Tuesday, 26 December 2017

ತಲಾಕ್: ಸುಧಾರಣೆಯೋ, ಸಮಸ್ಯೆಯೋ?

   ಮತ್ತೊಂದು ಸುತ್ತಿನ ಚರ್ಚೆಗೆ ತಲಾಕ್ ಸಿದ್ಧವಾಗಿದೆ. ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರವೆಂದು ಕಳೆದ ಆಗಸ್ಟ್ ನಲ್ಲಿ ಸುಪ್ರೀಮ್ ಕೋರ್ಟ್ ಘೋಷಿಸಿದ ಬಳಿಕ ಒಂದೆರಡು ವಾರಗಳ ತನಕ ‘ಮಾಧ್ಯಮ ಡಾರ್ಲಿಂಗ್’ ಆಗಿ ಗುರುತಿಸಿಕೊಂಡು ಬಳಿಕ ತಣ್ಣಗಾದ ‘ತಲಾಕ್’, ಮತ್ತೆ ಬಹು ಚರ್ಚಿತಗೊಳ್ಳುವುದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ‘ಮುಸ್ಲಿಮ್ ಮಹಿಳೆಯ ವಿವಾಹ ಮತ್ತು ಹಕ್ಕು ರಕ್ಷಣಾ ಮಸೂದೆ’ಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಈ ಮಸೂದೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ ಬಹಿರಂಗವಾಗಿರುವ ವಿಷಯಗಳಲ್ಲಿ ಒಂದಷ್ಟು ಅನುಮಾನ ಮತ್ತು ಆತಂಕಕ್ಕೆ ಎಡೆ ಮಾಡಿಕೊಡುವ ಅಂಶಗಳಿವೆ. ಇಡೀ ಮಸೂದೆಯನ್ನು ಕೇಂದ್ರ ಸಚಿವರ ಆಂತರಿಕ ಸಮಿತಿ ರಚಿಸಿದೆ. ತ್ರಿವಳಿ ತಲಾಕ್ ನೀಡುವ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವು ಈ ಮಸೂದೆಯಲ್ಲಿದೆ. ತ್ರಿವಳಿ ತಲಾಕನ್ನು ಜಾಮೀನುರಹಿತ ಅಪರಾಧವಾಗಿ ಪರಿಗಣಿಸಲಾಗುತ್ತದೆ. ತ್ರಿವಳಿ ತಲಾಕ್ ಪಡೆದುಕೊಂಡ ಮಹಿಳೆ ಪರಿಹಾರವನ್ನು ಬಯಸಿ ಮತ್ತು ಅಪ್ರಾಪ್ತ ಮಕ್ಕಳನ್ನು ತನ್ನ ಬಳಿ ಇರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಭಾರತದಾದ್ಯಂತದ ತ್ರಿವಳಿ ತಲಾಕ್‍ಗಳು ಈ ಮಸೂದೆಯ ವ್ಯಾಪ್ತಿಗೆ ಒಳಪಡಲಿದೆ.
    ವಿಚಿತ್ರ ಏನೆಂದರೆ, ಮುಸ್ಲಿಮ್ ಸಮುದಾಯದ ಯಾರೊಬ್ಬರಲ್ಲೂ ಈ ಮಸೂದೆಗೆ ಸಂಬಂಧಿಸಿ ಚರ್ಚಿಸಲಾಗಿಲ್ಲ. ಈ ದೇಶದಲ್ಲಿ ಸುಮಾರು 20 ಕೋಟಿಯಷ್ಟು ಮುಸ್ಲಿಮರಿದ್ದಾರೆ. ಇಷ್ಟೊಂದು ಬೃಹತ್ ಜನಸಮುದಾಯದಲ್ಲಿ ತಪ್ಪಾಗಿ ಚಾಲ್ತಿಯಲ್ಲಿರುವ ಒಂದು ಸಂಪ್ರದಾಯದ ಮೇಲೆ ಕಾನೂನು ರಚಿಸುವಾಗ ಆ ಸಮುದಾಯದ ಧ್ವನಿಯನ್ನೇ ನಿರ್ಲಕ್ಷಿಸಬೇಕಾದ ಅಗತ್ಯ ಏನಿತ್ತು? ತ್ರಿವಳಿ ತಲಾಕ್ ಎಂಬುದು ಮುಸ್ಲಿಮ್ ಸಮುದಾಯವು ಸರ್ವಾನುಮತದಿಂದ ಬೆಂಬಲಿಸುತ್ತಿರುವ ವಿಚ್ಛೇದನ ಕ್ರಮವಲ್ಲ. ಇಸ್ಲಾಮಿನ ಪ್ರಕಾರ ವಿವಾಹವೆಂಬುದು ಒಂದು ಒಪ್ಪಂದ. ಯಾವ ಒಪ್ಪಂದವೇ ಆಗಲಿ, ಅದರ ಸಿಂಧುತ್ವಕ್ಕೆ ಕೆಲವು ನಿಯಮಗಳಿವೆ. ಸಾಕ್ಷಿಗಳು ಮತ್ತು ಅನುಮೋದಕರ ಹೊರತಾಗಿ ಒಪ್ಪಂದ ವೊಂದು ಊರ್ಜಿತಗೊಳ್ಳಲು ಸಾಧ್ಯವಿಲ್ಲ. ಇಸ್ಲಾಮಿನ ವಿವಾಹವೆಂಬುದು ಸಾಕ್ಷಿಗಳ ರುಜು ಮತ್ತು ಆಯಾ ಮಸೀದಿಗಳ ಅನುಮೋದನೆಯೊಂದಿಗೆ ನಡೆಯುತ್ತದೆ. ಒಂದು ವೇಳೆ, ಈ ಒಪ್ಪಂದವನ್ನು ಅನೂರ್ಜಿತಗೊಳಿಸುವುದಾದರೂ ಅದಕ್ಕೂ ಕೆಲವು ನಿಯಮಗಳಿವೆ. ವಿವಾಹಕ್ಕೆ ಸಾಕ್ಷಿಗಳು ಬೇಕಿರುವಂತೆಯೇ ವಿವಾಹ ವಿಚ್ಛೇದನಕ್ಕೂ ಸಾಕ್ಷಿಗಳ ಅಗತ್ಯ ಇದೆ. ತಲಾಕ್ ಎಂಬುದು ಏಕಮುಖ ಅಲ್ಲ. ಅದು ಬಹುಮುಖಿಯಾದುದು. ತಲಾಕನ್ನು ಪತಿ ಮತ್ತು ಪತ್ನಿಯ ನಡುವಿನ ಖಾಸಗಿ ವಿಷಯ ವಾಗಿ ಇಸ್ಲಾಮ್ ಪರಿಗಣಿಸುವುದಿಲ್ಲ. ಯಾವಾಗ ಅದು ಖಾಸಗಿ ವಿಷಯವಾಗಿ ಮಾರ್ಪಡುತ್ತದೋ ಆಗ ತ್ರಿವಳಿ ತಲಾಕ್‍ನಂತಹ ತಪ್ಪಾದ ಕ್ರಮಗಳು ರೂಢಿಗೆ ಬರುತ್ತವೆ. ನಿಜವಾಗಿ, ತಲಾಕ್ ನೀಡಬಯಸುವ ವ್ಯಕ್ತಿ ಅದಕ್ಕಾಗಿ ಕೆಲವು ನೀತಿ-ಸಂಹಿತೆಗಳನ್ನು ಪಾಲಿಸಬೇಕಾಗುತ್ತದೆ. ಮೊದಲು ಆತ ಆ ಬಗ್ಗೆ ಪತ್ನಿಗೆ ತಿಳಿಸಬೇಕಾಗುತ್ತದೆ. ಬಳಿಕ, ಪತ್ನಿಯ ಮತ್ತು ತನ್ನ ಕುಟುಂಬದ ತಜ್ಞರಲ್ಲಿ ವಿಷಯ ಪ್ರಸ್ತಾಪಿಸಬೇಕಾಗುತ್ತದೆ. ಕನಿಷ್ಠ ಮೂರು ತಿಂಗಳ ಅವಧಿಯ ಹೊರತು ತಲಾಕ್ ನೀಡಲು ಅಸಾಧ್ಯವಾಗಬಹುದಾದ ನಿಯಮವು ಇಸ್ಲಾಮಿನದ್ದು. ಹಾಗಂತ, ಈ ನೀತಿಸಂಹಿತೆ ನೂರು ಶೇಕಡಾ ಪಾಲನೆಯಾಗುತ್ತಿದೆ ಎಂದಲ್ಲ. ಮುಸ್ಲಿಮ್ ಸಮುದಾಯದಲ್ಲಿ ನಗಣ್ಯ ಸಂಖ್ಯೆಯಲ್ಲಾದರೂ ತ್ರಿವಳಿ ತಲಾಕನ್ನು ಪಾಲಿಸುವವರಿದ್ದಾರೆ. ಇದನ್ನು ಯಾರೂ ನಿರಾಕರಿಸುತ್ತಲೂ ಇಲ್ಲ. ಹಾಗಂತ, ಇಡೀ ಮುಸ್ಲಿಮ್ ಸಮುದಾಯವನ್ನೇ ಅಪರಾಧಿಯಂತೆ ಕಾಣುವ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದ ಸುಧಾರಣೆಯೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ, ಆ ಸಮುದಾಯದ ಧ್ವನಿಯನ್ನು ಆಲಿಸುವುದೂ ಮುಖ್ಯವಾಗಬೇಡವೇ? ಮುಸ್ಲಿಮ್ ಸಮುದಾಯದ ಕಲ್ಯಾಣವನ್ನು ಬಯಸಿ ಚಟುವಟಿಕೆಯಿಂದಿರುವ ಮಹಿಳೆಯರ ಮತ್ತು ಪುರುಷರ ಹಲವು ಸಂಘಟನೆಗಳು ಈ ದೇಶದಲ್ಲಿವೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತನ್ನ ವಾದವನ್ನು ಮಂಡಿಸಿದೆ. ಅದರ ನಿಲುವುಗಳು ಏನೇ ಇರಲಿ, ಸುಪ್ರೀಮ್ ಕೋರ್ಟ್‍ನ ತೀರ್ಪನ್ನು ಅದೂ ಒಪ್ಪಿಕೊಂಡಿದೆ. ಹೀಗಿರುವಾಗ, ಕರಡು ರಚನೆಯ ವೇಳೆ ಈ ಕಾನೂನು ಮಂಡಳಿಯೂ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಶರೀಅತ್ ತಜ್ಞರ ಅಭಿಪ್ರಾಯಗಳನ್ನು ಕೇಳಬಹುದಿತ್ತಲ್ಲವೇ? ಒಂದು ಸಮುದಾಯದ ಮೇಲೆ ಕಾನೂನನ್ನು ಹೇರುವುದಕ್ಕೂ ಅದರ ವಿಶ್ವಾಸವನ್ನು ಗಳಿಸಿ ಕಾನೂನು ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಒಂದು ಸರ್ವಾಧಿಕಾರಿ ನಿಲುವಾದರೆ ಇನ್ನೊಂದು ಪ್ರಜಾತಂತ್ರ ನಿಲುವು. ಕೇಂದ್ರ ಸರಕಾರ ಯಾಕೆ ಸರ್ವಾಧಿಕಾರಿ ನಿಲುವನ್ನೇ ಆಯ್ಕೆ ಮಾಡಿಕೊಂಡಿದೆ? ಅದರ  ಗುರಿ ತ್ರಿವಳಿ ತಲಾಕನ್ನು ನಿಷ್ಕ್ರಿಯ ಗೊಳಿಸುವುದಕ್ಕಿಂತಲೂ ಮುಸ್ಲಿಮ್ ಸಮುದಾಯವನ್ನು ಚರ್ಚೆಯ ಮೊನೆಯಲ್ಲಿ ನಿಲ್ಲಿಸುವುದೇ ಆಗಿದೆಯೇ? ಮುಸ್ಲಿಮ್ ಸಮುದಾಯದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಮಸೂದೆ ರೂಪಿಸುವುದೆಂದರೆ, ‘ವಿವಾದ ರಹಿತ’ ಮಸೂದೆಯನ್ನು ತಯಾರಿಸುವುದು ಎಂದೇ ಅರ್ಥ. ಹಾಗೊಂದು ವೇಳೆ ವಿವಾದ ರಹಿತ ಮಸೂದೆ ರಚನೆಯಾಗಿ ಬಿಟ್ಟರೆ ಅದರಿಂದ ಮುಸ್ಲಿಮರಿಗೆ ಸಂಬಂಧಿಸಿ ತನ್ನ ‘ಉಗ್ರ ವರ್ಚಸ್ಸಿಗೆ’ ಧಕ್ಕೆಯಾಗಬಹುದು ಎಂದು ಕೇಂದ್ರ ಸರಕಾರ ಭಾವಿಸಿತೆ? ತಲಾಕ್, ಬಹುಪತ್ನಿತ್ವ, ಜಿಹಾದ್, ವಂದೇ ಮಾತರಂ.. ಇತ್ಯಾದಿಗಳೆಲ್ಲ ವಿವಾದವಾದಷ್ಟು ಕೇಂದ್ರ ಸರಕಾರಕ್ಕೆ ಲಾಭ ಹೆಚ್ಚು ಎಂಬುದನ್ನು ಚುನಾವಣೆಗಳು ಸಾಬೀತುಪಡಿಸುತ್ತಿವೆ. ಮುಸ್ಲಿಮ್ ವಿರೋಧಿ ಹಣೆಪಟ್ಟಿಯೊಂದನ್ನು ಸದಾ ಧರಿಸಿರಬೇಕೆಂಬುದು ಬಿಜೆಪಿಯ ಅಲಿಖಿತ ಸಂವಿಧಾನ. ಆ ಸಂವಿಧಾನದಂತೆಯೇ ತ್ರಿವಳಿ ತಲಾಕ್ ಮಸೂದೆಯನ್ನು ತಯಾರಿಸಲಾಯಿತೇ?
