Saturday, 16 January 2021

ಬಾಬರಿ: ರಚನಾತ್ಮಕ ಪ್ರತಿಕ್ರಿಯೆಯ ಸಂಕೇತ- ಧನ್ನಿಪುರ

 



ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯು ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ. ಬಾಬರಿ ಮಸೀದಿ  ಇದ್ದ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಸುಪ್ರೀಮ್ ಕೋರ್ಟು, ಅದಕ್ಕೆ ಬದಲಿಯಾಗಿ 5 ಎಕರೆ ಭೂಮಿಯನ್ನು  ಮಸೀದಿ ನಿರ್ಮಾಣಕ್ಕೆ ನೀಡುವ ಪ್ರಸ್ತಾಪ ಮುಂದಿಟ್ಟಿತು. ಈ ಪ್ರಸ್ತಾಪಕ್ಕೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದುವು.  ಕೋರ್ಟು ಮುಂದಿರಿಸಿರುವ ಈ ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಒಂದು ಬಣ ವಾದಿಸಿದರೆ, ಇನ್ನೊಂದು ಬಣ ಅದನ್ನು  ಸ್ವೀಕರಿಸುವ ಇರಾದೆ ವ್ಯಕ್ತಪಡಿಸಿತು. ಅದರಂತೆ ಧನ್ನಿಪುರದಲ್ಲಿ ಸರಕಾರ ಕೊಡಮಾಡಿದ 5 ಎಕರೆ ಭೂಮಿಯನ್ನು ಸ್ವೀಕರಿಸಿತು. ಇ ದೀಗ ಆ ಕುರಿತಂತೆ ಇನ್ನಷ್ಟು ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿದೆ. ಈ ವಿವರಗಳು ಬಹಳ ಚೇತೋಹಾರಿ.  ಸಾಮಾನ್ಯವಾಗಿ,

ಬಾಬರಿ ಮಸೀದಿಗೆ ಪರ್ಯಾಯವಾಗಿ ಅಂಥದ್ದೇ  ಇನ್ನೊಂದು ಮಸೀದಿ ನಿರ್ಮಾಣವಾಗುತ್ತದೆ ಎಂದು ಅನೇಕರು ಭಾವಿಸಿದ್ದರು.  ಸುಪ್ರೀಮ್ ಕೊಡಮಾಡಿರುವ 5 ಎಕರೆ ಭೂಮಿಯನ್ನು ಸ್ವೀಕರಿಸಬಾರದು ಎಂದು ವಾದಿಸುತ್ತಿದ್ದುದಕ್ಕೆ ಈ ಭಾವನೆಯೂ ಒಂದು  ಕಾರಣವಾಗಿತ್ತು.

ಧ್ವಂಸಗೊಳಿಸಲಾದ ಬಾಬರಿ ಮಸೀದಿಯನ್ನು ಮತ್ತೆ ಅಲ್ಲೇ  ನಿರ್ಮಾಣ ಮಾಡಬೇಕು ಎಂಬ ವಾದದ ಹಿಂದಿದ್ದುದು ಕೇವಲ ಮಸೀ ದಿಯೊಂದರ ನಿರ್ಮಾಣದ ಆಗ್ರಹವಲ್ಲ, ತೋಳುಬಲದ ಮೂಲಕ ಸಂವಿಧಾವನ್ನು ಹಾಡುಹಗಲೇ ಅವಮಾನಿಸಲಾದ ಘಟನೆಗೆ  ನ್ಯಾಯ ಸಲ್ಲಬೇಕು ಎಂಬ ಕಾರಣದಿಂದಾಗಿತ್ತು. ಈ ದೇಶದ ನ್ಯಾಯವ್ಯವಸ್ಥೆಯನ್ನು ಒಪ್ಪುವ ಯಾರೂ 1992 ಡಿಸೆಂಬರ್ 6ರಂದು  ನಡೆಸಲಾದ ಕೃತ್ಯವನ್ನು ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ. ಅದು ನ್ಯಾಯದ ಅಣಕ. ನ್ಯಾಯಾಂಗಕ್ಕೆ ಮಾಡಲಾದ ಅಗೌರವ. ಸ್ವಾತಂತ್ರ‍್ಯ  ಲಭ್ಯವಾಗಿ 6 ದಶಕಗಳು ಕಳೆದ ಬಳಿಕವೂ ಸಂವಿಧಾನವನ್ನು ಯಥಾರೂಪದಲ್ಲಿ ಜಾರಿಗೆ ತರಲು ನಮ್ಮ ಆಡಳಿತ ವ್ಯವಸ್ಥೆಗಳು ಹೇಗೆ  ವಿಫಲವಾಗುತ್ತಿವೆ ಎಂಬುದಕ್ಕೆ ಸಾಕ್ಷ್ಯ  ಒದಗಿಸಿದ ಘಟನೆ.

