ಅಮೃತಸರದಲ್ಲಿ ದಹನಕ್ರಿಯೆಯೊಂದು ನಡೆದಿದೆ. ದಹನಕ್ಕೆ ಒಳಗಾದವ ರಾವಣ. ಆದರೆ ಈ ದಹನ ಕ್ರಿಯೆಗೆ 60ರಷ್ಟು ಮಂದಿ ಪ್ರಾಣ ತೆತ್ತಿದ್ದಾರೆ. ರಾವಣನು ದಹನಕ್ಕೆ ಅರ್ಹನೋ ಅನ್ನುವ ಪ್ರಶ್ನೆ ವರ್ಷದಿಂದ ವರ್ಷಕ್ಕೆ ಬಲ ಪಡೆಯುತ್ತಿರುವ ಹೊತ್ತಿನಲ್ಲೇ ನಡೆದ ಈ ದಹನ ಮತ್ತು ದುರಂತವು ನಮ್ಮೊಳಗನ್ನು ತೀವ್ರವಾಗಿ ತಟ್ಟಬೇಕು ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಗಂಭೀರ ಅವಲೋಕನವೊಂದಕ್ಕೆ ಇದು ಪ್ರೇರೇಪಿಸಬೇಕು. ಸದ್ಯ, ದುರಂತದ ಸುತ್ತ ಆರೋಪ-ಪ್ರತ್ಯಾರೋಪಗಳು ಚಾಲ್ತಿಯಲ್ಲಿವೆ. ಆರೋಪಿಗಳ ಪಟ್ಟಿಯಲ್ಲಿ ರೈಲು ಚಾಲಕನಿಂದ ಹಿಡಿದು ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟ ಪೊಲೀಸರು, ರೈಲ್ವೆ ಇಲಾಖೆ, ರಾಜ್ಯ ಸರಕಾರ, ರಾಜಕಾರಣಿಗಳು, ಕಾರ್ಯಕ್ರಮ ಆಯೋಜಕರು ಮುಂತಾದ ಅನೇಕರಿದ್ದಾರೆ. ಆದರೆ, ಇಂಥ ಬೀಸು ಆರೋಪಗಳಿಂದ ಏನನ್ನೂ ಸಾಧಿಸಲಾಗದು ಅನ್ನುವುದು ಆರೋಪ ಹೊತ್ತವರಿಗೂ ಗೊತ್ತು. ಆರೋಪಿಸುವವರಿಗೂ ಗೊತ್ತು. ಇನ್ನು, ಒಂದೆರಡು ವಾರಗಳೊಳಗೆ ಈ ಇಡೀ ಘಟನೆ ತಣ್ಣಗಾಗಿರುತ್ತದೆ. ದೇಶ ಮರೆಯುತ್ತದೆ. ಮಾಧ್ಯಮಗಳು ಮೀಟೂವನ್ನೋ ರಾಜಕಾರಣಿಗಳ ರಾಜಕೀಯವನ್ನೋ ಮುಖಪುಟದಲ್ಲಿಟ್ಟು ಆಟ ಆಡತೊಡಗಿರುತ್ತವೆ. ಕೊನೆಗೆ ಈ ದುರಂತವು ಸಂತ್ರಸ್ತರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಮಾತ್ರ ನೆನಪಾಗಿ ಉಳಿದಿರುತ್ತದೆ. ನಿಜವಾಗಿ, ರಾವಣ ದಹನದ ಸಂದರ್ಭದಲ್ಲಾದ ದುರಂತಕ್ಕಿಂತ ದೊಡ್ಡ ದುರಂತ ಇದು.