    ಅಷ್ಟಕ್ಕೂ, ವರದಕ್ಷಿಣೆ, ಅತ್ಯಾಚಾರ, ಗೃಹಹಿಂಸೆಯಂಥ ಅಪರಾಧಗಳ ವಿರುದ್ಧ ರಚಿಸಲಾದ ಕಾನೂನುಗಳು ಇವತ್ತು ದುರುಪಯೋಗವಾಗುತ್ತಿರುವುದು ಎಲ್ಲರಿಗೂ ಗೊತ್ತು. ಇಲ್ಲಿನ ನ್ಯಾಯಾಲಯಗಳೇ ಇದನ್ನು ಒಪ್ಪಿಕೊಂಡಿವೆ. ಒಂದು ರೀತಿಯಲ್ಲಿ ಪ್ರತಿ ಕಾನೂನೂ ದುರುಪಯೋಗದ ಸಾಧ್ಯತೆಯನ್ನು ಹೊಂದಿರುತ್ತವೆ ಎಂಬುದೇ ಸತ್ಯ. ಆಯಾ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡವರೊಂದಿಗೆ ಸಮಾಲೋಚಿಸಿ ರೂಪಿಸಲಾದ ಈ ಮೇಲಿನ ಕಾನೂನುಗಳೇ ದುರುಪಯೋಗಕ್ಕೆ ಒಳಗಾಗಬಹುದಾದರೆ ಇನ್ನು ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯದೆಯೇ ರೂಪಿಸಲಾದ ಕಾನೂನು ಎಷ್ಟು ಪರಿಣಾಮಕಾರಿಯಾಗಬಹುದು? ಇನ್ನು ಮುಂದೆ, ‘ಸರಿ’ ತಲಾಕೂ ತ್ರಿವಳಿ ತಲಾಕ್ ಆಗಿ ಗುರುತಿಸಿಕೊಳ್ಳಬಹುದೇ? ಈ ವರೆಗೆ ಶೋಷಕ ಪಾತ್ರ ಪುರುಷನದ್ದಾಗಿತ್ತು. ಇನ್ನು ಅದು ಮಹಿಳೆಯ ಪಾಲಾಗಲಿದೆಯೇ? ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಈಗಾಗಲೇ ‘ದೂರು ಭಾರ’ದಿಂದ ಕುಸಿದು ಕೂತಿದೆ. ಇನ್ನು ತ್ರಿವಳಿ ತಲಾಕ್‍ನ ಭಾರವು ಅದರ ಮೇಲೆ ಬಿದ್ದರೆ ಅದು ಅದರ ವೇಗವನ್ನು ಎಷ್ಟು ವರ್ಷಗಳ ಹಿಂದಕ್ಕೆ ಒಯ್ಯಬಹುದು? ದೂರು ಪ್ರತಿದೂರುಗಳ ಜಗ್ಗಾಟದಲ್ಲಿ ಯಾರು ಗೆಲ್ಲಬಹುದು? ಆ ಗೆಲುವಿನಲ್ಲಿ ನಿಜ ಗೆಲುವು ಯಾರಿಗೆಲ್ಲ ದಕ್ಕಬಹುದು? ಹಾಗೆ ನ್ಯಾಯ ಸಿಗುವಾಗ ದೂರುದಾರ ಪತಿ-ಪತ್ನಿ ಎಷ್ಟು ವರ್ಷಗಳನ್ನು ಖರ್ಚು ಮಾಡಬೇಕಾಗಬಹುದು?
ತಪ್ಪನ್ನು ತಿದ್ದಿಕೊಳ್ಳಬೇಕಾದುದು ಖಂಡಿತ ಅಗತ್ಯ. ಆದರೆ ಈ ತಿದ್ದುಪಡಿಗೆ ನೇತೃತ್ವವನ್ನು ನೀಡಿದವರ ವರ್ತನೆಯನ್ನು ನೋಡುವಾಗ ಈ ತಿದ್ದುಪಡಿಯೇ ಇನ್ನಷ್ಟು ತಪ್ಪುಗಳ ಉತ್ಪಾದಕವಾಗುವ ಸಾಧ್ಯತೆಯೇ ಕಾಣುತ್ತಿದೆ. ಇದು ಆತಂಕಕಾರಿ.



Monday, 25 December 2017

ಗುಜರಾತ್ ವಿಶ್ಲೇಷಣೆ: ರಾಹುಲ್, ಜಿಗ್ನೇಶ್ ಹಣೆಯಲ್ಲೇ ಎಲ್ಲವೂ ಇದೆ...

      ಬದುಕು ಮತ್ತು ಭಾವನೆಗಳ ನಡುವಿನ ಸಮರ ಎಂದೇ ಹೇಳಬಹುದಾಗಿದ್ದ ಗುಜರಾತ್ ಚುನಾವಣೆಯಲ್ಲಿ ಭಾವನೆ
ಮೇಲುಗೈ ಪಡೆದಿದೆ. ಬದುಕು ಬದಿಗೆ ಸರಿದಿದೆ. ಗುಜರಾತ್‍ನ ಒಟ್ಟು ಸಾಮಾಜಿಕ ವಾತಾವರಣ ಹೇಗಿದೆ ಎಂಬುದಕ್ಕೆ ಜಿಗ್ನೇಶ್ ಮೇವಾನಿ ಮತ್ತು ರಾಹುಲ್‍ಗಾಂಧಿಯವರ ಹಣೆಯೇ ಸಾಕ್ಷಿ. ಹಿಂದುಳಿದ ವರ್ಗಗಳ ಐಕಾನ್ ಆಗಿ ಮೂಡಿಬಂದಿರುವ ಜಿಗ್ನೇಶ್ ಮೇವಾನಿಯವರ ಹಣೆಯಲ್ಲಿ ಚುನಾವಣಾ ಪ್ರಚಾರದುದ್ದಕ್ಕೂ ಕುಂಕುವ ಎದ್ದು ಕಾಣುತ್ತಿತ್ತು. ರಾಹುಲ್ ಗಾಂಧಿಯವರ ಹಣೆಯನ್ನೂ ಕುಂಕುಮ ಅಲಂಕರಿಸಿತ್ತು. ಗುಜರಾತ್‍ನ ಉನಾ ಎಂಬಲ್ಲಿ ಐವರು ದಲಿತ ಯುವಕರನ್ನು ಅರೆಬೆತ್ತಲೆಗೊಳಿಸಿ ಥಳಿಸಲಾದ ಘಟನೆಯ ಬಳಿಕ ಭಾರೀ ಸದ್ದಿನೊಂದಿಗೆ ಮುನ್ನೆಲೆಗೆ ಬಂದ ವ್ಯಕ್ತಿ ಜಿಗ್ನೇಶ್ ಮೇವಾನಿ. ಹಿಂದೂ ಧರ್ಮಕ್ಕೂ ಮತ್ತು ಜಿಗ್ನೇಶ್ ಪ್ರತಿನಿಧಿಸುವ ದಲಿತ-ಹಿಂದುಳಿದ ಸಮುದಾಯಕ್ಕೂ ನಡುವೆ ಶತ ಶತಮಾನಗಳಿಂದ ಭಿನ್ನಾಭಿಪ್ರಾಯಗಳಿವೆ. ಈ ಸಮುದಾಯ ಆರಾಧನಾ ಕ್ರಮ ಬೇರೆ. ಆಹಾರ ಪದ್ಧತಿ ಬೇರೆ. ನಾಮಸೂಚಿಗಳು ಬೇರೆ. ಸಾಮಾಜಿಕ ರೀತಿ-ನೀತಿಗಳು ಬೇರೆ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿರುವುದಕ್ಕೆ ಈ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯಗಳೇ ಮುಖ್ಯ ಕಾರಣ. ದಲಿತ- ಹಿಂದುಳಿದ ಸಮುದಾಯಗಳು ಹಿಂದೂ ಧರ್ಮದ ಒಳಗೋ-ಹೊರಗೋ ಎಂಬ ಕುರಿತು ಅಸಂಖ್ಯ ಚರ್ಚೆಗಳು ನಡೆದಿವೆ. ಈಗಲೂ ನಡೆಯುತ್ತಿದೆ. ಕುಂಕುಮವು ದಲಿತ ಸಮುದಾಯದ ಗುರುತು ಆಗಿ ಎಲ್ಲೂ ಗುರುತಿಸಿಕೊಂಡಿಲ್ಲ. ಹೀಗಿದ್ದೂ `ಉನಾ'ದಿಂದ ಹುಟ್ಟಿಕೊಂಡ ಜಿಗ್ನೇಶ್, ತನ್ನ ಹಣೆಯಲ್ಲಿ ಕುಂಕುಮ ಸದಾ ಎದ್ದು ಕಾಣುವಂತೆ ನೋಡಿಕೊಂಡಿರುವುದು ಯಾವ ಉದ್ದೇಶದಿಂದ? ರಾಹುಲ್ ಗಾಂಧಿಯು ಗುಜರಾತ್ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೇ ಮಂದಿರ ಭೇಟಿಯ ಮೂಲಕ. ಪ್ರಚಾರ ಸಮಯದಲ್ಲಿ ಸುಮಾರು 26ಕ್ಕಿಂತೂ ಅಧಿಕ ಮಂದಿರಗಳಿಗೆ ಭೇಟಿಕೊಟ್ಟರು. ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಯು ಇಡೀ ಗುಜರಾತ್‍ನಲ್ಲಿ ಯಾವ ಬಗೆಯ ವಾತಾವರಣವನ್ನು ಹುಟ್ಟುಹಾಕಿದೆ ಎಂಬುದನ್ನು ಇವರಿಬ್ಬರ ಹಣೆಯೇ ಹೇಳುತ್ತಿದೆ. ಬಹುಸಂಖ್ಯಾತ ಧರ್ಮದ ಪ್ರತಿನಿಧಿಗಳಾಗಿ ಗುರುತಿಸಿಕೊಳ್ಳುವುದು ಗುಜರಾತ್‍ನ ಮಟ್ಟಿಗೆ ಅನಿವಾರ್ಯ. ರಾಹುಲ್ ಗಾಂಧಿಯನ್ನು ಎಲ್ಲಿಯವರೆಗೆ ಒತ್ತಡಕ್ಕೆ ಸಿಲುಕಿಸಲಾಯಿತೆಂದರೆ ಒಂದು ಹಂತದಲ್ಲಿ ಅವರು ತಮ್ಮ ಜನಿವಾರವನ್ನೂ ಪ್ರದರ್ಶಿಸಬೇಕಾಯಿತು. ‘ತಾನು ಶಿವನ ಆರಾಧಕ’ ಎಂದೂ ಬಹಿರಂಗವಾಗಿಯೇ ಹೇಳಬೇಕಾಯಿತು. ‘ರಾಹುಲ್ ಗಾಂಧಿಯವರು ಮಸೀದಿ ಪರವೋ ಮಂದಿರ ಪರವೋ’ ಎಂಬ ಪ್ರಶ್ನೆಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಎಸೆದರು. ಅಹ್ಮದ್ ಪಟೇಲ್‍ರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿದೆ ಎಂದು ಪ್ರಧಾನಿಯವರು ಹೇಳುವ ಮೂಲಕ, ಕಾಂಗ್ರೆಸನ್ನು ಗೆಲ್ಲಿಸಿದರೆ ಗುಜರಾತ್‍ಗೆ ಮುಸ್ಲಿಮನೊಬ್ಬ ಮುಖ್ಯಮಂತ್ರಿಯಾಗುತ್ತಾನೆ ಎಂಬ ಸೂಚನೆ ಕೊಟ್ಟರು. ರಾಹುಲ್ ಗಾಂಧಿಯವರು ಅಪ್ಪಿ-ತಪ್ಪಿಯೂ ಮಸೀದಿಗೆ ಭೇಟಿ ಕೊಡಲಿಲ್ಲ. ಹಾಗಂತ, ಮಸೀದಿಗೆ ಭೇಟಿಕೊಡಬೇಕಾಗಿತ್ತು ಎಂಬುದು ಇಲ್ಲಿನ ಉದ್ದೇಶ ಅಲ್ಲ. ಮುಸ್ಲಿಮ್ ಎಂಬ ಪದವನ್ನೇ ಉಲ್ಲೇಖಿಸಬಾರದ, ಆ ಸಮುದಾಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಬಾರದ, ‘ಅಲ್ಪಸಂಖ್ಯಾತ ಅಭಿವೃದ್ಧಿ’ ಎಂಬ ಪದವನ್ನು ಪ್ರಣಾಳಿಕೆಯಲ್ಲೂ ಉಲ್ಲೇಖಿಸಬಾರದ ಸ್ಥಿತಿಯೊಂದನ್ನು ಗುಜರಾತ್‍ನಲ್ಲಿ ನಿರ್ಮಿಸಲಾಗಿದೆ. ಈ ಸ್ಥಿತಿ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿದೆಯೆಂದರೆ, ರಾಹುಲ್ ಗಾಂಧೀ ಮತ್ತು ಜಿಗ್ನೇಶ್ ವೇವಾನಿಯಂತಹವರು ಅನಿವಾರ್ಯವಾಗಿ ಇದನ್ನು ಪಾಲಿಸಬೇಕಾಗುತ್ತದೆ. ಮುಸ್ಲಿಮನೊಬ್ಬ ಮುಖ್ಯಮಂತ್ರಿಯಾಗುವುದನ್ನು ಕಾಂಗ್ರೆಸ್‍ಗೆ ಹಿನ್ನಡೆಯಾಗಿಯೂ ಬಿಜೆಪಿಗೆ ಲಾಭಕರವಾಗಿಯೂ ನೋಡಲಾಗುತ್ತದೆ. ಇಂಥ ಸನ್ನಿವೇಶದಲ್ಲಿ, ಜಾತ್ಯತೀತತೆಯಲ್ಲಿ ನಂಬಿಕೆಯಿರಿಸುವ ಯಾವುದೇ ರಾಜಕೀಯ ಪಕ್ಷದ ಮುಂದೆ ಆಯ್ಕೆಗಳು ತೀರಾ ಕಡಿಮೆಯಿರುತ್ತವೆ. ಕಾಂಗ್ರೆಸ್‍ನ ಸೋಲಿಗಿರುವ ಕಾರಣಗಳೂ ಇಲ್ಲೇ ಎಲ್ಲೋ ಇವೆ. ಜಿಎಸ್‍ಟಿ, ನೋಟ್ ಬ್ಯಾನ್, ಪಟೇಲ್ ಮತ್ತು ಹಿಂದುಳಿದ ಸಮುದಾಯಗಳ ಅಸಮಾಧಾನ ಮತ್ತು ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಗುಜರಾತ್ ಬಿಜೆಪಿಯ ಕೈ ತಪ್ಪಲಿಲ್ಲ್ಲ ಅನ್ನುವುದನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಅಹ್ಮದಾಬಾದ್ ಮತ್ತು ವಡೋದರ ವಲಯಗಳು ಬಿಜೆಪಿಯ ಗೆಲುವಿನಲ್ಲಿ ಈ ಬಾರಿಯೂ ಬಹುಮುಖ್ಯ ಪಾತ್ರವಹಿಸಿವೆ. ಒಟ್ಟು ಮತದಾರರಲ್ಲಿ 48% ದಷ್ಟಿರುವ ಮಹಿಳೆಯರು ಮತ್ತು 12 ಲಕ್ಷದಷ್ಟಿದ್ದ ಹೊಸ ಮತದಾರರಲ್ಲಿ ಹೆಚ್ಚಿನವರು ಬಿಜೆಪಿಯ ಪರ ನಿಂತರು ಎಂದೂ ಹೇಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸುಮಾರು 38 ರಾಲಿಗಳನ್ನು ನಡೆಸಿದರು. ಅಮಿತ್ ಷಾ ಅಂತೂ ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಠಿಕಾಣಿ ಹೂಡಿದರು. ಪ್ರಚಾರದ ಕೊನೆಯ ಹಂತದಲ್ಲಂತೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ, ನಿವೃತ್ತ ಸೇನಾ ವರಿಷ್ಠರೂ ಸೇರಿದಂತೆ ಹಲವರನ್ನು ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಿ ಏಜೆಂಟ್‍ಗಳೆಂದು ಕರೆದರು. ದೇಶ ವಿರೋಧಿ ಸಂಚಿನ ಭಾಗವಾಗಿ ಅವರನ್ನು ಪರಿಗಣಿಸಿದರು. ಬಹುಶಃ, ಬದುಕಿನ ಬದಲು ಭಾವನೆಯ ಆಧಾರದಲ್ಲಿ ನಡೆಸಲಾದ ಮತ್ತೊಂದು ಚುನಾವಣೆ ಇದು.
        ನಿಜವಾಗಿ, ಗುಜರಾತ್ ಎಂಬುದು ವ್ಯಾಪಾರಿಗಳ ನಾಡು. ನೋಟ್ ಬ್ಯಾನ್ ಮತ್ತು ಜಿಎಸ್‍ಟಿಗಳಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾಗಿರಬಹುದಾದ ರಾಜ್ಯವೂ ಇದುವೇ. ಆದ್ದರಿಂದ, ಕಾಂಗ್ರೆಸ್ ತನ್ನ ಪ್ರಚಾರ ಸಾಮಗ್ರಿಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿರುವುದರಲ್ಲಿ ಅಚ್ಚರಿಯೇನೂ ಇರಲಿಲ್ಲ. ರೈತರ ಬಗ್ಗೆ, ನಿರುದ್ಯೋಗದ ಬಗ್ಗೆ, 22 ವರ್ಷಗಳ ಆಡಳಿತ ವೈಫಲ್ಯಗಳ ಕುರಿತಂತೆ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು. ಪಟೇಲರಿಗೆ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣವೂ ಸೇರಿದಂತೆ ವಿವಿಧ ಕೊಡುಗೆಗಳನ್ನು ಕಾಂಗ್ರೆಸ್ ಮುಂದಿಟ್ಟಿತು. ಆದರೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗೆಗೊಳಿಸಿದ್ದೇ ಪ್ರಥಮ ಹಂತದ ಮತದಾನದ ಒಂದು ದಿನ ಮೊದಲು. ಪ್ರಣಾಳಿಕೆಗೆ ಬಿಜೆಪಿ ನೀಡುವ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಇದುವೇ ಹೇಳುತ್ತದೆ. ಅದರ ಮಟ್ಟಿಗೆ ಪ್ರಣಾಳಿಕೆಯೆಂಬುದು ಒಂದು ಸಾಂಪ್ರದಾಯಿಕ ಪತ್ರಿಕಾ ಬಿಡುಗಡೆಯೇ ಹೊರತು ಅದರ ಚುನಾವಣಾ ತಂತ್ರವು ಪ್ರಣಾಳಿಕೆಯನ್ನು ಆಧರಿಸಿಕೊಂಡೇ ಇಲ್ಲ. ಜನರ ಬದುಕಿನ ಬಗ್ಗೆ ಮಾತಾಡುವುದಕ್ಕಿಂತ ಭಾವನೆಗಳ ಮೇಲೆ ಮಾತಾಡುವುದೇ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಬಿಜೆಪಿ ಕಂಡುಕೊಂಡಿದೆ. ನೋಟ್ ಬ್ಯಾನ್ ಅನ್ನು ಎತ್ತಿಕೊಂಡು ವ್ಯಾವಹಾರಿಕ ಚರ್ಚೆ ನಡೆಸುವುದಕ್ಕೂ `ಅದರಿಂದ ದೇಶಕ್ಕೆ ದೂರಗಾಮಿ ಪ್ರಯೋಜನವಿದೆ’ ಎಂದು ವಾದಿಸುವುದಕ್ಕೂ ವ್ಯತ್ಯಾಸವಿದೆ. ಒಂದು ವಾಸ್ತವ ಆಧಾರಿತವಾದರೆ ಇನ್ನೊಂದು ಭಾವನೆ ಆಧಾರಿತ. ಭಾವನೆಗೆ ವಾಸ್ತವವನ್ನು ಕಡೆಗಣಿಸುವ ಸಾಮರ್ಥ್ಯ ಇದೆ. ಮಾತ್ರವಲ್ಲ, ವಾಸ್ತವವನ್ನೇ ದೇಶದ್ರೋಹಿಯಾಗಿ ಕಾಣುವಷ್ಟು ಅದು ಪ್ರಬಲವೂ ಹೌದು. ಸದ್ಯ ಬಿಜೆಪಿಯು ಭಾವನೆ ಎಂಬ ಈ ಅಪಾಯಕಾರಿ ಕುದುರೆಯನ್ನೇರಿದೆ. ಜನಸಾಮಾನ್ಯರು ಕುದುರೆಯ ಆಕರ್ಷಣೆಗಷ್ಟೇ ಮಹತ್ವ ಕೊಡುತ್ತಾರೆ ಎಂಬುದು ಬಿಜೆಪಿಗೆ ಗೊತ್ತು.  ಸದ್ಯದ ತುರ್ತು ಏನೆಂದರೆ,   ವರ್ತಮಾನ ಕಾಲದ ಸಮಸ್ಯೆಗಳಿಗೆ ಪರಿಹಾರವೂ ಆಗದ ಮತ್ತು ಭವಿಷ್ಯತ್ ಕಾಲದ ಸವಾಲುಗಳಿಗೆ ಉತ್ತರವೂ ಆಗದ ಈ ಕುದುರೆಯನ್ನು ಕಟ್ಟಿಹಾಕುವುದು. ಗುಜರಾತ್ ಚುನಾವಣಾ ಫಲಿತಾಂಶವನ್ನು ಬಿಜೆಪಿಯ ಗೆಲುವು- ಕಾಂಗ್ರೆಸ್‍ನ ಸೋಲು ಎಂದು ಹೇಳುವುದಕ್ಕಿಂತ ಭಾವನೆಯ ಗೆಲುವು ಮತ್ತು ಬದುಕಿನ ಸೋಲು ಎಂದಷ್ಟೇ ವಿಶ್ಲೇಷಿಸಬಹುದು. ಈ ವಾತಾವರಣ ಅತ್ಯಂತ ಅಪಾಯಕಾರಿ.

