ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ಪ್ರಾಣಿಗೆ ಸಂಬಂಧಿಸಿದ್ದು. ಆದರೆ ಮನುಷ್ಯ ಎಂಬ ಪ್ರಾಣಿ ಈ ಎರಡೂ ಘಟನೆಗಳಿಗೆ ಸ್ಪಂದಿಸಿದ ರೀತಿ ಮತ್ತು ವ್ಯಕ್ತಪಡಿಸಿದ ಅಭಿ ಪ್ರಾಯಗಳಲ್ಲಿ ಎದ್ದು ಕಾಣುತ್ತಿದ್ದ ಪಕ್ಷಪಾತದ ಧ್ವನಿ, ಧಾರ್ಮಿಕ ದ್ವೇಷ, ಕ್ರೌರ್ಯ ಮನೋಭಾವ ಜಿಗುಪ್ತೆ ತರುವಂಥದ್ದು.
1. ಪಟಾಕಿ ತುಂಬಿಸಿಟ್ಟಿದ್ದ ಅನಾನಸು ಹಣ್ಣನ್ನು ತಿಂದು ಕೇರಳದ ಪಾಲಕ್ಕಾಡಿನಲ್ಲಿ ಆನೆಯೊಂದು ಸಾವಿಗೀಡಾದದ್ದು.
2. ಹಿಮಾಚಲ ಪ್ರದೇಶದ ಬಿಲಸ್ಪುರ ಜಿಲ್ಲೆಯಲ್ಲಿ ಪಟಾಕಿ ಸಿಡಿತದಿಂದ ಹುಲ್ಲು ಮೇಯುತ್ತಿದ್ದ ಹಸುವಿನ ದವಡೆ ಮುರಿದು ರಕ್ತ ಸೋರುತ್ತಿರುವುದು. ಹಸುವನ್ನು ಕೊಲ್ಲುವ ಉದ್ದೇಶದಿಂದ ನೆರೆಮನೆಯಾತ ಇಂಥದ್ದೊಂದು ಕೃತ್ಯ ನಡೆಸಿದ್ದಾನೆ ಅನ್ನುವ ದೂರು.
ಅನಾನಸಿನ ಒಳಗಡೆ ಪಟಾಕಿ ಇಟ್ಟಿರಬಹುದು ಎಂದು ಆಲೋಚಿಸುವ ಸಾಮರ್ಥ್ಯ ಆನೆಗಿಲ್ಲ, ಹಸುವಿಗೂ ಇಲ್ಲ. ಆದರೆ ಮನುಷ್ಯನಿಗಿದೆ. ಮಾತ್ರವಲ್ಲ, ಆನೆ ಮತ್ತು ಹಸುವನ್ನು ಪೀಡಿಸಿದ ಊರು ಯಾವುದು, ಅಲ್ಲಿ ಯಾವ ಧರ್ಮದವರ ಜನಸಂಖ್ಯೆ ಹೆಚ್ಚಿದೆ, ಯಾವ ರಾಜಕೀಯ ಪಕ್ಷದ ಆಡಳಿತವಿದೆ, ಆರೋಪಿಗಳು ಯಾರು... ಅನ್ನುವುದನ್ನೆಲ್ಲ ಅವಲೋಕಿಸಿ ಪ್ರತಿಕ್ರಿಯಿಸುವ ಸಾಮಥ್ರ್ಯವೂ ಮ ನುಷ್ಯನಿಗಿದೆ. ಮನುಷ್ಯ ಸ್ವಭಾವತಃ ದುಷ್ಟನಲ್ಲ, ಪರಿಸ್ಥಿತಿ, ಸನ್ನಿವೇಶ ಮತ್ತು ಸ್ವಾರ್ಥಗಳು ಆತನನ್ನು ದುಷ್ಟನನ್ನಾಗಿಯೋ ದುಷ್ಟತನದ ಪರೋಕ್ಷ ಬೆಂಬಲಿಗನನ್ನಾಗಿಯೋ ಮಾಡಿಬಿಡುತ್ತದೆ ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ ಯಾವ್ಯಾವುದೋ ನೆಪದಲ್ಲಿ ಬೀದಿಯಲ್ಲಿ ಅಟ್ಟಾಡಿಸಿ ಥಳಿಸಿ ಕೊಲ್ಲುತ್ತಿರುವುದನ್ನು ಸಮರ್ಥಿಸಲು ಓರ್ವ ಮನುಷ್ಯನಿಗೆ ಹೇಗೆ ಸಾಧ್ಯ? ಆ ಕ್ರೌರ್ಯಕ್ಕೆ ಮೌನವಾಗಿರಲು ಹೇಗೆ ಸಾಧ್ಯ ಅಥವಾ ಇನ್ನಾವುದೋ ಕಾರಣ ಕೊಟ್ಟು ಆ ಹತ್ಯೆಯ ಪರೋಕ್ಷ ಬೆಂಬಲಿಗನಾಗಲು ಹೇಗೆ ಸಾಧ್ಯ? ಅಖ್ಲಾಕ್‍ನಿಂದ ಹಿಡಿದು ತಬ್ರೇಜ್ ನ ವರೆಗೆ, ಊನಾದಿಂದ ಹಿಡಿದು ನಮ್ಮ ಅಕ್ಕ-ಪಕ್ಕದ ಬೀ ದಿಯ ವರೆಗೆ ಎಷ್ಟೊಂದು ಥಳಿತ, ಹತ್ಯೆಗಳಾಗಿವೆ? ಈ ಯಾವ ಘಟನೆಗಳಲ್ಲೂ ಪ್ರಾಣಿಗಳಿಗೆ ಯಾವ ಪಾತ್ರವೂ ಇಲ್ಲ. ಥಳಿಸುವವರೂ ಮನುಷ್ಯರೇ. ಥಳಿತಕ್ಕೊಳಗಾಗುವವರೂ ಮನುಷ್ಯರೇ. ಆದರೆ, ಇಲ್ಲೆಲ್ಲಾ ಸ್ಪಷ್ಟವಾಗಿ ಎದ್ದು ಕಾಣುವ ಒಂದು ಸತ್ಯ ಇದೆ. ಅದೇನೆಂದರೆ, ಥಳಿಸುವವರ ಧರ್ಮ ಅಥವಾ ಜಾತಿ ಮತ್ತು ಥಳಿತಕ್ಕೊಳಗಾಗುವವರ ಧರ್ಮ ಅಥವಾ ಜಾತಿ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪರವಾಗಿರುವವರು ಥಳಿಸುವುದು ಮತ್ತು ನಿರ್ದಿಷ್ಟ ಧರ್ಮಾನುಯಾಯಿಗಳು ಥಳಿತಕ್ಕೊಳಗಾಗುವುದು- ಇವೆರಡೂ ಏನನ್ನು ಸೂಚಿಸುತ್ತವೆ? ಥಳಿಸುವವರು ಸದಾಕಾಲ ದುಷ್ಟರೇ? ಹಾಗೆ ಮಾಡುವುದಕ್ಕೆ ಅವರ ತತ್ವಸಿದ್ಧಾಂತ ಕಾರಣವೇ ಮತ್ತು ಅವರು ತಮ್ಮ ಪ್ರತಿಪಾದನೆಯಲ್ಲಿ ನಿಜಕ್ಕೂ ಪ್ರಾಮಾಣಿಕರೇ ಎಂದು ಪ್ರಶ್ನಿಸುತ್ತಾ ಹೋದರೆ ಸಿಗುವ ಉತ್ತರ ಅತ್ಯಂತ ಆಘಾತಕಾರಿಯಾಗಿರುತ್ತದೆ. ಗುಜರಾತ್ ಹತ್ಯಾಕಾಂಡವನ್ನು ಉಲ್ಲೇಖಿಸಿದರೆ ಮತ್ತು ಹಸಿ ಭ್ರೂಣವನ್ನು ಕತ್ತಿಯ ಮೊನೆಗೆ ಸಿಲುಕಿಸಿ ವಿಕೃತ ಸಂತೋಷಪಟ್ಟ ದುಷ್ಟತನವನ್ನು ಪ್ರಸ್ತಾಪಿಸಿದರೆ, ಆ ಬಗ್ಗೆ ಯಾವ ಖಂಡನೆಯನ್ನಾಗಲಿ, ವಿಷಾದವನ್ನಾಗಲಿ ವ್ಯಕ್ತಪಡಿಸದೆಯೇ ಅದಕ್ಕೂ ಮೊದಲಿನ ಗೋಧ್ರಾ ರೈಲು ದುರ್ಘಟನೆಯನ್ನು ಎತ್ತುತ್ತಾರೆ. ಅದೊಂದು ರೀತಿಯ ಪಲಾಯನವಾದ. ಖಂಡಿಸಲೇ ಬೇಕಾದ ಸಂದರ್ಭವೊಂದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಡ್ಡ ದಾರಿಯನ್ನು ಹಿಡಿಯುವುದು. ಪ್ರಶ್ನೆ- ಕ್ರೌರ್ಯವೊಂದನ್ನು ಖಂಡಿಸದೇ ಇರುವುದಲ್ಲ. ಅಂಥದ್ದೊಂದು ದುಷ್ಟತನ ವ್ಯಕ್ತಿಯೊಳಗಡೆ ಅಡರಿಕೊಳ್ಳುವುದು ಹೇಗೆ? ಗುಜರಾತ್ ಹತ್ಯಾಕಾಂಡವನ್ನು ಉಲ್ಲೇಖಿಸಿದ ಕೂಡಲೇ ಅದನ್ನು ಖಂಡಿಸದೆಯೇ ಅದಕ್ಕೆ ಪ್ರತಿಯಾಗಿ ದೆಹಲಿ ಸಿಕ್ಖ್ ಹತ್ಯಾಕಾಂಡವನ್ನು ಎತ್ತುವುದು ಅಥವಾ ಗೋಧ್ರಾ ರೈಲು ದಹನದಂಥ ಕ್ರೌರ್ಯಗಳನ್ನು ಉಲ್ಲೇಖಿಸುವುದು ದುಷ್ಟತನದ ಪ್ರತಿಬಿಂಬ. ದೆಹಲಿಯಲ್ಲಾಗಲಿ, ಗುಜರಾತ್‍ನಲ್ಲಾಗಲಿ, ಗೋಧ್ರಾದಲ್ಲಾಗಲಿ ನಡೆದಿರುವುದು ಮಾನವ ಹತ್ಯೆಗಳೇ ಹೊರತು ಇನ್ನೇನಲ್ಲ. ನಿಶ್ಚಲವಾದ ಆ ಜೀವಗಳನ್ನು ಹಿಂದೂ-ಮುಸ್ಲಿಮ್, ಸಿಕ್ಖ್ ಎಂದು ವಿಭಜಿಸುವುದರಿಂದ ಸಂತ್ರಸ್ತಗೊಂಡ ಆ ಕುಟುಂಬಗಳ ನೋವಿನಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಆದರೆ ಸಾಯಿಸಿದವರು ನಿರ್ದಿಷ್ಟ ಉದ್ದೇಶದಿಂದಲೇ ಸಾಯಿಸಿದ್ದಾರೆ. ಹಿಂದೂ-ಮುಸ್ಲಿಮ್-ಸಿಖ್ ರ ಸಾವಿನಲ್ಲಿ ತಂತಮ್ಮ ತತ್ವ ಸಿದ್ಧಾಂತದನುಸಾರ ಆನಂದವನ್ನೂ ಪಟ್ಟಿದ್ದಾರೆ. ಆದ್ದರಿಂದ,
ಈ ದುಷ್ಟತನವನ್ನು ಧರ್ಮಾತೀತವಾಗಿ ಮತ್ತು ಪಕ್ಷಾತೀತವಾಗಿ ಖಂಡಿಸುವುದಕ್ಕೆ ಸಾಧ್ಯವಾಗದೇ ಹೋಗಿರುವ ದೇಶದಲ್ಲಿ ಆನೆ ಮತ್ತು ಹಸು ಪ್ರಕರಣದಲ್ಲಿ ಪ್ರಾಮಾಣಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದೇ ದೊಡ್ಡ ತಮಾಷೆ. ಆನೆಯ ಘಟನೆ ಕೇರಳದಲ್ಲಿ ನಡೆದಿದೆ ಅನ್ನುವುದೇ ಒಂದು ನಿರ್ದಿಷ್ಟ ವರ್ಗದ ಪಾಲಿಗೆ ದೊಡ್ಡ ಸಂಭ್ರಮ. ಅಲ್ಲಿ ಎಡಪಕ್ಷದ ಆಡಳಿತವಿದೆ. ಆದ್ದರಿಂದ ಬಲಪಕ್ಷಕ್ಕೆ ಅದೊಂದು ರಾಷ್ಟ್ರಮಟ್ಟದ ಇಶ್ಶೂ. ಕೇರಳಿಗರು ಎಂಥ ಕ್ರೂರಿಗಳು ಅನ್ನುವುದನ್ನು ಎತ್ತಿ ಹೇಳುವುದಕ್ಕೂ ಆ ಘಟನೆಯನ್ನು ಎಗ್ಗಿಲ್ಲದೇ ಬಲಪಕ್ಷದವರು ಮತ್ತು ಅವರಿಂದ ಪ್ರೇರಿತರಾದ ಸಾಮಾನ್ಯರೂ ಬಳಸಿಕೊಂಡರು. ಹೀಗೆ ಆನೆ ಮೇಲೆ ಕರುಣೆ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರೂ ದೇಶದಾದ್ಯಂತ ಥಳಿತ ಘಟನೆಗಳಾಗುತ್ತಿದ್ದಾಗ, ಅದರಿಂದಾಗಿ ಸಾವುಗಳು ಸಂಭವಿಸುತ್ತಿದ್ದಾಗ, ಗುಜರಾತ್-ಮುಝಫ್ಫರ್ ನಗರ್ ಹತ್ಯಾಕಾಂಡಗಳಾಗುವಾಗ ಮೌನಿಗಳಾಗಿದ್ದರು ಎಂಬುದು ಸ್ಪಷ್ಟ. ಆ ಕ್ರೌರ್ಯಗಳ ಕುರಿತಂತೆ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಪ್ರಶ್ನೆಗೆ ಪ್ರತಿಯಾಗಿ ಇನ್ನೊಂದು ಪ್ರಶ್ನೆಯನ್ನು ಎತ್ತುತ್ತಾರೆಯೇ ಹೊರತು ಅದು ಖಂಡನಾರ್ಹ ಎಂಬ ಮಾತೂ ಹೊರಡುವುದಿಲ್ಲ. ಅದೇವೇಳೆ,
ಹಿಮಾಚಲ ಪ್ರದೇಶದಲ್ಲಿ ದವಡೆ ಹರಿದುಕೊಂಡು ರಕ್ತ ಸುರಿಸುತ್ತಾ ಸಂಕಟಪಡುತ್ತಿರುವ ಹಸು, ಕೇರಳದ ಆನೆಯಂತೆ ಯಾವ ಕಾಳಜಿಯನ್ನೂ ಗಿಟ್ಟಿಸಿಕೊಳ್ಳುವುದಿಲ್ಲ. ಕೇರಳದ ಆನೆಗೆ ಭಯಂಕರವಾಗಿ ಮಿಡಿದವರಲ್ಲಿ ಸಣ್ಣ ಸಂಖ್ಯೆಯೊಂದನ್ನು ಬಿಟ್ಟರೆ ಉಳಿದವರ್ಯಾರೂ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಯಾಕೆಂದರೆ, ಅರುಣಾಚಲ ಪ್ರದೇಶದಲ್ಲಿ ಆಡಳಿತದಲ್ಲಿರುವುದು ಬಲಪಕ್ಷ ಮತ್ತು ಹಸುವಿಗೆ ಪಟಾಕಿ ತಿನ್ನಿಸಿದವನು ಈ ಬಲಪಕ್ಷ ಪ್ರತಿನಿಧಿಸುವ ಧರ್ಮದ ಅನುಯಾಯಿ.
