18 ಮತ್ತು 21- ಇದು ಹೆಣ್ಣು ಮತ್ತು ಗಂಡಿನ ಮದುವೆಗೆ ಬಾಲ್ಯವಿವಾಹ ತಡೆ ಕಾಯ್ದೆಯು (PCMA) ನಿಗದಿಪಡಿಸಿರುವ ಪ್ರಾಯ. 18 ವರ್ಷಕ್ಕಿಂತ ಒಳಗಿನ ಹೆಣ್ಣು ಅಥವಾ 21 ವರ್ಷಕ್ಕಿಂತ ಒಳಗಿನ ಗಂಡು ವಿವಾಹ ಬಂಧನದಲ್ಲಿ ಏರ್ಪಟ್ಟರೆ ಆ ವಿವಾಹ ಕಾನೂನು ಪ್ರಕಾರ ಅಸಿಂಧು ಮತ್ತು ಅಪರಾಧ. ಆದರೆ ಭಾರತೀಯ ದಂಡಸಂಹಿತೆ(ಐಪಿಸಿ)ಯು ಈ ವಿಷಯದಲ್ಲಿ ಬೇರೆಯದೇ ಆದ ನಿಲುವನ್ನು ಹೊಂದಿದೆ. ಇದರ 375ನೇ ವಿಧಿ ಹೇಳುವುದೇನೆಂದರೆ, ಪತ್ನಿಯು 15 ರಿಂದ 18 ವರ್ಷದ ಒಳಗಿನ ಪ್ರಾಯದವಳಾಗಿದ್ದರೆ ಆಕೆಯ ಸಮ್ಮತಿ ಪಡೆದು ಪತಿಯು ದೈಹಿಕ ಸಂಪರ್ಕವನ್ನು ಬೆಳೆಸಿದರೆ, ಅದು ಅತ್ಯಾಚಾರವಾಗುವುದಿಲ್ಲ. ಅಂದರೆ, ವಿವಾಹ ಸಿಂಧು ಎಂದರ್ಥ. ಇದು ಸ್ಪಷ್ಟ ವಿರೋಧಾಭಾಸ. ಒಂದು ಕಾನೂನು 18 ವರ್ಷದೊಳಗಿನ ವಿವಾಹವನ್ನು ಅಪರಾಧ ಎಂದು ಹೇಳುವಾಗ, ಇನ್ನೊಂದು ಕಾನೂನು, ಸಿಂಧು ಎಂದು ಪುರಸ್ಕರಿಸುತ್ತದೆ. ಇದೇವೇಳೆ, ತನ್ನ ಜನಪ್ರತಿನಿಧಿ ಯಾರಾಗಬೇಕು ಮತ್ತು ಈ ದೇಶವನ್ನು ಮುನ್ನಡೆಸುವುದಕ್ಕೆ ಯಾರು ಅರ್ಹರು ಎಂಬ ಅತಿ ಗಂಭೀರ ತೀರ್ಮಾನವನ್ನು ಕೈಗೊಳ್ಳುವುದಕ್ಕೆ 18 ವರ್ಷ ಸಾಕು ಎಂಬುದಾಗಿಯೂ ಇಲ್ಲಿನ ಕಾನೂನೇ ಒಪ್ಪಿಕೊಳ್ಳುತ್ತದೆ. 18 ವರ್ಷ ತುಂಬಿದ ಹೆಣ್ಣು-ಗಂಡು ಇಬ್ಬರಿಗೂ ಮತದಾನದ ಹಕ್ಕು ಲಭ್ಯವಾಗಿರುವುದು ಇದೇ ಕಾರಣದಿಂದ. ಹೀಗಿರುತ್ತಾ,
