Tuesday, 19 December 2017

ಯಾದಗಿರಿ ಎತ್ತಿರುವ ದೇಶಪ್ರೇಮದ ಪ್ರಶ್ನೆ

     ಕಳೆದವಾರ ಮಾಧ್ಯಮಗಳು ಬರ್ನಾನ ಯಾದಗಿರಿ ಎಂಬ ಯುವಕನ ಗುಣಗಾನ ಮಾಡಿವೆ. ಮುಖ್ಯ ವಾಹಿನಿಯ ಸಾಕಷ್ಟು ಪತ್ರಿಕೆಗಳು ಈ ಯುವಕನನ್ನು ಪ್ರಶಂಸಿಸಿ ಸುದ್ದಿ ಬರೆದಿವೆ. ಸಾಫ್ಟ್‍ವೇರ್ ಇಂಜಿನಿಯರ್ ಪದವೀಧರನಾಗಿರುವ ಹೈದಾರಾಬಾದ್‍ನ ಈ ಯುವಕ ಸೇನೆ ಸೇರಿದ್ದಾನೆ. ಡೆಹ್ರಾಡೂನ್‍ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಕಳೆದವಾರ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾನೆ. ಯಾದಗಿರಿಯ ತಂದೆ ಕೂಲಿ ಕಾರ್ಮಿಕ. ಹೈದಾರಾಬಾದ್‍ನ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ದಿನಕ್ಕೆ 100 ರೂಪಾಯಿ ವೇತನಕ್ಕಾಗಿ ಅವರು ದುಡಿಯುತ್ತಿದ್ದಾರೆ. CAT  ಪರೀಕ್ಷೆಯಲ್ಲಿ 94.4% ಅಂಕ ಪಡೆದ ಬರ್ನಾನ ಯಾದಗಿರಿಗೆ ಇಂದೋರ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ನೀಡಿದ ಸೀಟನ್ನು ಮತ್ತು ಅಮೇರಿಕನ್ ಮೂಲದ ಯೂನಿಯನ್ ಫೆಸಿಪಿಕ್ ರೇಲ್ ರೋಡ್ ಕಂಪೆನಿಯು ನೀಡಿದ ಉದ್ಯೋಗ ಕೊಡುಗೆಯನ್ನು ತಿರಸ್ಕರಿಸಿ ಆತ ಸೇನೆ ಸೇರಿಕೊಂಡಿದ್ದಾನೆ. ದಿನಕ್ಕೆ 100 ರೂಪಾಯಿಗೆ ದುಡಿಯುವ ಕೂಲಿ ಕಾರ್ಮಿಕನೋರ್ವನ ಮಗನ ಮುಂದೆ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗವಿದ್ದೂ ಅದಕ್ಕೆ ಬೆನ್ನು ಹಾಕಿರುವುದನ್ನು ಮಾಧ್ಯಮಗಳು ದೇಶ ಪ್ರೇಮದ ಭಾಗವಾಗಿ ಕಂಡಿವೆ. ಹಾಗಂತ, ಇದನ್ನು ಅಲ್ಲಗಳೆಯಬೇಕಿಲ್ಲ. ಬಡತನದಲ್ಲಿ ಬೆಳೆದ ಮಗುವಿಗೆ ಮತ್ತು ಅದರ ಹೆತ್ತವರಿಗೆ ಕೆಲವು ಕನಸುಗಳಿರುತ್ತವೆ. ಬಡತನದ ಸ್ಥಿತಿಯಿಂದ ಹೊರಬರುವುದೂ ಅದರಲ್ಲಿ ಒಂದು. ಇಷ್ಟಿದ್ದೂ ಬರ್ನಾನ ಯಾದಗಿರಿ ಸೇನೆ ಸೇರಿದ್ದಾರೆಂದರೆ ಅದು ಪ್ರಶಂಸಾರ್ಹ ಮತ್ತು ಸವಾಲಿನ ನಿರ್ಧಾರ. ಆದರೆ ಈ ನಿರ್ಧಾರದ ಮೂಲಕ ಆ ಯುವಕ ಈ ಪ್ರಶಂಸಕರ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಆತನನ್ನು ಪ್ರಶಂಸಿಸಿದ ಪತ್ರಿಕೆಗಳಾವುವೂ ಎತ್ತದ ಅಥವಾ ಜಾಣತನದಿಂದ ಮರೆಗೆ ಸರಿಸಿದ ಪ್ರಶ್ನೆಗಳಿವು. ಯಾಕೆ ಬಡವರ ಮಕ್ಕಳೇ ಸೇನೆ ಸೇರುತ್ತಾರೆ? ದೇಶ ಪ್ರೇಮ ಎಂಬ ಬಹೂಪಯೋಗಿ ಅಸ್ತ್ರವು ಸದಾ ಯಾಕೆ ಬಡವರ ಗುಡಿಸಲನ್ನೇ ಗುರಿಯಾಗಿಸುತ್ತದೆ? ಶ್ರೀಮಂತ ಮನೆಯ ಮಗುವೊಂದು ಸೂಟು-ಬೂಟನ್ನು ಕಳಚಿ ಸೇನೆ ಸೇರುವ ಸನ್ನಿವೇಶಗಳೇಕೆ ನಿರ್ಮಾಣವಾಗುತ್ತಿಲ್ಲ? ಅಂದಹಾಗೆ, ಬರ್ನಾನ ಯಾದಗಿರಿಯನ್ನು ಹೊಗಳುವ ಮಾಧ್ಯಮಗಳು ಅದೇ ಧ್ವನಿಯಲ್ಲಿ ಶ್ರೀಮಂತರ ದೇಶ ಪ್ರೇಮವನ್ನೂ ಪ್ರಶ್ನೆಗೊಳಪಡಿಸಬಹುದಿತ್ತಲ್ಲ. ಅಮೇರಿಕನ್ ಮೂಲದ ಕಂಪೆನಿಯು ನೀಡುವ ಸಂಬಳಕ್ಕೆ ಹೋಲಿಸಿದರೆ ಬರ್ನಾನ ಯಾದಗಿರಿಗೆ ಸೇನೆ ನೀಡುವ ವೇತನ ತೀರಾ ತೀರಾ ಜುಜುಬಿ. ಆದ್ದರಿಂದ ಅಮೇರಿಕನ್ ಕಂಪೆನಿ ಉದ್ಯೋಗವನ್ನು ಕೈ ಬಿಟ್ಟು ಬರ್ನಾನ ಸೇನೆ ಸೇರುವುದೆಂದರೆ, ಅದಕ್ಕೆ ಗಟ್ಟಿ ಗುಂಡಿಗೆ ಬೇಕು. ಆದರೆ ಶ್ರೀಮಂತ ಕುಟುಂಬದ ಮಗುವಿಗೆ ಈ ಸಮಸ್ಯೆ ಬರುವುದಿಲ್ಲ. ಆದರೂ ಯಾಕೆ ಗುಡಿಸಲಿನ ಮಕ್ಕಳೇ ಸೇನೆ ಸೇರುತ್ತಾರೆ ಮತ್ತು ಯಾಕೆ ಅದು ದೇಶ ಪ್ರೇಮದ ಆಚೆಗಿನ ಪ್ರಶ್ನೆಗಳನ್ನು ಎತ್ತಲು ಮತ್ತೆ ಮತ್ತೆ ವಿಫಲವಾಗುತ್ತದೆ? ಮಾಧ್ಯಮಗಳು ಉದ್ದೇಶಪೂರ್ವಕಾಗಿ ಇಂಥ ಪ್ರಶ್ನೆಗಳ ಹುಟ್ಟನ್ನು ತಡೆಯಲು ಪ್ರಯತ್ನಿಸುತ್ತಿವೆಯೋ? ಅದರ ಭಾಗವಾಗಿಯೇ ದೇಶಪ್ರೇಮವನ್ನು ಮುಂದೊತ್ತಲಾಗುತ್ತಿದೆಯೋ? ಮುಖ್ಯವಾಹಿನಿ ಮಾಧ್ಯಮಗಳ ಆಯಕಟ್ಟಿನ ಜಾಗದಲ್ಲಿರುವವರಲ್ಲಿ ಎಷ್ಟು ಮಂದಿಯ ಮಕ್ಕಳು ಸೇನೆಯಲ್ಲಿದ್ದಾರೆ? ದೇಶ ಪ್ರೇಮದ ಬಗ್ಗೆ ನಿರರ್ಗಳ ಭಾಷಣ ಮಾಡುವ ರಾಜಕಾರಣಿಗಳ ಎಷ್ಟು ಮಕ್ಕಳು ಸೇನೆ ಸೇರುತ್ತಿದ್ದಾರೆ? ಪಾಕ್ ಗಡಿಯಲ್ಲೋ, ನಕ್ಸಲರ ಜೊತೆಗೋ ಅಥವಾ ಇನ್ನೆಲ್ಲೋ ಕಾದಾಡಿ ಪ್ರಾಣತೆರುವ ಯೋಧರನ್ನು ಹುತಾತ್ಮರೆಂದು ಕರೆದು, ವೀರಾವೇಶದ ಹೇಳಿಕೆ ನೀಡುವವರನ್ನೇಕೆ ಮಾಧ್ಯಮಗಳು ಪ್ರಶ್ನೆಗೊಳಪಡಿಸುತ್ತಿಲ್ಲ? ಹುತಾತ್ಮರಾಗುವುದೋ ಬಡಗುಡಿಸಲಿನ ಯುವಕರು. ಅದರ ಲಾಭ ಎತ್ತುವುದೋ ರಾಜಕಾರಣಿಗಳು. ಯಾಕೆ ಹೀಗೆ? ಇದೊಂದು ಸಂಚು ಯಾಕಾಗಿರಬಾರದು?
