`ಏಕ ವ್ಯಕ್ತಿ ಪ್ರತಿಭಟನೆ’ಯಾಗಿ ಗುರುತಿಸಿಕೊಂಡು ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ ಜಯ ಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ಕಣ್ಣುಗಳೆರಡೂ ನಿಸ್ತೇಜಗೊಂಡಿವೆ. ತನ್ನ ಬೇಡಿಕೆಯನ್ನು ಈಡೇರಿಸಿ ಕೇಂದ್ರ ಸರಕಾರ ಕಳುಹಿಸಿದ ಪತ್ರವನ್ನು ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಿಂದ ಪಡಕೊಂಡು ನಕ್ಕಾಗಲೂ ಕಳೆಗುಂದಿದ ವಾತಾವರಣವೊಂದು ಅಲ್ಲಿತ್ತು. ಇದಕ್ಕಾಗಿ 770 ದಿನಗಳ ವರೆಗೆ ಯಾಕೆ ಸತಾಯಿಸಿದಿರಿ ಅನ್ನುವ ಪ್ರಶ್ನೆಯೊಂದನ್ನು ಶ್ರೀಜಿತ್ ಮೌನವಾಗಿ ಈ ವ್ಯವಸ್ಥೆಯ ಮುಂದಿಟ್ಟಿದ್ದ. ಪ್ರಜಾತಂತ್ರ ರಾಷ್ಟ್ರವೊಂದರಲ್ಲಿ ನಾಗರಿಕನೊಬ್ಬ ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುವುದಕ್ಕೆ ದೇಹವನ್ನು ದಂಡಿಸಬೇಕೆ? 770 ದಿನಗಳ ಬಳಿಕ ಸ್ಪಂದಿಸುವ ವ್ಯವಸ್ಥೆಗೆ ಆರಂಭದಲ್ಲೇ ಸ್ಪಂದಿಸುವುದಕ್ಕೆ ಅಡ್ಡಿ ಏನಿತ್ತು? ಯಾರು ತಡೆದಿದ್ದರು? ಯಾಕೆ ತಡೆದಿದ್ದರು? ಹಾಗಂತ, ಶ್ರೀಜಿತ್ ಈ ವ್ಯವಸ್ಥೆಯ ಮುಂದಿಟ್ಟಿದ್ದ ಬೇಡಿಕೆ ಸ್ವಹಿತಾಸಕ್ತಿಯದ್ದೋ ಆರ್ಥಿಕವಾಗಿ ಲಾಭಕರವಾದದ್ದೋ ಆಗಿರಲಿಲ್ಲ. ಕೇರಳ ಪೊಲೀಸ್ ಕಂಪ್ಲೆಂಟ್ ಅಥಾರಿಟಿಯು (KPCA) ಗಂಭೀರ ದೋಷಾರೋಪಣೆ ಹೊರಿಸಿದ ಪ್ರಕರಣವೊಂದರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಆತನ ಬೇಡಿಕೆಯಾಗಿತ್ತು. 2014 ಮೇ 21ರಂದು ಶ್ರೀಜಿತ್‍ನ ಅಣ್ಣ ಶ್ರೀವಿಜಿಯ ಸಾವು ಸಂಭವಿಸುತ್ತದೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ನಡೆದ ಈ ಸಾವಿಗೆ ವಿಷ ಸೇವನೆಯೇ ಕಾರಣ ಎಂದು ಇಲಾಖೆ ಸ್ಪಷ್ಟನೆಯನ್ನು ನೀಡುತ್ತದೆ. ಲುಂಗಿಯಲ್ಲಿ ಆತ ವಿಷ ಪದಾರ್ಥವನ್ನು ಅಡಗಿಸಿಟ್ಟಿದ್ದ ಎಂಬ ಸಮರ್ಥನೆಯನ್ನೂ ಕೊಡುತ್ತದೆ. ಮೊಬೈಲ್ ಕಳ್ಳತನದ ಸಾಮಾನ್ಯ ಆರೋಪವನ್ನು ಹೊತ್ತುಕೊಂಡ ವ್ಯಕ್ತಿಯೋರ್ವ ವಿಷ ಸೇವನೆಯಂಥ ಅಸಾಮಾನ್ಯ ಕ್ರಮಕ್ಕೆ ಧೈರ್ಯ ಮಾಡಬಲ್ಲನೇ, ಅದಕ್ಕಾಗಿ ವಿಷ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲನೇ ಅನ್ನುವ ಪ್ರಶ್ನೆ ಶ್ರೀಜಿತ್‍ನಂತೆಯೇ ಹಲವರನ್ನು ಆ ಸಂದರ್ಭದಲ್ಲಿ ಕಾಡಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಈ ಪ್ರಶ್ನೆಗೆ ಯಾವ ಮಹತ್ವವೂ ಲಭಿಸಿರಲಿಲ್ಲ. ‘ಸ್ವಯಂಪ್ರೇರಿತವಾಗಿ ವಿಷ ಸೇವಿಸಿರುವುದೇ ಸಾವಿಗೆ ಕಾರಣ’ ಎಂದು ಅದು ಷರಾ ಬರೆದಿತ್ತು. ಅಲ್ಲದೇ, ಆತನದ್ದೆಂದು ಹೇಳಲಾದ ಡೆತ್ ನೋಟನ್ನು ಪೊಲೀಸ್ ತನಿಖೆಯಲ್ಲಿ ಪುರಾವೆಯಾಗಿ ಎತ್ತಿ ಹೇಳಲಾಗಿತ್ತು. ಒಂದು ರೀತಿಯಲ್ಲಿ, ಆತ್ಮಹತ್ಯೆ ಪ್ರಕರಣವಾಗಿ ಬಹುತೇಕ ಮುಗಿದು ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದು 2016ರಲ್ಲಿ ನಡೆದ ಕೇರಳ ಪೊಲೀಸ್ ಕಂಪ್ಲೇಂಟ್ ಅಥಾರಿಟಿಯ (KPCA) ತನಿಖೆ. ಅದು ಶ್ರೀವಿಜಿಯ ಸಾವನ್ನು ಕಸ್ಟಡಿ ಸಾವು ಎಂದು ಘೋಷಿಸಿತು. ಪಾರಶ್ಶಾಲ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಗೋಪಕುಮಾರ್ ಮತ್ತು ಎಎಸ್‍ಐ ಪಿಲಿಪ್ಪೋಸ್ ಎಂಬಿಬ್ಬರು ಶ್ರೀವಿಜಿಗೆ ಚಿತ್ರಹಿಂಸೆಯನ್ನು ನೀಡಿ, ಬಲವಂತದಿಂದ ವಿಷ ತಿನ್ನಿಸಿರುವರೆಂದು ಅದು ಕಂಡುಕೊಂಡಿತ್ತು. ಅಲ್ಲದೇ ಡೆತ್ ನೋಟ್‍ನ ಬಗ್ಗೆ ಫಾರೆನ್ಸಿಕ್ ಇಲಾಖೆಯ ವರದಿಯ ಪ್ರಾಮಾಣಿಕತೆಯ ಮೇಲೂ ಅದು ಅನುಮಾನವನ್ನು ವ್ಯಕ್ತಪಡಿಸಿತು. ಹೈಕೋರ್ಟ್‍ನ ಮಾಜಿ ನ್ಯಾಯಾಧೀಶರಾಗಿದ್ದ ನಾರಾಯಣ ಕುರುಪ್ ಅವರ ನೇತೃತ್ವದಲ್ಲಿ ನಡೆದ ಈ ಕೆಪಿಸಿಎಯ ತನಿಖೆಯ ಫಲಿತಾಂಶವು ಶ್ರೀಜಿತ್ ಕುಟುಂಬವನ್ನು ಆಘಾತಕ್ಕೆ ಒಳಪಡಿಸಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಟುಂಬ ಆಗ್ರಹಿಸಿತು. ತಿರುವನಂತಪುರದಲ್ಲಿರುವ ಸರಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯ ಮುಂದೆ ಅಂದಿನಿಂದ ಶ್ರೀಜಿತ್ ಸತ್ಯಾಗ್ರಹಕ್ಕೆ ಕುಳಿತುಕೊಂಡ. ಆತ ಇವತ್ತು ಈ ವ್ಯವಸ್ಥೆಯ ಮೇಲೆ ಎಷ್ಟು ಭರವಸೆರಹಿತವಾಗಿ ಬದುಕುತ್ತಿರುವನೆಂದರೆ, ತನ್ನ ಬೇಡಿಕೆಯನ್ನು ಒಪ್ಪಿಕೊಂಡು ಕೇಂದ್ರ ಸರಕಾರ ಹೊರಡಿಸಿದ ದೃಢೀಕರಣ ಪತ್ರವನ್ನೂ ನಂಬುತ್ತಿಲ್ಲ. ಮುಖ್ಯಮಂತ್ರಿಯವರ ಕಾರ್ಯದರ್ಶಿಯ ಮೂಲಕ ಆತನಿಗೆ ಆ ಪತ್ರವನ್ನು ನೀಡಲಾದ ನಂತರವೂ ಆತ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿಲ್ಲ. ಸಿಬಿಐಯು ತನಿಖೆಯನ್ನು ಆರಂಭಿಸಿದ ಬಳಿಕವೇ ತಾನು ಸತ್ಯಾಗ್ರಹದಿಂದ ವಿರಮಿಸುವೆನೆಂದು ಆತ ಹೇಳಿಕೊಂಡಿದ್ದಾನೆ.
