ಗೌರಿ ಲಂಕೇಶ್ ಹತ್ಯೆಯಾದ ಸಂದರ್ಭದಲ್ಲಿ ಈ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಎರಡು ರೀತಿಯ ಚರ್ಚೆಗಳು ನಡೆದಿದ್ದುವು. ಬಿಜೆಪಿಯ ಪರ ಇರುವ ಮತ್ತು ಬಲಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುವ ಗುಂಪು ಈ ಹತ್ಯೆಯ ಹೊಣೆಯನ್ನು ನಕ್ಸಲೀಯರ ತಲೆಗೆ ಕಟ್ಟಿದ್ದರೆ ಇನ್ನೊಂದು ಗುಂಪು, ಈ ಹತ್ಯೆಗೆ ತೀವ್ರ ಬಲಪಂಥೀಯ ವಿಚಾರಧಾರೆಯೇ ಕಾರಣ ಎಂದು ವಾದಿಸಿತ್ತು. ಈ ಚರ್ಚೆಯ ಸಮಯದಲ್ಲಿ ಯಾರಲ್ಲೂ ಖಚಿತ ಪುರಾವೆಗಳು ಇದ್ದಿರಲಿಲ್ಲವಾದದ್ದರಿಂದ ಅದನ್ನು ಒಪ್ಪುವ ಮತ್ತು ತಿರಸ್ಕರಿಸುವ ಸ್ವಾತಂತ್ರ್ಯ ಎಲ್ಲರೆದುರು ಮುಕ್ತವಾಗಿಯೇ ಇತ್ತು. ಆದರೆ, ಈಗ ಅಂಥ ಅವಕಾಶ ಬಹುತೇಕ ಕಮರಿ ಹೋಗಿದೆ. ಬಂಧಿತ ಪರಶುರಾಮ್ ವಾಗ್ಮೋರೆ ತುಳಿದ ಹಾದಿಯು ಬಲಪಂಥೀಯ ವಿಚಾರಧಾರೆಯ ವ್ಯಕ್ತಿಗಳು ಮತ್ತು ಸಂಘಟನೆಗಳ ಕಡೆಗಿದೆಯೇ ಹೊರತು ನಕ್ಸಲೀಯರ ಕಡೆಗಲ್ಲ. ಬಂಧಿತರ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ನೋಡುವಾಗ, ಮಾಲೆಗಾಂವ್, ಸಂಜೋತಾ ಎಕ್ಸ್ ಪ್ರೆಸ್, ಮಕ್ಕಾ ಮಸೀದಿ ಸ್ಫೋಟಗಳ ಆರೋಪದಲ್ಲಿ ಹೇಮಂತ್ ಕರ್ಕರೆ ಬಂಧಿಸಿದ್ದ ಆರೋಪಿಗಳ ವಿಚಾರಧಾರೆಗೂ ಗೌರಿ ಪ್ರಕರಣದಲ್ಲಿ ಬಂಧಿತರಾದವರ ವಿಚಾರಧಾರೆಗೂ ವ್ಯತ್ಯಾಸಗಳು ಕಾಣಿಸುತ್ತಿಲ್ಲ. ಸಾದ್ವಿ ಪ್ರಜ್ಞಾಸಿಂಗ್ ಸಾಗಿದ ಹಾದಿ ಎಲ್ಲಿ ಕೊನೆಗೊಳ್ಳುತ್ತೋ ಬಹುತೇಕ ಅಲ್ಲಿಯೇ ಅಥವಾ ಅದರ ಆಸು-ಪಾಸಿನಲ್ಲೇ ವಾಗ್ಮೋರೆ ಮತ್ತಿತರ ಹಾದಿಯೂ ಕೊನೆಗೊಳ್ಳುತ್ತದೆ. ಒಂದು ಕಡೆ- ಭಯೋತ್ಪಾದನೆ, ಉಗ್ರವಾದಿ ಚಿಂತನೆಯನ್ನು ಪ್ರಬಲವಾಗಿ ಖಂಡಿಸುತ್ತಲೇ ಇನ್ನೊಂದು ಕಡೆ ಅದನ್ನೇ ಪೋಷಿಸುವ ನೀತಿಯನ್ನು ಬಲಪಂಥೀಯ ಸಂಘಟನೆಗಳು ನಿರ್ವಹಿಸುತ್ತಿವೆಯೇ ಮತ್ತು ಬಿಜೆಪಿಯನ್ನು