ಯಾವುದೇ ಮಸೀದಿ ಅಥವಾ ಮಂದಿರ ವಿವಾದಕ್ಕೆ ಒಳಗಾಗುವುದು ಬೇರೆ, ಆ ವಿವಾದವನ್ನು ತೋಳುಬಲದಿಂದ ಬಗೆಹರಿಸುವೆವು  ಎಂದು ಸಾರುವುದು ಬೇರೆ. ಈ ದೇಶ ಸಂವಿಧಾನವನ್ನು ಒಪ್ಪಿಕೊಂಡ ಮೇಲೆ ವಿವಾದ ಪರಿಹರಿಸುವುದಕ್ಕೆ ನ್ಯಾಯಾಲಯವನ್ನು ಆ ಶ್ರಯಿಸಬೇಕಾದುದು ಪ್ರತಿಯೋರ್ವ ಪ್ರಜೆಯ ಹೊಣೆಗಾರಿಕೆ. ಆದ್ದರಿಂದ ನ್ಯಾಯಾಲಯವೆಂಬುದು ದುರ್ಬಲರು ಎಡತಾಕುವ ಜಾಗ  ಮತ್ತು ಪ್ರಬಲರಿಗೆ ಅದರ ಅಗತ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗುವುದು ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಬಾಬರಿ  ಮಸೀದಿ ವಿವಾದವು ನ್ಯಾಯಾಲಯದಲ್ಲಿತ್ತು ಮತ್ತು ವಿಚಾರಣೆಯ ಹಂತದಲ್ಲೂ ಇತ್ತು. ಈ ನಡುವೆಯೇ ತೋಳುಬಲದ ಮೂಲಕ  ಅದನ್ನು ಉರುಳಿಸಲಾಯಿತು. ವಿರೋಧ ಎದುರಾದದ್ದು ಈ ಧ್ವಂಸಕಾರ್ಯದ ಬಗ್ಗೆ. ಬಾಬರಿ ಮಸೀದಿ ವಿವಾದದ ಅಂತಿಮ ತೀರ್ಪು  ಬರೆದ ಸುಪ್ರೀಮ್ ಕೋರ್ಟು ಕೂಡ ಈ ಧ್ವಂಸವನ್ನು ತಪ್ಪು ಎಂದಿತ್ತು. ಇದೀಗ ಸುಪ್ರೀಮ್ ನೀಡಿರುವ 5 ಎಕರೆ ಭೂಮಿಯು ಮತ್ತೆ  ದೇಶದ ಗಮನ ಸೆಳೆದಿದೆ. ನಿಜವಾಗಿ,

ಆ ಭೂಮಿಯಲ್ಲಿ ಒಂದು ಭವ್ಯ ಮಸೀದಿಯೊಂದನ್ನು ಮಾತ್ರ ಕಟ್ಟಿರುತ್ತಿದ್ದರೆ ಅದು ಸುದ್ದಿಯ ಕೇಂದ್ರವಾಗುವ ಸಾಧ್ಯತೆ ಕಡಿಮೆಯಿತ್ತು.  ಆದರೆ ಭೂಮಿಯನ್ನು ಸ್ವೀಕರಿಸಿದವರು ಬಿಡುಗಡೆಗೊಳಿಸಿರುವ ನೀಲನಕ್ಷೆಯ ವಿವರಗಳು ಕುತೂಹಲಕಾರಿಯಾಗಿವೆ. ಇಲ್ಲಿ 2000  ಮಂದಿ ಒಮ್ಮೆಗೇ ನಮಾಝï ಮಾಡಬಹುದಾದಷ್ಟು ವಿಸ್ತಾರವುಳ್ಳ ಮಸೀದಿಯ ನಿರ್ಮಾಣದ ಜೊತೆಜೊತೆಗೇ 300 ಹಾಸಿಗೆಗಳುಳ್ಳ  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಪಾಕಶಾಲೆ ಮತ್ತು ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಒಂದುರೀತಿಯಲ್ಲಿ, 1992  ಡಿಸೆಂಬರ್ 6ರಂದು ನಡೆದ ಐತಿಹಾಸಿಕ ಅನ್ಯಾಯಕ್ಕೆ ನೀಡಲಾದ ರಚನಾತ್ಮಕ ತಿರುಗೇಟು ಇದು. ಅಂದಹಾಗೆ,

ಮುಸ್ಲಿಮರಿಗೆ ಮಸೀದಿಯ ಕೊರತೆಯಿಲ್ಲ. ಹಾಗೆಯೇ ಮಸೀದಿಗಳೆಂದರೆ ಮುಸ್ಲಿಮರು ಮಾತ್ರ ಆರಾಧಿಸುವ ಜಾಗವೂ ಹೌದು.  ಆದ್ದರಿಂದ ಮಸೀದಿಗಳು ಹೆಚ್ಚೆಚ್ಚು ನಿರ್ಮಾಣವಾಗುವುದರಿಂದ ನಮಾಝï‌ನ ಸ್ಥಳಗಳು ಹೆಚ್ಚಾಗಬಹುದೇ ಹೊರತು ಅದರಿಂದ  ಮುಸ್ಲಿಮೇತರರಿಗೆ ಪ್ರಯೋಜನವಾಗುವುದಕ್ಕೆ ಸಾಧ್ಯವಿಲ್ಲ. ಇದು ಮಂದಿರ, ಚರ್ಚ್, ಗುರುದ್ವಾರಗಳಿಗೂ ಅನ್ವಯಿಸುತ್ತದೆ. ಆದ್ದರಿಂದ  ಉರುಳಿದ ಬಾಬರಿ ಮಸೀದಿಗೆ ಬದಲಾಗಿ ಒಂದು ಮಸೀದಿ ಕಟ್ಟುವುದು ಮುಸ್ಲಿಮ್ ಸಮುದಾಯದ ತುರ್ತು ಅಗತ್ಯವೇನೂ  ಆಗಿರಲಿಲ್ಲ. ಆದರೆ, ಆಸ್ಪತ್ರೆ, ಮ್ಯೂಸಿಯಂಗಳು ಹಾಗಲ್ಲ. ಆಸ್ಪತ್ರೆಯೆಂಬುದು ಧರ್ಮಾತೀತ. ಬಾಬರಿ ಮಸೀದಿಯನ್ನು  ಉರುಳಿಸಿದವರನ್ನೂ ಅದನ್ನು ಬೆಂಬಲಿಸಿದವರನ್ನೂ ಬೆಂಬಲಿಸದವರನ್ನೂ ಸಮಾನವಾಗಿ ಸ್ವೀಕರಿಸಿಕೊಳ್ಳುವ ಜಾಗ. ಮುಂದೊಂದು  ದಿನ ಅಂಥದ್ದೊಂದು ವಾತಾವರಣ ನಿರ್ಮಾಣವಾಗಲೂ ಬಹುದು. ಉರುಳಿಸಿದುದನ್ನು ಬೆಂಬಲಿಸಿದವರು ಅಥವಾ ಉರುಳಿಸಿದವರ  ಪೀಳಿಗೆಯೇ ಮುಂದೊಂದು ದಿನ ಈ ಆಸ್ಪತ್ರೆಯನ್ನು ಪ್ರವೇಶಿಸುವಾಗ ಹಳತು ನೆನಪಾಗಲೂಬಹುದು. ರಚನಾತ್ಮಕ ಪ್ರತಿಕ್ರಿಯೆ ಅ ನ್ನುವುದು ಇದಕ್ಕೆ. ಅವರನ್ನು ಮರು ಅವಲೋಕನಕ್ಕೆ ಮತ್ತು ಪಶ್ಚಾತ್ತಾಪಕ್ಕೆ ಇಂಥ ಬೆಳವಣಿಗೆಗಳು ಪ್ರೇರಣೆಯನ್ನು ನೀಡುತ್ತವೆ. ಇದರ  ಜೊತೆಜೊತೆಗೇ ಮ್ಯೂಸಿಯಂ ನಿರ್ಮಾಣವನ್ನೂ ಇಟ್ಟು ನೋಡಬೇಕು. ಮ್ಯೂಸಿಯಂನಲ್ಲಿ ಏನೆಲ್ಲ ಇರಲಿವೆ ಎಂಬುದು ಇನ್ನೂ  ಸ್ಪಷ್ಟವಾಗಿಲ್ಲವಾದರೂ ಆ ಮ್ಯೂಸಿಯಂ ಧ್ವಂಸಗೊಳಿಸಲಾದ ಬಾಬರಿ ಮಸೀದಿ ವಿವರಗಳನ್ನು ಒಳಗೊಂಡಿರುವ ಎಲ್ಲ ಸಾಧ್ಯತೆಗಳಿವೆ  ಮತ್ತು ಅದು ಅತೀ ಅಗತ್ಯ ಕೂಡ. ಅಷ್ಟಕ್ಕೂ,

