ಸನ್ಮಾರ್ಗ ಸಂಪಾದಕೀಯ ಪತ್ರಿಕೆಗಳಲ್ಲಿ ಅತ್ಯಾಚಾರದ ವಿರುದ್ಧ ಸಂಪಾದಕೀಯವೋ ಮುಖ್ಯ ಬರಹವೋ ಪ್ರಕಟವಾಗಬೇಕಾದರೆ ಬರೇ ಅತ್ಯಾಚಾರವಷ್ಟೇ ಆದರೆ ಸಾಲದು, ಅದು ಬರ್ಬರವಾಗಿರಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ, ಅತ್ಯಾಚಾರ ಎಂಬ ಪದಕ್ಕೆ ಹೌಹಾರುವ ಸ್ಥಿತಿ ಈಗಿಲ್ಲ. ಅದನ್ನೊಂದು ಸಹಜ ಕ್ರಿಯೆಯಾಗಿ ದೇಶ ಒಪ್ಪಿಕೊಂಡು ಬಿಟ್ಟಿದೆ. ಈಗ ಅಸಹಜವಾಗುವುದು ಯಾವುದೆಂದರೆ, ಬರ್ಬರ ಅತ್ಯಾಚಾರ. ಅತ್ಯಾಚಾರಿಗಳು ಹೆಣ್ಣಿನ ಮರ್ಮಾಂಗವನ್ನು ಛಿದ್ರಗೊಳಿಸಿದರೆ ಮತ್ತು ಹೆಣ್ಣಿನೊಂದಿಗೆ ಅತ್ಯಂತ ಪೈಶಾಚಿಕವಾಗಿ ನಡೆಸಿಕೊಂಡರೆ ಆ ಸುದ್ದಿ ಪತ್ರಿಕೆಗಳ ತೀರಾ ಒಳಪುಟಕ್ಕೆ ಹೋಗುವುದು ತಪ್ಪುತ್ತದೆ. ಉಳಿದಂತೆ ಕೇವಲ ಅತ್ಯಾಚಾರ ಪ್ರಕರಣವೊಂದು ಒಳಪುಟದ ಬದಲು ಮುಖಪುಟಕ್ಕೆ ಬರಬೇಕಾದರೆ ಹಲವು ರಾಜಕೀಯ ಸುದ್ದಿಗಳ ಜೊತೆ ಗುದ್ದಾಡಬೇಕಾಗುತ್ತದೆ. ಸದ್ಯ ಬರ್ಬರ ಅಥವಾ ಅತಿ ಬರ್ಬರ ಅನ್ನಬಹುದಾದ ಅತ್ಯಾಚಾರಗಳು ಕಳೆದ ಒಂದೇ ವಾರದಲ್ಲಿ ಒಂದಕ್ಕಿಂತ ಹೆಚ್ಚು ನಡೆದಿವೆ. ಜಾರ್ಖಂಡ್‌ನ ಚತರಾ ಎಂಬ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಆ ಮಹಿಳೆಯ ಮರ್ಮಾಂಗಕ್ಕೆ ಲೋಹದ ವಸ್ತುವನ್ನು ತುರುಕಲಾಗಿದೆ. ಉತ್ತರ ಪ್ರದೇಶದ ಬದೌನ್‌ನಲ್ಲಿ 50 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಸಾಯಿಸಿದವರಲ್ಲಿ ಪ್ರಧಾನ ಆರೋಪಿ ದೇವಾಲಯವೊಂದರ ಅರ್ಚಕ. ತೀವ್ರ ರಕ್ತಸ್ರಾವದಿಂದಾಗಿ ಈ ಮಹಿಳೆ ಸಾವಿಗೀಡಾದರು. ತಮಿಳುನಾಡಿನ ನಾಗಪಟ್ಟಣಂನಲ್ಲಿರುವ ದೇವಾಲಯದ ಆವರಣದಲ್ಲಿ 40 ವರ್ಷದ ಮಹಿಳೆಯನ್ನು ಅತ್ಯಾಚಾರಗೈಯಲಾಗಿದೆ. ನಿಜವಾಗಿ,
ಅರ್ಚಕ, ದೇವಾಲಯ ಎಂಬಿವುಗಳು ಸಾಮಾಜಿಕ ಗೌರವವನ್ನು ಪಡಕೊಂಡವುಗಳು. ಆದ್ದರಿಂದಲೇ ಪತ್ರಿಕೆಗಳು ಸುದ್ದಿಗಳಲ್ಲಿ ದೇವಾಲಯದ ಆವರಣದಲ್ಲಿ ಅತ್ಯಾಚಾರ ಎಂದೂ ಅತ್ಯಾಚಾರ ಎಸಗಿದವರಲ್ಲಿ ಅರ್ಚಕನೇ ಪ್ರಧಾನ ಆರೋಪಿ ಎಂದೂ ಒತ್ತು ಕೊಡಲಾಗಿದೆ. ಓರ್ವ ಸಾಮಾನ್ಯ ವ್ಯಕ್ತಿ ಅತ್ಯಾಚಾರಿ ಎನಿಸಿಕೊಳ್ಳುವುದಕ್ಕೂ ಅರ್ಚಕನೋ ಧರ್ಮಗುರುವೋ ಅತ್ಯಾಚಾರಿ ಎ ನಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸ ಇದೆ. ಇಬ್ಬರೂ ಪೀಡಿಸಿರುವುದು ಹೆಣ್ಣನ್ನೇ ಆಗಿರಬಹುದು ಮತ್ತು ಕ್ರೌರ್ಯದಲ್ಲೂ ಸಮಾನತೆ ಇರಬಹುದು. ಆದರೆ, ಸಮಾಜದಲ್ಲಿ ಕಾರ್ಮಿಕನಿಗೆ ಇಲ್ಲದ ವಿಶೇಷ ಮಾನ್ಯತೆ, ಗೌರವ ಅರ್ಚಕನಿಗೆ ಇದೆ. ಆತ ಧರ್ಮದ ಅಂತಃಸತ್ವವನ್ನು ತಿಳಿದವ. ಸಮಾಜಕ್ಕೆ ಬೋಧಿಸುವವ. ಹೆಣ್ಣಿಗೆ ಧರ್ಮ ನೀಡಿರುವ ಮಾನ್ಯತೆಯನ್ನು ತಿಳಿದವ. ಆದರೆ ಆತನೇ ಹೆಣ್ಣ ನ್ನು ಕ್ರೂರವಾಗಿ ನಡೆಸಿಕೊಳ್ಳುವುದೆಂದರೆ, ಅದು ಒಟ್ಟು ಆಸ್ತಿಕ ಭಾವನೆಯನ್ನೇ ಘಾಸಿಗೊಳಿಸುತ್ತದೆ. ಹಾಗಂತ, ಈ ಮಾತು ಅರ್ಚಕರಿಗೆ ಮಾತ್ರ ಅನ್ವಯವಲ್ಲ. ಎಲ್ಲ ಧರ್ಮದ ಧಾರ್ಮಿಕ ಗುರುಗಳಿಗೂ ಅನ್ವಯ. ವಿಷಾದ ಏನೆಂದರೆ,
ಹೆಣ್ಣಿನ ಸುರಕ್ಷಿತತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನಿನ ಮೇಲೆ ಕಾನೂನು ರಚಿತವಾಗುತ್ತಿದ್ದರೂ ಮತ್ತು ಶೈಕ್ಷಣಿಕ ಅನುಪಾತವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ ಹೆಣ್ಣು ದಿನದಿಂದ ದಿನಕ್ಕೆ ಅಸುರಕ್ಷಿತ ವಲಯಕ್ಕೆ ಜಾರುತ್ತಿದ್ದಾಳೆ. ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳ ಮಹಿಳೆಯರೂ ಯೌವನ ಪ್ರಾಯವನ್ನು ದಾಟಿದವರು. ಬದೌನ್ ಪ್ರಕರಣದಲ್ಲಂತೂ ಪೊಲೀಸ್ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಕೇಸು ದಾಖಲಿಸುವುದಾಗಲಿ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವುದಾಗಲಿ ಮಾಡಿಲ್ಲ. ಅಂದರೆ, ಇದು ಶಿಕ್ಷಣದ ಕೊರತೆಯಿಂದಾಗುವ ಕ್ರೌರ್ಯ ಅಲ್ಲ. ಇದೊಂದು ಮನಸ್ಥಿತಿ. ಆ ಮನಸ್ಥಿತಿ ಅರ್ಚಕರಲ್ಲೂ ಇದೆ, ಪೊಲೀಸ್ ಅಧಿಕಾರಿಗಳಲ್ಲೂ ಇದೆ, ಕಾರ್ಮಿಕನಲ್ಲೂ ಇದೆ, ರಾಜಕಾರಣಿಗಳಲ್ಲೂ ಇದೆ. ಶಿಕ್ಷಣವೊಂದೇ ಇಂಥ ಮನಸ್ಥಿತಿಯನ್ನು ಬದಲಿಸಲಾರದು ಎಂಬುದಕ್ಕೆ ಜಮ್ಮುವಿನ ಕಥುವಾದಿಂದ ತೊಡಗಿ ಉತ್ತರ ಪ್ರದೇಶದ ಬದೌನ್‌ವರೆಗೆ ಸಾಲು ಸಾಲು ಪುರಾವೆಗಳು ಲಭಿಸುತ್ತಲೂ ಇವೆ.