Tuesday, 19 December 2017

ಯಾದಗಿರಿ ಎತ್ತಿರುವ ದೇಶಪ್ರೇಮದ ಪ್ರಶ್ನೆ

     ಕಳೆದವಾರ ಮಾಧ್ಯಮಗಳು ಬರ್ನಾನ ಯಾದಗಿರಿ ಎಂಬ ಯುವಕನ ಗುಣಗಾನ ಮಾಡಿವೆ. ಮುಖ್ಯ ವಾಹಿನಿಯ ಸಾಕಷ್ಟು ಪತ್ರಿಕೆಗಳು ಈ ಯುವಕನನ್ನು ಪ್ರಶಂಸಿಸಿ ಸುದ್ದಿ ಬರೆದಿವೆ. ಸಾಫ್ಟ್‍ವೇರ್ ಇಂಜಿನಿಯರ್ ಪದವೀಧರನಾಗಿರುವ ಹೈದಾರಾಬಾದ್‍ನ ಈ ಯುವಕ ಸೇನೆ ಸೇರಿದ್ದಾನೆ. ಡೆಹ್ರಾಡೂನ್‍ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಕಳೆದವಾರ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾನೆ. ಯಾದಗಿರಿಯ ತಂದೆ ಕೂಲಿ ಕಾರ್ಮಿಕ. ಹೈದಾರಾಬಾದ್‍ನ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ದಿನಕ್ಕೆ 100 ರೂಪಾಯಿ ವೇತನಕ್ಕಾಗಿ ಅವರು ದುಡಿಯುತ್ತಿದ್ದಾರೆ. CAT  ಪರೀಕ್ಷೆಯಲ್ಲಿ 94.4% ಅಂಕ ಪಡೆದ ಬರ್ನಾನ ಯಾದಗಿರಿಗೆ ಇಂದೋರ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ನೀಡಿದ ಸೀಟನ್ನು ಮತ್ತು ಅಮೇರಿಕನ್ ಮೂಲದ ಯೂನಿಯನ್ ಫೆಸಿಪಿಕ್ ರೇಲ್ ರೋಡ್ ಕಂಪೆನಿಯು ನೀಡಿದ ಉದ್ಯೋಗ ಕೊಡುಗೆಯನ್ನು ತಿರಸ್ಕರಿಸಿ ಆತ ಸೇನೆ ಸೇರಿಕೊಂಡಿದ್ದಾನೆ. ದಿನಕ್ಕೆ 100 ರೂಪಾಯಿಗೆ ದುಡಿಯುವ ಕೂಲಿ ಕಾರ್ಮಿಕನೋರ್ವನ ಮಗನ ಮುಂದೆ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗವಿದ್ದೂ ಅದಕ್ಕೆ ಬೆನ್ನು ಹಾಕಿರುವುದನ್ನು ಮಾಧ್ಯಮಗಳು ದೇಶ ಪ್ರೇಮದ ಭಾಗವಾಗಿ ಕಂಡಿವೆ. ಹಾಗಂತ, ಇದನ್ನು ಅಲ್ಲಗಳೆಯಬೇಕಿಲ್ಲ. ಬಡತನದಲ್ಲಿ ಬೆಳೆದ ಮಗುವಿಗೆ ಮತ್ತು ಅದರ ಹೆತ್ತವರಿಗೆ ಕೆಲವು ಕನಸುಗಳಿರುತ್ತವೆ. ಬಡತನದ ಸ್ಥಿತಿಯಿಂದ ಹೊರಬರುವುದೂ ಅದರಲ್ಲಿ ಒಂದು. ಇಷ್ಟಿದ್ದೂ ಬರ್ನಾನ ಯಾದಗಿರಿ ಸೇನೆ ಸೇರಿದ್ದಾರೆಂದರೆ ಅದು ಪ್ರಶಂಸಾರ್ಹ ಮತ್ತು ಸವಾಲಿನ ನಿರ್ಧಾರ. ಆದರೆ ಈ ನಿರ್ಧಾರದ ಮೂಲಕ ಆ ಯುವಕ ಈ ಪ್ರಶಂಸಕರ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಆತನನ್ನು ಪ್ರಶಂಸಿಸಿದ ಪತ್ರಿಕೆಗಳಾವುವೂ ಎತ್ತದ ಅಥವಾ ಜಾಣತನದಿಂದ ಮರೆಗೆ ಸರಿಸಿದ ಪ್ರಶ್ನೆಗಳಿವು. ಯಾಕೆ ಬಡವರ ಮಕ್ಕಳೇ ಸೇನೆ ಸೇರುತ್ತಾರೆ? ದೇಶ ಪ್ರೇಮ ಎಂಬ ಬಹೂಪಯೋಗಿ ಅಸ್ತ್ರವು ಸದಾ ಯಾಕೆ ಬಡವರ ಗುಡಿಸಲನ್ನೇ ಗುರಿಯಾಗಿಸುತ್ತದೆ? ಶ್ರೀಮಂತ ಮನೆಯ ಮಗುವೊಂದು ಸೂಟು-ಬೂಟನ್ನು ಕಳಚಿ ಸೇನೆ ಸೇರುವ ಸನ್ನಿವೇಶಗಳೇಕೆ ನಿರ್ಮಾಣವಾಗುತ್ತಿಲ್ಲ? ಅಂದಹಾಗೆ, ಬರ್ನಾನ ಯಾದಗಿರಿಯನ್ನು ಹೊಗಳುವ ಮಾಧ್ಯಮಗಳು ಅದೇ ಧ್ವನಿಯಲ್ಲಿ ಶ್ರೀಮಂತರ ದೇಶ ಪ್ರೇಮವನ್ನೂ ಪ್ರಶ್ನೆಗೊಳಪಡಿಸಬಹುದಿತ್ತಲ್ಲ. ಅಮೇರಿಕನ್ ಮೂಲದ ಕಂಪೆನಿಯು ನೀಡುವ ಸಂಬಳಕ್ಕೆ ಹೋಲಿಸಿದರೆ ಬರ್ನಾನ ಯಾದಗಿರಿಗೆ ಸೇನೆ ನೀಡುವ ವೇತನ ತೀರಾ ತೀರಾ ಜುಜುಬಿ. ಆದ್ದರಿಂದ ಅಮೇರಿಕನ್ ಕಂಪೆನಿ ಉದ್ಯೋಗವನ್ನು ಕೈ ಬಿಟ್ಟು ಬರ್ನಾನ ಸೇನೆ ಸೇರುವುದೆಂದರೆ, ಅದಕ್ಕೆ ಗಟ್ಟಿ ಗುಂಡಿಗೆ ಬೇಕು. ಆದರೆ ಶ್ರೀಮಂತ ಕುಟುಂಬದ ಮಗುವಿಗೆ ಈ ಸಮಸ್ಯೆ ಬರುವುದಿಲ್ಲ. ಆದರೂ ಯಾಕೆ ಗುಡಿಸಲಿನ ಮಕ್ಕಳೇ ಸೇನೆ ಸೇರುತ್ತಾರೆ ಮತ್ತು ಯಾಕೆ ಅದು ದೇಶ ಪ್ರೇಮದ ಆಚೆಗಿನ ಪ್ರಶ್ನೆಗಳನ್ನು ಎತ್ತಲು ಮತ್ತೆ ಮತ್ತೆ ವಿಫಲವಾಗುತ್ತದೆ? ಮಾಧ್ಯಮಗಳು ಉದ್ದೇಶಪೂರ್ವಕಾಗಿ ಇಂಥ ಪ್ರಶ್ನೆಗಳ ಹುಟ್ಟನ್ನು ತಡೆಯಲು ಪ್ರಯತ್ನಿಸುತ್ತಿವೆಯೋ? ಅದರ ಭಾಗವಾಗಿಯೇ ದೇಶಪ್ರೇಮವನ್ನು ಮುಂದೊತ್ತಲಾಗುತ್ತಿದೆಯೋ? ಮುಖ್ಯವಾಹಿನಿ ಮಾಧ್ಯಮಗಳ ಆಯಕಟ್ಟಿನ ಜಾಗದಲ್ಲಿರುವವರಲ್ಲಿ ಎಷ್ಟು ಮಂದಿಯ ಮಕ್ಕಳು ಸೇನೆಯಲ್ಲಿದ್ದಾರೆ? ದೇಶ ಪ್ರೇಮದ ಬಗ್ಗೆ ನಿರರ್ಗಳ ಭಾಷಣ ಮಾಡುವ ರಾಜಕಾರಣಿಗಳ ಎಷ್ಟು ಮಕ್ಕಳು ಸೇನೆ ಸೇರುತ್ತಿದ್ದಾರೆ? ಪಾಕ್ ಗಡಿಯಲ್ಲೋ, ನಕ್ಸಲರ ಜೊತೆಗೋ ಅಥವಾ ಇನ್ನೆಲ್ಲೋ ಕಾದಾಡಿ ಪ್ರಾಣತೆರುವ ಯೋಧರನ್ನು ಹುತಾತ್ಮರೆಂದು ಕರೆದು, ವೀರಾವೇಶದ ಹೇಳಿಕೆ ನೀಡುವವರನ್ನೇಕೆ ಮಾಧ್ಯಮಗಳು ಪ್ರಶ್ನೆಗೊಳಪಡಿಸುತ್ತಿಲ್ಲ? ಹುತಾತ್ಮರಾಗುವುದೋ ಬಡಗುಡಿಸಲಿನ ಯುವಕರು. ಅದರ ಲಾಭ ಎತ್ತುವುದೋ ರಾಜಕಾರಣಿಗಳು. ಯಾಕೆ ಹೀಗೆ? ಇದೊಂದು ಸಂಚು ಯಾಕಾಗಿರಬಾರದು?
