1. ಓದುತ್ತಿಲ್ಲವೆಂಬ ಕಾರಣಕ್ಕೆ ಎಂಟರ ಹರೆಯದ ಬಾಲಕನಿಗೆ ಹೆತ್ತ ತಂದೆಯೇ ಕಾದ ಸಟ್ಟುಗರಿಂದ ಬರೆ ಎಳೆದಿದ್ದಾರೆ. ಘಟನೆ ನಡೆದಿರುವುದು ಕೇರಳದ ಪಟ್ಟಣಂತಿಟ್ಟದಲ್ಲಿ. ತೋಳುಗಳು ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಂದೆಗೆ ಮದ್ಯ ಸೇವನೆಯ ಚಟವಿದೆ.
2. ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಸಮಯದಲ್ಲಿ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕಾಪ್ಸಿಕೋಫ್ರಿ ಗ್ರಾಮದ ಭಾ ನ್‌ಬೋರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಮಕ್ಕಳಿಗೆ ಪೊಲೀಯೋ ಹನಿ ನೀಡುವ ಬದಲು ಸ್ಯಾನಿಟೈಸರ್ ಹನಿ ನೀಡಲಾಗಿದೆ. ಎಲ್ಲವೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳು. ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
3. 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಲಾದ ಘಟನೆ ಮಧ್ಯಪ್ರದೇಶದ ಬೊನೆರಾ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರಿಯ ಮೇಲೆ ಈಗಾಗಲೇ ಅತ್ಯಾಚಾರಗೈದ ಆರೋಪ ಇದ್ದು ಜಾಮೀನಿನ ಮೇಲೆ ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ.
ಅಂದಹಾಗೆ, ಛೆ, ಅಯ್ಯೋ, ಎಂಥ ಕ್ರೂರಿಗಳು... ಇತ್ಯಾದಿ ಉದ್ಗಾರಗಳೊಂದಿಗೆ ಸುದ್ದಿಯನ್ನು ಓದಿ ಮುಗಿಸುವುದರ ಆಚೆಗೆ ಮಕ್ಕಳ ಸುರಕ್ಷಿತೆಗಾಗಿ ನಾವೇನು ಮಾಡಬಹುದು? ಈ ಬಗೆಯ ಪ್ರಶ್ನೆಯೊಂದನ್ನು ಪ್ರತಿಯೋರ್ವರೂ ಸ್ವಯಂ ಕೇಳಿಕೊಳ್ಳಬೇಕು. ದೊಡ್ಡವರಿಗೆ ಪ್ರಶ್ನಿಸುವುದಕ್ಕೆ ಬರುತ್ತದೆ. ಅನ್ಯಾಯವಾದಾಗ ಅದನ್ನು ವೀಡಿಯೋ ಮಾಡಿ ಹಂಚಿಕೊಳ್ಳುವುದಕ್ಕೂ ಬರುತ್ತದೆ. ಕಷ್ಟದ ಲ್ಲಿದ್ದರೂ, ಕಾಯಿಲೆ ಬಿದ್ದರೂ ಮನೆ ಇಲ್ಲದಿದ್ದರೂ, ಅನ್ಯಾಯವಾಗಿ ಪೊಲೀಸರೋ, ಇನ್ನಾರೋ ಥಳಿಸಿದರೂ ಅವೆಲ್ಲವನ್ನೂ ನಾಗರಿಕ ಜಗತ್ತಿಗೆ ತಿಳಿಸುವ ಕಲೆ ದೊಡ್ಡವರಲ್ಲಿರುತ್ತದೆ. ಅದಕ್ಕೆ ಬೇಕಾದ ಅಧುನಿಕ ಉಪಕರಣಗಳಿರುವುದೂ ದೊಡ್ಡವರಲ್ಲೇ. ಆದರೆ, ಎಳೆ ಪ್ರಾಯದ ಮಕ್ಕಳ ಪಾಲಿಗೆ ಇವ್ಯಾವೂ ಲಭ್ಯವಿಲ್ಲ. ಎಲ್ಲಿಯವರೆಗೆಂದರೆ, ತಮ್ಮ ಮೇಲಿನ ಅನ್ಯಾಯ, ಹಲ್ಲೆ, ಬೈಗುಳ, ಥಳಿತ ಇತ್ಯಾದಿ ಎಸಗಿದವರನ್ನು ದಂಡಿಸುವುದಕ್ಕೆ ಕಾನೂನುಗಳಿವೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ.
ದೊಡ್ಡವರಲ್ಲಿ ಏನೇನೆಲ್ಲ ಆಧುನಿಕ ಸೌಲಭ್ಯಗಳು ಇವೆ ಎಂದು ನಾವು ಹೇಳುತ್ತೇವೆಯೋ ಅವ್ಯಾವುವೂ ಲಭ್ಯವಿಲ್ಲದ ಬಹುದೊಡ್ಡ ಸಮೂಹವೆಂದರೆ ಮಕ್ಕಳು. ಅವರಿಗೆ ಕಣ್ಣೀರು ಇಳಿಸಲು ಬರುತ್ತದೆ. ಆದರೆ ಅದನ್ನು ವೀಡಿಯೋ ಮಾಡಿ ಹಂಚಿಕೊಳ್ಳುವ ಮೊಬೈಲು ಅವರ ಕೈಯಲ್ಲಿಲ್ಲ. ಹೆತ್ತವರಲ್ಲಿ ಹಲವು ವಿಧ. ಕೆಲವು ಮನೆಗಳಲ್ಲಿ ಹೆತ್ತವರಿಬ್ಬರೂ ಉದ್ಯೋಗಕ್ಕೆ ಹೋಗುತ್ತಾರೆ. ಕೆಲವು ಮನೆಗಳಲ್ಲಿ ತಂದೆ ಮಾತ್ರ ಕೆಲಸಕ್ಕೆ ಹೋಗುತ್ತಾರೆ. ಈ ಕೆಲಸದಲ್ಲೂ ಹತ್ತಾರು ವಿಧ. ಪ್ಯಾಂಟು, ಬೂಟು, ಟೈ, ಕೋಟು ಧರಿಸಿ ಕೆಲಸಕ್ಕೆ ಹೋಗುವ ಅಪ್ಪ ಇರುವಂತೆಯೇ ಇಸ್ತ್ರಿ ಹಾಕದ, ದೊರಗು ಉಡುಪನ್ನು ಧರಿಸಿ ಕೆಲಸಕ್ಕೆ ಹೋಗುವ ಅಪ್ಪನೂ ಇದ್ದಾನೆ. ಅಮ್ಮಂದಿರಲ್ಲೂ ಇಂಥ ವೈವಿಧ್ಯವಿದೆ. ಮನೆಯಲ್ಲೇ ಇರುವ ಅಮ್ಮ ಇರುವಂತೆಯೇ ಮುಂಜಾನೆಯಿಂದ ಸಂಜೆವರೆಗೆ ದುಡಿಯುವ ಅಮ್ಮನೂ ಇದ್ದಾಳೆ. ಇವರೆಲ್ಲರೂ ಉದ್ಯೋಗದಲ್ಲಿ ಒಬ್ಬರಿಗಿಂತ ಒಬ್ಬರ ನಡುವೆ ವ್ಯತ್ಯಾಸ ಇರುವಂತೆಯೇ, ಉದ್ಯೋಗ ಸ್ಥಳದ ವಾತಾವರಣದಲ್ಲೂ ವ್ಯತ್ಯಾಸ ಇರುತ್ತದೆ. ಶಾಂತ ವಾತಾವರಣ, ಸದಾ ಒತ್ತಡದ ಸ್ಥಿತಿ, ಮೇಲಧಿಕಾರಿಗಳಿಂದ ಯಾವಾಗಲೂ ಬೈಗುಳ; ಅತೀವ ಕಠಿಣ ಕೆಲಸ, ಬಿರು ಬಿಸಿಲಿನಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ದುಡಿಯಬೇಕಾದ ಸ್ಥಿತಿಯೂ ಇರುತ್ತದೆ. ಸಾಮಾನ್ಯವಾಗಿ ಉದ್ಯೋಗ ಸ್ಥಳದ ವಾತಾವರಣಕ್ಕೆ ಹೊಂದಿಕೊಂಡು ಅವರ ವರ್ತನೆಯಲ್ಲೂ ವ್ಯತ್ಯಾಸ ಇರುತ್ತದೆ. ಸದಾ ಒತ್ತಡದ ಸನ್ನಿವೇಶದಲ್ಲಿ ಕೆಲಸ ಮಾಡುವ ವ್ಯಕ್ತಿ, ಆ ಒತ್ತಡದ ಪರಿಣಾಮವನ್ನು ಮನೆವರೆಗೂ ಕೊಂಡು ಹೋಗುವುದಿದೆ ಮತ್ತು ಅದರ ಭಾರವನ್ನು ಮಕ್ಕಳ ಮೇಲೆ ಹೇರಿ ಹಗುರವಾಗುವುದಿದೆ. ಮಕ್ಕಳನ್ನು ಥಳಿಸುವ, ಬೈಯುವ, ನಿಂದಿಸುವ ಮತ್ತು ಗದರಿಸುವ ಹೆತ್ತವರು ಮನಃ ಪೂರ್ವಕವಾಗಿ ಹಾಗೆ ಮಾಡುತ್ತಾರೆಂದು ಹೇಳಲಾಗದು. ಇನ್ನೆಲ್ಲೋ ಆದ ಅವಮಾನಕ್ಕೆ, ನಿಂದನೆಗೆ ಆ ಕ್ಷಣದಲ್ಲಿ ತಕ್ಕ ಉತ್ತರ ನೀಡಲಾಗದೇ ಅಥವಾ ಆ ಸಾಮರ್ಥ್ಯ ಇಲ್ಲದೇ ಒಳಗೊಳಗೇ ಕುದಿಯುತ್ತಾ ಸಿಟ್ಟನ್ನು ಮಕ್ಕಳ ಮೇಲೆ ಅಕಾರಣವಾಗಿ ತೀರಿಸಿಕೊಳ್ಳುವುದಿದೆ. ಇವು ಏನೇ ಇದ್ದರೂ ಬಲಿಪಶುಗಳು ಮಾತ್ರ ಮಕ್ಕಳೇ. ಅಷ್ಟಕ್ಕೂ,
ತಪ್ಪೇ ಮಾಡದ ಮಗುವಿನ ಮೇಲೆ ಅಪ್ಪ ಏನೇನೋ ಕಾರಣ ಕೊಟ್ಟು ಬಾರಿಸಿದರೆ ಆ ಮಗುವಿನ ಮನಸ್ಸು ಏನಂದೀತು? ಆ ಕ್ಷಣದಲ್ಲಿ ಆ ಮಗುವಿನ ಮನಸ್ಸಲ್ಲಿ ಏನೆಲ್ಲ ಪ್ರಶ್ನೆಗಳು ಹುಟ್ಟಿಕೊಂಡೀತು? ತೀರಾ ಪುಟ್ಟ ಪ್ರಮಾದಕ್ಕೂ ಕೆಂಡಾಮAಡಲವಾಗುವ ಅಪ್ಪ ಅಥವಾ ಅಮ್ಮನ ಬಗ್ಗೆ ಒಂದು ಮಗು ಏನೇನು ಭಾವಿಸಿಕೊಂಡೀತು? ಮದ್ಯ ಸೇವಿಸಿ ಬಂದು ಮನೆಯಲ್ಲಿ ಅಮ್ಮನಿಗೋ ತನಗೋ ಬಾರಿಸುವ ಅಪ್ಪನನ್ನು ಕಂಡು ಮಗುವಿನಲ್ಲಿ ಏಳುವ ಪ್ರಶ್ನೆಗಳೇನಿರಬಹುದು?
ಮನೆಯ ನಾಲ್ಕು ಗೋಡೆಗಳ ಒಳಗೆ ಅತ್ಯಂತ ಅಸಹಾಯಕರು ಯಾರೆಂದರೆ, ಮಕ್ಕಳು. ಅಪ್ಪ-ಅಮ್ಮನ ಮೂಡ್ ಯಾವಾಗ ಚೆ ನ್ನಾಗಿರುತ್ತೋ ಆವಾಗೆಲ್ಲ ಅವರಲ್ಲಿ ಖುಷಿ. ಅವರು ತಪ್ಪು ಮಾಡಿದರೂ ಮಾಡದಿದ್ದರೂ ಹೆತ್ತವರನ್ನು ಹೊಂದಿಕೊಂಡು ಅವರ ಸುಖ-ದುಃಖ ನಿರ್ಣಯವಾಗುತ್ತದೆ. ಇನ್ನು, ಅವರ ಜಗತ್ತು ಕೂಡ ಬಹಳ ಸಣ್ಣದು. ಅವರ ಭಾವನೆಗಳನ್ನು ಜಗತ್ತಿನ ಮುಂ ದಿಡುವುದಕ್ಕೆ ಯಾವ ಮಾಧ್ಯಮವೂ ಇಲ್ಲ. ಅಥವಾ ದೊಡ್ಡವರಂತೆ ಮಾಧ್ಯಮವನ್ನು ಬಳಸಿ ಹೇಳಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿಲ್ಲ. ಆದ್ದರಿಂದಲೇ, ಈ ಜಗತ್ತಿನಲ್ಲಿ ದೊಡ್ಡವರ ಸಂಕಟ, ಭಾವನೆ, ಅಭಿಪ್ರಾಯಗಳು ಸುದ್ದಿಗೊಳಗಾಗುವಂತೆ ಮಕ್ಕಳು ಸು ದ್ದಿಗೊಳಗಾಗುವುದಿಲ್ಲ. ಅವರ ಅಭಿಪ್ರಾಯಗಳಿಗೆ ವೇದಿಕೆಗಳಿಲ್ಲ. ಅವರ ಮೇಲಿನ ಹಲ್ಲೆಯನ್ನು, ನಿಂದನೆಯನ್ನು ಅಥವಾ ಶೋಷಣೆಯನ್ನು ಹೊರ ಜಗತ್ತಿಗೆ ತಿಳಿಸುವ ದಾರಿಗಳಿಲ್ಲ. ಈ ಎಲ್ಲ ಕಾರಣಗಳಿಂದ ಬಾಹ್ಯ ಜಗತ್ತಿನ ಪಾಲಿಗೆ ಮಕ್ಕಳೆಲ್ಲ ಸುಖವಾಗಿದ್ದಾರೆ ಎಂಬ ವಾತಾವರಣ ಇದೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳಷ್ಟೇ ಮಾಧ್ಯಮಗಳ ಒಳಗಿನ ಪುಟಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಷ್ಟಕ್ಕೂ, ಅಂಥ ಸುದ್ದಿಯನ್ನು ಹೊರ ಜಗತ್ತಿಗೆ ಹೇಳುವುದೂ ಮಕ್ಕಳಲ್ಲ, ದೊಡ್ಡವರು. ಅಂದಹಾಗೆ,
ಮಕ್ಕಳ ಈ ಎಲ್ಲ ಅಸಹಾಯಕತೆಯನ್ನು ದೊಡ್ಡವರಾದ ನಾವು ಶಾಂತಚಿತ್ತದಿಂದ ಅರ್ಥೈಸಬೇಕು ಮತ್ತು ಸ್ಪಂದಿಸಬೇಕು. ನಾವು ಥಳಿಸಿದರೆ ತಿರುಗಿ ಥಳಿಸುವ ಸಾಮರ್ಥ್ಯವಿಲ್ಲದ, ಬೈದರೆ ತಿರುಗಿ ಬೈಯಲು ಬಾರದ, ಊಟ ಕೊಡದಿದ್ದರೆ ಊಟ ತಯಾರಿಸಿ ತಿ ನ್ನಲು ತಿಳಿಯದ ಮಕ್ಕಳ ಮೇಲೆ ಪ್ರತಾಪ ತೋರಿಸುವುದು ಅತಿ ದೊಡ್ಡ ಕ್ರೌರ್ಯ ಮತ್ತು ಅತಿ ಹೀನ ಕಾರ್ಯ. ನಮ್ಮ ಪಕ್ಕದ ಮ ನೆಯಲ್ಲಿ, ಆಸು-ಪಾಸಿನಲ್ಲಿ ಮಕ್ಕಳ ಮೇಲೆ ಹೆತ್ತವರಿಂದ ದೌರ್ಜನ್ಯ ನಡೆಯುತ್ತಿದ್ದರೆ ಅವರನ್ನು ತಿದ್ದುವ ಅಥವಾ ತಿದ್ದುವ ಸಾಮರ್ಥ್ಯ ಉಳ್ಳವರಲ್ಲಿ ಹೇಳಿಸುವ ಪ್ರಯತ್ನಗಳು ನಡೆಯಬೇಕು. ಸ್ವತಃ ನಾವೂ ಮಕ್ಕಳ ಜೊತೆ ಕರುಣೆಯಿಂದ ವರ್ತಿಸಬೇಕು. ತಪ್ಪು ಮಾಡುವ ಪ್ರಾಯವೇ ಮಕ್ಕಳದು. ಅದಕ್ಕೆ ಕಠಿಣ ದಂಡನೆ ಉತ್ತರವಲ್ಲ. ಹೂ ಮನಸ್ಸಿನ ಮಕ್ಕಳನ್ನು ಹೂವಿನಂತೆ ಪ್ರೀತಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ.
ಆರಂಭದ ಮೂರು ಘಟನೆಗಳಲ್ಲಿ ಮಕ್ಕಳ ಅಸಹಾಯಕತೆಯ ದಟ್ಟ ಛಾಯೆಯಿದೆ ಮತ್ತು ದೊಡ್ಡವರ ದೊಡ್ಡಸ್ತಿಕೆಯ ಅಹಂಭಾವ ಮತ್ತು ನಿರ್ಲಕ್ಷ್ಯವಿದೆ. ಇದು ಕೊನೆಯಾಗಲಿ. ಮಕ್ಕಳ ಬಾಳು ಸುಂದರವಾಗಲಿ.