100 ವರ್ಷಗಳ ಹಿಂದಿನ ಜನನ ಪ್ರಮಾಣದ ಅಂಕಿ ಅಂಶಗಳನ್ನು ಎತ್ತಿಕೊಂಡು ಈಗಿನ ಪರಿಸ್ಥಿತಿಗೆ ಹೋಲಿಕೆ ಮಾಡುವುದು ಸಾಧುವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಈ ಪ್ರಶ್ನೆ ಅಸಾಧುವಲ್ಲ. ಆದರೆ, ಈ ಪ್ರಶ್ನೆ ಹುಟ್ಟು ಹಾಕಬಹುದಾದ ಮೇಲು ಮೇಲಿನ ಸಮರ್ಥನೆಗಳ ಹಿನ್ನೆಲೆಯನ್ನು ನೋಡುವಾಗ ಈ ಪ್ರಶ್ನೆ ಅಸಾಧು ಮತ್ತು ಮೂಗು ಸೋರುವುದಕ್ಕೆ ಮೂಗನ್ನು ಕೊಯ್ಯುವುದೇ ಪರಿಹಾರ ಎಂದು ಹೇಳುವಷ್ಟು ಅಸಾಧು.
ಭಯ ಮತ್ತು ಬಯಕೆ- ಇವೆರಡನ್ನೂ ಮನುಷ್ಯ ಸದಾ ಜೊತೆಗಿಟ್ಟುಕೊಂಡೇ ಬದುಕುತ್ತಿರುತ್ತಾನೆ. ಬಯಕೆಯು ಮನುಷ್ಯನಲ್ಲಿ ಮಹತ್ವಾಕಾಂಕ್ಷೆಗೆ ಕಾರಣವಾಗುತ್ತದೆ. ಇನ್ನಷ್ಟು ಮತ್ತಷ್ಟು ಎಂದು ಮನಸ್ಸನ್ನು ಸದಾ ಸಕ್ರಿಯಗೊಳಿಸುತ್ತಿರುತ್ತದೆ. ದಿನಾ ಬಸ್ಸಲ್ಲಿ ಪ್ರಯಾಣಿಸುವವನಲ್ಲಿ ಬೈಕ್ ಖರೀದಿಯ ಬಗ್ಗೆ ಒಲವು ಮೂಡುವುದು ಈ ಕಾರಣದಿಂದಲೇ. ಪುಟ್ಟ ಗುಡಿಸಲನ್ನು ಒಂದು ಮನೆಯಾಗಿ ಮಾರ್ಪಡಿಸುವುದೋ, ಪುಟ್ಟ ಕಿರಾಣಿ ಅಂಗಡಿಯನ್ನು ಸೂಪರ್ ಬಝಾರ್ ಆಗಿ ಪರಿವರ್ತಿಸಲು ಶ್ರಮಿಸುವುದೋ ಇತ್ಯಾದಿಗಳೆಲ್ಲಕ್ಕೂ ಈ ಬಯಕೆಯೇ ಅಡಿಪಾಯ ಆಗಿರುತ್ತದೆ. ಒಂದು ಪುಟ್ಟ ಮಳೆಗೂ ಇವತ್ತಿನ ನಗರಗಳು ಕೊಳವಾಗಿ ಪರಿವರ್ತನೆಯಾಗುವುದರ ಹಿಂದೆ ಕೆಲಸ ಮಾಡಿರುವುದೂ ಈ ಬಯಕೆಯೇ. ಯಾವುದೇ ಅಭಿವೃದ್ಧಿ ಸುರಕ್ಷಿತವೆನಿಸಿಕೊಳ್ಳಬೇಕಾದರೆ ಪ್ರಕೃತಿಯನ್ನು ಗೌರವಿಸಬೇಕು. ನಗರಗಳು ಆಧುನಿಕ ಅಭಿವೃದ್ಧಿ ಮಾದರಿಯ ಭಾಗವಾಗಿರುವುದರಿಂದ ಅದರ ನಿರ್ಮಾಣದ ವೇಳೆ ಸೂಕ್ತ ಚರಂಡಿ ವ್ಯವಸ್ಥೆ, ನೀರಿಂಗಿಸುವ ವಿಧಾನಗಳಿಗೆ ಮಹತ್ವ ಕೊಡಬೇಕಾಗುತ್ತದೆ. ಆದರೆ,
ಮನುಷ್ಯನೊಳಗಿನ ಬಯಕೆಯು ಈ ಮೂಲಭೂತ ಅಂಶಗಳನ್ನು ಕಡೆಗಣಿಸಿ ನಗರವನ್ನು ನಿರ್ಮಿಸುವಷ್ಟು ದುರಾಸೆಯದ್ದಾದಾಗ, ಅರ್ಧಗಂಟೆಯ ಮಳೆಗೂ ನಗರ ಕೊಳವಾಗುತ್ತದೆ. ಇದಕ್ಕೆ ಪರಿಹಾರ ಮಳೆಯನ್ನೇ ಸ್ಥಗಿತಗೊಳಿಸುವುದಲ್ಲ. ಮಳೆ ನೀರು ಹರಿದು ಹೋಗುವುದಕ್ಕೆ ಪೂರಕವಾದ ನೀಲನಕ್ಷೆಯನ್ನು ತಯಾರಿಸಿ ಆ ಬಳಿಕ ನಗರ ನಿರ್ಮಾಣ ಮಾಡುವುದು. ಆದರೆ,
ನಮ್ಮನ್ನಾಳುವವರ ಅತಿದೊಡ್ಡ ಸಮಸ್ಯೆ ಏನೆಂದರೆ, ಈ ಮೂಲಭೂತ ಸತ್ಯಗಳತ್ತ ಗಮನ ಕೊಡದೇ ಅಥವಾ ಅವನ್ನು ಅಡಗಿಸಿ ಆ ಕೊಳವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಜನರನ್ನು ಯಾಮಾರಿಸುವುದು. ನಿಜವಾಗಿ,
ಸರ್ವ ಎಚ್ಚರಿಕೆಗಳನ್ನೂ ಪಾಲಿಸಿಕೊಂಡು ಮತ್ತು ನಿಯಮಗಳನ್ನು ಚಾಚೂ ತಪ್ಪದೇ ಅನುಸರಿಸಿಕೊಂಡು ನಗರ ನಿರ್ಮಾಣಕ್ಕಿಳಿದರೆ ತಳಮಟ್ಟದ ಕಾಂಟ್ರಾಕ್ಟುದಾರರಿಂದ ಹಿಡಿದು ಜನಪ್ರತಿನಿಧಿವರೆಗೆ ಹಣ ಕೊಳ್ಳೆ ಹೊಡೆಯಲು ಅವಕಾಶ ಕಡಿಮೆ. ಒಂದು ನಗರ ನಿರ್ಮಾಣ ಯೋಜನೆ ರೂಪುಗೊಳ್ಳುವಾಗ ಕೋಟ್ಯಂತರ ರೂಪಾಯಿ ಕಮಿಷನ್ ಲೆಕ್ಕಾಚಾರಗಳೂ ನಡೆಯುತ್ತವೆ. ಕೆಳಗಿನಿಂದ ಮೇಲಿನ ವರೆಗೆ ಕಮಿಷನ್ ವರ್ಗಾವಣೆಯಾಗಬೇಕಾದರೆ ನಗರ ನಿರ್ಮಾಣ ಕಾಮಗಾರಿ ವೇಳೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಬೇಕಾದುದು ತೀರಾ ಅಗತ್ಯ. ಆಗ ನಗರ ಕೊಳವಾಗಲೇ ಬೇಕು. ಸಮಸ್ಯೆ ಇರುವುದೇ ಇಲ್ಲಿ. ಒಂದು ರೀತಿಯಲ್ಲಿ,
ನಮ್ಮನ್ನಾಳುವವರು ಜನಸಂಖ್ಯೆಯ ಕುರಿತೂ ಇಂಥದ್ದೇ ಸುಳ್ಳು ಚಿತ್ರಕತೆಯೊಂದನ್ನು ಹೆಣೆದು ಎಲ್ಲೆಡೆಯೂ ಹಂಚುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಏರುತ್ತಿರುವ ಜನಸಂಖ್ಯೆ ಮಾರಕ, ಅದನ್ನು