Tuesday, 12 June 2018

ಒಕ್ಕಲಿಗ+ಕುರುಬ+ಅಹಿಂದ ಸಮುದಾಯದ ಒಗ್ಗಟ್ಟಿಗೆ ವೇದಿಕೆ ಒದಗಿಸಿದರೇ ಯಡಿಯೂರಪ್ಪ?

     

       ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಮತ್ತು ಬಳಿಕದ ಬೆಳವಣಿಗೆಗಳು ಕಾಂಗ್ರೆಸ್‍ಗೆ ಅಂಟಿದ್ದ ‘ಅಧಿಕಾರ ದುರುಪಯೋಗ’ ಎಂಬ ಕಳಂಕವನ್ನು ಬಿಜೆಪಿಯ ಹಣೆಗೂ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ನರಸಿಂಹರಾವ್‍ರ ಆಡಳಿತ ಕಾಲದಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ ನಡೆಸಿದ್ದನ್ನು ಬಿಜೆಪಿ ಈವರೆಗೂ ಹೇಳುತ್ತಾ ತಿರುಗುತ್ತಿತ್ತು. ಆದರೆ, ರಾಜ್ಯದಲ್ಲಿ ಯಾವಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೋ ಆಗಲೇ ಬಿಜೆಪಿಯ ಅಧಿಕಾರ ದುರುಪಯೋಗದ ಒಂದೊಂದೇ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಈ ವರ್ಷದ ಆರಂಭದಲ್ಲಿ ಗೋವಾದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಗೆ ಲಭ್ಯವಾದುದು ಬರೇ 13 ಸ್ಥಾನಗಳು. ಕಾಂಗ್ರೆಸ್‍ಗೆ 17 ಸ್ಥಾನಗಳು ಸಿಕ್ಕಿದ್ದುವು. ಕರ್ನಾಟಕದ ಮಾದರಿಯನ್ನು ಅನುಸರಿಸುವುದಾದರೆ ಗೋವಾದ ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಸರಕಾರ ರಚಿಸುವಂತೆ ಆಹ್ವಾನಿಸಬೇಕಿತ್ತು. ಆದರೆ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿಕೂಟ ರಚಿಸಿಕೊಂಡ ಬಿಜೆಪಿಗೆ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರು. ಮೇಘಾಲಯದಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗವಂತೂ ಅತ್ಯಂತ ಆಘಾತಕಾರಿ. ಬರೇ ಎರಡು ಸ್ಥಾನಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಅಲ್ಲಿ ಸರಕಾರ ರಚಿಸಿತು. ಇಲ್ಲೂ ಕೂಡಾ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮಾಡಿಕೊಂಡ ಮೈತ್ರಿಕೂಟವನ್ನು ರಾಜ್ಯಪಾಲರು ಪುರಸ್ಕರಿಸಿದರು. 21 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್ ಇಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ರಾಜ್ಯಪಾಲರು ಕಾಂಗ್ರೆಸನ್ನು ಕಡೆಗಣಿಸಿದರು. ಇದರ ಜೊತೆಗೇ ಮಣಿಪುರವನ್ನೂ ಪರಿಗಣಿಸುವುದಾದರೆ ಕೇವಲ ನಾಲ್ಕೇ ವರ್ಷಗಳ ಅವಧಿಯಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗದ ವೃತ್ತಾಂತ ಎಷ್ಟು ದೊಡ್ಡದು ಅನ್ನುವುದು ಮನವರಿಕೆಯಾಗುತ್ತದೆ. ಮಣಿಪುರದಲ್ಲಿ ಇವತ್ತು ಅಧಿಕಾರ ನಡೆಸುತ್ತಿರುವುದು ಬಿಜೆಪಿ. ಆದರೆ, 28 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಇಲ್ಲಿ ಏಕೈಕ ದೊಡ್ಡ ಪಕ್ಷ. ಬಿಜೆಪಿಗೆ ಲಭ್ಯವಾಗಿರುವುದು 21 ಸ್ಥಾನಗಳು. ಆದರೆ ರಾಜ್ಯಪಾಲರು ದೊಡ್ಡ ಪಕ್ಷವಾದ ಕಾಂಗ್ರೆಸ್‍ನ ಬದಲು ಬಿಜೆಪಿಯನ್ನು ಸರಕಾರ ರಚಿಸುವಂತೆ ಆಹ್ವಾನಿಸಿದರು. ನಿಜವಾಗಿ, ಗೋವಾ, ಮಣಿಪುರ, ಮೇಘಾಲಯ ಮತ್ತು ಬಿಹಾರ ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗವನ್ನು ದೊಡ್ಡಮಟ್ಟದ ಚರ್ಚೆಯಾಗುವಂತೆ ಮಾರ್ಪಡಿಸಿದ್ದು ಕರ್ನಾಟಕದ ಬೆಳವಣಿಗೆ. ಒಂದು ವೇಳೆ, ಮೇಲಿನ ನಾಲ್ಕೂ ರಾಜ್ಯಗಳ ಮಾದರಿಯನ್ನೇ ಕರ್ನಾಟಕದಲ್ಲೂ ರಾಜ್ಯಪಾಲರು ಮಾನ್ಯ ಮಾಡಿರುತ್ತಿದ್ದರೆ ಬಿಜೆಪಿಯ ಪಾಲಿಗೆ ಇವತ್ತು ಎರಡು ರೀತಿಯ ಲಾಭಗಳಿದ್ದುವು. ಒಂದು- ಗೋವಾ, ಮಣಿಪುರ, ಮೇಘಾಲಯಗಳಲ್ಲಿ ಸರಕಾರ ರಚಿಸಿದ ಕ್ರಮವು ಅಧಿಕಾರ ದುರುಪಯೋಗವಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ ಮತ್ತು ಅದು ಮಹತ್ವಪೂರ್ಣ ಸುದ್ದಿಯಾಗಿ ಚರ್ಚೆಗೊಳಗಾಗುತ್ತಿರಲಿಲ್ಲ. ಎರಡು- ಯಡಿಯೂರಪ್ಪರು ಸರಕಾರ ರಚಿಸುವುದಕ್ಕೆ ಮುಂದಾಗದೇ ಇರುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ಮೈತ್ರಿಕೂಟ ಈಗಿನಷ್ಟು ಬಲಿಷ್ಠವಾಗುತ್ತಿರಲಿಲ್ಲ. ಯಾವಾಗ ಬಿಜೆಪಿ ರಾಜ್ಯದಲ್ಲಿ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿತೋ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಬಲಿಷ್ಠವಾಗುತ್ತಾ ಹೋಯಿತು. ಮೋದಿ ಮತ್ತು ಅಮಿತ್‍ಷಾರ ಪ್ರತಿ ಹೇಳಿಕೆ ಮತ್ತು ನಡವಳಿಕೆಗಳು ಈ ಮೈತ್ರಿಕೂಟಕ್ಕೆ ಬಲವನ್ನು ತುಂಬುತ್ತಾಹೋಯಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಆರಂಭದಲ್ಲಿ ದೇವೇಗೌಡ-ಪರಿವಾರದ ಬಯಕೆ ಮಾತ್ರವೇ ಆಗಿದ್ದರೆ, ಯಡಿಯೂರಪ್ಪರ ಪ್ರಮಾಣ ವಚನದ ಬಳಿಕ ಅದು ಕಾಂಗ್ರೆಸ್ ಮತ್ತು ಒಕ್ಕಲಿಗ ಸಮುದಾಯದ ಪ್ರತಿಷ್ಠೆಯಾಗಿ ಬದಲಾಯಿತು. ಎರಡೂವರೆ ದಿನಗಳು ಸಿಕ್ಕಿಯೂ ಜೆಡಿಎಸ್-ಕಾಂಗ್ರೆಸ್‍ನ ಒಬ್ಬನೇ ಒಬ್ಬ ಶಾಸಕನನ್ನೂ ತನ್ನೆಡೆಗೆ ಸೆಳೆಯಲು ಬಿಜೆಪಿ ವಿಫಲವಾದುದಕ್ಕೆ ಈ ಪ್ರತಿಷ್ಠೆಯ ಪ್ರಜ್ಞೆಯೇ ಬಹುಮುಖ್ಯ ಕಾರಣ. ಒಂದು ವೇಳೆ, ಬಿಜೆಪಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸದೇ ಇರುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಕೂಟ ತಕ್ಷಣದ ತೇಪೆಯಾಗಿರುತ್ತಿತ್ತೇ ಹೊರತು ಶಾಸಕರಲ್ಲಿ ಈ ಮಟ್ಟದ ಪP್ಷÀನಿಷ್ಠೆಯನ್ನು ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಬಹಳ ಬೇಗನೇ ದುರ್ಬಲವಾಗಿ ಬಿಡಬಹುದಾಗಿದ್ದ ಮೈತ್ರಿಕೂಟವೊಂದನ್ನು ಮೋದಿ ಮತ್ತು ಅಮಿತ್‍ಶಾ ಬಳಗ ತಮ್ಮ ಕೈಯಾರೆ ಬಲಿಷ್ಠಗೊಳಿಸಿದರು. ಮಾತ್ರವಲ್ಲ, ತಮ್ಮ ಈ ವರೆಗಿನ ಅಧಿಕಾರ ದುರುಪಯೋಗವು ರಾಷ್ಟ್ರೀಯ ಚರ್ಚೆಗೊಳಗಾಗುವಂತೆ ನೋಡಿಕೊಂಡಿದರು.
ಅಂದಹಾಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಆಯುಷ್ಯ ಎಷ್ಟು ದಿನಗಳವರೆಗಿದೆ ಎಂದು ಹೇಳುವುದಕ್ಕೆ ಸದ್ಯ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಪದ ಈ ಹಿಂದಿನ ವರ್ತನೆಯನ್ನು ಪರಿಗಣಿಸುವುದಾದರೆ, 5 ವರ್ಷಗಳ ಪೂರ್ಣಾವಧಿಗೆ ಈ ಮೈತ್ರಿಕೂಟ ಬಾಳುವುದನ್ನು ನಿರೀಕ್ಷಿಸಲಾಗದು. ಮೈತ್ರಿಕೂಟ ಸರಕಾರದ ಬಹುದೊಡ್ಡ ಸಮಸ್ಯೆಯೇ ಭಿನ್ನಾಭಿಪ್ರಾಯ. ಚುನಾವಣೆಯಲ್ಲಿ ಪರಸ್ಪರ ವೈರಿಗಳಂತೆ ಸೆಣಸಿದ ಎರಡು ಪಕ್ಷಗಳು ಆ ಬಳಿಕ ಮಿತ್ರರಾಗಿ ಬಾಳುವುದು ಸುಲಭವಲ್ಲ. ಅಲ್ಲದೇ ಶಾಸಕರಷ್ಟೇ ಮಿತ್ರರಾದರೆ ಸಾಲುವುದಿಲ್ಲ. ಎರಡೂ ಪಕ್ಪಗಳ ಕಾರ್ಯಕರ್ತರನ್ನೂ ಈ ಮಿತ್ರತ್ವದಲ್ಲಿ ಬಂಧಿಸಬೇಕು. ಸೈದ್ಧಾಂತಿಕ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಧಿಕಾರ ಹಂಚಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಇದು ಹೇಳಿದಷ್ಟು ಸುಲಭವಲ್ಲ. ಅತೃಪ್ತಿ, ಅಸಮಾಧಾನ, ಬಂಡಾಯಗಳಿಗೆ ಸದಾ ಬಾಗಿಲು ತೆರೆದೇ ಇರುವುದು ಮೈತ್ರಿಕೂಟ ಸರಕಾರದ ಬಹುದೊಡ್ಡ ದೌರ್ಬಲ್ಯ. ಅಲ್ಲದೇ, ರಾಜ್ಯದಲ್ಲಿ ಅಧಿಕಾರ ವಂಚಿತ ಬಿಜೆಪಿಯೂ ಇನ್ನೊಂದು ಕಡೆ ಇದೆ. ಅದು ಅತೃಪ್ತ ಶಾಸಕರನ್ನು ತನ್ನೆಡೆಗೆ ಸೆಳೆಯುವುದಕ್ಕೆ ಸಕಲ ಪ್ರಯತ್ನವನ್ನೂ ಖಂಡಿತ ಮಾಡಲಿದೆ. ಬಿಜೆಪಿಯ ಅಧಿಕಾರ ದುರುಪಯೋಗವನ್ನು ತಡೆಯಲು ನಿರೀಕ್ಷೆಗಿಂತಲೂ ಮೀರಿ ಒಂದಾದ ಈ ಎರಡೂ ಪಕ್ಷಗಳ ಶಾಸಕರು ಮುಂದೆಯೂ ಇದೇ ಬದ್ಧತೆಯನ್ನು ತೋರ್ಪಡಿಸುವರು ಎಂದು ನಿರೀಕ್ಷಿಸುವ ಹಾಗಿಲ್ಲ. ಆದರೂ, ಕರ್ನಾಟಕದಲ್ಲಿ ಬಿಜೆಪಿಯ ನಡವಳಿಕೆಯು ಮುಂದಿನ ದಿನಗಳಲ್ಲಿ ಹೊಸ ಜಾತಿ ಸಮೀಕರಣವೊಂದನ್ನು ಹುಟ್ಟು ಹಾಕುವ ಎಲ್ಲ ಸಾಧ್ಯತೆಯನ್ನೂ ತೆರೆದಿಟ್ಟಿದೆ. ಬಹುಮತವಿದ್ದೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗದಂತೆ ತಡೆದ ಬಿಜೆಪಿಯ ಕ್ರಮವು ಮುಂದಿನ ದಿನಗಳಲ್ಲಿ ಒಕ್ಕಲಿಗ ಸ್ವಾಭಿಮಾನವನ್ನು ಕೆಣಕಿದ ಪ್ರಸಂಗವಾಗಿ ಗುರುತಿಸಿಕೊಳ್ಳಲೂ ಬಹುದು. ಲಿಂಗಾಯತ ಯಡಿಯೂರಪ್ಪರು ಒಕ್ಕಲಿಗ ಕುಮಾರಸ್ವಾಮಿಗೆ ಮೋಸ ಮಾಡಿದರು ಎಂಬ ಭಾವನೆಯೊಂದು ಆ ಸಮುದಾಯದಲ್ಲಿ ಬೆಳೆದುಬಿಟ್ಟರೆ ಅದು ಮುಂದಿನ ದಿನಗಳಲ್ಲಿ ಜೆಡಿಎಸ್‍ನ ಒಕ್ಕಲಿಗ ಮತ್ತು ಕಾಂಗ್ರೆಸ್‍ನ ಅಹಿಂದ-ಕುರುಬ ಸಮುದಾಯದ ಒಗ್ಗಟ್ಟಿಗೆ ಕಾರಣವಾಗಲೂಬಹುದು. ಹೀಗಾದರೆ ಬಿಜೆಪಿಯು ಕೇವಲ ಲಿಂಗಾಯತ ಸಮುದಾಯವೊಂದನ್ನೇ ಆಶ್ರಯಿಸಬೇಕಾಗಬಹುದು. ಬಿಜೆಪಿಯು ಒಕ್ಕಲಿಗ, ಕುರುಬ ಮತ್ತು ಅಹಿಂದ ವರ್ಗಕ್ಕೆ ಮೋಸ ಮಾಡಿದೆ ಎಂಬ ಘೋಷಣೆಯೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಜನರ ಬಳಿಗೆ ಒಟ್ಟಾಗಿ ತೆರಳಿದರೆ ಅದು ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಗಲೂಬಹುದು.
    ಒಂದು ರೀತಿಯಲ್ಲಿ, ಯಡಿಯೂರಪ್ಪರನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಿದ್ದು, ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತು ಬರೇ ಎರಡೂವರೆ ದಿನಗಳೊಳಗೆ ರಾಜೀನಾಮೆ ನೀಡಿದ್ದು ಎಲ್ಲವೂ ರಾಜಕೀಯವಾಗಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗಿಯೇ ಕಾಣಿಸುತ್ತದೆ. ಮೋದಿ-ಅಮಿತ್‍ಶಾ ಬಳಗವು ಅಜೇಯವಲ್ಲ ಎಂಬುದು ಗುಜರಾತ್‍ನಲ್ಲಿ ಸಾಬೀತಾದ ಬಳಿಕದ ಬೆಳವಣಿಗೆ ಎಂಬ ನಿಟ್ಟಿನಲ್ಲೂ ಕರ್ನಾಟಕವು ಮುಖ್ಯವಾಗುತ್ತದೆ. ಮೋದಿ ಮತ್ತು ಶಾರನ್ನು ಮಣಿಸಬಹುದು ಎಂಬುದು ಕರ್ನಾಟಕದಲ್ಲಿ ಸಾಬೀತಾಗಿದೆ. ಇದು ಕಾಂಗ್ರೆಸ್‍ನ ಆತ್ಮವಿಶ್ವಾಸವನ್ನು ಮಾತ್ರ ಹೆಚ್ಚಿಸಿರುವುದಲ್ಲ. ರಾಷ್ಟ್ರಮಟ್ಟದಲ್ಲಿ ಹಲವು ಪ್ರಾದೇಶಿಕ ಪಕ್ಷಗಳಲ್ಲೂ ಧೈರ್ಯವನ್ನು ಹುಟ್ಟಿಸಿದೆ. ರಜನಿಕಾಂತ್, ಕಮಲ್ ಹಾಸನ್, ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಸಹಿತ ವಿವಿಧ ನಾಯಕರು ಕರ್ನಾಟಕದ ಮೈತ್ರಿಕೂಟವನ್ನು ಬೆಂಬಲಿಸಿದ್ದು ಬದಲಾದ ಈ ರಾಜಕೀಯ ವಾತಾವರಣವನ್ನು ಸ್ಪಷ್ಟಪಡಿಸುತ್ತದೆ. ಬಹುಶಃ, 2019ರ ಲೋಕಸಭಾ ಚುನಾವಣೆಯ ವೇಳೆ ಮೋದಿಯವರು ಕಠಿಣ ಸವಾಲನ್ನು ಎದುರಿಸಬೇಕಾದೀತು ಎಂಬುದನ್ನು ಈ ಎಲ್ಲ ಬೆಳವಣಿಗೆಗಳು ಸೂಚಿಸುತ್ತವೆ.

No comments:

Post a Comment