   ನಿಜವಾಗಿ, ದೇಶ ಪ್ರೇಮವೆಂಬುದು ಬಡವರು ಮಾತ್ರ ಆಚರಿಸಿ ತೋರಿಸಬೇಕಾದ ವಿಷಯವಲ್ಲ. ಅದು ದೇಶದ ಎಲ್ಲ ನಾಗರಿಕರಿಗೆ ಸಂಬಂಧಿಸಿದ್ದು. ದೇಶದ ಕಟ್ಟ ಕಡೆಯಲ್ಲಿರುವ ನಾಗರಿಕನಿಂದ ಹಿಡಿದು ದೇಶದ ತುತ್ತ ತುದಿಯಲ್ಲಿರುವ ನಾಗರಿಕನವರೆಗೆ ಎಲ್ಲರ ಮೇಲೂ ಇದರ ಹೊಣೆಗಾರಿಕೆಯಿದೆ. ದುರಂತ ಏನೆಂದರೆ, ಇವತ್ತು ದೇಶ ಪ್ರೇಮ, ಸಂಸ್ಕøತಿ ಪ್ರೇಮ, ಧರ್ಮ ರಕ್ಷಣೆ ಇತ್ಯಾದಿ ಇತ್ಯಾದಿಗಳನ್ನೆಲ್ಲ ಎರಡಾಗಿ ವಿಭಜಿಸಲಾಗಿದೆ. ಮೇಲ್ತುದಿಯಲ್ಲಿರುವ ಉದ್ಯಮಿಗಳು, ರಾಜಕಾರಣಿಗಳು, ಚಿತ್ರರಂಗದವರು ಮುಂತಾಗಿ ಹೈ ಸೊಸೈಟಿ ಎಂದು ನಾವು ಹೇಳಬಹುದಾದ ಬಡವರ್ಗವು ಒಂದು ಕಡೆಯಾದರೆ, ಬರ್ನಾನ ಯಾದಗಿರಿಯು ಪ್ರತಿನಿಧಿಸುವ ಬಡ ವರ್ಗವು ಇನ್ನೊಂದು ಕಡೆ ಮತ್ತು ಪ್ರತಿ ಸಮಯದಲ್ಲೂ ಪ್ರಶ್ನೆಗೆ ಮತ್ತು ಹಿಂಸೆಗೆ ಗುರಿಯಾಗುವುದೂ ಯಾದಗಿರಿ ಪ್ರತಿನಿಧಿಸುವ ಈ ವರ್ಗವೊಂದೇ. ಧರ್ಮ ರಕ್ಷಣೆಯ ನೊಗವನ್ನು ಹೊತ್ತುಕೊಂಡಿರುವುದೂ ಇದೇ ವರ್ಗ. ಅದರ ಹೆಸರಲ್ಲಿ ಹಲ್ಲೆ ಮತ್ತು ಹತ್ಯೆಗೆ ಗುರಿಯಾಗುತ್ತಿರುವುದೂ ಇದೇ ವರ್ಗ. ದೇಶ ಪ್ರೇಮವನ್ನು ಗುತ್ತಿಗೆ ಪಡಕೊಂಡಂತೆ ವರ್ತಿಸುತ್ತಿರುವುದೂ ಇದೇ ವರ್ಗ. ಅದರ ಹೆಸರಲ್ಲಿ ಹಿಂಸೆಗೆ ತುತ್ತಾಗುವುದೂ ಇದೇ ವರ್ಗ. ಸೇನೆ, ಪೆÇಲೀಸ್ ಇಲಾಖೆ ಸೇರಿಕೊಳ್ಳಬೇಕಾದುದೂ ಇದೇ ವರ್ಗ. ಅದರ ಪರಿಣಾಮವಾಗಿ ಶಾಶ್ವತ ಅಂಗವೈಕಲ್ಯ, ಸಾವುಗಳಿಗೆ ತುತ್ತಾಗಬೇಕಾದುದೂ ಇದೇ ವರ್ಗ. ಇನ್ನೊಂದು ವರ್ಗದ ಕೆಲಸ ಏನೆಂದರೆ, ಜನರನ್ನು ಪ್ರಚೋದಿಸುವುದು. ಯಾವುದು ದೇಶಪ್ರೇಮ, ಯಾವುದು ಅಲ್ಲ ಎಂಬುದನ್ನು ಮಾಧ್ಯಮಗಳ ಮುಂದೆ ನಿಂತು ಈ ವರ್ಗ ಘೋಷಿಸುತ್ತದೆ. ಯಾರಿಂದ, ಯಾವುದರಿಂದ ಧರ್ಮ ನಾಶವಾಗಬಹುದು ಎಂಬ ಬಗ್ಗೆ ಭಾಷಣಗಳನ್ನು ಬಿಗಿಯುತ್ತದೆ. ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಾದರೆ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅದು ಪಾಠ ಮಾಡುತ್ತದೆ. ಗಡಿ ಕಾಯುತ್ತಾ ಹುತಾತ್ಮನಾಗುವುದೆಂದರೆ ಅದೆಷ್ಟು ಗೌರವಾನ್ವಿತ ಮರಣ ಎಂಬ ಬಗ್ಗೆ ಹೇಳಿಕೆಗಳನ್ನು ಹೊರಡಿಸುತ್ತದೆ ಮತ್ತು ಬಳಿಕ ತಂತಮ್ಮ ಐಶಾರಾಮಿ ಬಂಗಲೆಯಲ್ಲೋ ಮನೆಯಲ್ಲೋ ಆರಾಮವಾಗಿರುತ್ತದೆ.
   ನಿಜವಾಗಿ, ಬರ್ನಾನ ಯಾದಗಿರಿಯ ಆಯ್ಕೆ ನಮ್ಮನ್ನೆಲ್ಲ ಕಾಡಬೇಕಾದುದು ಈ ಎಲ್ಲವುಗಳ ಹಿನ್ನೆಲೆಯಲ್ಲಿ. ಬಡವರ ಮನೆಯ ಮಕ್ಕಳನ್ನು ದೇಶ ಪ್ರೇಮ, ಧರ್ಮಪ್ರೇಮಗಳ ಹೆಸರಲ್ಲಿ ಶ್ರೀಮಂತ ವರ್ಗ ದಿಕ್ಕು ತಪ್ಪಿಸುತ್ತಿವೆಯೇ ಅನ್ನುವ ಅನುಮಾನವನ್ನು ಬರ್ನಾನ ಯಾದಗಿರಿ ನಮ್ಮ ಮುಂದಿಟ್ಟಿದ್ದಾರೆ. ದೇಶ, ಧರ್ಮ, ಸಂಸ್ಕøತಿ ಮುಂತಾದುವುಗಳು ಶ್ರೀಮಂತ ವರ್ಗ ಮತ್ತು ರಾಜಕಾರಣಿಗಳ ಖಯಾಲಿಗಳನ್ನು ಅಡಗಿಸುವ ಅಸ್ತ್ರಗಳೇ? ಈ ವರ್ಗದ ತೆವಲುಗಳ ಬಗ್ಗೆ ಜನಸಾಮಾನ್ಯರು ಗಮನ ಹರಿಸದಂತೆ ತಡೆಯುವುದಕ್ಕೆ ಧರ್ಮ, ಸಂಸ್ಕøತಿ, ದೇಶ ಪ್ರೇಮ.. ಇತ್ಯಾದಿಗಳನ್ನು ತೇಲಿಸಿ ಬಿಡಲಾಗಿದೆಯೇ? ಬಡವರ ಮಕ್ಕಳಿಗೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಅವರು ಆಟ ನೋಡುತ್ತಿದ್ದಾರೆಯೇ? ಸಂದರ್ಭಕ್ಕೆ ತಕ್ಕಂತೆ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದು ಈ ಸಂಚಿನ ಭಾಗವೇ?
    ಬರ್ನಾನ ಯಾದಗಿರಿಯನ್ನು ಮೆಚ್ಚಿಕೊಳ್ಳುವ ಜೊತೆ ಜೊತೆಗೇ ನಾವು ನಮ್ಮೊಳಗೆ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ.

Friday, 15 December 2017

ಬುಡನ್ ಗಿರಿಯ ಭಕ್ತಿ ಎಲ್ಲಿಯವರೆಗೆ?

      ಚಿಕ್ಕಮಗಳೂರು ಮತ್ತು ಹುಣಸೂರಿನಲ್ಲಿ ನಡೆದ ಬೆಳವಣಿಗೆಗಳು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಎರಡೂ ಕಡೆಯ ಮೆರವಣಿಗೆಗೆ ನೇತೃತ್ವ ನೀಡಿರುವುದು ಬಿಜೆಪಿ. ಹುಣಸೂರಿನ ವಿವಾದಿತ ಕಲ್ಕುಣಿಕೆಯ ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ಸಾಗಬಾರದೆಂದು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೆ ಹನುಮಂತೋತ್ಸವ ಮೆರವಣಿಗೆಯನ್ನು ಅಲ್ಲಿಂದಲೇ ಆರಂಭಿಸುವುದಾಗಿ ಬಿಜೆಪಿ ಸಂಸದರು ಘೋಷಿಸಿದರು. ಬಾಬಾ ಬುಡನ್‍ಗಿರಿಯಲ್ಲೂ ನಿರ್ಬಂಧಿತ ಪ್ರದೇಶವಿದೆ. ಮೆರವಣಿಗೆಕೋರರು ಅಲ್ಲಿಗೇ ನುಗ್ಗಿದರು. ಎರಡೂ ಕಡೆಯ ಬೆಳವಣಿಗೆಗಳು ಧರ್ಮ ಮತ್ತು ಭಕ್ತಿಯ ಹೆಸರಲ್ಲಿ ನಡೆದಿದೆ. ಸದ್ಯ ನಮ್ಮನ್ನು ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ, ಭಕ್ತಿಯ ಮೂಲ ಉದ್ದೇಶ ಏನು? ದತ್ತಾತ್ರೇಯ ಸ್ವಾಮಿಯ ಭಕ್ತನಿಗೆ ಅಥವಾ ಹನುಮಂತನ ಭಕ್ತನಿಗೆ ಕಾನೂನನ್ನು ಮೀರಿ ನಡೆದುಕೊಳ್ಳಬೇಕೆಂಬ ಇಚ್ಛೆ ಬರುವುದು ಹೇಗೆ? ಭಕ್ತಿಯ ಇನ್ನೊಂದು ಅರ್ಥವೇ ಶಾಂತಿ ಮತ್ತು ಸರ್ವಹಿತ. ಆದ್ದರಿಂದಲೇ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳು ರಾಗ-ದ್ವೇಷಗಳಿಂದ ಮುಕ್ತವಾಗಿರುತ್ತವೆ. ಕುಂಭ ಮೇಳದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಇಂಥ ಅನೇಕಾರು ಉದಾಹರಣೆಗಳನ್ನು ಕೊಡಬಹುದು. ಈ ದೇಶದಲ್ಲಿ ಮಂದಿರ-ಮಸೀದಿ-ಚರ್ಚ್‍ಗಳು ಪ್ರತಿದಿನವೆಂಬಂತೆ ತುಂಬಿಕೊಂಡಿರುತ್ತವೆ. ಭಕ್ತರು ತಮಗಿಷ್ಟ ಬಂದಂತೆ ನಡಕೊಂಡು ತೃಪ್ತಿಪಡುತ್ತಾರೆ. ಅಲ್ಲಿ ಲಾಠಿ ಪ್ರಹಾರ ಮಾಡಬೇಕಾದ, ಕೇಸು ದಾಖಲಿಸಿಕೊಳ್ಳಬೇಕಾದ ಯಾವ ಸನ್ನಿವೇಶವೂ ನಿರ್ಮಾಣವಾಗುವುದಿಲ್ಲ. ಇವಕ್ಕೆ ಭಿನ್ನವಾಗಿ ಬಾಬಾ ಬುಡನ್‍ಗಿರಿ ಯಾಕಿದೆ? ನಿರ್ಬಂಧವನ್ನು ಮುರಿದೇ ಭಕ್ತಿ ಪ್ರದರ್ಶಿಸುತ್ತೇವೆ ಎಂಬ ಹಠದ ಹಿಂದಿರುವುದು ಏನು?
    ನಿಜವಾಗಿ, ಬಾಬ ಬುಡನ್‍ಗಿರಿ ಎಂಬುದು ಸಾಮಾನ್ಯ ಜನರಿಗೆ ಸಂಬಂಧಿಸಿ ಹೇಳುವುದಾದರೆ, ಯಾರೊಬ್ಬರ ಸೊತ್ತೂ ಅಲ್ಲ. ಹೆಸರು ಬಾಬ ಬುಡನ್‍ಗಿರಿ ಎಂದಿದ್ದರೂ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಸಮಾನವಾಗಿ ಅಲ್ಲಿ ನಡಕೊಳ್ಳುತ್ತಿದ್ದಾರೆ. ವಿವಾದಕ್ಕಿಂತ ಮೊದಲೂ ಮತ್ತು ಆ ಬಳಿಕವೂ ಇದು ಮುಂದುವರಿದೇ ಇದೆ. ಹೀಗಿರುವಾಗ, ಬುಡನ್‍ಗಿರಿಯ ಬೆಟ್ಟವನ್ನು ವರ್ಷಕ್ಕೊಮ್ಮೆ ಹತ್ತಿ ಅವರು ಮತ್ತು ನಾವು ಎಂದು ಸಮಾಜವನ್ನು ವರ್ಗೀಕರಿಸುವುದು ಯಾಕೆ? ಈ ದೇಶದಲ್ಲಿ 80%ದಷ್ಟಿರುವ ಬೃಹತ್ ಸಮುದಾಯವೊಂದಕ್ಕೆ 15%ದಷ್ಟಿರುವ ಪುಟ್ಟ ಸಮುದಾಯದಿಂದ ಬೆದರಿಕೆ ಇದೆ ಎಂಬಂತೆ ಬಿಂಬಿಸುವುದರ ನಿಜ ಉದ್ದೇಶ ಏನು? ಯಾವುದೇ ಕಾಲದಲ್ಲಿ 15%ದಷ್ಟಿರುವ ಪುಟ್ಟ ಗುಂಪೊಂದು 80%ದಷ್ಟಿರುವ ಬೃಹತ್ ಗುಂಪನ್ನು ಬೆದರಿಸಿದ್ದಿದೆಯೇ? ಹಾಗಂತ, ಈ ಪುಟ್ಟ ಗುಂಪಿನ ಬಳಿ ಅಧಿಕಾರ ಇಲ್ಲ. ಕಾರ್ಯಾಂಗದ ಮೇಲೆ ಯಾವ ಹಿಡಿತವೂ ಇಲ್ಲ. ನ್ಯಾಯಾಂಗದಲ್ಲಿ ಅದರ ಪ್ರತಿನಿಧಿಗಳು ಭೂತಗನ್ನಡಿ ಹಿಡಿದು ಹುಡುಕಿದರೂ ಸಿಗದಷ್ಟು ಅಲ್ಪ ಪ್ರಮಾಣದಲ್ಲಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದಿರುವ, ಆರ್ಥಿಕವಾಗಿ ಪ್ರಪಾತದಲ್ಲಿರುವ ಮತ್ತು ರಾಜಕೀಯವಾಗಿ ಗುರುತೇ ಇಲ್ಲದ ಪುಟ್ಟ ಗುಂಪನ್ನು ಪ್ರತಿವರ್ಷ ಬಾಬಬುಡನ್ ಗಿರಿಯಲ್ಲಿ ನಿಂತು ಆಕ್ಷೇಪಿಸುವುದು ಮತ್ತು ಆ ಗುಂಪೇ ಬಾಬಾಬುಡನ್ ಗಿರಿ ಬೆಟ್ಟವನ್ನು ದತ್ತಾತ್ರೇಯ ಸ್ವಾಮಿ ಬೆಟ್ಟವಾಗುವುದರಿಂದ ತಡೆದಿದೆ ಎಂದೆಲ್ಲಾ ಆರೋಪಿಸುವುದು ಎಷ್ಟು ಸರಿ? ಒಂದು ವೇಳೆ, ಈ ಪುಟ್ಟ ಗುಂಪು ಅಷ್ಟೊಂದು ಪ್ರಭಾವಶಾಲಿಯಾಗಿರುತ್ತಿದ್ದರೆ ಈ ದೇಶದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಅವರೇ ಇರಬೇಕಿತ್ತಲ್ಲವೇ? ಉದ್ಯಮ ಕ್ಷೇತ್ರವನ್ನು ಅವರೇ ಆಳಬೇಕಿತ್ತಲ್ಲವೇ? ರಾಜಕೀಯವಾಗಿ ಉನ್ನತ ಸ್ಥಾನವೆಲ್ಲ ಅವರೊಳಗೇ ಹಂಚಿಕೆಯಾಗಬೇಕಿತ್ತಲ್ಲವೇ? ಶೈಕ್ಪಣಿಕ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಅವರ ಸುಪರ್ದಿಯಲ್ಲೇ  ಇರಬೇಕಿತ್ತಲ್ಲವೇ? ಆದರೆ ಮಾನವಾಭಿವೃದ್ಧಿಗೆ ಸಂಬಂಧಿಸಿ ಈ ದೇಶದಲ್ಲಿ ಇರುವ ಯಾವ ಅಂಕಿ-ಅಂಶಗಳನ್ನೇ ಎತ್ತಿಕೊಂಡರೂ ಅದರಲ್ಲಿ ಮುಸ್ಲಿಮರ ಸ್ಥಾನ ತೀರಾ ಕೆಳಮಟ್ಟದ್ದು. ಇಷ್ಟೊಂದು ದುರ್ಬಲ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಟವಾಗಿರುವ ಸಬಲ ಸಮುದಾಯಕ್ಕೆ ಬೆದರಿಕೆಯಾಗಿದೆ ಎಂಬ ಪ್ರಚಾರದ ಹಿಂದಿರುವುದು ನಿಜಕ್ಕೂ ಯಾವುದು- ಭಕ್ತಿಯೋ ರಾಜಕೀಯವೋ?
1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಬಳಿಕದಿಂದ ತೊಡಗಿ ಮುಂದಿನ ಕೆಲವು ವರ್ಷಗಳ ವರೆಗೆ ಈ ದೇಶದ ಅಸಂಖ್ಯ ಸಣ್ಣ-ಪುಟ್ಟ ಗುಡಿ-ದೇಗುಲಗಳು ಅದ್ದೂರಿ ಕಾರ್ಯಕ್ರಮಗಳನ್ನು ಹಾಕಿಕೊಂಡವು. ಆವರೆಗೆ ಕೌಟುಂಬಿಕ ಆಚರಣೆಯಂತೆ ನಡೆದು ಮುಗಿದು ಹೋಗುತ್ತಿದ್ದ ವಾರ್ಷಿಕ ಕಾರ್ಯಕ್ರಮಗಳು ಮೆರವಣಿಗೆ ಮತ್ತು ಭಾರೀ ಪ್ರಚಾರದೊಂದಿಗೆ ನಡೆದುವು. ತೀಕ್ಷ್ಣ  ನುಡಿಯ ಭಾಷಣಗಳೂ ನಡೆದುವು. ಆದರೆ ಆ ಧ್ವಂಸ ಘಟನೆಯ ಎರಡು ದಶಕಗಳ ಬಳಿಕ ಈಗ ಅವುಗಳ ಜಾಡು ಹಿಡಿದು ನಡೆದರೆ, ತೀವ್ರ ನಿರಾಶೆಯೇ ಎದುರಾಗುತ್ತದೆ. ಆ ದೈವ-ದೇವಸ್ಥಾನಗಳು ಇವತ್ತು ಗತ ದಿನಗಳತ್ತ ಮರಳಿವೆ. ತಿವಿಯುವ ಭಾಷಣಗಳಾಗಲಿ, ಅದ್ಧೂರಿ ಮೆರವಣಿಗೆಗಳಾಗಲಿ ಇಲ್ಲದೇ ಹಳೆ ದಿನಗಳಂತೆ ಸಹಜವಾಗಿ ನಡೆಯುತ್ತಿವೆ. ನಿಜವಾಗಿ, ಭಕ್ತಿಯೆಂದರೆ ಇದುವೇ. ಇನ್ನೋರ್ವರನ್ನು ಗುರಿಯಾಗಿಸಿಕೊಂಡು ನಡೆಯುವ ಆಚರಣೆಯಲ್ಲಿ ಭಕ್ತಿ ಇರುವುದಿಲ್ಲ. ಬರೇ ಸದ್ದು ಇರುತ್ತದೆ. ಅದರ ಗುರಿ ಭಕ್ತಿಯಲ್ಲ, ಆ ಇನ್ನೊಬ್ಬರು ಅಥವಾ ಆ ಇನ್ನೊಂದು. ಅದು ಸಾಧಿತವಾದ ಕೂಡಲೇ ಸದ್ದು ನಿಲ್ಲುತ್ತದೆ. 1992ರ ಬಳಿಕದ ಈ ‘ಭಕ್ತಿ’ ಪ್ರದರ್ಶನದ ಹಿಂದೆ ರಾಜಕೀಯ ಇತ್ತು. ಆ ರಾಜಕೀಯಕ್ಕೆ ಅಸಹಜವಾದ ಭಕ್ತಿ ಪ್ರದರ್ಶನದ ಅಗತ್ಯ ಇತ್ತು. ಜೊತೆಗೇ ಕಲ್ಪಿತ ವೈರಿಯೊಂದರ ಅಗತ್ಯವೂ ಇತ್ತು. ಗುಮ್ಮವನ್ನು ತೋರಿಸಿ ಮಗುವನ್ನು ಪಳಗಿಸುವಂತೆ 15%ದಷ್ಟಿರುವ ಪುಟ್ಟ ಗುಂಪನ್ನು ಅತ್ಯಂತ ವಿಕಾರವಾಗಿ ತೋರಿಸಿ 80%ದಷ್ಟಿರುವ ಬೃಹತ್ ಗುಂಪನ್ನು ವಶೀಕರಿಸಲು ಆ ರಾಜಕೀಯ ಯತ್ನಿಸಿತು. ಈ ಪುಟ್ಟ ಗುಂಪಿನಿಂದ ಗುಡಿ-ದೇವಸ್ಥಾನಗಳ ಮೇಲೆ ಇರುವ ಬೆದರಿಕೆಗಳ ಬಗ್ಗೆ ಪ್ರಚಾರ ನಡೆಸಲಾಯಿತು. ನಿಜವಾಗಿ, ಈ ಪುಟ್ಟ ಗುಂಪಿಗೆ ಈ ಗುಡಿ-ದೇವಸ್ಥಾನಕ್ಕೆ ಬೆದರಿಕೆ ಒಡ್ಡುವ ಸಾಮಥ್ರ್ಯ ಬಿಡಿ, ಈ ಗುಡಿಗಳು ರಸ್ತೆಯುದ್ದಕ್ಕೂ ಹಾಕುವ ದೀಪಗಳನ್ನೇ ಆನಂದಿಸುವ ಸ್ಥಿತಿಯಲ್ಲಷ್ಟೇ ಅವು ಇದ್ದುವು. ಹೀಗೆ ಕಲ್ಪಿತ ವೈರಿಯನ್ನು ವಿಕಾರವಾಗಿ ತೋರಿಸಿ ತೀರಾ ಸ್ಥಳೀಯವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಆಚರಣೆಗಳನ್ನು ಅದ್ದೂರಿಯಾಗಿ ನಡೆಸಲಾಯಿತು. ಸಮಾಜ ನಿಧಾನಕ್ಕೆ ಅವರು ಮತ್ತು ನಾವು ಎಂದಾಗತೊಡಗಿತು. ಮನುಷ್ಯರೇ ಮನುಷ್ಯರನ್ನು ದ್ವೇಷಿಸುವ ಸ್ಥಿತಿಗೆ ತಲುಪಿತು. ಗುಡಿ ಮತ್ತು ಮಸೀದಿಗಳೆರಡೂ ವೈರಿಗಳಂತೆ ಬದುಕತೊಡಗಿದುವು. ಹೀಗೆ ಈ ಸಾಮಾಜಿಕ ವಿಭಜನೆಯು ಅಂತಿಮವಾಗಿ ‘ಮತ’ವಾಗಿ ಮಾರ್ಪಾಟುಗೊಂಡಿತು. ಸ್ಥಳೀಯ ಚುನಾವಣೆಗಳಲ್ಲೂ ಅದು ಬಿಂಬಿತವಾಯಿತು. ರಾಜಕೀಯ ಅಧಿಕಾರವೇ ಈ ಎಲ್ಲದರ ಗುರಿ ಆಗಿತ್ತಾದ್ದರಿಂದ ಅದು ಲಭ್ಯವಾದ ಮೇಲೆ ಆ ರಾಜಕೀಯ ಪP್ಷÀದ ಗಮನ ಬೇರೆಡೆಗೆ ತಿರುಗಿತು. ನಿಧಾನಕ್ಕೆ ಗುಡಿ-ದೇಗುಲಗಳು ಹಿಂದಿನ ಸ್ವರೂಪಕ್ಕೆ ಮರಳಿದುವು. ಕೃತಕ ಭಕ್ತಿ-ವೈಭವಗಳು ಕಾಣೆಯಾದುವು.
ಒಂದು ವೇಳೆ, ಬಾಬಾಬುಡನ್ ಗಿರಿಯ ವಿವಾದವು ಬಿಜೆಪಿ ಬಯಸಿದಂತೆಯೇ ಇತ್ಯರ್ಥವಾದರೆ ಆ ಬಳಿಕದಿಂದ ಈ ಬೆಟ್ಟ ದತ್ತಮಾಲಾಧಾರಿಗಳಿಲ್ಲದೇ ಭಣಗುಡುವ ಸಾಧ್ಯತೆ ಇದೆ. ಯಾಕೆಂದರೆ, ಈಗ ವಿವಾದ ಹುಟ್ಟುಹಾಕಿದವರ ಗುರಿ ಭಕ್ತಿಯಲ್ಲ.

Saturday, 9 December 2017

ಅಪ್ಪುಗೆ ಭಾವದ ನುಡಿಗಳ ಅಗತ್ಯ ಮತ್ತು ಧರ್ಮ ಸಂಸದ್

      ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ 15ನೇ ಧರ್ಮಸಂಸದ್‍ಗಳು
ಬಹುತೇಕ ಜೊತೆಜೊತೆಯಾಗಿಯೇ ಆರಂಭಗೊಂಡು ಜೊತೆಜೊತೆಯಾಗಿಯೇ ಮುಕ್ತಾಯವನ್ನೂ ಕಂಡಿವೆ. ಈ ಆರಂಭ ಮತ್ತು ಅಂತ್ಯವನ್ನು ಬಿಟ್ಟರೆ ಉಳಿದಂತೆ ಇವೆರಡರ ನಡುವೆ ಹೋಲಿಕೆ, ಶೂನ್ಯ ಅನ್ನುವಷ್ಟು ಕಡಿಮೆ. ಕಾರ್ಯಕ್ರಮದ ಪ್ರಾಯೋಜಕರಿಂದ ಹಿಡಿದು, ನಿರ್ಣಯಗಳ ವರೆಗೆ; ಅತಿಥಿಗಳಿಂದ ಹಿಡಿದು ಭಾಷಣಗಳ ವರೆಗೆ ಎಲ್ಲದರಲ್ಲೂ ತದ್ವಿರುದ್ಧ ಅನ್ನಬಹುದಾದವುಗಳೇ ಹೆಚ್ಚಿವೆ. ಇದಕ್ಕಿರುವ ಪ್ರಮುಖ ಕಾರಣ ಏನೆಂದರೆ, ಒಂದನ್ನು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದರೆ ಇನ್ನೊಂದನ್ನು ಸರ್ವ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದೆ ಎಂಬುದು. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಪರ ಮಾತುಗಳಿಗೆ ಸಮ್ಮೇಳನದಲ್ಲೇ  ಪ್ರತಿರೋಧ ಎದುರಾಯಿತು. ಪ್ರತಿಭಟನೆಯೂ ನಡೆಯಿತು. ಭಗ್‍ವಾನ್‍ರ ಮಾತುಗಳನ್ನು ಸಭಿಕರು ಪ್ರಶ್ನಿಸಿದರು. ಈ ಪ್ರಕ್ರಿಯೆ ಸಮ್ಮೇಳನದ ಆರಂಭದಿಂದ ಕೊನೆಯ ವರೆಗೂ ಮುಂದುವರಿಯಿತು. ವಿವಿಧ ವಿಚಾರಧಾರೆಗಳು, ವೈವಿಧ್ಯ ದೃಷ್ಟಿಕೋನಗಳು, ಮಂಡನೆ-ಖಂಡನೆ, ಅನಿಸಿದ್ದನ್ನು ಹೇಳುವ ಮತ್ತು ಸಮರ್ಥಿಸಿಕೊಳ್ಳುವ ಸ್ವಾತಂತ್ರ್ಯ.. ಇತ್ಯಾದಿಗಳು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದಕ್ಕೂ ಕಾಣಿಸಿಕೊಂಡವು. ಒಂದು ರೀತಿಯಲ್ಲಿ, 6 ಕೋಟಿ ಕನ್ನಡಿಗರನ್ನು ಅವರ ಎಲ್ಲ ವೈವಿಧ್ಯತೆಗಳ ಜೊತೆಗೇ ಒಪ್ಪಿ-ಅಪ್ಪಿ ಪ್ರತಿನಿಧಿಸಿದ ಸಮ್ಮೇಳನ ಅದು. ಧರ್ಮ ಸಂಸದ್ ಇದಕ್ಕೆ ವಿರುದ್ಧವಾಗಿ ನಡೆಯಿತು. ಅಲ್ಲಿ ಪ್ರತಿ ಮಾತುಗಳ ನಡುವೆಯೂ ಮಿತಿಗಳಿದ್ದುವು. ಮೀಸಲಾತಿಯ ವಿರುದ್ಧ ಕಾಶಿ ಬನಾರಸ್‍ನ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರನ್ ಸರಸ್ವತಿಯವರು ಮಾತಿಗಿಳಿದಾಗ ಸಂಘಟಕರು ಅವರನ್ನು ತಡೆದು ಮಾತಿನ ಪಥ ಬದಲಿಸಿದರು. ಪೇಜಾವರ ಮಠದ ವಿಶ್ವೇಶ್ವರ ತೀರ್ಥರು ಒಮ್ಮೆ ಸಂವಿಧಾನವನ್ನೇ ಬದಲಿಸಬೇಕು ಎಂಬರ್ಥದಲ್ಲಿ ಕರೆ ಕೊಟ್ಟಾಗಲೂ ಮತ್ತು ಆ ಬಳಿಕ ಸಂವಿಧಾನ ತಿದ್ದುಪಡಿಯ ಉದ್ದೇಶವನ್ನಷ್ಟೇ ತನ್ನ ಮಾತುಗಳು ಹೊಂದಿದ್ದುವು ಎಂಬ ಸ್ಪಷ್ಟೀಕರಣ ಕೊಟ್ಟಾಗಲೂ ಧರ್ಮ ಸಂಸದ್‍ನಲ್ಲಿ ಯಾವ ಪ್ರತಿಕ್ರಿಯೆಯೂ ಗೋಚರಿಸಲಿಲ್ಲ. ಇನ್ನು, ಎರಡೂ ಕಡೆ ಮಂಡಿಸಲಾದ ನಿರ್ಣಯಗಳಲ್ಲೂ ಈ ವ್ಯತ್ಯಾಸಗಳು ಎದ್ದು ಕಾಣುವಂತಿತ್ತು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ನಿರ್ಣಯಗಳು ಸಂಪೂರ್ಣವಾಗಿ ಕನ್ನಡ ನಾಡು, ನುಡಿಯ ಸಬಲೀಕರಣ ಮತ್ತು ರP್ಷÀಣೆಯನ್ನೇ ಕೇಂದ್ರೀಕರಿಸಿದ್ದರೆ ಧರ್ಮ ಸಂಸದ್‍ನ ನಿರ್ಣಯಗಳು ಇಷ್ಟು ಸ್ಪಷ್ಟವಾಗಿ ಧರ್ಮದೊಳಗಿನ ಸವಾಲುಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾದುವು. ಮುಖ್ಯವಾಗಿ, ಅಸ್ಪೃಶ್ಯ ಆಚರಣೆಯನ್ನು ನಿವಾರಿಸುವುದಕ್ಕಾಗಿ ದಲಿತ ಮತ್ತು ಬ್ರಾಹ್ಮಣರ ನಡುವೆ ವಿವಾಹ ಸಂಬಂಧವನ್ನು ಏರ್ಪಡಿಸಬೇಕು ಎಂಬ ಸಾರ್ವಜನಿಕ ಆಗ್ರಹಕ್ಕೆ ನಿರ್ಣಯದಲ್ಲಿ ಯಾವ ಸ್ಥಾನವೂ ಸಿಕ್ಕಿಲ್ಲ. ಜಾತಿರಹಿತ ಹಿಂದೂ ಸಮಾಜ ಅಥವಾ ಜಾತಿ ಸಹಿತ ಹಿಂದೂ ಸಮಾಜ ಎಂಬ ಅಭಿಪ್ರಾಯಗಳ ಬಗ್ಗೆ ನಿರ್ಣಯದಲ್ಲಿ ಯಾವ ತೀರ್ಮಾನವನ್ನೂ ಕೈಗೊಳ್ಳಲಾಗಿಲ್ಲ. ಪಂಕ್ತಿ ಭೋಜನದ ಬಗ್ಗೆ ಧರ್ಮ ಸಂಸದ್‍ನಲ್ಲಿ ಅಸಂತೃಪ್ತಿ ವ್ಯಕ್ತವಾದರೂ ನಿರ್ಣಯದಲ್ಲಿ ಅದಕ್ಕೆ ಪಾಲು ಸಿಗಲಿಲ್ಲ. ಅದೇ ವೇಳೆ, ಹಿಂದೂ ಸಮುದಾಯದಲ್ಲಿ ಆಚರಣೆಯಲ್ಲಿರುವ ವಿವಿಧ ರೀತಿಯ ಮೌಢ್ಯಗಳ ಬಗ್ಗೆಯಾಗಲಿ ಅಥವಾ ರಾಜ್ಯ ಸರಕಾರ ತರಲುದ್ದೇಶಿಸಿರುವ ಮೌಢ್ಯ ವಿರೋಧಿ ಕಾಯ್ದೆಯ ಬಗ್ಗೆಯಾಗಲಿ ನಿರ್ಣಯದಲ್ಲಿ ಯಾವ ಬೆಳಕನ್ನೂ ಚೆಲ್ಲಲಾಗಿಲ್ಲ. ಮೌಢ್ಯ ಮತ್ತು ಅಮೌಢ್ಯ ಇವುಗಳ ನಡುವೆ ಸಾಕಷ್ಟು ಸಿಕ್ಕುಗಳಿವೆ. ಹಾಗಂತ, ಹಿಂದೂ ಸಮುದಾಯ ಮಾತ್ರ ಈ ಮೌಢ್ಯತೆಯಿಂದ ಸಂತ್ರಸ್ತವಾಗಿರುವುದಲ್ಲ. ಆದರೆ, 80%ದಷ್ಟಿರುವ ಬೃಹತ್ ಜನಸಂಪತ್ತನ್ನು ಇಡಿಯಾಗಿ ‘ಹಿಂದೂ ಸಮುದಾಯ' ಎಂದು ಕರೆಯುವ ವಿಶ್ವ ಹಿಂದೂ ಪರಿಷತ್‍ನ ಮಟ್ಟಿಗೆ ಮೌಢ್ಯತೆ ಬಹುಮುಖ್ಯ ಇಶ್ಯೂ ಆಗಬೇಕಿತ್ತು. ಅಷ್ಟರ ಮಟ್ಟಿಗೆ ಸಾಮಾಜಿಕವಾಗಿ ಮೂಢನಂಬಿಕೆಗಳು