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರಿಗೆ ಮತ್ತು ಅದರ ಸಂಚು ಹೆಣೆದವರಿಗೆ ಶಿಕ್ಷೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಕೋರ್ಟು  ತೀರ್ಪು ಬರುವಾಗ ಅವರೆಲ್ಲ ಜೀವಂತ ಇರುತ್ತಾರೋ ಎಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಈಗಾಗಲೇ ಆ ಧ್ವಂಸ ಘಟನೆಗೆ 3 ದ ಶಕಗಳಾಗುತ್ತಾ ಬಂದಿವೆ. ಆರೋಪಿಗಳಲ್ಲಿ ಹಲವರು ಸಹಜ ಸಾವಿಗೂ ಒಳಗಾಗಿದ್ದಾರೆ. ಮಾತ್ರವಲ್ಲ, ಒಂದೆರಡು ತಲೆಮಾರುಗಳ  ಬಳಿಕ ಆ ಧ್ವಂಸ ಘಟನೆಯ ನೆನಪೇ ಅಳಿದು ಹೋಗುವುದಕ್ಕೂ ಅವಕಾಶ ಇದೆ. ಆದ್ದರಿಂದ ಮ್ಯೂಸಿಯಂ ನಿರ್ಮಾಣ ಬಹಳ  ಪ್ರಾಮುಖ್ಯವಾದದ್ದು ಅನ್ನಿಸುತ್ತದೆ. ಬಾಬರಿ ಮಸೀದಿಯ ಆರಂಭದಿಂದ ಹಿಡಿದು 1992 ಡಿಸೆಂಬರ್ 6ರಂದು ಧ್ವಂಸಗೈಯಲಾದ  ಘಟನೆಯವರೆಗೆ ಎಲ್ಲ ವಿವರಗಳನ್ನೂ ವೀಕ್ಷಕರಿಗೆ ಒದಗಿಸುವ ಮ್ಯೂಸಿಯಂ ರಚನೆಯಾದರೆ ಅದರಿಂದ ಭವಿಷ್ಯದ ಪೀಳಿಗೆಯು  ವಿಸ್ಮೃತಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ.

ಯಾವುದೇ ಒಂದು ಸಮುದಾಯ ಸಶಕ್ತವಾಗಿ ಬೆಳೆಯಬೇಕೆಂದರೆ ಅದಕ್ಕೆ ಗತ ಇತಿಹಾಸದ ಅರಿವು ಇರಬೇಕಾಗುತ್ತದೆ. ಗತ  ತಲೆಮಾರು ಎದುರಿಸಿದ ಸವಾಲು, ಸಂಘಟಿಸಿದ ಹೋರಾಟ ಮತ್ತು ಮಾಡಿದ ತ್ಯಾಗವನ್ನು ತಿಳಿದುಕೊಂಡಿರಬೇಕಾಗುತ್ತದೆ. ಬೈತುಲ್  ಮಕ್ದಿಸ್‌ನ ಪ್ರಸ್ತಾಪ ಆದಾಗಲೆಲ್ಲ ಸಲಾಹುದ್ದೀನ್ ಅಯ್ಯೂಬಿಯವರು ನೆನಪಿಗೆ ಬರುವುದಕ್ಕೆ ಕಾರಣ ಈ ಇತಿಹಾಸದ ಅರಿವು. ಅವರ  ಹೋರಾಟದ ಯಾವ ಮಗ್ಗುಲೂ ದಾಖಲುಗೊಳ್ಳದೇ ಇರುತ್ತಿದ್ದರೆ ಇವತ್ತು ಬೈತುಲ್ ಮಕ್ದಿಸ್‌ನ ಜೊತೆ ಅವರ ನೆನಪು ಆಗುವುದಕ್ಕೆ  ಸಾಧ್ಯವಿರಲಿಲ್ಲ. ಆದ್ದರಿಂದ ಹೊಸ ತಲೆಮಾರಿಗೆ ಹಳೆ ಇತಿಹಾಸವನ್ನು ತಿಳಿಸಬೇಕಾದುದು ಅವರ ಸಶಕ್ತ ಬೆಳವಣಿಗೆಯ ದೃಷ್ಟಿಯಿಂದ  ತುಂಬಾ ಅಗತ್ಯ. ಈ ಹಿನ್ನೆಲೆಯಲ್ಲಿ ಧನ್ನಿಪುರದಲ್ಲಿ ನಿರ್ಮಾಣವಾಗುವ ಮ್ಯೂಸಿಯಂ ಮತ್ತು ಆಸ್ಪತ್ರೆ ಅತ್ಯಂತ ಬುದ್ಧಿವಂತಿಕೆಯ ನಡೆ.  ಇದು ಸ್ವಾಗತಾರ್ಹ.

No comments:

Post a Comment