   ನಿಜವಾಗಿ, ದೇಶ ಪ್ರೇಮವೆಂಬುದು ಬಡವರು ಮಾತ್ರ ಆಚರಿಸಿ ತೋರಿಸಬೇಕಾದ ವಿಷಯವಲ್ಲ. ಅದು ದೇಶದ ಎಲ್ಲ ನಾಗರಿಕರಿಗೆ ಸಂಬಂಧಿಸಿದ್ದು. ದೇಶದ ಕಟ್ಟ ಕಡೆಯಲ್ಲಿರುವ ನಾಗರಿಕನಿಂದ ಹಿಡಿದು ದೇಶದ ತುತ್ತ ತುದಿಯಲ್ಲಿರುವ ನಾಗರಿಕನವರೆಗೆ ಎಲ್ಲರ ಮೇಲೂ ಇದರ ಹೊಣೆಗಾರಿಕೆಯಿದೆ. ದುರಂತ ಏನೆಂದರೆ, ಇವತ್ತು ದೇಶ ಪ್ರೇಮ, ಸಂಸ್ಕøತಿ ಪ್ರೇಮ, ಧರ್ಮ ರಕ್ಷಣೆ ಇತ್ಯಾದಿ ಇತ್ಯಾದಿಗಳನ್ನೆಲ್ಲ ಎರಡಾಗಿ ವಿಭಜಿಸಲಾಗಿದೆ. ಮೇಲ್ತುದಿಯಲ್ಲಿರುವ ಉದ್ಯಮಿಗಳು, ರಾಜಕಾರಣಿಗಳು, ಚಿತ್ರರಂಗದವರು ಮುಂತಾಗಿ ಹೈ ಸೊಸೈಟಿ ಎಂದು ನಾವು ಹೇಳಬಹುದಾದ ಬಡವರ್ಗವು ಒಂದು ಕಡೆಯಾದರೆ, ಬರ್ನಾನ ಯಾದಗಿರಿಯು ಪ್ರತಿನಿಧಿಸುವ ಬಡ ವರ್ಗವು ಇನ್ನೊಂದು ಕಡೆ ಮತ್ತು ಪ್ರತಿ ಸಮಯದಲ್ಲೂ ಪ್ರಶ್ನೆಗೆ ಮತ್ತು ಹಿಂಸೆಗೆ ಗುರಿಯಾಗುವುದೂ ಯಾದಗಿರಿ ಪ್ರತಿನಿಧಿಸುವ ಈ ವರ್ಗವೊಂದೇ. ಧರ್ಮ ರಕ್ಷಣೆಯ ನೊಗವನ್ನು ಹೊತ್ತುಕೊಂಡಿರುವುದೂ ಇದೇ ವರ್ಗ. ಅದರ ಹೆಸರಲ್ಲಿ ಹಲ್ಲೆ ಮತ್ತು ಹತ್ಯೆಗೆ ಗುರಿಯಾಗುತ್ತಿರುವುದೂ ಇದೇ ವರ್ಗ. ದೇಶ ಪ್ರೇಮವನ್ನು ಗುತ್ತಿಗೆ ಪಡಕೊಂಡಂತೆ ವರ್ತಿಸುತ್ತಿರುವುದೂ ಇದೇ ವರ್ಗ. ಅದರ ಹೆಸರಲ್ಲಿ ಹಿಂಸೆಗೆ ತುತ್ತಾಗುವುದೂ ಇದೇ ವರ್ಗ. ಸೇನೆ, ಪೆÇಲೀಸ್ ಇಲಾಖೆ ಸೇರಿಕೊಳ್ಳಬೇಕಾದುದೂ ಇದೇ ವರ್ಗ. ಅದರ ಪರಿಣಾಮವಾಗಿ ಶಾಶ್ವತ ಅಂಗವೈಕಲ್ಯ, ಸಾವುಗಳಿಗೆ ತುತ್ತಾಗಬೇಕಾದುದೂ ಇದೇ ವರ್ಗ. ಇನ್ನೊಂದು ವರ್ಗದ ಕೆಲಸ ಏನೆಂದರೆ, ಜನರನ್ನು ಪ್ರಚೋದಿಸುವುದು. ಯಾವುದು ದೇಶಪ್ರೇಮ, ಯಾವುದು ಅಲ್ಲ ಎಂಬುದನ್ನು ಮಾಧ್ಯಮಗಳ ಮುಂದೆ ನಿಂತು ಈ ವರ್ಗ ಘೋಷಿಸುತ್ತದೆ. ಯಾರಿಂದ, ಯಾವುದರಿಂದ ಧರ್ಮ ನಾಶವಾಗಬಹುದು ಎಂಬ ಬಗ್ಗೆ ಭಾಷಣಗಳನ್ನು ಬಿಗಿಯುತ್ತದೆ. ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಾದರೆ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅದು ಪಾಠ ಮಾಡುತ್ತದೆ. ಗಡಿ ಕಾಯುತ್ತಾ ಹುತಾತ್ಮನಾಗುವುದೆಂದರೆ ಅದೆಷ್ಟು ಗೌರವಾನ್ವಿತ ಮರಣ ಎಂಬ ಬಗ್ಗೆ ಹೇಳಿಕೆಗಳನ್ನು ಹೊರಡಿಸುತ್ತದೆ ಮತ್ತು ಬಳಿಕ ತಂತಮ್ಮ ಐಶಾರಾಮಿ ಬಂಗಲೆಯಲ್ಲೋ ಮನೆಯಲ್ಲೋ ಆರಾಮವಾಗಿರುತ್ತದೆ.
   ನಿಜವಾಗಿ, ಬರ್ನಾನ ಯಾದಗಿರಿಯ ಆಯ್ಕೆ ನಮ್ಮನ್ನೆಲ್ಲ ಕಾಡಬೇಕಾದುದು ಈ ಎಲ್ಲವುಗಳ ಹಿನ್ನೆಲೆಯಲ್ಲಿ. ಬಡವರ ಮನೆಯ ಮಕ್ಕಳನ್ನು ದೇಶ ಪ್ರೇಮ, ಧರ್ಮಪ್ರೇಮಗಳ ಹೆಸರಲ್ಲಿ ಶ್ರೀಮಂತ ವರ್ಗ ದಿಕ್ಕು ತಪ್ಪಿಸುತ್ತಿವೆಯೇ ಅನ್ನುವ ಅನುಮಾನವನ್ನು ಬರ್ನಾನ ಯಾದಗಿರಿ ನಮ್ಮ ಮುಂದಿಟ್ಟಿದ್ದಾರೆ. ದೇಶ, ಧರ್ಮ, ಸಂಸ್ಕøತಿ ಮುಂತಾದುವುಗಳು ಶ್ರೀಮಂತ ವರ್ಗ ಮತ್ತು ರಾಜಕಾರಣಿಗಳ ಖಯಾಲಿಗಳನ್ನು ಅಡಗಿಸುವ ಅಸ್ತ್ರಗಳೇ? ಈ ವರ್ಗದ ತೆವಲುಗಳ ಬಗ್ಗೆ ಜನಸಾಮಾನ್ಯರು ಗಮನ ಹರಿಸದಂತೆ ತಡೆಯುವುದಕ್ಕೆ ಧರ್ಮ, ಸಂಸ್ಕøತಿ, ದೇಶ ಪ್ರೇಮ.. ಇತ್ಯಾದಿಗಳನ್ನು ತೇಲಿಸಿ ಬಿಡಲಾಗಿದೆಯೇ? ಬಡವರ ಮಕ್ಕಳಿಗೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಅವರು ಆಟ ನೋಡುತ್ತಿದ್ದಾರೆಯೇ? ಸಂದರ್ಭಕ್ಕೆ ತಕ್ಕಂತೆ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದು ಈ ಸಂಚಿನ ಭಾಗವೇ?
    ಬರ್ನಾನ ಯಾದಗಿರಿಯನ್ನು ಮೆಚ್ಚಿಕೊಳ್ಳುವ ಜೊತೆ ಜೊತೆಗೇ ನಾವು ನಮ್ಮೊಳಗೆ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ.

No comments:

Post a Comment