ಈ ದೇಶದಲ್ಲಿ ಪ್ರತಿದಿನವೆಂಬಂತೆ ಹಬ್ಬಗಳು ಅಥವಾ ಧಾರ್ಮಿಕ ಆಚರಣೆಗಳು ಆಚರಿಸಲ್ಪಡುತ್ತಿರುತ್ತವೆ. ಪಟ್ಟಣ, ಕೇರಿ, ಹಳ್ಳಿ, ತಾಲೂಕು, ಗ್ರಾಮ ಇತ್ಯಾದಿ ಯಾವುದೂ ಈ ಆಚರಣೆಯ ಗೌಜು-ಗದ್ದಲದಿಂದ ಮುಕ್ತವಲ್ಲ. ಕೆಲವು ಕಡೆ ಪಟಾಕಿ, ಕೆಲವು ಕಡೆ ದಹನ, ಕೆಲವು ಕಡೆ ಮೆರವಣಿಗೆ, ದೇಹ ದಂಡನೆ, ಅಪಾಯಕಾರಿ ಸ್ಪರ್ಧಾ ಕೂಟಗಳು.. ಹೀಗೆ ನೂರಾರು ರೀತಿಯಲ್ಲಿ ಆಚರಿಸಲ್ಪಡುತ್ತವೆ. ನಾವು ರೈಲನ್ನು ದೂರುವ ಮೊದಲು ನಮ್ಮ ನಡುವೆ ಚಾಲ್ತಿಯಲ್ಲಿರುವ ಈ ಆಚರಣಾ ವಿಧಾನಗಳನ್ನೊಮ್ಮೆ ಅವಲೋಕಿಸಿಕೊಂಡರೇನು? ಅಂದಹಾಗೆ,
ದಹನಕ್ರಿಯೆ ಏಕೆ ಬೇಕು? ದೀಪಾವಳಿಯ ಸಮಯದಲ್ಲಿ ನಾವು ಸುಡುವ ಪಟಾಕಿಗಳು ಎಷ್ಟು ಸುರಕ್ಷಿತ, ಎಷ್ಟು ನಿರುಪದ್ರವಿ? ಮುಹರ್ರಂನ ವೇಳೆ ದೇಹ ದಂಡಿಸುವ ಆಚರಣೆಯೂ ನಮ್ಮ ನಡುವೆ ಇದೆ. ಇಂಥದ್ದು ಇನ್ನಷ್ಟು ಇರಲೂಬಹುದು. ಇವುಗಳ ಬಗ್ಗೆ ಆಯಾ ಧರ್ಮಗಳ ಒಳಗೆ ಜಾಗೃತಿ ಅಭಿಯಾನಗಳು ನಡೆದರೆ ಹೇಗೆ? ನಿಜವಾಗಿ, ದಹನ ಕ್ರಿಯೆ ಎಂಬುದೇ ನಕಾರಾತ್ಮಕವಾದುದು. ಸುಡುವುದು ಸಹಜ ಕ್ರಿಯೆ ಅಲ್ಲ. ‘ಸುಟ್ಟ ವಾಸನೆ’ ಎಂಬ ಪದ ಬಳಕೆ ನಮ್ಮ ನಡುವೆ ಇದೆ. ಸುಟ್ಟ ಸುವಾಸನೆ ಎಂದು ನಾವು ಕರೆಯುವುದಿಲ್ಲ. ಸುಡುವಿಕೆಯಿಂದ ಹೊರಬರುವುದು ಕೆಟ್ಟ ವಾಸನೆ ಅನ್ನುವ ಭಾವನೆ ಸಾರ್ವಜನಿಕವಾಗಿ ಇದೆ. ಹಾಗಂತ, ರಾವಣನ ಪ್ರತಿಕೃತಿಯಷ್ಟೇ ಇಲ್ಲಿ ದಹನವಾಗುವುದಲ್ಲ. ತಮಗಾಗದವರ ಪ್ರತಿಕೃತಿ ರಚಿಸಿ ದಹಿಸುವ ಕ್ರಮವೊಂದು ಚಾಲ್ತಿಯಲ್ಲಿದೆ. ರಾಜಕೀಯ ಪಕ್ಷವು ಇನ್ನೊಂದು ಪಕ್ಷದವರ ಪ್ರತಿಕೃತಿಯನ್ನು ದಹಿಸುತ್ತದೆ. ವಿದ್ಯಾರ್ಥಿಗಳು ಕಾಲೇಜಿನದ್ದೋ ಪ್ರಾಂಶುಪಾಲರದ್ದೋ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಚಿವರು ಅಥವಾ ಅಧಿಕಾರಿಗಳದ್ದೋ ಪ್ರತಿಕೃತಿಯನ್ನು ದಹಿಸುತ್ತಾರೆ. ಪೊಲೀಸರ ಪ್ರತಿಕೃತಿಯನ್ನು ದಹಿಸುವ ಪ್ರತಿಭಟನಾಕಾರರಿದ್ದಾರೆ. ಜನಪ್ರತಿನಿಧಿಗಳ ಪ್ರತಿಕೃತಿ, ಬಂಡವಾಳಶಾಹಿ ನೀತಿಯ ಪ್ರತಿಕೃತಿ, ಅತ್ಯಾಚಾರಿಗಳ ಪ್ರತಿಕೃತಿ.. ಹೀಗೆ ದಹನಗಳು ನಡೆಯುತ್ತಲೇ ಇರುತ್ತವೆ. ಅಷ್ಟಕ್ಕೂ,
ಪ್ರತಿಭಟನೆಯ ಮಾದರಿಯಾಗಿ ದಹನಗಳೇ ಏಕೆ ಬೇಕು? ಸುಡುಮದ್ದು ಮತ್ತು ಪಟಾಕಿಗಳನ್ನು ಹೊರತುಪಡಿಸಿ ಹಬ್ಬಗಳನ್ನು ಆಚರಿಸಲು ಸಾಧ್ಯವಿಲ್ಲವೇ? ಅಮೃತ್‍ಸರದ ದುರಂತಕ್ಕೆ ಬಹುದೊಡ್ಡ ಕಾರಣವಾದುದು ರಾವಣನ ಪ್ರತಿಕೃತಿಯ ಒಳಗೆ ಸುಡುಮದ್ದುಗಳನ್ನು ತುಂಬಿಸಿಟ್ಟಿದುದು. ಪ್ರತಿಕೃತಿಗೆ ಬೆಂಕಿ ಕೊಟ್ಟಾಗ ಒಳಗಿದ್ದ ಸುಡುಮದ್ದು ಸ್ಫೋಟಿಸಿತು. ಸದ್ದಿನ ಭೀಕರತೆಗೆ ಜನ ದಿಕ್ಕಾಪಾಲಾದರು. ಹಾಗೆ ರೈಲ್ವೆ ಹಳಿಯ ಮೇಲೂ ಓಡಿದರು.
ವರ್ಷಂಪ್ರತಿ ಪಟಾಕಿಯೂ ಇಂಥದ್ದೇ ದುರಂತ ಸುದ್ದಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳು ಕಣ್ಣು ಕಳೆದುಕೊಳ್ಳುವ ದಾರುಣ ಸುದ್ದಿಯನ್ನು ನಾವು ಓದುತ್ತಲೂ ಇರುತ್ತೇವೆ. ಇದು ಇನ್ನೂ ಯಾಕೆ ಮುಂದುವರಿಯಬೇಕು? ಹಬ್ಬಗಳನ್ನು ಬೆಂಕಿರಹಿತವಾಗಿ ಮಾಡುವ ಬಗ್ಗೆ ಗಂಭೀರ ಚರ್ಚೆಗಳೇಕೆ ನಡೆಯುತ್ತಿಲ್ಲ?
ರಾವಣ ಕೆಟ್ಟವನೋ ಒಳ್ಳೆಯವನೋ, ಅಸುರನೋ ರಾಜನೋ ಇತ್ಯಾದಿ ಚರ್ಚೆಗಳಾಚೆಗೆ ಕೆಟ್ಟವರನ್ನು ಸುಡುವುದರ ನೈತಿಕ ಸರಿ-ತಪ್ಪುಗಳ ಬಗ್ಗೆ ಧಾರ್ಮಿಕ ವಲಯಗಳಲ್ಲಿ ಚರ್ಚೆ ಆರಂಭವಾಗಬೇಕು. ಸುಡದೆಯೇ ಪ್ರತಿಭಟನೆ ನಡೆಸುವ, ಸುಡದೆಯೇ ಹಬ್ಬ ಆಚರಿಸುವ, ಬೆಂಕಿ ರಹಿತವಾಗಿಯೇ ಸಂತೋಷ ಕೂಟಗಳನ್ನು ಏರ್ಪಡಿಸುವ ಸಂದರ್ಭಗಳು ಹೆಚ್ಚೆಚ್ಚು ಸೃಷ್ಟಿಯಾಗಬೇಕು. ರಾವಣನನ್ನು ದಹಿಸದೆಯೇ ರಾವಣನ ಸರಿ-ತಪ್ಪುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಸಾಧ್ಯವಿದೆ. ದೇಹವನ್ನು ದಂಡಿಸದೆಯೇ ಇಮಾಮ್ ಹುಸೇನ್‍ರ ತ್ಯಾಗಮಯ ಬದುಕನ್ನು ಜನರ ಮುಂದಿಡುವುದಕ್ಕೆ ಅವಕಾಶವಿದೆ. ದೀಪಾವಳಿಯೆಂದರೆ ಸಿಡಿಮದ್ದು ಸುಡುವುದು ಎಂಬ ಭಾವನೆಯಿಂದ ಹೊರಬಂದು ಆಚರಿಸುವುದಕ್ಕೂ ಸಾಧ್ಯವಿದೆ. ಆದರೆ ಇದು ಸಾಧ್ಯವಾಗಬೇಕಾದರೆ ಧಾರ್ಮಿಕ ನೇತಾರರು ಮನಸ್ಸು ಮಾಡಬೇಕು. ‘ಸುಡುವ ಸಂತೋಷ ಕೂಟದಿಂದ ದೂರ ನಿಲ್ಲೋಣ’ ಎಂದು ಅವರು ಸಾರಿಬಿಟ್ಟರೆ ಅದರಿಂದ ಅಸಂಖ್ಯ ಮಕ್ಕಳು, ಭಕ್ತರು ಸುರಕ್ಷಿತರಾದಾರು. ಮಾತ್ರವಲ್ಲ, ಅಂಥದ್ದೊಂದು ಕರೆ ಹಬ್ಬಗಳಾಚೆಗೂ ಪ್ರಭಾವ ಬೀರುವ ಸಾಧ್ಯತೆಯಿದೆ.
ನಮ್ಮ ಹಬ್ಬ-ಹರಿದಿನಗಳಲ್ಲಿ ಬೆಂಕಿಗಿಂತ ಬೆಳಕಿಗೆ ಪ್ರಾಮುಖ್ಯತೆ ಲಭ್ಯವಾಗಬೇಕು. ಆ ಬೆಳಕು ಬೆಂಕಿಯದ್ದೇ ಆಗಬೇಕಿಲ್ಲ. ಧಾರ್ಮಿಕ ಉಪದೇಶವೂ ಬೆಳಕೇ. ಸದ್ಯದ ದಿನಗಳಲ್ಲಿ ಧಾರ್ಮಿಕ ಉಪದೇಶ ತೆರೆಮರೆಗೆ ಸರಿಯುತ್ತಿದೆ. ದ್ವೇಷ ಮುನ್ನೆಲೆಗೆ ಬರುತ್ತಿದೆ. ಬೆಂಕಿ ದ್ವೇಷದ ಸಂಕೇತ. ಸುಡುವುದೇ ಅದರ ಗುಣ. ಕೆಟ್ಟವರನ್ನೂ ಒಳ್ಳೆಯವರನ್ನೂ ಅದು ಸುಡುತ್ತದೆ. ಆದರೆ ಉಪದೇಶ ಹಾಗಲ್ಲ, ಅದು ಕೆಟ್ಟವರನ್ನೂ ಒಳ್ಳೆಯವರನ್ನಾಗಿಸುತ್ತದೆ. ಒಳ್ಳೆಯವರನ್ನು ಇನ್ನಷ್ಟು ಒಳಿತಿನೆಡೆಗೆ ಕೊಂಡೊಯ್ಯುತ್ತದೆ. ಸದ್ಯದ ಅಗತ್ಯ ಇದು. ಯಾವಾಗಲೋ ಆಗಿ ಹೋದ ರಾವಣನಿಗೆ ದಹನದಿಂದ ಏನೂ ಆಗಲಾರದು. ಆದರೆ ಆ ದಹನವನ್ನು ವೀಕ್ಷಿಸುವವರ ಮೇಲೆ ಆ ಸುಡುವ ಕ್ರಿಯೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಸ್ವಸ್ಥ ಸಮಾಜದ ದೃಷ್ಟಿಯಿಂದ ಇದು ಅಪಾಯಕಾರಿ.