ಯಶಸ್ಸಿನ ದಾರಿ ಯಾವುದು?
ಈ ಪ್ರಶ್ನೆ ಸದಾ ಕಾಲ ಜೀವಂತ. ಜಗತ್ತಿನ ಶ್ರೇಷ್ಠ ಸಂಶೋಧಕರಲ್ಲಿ ಅನೇಕರು ಪ್ರವಾದಿ ಮುಹಮ್ಮದ್(ಸ)ರನ್ನು ಮೆಚ್ಚಿಕೊಂಡಿದ್ದು- ಹೃಸ್ವ ಅವಧಿಯಲ್ಲಿ ಅವರು ಸಾಧಿಸಿದ ಯಶಸ್ಸಿಗಾಗಿ. ಹಾಗಂತ, ಪ್ರವಾದಿವರ್ಯರಿಗೆ(ಸ) ಅನಾಯಾಸವಾಗಿ ಈ ಯಶಸ್ಸು ಒದಗಿ ಬಂದಿತ್ತು ಎಂದಲ್ಲ. ಅವರು ಯಶಸ್ಸನ್ನು ಹುಡುಕುತ್ತಾ ಹೊರಟರು. ಯಶಸ್ಸಿನ ತುತ್ತ ತುದಿಯನ್ನು ತಲುಪುದಕ್ಕೆ ಅಂದಿನ ಕಾಲದ ಸರ್ವ ವಿಧಾನಗಳನ್ನೂ ಬಳಸಿಕೊಂಡರು. ಇದರಲ್ಲಿ 3 ಪ್ರಮುಖ ಅಂಶಗಳಿವೆ:
1. ಸಂವಹನ, 2. ಮಾನವೀಯ ಕಾಳಜಿ, 3. ಒಪ್ಪಂದ ಅಥವಾ ಮೈತ್ರಿ.
ಸತ್ಯದ ಕಡೆಗೆ ಕರೆ ನೀಡುವವರಾಗಿ ನಿಮ್ಮನ್ನು ಕಳುಹಿಸಿದ್ದೇನೆ (133: 45-46) ಎಂದು ಪವಿತ್ರ ಕುರ್ ಆನ್ ಪ್ರವಾದಿಯವರನ್ನು ಪರಿಚಯಿಸಿದೆಯೇ ಹೊರತು ಆ ಸತ್ಯವನ್ನು ತಲುಪಿಸುವುದಕ್ಕೆ ಅವರು ಯಾವೆಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು ಎಂದು ಪಟ್ಟಿ ಮಾಡಿ ಹೇಳಲಿಲ್ಲ. ಅದು ಪ್ರವಾದಿಯವರ ಸ್ವಾತಂತ್ರ್ಯವಾಗಿತ್ತು. ಅಂದಿನ ಕಾಲದಲ್ಲಿ ಸತ್ಯದ ಕರೆಯನ್ನು ತಲಪಿಸುವುದಕ್ಕೆ ಯಾವೆಲ್ಲ ಮಾಧ್ಯಮಗಳಿದ್ದುವೋ ಅವೆಲ್ಲವನ್ನೂ ಪ್ರವಾದಿ(ಸ) ಬಳಸಿದರು. ಸಫಾ ಬೆಟ್ಟ ಅದರ ಒಂದು ತುದಿಯಾದರೆ, ಮಕ್ಕಾದ 14 ಸಣ್ಣ ಪುಟ್ಟ ಮಾರುಕಟ್ಟೆಗಳು ಅದರ ಇನ್ನೊಂದು ತುದಿ. ರಾತ್ರಿ ಭೋಜನದ ಮೂಲಕ, ಕಾಬಾದ ಬಾಗಿಲಿಗೆ ಸಂದೇಶ ನೇತು ಹಾಕುವ ಮೂಲಕ ಮತ್ತು ಮಕ್ಕಾಕ್ಕೆ ಬರುವ ವ್ಯಾಪಾರಿ ತಂಡಗಳ ಜೊತೆಗೆ ಸಂವಾದದ ಮೂಲಕ... ಹೀಗೆ ಅಂದಿನ ಲಭ್ಯ ಮಾಧ್ಯಮಗಳನ್ನು ಪ್ರವಾದಿ(ಸ) ತನ್ನ ಗುರಿಯೆಡೆಗೆ ತಲುಪುವ ಪರಿಕರಗಳಾಗಿ ಬಳಸಿಕೊಂಡರು. ಇದೇ ವೇಳೆ, ಇನ್ನೊಂದು ಪ್ರಶ್ನೆಯೂ ಎದುರಾಯಿತು. ಸತ್ಯದ ಕರೆ ಕೊಡುವಾತ ಹೇಗಿರಬೇಕು ಮತ್ತು ಆತನ ಐಡೆಂಟಿಟಿ ಏನಿರಬೇಕು ಎಂಬುದೇ ಆ ಪ್ರಶ್ನೆ. ಪ್ರವಾದಿ ಮುಹಮ್ಮದ್(ಸ)ರ ಯಶಸ್ಸಿನ ಗುಟ್ಟು ಇರುವುದೂ ಇಲ್ಲೇ. ತನ್ನ ಸತ್ಯವನ್ನು ಒಪ್ಪಿಕೊಂಡವರು ಮತ್ತು ಒಪ್ಪಿಕೊಳ್ಳದವರು ಎಂಬ ನೆಲೆಯಲ್ಲಿ ಸಮಾಜವನ್ನು ವಿಭಜಿಸಿ, ತನ್ನ ಕರೆಯನ್ನು ಒಪ್ಪಿಕೊಂಡವರಿಗೆ ಮಾತ್ರ ನ್ಯಾಯ, ಕರುಣೆ, ಮಾನವೀಯ ಕಾಳಜಿಯನ್ನು ವಿತರಿಸುವ ಸಣ್ಣತನವನ್ನು ಪ್ರವಾದಿ ಎಂದೂ ತೋರಲಿಲ್ಲ. ಅವರು ಪ್ರದರ್ಶಿಸಿದ ಮಾನವೀಯ ಕಾಳಜಿ ಅಮೋಘವಾದುದು. ಅವರು ದರಿದ್ರರ ಪರ, ಅನಾಥರ ಪರ (ಪವಿತ್ರ ಕುರ್ ಆನ್: 107) ಧ್ವನಿಯೆತ್ತಿದರು. ಅಬೂಜಹಲ್ ಮಕ್ಕಾದಲ್ಲಿ ಅತ್ಯಂತ ಪ್ರಬಲನಾಗಿದ್ದಾಗ ಮತ್ತು ತಾನು ಮಕ್ಕಾದಲ್ಲಿ ಏನೇನೂ ಆಗಿಲ್ಲದಾಗಲೂ ಪ್ರವಾದಿಯವರು(ಸ) ನ್ಯಾಯ ವಂಚಿತರ ಪರ ನಿಂತರು. ತನಗೆ ಸಲ್ಲಬೇಕಾದ ಮೊತ್ತವನ್ನು ಅಬೂಜಹಲ್ ನೀಡುತ್ತಿಲ್ಲವೆಂದು ವ್ಯಕ್ತಿಯೋರ್ವನು ಬಂದು ಪ್ರವಾದಿಯವರ(ಸ) ಜೊತೆ ದೂರಿಕೊಂಡಾಗ ಅವರು ತಕ್ಷಣ ಸ್ಪಂದಿಸಿದರು. ಅಬೂಜಹಲ್‍ನ ಬಳಿ ತೆರಳಿ ಹಣ ವಸೂಲಿ ಮಾಡಿಸಿದರು. ಹಾಗಂತ, ಹಾಗೆ ದೂರಿಕೊಂಡವ ಅವರ ಸತ್ಯದ ಕರೆಯನ್ನು ಸ್ವೀಕರಿಸಿದವನಾಗಿರಲಿಲ್ಲ. ಸತ್ಯದ ಕರೆ ಕೊಡುವಾತ ದುರ್ಬಲರು, ದರಿದ್ರರು, ಹಕ್ಕು ವಂಚಿತರು ಮುಂತಾದವರ ಪರ ಅತ್ಯಂತ ಗಟ್ಟಿಯಾಗಿ ನಿಲ್ಲಬೇಕು ಮತ್ತು ಅವರ ಪರ ಬಹಿರಂಗವಾಗಿ ಮಾತಾಡಬೇಕು ಎಂಬುದು ಅವರ ಇಂಗಿತವಾಗಿತ್ತು. ಇಂಥ ಸನ್ನಿವೇಶಗಳಲ್ಲಿ `ಸಂತ್ರಸ್ತರಿಂದ ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸಬಾರದು' (ಪವಿತ್ರ ಕುರ್ ಆನ್- 76: 9) ಎಂಬ ನಿಯಮವನ್ನು ಅವರು ಸ್ವಯಂ ಹಾಕಿಕೊಂಡಿದ್ದರು. ಅವರ ಯಶಸ್ಸಿನಲ್ಲಿ ಈ ನಿಯಮಕ್ಕೆ ಬಹುದೊಡ್ಡ ಪಾತ್ರ ಇದೆ. ಅವರು ಸತ್ಯಕ್ಕೆ ವಿಧೇಯರಾಗಿರುವ ಜನಕೂಟವೊಂದನ್ನು ನಿರ್ಮಿಸ ಹೊರಟಿದ್ದರೇ ಹೊರತು ವ್ಯಕ್ತಿ ವಿಧೇಯತ್ವವನ್ನು ತಿರಸ್ಕರಿಸಿದ್ದರು. ಬಡವರು, ದುರ್ಬಲರು, ಹಕ್ಕು ವಂಚಿತರು ಮತ್ತು ನ್ಯಾಯ ನಿರಾಕರಣೆಗೆ ಒಳಗಾದವರನ್ನೆಲ್ಲ ಅವರು ಆದರಿಸಿದರು. ಎಲ್ಲಿಯ ವರೆಗೆಂದರೆ, ಮದೀನಾದಲ್ಲಿ ವಿವಿಧ ಬುಡಕಟ್ಟು ಗುಂಪುಗಳೊಂದಿಗೆ ಸುಮಾರು 12 ರಷ್ಟು ಒಪ್ಪಂದಗಳನ್ನು ಮಾಡಿಕೊಂಡರು. ತನ್ನ ಸತ್ಯದ ಕರೆಯನ್ನು ಸ್ವೀಕರಿಸಲೇಬೇಕು ಮತ್ತು ಸ್ವೀಕರಿಸದೇ ಇರುವುದು ಯುದ್ಧಕ್ಕೆ ಕಾರಣವಾಗುತ್ತದೆ ಎಂಬುದು ಈ ಒಪ್ಪಂದಗಳ ಮೂಲಭೂತ ಷರತ್ತು ಆಗಿರಲಿಲ್ಲ. ಶಾಂತಿ, ನ್ಯಾಯ, ನೆಮ್ಮದಿಯ ಬದುಕನ್ನು ದೃಢಪಡಿಸಿಕೊಳ್ಳುವುದು ಮತ್ತು ಅಪಾಯಕಾರಿ ಸಂದರ್ಭಗಳಲ್ಲಿ ಪರಸ್ಪರ ಸಹಕಾರ ನೀಡುವುದು ಈ ಒಪ್ಪಂದಗಳ ಮುಖ್ಯ ಉದ್ದೇಶವಾಗಿತ್ತು. ಸತ್ಯದ ಕರೆಗೆ ಸ್ಪಂದಿಸಬೇಕಾದರೆ ನ್ಯಾಯಪೂರ್ಣವಾದ ಮತ್ತು ಶಾಂತಿಯುತವಾದ ವಾತಾವರಣವೊಂದು ನೆಲೆಗೊಂಡಿರಬೇಕಾದುದು ಬಹಳ ಅಗತ್ಯ. ಪ್ರವಾದಿ(ಸ) ಅದನ್ನು ಚೆನ್ನಾಗಿ ಮನಗಂಡಿದ್ದರು. ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿದರು ಮತ್ತು ಅದರಲ್ಲಿ ಯಶಸ್ಸನ್ನೂ ಕಂಡರು. ಆದ್ದರಿಂದ,
ಮಕ್ಕಾ ಪ್ರವೇಶಿಸಿದ ಯಶಸ್ವೀ ಪ್ರವಾದಿಯನ್ನಷ್ಟೇ ನಾವಿಂದು ನೋಡಬೇಕಾದುದಲ್ಲ. ಅರಫಾ ಬೆಟ್ಟವೇರಿದ ಪ್ರವಾದಿಯನ್ನೂ ನಾವು ನೋಡಬೇಕು. ಮದೀನದಲ್ಲಿ ಬುಡಕಟ್ಟುಗಳೊಂದಿಗೆ ಒಪ್ಪಂದ ಮಾಡಿಕೊಂಡ ಪ್ರವಾದಿಯನ್ನೂ ನೋಡಬೇಕು. ಅರಫಾ ಮೈದಾನದಲ್ಲಿ ಅವರು ಮಾಡಿದ ವಿದಾಯ ಭಾಷಣವನ್ನೂ ನೋಡಬೇಕು. ಇಲ್ಲೆಲ್ಲಾ ಒಟ್ಟು ಮೊತ್ತವಾಗಿ ಸಿಗುವ ಪ್ರವಾದಿಯೇ ನಿಜವಾದ ಪ್ರವಾದಿ(ಸ). ಅಲ್ಲಿಂದ ಪಡಕೊಳ್ಳುವ ಸ್ಫೂರ್ತಿಯೇ ಯಶಸ್ಸಿಗೆ ದಾರಿ.
No comments:
Post a Comment