Tuesday, 11 April 2017

ಗೋಮಾಂಸ: ಪೇಜಾವರ ಶ್ರೀಗಳು ಮಾತಾಡಲಿ

      ಆಶಾಡಭೂತತನ, ಅವಕಾಶವಾದಿತನ, ಎಡಬಿಡಂಗಿತನ, ನಕಲಿತನ, ದ್ವಂದ್ವ.. ಇತ್ಯಾದಿ ಇತ್ಯಾದಿ ಪದಗಳಿಗೂ ನಿಲುಕದ ಸ್ವಭಾವವನ್ನು ಬಿಜೆಪಿ ಪ್ರದರ್ಶಿಸುತ್ತಿದೆ. ಈ ದೇಶದ ಇನ್ನಾವ ಪಕ್ಷವೂ ಇಷ್ಟು ನಿರ್ಬಿಢೆಯಿಂದ ಇಂಥ ಸ್ವಭಾವವನ್ನು ಪ್ರದರ್ಶಿಸಿದ್ದು ಬಹುಶಃ ಇಲ್ಲವೆಂದೇ ಹೇಳಬೇಕು. ಯೋಗಿ ಆದಿತ್ಯನಾಥ್‍ರ ಸರಕಾರ ಉತ್ತರ ಪ್ರದೇಶದಲ್ಲಿ ಮಾಂಸದಂಗಡಿಗಳ ಮೇಲೆ ಸವಾರಿ ನಡೆಸುತ್ತಿದೆ. ಗೋಹತ್ಯೆ ನಡೆಸುವವರಿಗೆ ಗುಜರಾತ್‍ನಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಹೊಸ ಮಸೂದೆಯನ್ನು ಜಾರಿಗೊಳಿಸಲಾಗಿದೆ. ಛತ್ತೀಸ್‍ಗಢದ ಬಿಜೆಪಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಂತೂ ಗೋಹತ್ಯೆ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಬಗ್ಗೆ ಮಾತಾಡಿದ್ದಾರೆ. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರ ಬಿಜೆಪಿ ಸರಕಾರ ಇದೆ. ಇತ್ತೀಚೆಗಷ್ಟೇ ಅಲ್ಲಿನ ಹೊಟೇಲೊಂದರ ಮೇಲೆ ದಾಳಿ ನಡೆಸಿ ಗೋಮಾಂಸ ಇದೆಯೇ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಗೋಸಾಗಾಟದ ಹೆಸರಲ್ಲಿ ಓರ್ವರ ಹತ್ಯೆಯೂ ನಡೆದಿದೆ. ಹಾಗಂತ, ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಗೆ ತನ್ನದೇ ಆದ ವಿಚಾರಧಾರೆಯನ್ನು ಹೊಂದುವ ಮತ್ತು ಪ್ರತಿಪಾದಿಸುವ ಹಕ್ಕಿಲ್ಲ ಎಂದು ಇದರರ್ಥವಲ್ಲ. ಬಿಜೆಪಿಯು ಗೋಮಾಂಸವನ್ನು ನಿಷೇಧಿಸಬಯಸುತ್ತದೆ ಎಂದಾದರೆ ಮತ್ತು ಸಂಪೂರ್ಣ ಸಸ್ಯಾಹಾರ ಸೇವನೆಯ ರಾಷ್ಟ್ರವಾಗಿ ಭಾರತವನ್ನು ಬದಲಿಸುವುದು ಅದರ ಉದ್ದೇಶ ಎಂದಾದರೆ, ಅದನ್ನು ಪ್ರತಿಪಾದಿಸುವ ಸರ್ವ ಹಕ್ಕೂ ಅದಕ್ಕಿದೆ. ಹಾಗೆಯೇ ಅದನ್ನು ಪ್ರಶ್ನಿಸುವವರಿಗೂ ಆ ಹಕ್ಕು ಇದೆ. ಆದರೆ ಬಿಜೆಪಿ ಬೆತ್ತಲೆಯಾಗುವುದೂ ಇಲ್ಲೇ. ಮುಂದಿನ ವರ್ಷ ಈಶಾನ್ಯ ರಾಜ್ಯಗಳಾದ ಮಿಝೋರಾಂ, ಮೇಘಾಲಯ, ನಾಗಾಲ್ಯಾಂಡ್‍ಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಜೆಪಿಯು ಗೋವಿನ ಮೇಲೆ ನಿಜಕ್ಕೂ ಗೌರವ ಭಾವನೆಯನ್ನು ಇಟ್ಟುಕೊಂಡಿದ್ದರೆ ಅದನ್ನು ಪ್ರದರ್ಶಿಸುವುದಕ್ಕೆ ಅತ್ಯಂತ ಸೂಕ್ತ ರಾಜ್ಯಗಳಿವು. ಯಾಕೆಂದರೆ, ಈ ರಾಜ್ಯಗಳ ಮುಖ್ಯ ಆಹಾರವೇ ಗೋಮಾಂಸವೂ ಸೇರಿದಂತೆ ಮಾಂಸಾಹಾರ. ಕ್ರೈಸ್ತರೇ ಹೆಚ್ಚಿರುವ ರಾಜ್ಯಗಳಿವು. ಆದ್ದರಿಂದಲೇ, ಬಿಜೆಪಿಯು ಈ ರಾಜ್ಯಗಳಲ್ಲಿ ಗೋವನ್ನು ಕೈಬಿಟ್ಟಿದೆ. ಗೋಹತ್ಯೆಯನ್ನು ಮತ್ತು ಮಾಂಸಾಹಾರವನ್ನು ಈ ರಾಜ್ಯಗಳಲ್ಲಿ ನಿಷೇಧಿಸುವುದಿಲ್ಲ ಎಂದು ಅದು ಬಹಿರಂಗವಾಗಿಯೇ ಹೇಳಿದೆ. ಅದೇ ವೇಳೆ, ಕೇರಳದ ಮಲಪ್ಪುರಂನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀ ಪ್ರಕಾಶ್‍ರು, ‘ತಾನು ಗೆದ್ದರೆ ಉತ್ತಮ ಗುಣಮಟ್ಟದ ಗೋಮಾಂಸವು ಪೂರೈಕೆಯಾಗುವಂತೆ ನೋಡಿಕೊಳ್ಳುವೆ’ ಎಂದು ಭರವಸೆ ನೀಡಿದ್ದಾರೆ. ಇವೆಲ್ಲ ಏನನ್ನು ಸೂಚಿಸುತ್ತದೆ? ಗೋವಿನ ಬಗ್ಗೆ ಪೂಜನೀಯಭಾವ ಇರುವ ಪಕ್ಷವೊಂದು ಇಷ್ಟು ಉಡಾಫೆತನದಿಂದ ನಡಕೊಳ್ಳಬಹುದೇ? ಗೋವು ಈಶಾನ್ಯ ಭಾರತದ್ದಾದರೂ ಕೇರಳದ್ದಾದರೂ ಗೋವೇ. ಗುಜರಾತ್‍ನಲ್ಲಿ ಗೋವನ್ನು ಗೌರವಿಸುವುದಕ್ಕೆ ಏನೆಲ್ಲ ಐತಿಹಾಸಿಕ ಮತ್ತು ಧಾರ್ಮಿಕ ಕಾರಣಗಳಿವೆಯೋ ಅವೆಲ್ಲವೂ ಈಶಾನ್ಯ ಭಾರತದ ಗೋವುಗಳಿಗೆ ಸಂಬಂಧಿಸಿಯೂ ಇರಬೇಕಾಗುತ್ತದೆ. ಗುಜರಾತ್‍ನಲ್ಲಿರುವ ಗೋವು ಹಾಲು ಕೊಡುವಂತೆಯೇ ಈಶಾನ್ಯ ಭಾರತದ ಗೋವೂ ಹಾಲು ಕೊಡುತ್ತದೆ. ಉತ್ತರ ಪ್ರದೇಶದ ಗೋವುಗಳಿಗೆ ನಾಲ್ಕು ಕಾಲು, ಎರಡು ಕೊಂಬು, ಎರಡು ಕಿವಿ, ಕಣ್ಣು, ಒಂದು ಮೂಗುಗಳಿರುವಂತೆಯೇ ಈ ದೇಶದ ಮಿಕ್ಕೆಲ್ಲ ರಾಜ್ಯಗಳಲ್ಲಿರುವ ಗೋವುಗಳಿಗೂ ಇವೆ. ಎಲ್ಲ ಗೋವುಗಳ ದನಿಯೂ ಅಂಬಾ ಎಂದೇ ಆಗಿರುತ್ತದೆ. ಅಷ್ಟಿದ್ದೂ, ಈಶಾನ್ಯ ಭಾರತದ ಗೋವುಗಳನ್ನು ಬಿಜೆಪಿ ವಧಾರ್ಹ ಎಂದು ಘೋಷಿಸಿದ್ದು ಯಾವ ಆಧಾರದಲ್ಲಿ? ತನ್ನ ವಿಚಾರಧಾರೆಗೆ ತದ್ವಿರುದ್ಧವಾಗಿ ನಡೆದುಕೊಂಡ ಬಿಜೆಪಿಯನ್ನು ಯಾಕೆ ಅದರ ಬೆಂಬಲಿಗರು ತರಾಟೆಗೆ ಎತ್ತಿಕೊಳ್ಳುತ್ತಿಲ್ಲ? ಬಿಜೆಪಿಯ ಬೆಳವಣಿಗೆಯಲ್ಲಿ ಹಲವಾರು ಸ್ವಾಮೀಜಿಗಳ ಪಾತ್ರ ಇದೆ. ಮಠ, ದೇವಸ್ಥಾನಗಳ ಬೆಂಬಲ ಇದೆ. ಪೇಜಾವರ ಶ್ರೀಗಳೂ ಅವರಲ್ಲಿ ಒಬ್ಬರು. ರಾಮಚಂದ್ರಪುರ ಮಠವಂತೂ ಗೋ ಚಳವಳಿಯನ್ನೇ ಹಮ್ಮಿಕೊಂಡಿದೆ. ಅದನ್ನು ಗೌರವಿಸೋಣ. ಆದರೆ, ಬಿಜೆಪಿಯ ಈ ದ್ವಂದ್ವ ನೀತಿಯ ಕುರಿತೇಕೆ ಅವರು ಮಾತಾಡುತ್ತಿಲ್ಲ? ಗೋಪ್ರೇಮವನ್ನು ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿಕೊಂಡ ಪಕ್ಷವೊಂದು ಈ ಮಟ್ಟದಲ್ಲಿ ಅವಕಾಶವಾದಿಯಾಗುವುದಕ್ಕೆ ಇವರ ಸಮ್ಮತಿ ಇದೆಯೇ?
     ನಿಜವಾಗಿ, ರಾಜಕೀಯ ಪಕ್ಷವೊಂದು ಧರ್ಮರಕ್ಷಣೆಯ ಗುತ್ತೇದಾರಿಕೆ ವಹಿಸಿಕೊಂಡರೆ ಏನೆಲ್ಲ ಅಪದ್ಧಗಳಾಗಬಹುದೋ ಅದರ ತಾಜಾ ಉದಾಹರಣೆ ಬಿಜೆಪಿಯದು. ಗೋವು ಆಹಾರವಾಗಿ ಬಳಕೆಯಾಗಬೇಕೆ.. ಮಾಂಸಾಹಾರ ಎಷ್ಟು ಧರ್ಮಬದ್ಧ.. ಇತ್ಯಾದಿಗಳು