ಕೊರೋನಾದಿಂದ ಈ ದೇಶ ಕಲಿತ ಅತಿದೊಡ್ಡ ಪಾಠ ಏನೆಂದರೆ, ಸುಳ್ಳಿಗೆ ದೀರ್ಘಾಯುಷ್ಯ ಇಲ್ಲ ಅನ್ನುವುದನ್ನು. ಇದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಎರಡು ಪ್ರಕರಣಗಳೇ ಧಾರಾಳ ಸಾಕು.
1. ಬಾಬಾ ರಾಮ್‍ದೇವ್.
2. ಮುಸ್ಲಿಮರು.
ಒಂದಷ್ಟು ನಿಗೂಢತೆಗಳನ್ನು ತನ್ನ ಸುತ್ತ ಉಳಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಬಾಬಾ ರಾಮ್‍ದೇವ್‍ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದು ಕೊರೋನಾ. ಕೊರೋನಾಕ್ಕೆ ಔಷಧಿ ಸಂಶೋ ಧಿಸಿದ್ದೇವೆ ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಲ್ಲದೇ, ಔಷಧಿಯನ್ನೂ ಬಿಡುಗಡೆಗೊಳಿಸಿದ ಬಳಿಕ ಉಂಟಾದ ತಲ್ಲಣದಲ್ಲಿ ಪತಂಜಲಿ ಕಂಪೆನಿಯ ಮುಖ್ಯಸ್ಥರ ಸಹಿತ ಐದಾರು ಮಂದಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೊರೋನಾ ಔಷಧಿ ಎಂದು ಸಾರಿರುವುದಕ್ಕೆ ಸರಕಾರದ ವತಿಯಿಂದಲೇ ವಿರೋಧ ವ್ಯಕ್ತವಾಗಿದೆ. ಅನುಮತಿ ಪಡೆಯದೇ ಔಷಧ ಬಿಡುಗಡೆಗೊಳಿಸಿದ ಆರೋಪದೊಂದಿಗೆ, ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆಳೆದ ಕಳಂಕವನ್ನೂ ಪತಂಜಲಿ ಸಂಸ್ಥೆ ಇದೀಗ ಹೊತ್ತುಕೊಂಡಿದೆ. ನಿಜವಾಗಿ,
ಭಯದಲ್ಲಿರುವ ಜನರನ್ನು ಸುಳ್ಳಿನಿಂದ ಖರೀದಿಸುವ ಪ್ರಯತ್ನಕ್ಕೆ ಸದಾ ಯಶಸ್ಸು ಲಭ್ಯವಾಗದು ಎಂಬುದನ್ನು ಪತಂಜಲಿಯನ್ನು ಪೋಷಿಸುತ್ತಾ ಬಂದ ಸರಕಾರವೇ ಅನೌಪಚಾರಿಕವಾಗಿ ಘೋಷಿಸುವಂತಾದುದು ಸತ್ಯಕ್ಕೆ ಸಿಕ್ಕ ಬಲುದೊಡ್ಡ ಗೆಲುವು. ಈ ಬೆಳವಣಿಗೆಗಿಂತ ತುಸು ಮೊದಲೇ, ಇನ್ನೊಂದು ಸುಳ್ಳಿನ ತಲೆಗೂ ಕೊರೋನಾ ಬಲವಾದ ಏಟನ್ನು ಕೊಟ್ಟಿದೆ ಮತ್ತು ಈಗಲೂ ಕೊಡುತ್ತಿದೆ. ಪತಂಜಲಿಗೆ ಹೋಲಿಸಿದರೆ ಕೊರೋನಾ ನೀಡಿರುವ ಈ ಏಟು ಅತ್ಯಂತ ಪ್ರಬಲವಾದುದು ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.