ಗಂಡಿನ ಮದುವೆಗೆ ಈ ಮಾನದಂಡ ಅನ್ವಯವಾಗುವುದಿಲ್ಲ ಅಂದರೆ ಏನರ್ಥ? 18 ವರ್ಷ ತುಂಬಿದ ಹೆಣ್ಣಿನಲ್ಲಿ ಮದುವೆಯ ಕುರಿತಾದ ತಿಳುವಳಿಕೆ, ಪ್ರಬುದ್ಧತೆ ಮತ್ತು ಪಕ್ವತೆ ಇರಬಹುದಾದರೆ, ಆ ಪ್ರಾಯದ ಗಂಡಿನಲ್ಲಿ ಇವು ಇರಲ್ಲ ಎಂದು ತೀರ್ಮಾನಿಸಿರುವುದಕ್ಕೆ ಆಧಾರ ಏನು? 18 ವರ್ಷದ ಹೆಣ್ಣಿನಲ್ಲಿರುವ ಪಕ್ವತೆಯನ್ನು ಗಳಿಸಲು ಗಂಡಿಗೆ 21 ವರ್ಷಗಳು ಬೇಕಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆಯೇ ಅಥವಾ ಇದು ಗಂಡಿನೊಂದಿಗೆ ಮಾಡಲಾಗುವ ತಾರತಮ್ಯವೇ? ಒಂದು ವೇಳೆ, ಗಂಡಿನ ಸ್ಥಾನದಲ್ಲಿ ಹೆಣ್ಣು ಇರುತ್ತಿದ್ದರೆ ಇದು ಅಸಮಾನತೆ ಎನಿಸಿಕೊಳ್ಳುತ್ತಿರಲಿಲ್ಲವೇ? ಸ್ತ್ರೀ ಶೋಷಣೆ, ಪುರುಷ ಪ್ರಧಾನ ನಿಲುವು ಎಂಬ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲವೇ? ಅಂದಹಾಗೆ,
ಈ ದೇಶದ ಕಾನೂನು ಆಯೋಗವು ಈ ವಿರೋಧಾಭಾಸದ ಕಾನೂನುಗಳು ಮತ್ತು ಈ ಪ್ರಾಯ ವ್ಯತ್ಯಾಸಗಳ ಕುರಿತಂತೆ ತಲೆ ಕೆಡಿಸಿಕೊಂಡಿದೆ. ಹೆಣ್ಣು ಮತ್ತು ಗಂಡಿನ ಮದುವೆ ಪ್ರಾಯವನ್ನು 18 ವರ್ಷಕ್ಕೆ ನಿಗದಿಗೊಳಿಸುವಂತೆ ಅದು ಕೇಂದ್ರ ಸರಕಾರಕ್ಕೆ ಕಳೆದವಾರ ಸಲಹೆ ನೀಡಿದೆ.
ಮದುವೆ ಎಂಬುದು ಹರೆಯದ ಹೆಣ್ಣು ಮತ್ತು ಗಂಡು ಜೋಡಿಗಳಾಗುವುದರ ಹೆಸರಾಗಿಯಷ್ಟೇ ಇವತ್ತು ಉಳಿದುಕೊಂಡಿಲ್ಲ. ಅದೊಂದು ಮಾರುಕಟ್ಟೆ. ಈ ಮಾರುಕಟ್ಟೆಯ ವ್ಯಾಪ್ತಿ ಎಷ್ಟು ದೊಡ್ಡದೆಂದರೆ, ಜಾಗತಿಕವಾಗಿ ಹಲವು ಲಕ್ಷ ಕೋಟಿ ರೂಪಾಯಿಗಳು ಪ್ರತಿದಿನ ಈ ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇವತ್ತಿನ ಮದುವೆಯ ಸ್ವರೂಪವನ್ನು ತೀರ್ಮಾನಿಸುವುದು ವಧು ಮತ್ತು ವರ ಅಲ್ಲ ಅಥವಾ ಆ ಎರಡೂ ಕುಟುಂಬಗಳ ಸದಸ್ಯರೂ ಅಲ್ಲ. ಕಂಪೆನಿಗಳು ಅದನ್ನು ಇವತ್ತು ನಿರ್ಧರಿಸುತ್ತವೆ. ಆಭರಣ ಕಂಪೆನಿಗಳು, ಉಡುಪು ವಿನ್ಯಾಸಕಾರರು, ಈವೆಂಟ್ ಮ್ಯಾನೇಜ್‍ಮೆಂಟ್ ಸಂಸ್ಥೆಗಳು ಮುಂತಾದುವು ಮದುವೆಯನ್ನು ಬಹುತೇಕ ಹೈಜಾಕ್ ಮಾಡಿವೆ. ಇಂಥ ಕಂಪೆನಿಗಳೇ ನೇರವಾಗಿಯೋ ಪರೋಕ್ಷವಾಗಿಯೇ ಧಾರಾವಾಹಿಗಳನ್ನು ನಿರ್ಮಿಸುತ್ತವೆ. ಸಿನಿಮಾಗಳನ್ನು ತಯಾರಿಸುತ್ತವೆ ಅಥವಾ ಪಾಲು ಬಂಡವಾಳ ಹೂಡುತ್ತವೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ಪೂರಕವಾದ ಸನ್ನಿವೇಶ ಮತ್ತು ಕಥಾಹಂದರವನ್ನು ಧಾರಾವಾಹಿ-ಸಿನಿಮಾಗಳಲ್ಲಿ ಅವು ತುರುಕುತ್ತವೆ. ಮದುವೆಗಿಂತ ಮೊದಲು ಗಂಡು-ಹೆಣ್ಣು ಭೇಟಿಯಾಗುವುದು, ಪರಸ್ಪರ ಅನುರಾಗ ಉಂಟಾಗುವುದು ಮತ್ತು ವಿವಿಧ ತಿರುವುಗಳ ಮೂಲಕ ಈ ಗೆಳೆತನ ಮದುವೆಯ ಹಂತಕ್ಕೆ ಬಂದು ಮುಟ್ಟುವುದು ಇತ್ಯಾದಿಗಳು ನಡೆಯುತ್ತವೆ. ಈ ಎಲ್ಲ ಸಂದರ್ಭಗಳಲ್ಲಿ ಅವರು ಧರಿಸಿರುವ ಉಡುಪು, ತೊಟ್ಟಿರುವ ಆಭರಣ, ಮೊಬೈಲು, ವಾಹನ, ಪಾದರಕ್ಷೆ, ಕೈ ಗಡಿಯಾರ, ಕನ್ನಡಕ ಇತ್ಯಾದಿಗಳು ವೀಕ್ಷಕರ ಮೇಲೆ ಪ್ರಭಾವ ಬೀರುವಂತೆ ನೋಡಿಕೊಳ್ಳಲಾಗುತ್ತದೆ. ಗಂಡನ್ನು ಹೆಣ್ಣು ಆಕರ್ಷಿಸುವುದಕ್ಕೆ ಅಥವಾ ಹೆಣ್ಣಿನ ಮೇಲೆ ಗಂಡು ಪ್ರಭಾವ ಬೀರುವುದಕ್ಕೆ ಯಾವ ಬಣ್ಣದ, ಯಾವ ವಿನ್ಯಾಸದ ಡ್ರೆಸ್ ಧರಿಸಬೇಕು ಮತ್ತು ಯಾವೆಲ್ಲ ಸೌಂದರ್ಯ ಸಾಧನಗಳನ್ನು ಬಳಸಬೇಕು ಎಂಬುದನ್ನು ಬಾಯಿ ಮೂಲಕ ಹೇಳದೆಯೇ ಮನಸ್ಸಿಗೆ ನಾಟಿಸುವ ಪ್ರಯತ್ನ ಮಾಡಲಾಗುತ್ತದೆ. ಮದುವೆಗಿಂತ ಮೊದಲು ಪ್ರೇಮ, ಪ್ರಣಯ, ಅನುರಾಗಗಳು ಅಗತ್ಯವೆಂದೋ ಅನಿವಾರ್ಯವೆಂದೋ ಸಹಜವೆಂದೋ ಭಾವಿಸುವುದಕ್ಕೆ ಪೂರಕವಾದ ದೃಶ್ಯಗಳನ್ನು ಸೃಷ್ಟಿಸಲಾಗುತ್ತದೆ. ವಿವಾಹಪೂರ್ವದಲ್ಲಿ ನಡೆಯುವ ಈ ಪ್ರೇಮವನ್ನು ಉತ್ತೇಜಿಸುವುದರ ಜೊತೆಜೊತೆಗೇ ಅದಕ್ಕೆ ಬೇಕಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದೂ ನಡೆಯುತ್ತದೆ. ನಿಜವಾಗಿ,
ಪ್ರೇಮವೆಂಬುದೇ ಒಂದು ಅಮಲು. ಈ ಅಮಲು ಹೇಗಿರುತ್ತದೆಂದರೆ, ಏನನ್ನು ಬೇಕಾದರೂ ಖರೀದಿಸುವುದಕ್ಕೆ ಪ್ರೇಮಿಗಳು ಹಿಂಜರಿಯದಂತೆ ಮಾಡುವಷ್ಟು. ಆದ್ದರಿಂದ, ವಿವಾಹಪೂರ್ವ ಪ್ರೇಮ ಪ್ರಸಂಗಗಳಿಲ್ಲದ ಬರೇ, ಸಾಂಪ್ರದಾಯಿಕ ವಿವಾಹಗಳನ್ನು ಕಾರ್ಪೋರೇಟ್ ಕಂಪೆನಿಗಳು ಉತ್ತೇಜಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗೆ ಮಾಡುವುದರಿಂದ ಉತ್ಪನ್ನಗಳ ದೊಡ್ಡಮಟ್ಟದ ಖರೀದಿ ಸಾಧ್ಯತೆಯು ಕಮರಿ ಹೋಗುತ್ತದೆ. ಅಷ್ಟಕ್ಕೂ,
ವಿವಾಹವೇ ಮಾರುಕಟ್ಟೆಯ ಸರಕಾಗಿ ಪರಿವರ್ತಿತವಾಗಿರುವ ಈ ಹೊತ್ತಿನಲ್ಲಿ ವಿವಾಹಕ್ಕೆ ಸಂಬಂಧಿಸಿ ಹೆಣ್ಣು-ಗಂಡಿನ ಪ್ರಾಯದಲ್ಲಿ ಏಕರೂಪತೆ ಇರಬೇಕೋ ಬೇಡವೋ ಎಂಬುದು ಬಹುಗಂಭೀರ ಪ್ರಶ್ನೆಯಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ, ಈ ಅಸಮಾನತೆ ಏಕೆ ಎಂಬ ಪ್ರಶ್ನೆಯಲ್ಲಿ ತೂಕವಿದೆ. ಇನ್ನು, ವಿವಾಹ ಪ್ರಾಯವಾಗಿ ಹೆಣ್ಣು-ಗಂಡು ಇಬ್ಬರಿಗೂ 18 ವರ್ಷವನ್ನೇ ನಿಗದಿಪಡಿಸಿದೆವು ಎಂದೇ ಇಟ್ಟುಕೊಳ್ಳೋಣ. ಇದರಿಂದ ಈ ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹವನ್ನು ಕೊನೆಗಾಣಿಸುವುದಕ್ಕೆ ಏನಾದರೂ ಪ್ರಯೋಜನವಾಗಬಹುದೇ? ಬಾಲ್ಯ ವಿವಾಹಕ್ಕೆ ಬಹುಮುಖ್ಯ ಕಾರಣ ಏನೆಂದರೆ, ಬಡತನ, ವರದಕ್ಷಿಣೆ, ಅಜ್ಞಾನ ಮತ್ತು ಮದುವೆಯ ಖರ್ಚು