ಮತ್ತು ಅದರ ಫಲಿತಾಂಶವಾದ ಶೋಷಣೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ಸಾಮಾನ್ಯ ಜನರಿಗೆ ಯಾವುದು ಮೌಢ್ಯ, ಯಾವುದು ಅಮೌಢ್ಯ ಎಂಬುದನ್ನು ಸುಲಭದಲ್ಲಿ ಬೇರ್ಪಡಿಸಿ ನೋಡುವ ಸಾಮಥ್ರ್ಯವೂ ಇರುವುದಿಲ್ಲ. ಪ್ರತಿ ಮೌಢ್ಯವೂ ಧರ್ಮದ ವೇಷವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತೊಟ್ಟಿರುವುದರಿಂದ ಜನರ ಶೋಷಣೆಯೂ ಸುಲಭ. ಈ ದೇಶದ ಬೃಹತ್ ಹಿಂದೂ ಜನಸಮುದಾಯವನ್ನು ಪರಿಗಣಿಸಿ ಹೇಳುವುದಾದರೆ, ಗೋವು, ಲವ್ ಜಿಹಾದ್, ಶಾದಿಭಾಗ್ಯಗಳಂತವು ಧರ್ಮ ಸಂಸದ್‍ನ ಬಹು ಉಲ್ಲೇಖಿತ ಮತ್ತು ಬಹು ಚರ್ಚಿತ ವಿಷಯಗಳಾಗುವ ಬದಲು ದಲಿತ ಮತ್ತು ಬ್ರಾಹ್ಮಣರ ನಡುವೆ ವಿವಾಹ ಸಂಬಂಧ, ಸಹಪಂಕ್ತಿ ಭೋಜನ, ಮೌಢ್ಯ ನಿವಾರಣೆ, ಸರ್ವ ಭಾರತೀಯರ ಮಾನ-ಪ್ರಾಣ-ಸೊತ್ತುಗಳ ರಕ್ಷಣೆ, ಧರ್ಮದ ನೆಪದಲ್ಲಾಗುವ ಅನ್ಯಾಯ-ದೌರ್ಜನ್ಯಗಳ ಖಂಡನೆ.. ಇತ್ಯಾದಿಗಳು ಧರ್ಮ ಸಂಸದ್‍ನಲ್ಲಿ ಒತ್ತುಕೊಟ್ಟು ಚರ್ಚೆಗೊಳಗಾಗಬೇಕಿತ್ತು ಮತ್ತು ಸಮ್ಮೇಳನದ ನಿರ್ಣಯದಲ್ಲೂ ಅವಕ್ಕೆ ಸ್ಥಾನ ಸಿಗಬೇಕಿತ್ತು. ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಪ್ರಕ್ರಿಯೆಗೆ ತಡೆಬಿದ್ದರೆ ಗೋಹತ್ಯೆ ನಿಷೇಧದ ಬೇಡಿಕೆಯಲ್ಲಿ ಬಹುದೊಡ್ಡ ಮೈಲುಗಲ್ಲನ್ನು ಸಾಧಿಸಿದಂತೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವಿದ್ದೂ ಕಳೆದ ಮೂರೂವರೆ ವರ್ಷಗಳಲ್ಲಿ ಇದು ನೆರವೇರದೇ ಇರುವುದಕ್ಕೆ ಸಮ್ಮೇಳನದಲ್ಲಿ ಸೌಮ್ಯ ಅತೃಪ್ತಿಯೊಂದು ಕಾಣಿಸಿಕೊಂಡದ್ದನ್ನು ಬಿಟ್ಟರೆ ನಿರ್ಣಯದಲ್ಲಿ ಈ ಅಂಶ ಪ್ರಸ್ತಾಪವೇ ಆಗಿಲ್ಲ. ಇವೆಲ್ಲದರ ಜೊತೆಗೇ ಈ ದೇಶದಲ್ಲಿ ಒಂದಷ್ಟು ಮುಸ್ಲಿಮರು ಮತ್ತು ಮತ್ತೊಂದಿಷ್ಟು ಕ್ರೈಸ್ತರೂ ಇದ್ದಾರೆ. 80%ದಷ್ಟಿರುವ ಬೃಹತ್ ಸಮುದಾಯವು ಈ ಸಣ್ಣ ಗುಂಪಿಗೆ ಕೊಡುವ ಭರವಸೆಗಳೇನು, ಅವರ ಕಲ್ಯಾಣ-ರಕ್ಷಣೆಗಾಗಿ ಹಾಕಿಕೊಂಡಿರುವ ಯೋಜನೆಗಳೇನು, ಅವರ ಬಗೆಗಿನ ದೃಷ್ಟಿಕೋನಗಳೇನು ಎಂಬುದರ ಬಗ್ಗೆ ನಿರ್ಣಯದಲ್ಲಿ ಏನೇನೂ ಹೇಳಲಾಗಿಲ್ಲ. ಯಾವುದೇ ಸಮಾಜದ ಸಣ್ಣ ಗುಂಪು ಬೃಹತ್ ಗುಂಪಿನಿಂದ ರಕ್ಷಣೆಯ ಭರವಸೆಯನ್ನು ನಿರೀಕ್ಷಿಸುತ್ತದೆ. ಸೌಹಾರ್ದವನ್ನು ಬಯಸುತ್ತದೆ. ಆದರೆ, ಧರ್ಮ ಸಂಸದ್‍ನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಈ ಎರಡು ಪುಟ್ಟ ಗುಂಪನ್ನು ಆರೋಪಿ ಸ್ಥಾನದಲ್ಲಿ ಇರಿಸುವ ರೀತಿಯಲ್ಲಿ ಇತ್ತೇ ಹೊರತು ಅವರಲ್ಲಿ ಭರವಸೆ ತುಂಬುವ ಯಾವುದೂ ಇರಲಿಲ್ಲ.
ನಿಜವಾಗಿ, ಯಾವುದೇ ಧರ್ಮವೊಂದರ ನೇತೃತ್ವ ಸ್ಥಾನದಲ್ಲಿರುವವರು ತಮ್ಮ ಧರ್ಮದೊಳಗಿನ ಬೆಳವಣಿಗೆಗಳ ಬಗ್ಗೆ, ಸರಿ-ತಪ್ಪುಗಳ ಬಗ್ಗೆ ಮತ್ತು ಭವಿಷ್ಯದ ಯೋಜನೆಗಳನ್ನು ಸಿದ್ಧಪಡಿಸುವ ಬಗ್ಗೆ ಚಿಂತನ-ಮಂಥನ ನಡೆಸುವುದು ಯಾವ ಕಾರಣಕ್ಕೂ ಆಕ್ಷೇಪಾರ್ಹವೋ ಖಂಡನಾರ್ಹವೋ ಅಲ್ಲ. ಅನುಯಾಯಿಗಳು ಧರ್ಮಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಾಗ ‘ಧರ್ಮ’ವನ್ನು ಬೋಧಿಸುವುದು ಆಯಾ ಧರ್ಮದ ವಿದ್ವಾಂಸರ ಹೊಣೆಗಾರಿಕೆ. ಇವತ್ತು ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಆಧುನಿಕ ಪೀಳಿಗೆಯಂತೂ ಈ ಆವಿಷ್ಕಾರಗಳ ನಡುವೆ ಕೂತು ಧರ್ಮ-ಆಚಾರ-ಲೌಕಿಕ-ಅಲೌಕಿಕತೆಗಳನ್ನು ಮುಖಾಮುಖಿಗೊಳಿಸಿ ಪ್ರಶ್ನಿಸುತ್ತಿವೆ. ಧರ್ಮದ ಅಗತ್ಯ-ಅನಗತ್ಯಗಳ ಬಗ್ಗೆ ಅವು ಆಧುನಿಕ ಮಾಧ್ಯಮಗಳ ಮೂಲಕ ಹೊಸ ಸಾಧ್ಯತೆಗಳನ್ನು ಹುಡುಕುತ್ತಿವೆ. ಧರ್ಮವೇ ಎಲ್ಲ ಹಿಂಸೆ-ಮೌಢ್ಯ-ಶೋಷಣೆಗಳಿಗೆ ಕಾರಣ ಎಂದು ತೀರ್ಪು ಕೊಡುವ ಸ್ಥಿತಿಯಲ್ಲಿ ಅವು ಬಂದು ಕೂತಿವೆ. ಹೀಗಿರುವಾಗ, ಹಿಂದೂ ಧರ್ಮದ ಸ್ವಾಮೀಜಿಗಳು ಒಂದೆಡೆ ಕೂತು ಅವಲೋಕನ ನಡೆಸುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಅದೇವೇಳೆ, ಹಿಂದೂ ಧರ್ಮದ ಹೊರಗಡೆ ಪುಟ್ಟ ಗೂಡು ಕಟ್ಟಿಕೊಂಡಿರುವ ಮುಸ್ಲಿಮ್-ಕ್ರೈಸ್ತ ಧರ್ಮದ ಅನುಯಾಯಿಗಳಿಗಂತೂ ಈ ಬೆಳವಣಿಗೆಯ ಬಗ್ಗೆ ವಿಶೇಷ ಆಸಕ್ತಿ ಇರುವುದು ಸಹಜವೇ ಆಗಿತ್ತು. ಆದರೆ ಈ ಆಸಕ್ತಿಗೆ ಬಲ ತುಂಬಬಹುದಾದ ಯಾವುದೂ ಧರ್ಮ ಸಂಸದ್‍ನಿಂದ ಕೇಳಿಬರಲಿಲ್ಲ ಎಂಬುದು ಅತ್ಯಂತ ವಿಷಾದನೀಯ. ಅದರ ಬದಲು ಅವರನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಿ ಬೆದರಿಸುವ ಧಾಟಿಯ ಮಾತುಗಳೇ ಧರ್ಮ ಸಂಸದ್‍ನಿಂದ ಕೇಳಿಬಂದುವು. ನಿಜವಾಗಿ, ಭಯದ ನೆರಳಲ್ಲಿ ಕಟ್ಟಿ ಹಾಕುವುದಕ್ಕಿಂತ ವಿಶ್ವಾಸಪೂರ್ಣ ಮತ್ತು ಅಪ್ಪುಗೆ ಭಾವದ ನುಡಿಗಳು ಇಂದಿನ ಅಗತ್ಯವಾಗಿತ್ತು. ಈ ಅಗತ್ಯವನ್ನು ಪೂರೈಸುವುದಕ್ಕೆ ಧರ್ಮ ಸಂಸದ್‍ನಿಂದ ಖಂಡಿತ ಸಾಧ್ಯವಿತ್ತು. ಹಾಗಾಗದಿರುವುದರಲ್ಲಿ ನೋವಿದೆ.