ಇತ್ಯರ್ಥವಾಗಬೇಕಾದದ್ದು ಜನರ ನಡುವೆ. ಅದರ ಪರ ಮತ್ತು ವಿರುದ್ಧ ಇರುವರು ಜೊತೆಗೆ ಕೂತು ಅದರ ಸರಿ-ತಪ್ಪುಗಳ ಬಗ್ಗೆ ಚರ್ಚಿಸಬೇಕು. ಆ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸಬೇಕು. ಒಂದು ವೇಳೆ, ತಮ್ಮ ಅಭಿಪ್ರಾಯವೇ ಧರ್ಮದ ಅಧಿಕೃತ ನಿಲುವು ಎಂದು ಒಂದು ಗುಂಪಿಗೆ ಅನಿಸುವುದಾದರೆ ಅದನ್ನು ಪ್ರಸ್ತುತಪಡಿಸುವುದಕ್ಕೆ           ಇರುವ ಸಾಂವಿಧಾನಿಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಗೋವು ಮಾಂಸವಾಗಿ ಸರಿ ಅನ್ನುವವರಿಗೂ ತಪ್ಪು ಅನ್ನುವವರಿಗೂ ಅವುಗಳನ್ನು ಮಂಡಿಸುವುದಕ್ಕೆ ಮತ್ತು ಸಾರ್ವಜನಿಕ ಬೆಂಬಲವನ್ನು ಕ್ರೋಢೀಕರಿಸುವುದಕ್ಕೆ ಈ ದೇಶದಲ್ಲಿ ಸ್ವಾತಂತ್ರ್ಯ ಇದೆ. ಗೋಹತ್ಯೆಯು ಧರ್ಮವಿರೋಧಿ ಅನ್ನುವವರು ನಿರಾಶರಾಗಬೇಕಾದ ಮತ್ತು ದೌರ್ಜನ್ಯದ ಮೂಲಕ ತಮ್ಮ ವಾದವನ್ನು ಚಿರಸ್ಥಾಯಿಗೊಳಿಸಿಕೊಳ್ಳುವುದಕ್ಕೆ ಮುಂದಾಗಬೇಕಾದ ಯಾವ ಅಗತ್ಯವೂ ಇಲ್ಲ. ಇಲ್ಲಿ ಧರ್ಮವಿರೋಧಿಯಾದ ಅನೇಕಾರು ಅಂಶಗಳು ಧಾರ್ಮಿಕ ಜನಜಾಗೃತಿಯಿಂದಾಗಿ ಕಣ್ಮರೆಯಾಗಿವೆ. ಅದೇ ವೇಳೆ, ಗೋಮಾಂಸವನ್ನು ಧಾರ್ಮಿಕವಾಗಿ ಸರಿ ಅನ್ನುವವರಿಗೂ ಇಲ್ಲಿ ಅವಕಾಶ ಇದೆ. ಅದಕ್ಕಾಗಿ ಚಳವಳಿ ಹಮ್ಮಿಕೊಳ್ಳುವುದಕ್ಕೂ ಸ್ವಾತಂತ್ರ್ಯ ಇದೆ. ಧಾರ್ಮಿಕವಾಗಿ ಭಿನ್ನಾಭಿಪ್ರಾಯಗಳಿರುವ ವಿಷಯದ ಮೇಲಿನ ಆಯ್ಕೆಯ ಸ್ವಾತಂತ್ರ್ಯವನ್ನು ಜನರಿಗೆ ಬಿಟ್ಟುಕೊಡಬೇಕೇ ಹೊರತು ಇದುವೇ ಸರಿ ಎಂದು ವಾದಿಸುವುದು ಮತ್ತು ಅದನ್ನೇ ಅನುಸರಿಸುವಂತೆ ಬಲವಂತ ಪಡಿಸುವುದು ಉಗ್ರವಾದಿತನವಾಗುತ್ತದೆ. ಗೋವು ಈ ದೇಶದಲ್ಲಿ ಇತ್ಯರ್ಥವಾಗಬೇಕಾದದ್ದು ಈ ರೀತಿಯಲ್ಲೇ. ಆದರೆ ಯಾವಾಗ ರಾಜಕೀಯ ಪಕ್ಷವೊಂದು ಈ ಚರ್ಚೆಯನ್ನು ತನ್ನ ಪ್ರಾಂಗಣಕ್ಕೆ ಎಳೆದುಕೊಂಡಿತೋ ಮತ್ತು ಗೋಮಾಂಸ ತಪ್ಪು ಎಂಬ ಅಭಿಪ್ರಾಯ ಇರುವವರು ಈ ಬೆಳವಣಿಗೆಯಲ್ಲಿ ತಮ್ಮ ಗೆಲುವನ್ನು ಕಾಣತೊಡಗಿದರೋ ಆಗಲೇ ಗೋವು ನಿಜಕ್ಕೂ ತಬ್ಬಲಿಯಾಯಿತು. ಬಿಜೆಪಿಗೆ ಗೋವು ಅಗತ್ಯವಿತ್ತೇ ಹೊರತು ಗೋವಿನ ಸಂರಕ್ಷಣೆ ಬಿಜೆಪಿಯ ಆದ್ಯತೆಯಾಗಿರಲಿಲ್ಲ. ಬಿಜೆಪಿ ಸದ್ಯ ಪ್ರದರ್ಶಿಸುತ್ತಿರುವ ಎಡಬಿಡಂಗಿ ನಿಲುವು ಸ್ಪಷ್ಟಪಡಿಸುವುದು ಇದನ್ನೇ. ಒಂದು ಕಡೆ, ಅದು ಗೋಮಾಂಸ ಸಾಗಾಟದ ಹೆಸರಲ್ಲಿ ಹಲ್ಲೆ-ಹತ್ಯೆಗಳಾಗುವುದನ್ನು ಆನಂದಿಸುತ್ತದೆ. ಅಂಥವರನ್ನು ಸಮರ್ಥಿಸುತ್ತದೆ. ಆ ಮೂಲಕ ತನ್ನ ಮೇಲೆ ವಿಶ್ವಾಸವಿಟ್ಟ ‘ಗೋಪರ ಗುಂಪಿನ’ ಬೆಂಬಲ ತಪ್ಪದಂತೆ ನೋಡಿಕೊಳ್ಳುತ್ತದೆ. ಇನ್ನೊಂದು ಕಡೆ, ಈ ನಾಣ್ಯ ಚಲಾವಣೆಗೆ ಬರಲಾರದೆಂಬ ಸ್ಥಿತಿ ಇರುವಲ್ಲಿ ಗೋಮಾಂಸವನ್ನು ಸಮರ್ಥಿಸುತ್ತದೆ.
      ಗೋವು ಸಾಧು ಪ್ರಾಣಿ ಮತ್ತು ಮಾನವರ ಮೆನುವಿನಲ್ಲಿ ಖಾಯಂ ಸ್ಥಾನ ಪಡೆದಿರುವ ಹಾಲನ್ನು ಕೊಡುವ ಬಹು ಅಮೂಲ್ಯ ಪ್ರಾಣಿ. ಹಾಲು ಕೊಡುವ ಪ್ರಾಣಿ ಆಹಾರವಾಗುವುದು ಖಂಡಿತಕ್ಕೂ ತಪ್ಪು. ಅದು ಶಿಕ್ಷಾರ್ಹ. ಪ್ರಕೃತಿ ವಿರೋಧಿ. ಆದರೆ ಹಾಲು ಕೊಡುವುದನ್ನು ನಿಲ್ಲಿಸಿದ ಪ್ರಾಣಿ ಆಹಾರವಾಗುವುದು ತಪ್ಪೇ ಎಂಬುದು ಚರ್ಚಾರ್ಹ. ಈ ಚರ್ಚೆಯನ್ನು ನಿರ್ವಹಿಸುವುದಕ್ಕೆ ತಾನು ಅನರ್ಹ ಎಂದು ಬಿಜೆಪಿ ಈಗಾಗಲೇ ಸಾಬೀತುಪಡಿಸಿದೆ. ಆದ್ದರಿಂದ ರಾಜಕೀಯಮುಕ್ತ ಚರ್ಚೆ ನಡೆಯಲಿ. ಅವಕಾಶವಾದಿಗಳ ಕೈಗೆ ಸಿಲುಕಿ ಗೋವು ತಬ್ಬಲಿಯಾಗದಿರಲಿ.

No comments:

Post a Comment