ಅದು ರಾಜಕೀಯ ರಕ್ಷಾ ಕವಚವಾಗಿ ಬಳಸಿಕೊಳ್ಳುತ್ತಿದೆಯೇ ಅನ್ನುವ ಅನುಮಾನ ಬಲವಾಗತೊಡಗಿದೆ. ಗೌರಿ ಹತ್ಯೆಯ ಬೆನ್ನಿಗೇ ಅದರ ಹೊಣೆಯನ್ನು ನಕ್ಸಲಿಸಂಗೆ ಜೋಡಿಸಿದಂತೆಯೇ ಈ ದೇಶದಲ್ಲಿ ನಡೆದ ಹತ್ಯಾಕಾಂಡ, ಹತ್ಯೆ, ಹಲ್ಲೆಗಳಿಗೆ ಪದೇ ಪದೇ ಇಂಥದ್ದೇ ತಿರುವನ್ನು ಕೊಟ್ಟು ತನಿಖೆಯ ದಾರಿ ತಪ್ಪಿಸಲು ಶ್ರಮಿಸಿದ ಹಲವು ಉದಾಹರಣೆಗಳು ಬಿಜೆಪಿಯ ಮೇಲಿದೆ. ಇದಕ್ಕೆ ತೀರಾ ಇತ್ತೀಚಿನ ಸೇರ್ಪಡೆ ಎಂದರೆ ದನದ ವ್ಯಾಪಾರಿ ಹುಸೇನಬ್ಬರ ಹತ್ಯೆ. ಈ ಹತ್ಯೆಯ ಆಘಾತದಿಂದ ಜಿಲ್ಲೆ ಇನ್ನೂ ಹೊರಬರುವ ಮೊದಲೇ ಸಂಸದೆ ಶೋಭಾ ಕರಂದ್ಲಾಜೆಯವರು ಹುಸೇನಬ್ಬರ ಸಾವಿಗೆ ಹೃದಯಾಘಾತ ಕಾರಣವೆಂದು ಮಾಧ್ಯಮಗಳ ಮುಂದೆ ಘೋಷಿಸಿದ್ದರು. ಬಂಧಿತರ ಬಿಡುಗಡೆಗಾಗಿ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಬಗೆಯ ವರ್ತನೆ ಬಿಜೆಪಿ ಮತ್ತು ಸಂಘಪರಿವಾರದಿಂದ ಈ ದೇಶದಲ್ಲಿ ಪದೇ ಪದೇ ನಡೆದಿದೆ. ಗುಜರಾತ್ ಹತ್ಯಾಕಾಂಡದ ಜೊತೆ ಜೊತೆಗೇ ಹತ್ತು ಹಲವು ವದಂತಿಗಳನ್ನು ಹರಿಬಿಡುವ ಮೂಲಕ ಸಮರ್ಥಿಸುವ ಶ್ರಮ ನಡೆಯಿತು. ಮುಝಫರ್ ನಗರ್ ಹತ್ಯಾಕಾಂಡಕ್ಕೆ ಪ್ರಚೋದನೆ ಒದಗಿಸಿದ್ದೇ ಬಿಜೆಪಿ ಸಂಸದರ ಒಂದು ತಪ್ಪಾದ ವೀಡಿಯೋ! ಅಖ್ಲಾಕ್ ಎಂಬ ವೃದ್ಧನನ್ನು, ಜುನೈದ್ ಎಂಬ ಯುವಕನನ್ನು ಅಥವಾ ಈ ದೇಶದಲ್ಲಿ ನಡೆದ ಹತ್ತು ಹಲವು ಹತ್ಯಾಕಾಂಡಗಳನ್ನು ಈ ವಿಚಾರಧಾರೆಯ ಮಂದಿ ಯಾವುದೋ ಒಂದು ಬಿಂದುವಿನಲ್ಲಿ ನಿಂತು ಸಮರ್ಥಿಸಿಕೊಂಡರು. ಅದಕ್ಕೆ ಪೂರಕವಾದ ತಿರುವುಗಳನ್ನು ಮಂಡಿಸಿ ಚರ್ಚೆಯ ದಿಕ್ಕು ತಪ್ಪಿಸಿದರು. ಇದೀಗ ಈ ಎಲ್ಲವುಗಳನ್ನು ಒಂದು ಕಡೆ ಹರಡಿಟ್ಟುಕೊಂಡು ತಳಸ್ಪರ್ಶಿ ಅಧ್ಯಯನ ನಡೆಸಬೇಕಿದೆ. ಮುಸ್ಲಿಮರು ಮತ್ತು ಬಲಫಂಥೀಯ ವಿಚಾರಧಾರೆಯನ್ನು ಪ್ರಶ್ನಿಸುವವರ ಹತ್ಯೆ ನಡೆದಾಗಲೆಲ್ಲ ಬಿಜೆಪಿ ತಕ್ಷಣ ರಂಗಪ್ರವೇಶಿಸುವುದು ಮತ್ತು ಆ ಹತ್ಯೆ-ಹತ್ಯಾಕಾಂಡಗಳಿಗೆ ವಿಚಿತ್ರ ತಿರುವನ್ನು ಕೊಟ್ಟು ಸಮರ್ಥಿಸುವುದರ ಹಿಂದೆ ಬರೇ ರಾಜಕೀಯ ಉದ್ದೇಶವಷ್ಟೇ ಇದೆಯೇ ಅಥವಾ ತನ್ನ ಬೆನ್ನೆಲುಬಾಗಿರುವ ಸಂಘಟನೆಗಳನ್ನು ಕಾನೂನಿನ ಕೈಗಳಿಂದ ರಕ್ಷಿಸುವ ಕಾನೂನು ವಿರೋಧಿ ಉದ್ದೇಶವೂ ಇರಬಹುದೇ? ಹುಸೇನಬ್ಬರು ಹತ್ಯೆಗೀಡಾದ ತಕ್ಷಣ ಅದನ್ನು ಹೃದಯಾಘಾತದ ಸಾವು ಎಂದು ಸಂಸದೆ ಹೇಳಲು ಏನು ಕಾರಣ? ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೇ ಅವರು ಹಾಗೊಂದು ಹೇಳಿಕೆ ಕೊಟ್ಟರೇಕೆ? ಗೌರಿಹತ್ಯೆಗೀಡಾದ ತಕ್ಷಣ ಅದಕ್ಕೆ ನಕ್ಸಲಿಸಂನ್ನು ಜೋಡಿಸಿದವರ ಉದ್ದೇಶವೇನು? ಕ್ರೌರ್ಯದ ಕಾವನ್ನು ತಣಿಸುವುದು ಮತ್ತು ಜನರಲ್ಲಿ ಗೊಂದಲವನ್ನು ಹುಟ್ಟು ಹಾಕಿ, ಅಪರಾಧಿಗಳು ತಪ್ಪಿಸಿಕೊಳ್ಳುವಂತೆ ನೋಡಿಕೊಳ್ಳುವುದೇ ಈ ಬಗೆಯ ವರ್ತನೆಗಳ ಮೂಲ ಉದ್ದೇಶವಾಗಿದೆ ಎಂದೇ ಇದನ್ನು ಅರ್ಥೈಸಬೇಕಾಗುತ್ತದೆ. ಇಂಥ ವರ್ತನೆಗಳ ಕಾರಣದಿಂದಾಗಿಯೇ ಮಾಲೆಗಾಂವ್ ಮತ್ತು ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ ಅಮಾಯಕ ಮುಸ್ಲಿಮ್ ಯುವಕರ ಬಂಧನವಾಯಿತು. ವರ್ಷಗಟ್ಟಲೆ ಜೈಲಲ್ಲಿ ಕೊಳೆಯಿಸಿ ಕೊನೆಗೆ ಅವರನ್ನು ಬಿಡುಗಡೆಗೊಳಿಸಲಾಯಿತು. ಒಂದುವೇಳೆ, ಕರ್ಕರೆ ಅವರು ಸಾದ್ವಿ ಪ್ರಜ್ಞಾಸಿಂಗ್ ಗುಂಪನ್ನು ಬಂಧಿಸದೇ ಇರುತ್ತಿದ್ದರೆ, ಈ ಯುವಕರು ಈಗಲೂ ಜೈಲಲ್ಲೇ ಇದ್ದಿರಬೇಕಾದ ಸಾಧ್ಯತೆಯೇ ಹೆಚ್ಚು. ಯಾವಾಗ ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರದ ದಿಕ್ಕು ತಪ್ಪಿಸುವ ತಂತ್ರಕ್ಕೆ ಕರ್ಕರೆ ಸಡ್ಡು ಹೊಡೆದು ನಿಂತರೋ ಅನುಮಾನಾಸ್ಪದ ರೀತಿಯಲ್ಲಿ ಅವರ ಹತ್ಯೆಯಾಯಿತು. ಇದೀಗ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ಸಿಟ್ ಮುಖ್ಯಸ್ಥ ಬಿ.