ವೆಚ್ಚಗಳ ಭಾರ ಮತ್ತಿತರ ಅಂಶಗಳು. ವಿವಾಹ ಪ್ರಾಯವನ್ನು 18ಕ್ಕೆ ನಿಗದಿಗೊಳಿಸುವುದರಿಂದ ಈ ಸಮಸ್ಯೆಗಳು ಪರಿಹಾರ ಆಗಲಾರವು. ಸದ್ಯ ಭಾರತದಲ್ಲಿ ನಡೆಯುವ ಮದುವೆಗಳಲ್ಲಿ 47% ಹುಡುಗಿಯರು 18 ವರ್ಷಕ್ಕಿಂತ ಕೆಳಗಿನವರಾದರೆ, 18% ಹುಡುಗಿಯರು 15 ವರ್ಷಕ್ಕಿಂತ ಕೆಳಗಿನವರು ಎಂದು ಯುನಿಸೆಫ್‍ನ ವರದಿಯೇ ಹೇಳುತ್ತದೆ. ಇದನ್ನು ಬದಲಿಸಬೇಕೆಂದರೆ ಬಡತನ-ಅನಕ್ಷರತೆಯನ್ನು ಹೋಗಲಾಡಿಸುವುದಕ್ಕೆ ಗಂಭೀರ ಪ್ರಯತ್ನಗಳಾಗಬೇಕು. ಪರಂಪರಾಗತ ತಪ್ಪು ರೂಢಿಯನ್ನು ತಿದ್ದುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಹಾಗಂತ, ಕಾನೂನು ರಚಿಸಿದಷ್ಟು ಇದು ಸುಲಭ ಅಲ್ಲ. ಒಂದುವೇಳೆ, ಈ ನಿಟ್ಟಿನಲ್ಲಿ ನಾವು ಯಶಸ್ವಿಯಾದರೂ ಆ ಯಶಸ್ಸಿಗೂ ಒಂದು ಮಿತಿಯಿದೆ ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಅದೇನೆಂದರೆ, ಮದುವೆ ಪ್ರಾಯದ ಬಗ್ಗೆ ಅವರು ಜಾಗೃತರಾಗುವುದೆಂದರೆ, ಕಂಪೆನಿಗಳು ಬೀಸಿರುವ ಮದುವೆ ಮಾರುಕಟ್ಟೆಯೊಳಗೆ ಅವರನ್ನು ಪ್ರವೇಶಗೊಳಿಸುವುದು ಎಂದೂ ಆಗುತ್ತದೆ. ಹಳ್ಳಿಯ ಮೂಲೆಯಲ್ಲಿ ಕೆಲವೇ ಮಂದಿ ಸೇರಿಕೊಂಡು ಮಾಡಿ ಮುಗಿಸುವ (ಕಾನೂನು ಬದ್ಧವಲ್ಲದಿದ್ದರೂ) ಮದುವೆಯು ಈ ಮೂಲಕ ರದ್ದುಗೊಳ್ಳುತ್ತದೆ ಮತ್ತು ಕಂಪೆನಿಗಳು ಪ್ರಸ್ತುತಪಡಿಸುವ ಮದುವೆಯ ಚೌಕಟ್ಟಿನೊಳಗೆ ಈ ಮದುವೆಗಳು ಸೇರ್ಪಡೆಗೊಳ್ಳುತ್ತವೆ. ಆದ್ದರಿಂದ,
ಪ್ರಾಯ ನಿಗದಿಯೊಂದೇ ಉತ್ತರ ಅಲ್ಲ. ಮದುವೆಯು ಮಾರುಕಟ್ಟೆಯ ಸರಕಾಗದಂತೆ ನೋಡಿಕೊಳ್ಳುವುದೂ ಮುಖ್ಯ.
No comments:
Post a Comment