ಅನ್ಯಾಯವನ್ನು ಯಾವ ಧರ್ಮವೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಿಲ್ಲ. ಅನ್ಯಾಯವೆಂದರೆ, ಅನ್ಯಾಯ ಅಷ್ಟೇ. ದುಷ್ಟತನವೆಂದರೆ ದುಷ್ಟತನ ಅಷ್ಟೇ. ಕ್ರೌರ್ಯದಲ್ಲಿ ಹಿಂದೂ-ಮುಸ್ಲಿಮ್ ಕ್ರೌರ್ಯ ಎಂಬ ಬೇಧವಿಲ್ಲ. ಆನೆ ಮತ್ತು ಹಸು ಇವೆರಡೂ ಮೂಕ ಪ್ರಾಣಿಗಳು. ಅವುಗಳ ಮೇಲೆ ದೌರ್ಜನ್ಯ ಎಸಗಿದವರು ದುಷ್ಟರೇ ಹೊರತು ಅವರಲ್ಲಿ ಹಿಂದೂ ದುಷ್ಟ-ಮುಸ್ಲಿಮ್ ದುಷ್ಟ, ಎಡ ದುಷ್ಟ, ಬಲ ದುಷ್ಟ ಎಂಬ ವ್ಯತ್ಯಾಸ ಮಾಡುವುದು ಧರ್ಮ ವಿರೋಧಿ. ಇದು ಪ್ರಾಣಿಗಳಿಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಮನುಷ್ಯರ ಮೇಲಿನ ಹಲ್ಲೆ, ಹತ್ಯೆಗಳಿಗೆ ಸಂಬಂಧಿಸಿಯೂ ಇವೇ ಮಾನದಂಡವನ್ನು ಅಳವಡಿಸಬೇಕು. ಅನ್ಯಾಯ- ಹಿಂದೂ ಎಸಗಿದರೂ ಮುಸ್ಲಿಮ್ ಎಸಗಿದರೂ ಅನ್ಯಾಯವೇ. ನೋವು- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ನೋವೇ. ಪ್ರಾಮಾಣಿಕತೆ- ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ಪ್ರಾಮಾಣಿಕತೆಯೇ. ಕೆಡುಕು ಮತ್ತು ಒಳಿತು ಯಾವ ಧರ್ಮದ ಖಾಸಗಿ ಸೊತ್ತೂ ಅಲ್ಲ. ಯಾರು ಅದನ್ನು ಕೈವಶ ಮಾಡಿಕೊಳ್ಳುತ್ತಾರೋ ಅವರದು. ಆನೆ ಮತ್ತು ಹಸು ಪ್ರಕರಣಗಳು ನಮ್ಮೊಳಗಿನ ದುಷ್ಟತನವನ್ನು ಮತ್ತೊಮ್ಮೆ ಜಗಜ್ಜಾಹೀರುಗೊಳಿಸಿದೆ. ದುಷ್ಟತನವನ್ನು ಖಂಡಿಸುವ ಬದಲು ದುಷ್ಟತನ ಎಲ್ಲಿ ನಡೆದಿದೆ, ಯಾರು ಭಾಗಿಯಾಗಿದ್ದಾರೆ ಎಂಬುದನ್ನು ನೋಡಿಕೊಂಡು ಪ್ರತಿಕ್ರಿಯಿಸುವ ಅತೀ ದುಷ್ಟತನವೊಂದು ನಮ್ಮೊಳಗೆ ಇದೆ. ಆನೆ ಮತ್ತು ಹಸು ನಮ್ಮಲ್ಲಿನ ಈ ದುಷ್ಟತನಕ್ಕೆ ಕನ್ನಡಿ ಹಿಡಿದಿದೆ, ಅಷ್ಟೇ.
No comments:
Post a Comment