Monday, 6 February 2017

ನಮ್ಮ ವಿವೇಚನೆಯ ಮಟ್ಟವನ್ನು ಅಳೆದ ವಾಟ್ಸಪ್ ವಧು

       ಸುದ್ದಿಯ ‘ಮೂಲ’ ಯಾಕೆ ಮಹತ್ವಪೂರ್ಣ ಎಂಬುದನ್ನು ಕಳೆದವಾರದ ಎರಡು ಸುದ್ದಿಗಳು ಮತ್ತೆ ಮತ್ತೆ ಸಾರಿದವು. ಎರಡೂ ಹೃದಯ ವಿದ್ರಾವಕ ಸುದ್ದಿಗಳೇ. ಒಂದು- ಪತಿ, ಪತ್ನಿ ಮತ್ತು ಕೂಲಿಯಾಳು ವಿದ್ಯುದಾಘಾತಕ್ಕೆ ತುತ್ತಾಗಿ ಪ್ರಾಣ ಬಿಟ್ಟ ಸುದ್ದಿ. ಇನ್ನೊಂದು, ಬೆಳಗ್ಗೆ 11 ಗಂಟೆಗೆ ನಿಖಾ (ಹಸೆಮಣೆ) ಆಗಬೇಕಾದ ವಧು, ಅದಕ್ಕಿಂತ ತುಸು ಮೊದಲು ಹೃದಯಾಘಾತಕ್ಕೀಡಾಗಿ ಸಾವಿಗೀಡಾದ ಸುದ್ದಿ. ಎರಡೂ ಸುದ್ದಿಗಳ ಮೂಲ ದಕ್ಷಿಣ ಕನ್ನಡ ಜಿಲ್ಲೆ. ಮೊದಲ ಸುದ್ದಿ ಅತ್ಯಂತ ಸ್ಪಷ್ಟ, ನಿಖರ ಮತ್ತು ಸುದ್ದಿ ಮೂಲ ಅತ್ಯಂತ ಪ್ರಾಮಾಣಿಕ. ತೆಂಗಿನ ಮರದಲ್ಲಿ ಹಬ್ಬಿದ್ದ ಬಳ್ಳಿಯಿಂದ ಕಾಳು ಮೆಣಸನ್ನು ಕೀಳುವಾಗ ಕಬ್ಬಿಣದ ಏಣಿಯು ಜಾರಿ ವಿದ್ಯುತ್ ತಂತಿಯ ಮೇಲೆ ಬೀಳುತ್ತದೆ. ಕಾಳು ಮೆಣಸನ್ನು ಕೀಳುತ್ತಿದ್ದುದು ಸಂದೀಪ್ ಅನ್ನುವ ಕೂಲಿಯಾಳು. ಮನೆಯ ಮಾಲಿಕ ವೆಲೇರಿಯನ್ ಲೋಬೋ ಏಣಿಯನ್ನು ಹಿಡಿದಿದ್ದರು. ವಿದ್ಯುದಾಘಾತದಿಂದ ಲೋಬೋ ಕಿರುಚಿಕೊಂಡಾಗ ಅವರ ಪತ್ನಿ ಹೆಝ್ಮಿ ಲೋಬೋ ಅವರನ್ನು ರಕ್ಷಿಸಲು ಯತ್ನಿಸಿದರು. ಮೂವರೂ ಪ್ರಾಣ ಬಿಟ್ಟರು. ಈ ಸುದ್ದಿ ಮಾಧ್ಯಮಗಳಲ್ಲಿ ಚಿತ್ರಸಹಿತ ಪ್ರಕಟವಾಯಿತು. ಇದೇ ದಿನ ವಧು ಸಾವಿಗೀಡಾದ ಸುದ್ದಿಯೂ ವಾಟ್ಸಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಹೆಣ್ಣು ಮತ್ತು ಗಂಡು ಜೊತೆಯಾಗಿ ಕುಳಿತಿರುವ ಪೋಟೋಗಳೂ ವಾಟ್ಸಪ್ ಮೂಲಕ ಪ್ರಕಟವಾಯಿತು. ‘ದೇವನ ಅನುಗ್ರಹ ಇರುತ್ತಿದ್ದರೆ ಇವರಿಬ್ಬರು ಇವತ್ತು ಪತಿ-ಪತ್ನಿ ಆಗಿರುತ್ತಿದ್ದರು’ ಎಂಬ ಇಮೋಶನ್ ಒಕ್ಕಣೆಗಳೂ ಅದರ ಜೊತೆಗಿದ್ದುವು. ಸೋಶಿಯಲ್ ಮೀಡಿಯಾಗಳ ಮೂಲಕ ದೇಶ-ವಿದೇಶಗಳ ಸಾವಿರಾರು ಮಂದಿಗೆ ಈ ಸುದ್ದಿ ತಲುಪಿತು. ರವಿವಾರದ ಕಲ್ಯಾಣ ಮಂಟಪಗಳು ಇದನ್ನೇ ಚರ್ಚಿಸಿದುವು. ದುರಂತ ಏನೆಂದರೆ, ಈ ಸುದ್ದಿಯನ್ನು ಸಾಬೀತುಪಡಿಸಬೇಕಾದ ಸಾಂದರ್ಭಿಕ ಸಾಕ್ಷ್ಯಗಳು ಅನುಮಾನಾಸ್ಪದವಾಗಿದ್ದುವು. ಸುದ್ದಿಯನ್ನು ತಯಾರಿಸಿದವರ ಬಗ್ಗೆ ಯಾವ ಸುಳಿವೂ ಇರಲಿಲ್ಲ. ಚಿತ್ರಗಳಿಗೆ ಅಧಿಕೃತತೆ ಇರಲಿಲ್ಲ. ಸುದ್ದಿಯ ಮೂಲ ಎಲ್ಲಿ, ಯಾರು, ವಧುವಿನ ವಿಳಾಸ ಇತ್ಯಾದಿಗಳ ಕುರಿತು ಯಾವ ಸ್ಪಷ್ಟತೆ ಇಲ್ಲದೆಯೂ ಸಾವಿರಾರು ಮಂದಿಯನ್ನು ಭಾವುಕಗೊಳಿಸಿದ ಸುದ್ದಿಯದು. ಅನೇಕರು ವಧುವಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಬದುಕು ಎಷ್ಟು ಅಶಾಶ್ವತ ಮತ್ತು ನೀರ ಮೇಲಿನ ಗುಳ್ಳೆಯಂತೆ ಹೇಗೆ ಹೃಸ್ವ ಎಂಬ ವಿಶ್ಲೇಷಣೆ ನಡೆಸಿದರು. ಇಡೀ ದಿನ ಈ ಸುದ್ದಿ ಜನರಿಂದ ಜನರಿಗೆ ಮತ್ತು ಮೊಬೈಲ್‍ನಿಂದ ಮೊಬೈಲ್‍ಗೆ ರವಾನೆಯಾದ ಬಳಿಕ, ವಧು ಸಾವಿಗೀಡಾಗಿಲ್ಲ ಮತ್ತು ಇಡೀ ಘಟನೆಗೆ ಇನ್ನೊಂದು ಆಯಾಮವೂ ಇದೆ ಎಂಬ ಸುದ್ದಿ ಇವೇ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟವಾಗತೊಡಗಿತು. ಜನರು ಇನ್ನಷ್ಟು ಗೊಂದಲಕ್ಕೆ ಸಿಲುಕಿದರು. ಕೆಲವರು ಶ್ರದ್ಧಾಂಜಲಿಯನ್ನು ಹಿಂಪಡೆದರು. ಸುಮಾರು 24 ಗಂಟೆಗಳೊಳಗೆ ಒಂದು ವದಂತಿಯು ಸುದ್ದಿಯ ಸ್ವರೂಪ ಪಡೆದುಕೊಂಡು ಕರಾವಳಿ ಭಾಗದಲ್ಲಿ ಎಷ್ಟು ದೊಡ್ಡ ಸದ್ದು ಮಾಡಿತೆಂದರೆ, ಜನರು ವಾಟ್ಸಪ್ ಅನ್ನೇ ದ್ವೇಷಿಸುವಷ್ಟು.
    ಸುಮಾರು ಒಂದೂವರೆ ದಶಕಗಳಿಂದೀಚೆಗೆ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ‘ಮೂಲಗಳು ತಿಳಿಸಿವೆ’ ಎಂಬ ಪದಪ್ರಯೋಗದೊಂದಿಗೆ ಸಾಕಷ್ಟು ಸುದ್ದಿಗಳು ಪ್ರಕಟವಾಗಿವೆ. ಇತ್ತಿತ್ತಲಾಗಿ ಈ ಮೂಲಗಳ ಸಮಸ್ಯೆ ತುಸು ಕಡಿಮೆ ಆಗಿದ್ದರೂ ಅವು ಸಂಪೂರ್ಣವಾಗಿ ನಿಂತು ಹೋಗಿಲ್ಲ. ಮುಖ್ಯವಾಗಿ ಮುಸ್ಲಿಮರಿಗೆ ಸಂಬಂಧಿಸಿದ ಸುದ್ದಿಗಳಲ್ಲಿ ಈ ಮೂಲಗಳು ಸದಾ ಕಾಣಿಸಿಕೊಳ್ಳುತ್ತಿದ್ದುವು. ಅತ್ಯಂತ ಹೆಚ್ಚು ಬಾರಿ ಈ ‘ಮೂಲಗಳು’ ಬಳಕೆಯಾದುದು ಭಯೋತ್ಪಾದನಾ ಸುದ್ದಿಗಳಿಗೆ ಸಂಬಂಧಿಸಿ. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯ ಬಗ್ಗೆ ಏನನ್ನು ಹೇಳುತ್ತಾರೋ ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸುದ್ದಿಗಳು ಮೂಲಗಳ ಹೆಸರಲ್ಲಿ ಪ್ರಕಟವಾಗುತ್ತಿದ್ದುವು. ಜನರು ಗಮನಿಸಲೆಂದು ವಿಶೇಷ ಬಾಕ್ಸ್ ಗಳಲ್ಲೂ ಅಂಥ ಸುದ್ದಿಗಳನ್ನು ಪ್ರಕಟಿಸಲಾಗುತ್ತಿತ್ತು. ಹಿಂದೂ ಮುಖಂಡರನ್ನು ಮತ್ತು ಪತ್ರಕರ್ತರನ್ನು ಹತ್ಯೆ ನಡೆಸಲು ಸಂಚು ಹೂಡಿರುವರೆಂದು ಆರೋಪಿಸಿ ಪತ್ರಕರ್ತ ಮುತೀಉರ್ರಹ್ಮಾನ್ ಸೇರಿದಂತೆ ಹಲವರನ್ನು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದಾಗಲೂ ಕೆಲವು ಕನ್ನಡ ಪತ್ರಿಕೆಗಳ ‘ಮೂಲಗಳು’ ಜಾಗೃತವಾಗಿದ್ದುವು. ಕಣ್ಣಂಬಾಡಿ ಅಣೆಕಟ್ಟನ್ನು ಸ್ಫೋಟಿಸಲು ಸಜ್ಜಾಗಿದ್ದರೆಂಬಲ್ಲಿ ವರೆಗೆ ಅನಧಿಕೃತ ಸುದ್ದಿಯನ್ನು ಅವು ತೇಲಿ ಬಿಟ್ಟಿದ್ದುವು. ಇತ್ತೀಚಿನ ಭೋಪಾಲ್ ಜೈಲ್ ಬ್ರೇಕ್ ಘಟನೆಯಲ್ಲೂ ಮೂಲಗಳನ್ನು ಜೋಡಿಸಿಕೊಂಡು ಸುದ್ದಿಗಳು ಪ್ರಕಟವಾಗಿದ್ದುವು. ನಿಜವಾಗಿ, ಮೂಲ ಎಂಬುದು ಅನಧಿಕೃತವಾಗಿರುವುದರ ಹೆಸರು ಅಲ್ಲ. ಯಾವುದೇ ಪತ್ರಿಕೆಗೆ ಬೇರೆ ಬೇರೆ ಪ್ರದೇಶಗಳಲ್ಲಿ ಸುದ್ದಿಯನ್ನು ಮುಟ್ಟಿಸುವ ‘ಮೂಲ’ ಇರುತ್ತದೆ. ಅಲ್ಲೊಂದು ಘಟನೆ ನಡೆದರೆ, ಆತ/ಕೆ ಆ ಘಟನೆಯ ವಿವರಗಳನ್ನು ಅಲ್ಲಿಯ ಅಧಿಕೃತ ಪತ್ರಿಕಾ ವರದಿಗಾರರಿಗೆ ತಲುಪಿಸುತ್ತಾರೆ. ಆ ವರದಿಗಾರ ಅದನ್ನು ಖಚಿತಪಡಿಸಿಕೊಂಡು ಅಥವಾ ‘ಮೂಲ’ದ ಮೇಲೆ ಭರವಸೆಯನ್ನು ಇಟ್ಟುಕೊಂಡು ಸುದ್ದಿ ತಯಾರಿಸುತ್ತಾರೆ. ಆದ್ದರಿಂದಲೇ, ಮೂಲ ಎಂಬುದನ್ನು ಡೆಸ್ಕ್ ರೂಮ್‍ನಲ್ಲಿ ಕೂತು ಕತೆ ಹೆಣೆಯುವುದಕ್ಕೆ ಕೊಟ್ಟುಕೊಳ್ಳುವ ಹೆಸರಲ್ಲ. ಪತ್ರಿಕೆಯೊಂದಕ್ಕೆ ಅಗತ್ಯವೆಂದು ಕಂಡುಬಂದರೆ, ಆ ಮೂಲವನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದು. ಓದುಗರ ಅನುಮಾನಕ್ಕೆ ಉತ್ತರವನ್ನು ಆ ‘ಮೂಲ’ದ ಮೂಲಕ ಕೊಡಿಸಬಹುದು. ದುರಂತ ಏನೆಂದರೆ, ಭಯೋತ್ಪಾದನೆಯ ಹೆಸರಲ್ಲಿ ಈ ಹಿಂದೆಲ್ಲ ಪ್ರಕಟವಾಗುತ್ತಿದ್ದ ಮೂಲಗಳನ್ನಾಧರಿಸಿದ ಹೆಚ್ಚಿನ ಸುದ್ದಿಗಳಿಗೆ ಖಚಿತತೆಯೇ ಇದ್ದಿರಲಿಲ್ಲ. ಇದಮಿತ್ಥಂ ಅನ್ನುವ ಮೂಲವೂ ಇದ್ದಿರಲಿಲ್ಲ. ಹೆಚ್ಚಿನವು ಪತ್ರಕರ್ತನ ಕೈಚಳಕವನ್ನು ಅವಲಂಬಿಸಿಕೊಂಡಿತ್ತು. ತಾನೇ ಒಂದು ರೋಮಾಂಚಕ ಕತೆಯನ್ನು ಹೆಣೆದು ಕೊನೆಯಲ್ಲಿ ಮೂಲಗಳು ತಿಳಿಸಿವೆ ಎಂದು ಮುಗಿಸಿ ಬಿಡುವ ಪರಿಪಾಠವೂ ನಡೆದಿತ್ತು. ಕೆಲವು ಸತ್ಯಶೋಧನಾ ಸಮಿತಿಗಳು ಮತ್ತು ಪ್ರಜ್ಞಾವಂತ ಓದುಗರು ಈ ಮೂಲಗಳ ಅಧಿಕೃತತೆಯನ್ನು ಮತ್ತೆ ಮತ್ತೆ ಪ್ರಶ್ನಿಸತೊಡಗಿದುದರಿಂದ ಇವತ್ತು ಪತ್ರಿಕೆಗಳು ತುಸು ಎಚ್ಚರಿಕೆಯಿಂದ ಮೂಲವನ್ನು ಬಳಸುತ್ತಿವೆ ಎಂಬುದನ್ನು ಬಿಟ್ಟರೆ, ಈ ಕ್ಷೇತ್ರದಲ್ಲಿ ಭಾರೀ ಎನ್ನಬಹುದಾದ ಪ್ರಗತಿಯೇನೂ ಆಗಿಲ್ಲ.
      ಕರಾವಳಿ ಭಾಗದಲ್ಲಿ ಸುದ್ದಿಯಾದ ಎರಡು ಘಟನೆಗಳಲ್ಲಿ ಒಂದಕ್ಕೆ ಖಚಿತವಾದ ಮೂಲ ಇದೆ. ಆದರೆ, ವಧುವಿನ ಸಾವಿಗೆ ಸಂಬಂಧಿಸಿ ಈ ಯಾವ ಖಚಿತತೆಯೂ ಇಲ್ಲ. ವಧುವಿನ ಸಾವನ್ನು ದೃಢೀಕರಿಸುವ ವ್ಯಕ್ತಿ ಇಲ್ಲ. ಅದನ್ನು ಮೊದಲಾಗಿ ಕಂಡು ಸುದ್ದಿ ತಯಾರಿಸಿದವರ ವಿಳಾಸ ಇಲ್ಲ. ಮೃತದೇಹ ಎಲ್ಲಿದೆ, ಎಲ್ಲಿ ದಫನ ಮಾಡಲಾಗುತ್ತದೆ ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ಉತ್ತರಗಳೂ ಇಲ್ಲ. ಆದರೂ ವಿದ್ಯುದಾಘಾತದ ಸುದ್ದಿಗಿಂತ ಹೆಚ್ಚು ಚರ್ಚೆಯಲ್ಲಿದ್ದುದು ಮತ್ತು ಹೆಚ್ಚು ಜನರಿಗೆ ರವಾನೆಯಾದುದು ಈ ಎರಡನೇ ಸುದ್ದಿ. ಇದನ್ನು ಹೇಗೆ ವಿಶ್ಲೇಷಿಸಬಹುದು? ಅಖಚಿತ ಸುದ್ದಿಗಳ ಮೇಲೆ ಜನರು ಯಾಕೆ ಇಷ್ಟು ಆಕರ್ಷಿತರಾಗುತ್ತಾರೆ ಅಥವಾ ಸುದ್ದಿಯನ್ನು ಖಚಿತಪಡಿಸಿಕೊಳ್ಳುವ ಬಹುಮುಖ್ಯ ಹಂತದಲ್ಲಿ ಯಾಕೆ ಎಡವುತ್ತಾರೆ? ಇದು ಓರ್ವ ವಧುವಿನ ಪ್ರಶ್ನೆಯಲ್ಲ. ಸಾರ್ವಜನಿಕ ಮನೋಭಾವದ ಪ್ರಶ್ನೆ. ಸುಳ್ಳು ಸುದ್ದಿಯನ್ನು ಸೃಷ್ಟಿಸುವವರ ಮುಂದೆ ಇವತ್ತು ಸಾಕಷ್ಟು ಅವಕಾಶಗಳು ಮುಕ್ತವಾಗಿರುತ್ತವೆ. ಅವರು ಹೇಗೆ ಬೇಕಾದರೂ ಆ ಸುದ್ದಿಯನ್ನು ಆಕರ್ಷಕಗೊಳಿಸಬಹುದು. ಬೇರೆ ಬೇರೆ ಕಥಾಪಾತ್ರಗಳನ್ನು ಸೃಷ್ಟಿಸಿಕೊಳ್ಳಬಹುದು. ಯಾಕೆಂದರೆ, ಮೂಲದಲ್ಲಿ ಅಂಥದ್ದೊಂದು ಘಟನೆ ನಡೆದಿರುವುದೇ ಇಲ್ಲ. ಕೆಲವು ಪತ್ರಿಕೆಗಳು ಭಯೋತ್ಪಾದನಾ ಘಟನೆಗಳಿಗೆ ಸಂಬಂಧಿಸಿ ಇಂಥ ಅನುಚಿತ ದಾರಿಯನ್ನು ಅವಲಂಬಿಸಿ ಜನರ ಪ್ರಶ್ನೆಗೆ ಗುರಿಯಾದುವು. ಸದ್ಯ ಸೋಶಿಯಲ್ ಮೀಡಿಯಾಗಳು ಅದರಲ್ಲೂ ವಾಟ್ಸಪ್‍ನಂಥ ಮಾಧ್ಯಮ ಇದೇ ಅನುಚಿತ ಕ್ರಮವನ್ನು ಇನ್ನಷ್ಟು ಕೆಟ್ಟದಾಗಿ ಇವತ್ತು ನಿರ್ವಹಿಸುತ್ತಿದೆ. ಮೂಲವೇ ಗೊತ್ತಿಲ್ಲದ ಸುದ್ದಿಗಳು ಅಧಿಕೃತವೆಂಬಂತೆ ರವಾನೆಯಾಗುತ್ತಿವೆ. ಆದ್ದರಿಂದ, ಪತ್ರಿಕೆಗಳ ಸುದ್ದಿ ಮೂಲವನ್ನು ಪ್ರಶ್ನಿಸಿದ ಜನರು ಈ ಮೂಲರಹಿತ ಸುದ್ದಿಗಳ ಬಗೆಗೂ ಜಾಗೃತವಾಗಬೇಕು. ಖಚಿತವಾಗದ ಯಾವ ಸುದ್ದಿಯನ್ನೂ ಇನ್ನೊಬ್ಬರಿಗೆ ರವಾನಿಸದೇ ವಿವೇಚನೆಯಿಂದ ನಡೆದುಕೊಳ್ಳಬೇಕು. ನಾವು ದ್ವೇಷಿಸಬೇಕಾದದ್ದು ವಾಟ್ಸಪ್ ಅನ್ನು ಅಲ್ಲ. ನಮ್ಮ ಅವಿವೇಕವನ್ನು. ನಮ್ಮ ಬೇಜವಾಬ್ದಾರಿತನವನ್ನು. ಇಲ್ಲದಿದ್ದರೆ ನಮ್ಮ ಸಾವಿನ ಸುದ್ದಿಯನ್ನು ನಾವೇ ಓದಬೇಕಾದಂತಹ ಪ್ರಸಂಗವೂ ಎದುರಾದೀತು.

No comments:

Post a Comment