ಸುಳ್ಳುಗಳನ್ನು ತಯಾರಿಸುವುದಕ್ಕೆಂದೇ ಕಾರ್ಖಾನೆಗಳನ್ನು ಸ್ಥಾಪಿಸಿ, ಕೋರೆಹಲ್ಲು-ವಿಕಾರ ಉಗುರುಗಳುಳ್ಳ ಭೀತಿಕಾರಕ ಸುಳ್ಳುಗಳನ್ನು ಉತ್ಪಾದಿಸಿ ಅದಕ್ಕೊಂದು ನಿರ್ದಿಷ್ಟ ರೂಪವನ್ನು ಕೊಟ್ಟು ಹಂಚುವ ಪ್ರಕ್ರಿಯೆ ಕೊರೋನಾ ಪೂರ್ವದಲ್ಲೇ ಈ ದೇಶದಲ್ಲಿ ಚಾಲ್ತಿಯಲ್ಲಿತ್ತು. ಈ ಎಲ್ಲ ಸುಳ್ಳುಗಳೂ ಗುರಿಯಾಗಿಸಿಕೊಂಡಿದ್ದುದು ಮುಸ್ಲಿಮರನ್ನು. ಕ್ರಮೇಣ ಎಂಥ ಹೀನಾಯ ಮತ್ತು ನಗೆಪಾಟಲು ಸುಳ್ಳುಗಳಿಗೂ ನಿಧಾನಕ್ಕೆ ಮಾರುಕಟ್ಟೆ ಲಭ್ಯವಾಗತೊಡಗಿತು. ಮುಸ್ಲಿಮರನ್ನು ಖಳರಂತೆ ಬಿಂಬಿಸುವ ಯಾವ ನಕಲಿ ಸರಕಿಗೂ ಬೆಲೆ ಬರತೊಡಗಿತು. ಚುನಾವಣೆಯಲ್ಲೂ ಅದುವೇ ನಿರ್ಣಾಯಕ ಪಾತ್ರ ವಹಿಸತೊಡಗಿತು. ಆದ್ದರಿಂದಲೇ,
ಈ ಸುಳ್ಳಿನ ಉತ್ಪಾದಕರು ಕೊರೋನಾ ಕಾಲದಲ್ಲೂ ಚುರುಕಾದರು. ಕೊರೋನಾ ಪೂರ್ವದಲ್ಲಿ ಸುಳ್ಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾಗಿ ಕೊರೋನಾ ಭಾರತದಲ್ಲೂ ಇದೇ ತಂತ್ರವನ್ನು ಮುಂದುವರಿಸುವುದಕ್ಕೆ ನಿರ್ಧರಿಸಿದರು. ಮಾರ್ಚ್ 24ರಂದು ದೇಶದಾದ್ಯಂತ ಲಾಕ್‍ಡೌನ್ ಘೋಷಿಸುವಾಗ ಕೊರೋನಾ ಒಂದು ವೈರಸ್‍ಗೆ ಅಷ್ಟೇ ಆಗಿತ್ತು. ಕೋವಿಡ್-19 ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ ಈ ವೈರಸ್ ಎಪ್ರಿಲ್ 1ರಂದು ತಬ್ಲೀಗಿ ವೈರಸ್ ಎಂದು ನಾಮಕಾರಣ ಮಾಡುವ ಮೂಲಕ ಸುಳ್ಳಿನ ಕಾರ್ಖಾನೆಗಳು ರಂಗಕ್ಕಿಳಿದುವು. ರಾಶಿ ರಾಶಿ ಸುಳ್ಳುಗಳು ಉತ್ಪಾದನೆಯಾದುವು. ಕೊರೋನಾಕ್ಕೆ ಮುಸ್ಲಿಮ್ ವೇಶವನ್ನು ತೊಡಿಸಿ ದೇಶದಾದ್ಯಂತ ಮೆರವಣಿಗೆ ನಡೆಸಲಾಯಿತು. ಅದರಿಂದ ಪ್ರಭಾವಿತರಾದ ಜನರು ಮುಸ್ಲಿಮರನ್ನು ತಪ್ಪಿತಸ್ಥರಂತೆ ಕಂಡದ್ದೂ ಇದೆ. ಹಲ್ಲೆ ನಡೆಸಿದ್ದೂ ಇದೆ. ಪೊಲೀಸರೂ ಇಂಥ ಸುಳ್ಳುಗಳಿಂದ ಪ್ರಭಾವಿತರಾಗಿ ಅಮಾನುಷವಾಗಿ ನಡಕೊಂಡದ್ದೂ ಇದೆ. ಆದರೆ ಸುಳ್ಳಿಗೆ ಆಯುಷ್ಯ ತೀರಾ ಕಡಿಮೆ ಎಂಬುದನ್ನು ಕೊರೋನಾ ಭಾರತದ ಈ ನಾಲ್ಕು ತಿಂಗಳುಗಳೇ ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದವಾರ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಮಕ್ಕಾ ಮಸೀದಿಯು ತನ್ನ ಅಭೂತಪೂರ್ವ ನಿರ್ಧಾರಕ್ಕಾಗಿ ದೇಶದಾದ್ಯಂತ ಸುದ್ದಿಗೀಡಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿರುವ ಈ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಬದಲಾಯಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಕೊರೋನಾ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವುದಕ್ಕಾಗಿ ಈ ಏರ್ಪಾಡು ಮಾಡಿರುವುದನ್ನು ಸುಳ್ಳಿನಿಂದ ಪ್ರಭಾವಿತರಾದವರೂ ಮೆಚ್ಚಿಕೊಂಡರು. ಹಾಗೆಯೇ, ಸೋಂಕಿನಿಂದ ಗುಣಮುಖರಾದ ತಬ್ಲೀಗಿ ಸಂಘಟನೆಯ ಸದಸ್ಯರು ಸೋಂಕಿನಿಂದ ನರಳುತ್ತಿರುವ ಭಾರತೀಯರನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಾಗ, ತಬ್ಲೀಗಿ ವೈರಸ್ ಎಂದು ಅಣಕಿಸಿದವರೇ ಮೌನವಾದರು. ಕೊರೋನಾ ಶಂಕಿತ ಆದರೆ, ರೋಗ ಲಕ್ಷಣಗಳಿಲ್ಲದ ಬೆಂಗಳೂರಿನ ಮಂದಿಯನ್ನು ಇವತ್ತು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿರುವುದು ಹಜ್ಜ್ ಭವನದಲ್ಲಿ.
ಈ ದೇಶದ ಅನೇಕ ಮಸೀದಿಗಳು, ಮದ್ರಸಗಳು, ಬೀದರ್ ನ ಶಾಹೀನ್‍ನಂಥ ಮುಸ್ಲಿಮ್ ಒಡೆತನದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು-ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಗಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಸ್ವೀಕರಿಸಲು ರುದ್ರಭೂಮಿಗಳು ವಿಫಲವಾದಾಗ ಅವನ್ನು ಸ್ವೀಕರಿಸುವುದಕ್ಕೆ ಕಬರಸ್ತಾನಗಳು ಮುಂದೆ ಬಂದಿವೆ. ಕೊರೋನಾ ಪೀಡಿತ ವ್ಯಕ್ತಿಯ ಶವದಫನಕ್ಕೆ ಈ ದೇಶದ ಯಾವ ಕಬರಸ್ತಾನದಲ್ಲೂ ವಿರೋಧ ವ್ಯಕ್ತವಾಗಿಲ್ಲ. ವಿಶೇಷ ಏನೆಂದರೆ, ಕೊರೋನಾದಿಂದಾಗಿ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆಂದೇ ಮುಸ್ಲಿಮ್ ಸಮುದಾಯದ ಸಂಘಟನೆಗಳು ತರಬೇತುಗೊಂಡ ತಂಡವನ್ನೇ ರಚಿಸಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬಿಡಿ, ತಮ್ಮ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೇ ಭಯಪಟ್ಟು ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಮ್ ಸಮುದಾಯವು ಆ ಇಡೀ ಪ್ರಕ್ರಿಯೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸುತ್ತಿದೆ. ಮೃತದೇಹದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬರದಂತೆಯೇ ಸಕಲ ಮರ್ಯಾದೆಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದೆ.