ನಿಜವಾಗಿ, ಶ್ರೀಜಿತ್ ಈ ದೇಶದ ಎದುರು ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಈ ಪ್ರಶ್ನೆಗಳಿಗೆ ಈ ದೇಶ ಮುಖಾಮುಖಿಯಾಗದೇ ಹೋದರೆ ಅದು ಈ ದೇಶದ ವ್ಯವಸ್ಥೆಯನ್ನು ಇನ್ನಷ್ಟು ನಿರಂಕುಷತೆಯೆಡೆಗೆ ಕೊಂಡೊಯ್ಯಬಹುದು. ಈ ದೇಶದಲ್ಲಿ ಪ್ರತಿನಿತ್ಯ ಬಂಧನ, ವಿಚಾರಣೆ, ಬಿಡುಗಡೆ, ಸಾವು.. ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. 120 ಕೋಟಿಯಷ್ಟು ಜನಸಂಖ್ಯೆಯಿರುವ ದೇಶವೊಂದರಲ್ಲಿ ಇವೆಲ್ಲ ಸಹಜ ಎಂದು ನಾವು ಸಮರ್ಥಿಸಿಕೊಳ್ಳಬಹುದಾದರೂ ಇವುಗಳಲ್ಲಿ ಅಸಹಜವಾದುದೂ ಇರುತ್ತದೆ ಅನ್ನುವುದನ್ನು ಶ್ರೀಜಿತ್ ದೇಶದ ಮುಂದಿಟ್ಟಿದ್ದಾನೆ. ಪೊಲೀಸರು ಬಂಧಿಸುವ ವ್ಯಕ್ತಿ ನಿಜಕ್ಕೂ ಬಂಧನಕ್ಕೆ ಅರ್ಹನಾಗಿಯೇ ಇರಬೇಕೆಂದಿಲ್ಲ. ಪೊಲೀಸ್ ಇಲಾಖೆಯಲ್ಲಿರುವ ಕೆಲವರ ಸ್ವಹಿತಾಸಕ್ತಿಯ ಕಾರಣಕ್ಕಾಗಿ ಆತನ ಬಂಧನವಾಗಿರಬಹುದು. ಇನ್ನಾರನ್ನೋ ತೃಪ್ತಿಪಡಿಸುವುದಕ್ಕಾಗಿ ಆತನನ್ನು ‘ಫಿಕ್ಸ್’ ಮಾಡಿರಬಹುದು. ರಾಜಕೀಯ ಅಥವಾ ಧಾರ್ಮಿಕ ಹಿತಾಸಕ್ತಿಗಳು ಆ ಬಂಧನದ ಹಿಂದೆ ಕೆಲಸ ಮಾಡಿರಬಹುದು. ಸಾರ್ವಜನಿಕ ಆಕ್ರೋಶವನ್ನು ತಣಿಸುವ ಉದ್ದೇದಿಂದ ಆತನ ಬಂಧನವಾಗಿರಲೂ ಬಹುದು. ಅಂದಹಾಗೆ, ಶ್ರೀವಿಜಿ ಮೊಬೈಲ್ ಕದ್ದಿರಲೇ ಇಲ್ಲ ಎಂದೂ ಹೇಳಲಾಗುತ್ತದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣವನ್ನು ಫಿಕ್ಸ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ಇದೆ. ದುರಂತ ಏನೆಂದರೆ, ಹೀಗೆ ಅನ್ಯಾಯಕ್ಕೊಳಗಾದವರಲ್ಲಿ ಶ್ರೀವಿಜಿ ಮೊದಲಿಗನೇನಲ್ಲ. ಭಯೋತ್ಪಾದನೆಯ ಹೆಸರಲ್ಲಿ ಹತ್ತು-ಹದಿನೈದು ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡವರಿದ್ದಾರೆ. ವರ್ಷಗಟ್ಟಲೆ ಹಿಂಸೆ ಅನುಭವಿಸಿದವರಿದ್ದಾರೆ. ಪತ್ರಕರ್ತರು, ಪ್ರೊಫೆಸರ್‍ಗಳು, ವಿದ್ಯಾರ್ಥಿಗಳೂ ಸೇರಿದಂತೆ ದೊಡ್ಡದೊಂದು ಗುಂಪು ಈ ಬಗೆಯ ಹಿಂಸೆಗೆ ಬಲಿಯಾಗಿದೆ. ನಿರಪರಾಧಿಯಾಗಿ ಬಿಡುಗಡೆಗೊಳ್ಳುವಾಗ ಅವರು ಸಂತಸಪಡುವುದಕ್ಕಿಂತ ದುಃಖಿಸುವುದೇ ಹೆಚ್ಚು. ಶ್ರೀಜಿತ್‍ನಂತೆ ಅವರಲ್ಲೂ ಅನೇಕಾರು ಪ್ರಶ್ನೆಗಳಿರುತ್ತವೆ. ತಮ್ಮನ್ನು ಭಯೋತ್ಪಾದಕರಾಗಿ ಗುರುತಿಸಲು ಮತ್ತು ಎಫ್‍ಐಆರ್ ದಾಖಲಿಸಲು ಇದ್ದ ಕಾರಣಗಳೇನು? ಧರ್ಮವೇ, ವೇಷಭೂಷಣಗಳೇ, ಭಾಷೆಯೇ? ಯಾರ ಪಿತೂರಿಯು ಇದರ ಹಿಂದೆ ಕೆಲಸ ಮಾಡಿದೆ? ನಿರಪರಾಧಿಯೋರ್ವನನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸಿ ಕೊನೆಗೆ ಏನೂ ಆಗಿಲ್ಲವೆಂಬಂತೆ ಬಿಡುಗಡೆಗೊಳಿಸುವುದೆಂದರೆ ಏನರ್ಥ? ಪರಿಹಾರವೇನು? ಯಾಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮನುಷ್ಯ ಇಷ್ಟು ಅಗ್ಗವಾಗುತ್ತಾನೆ? ಆತನ ಮಾನ, ಪ್ರಾಣ, ಸ್ವಾಭಿಮಾನಗಳು ಯಾಕೆ ಜುಜುಬಿ ಅನ್ನಿಸಿಕೊಳ್ಳುತ್ತಿವೆ?
ಶ್ರೀವಿಜಿಯ ಸಾವು ಶ್ರೀಜಿತ್‍ನಂಥ ಛಲಗಾರ ತಮ್ಮನನ್ನು ಈ ಸಮಾಜಕ್ಕೆ ಪರಿಚಯಿಸಿದ್ದಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಹೊದ್ದುಕೊಂಡಿರುವ ಚರ್ಮ ಎಷ್ಟು ದಪ್ಪಗಿನದು ಎಂಬುದನ್ನೂ ಪರಿಚಯಿಸಿದೆ. ಹತ್ಯೆ ಎಂದು ಹೇಳಲಾದ ಒಂದು ಸಾವಿನ ಸುತ್ತ ತನಿಖೆ ನಡೆಸುವಂತೆ ಈ ವ್ಯವಸ್ಥೆಯನ್ನು ಒಪ್ಪಿಸಬೇಕಾದರೆ 770 ದಿನಗಳ ವರೆಗೆ ಸತ್ಯಾಗ್ರಹ ನಡೆಸಬೇಕು ಅನ್ನುವುದೇ ದೊಡ್ಡ ವ್ಯಂಗ್ಯ. 770 ದಿನಗಳ ಸತ್ಯಾಗ್ರಹದ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಬದಲು ಆರಂಭದಲ್ಲೇ ಒಪ್ಪಿಸಲು ತೀರ್ಮಾನಿಸಿರುತ್ತಿದ್ದರೆ ಶ್ರೀಜಿತ್ ಕೃಶನಾಗುತ್ತಿದ್ದನೇ? ಪಡಬಾರದ ಹಿಂಸೆ ಅನುಭವಿಸುತ್ತಿದ್ದನೇ?
ಏನೇ ಆಗಲಿ, ಪಟ್ಟು ಬಿಡದೇ ಹೋರಾಡಿದ ಶ್ರೀಜಿತ್‍ಗೆ ಅಭಿನಂದನೆಯನ್ನು ಸಲ್ಲಿಸಬೇಕು. ಆತ ನಿರಪರಾಧಿಗಳ ಸಂಕಟಕ್ಕೆ ಮತ್ತೊಮ್ಮೆ ದನಿಯಾಗಿದ್ದಾನೆ. ವ್ಯವಸ್ಥೆಯನ್ನು ಪೊರೆದಿರುವ ಅಪ್ರಾಮಾಣಿಕತೆಗೆ ಹೊಡೆತ ನೀಡಿದ್ದಾನೆ. ಆತನಿಗೆ ಅಭಿನಂದನೆಗಳು.