ಹೆಣ್ಣು ಮತ್ತು ಗಂಡು ವೈರಿಗಳಲ್ಲ. ಬಹುತೇಕ ಪ್ರತಿ ಮನೆಯಲ್ಲೂ ಹೆಣ್ಣು ಇದ್ದಾಳೆ, ಗಂಡೂ ಇದ್ದಾನೆ. ಆದ್ದರಿಂದ, ಹೆಣ್ಣಿನ ಪರಿಚಯವೇ ಇಲ್ಲದ, ಹೆಣ್ಣಿನ ಭಾವನೆಗಳನ್ನು ಅರಿತೇ ಇಲ್ಲದ ಗಂಡುಗಳ ಒಂದು ಪ್ರತ್ಯೇಕ ದ್ವೀಪ ಎಲ್ಲೂ ಇಲ್ಲ. ಹೀಗಿರುವಾಗ ಹೆಣ್ಣೆಂದರೆ ಹೇಗೆ ಬೇಕಾದರೂ ಬಳಸಿ ಎಸೆಯಬಹುದಾದಷ್ಟು ಅಗ್ಗದ ಮತ್ತು ದುರ್ಬಲ ವಸ್ತು ಎಂದು ಗಂಡು ಭಾವಿಸುವುದಾದರೆ ಅದಕ್ಕೆ ಹೆಣ್ಣಿನ ಒಡನಾಟ ಇಲ್ಲದೇ ಇರುವುದು ಕಾರಣವೇ ಅಲ್ಲ. ಹಾಗಿದ್ದರೆ, ಯಾವುದು ಕಾರಣ? ಕಾನೂನುಗಳ ಬಗ್ಗೆ ನಿರ್ಲಕ್ಷ್ಯವೋ, ಭಯ ರಹಿತ ಭಾವವೋ? ಮನೆಯಲ್ಲಿ ಪೋಷಕರಿಂದ ಸೂಕ್ತ ತರಬೇತಿ ಸಿಗದೇ ಇರುವುದರ ಪರಿಣಾಮವೋ, ಮದ್ಯದ ಅಮಲೋ, ಸಿನಿಮಾಗಳ ಪ್ರಭಾವವೋ, ಇಂಟರ್‌ನೆಟ್ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವ ನೀಲಿಚಿತ್ರಗಳ ಹಾವಳಿಯೋ? ಯಾವುದು ಕಾರಣ? ಹಾಗಂತ,
ಇಂಥ ಪ್ರಶ್ನೆಗಳು ಮತ್ತು ಚರ್ಚೆಗಳು ಈ ಮೊದಲು ಟನ್ನುಗಟ್ಟಲೆ ನಡೆದಿವೆ. ಆದರೆ, ಆ ಚರ್ಚೆಗಳಿಗೆ ಹೆಣ್ಣನ್ನು ಸುರಕ್ಷಿತಗೊಳಿಸಲು ಸಾಧ್ಯವಾಗಿಲ್ಲ. ಬಹಳ ಮುಖ್ಯವಾಗಿ, ಹೆಚ್ಚಿನೆಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯ ಪ್ರಮುಖ ಆರೋಪಿಯಾಗಿರುವುದನ್ನು ಗಮ ನಿಸಬಹುದಾಗಿದೆ. 2012ರ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್ ಪ್ರಕರಣದ ವರೆಗೆ ಅಥವಾ ಪ್ರತಿದಿನದ ಅತ್ಯಾಚಾರ ಪ್ರಕರಣಗಳ ವರೆಗೆ ಇದನ್ನು ಕಾಣಬಹುದು. ಮದ್ಯವು ವ್ಯಕ್ತಿಯ ಚಿತ್ತಸ್ವಾಸ್ಥ್ಯವನ್ನು ಕೆಡಿಸುತ್ತದೆ. ಸ್ವಾಸ್ಥ್ಯ ಕೆಟ್ಟ ಬಳಿಕ ಕೆಡುಕು ಸಂಭವಿಸುವುದು ಅಸಹಜ ಅಲ್ಲ. ಆದ್ದರಿಂದ ಅತ್ಯಾಚಾರವನ್ನು ತಡೆಯಬೇಕೆಂದು ಬಯಸಿ ಕಾನೂನಿನ ಮೇಲೆ ಕಾನೂನು