ಇದೇವೇಳೆ, ಕೊರೋನಾದಿಂದ ಸಂಕಷ್ಟಕ್ಕೊಳ್ಳಗಾದವರ ಸೇವೆಯಲ್ಲಿ ಮುಸ್ಲಿಮ್ ಸಮುದಾಯ ತೊಡಗಿಸಿಕೊಂಡ ರೀತಿಗೆ ಈ ದೇಶದ ಸುಳ್ಳಿನ ಕಾರ್ಖಾನೆಗಳೇ ಬೆರಗಾಗಿವೆ. ಅತ್ಯಂತ ಬಡ ಸಮುದಾಯವೊಂದು ಆರ್ಥಿಕವಾಗಿ ಸಬಲ ಸಮುದಾಯವನ್ನೇ ಮೀರಿಸುವ ರೀತಿಯಲ್ಲಿ ಸೇವಾತತ್ಪರವಾದುದನ್ನು ಯಾವ ಸುಳ್ಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂದಹಾಗೆ,
ಮುಸ್ಲಿಮರನ್ನು ಖಳರಂತೆ ಮತ್ತು ದೇಶದ್ರೋಹಿಗಳಂತೆ ಬಿಂಬಿಸುವ ಸುಳ್ಳಿನ ಕತೆಗಳನ್ನು ಉತ್ಪಾದಿಸುವವರಿಗೆ ನಿಜ ಏನೆಂದು ಗೊತ್ತಿತ್ತು. ಮಾತ್ರವಲ, ನಿಜ ಏನೆಂದು ಹೇಳಿದರೆ, ತಮ್ಮ ಅಸ್ತಿತ್ವಕ್ಕೆ ಕುತ್ತು ಬರುವುದೆಂಬುದೂ ಗೊತ್ತಿತ್ತು. ಆದ್ದರಿಂದಲೇ ಸುಳ್ಳು ಚಿರಕಾಲ ಉಳಿಯಲಿ ಎಂಬ ಮಹದಾಸೆಯೊಂದಿಗೆ ನಿರಂತರ ಸುಳ್ಳಿನ ಕಾರ್ಖಾನೆಯಲ್ಲಿ ಸುದ್ದಿಗಳನ್ನು ಉತ್ಪಾದಿಸಿದರು. ಹಂಚಿಕೊಂಡರು. ಆದರೆ,
ಇದೀಗ ಆ ಸುಳ್ಳು ಸುದ್ದಿಗಳ ಪ್ರಭಾವದಿಂದ ಭಾರತೀಯರು ಹೊರ ಬರುವುದಕ್ಕೆ ಪೂರಕವಾದ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಳ್ಳುಗಳು ಬೆತ್ತಲಾಗತೊಡಗಿವೆ. ಬಾಬಾ ರಾಮ್‍ದೇವ್‍ರ ಪತಂಜಲಿ ಸಂಸ್ಥೆಯು ಇದರ ಉದ್ಘಾಟನೆ ಮಾಡಿರುವಂತಿದೆ. ಈ ಪತಂಜಲಿ ಸಂಸ್ಥೆಯ ಸುತ್ತ ಭಾವನಾತ್ಮಕ ಭ್ರಮೆಯೊಂದನ್ನು ತೇಲಿಬಿಡುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದುದು ಇವೇ ಸುಳ್ಳಿನ ಕಾರ್ಖಾನೆಗಳು. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಇವೇ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿತ ಸುದ್ದಿಗಳು ಮಾರುಕಟ್ಟೆ ಮಾಡುತ್ತಿದ್ದುವು. ಅಲ್ಲಿ ತಯಾರಾದ ಔಷಧಗಳನ್ನು ಬಳಸಿ ನಿರಾಶೆಗೊಂಡವರ ಅಭಿ ಪ್ರಾಯಗಳಿಗೆ ವೇದಿಕೆ ಸಿಗದಂತೆ ಮತ್ತು ಸಿಕ್ಕರೂ ಅವುಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಸೃಷ್ಟಿಸಿ ಆ ಅಭಿಪ್ರಾಯಗಳನ್ನೇ ದೇಶದ್ರೋಹಿಯಾಗಿಸುವಂತೆ ಮಾಡುವಲ್ಲಿ ಅವು ಶ್ರಮ ವಹಿಸುತ್ತಿದ್ದುವು. ಇದೀಗ ಕೊರೋನಾ ಈ ಎಲ್ಲವನ್ನೂ ಬಯಲಿಗೆ ತಂದಿದೆ. ನಿಜ ಏನು ಎಂಬುದನ್ನು ಘಂಟಾಘೋಷವಾಗಿ ಸಾರಿದೆ.
ಪತಂಜಲಿ ಸಂಸ್ಥೆಯನ್ನು ಪೋಷಿಸಿ ಬೆಳೆಸುತ್ತಿರುವ ಸರಕಾರವೇ ಪತಂಜಲಿ ಹೊರ ತಂದಿರುವ ಔಷಧಿಯನ್ನು ಒಪ್ಪದಿರುವ ಸ್ಥಿತಿ ಒಂದೆಡೆಯಾದರೆ, ಮುಸ್ಲಿಮರನ್ನು ಹೀನಾಯವಾಗಿ ಕಂಡವರೇ ಅಭಿಮಾನದಿಂದ ಮೆಚ್ಚಿಕೊಳ್ಳುವ ಸ್ಥಿತಿ ಇನ್ನೊಂದೆಡೆ.
ಸುಳ್ಳಿನ ಪರದೆಯನ್ನು ಸರಿಸಿದ ಕೊರೋನಾಕ್ಕೆ ಅಭಿನಂದನೆಗಳು.
No comments:
Post a Comment