ಕೆ. ಸಿಂಗ್‍ರ ಬಗೆಗೂ ಇಂಥದ್ದೇ ಭಯ ವ್ಯಕ್ತವಾಗುತ್ತಿದೆ. ಈ ಪ್ರಕರಣದಲ್ಲಿ ಬಂಧಿತರೆಲ್ಲರೂ ಬಲಪಂಥೀಯ ಸಂಘಟನೆಗಳ ಕಡೆ ಮುಖ ಮಾಡಿ ಕೂತಿದ್ದಾರೆ. ನಿಜವಾಗಿ, ಇದು ಈ ಬಗೆಯ ಒಂಟಿ ಪ್ರಕರಣವಲ್ಲ. ಈ ದೇಶದಲ್ಲಿ ನಡೆದ ಮುಸ್ಲಿಮ್ ವಿರೋಧೀ ಹತ್ಯಾಕಾಂಡ ಮತ್ತು ಹತ್ಯೆ ಹಾಗೂ ಬಲಪಂಥೀಯ ವಿಚಾರಧಾರೆಯನ್ನು ಪ್ರಶ್ನಿಸುವವರ ಮೇಲೆ ನಡೆದಿರುವ ದಾಳಿಗಳ ಆರೋಪಿಗಳೆಲ್ಲರೂ ಬಿಜೆಪಿ ಮತ್ತು ಸಂಘಪರಿವಾರದ ವಿಚಾರಧಾರೆಯನ್ನೇ ಪ್ರತಿನಿಧಿಸುತ್ತಾರೆ. ಚುನಾವಣೆಯ ಸಮಯದಲ್ಲಿ ಈ ಮಂದಿ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ. ಬಿಜೆಪಿ ಹೊರತು ಪಡಿಸಿ ಮಿಕ್ಕುಳಿದ ಎಲ್ಲ ಜಾತ್ಯತೀತ ಪಕ್ಷಗಳ ವಿರುದ್ಧವೇ ಮಾತಾಡುತ್ತಾರೆ. ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಪ್ರಶ್ನಿಸುತ್ತಾರೆ. ಒಂದು ರೀತಿಯಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಏನು ಹೇಳುತ್ತದೋ ಮತ್ತು ಯಾವ ವಿಚಾರಧಾರೆಯನ್ನು ಪ್ರತಿಪಾದಿಸುತ್ತದೋ ಅದನ್ನೇ ಉರ ಹೊಡೆಯುವ ಮಂದಿಯೇ ಈ ಎಲ್ಲ ಅಪರಾಧ ಕೃತ್ಯಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ, ಈ ಅಪರಾಧಿಗಳಿಗೂ ಬಿಜೆಪಿ ಮತ್ತು ಪರಿವಾರಕ್ಕೂ ಸಂಬಂಧವೇ ಇಲ್ಲವೆಂದಾದರೆ, ಈ ಮಂದಿಯ ಪರ ವಹಿಸಿಕೊಂಡಂತೆ ಬಿಜೆಪಿ ಮತ್ತು ಪರಿವಾರ ಮಾತಾಡುವುದೇಕೆ? ಅವರಿಗೆ ನೆರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿರುವುದೇಕೆ? ಪಕ್ಷದ ಜೊತೆ ಗುರುತಿಸಿಕೊಳ್ಳಲು ಅಂಥವರಿಗೆ ಬಿಜೆಪಿ ಅವಕಾಶ ನೀಡುತ್ತಿರುವುದೇಕೆ?