ಮಾಡುವುದರ ಜೊತೆ ಜೊತೆಗೇ ಮದ್ಯವನ್ನು ಅಲಭ್ಯಗೊಳಿಸಬೇಕು. ಅಮಲಿನಲ್ಲಿರುವ ವ್ಯಕ್ತಿಗೆ ತಾನೇನು ಮಾಡುತ್ತಿದ್ದೇನೆ ಅಥವಾ ತಾನು ಮಾಡುತ್ತಿರುವ ಕೃತ್ಯ ಎಷ್ಟು ಅಪಾಯಕಾರಿ ಎಂಬುದರ ಪೂರ್ಣ ತಿಳುವಳಿಕೆ ಇರುವ ಸಾಧ್ಯತೆ ಕಡಿಮೆ. ಇದ್ದರೂ ಇರಬೇಕಾದಷ್ಟು ಗಂಭೀರತೆ ಇರುವುದಿಲ್ಲ. ಏನನ್ನೂ ಮಾಡುವ ಹುಂಬ ಧೈರ್ಯವನ್ನು ಅಮಲು ಕೊಟ್ಟು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರವನ್ನು ತಡೆಯುವುದಕ್ಕೆ ಕೇವಲ ಕಾನೂನೊಂದೇ ಪರಿಹಾರವಾಗಿ ಕಾಣುತ್ತಿಲ್ಲ. ಅದರ ಜೊತೆಗೇ ಈ ಕಾನೂ ನುಗಳನ್ನೆಲ್ಲಾ ಮುರಿಯುವುದಕ್ಕೆ ಪ್ರಚೋದನೆ ಕೊಡುವ ಮದ್ಯವನ್ನು ನಿಷೇಧಿಸಬೇಕು. ಅದರ ಜೊತೆಗೇ, ಈಗಾಗಲೇ ನಿಷೇಧಕ್ಕೆ ಒಳಗಾಗಿರುವ ಗಾಂಜಾದಂತಹ ಅಮಲು ಪದಾರ್ಥಗಳು ಯಾವ ಕಾರಣಕ್ಕೂ ಸಾರ್ವಜನಿಕರಿಗೆ ಲಭ್ಯವಾಗದಂತೆ ನೋಡಿಕೊಳ್ಳಬೇಕು.
ಈ ದೇಶದ ಕಾವ್ಯ, ಕವಿತೆ, ಕತೆ, ಕಾದಂಬರಿ, ನಾಟಕ.. ಎಲ್ಲದರಲ್ಲೂ ಹೆಣ್ಣಿದ್ದಾಳೆ. ಜನಪದಗಳಲ್ಲಿ, ಲಾವಣಿಗಳಲ್ಲಿ ಆಕೆಯನ್ನು ಕೊಂಡಾಡಲಾಗಿದೆ. ಈ ಭೂಮಿಯನ್ನೇ ತಾಯಿಯೆಂದು ಗೌರವಿಸಲಾಗುತ್ತಿದೆ. ಇಷ್ಟೆಲ್ಲಾ
ಇದ್ದೂ ಹೆಣ್ಣು ನಿತ್ಯ ಅತ್ಯಾಚಾರದ ಭಯದಲ್ಲಿ ಬದುಕಬೇಕಾದ ಸ್ಥಿತಿ ಎದುರಾಗಿರುವುದು ಅತ್ಯಂತ ವಿಷಾದನೀಯ ಮತ್ತು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ. ನಾಲಗೆಯಲ್ಲಿ ಹೆಣ್ಣನ್ನು ಕೊಂಡಾಡುತ್ತಾ ವರ್ತನೆಯಲ್ಲಿ ಹೆಣ್ಣನ್ನು ಚೆಂಡಾಡುವ ಮಾನಸಿಕ ಸ್ಥಿತಿಗೆ ಅಂತ್ಯ ಹಾಡಲೇಬೇಕು. ಹೆಣ್ಣು ಈ ಸಮಾಜದ ಕಣ್ಣು. ಆ ಕಣ್ಣಿಗೆ ಕೇಡು ಬರುವುದೆಂದರೆ ಅದು ಸಮಾಜ ದೃಷ್ಟಿಗೆ ಕೇಡು ಬಂದAತೆ. ಕೇಡಿನ ಕಣ್ಣುಳ್ಳ ಸಮಾಜ ಎಂದೂ ಸ್ವಸ್ಥವಿರಲಾರದು.
No comments:
Post a Comment