ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲದ ವಿರೋಧ ಪಕ್ಷ. ಅಖಿಲೇಶ್ ಯಾದವ್ ಮತ್ತು ಮಾಯಾವತಿಯಧ್ವಯರ ನಡುವೆ ನಜ್ಜುಗುಜ್ಜಾಗಿರುವ ಕಾಂಗ್ರೆಸ್‍ಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ವಿಶಿಷ್ಟ ತಂತ್ರಗಳ ಅಗತ್ಯವಿದೆಯೆಂಬುದು ಒಪ್ಪತಕ್ಕ ಮಾತು. ಅಂದಹಾಗೆ, ಹಾಥರಸ್ ಪ್ರಕರಣದಲ್ಲಿ ಕಾಂಗ್ರೆಸ್‍ನ ನಡೆ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲ, ದೇಶದಲ್ಲೇ ಮೆಚ್ಚುಗೆಯನ್ನು ಪಡೆಯಿತು. ಉತ್ತರ ಪ್ರದೇಶದ ಪೊಲೀಸ್ ಪಡೆಯನ್ನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಎದುರಿಸಿ ನಿಂತ ರೀತಿ ಸರ್ವರ ಗಮನವನ್ನೂ ಸೆಳೆದಿತ್ತು. ಮೊದಲ ಬಾರಿ ಯೋಗಿ ಸರಕಾರ ಕಾಂಗ್ರೆಸ್‍ನ ಮುಂದೆ ಶರಣಾಗಿತ್ತು. ನಿಜವಾಗಿ, ಕಾಂಗ್ರೆಸ್ ಈ ದೇಶದಲ್ಲಿ ಗುರುತಿಸಿಕೊಳ್ಳಬೇಕಾದದ್ದೇ ಹೀಗೆ. ಪ್ರಭುತ್ವದ ಜನವಿರೋಧಿ ನೀತಿಗಳನ್ನು ಎತ್ತಿಕೊಂಡು ಜನ ಚಳವಳಿ ಕಟ್ಟುವುದು ಅನುಭವಿ ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ಅದರ ಹೊಣೆಗಾರಿಕೆ. ಆದರೆ,
2014ರ ಬಳಿಕ ದೇಶದಲ್ಲಾದ ರಾಜಕೀಯ ಬದಲಾವಣೆಯು ಮಿಕ್ಕೆಲ್ಲ ಪಕ್ಷಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದ್ದು ಕಾಂಗ್ರೆಸ್ ಪಕ್ಷದ ಮೇಲೆ. ಮನ್‍ಮೋಹನ್ ಸಿಂಗ್ ಪರದೆಯ ಹಿಂದೆ ಸರಿದರು. ಮಾರ್ಗದರ್ಶನ ಮಾಡಬೇಕಿದ್ದ ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾದರು. ಮಾತ್ರವಲ್ಲ, ಕಾಂಗ್ರೆಸ್‍ನೊಂದಿಗೆ ಅಂತರವನ್ನು ಕಾಯ್ದುಕೊಂಡರು. ಚಿದಂಬರಂ, ಶಶಿ ತರೂರ್‍ರಂತಹವರನ್ನು ಕಾನೂನು ಬೆನ್ನಟ್ಟಿತು. ಸೋನಿಯಾ ಗಾಂಧಿಯವರನ್ನು ಅನಾರೋಗ್ಯ ಇನ್ನಿಲ್ಲದಂತೆ ಕಾಡತೊಡಗಿತು. ರಾಹುಲ್ ಗಾಂಧಿಯವರು ಪಕ್ಷದ ಚುಕ್ಕಾಣಿ ಹಿಡಿದರಾದರೂ ಅವರ ಬೆನ್ನಿಗೆ ನಿಲ್ಲುವಲ್ಲಿ ಉಳಿದ ಹಿರಿಯ ನಾಯಕರು ಹಿಂಜರಿಕೆ ತೋರಿದರು. ರಾಹುಲ್ ಮೇಲೆ ಬಿಜೆಪಿಯ ಹಿರಿ ನಾಯಕರಿಂದ ಹಿಡಿದು ಮರಿ ನಾಯಕರ ವರೆಗೆ ಎಲ್ಲರೂ ಪ್ರತಿದಿನ ವ್ಯಂಗ್ಯ, ಟೀಕೆ, ಭತ್ರ್ಸನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾಗ್ಯೂ ಈ ನಾಯಕರು ಅವರ ರಕ್ಷಣೆಗೆ ನಿಲ್ಲುವ ಬದಲು ತಮ್ಮದೇ ವಿಚಾರಧಾರೆಯನ್ನು ಟ್ವೀಟ್ ಮಾಡುತ್ತಾ, ಅವಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸಿದರು. ಒಂದೋ ರಾಹುಲ್ ಗಾಂಧಿ ಪಕ್ಷಾಧ್ಯಕ್ಷ ಹುದ್ದೆ ವಹಿಸಿಕೊಳ್ಳುವುದನ್ನು ಇವರು ಒಪ್ಪಬಾರದಿತ್ತು ಅಥವಾ ಒಪ್ಪಿಕೊಂಡ ಮೇಲೆ ಬೆಂಬಲಿಸಬೇಕಿತ್ತು. ಆದರೆ,
ಇವಾವುವೂ ನಡೆಯಲಿಲ್ಲ. ಕಾಶ್ಮೀರದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದಾಗ ಅಥವಾ ತ್ರಿವಳಿ ತಲಾಕ್‍ಗೆ ಅತ್ಯಂತ ಅಸಮರ್ಪಕ ಮತ್ತು ಮಹಿಳಾ ವಿರೋಧಿಯಾದ ಕಾನೂನನ್ನು ಜಾರಿಗೆ ತಂದಾಗ ಅಥವಾ ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಮ್ ತೀರ್ಪು ಬಂದಾಗ... ಈ ಎಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರು ತಮ್ಮದೇ ಆದ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೇ ಹೊರತು ಒಂದು ಪಕ್ಷವಾಗಿ ಭಾರತೀಯರ ಮುಂದೆ ಕಾಣಿಸಿಕೊಳ್ಳಲಿಲ್ಲ. ಒಬ್ಬೊಬ್ಬ ನಾಯಕರು ಒಂದೊಂದು ಅಭಿಪ್ರಾಯ ಹಂಚಿಕೊಂಡರು. ಅದೇವೇಳೆ, ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರ ಅಭಿಪ್ರಾಯಗಳಲ್ಲೂ ಎಷ್ಟು ಸಾಮ್ಯತೆ ಇತ್ತೆಂದರೆ,
ಗೊಂದಲದ ಸಣ್ಣ ಎಳೆಯೂ ಅಲ್ಲಿರಲಿಲ್ಲ. ಕಾಂಗ್ರೆಸ್‍ನ ವೈಚಾರಿಕ ಸ್ವಾತಂತ್ರ್ಯವನ್ನು ಈ ಭಿನ್ನ ಅಭಿಪ್ರಾಯ ಸ್ಪಷ್ಟಪಡಿಸುತ್ತದೆ ಮತ್ತು ಇದು ಪ್ರಜಾತಂತ್ರದ ಸೌಂದರ್ಯ ಎಂದು ಸಮರ್ಥಿಸಿಕೊಳ್ಳಬಹುದಾದರೂ ಮುಖ್ಯ ವಿಷಯಗಳಲ್ಲಿ ಈ ಮಟ್ಟದ ಭಿನ್ನಾಭಿಪ್ರಾಯವು ಪಕ್ಷವನ್ನು ಎಲ್ಲಿಗೆ ತಲುಪಿಸೀತು ಎಂಬ ಪ್ರಶ್ನೆಗೂ ಕಾರಣವಾಗುತ್ತದೆ. ಜನರಲ್ಲೂ ಈ ಭಿನ್ನ ಅಭಿಪ್ರಾಯಗಳು ಗೊಂದಲವನ್ನು ಹುಟ್ಟು ಹಾಕುತ್ತದೆ. ಕಾಂಗ್ರೆಸ್‍ನ ಇಂದಿನ ದಯನೀಯ ಸ್ಥಿತಿಯಲ್ಲಿ ಈ ವೈಚಾರಿಕ ಅಸ್ಪಷ್ಟತೆಗೂ ಬಹುದೊಡ್ಡ ಪಾಲಿದೆ. ಈ ಗೊಂದಲದಿಂದ ಲಾಭವಾದದ್ದು ಬಿಜೆಪಿಗೆ. ಅದು ರಾಹುಲ್ ಗಾಂಧಿಯನ್ನೇ ಪ್ರಶ್ನೆಯ ಮೊನೆಯಲ್ಲಿಟ್ಟು ಪ್ರತಿದಿನ ಚುಚ್ಚತೊಡಗಿತು. ಅವರನ್ನು ನಾಲಾಯಕ್ ಎಂಬಂತೆ ಪದೇ ಪದೇ ಬಿಂಬಿಸಿತು. ಈ ನಡುವೆ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಬಿಜೆಪಿ ಪದೇ ಪದೇ ಜಾರಿಗೆ ತರುತ್ತಿರುವ ಕಾಯಿದೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲ ಕಾಂಗ್ರೆಸ್‍ನಲ್ಲಿ ದಿನೇದಿನೇ ಜಟಿಲವಾಗತೊಡಗಿತು. ಎಲ್ಲಾದರೂ ಕಾಯಿದೆಯನ್ನು ವಿರೋಧಿಸಿದರೆ ಬಿಜೆಪಿಯಿಂದ ಎಲ್ಲಿ ಮುಸ್ಲಿಮ್ ಓಲೈಕೆಯ ಪಟ್ಟ ದಕ್ಕುವುದೋ ಎಂಬ ಭಯ. ಹಾಗಂತ, ವಿರೋಧಿಸದಿದ್ದರೆ ತನ್ನ ಅಗತ್ಯವೇನು ಎಂಬ ಪ್ರಶ್ನೆ. 2014ರಲ್ಲಿ ಆರಂಭವಾದ ಈ ಗೊಂದಲವು ಬರಬರುತ್ತಾ ತೀವ್ರ ರೂಪವನ್ನು ಪಡೆದುಕೊಳ್ಳತೊಡಗಿತು. ಈ ಕಾರಣದಿಂದಾಗಿ ತೀವ್ರ ಟೀಕೆಗೂ ಗುರಿಯಾಯಿತು.
ಇದೀಗ ಉತ್ತರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಗಾಯಿ ಬಚಾವೋ ಅಭಿಯಾನವು ಇಂಥದ್ದೇ ಒಂದು ಗೊಂದಲದ ಕೂಸು ಎಂದೇ ಹೇಳಬೇಕಾಗುತ್ತದೆ. ಉತ್ತರ ಪ್ರದೇಶದಲ್ಲಿ ಗೋವುಗಳು ಬೀದಿಗೆ ಬಿದ್ದಿವೆ ಮತ್ತು ಅವುಗಳ ಪೋಷಣೆಯಲ್ಲಿ ಗೋಶಾಲೆಗಳು ವಿಫಲವಾಗಿವೆ ಎಂಬುದು ಈ ಗಾಯಿ ಬಚಾವೋ ಅಭಿಯಾನಕ್ಕೆ ಕಾರಣವೆಂದು ಹೇಳಬಹುದಾದರೂ ಈ ಕಾರಣವನ್ನು ಮೀರಿ ನಿಲ್ಲುವುದಕ್ಕೆ ಬಿಜೆಪಿಗೆ ಸಾಧ್ಯವಿದೆ. ಗೋವನ್ನು ಮುಂದಿಟ್ಟು ರಾಜಕೀಯ ಪ್ರಾರಂಭಿಸಿದ್ದು ಬಿಜೆಪಿ. ಗೋಹತ್ಯಾ ನಿಷೇಧ ಕಾಯ್ದೆಯನ್ನು ಉತ್ತರ ಪ್ರದೇಶದಲ್ಲಿ ಕಠಿಣವಾಗಿ ಜಾರಿಗೊಳಿಸುತ್ತಿರುವುದಾಗಿ ಹೇಳುತ್ತಿರುವುದೂ ಬಿಜೆಪಿ. ಆದ್ದರಿಂದ ಕಾಂಗ್ರೆಸ್‍ನ ಗಾಯಿ ಬಚಾವೋದಿಂದ ಜನರು ಪ್ರಭಾವಿತರಾಗಿ ಬಿಜೆಪಿ ವಿರೋಧಿಯಾಗುತ್ತಾರೆಂದು ನಂಬುವುದು ಅಸೂಕ್ತ. ಗೋವಿಗೆ ಸಂಬಂಧಿಸಿ ಈಗಾಗಲೇ ಓಟು ಪೇಟೆಂಟ್ ಪಡೆದುಕೊಂಡಿರುವ ಬಿಜೆಪಿಯನ್ನು ಗಾಯಿ ಬಚಾವೋದಿಂದ ಅಲುಗಾಡಿಸಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ಅಲ್ಲದೇ ಜನರಿಗೆ ಇನ್ನೊಂದು ಬಿಜೆಪಿಯ ಅಗತ್ಯವೂ ಇಲ್ಲ. ಕಾಂಗ್ರೆಸನ್ನು ಇನ್ನೊಂದು ಬಿಜೆಪಿಯಾಗಿ ಜನರು ಸ್ವೀಕರಿಸುವುದಕ್ಕೂ ಸಾಧ್ಯವಿಲ್ಲ. ಸದ್ಯದ ಅಗತ್ಯ ಏನೆಂದರೆ,
ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಸುಳ್ಳುಗಳನ್ನು ಜನರಿಗೆ ತಿಳಿಸುವ ಅಭಿಯಾನ ಕೈಗೊಳ್ಳುವುದು. ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ ಜಾಗತಿಕವಾಗಿಯೇ ಈಗಲೂ ಪ್ರಥಮ ಅಥವಾ ದ್ವಿತೀಯ ಸ್ಥಾನಗಳಲ್ಲಿ ಸ್ಥಿರವಾಗಿರುವುದನ್ನು ಪರಿಣಾಮಕಾರಿಯಾಗಿ ಜನರ ಮನಸ್ಸಿಗೆ ಮುಟ್ಟಿಸುವುದು. ಹಾಗೆಯೇ ಉತ್ತರ ಪ್ರದೇಶದ ಸರಕಾರ ಜಾರಿಗೆ ತರುತ್ತಿರುವ ಸಂವಿಧಾನ ವಿರೋಧಿ ಕಾಯ್ದೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು. ಹಾಥರಸ್ ಪ್ರಕರಣದಲ್ಲಿ ತೋರಿದಂಥ ನಿರ್ಭೀತಿ ಚಳವಳಿಯನ್ನು ಹಮ್ಮಿಕೊಳ್ಳುವುದು. ಹಾಗಂತ,
ಇದು ಉತ್ತರ ಪ್ರದೇಶಕ್ಕೆ ಮಾತ್ರ ಅನ್ವಯವಾಗುವ ಮಾತಲ್ಲ. ಕಾಂಗ್ರೆಸ್ ಮೊಟ್ಟಮೊದಲು ಬಿಜೆಪಿಯ ಬಿ ಪಕ್ಷವಾಗುವ ಇರಾದೆಯನ್ನು ಕೈಬಿಡಬೇಕು. ಸಂವಿಧಾನವನ್ನು ಎತ್ತಿ ಹಿಡಿಯುವ ವೇಳೆ, ಬಿಜೆಪಿ ಏನು ಹೇಳುತ್ತೋ ಎಂಬ ಅಳುಕು ಅದನ್ನು ಕಾಡಬಾರದು. ಈ ದೇಶಕ್ಕೆ ಈಗ ಪ್ರಬಲ ಜಾತ್ಯತೀತ ಮತ್ತು ಸರ್ವರನ್ನೂ ಜೊತೆಗೆ ಕೊಂಡೊಯ್ಯುವ ಪಕ್ಷವೊಂದರ ಅಗತ್ಯವಿದೆ. ರೈತ ಪ್ರತಿಭಟನೆ ಇವತ್ತು ಇಷ್ಟು ದೀರ್ಘ ಅವಧಿವರೆಗೆ ಸಾಗಿಯೂ ಪರಿಹಾರಗೊಳ್ಳದೇ ಹೋಗಿದ್ದರೆ ಮತ್ತು ಕೇಂದ್ರ ಸರಕಾರ ರೈತರನ್ನು ಸತಾಯಿಸುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ದುರ್ಬಲವಾಗಿರುವುದೂ ಒಂದು ಕಾರಣವಾಗಿದೆ. ರೈತರ ಪರ ದೇಶದಾದ್ಯಂತ ಜನಬೆಂಬಲವ ನ್ನು ಹುಟ್ಟು ಹಾಕುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ವೈಚಾರಿಕ ಅಸ್ಪಷ್ಟತೆಯನ್ನು ಮೊದಲು ಸರಿಪಡಿಸಿಕೊಳ್ಳಲಿ. ಬಿಜೆಪಿಯ ಪ್ರಭಾವಳಿಯಿಂದ ಹೊರಬರಲಿ.
No comments:
Post a Comment