ಮಾಲೆಗಾಂವ್, ಮಕ್ಕಾ ಮಸೀದಿ ಮತ್ತು ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಮೂಲವನ್ನು ಹುಡುಕುತ್ತಾ ಕರ್ಕರೆಯವರು ಎಲ್ಲಿಗೆ ಬಂದು ತಲುಪಿದ್ದರೋ ಬಹುತೇಕ ಅಲ್ಲಿಗೇ ಗೌರಿ ಲಂಕೇಶ್ ತನಿಖಾ ಸಂಸ್ಥೆ ಬಂದು ತಲುಪಿರುವಂತಿದೆ. ಐಜಿಪಿ ಬಿ.ಕೆ. ಸಿಂಗ್ ಅವರು ಕರ್ಕರೆಯವರು ತೆರೆಯಲು ಪ್ರಯತ್ನಿಸಿದ್ದ ಅದೇ ಬಾಗಿಲನ್ನು ತೆರೆಯುವ ಸಾಹಸಕ್ಕೆ ಮುಂದಾಗಿರುವಂತಿದೆ. ಇದೊಂದು ಸವಾಲು. ಈ ಸವಾಲನ್ನು ಎದುರಿಸುವ ಹಂತದಲ್ಲಿ ಕರ್ಕರೆ ಅನುಮಾನಸ್ಪದವಾಗಿ ಹತ್ಯೆಗೀಡಾದರು. ಆದ್ದರಿಂದ, ಬಿ.ಕೆ. ಸಿಂಗ್ ಅವರು ಆ ಬಾಗಿಲನ್ನು ತೆರೆಯಲು ಯಶಸ್ವಿಯಾಗುವರು ಎಂದು ಈಗಲೇ ಹೇಳುವಂತಿಲ್ಲ. ನಿಜವಾಗಿ, ವಾಗ್ಮೋರೆ ಬರೇ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ. ಆ ವಿಚಾರಧಾರೆ ವಾಗ್ಮೋರೆಯಂಥ ಬಡಪಾಯಿ ಯುವಕನ ಕೈಗೂ ಬಂದೂಕು ಹಿಡಿಸುವಷ್ಟು ಪ್ರಭಾವಶಾಲಿ. ಪಾಕಿಸ್ತಾನದ ಧ್ವಜವನ್ನು ಭಾರತದಲ್ಲಿ ಹಾರಾಡಿಸುವಷ್ಟೂ ಅಪಾಯಕಾರಿ. ಧರ್ಮವು ಅಧರ್ಮವೆಂದು ಸಾರಿದ ಕೃತ್ಯವನ್ನೇ `ಧರ್ಮ ಸೇವೆ’ಯೆಂದು ನಂಬಿಸುವಷ್ಟು ಸಾಮರ್ಥ್ಯ ಆ ವಿಚಾರಧಾರೆಗಿದೆ. ಈ ಅಮಲಿನಿಂದ ವಾಗ್ಮೋರೆಯಂಥ ಯುವಕರನ್ನು ಬಿಡಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಲೀನಗೊಳಿಸಲು ಬಂಧನ, ಶಿಕ್ಷೆಗಳಷ್ಟೇ ಸಾಲವು. ಆ ವಿಚಾರಧಾರೆ ಎಷ್ಟು ಅಪಾಯಕಾರಿ ಮತ್ತು ಅಧರ್ಮಕಾರಿ ಅನ್ನುವುದನ್ನು ಮಾಧ್ಯಮಗಳು ಪದೇ ಪದೇ ಸಮಾಜದ ಮುಂದಿಡಬೇಕು. ಆ ವಿಚಾರಧಾರೆಗೆ ಆಕರ್ಷಿತರಾಗದಂತೆ ಧರ್ಮಗುರುಗಳು ಯುವಕರಿಗೆ ಮಾರ್ಗದರ್ಶನ ಮಾಡಬೇಕು. ಹತ್ಯೆ, ಹತ್ಯಾಕಾಂಡಗಳು ಧರ್ಮ ರಕ್ಷಣೆಯ ಪರಿಧಿಯೊಳಗೆ ಬರದಂತೆ ಮತ್ತು ಧರ್ಮ ದ್ರೋಹದ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡುವ ಜಾಗೃತಿ ಕಾರ್ಯಕ್ರಮಗಳನ್ನು ಎಲ್ಲ ಧರ್ಮದವರೂ ಜೊತೆ ಸೇರಿ ಕೈಗೊಳ್ಳಬೇಕು.