುವಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಬದುಕು ಎಷ್ಟು ಅಶಾಶ್ವತ ಮತ್ತು ನೀರ ಮೇಲಿನ ಗುಳ್ಳೆಯಂತೆ ಹೇಗೆ ಹೃಸ್ವ ಎಂಬ ವಿಶ್ಲೇಷಣೆ ನಡೆಸಿದರು. ಇಡೀ ದಿನ ಈ ಸುದ್ದಿ ಜನರಿಂದ ಜನರಿಗೆ ಮತ್ತು ಮೊಬೈಲ್‍ನಿಂದ ಮೊಬೈಲ್‍ಗೆ ರವಾನೆಯಾದ ಬಳಿಕ, ವಧು ಸಾವಿಗೀಡಾಗಿಲ್ಲ ಮತ್ತು ಇಡೀ ಘಟನೆಗೆ ಇನ್ನೊಂದು ಆಯಾಮವೂ ಇದೆ ಎಂಬ ಸುದ್ದಿ ಇವೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟವಾಗತೊಡಗಿತು. ಜನರು ಇನ್ನಷ್ಟು ಗೊಂದಲಕ್ಕೆ ಸಿಲುಕಿದರು. ಕೆಲವರು ಶ್ರದ್ಧಾಂಜಲಿಯನ್ನು ಹಿಂಪಡೆದರು. ಸುಮಾರು 24 ಗಂಟೆಗಳೊಳಗೆ ಒಂದು ವದಂತಿಯು ಸುದ್ದಿಯ ಸ್ವರೂಪ ಪಡೆದುಕೊಂಡು ಕರಾವಳಿ ಭಾಗದಲ್ಲಿ ಎಷ್ಟು ದೊಡ್ಡ ಸದ್ದು ಮಾಡಿತೆಂದರೆ, ಜನರು ವಾಟ್ಸಪ್ ಅನ್ನೇ ದ್ವೇಷಿಸುವಷ್ಟು.
    ಸುಮಾರು ಒಂದೂವರೆ ದಶಕಗಳಿಂದೀಚೆಗೆ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ‘ಮೂಲಗಳು ತಿಳಿಸಿವೆ’ ಎಂಬ ಪದಪ್ರಯೋಗದೊಂದಿಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗಿವೆ. ಇತ್ತಿತ್ತಲಾಗಿ ಈ ಮೂಲಗಳ ಸಮಸ್ಯೆ ತುಸು ಕಡಿಮೆ ಆಗಿದ್ದರೂ ಅವು ಸಂಪೂರ್ಣವಾಗಿ ನಿಂತು ಹೋಗಿಲ್ಲ. ಮುಖ್ಯವಾಗಿ ಮುಸ್ಲಿಮರಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಈ ಮೂಲಗಳು ಸದಾ ಕಾಣಿಸಿಕೊಳ್ಳುತ್ತಿದ್ದುವು. ಅತ್ಯಂತ ಹೆಚ್ಚು ಬಾರಿ ಈ ‘ಮೂಲಗಳು’ ಬಳಕೆಯಾದುದು ಭಯೋತ್ಪಾದನಾ ಸುದ್ದಿಗಳಿಗೆ ಸಂಬಂಧಿಸಿ. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯ ಬಗ್ಗೆ ಏನನ್ನು ಹೇಳುತ್ತಾರೋ ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸುದ್ದಿಗಳು ಮೂಲಗಳ ಹೆಸರಲ್ಲಿ ಪ್ರಕಟವಾಗುತ್ತಿದ್ದುವು. ಜನರು ಗಮನಿಸಲೆಂದು ವಿಶೇಷ ಬಾಕ್ಸ್ ಗಳಲ್ಲೂ ಅಂಥ ಸುದ್ದಿಗಳನ್ನು ಪ್ರಕಟಿಸಲಾಗುತ್ತಿತ್ತು. ಹಿಂದೂ ಮುಖಂಡರನ್ನು ಮತ್ತು ಪತ್ರಕರ್ತರನ್ನು ಹತ್ಯೆ ನಡೆಸಲು ಸಂಚು ಹೂಡಿರುವರೆಂದು ಆರೋಪಿಸಿ ಪತ್ರಕರ್ತ ಮುತೀಉರ್ರಹ್ಮಾನ್ ಸೇರಿದಂತೆ ಹಲವರನ್ನು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದಾಗಲೂ ಕೆಲವು ಕನ್ನಡ ಪತ್ರಿಕೆಗಳ ‘ಮೂಲಗಳು’ ಜಾಗೃತವಾಗಿದ್ದುವು. ಕಣ್ಣಂಬಾಡಿ ಅಣೆಕಟ್ಟನ್ನು ಸ್ಫೋಟಿಸಲು ಸಜ್ಜಾಗಿದ್ದರೆಂಬಲ್ಲಿ ವರೆಗೆ ಅನಧಿಕೃತ ಸುದ್ದಿಯನ್ನು ಅವು ತೇಲಿ ಬಿಟ್ಟಿದ್ದುವು. ಇತ್ತೀಚಿನ ಭೋಪಾಲ್ ಜೈಲ್ ಬ್ರೇಕ್ ಘಟನೆಯಲ್ಲೂ ಮೂಲಗಳನ್ನು ಜೋಡಿಸಿಕೊಂಡು ಸುದ್ದಿಗಳು ಪ್ರಕಟವಾಗಿದ್ದುವು. ನಿಜವಾಗಿ, ಮೂಲ ಎಂಬುದು ಅನಧಿಕೃತವಾಗಿರುವುದರ ಹೆಸರು ಅಲ್ಲ. ಯಾವುದೇ ಪತ್ರಿಕೆಗೆ ಬೇರೆ ಬೇರೆ ಪ್ರದೇಶಗಳಲ್ಲಿ ಸುದ್ದಿಯನ್ನು ಮುಟ್ಟಿಸುವ ‘ಮೂಲ’ ಇರುತ್ತದೆ. ಅಲ್ಲೊಂದು ಘಟನೆ ನಡೆದರೆ, ಆತ/ಕೆ ಆ ಘಟನೆಯ ವಿವರಗಳನ್ನು ಅಲ್ಲಿಯ ಅಧಿಕೃತ ಪತ್ರಿಕಾ ವರದಿಗಾರರಿಗೆ ತಲುಪಿಸುತ್ತಾರೆ. ಆ ವರದಿಗಾರ ಅದನ್ನು ಖಚಿತಪಡಿಸಿಕೊಂಡು ಅಥವಾ ‘ಮೂಲ’ದ ಮೇಲೆ ಭರವಸೆಯನ್ನು ಇಟ್ಟುಕೊಂಡು ಸುದ್ದಿ ತಯಾರಿಸುತ್ತಾರೆ. ಆದ್ದರಿಂದಲೇ, ಮೂಲ ಎಂಬುದನ್ನು ಡೆಸ್ಕ್ ರೂಮ್‍ನಲ್ಲಿ ಕೂತು ಕತೆ ಹೆಣೆಯುವುದಕ್ಕೆ ಕೊಟ್ಟುಕೊಳ್ಳುವ ಹೆಸರಲ್ಲ. ಪತ್ರಿಕೆಯೊಂದಕ್ಕೆ ಅಗತ್ಯವೆಂದು ಕಂಡುಬಂದರೆ, ಆ ಮೂಲವನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದು. ಓದುಗರ ಅನುಮಾನಕ್ಕೆ ಉತ್ತರವನ್ನು ಆ ‘ಮೂಲ’ದ ಮೂಲಕ ಕೊಡಿಸಬಹುದು. ದುರಂತ ಏನೆಂದರೆ, ಭಯೋತ್ಪಾದನೆಯ ಹೆಸರಲ್ಲಿ ಈ ಹಿಂದೆಲ್ಲ ಪ್ರಕಟವಾಗುತ್ತಿದ್ದ ಮೂಲಗಳನ್ನಾಧರಿಸಿದ ಹೆಚ್ಚಿನ ಸುದ್ದಿಗಳಿಗೆ ಖಚಿತತೆಯೇ ಇದ್ದಿರಲಿಲ್ಲ. ಇದಮಿತ್ಥಂ ಅನ್ನುವ ಮೂಲವೂ ಇದ್ದಿರಲಿಲ್ಲ. ಹೆಚ್ಚಿನವು ಪತ್ರಕರ್ತನ ಕೈಚಳಕವನ್ನು ಅವಲಂಬಿಸಿಕೊಂಡಿತ್ತು. ತಾನೇ ಒಂದು ರೋಮಾಂಚಕ ಕತೆಯನ್ನು ಹೆಣೆದು ಕೊನೆಯಲ್ಲಿ ಮೂಲಗಳು ತಿಳಿಸಿವೆ ಎಂದು ಮುಗಿಸಿ ಬಿಡುವ ಪರಿಪಾಠವೂ ನಡೆದಿತ್ತು. ಕೆಲವು ಸತ್ಯಶೋಧನಾ ಸಮಿತಿಗಳು ಮತ್ತು ಪ್ರಜ್ಞಾವಂತ ಓದುಗರು ಈ ಮೂಲಗಳ ಅಧಿಕೃತತೆಯನ್ನು ಮತ್ತೆ ಮತ್ತೆ ಪ್ರಶ್ನಿಸತೊಡಗಿದುದರಿಂದ ಇವತ್ತು ಪತ್ರಿಕೆಗಳು ತುಸು ಎಚ್ಚರಿಕೆಯಿಂದ ಮೂಲವನ್ನು ಬಳಸುತ್ತಿವೆ ಎಂಬುದನ್ನು ಬಿಟ್ಟರೆ, ಈ ಕ್ಷೇತ್ರದಲ್ಲಿ ಭಾರೀ ಎನ್ನಬಹುದಾದ ಪ್ರಗತಿಯೇನೂ ಆಗಿಲ್ಲ.
      ಕರಾವಳಿ ಭಾಗದಲ್ಲಿ ಸುದ್ದಿಯಾದ ಎರಡು ಘಟನೆಗಳಲ್ಲಿ ಒಂದಕ್ಕೆ ಖಚಿತವಾದ ಮೂಲ ಇದೆ. ಆದರೆ, ವಧುವಿನ ಸಾವಿಗೆ ಸಂಬಂಧಿಸಿ ಈ ಯಾವ ಖಚಿತತೆಯೂ ಇಲ್ಲ. ವಧುವಿನ ಸಾವನ್ನು ದೃಢೀಕರಿಸುವ ವ್ಯಕ್ತಿ ಇಲ್ಲ. ಅದನ್ನು ಮೊದಲಾಗಿ ಕಂಡು ಸುದ್ದಿ ತಯಾರಿಸಿದವರ ವಿಳಾಸ ಇಲ್ಲ. ಮೃತದೇಹ ಎಲ್ಲಿದೆ, ಎಲ್ಲಿ ದಫನ ಮಾಡಲಾಗುತ್ತದೆ ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ಉತ್ತರಗಳೂ ಇಲ್ಲ. ಆದರೂ ವಿದ್ಯುದಾಘಾತದ ಸುದ್ದಿಗಿಂತ ಹೆಚ್ಚು ಚರ್ಚೆಯಲ್ಲಿದ್ದುದು ಮತ್ತು ಹೆಚ್ಚು ಜನರಿಗೆ ರವಾನೆಯಾದುದು ಈ ಎರಡನೇ ಸುದ್ದಿ. ಇದನ್ನು ಹೇಗೆ ವಿಶ್ಲೇಷಿಸಬಹುದು? ಅಖಚಿತ ಸುದ್ದಿಗಳ ಮೇಲೆ ಜನರು ಯಾಕೆ ಇಷ್ಟು ಆಕರ್ಷಿತರಾಗುತ್ತಾರೆ ಅಥವಾ ಸುದ್ದಿಯನ್ನು ಖಚಿತಪಡಿಸಿಕೊಳ್ಳುವ ಬಹುಮುಖ್ಯ ಹಂತದಲ್ಲಿ ಯಾಕೆ ಎಡವುತ್ತಾರೆ? ಇದು ಓರ್ವ ವಧುವಿನ ಪ್ರಶ್ನೆಯಲ್ಲ. ಸಾರ್ವಜನಿಕ ಮನೋಭಾವದ ಪ್ರಶ್ನೆ. ಸುಳ್ಳು ಸುದ್ದಿಯನ್ನು ಸೃಷ್ಟಿಸುವವರ ಮುಂದೆ ಇವತ್ತು ಸಾಕಷ್ಟು ಅವಕಾಶಗಳು ಮುಕ್ತವಾಗಿರುತ್ತವೆ. ಅವರು ಹೇಗೆ ಬೇಕಾದರೂ ಆ ಸುದ್ದಿಯನ್ನು ಆಕರ್ಷಕಗೊಳಿಸಬಹುದು. ಬೇರೆ ಬೇರೆ ಕಥಾಪಾತ್ರಗಳನ್ನು ಸೃಷ್ಟಿಸಿಕೊಳ್ಳಬಹುದು. ಯಾಕೆಂದರೆ, ಮೂಲದಲ್ಲಿ ಅಂಥದ್ದೊಂದು ಘಟನೆ ನಡೆದಿರುವುದೇ ಇಲ್ಲ. ಕೆಲವು ಪತ್ರಿಕೆಗಳು ಭಯೋತ್ಪಾದನಾ ಘಟನೆಗಳಿಗೆ ಸಂಬಂಧಿಸಿ ಇಂಥ ಅನುಚಿತ ದಾರಿಯನ್ನು ಅವಲಂಬಿಸಿ ಜನರ ಪ್ರಶ್ನೆಗೆ ಗುರಿಯಾದುವು. ಸದ್ಯ ಸೋಶಿಯಲ್ ಮೀಡಿಯಾಗಳು ಅದರಲ್ಲೂ ವಾಟ್ಸಪ್‍ನಂಥ ಮಾಧ್ಯಮ ಇದೇ ಅನುಚಿತ ಕ್ರಮವನ್ನು ಇನ್ನಷ್ಟು ಕೆಟ್ಟದಾಗಿ ಇವತ್ತು ನಿರ್ವಹಿಸುತ್ತಿದೆ. ಮೂಲವೇ ಗೊತ್ತಿಲ್ಲದ ಸುದ್ದಿಗಳು ಅಧಿಕೃತವೆಂಬಂತೆ ರವಾನೆಯಾಗುತ್ತಿವೆ. ಆದ್ದರಿಂದ, ಪತ್ರಿಕೆಗಳ ಸುದ್ದಿ ಮೂಲವನ್ನು ಪ್ರಶ್ನಿಸಿದ ಜನರು ಈ ಮೂಲರಹಿತ ಸುದ್ದಿಗಳ ಬಗೆಗೂ ಜಾಗೃತವಾಗಬೇಕು. ಖಚಿತವಾಗದ ಯಾವ ಸುದ್ದಿಯನ್ನೂ ಇನ್ನೊಬ್ಬರಿಗೆ ರವಾನಿಸದೇ ವಿವೇಚನೆಯಿಂದ ನಡೆದುಕೊಳ್ಳಬೇಕು. ನಾವು ದ್ವೇಷಿಸಬೇಕಾದದ್ದು ವಾಟ್ಸಪ್ ಅನ್ನು ಅಲ್ಲ. ನಮ್ಮ ಅವಿವೇಕವನ್ನು. ನಮ್ಮ ಬೇಜವಾಬ್ದಾರಿತನವನ್ನು. ಇಲ್ಲದಿದ್ದರೆ ನಮ್ಮ ಸಾವಿನ ಸುದ್ದಿಯನ್ನು ನಾವೇ ಓದಬೇಕಾದಂತಹ ಪ್ರಸಂಗವೂ ಎದುರಾದೀತು.