ನಿಯಂತ್ರಿಸಬೇಕು ಎಂದು ಹೇಳುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ಅಸ್ಸಾಮ್ ಸರಕಾರಗಳು ಈಗಾಗಲೇ ಈ ಬಗ್ಗೆ ಕೆಲವು ಸೂಚನೆಗಳನ್ನು ಹೊರಡಿಸಿವೆ. ಇಬ್ಬರು ಮಕ್ಕಳಿಗಿಂತ ಹೆಚ್ಚಿರುವ ಕುಟುಂಬಕ್ಕೆ ಸರಕಾರಿ ಸೌಲಭ್ಯಗಳ ನಿರಾಕರಣೆಯಂಥ ನಿಯಮಗಳನ್ನು ಅಳವಡಿಸುವುದಾಗಿ ಹೇಳಿಕೊಂಡಿವೆ. ನಿಜವಾಗಿ,
ಇದು ನಗರದ ಕೊಳವನ್ನು ತೋರಿಸಿ ಮಳೆಯನ್ನೇ ನಿಲ್ಲಿಸಬೇಕು ಎಂದು ಒತ್ತಾಯಿಸುವಂತಹ ವಾದ ಇದು. ಭಾರತಕ್ಕೆ ಸ್ವಾತಂತ್ರ‍್ಯ ಲಭಿಸುವಾಗ ಈ ದೇಶದ ಪ್ರತಿ ಕುಟುಂಬದಲ್ಲಿ ಎಷ್ಟು ಮಕ್ಕಳಿದ್ದರೋ ಈಗ ಹಾಗಿಲ್ಲ, ಕಡಿಮೆಯಾಗಿದೆ. ಎಲ್ಲ ಧರ್ಮದವರ ಮನೆಯ ಸ್ಥಿತಿಯೂ ಬಹುತೇಕ ಇದುವೇ. 8-10 ಮಕ್ಕಳಿರುವ ಕುಟುಂಬಗಳು 80-100 ವರ್ಷಗಳ ಹಿಂದೆ ಸಾಮಾನ್ಯವಾಗಿದ್ದುವು. ಈಗ ಈ ಸ್ಥಿತಿ ಬಹುತೇಕ ಈ ದೇಶದ ಎಲ್ಲೂ ಇಲ್ಲ. ಅಂಬೇಡ್ಕರ್ ಅವರ ತಾಯಿ 13 ಮಕ್ಕಳಿಗೆ ಜನ್ಮ ನೀಡಿದ್ದರೂ ಅವರಲ್ಲಿ ಉಳಿದಿರುವುದು 6 ಮಕ್ಕಳು ಮಾತ್ರ. ಮಹಾತ್ಮಾ ಗಾಂಧಿಯವರ 5 ಮಕ್ಕಳಲ್ಲಿ ಒಂದು ಮಗು ಶಿಶು ಪ್ರಾಯದಲ್ಲೇ ಅಸುನೀಗಿತ್ತು. ಅಂದಿನಿAದ ಇಂದಿನ ವರೆಗೆ ಮಕ್ಕಳ ಜನನ ಪ್ರಮಾಣದಲ್ಲಿ ಕುಸಿತವಾಗುತ್ತಾ ಬಂದಿರುವುದನ್ನು ಜನಗಣತಿ ಅಂಕಿ-ಅAಶಗಳು ಸ್ಪಷ್ಟಪಡಿಸುತ್ತಾ ಬಂದಿವೆ. ಯಾವ ಜ ನಸಂಖ್ಯಾ ಕಾಯಿದೆಯನ್ನೂ ಜಾರಿಗೊಳಿಸದೆಯೇ ಆಗಿರುವ ಬದಲಾವಣೆ ಇದು. ಬಡತನ ವ್ಯಾಪಕವಾಗುವಾಗ ಮತ್ತು ಆರೋಗ್ಯ ಸೌಲಭ್ಯವನ್ನು ಜನರಿಗೆ ಸರಕಾರ ಒದಗಿಸದೇ ಇರುವಾಗ ಪ್ರತಿ ಕುಟುಂಬದ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದೂ ಮತ್ತು ಅವುಗಳ ಒದಗಣೆಯಲ್ಲಿ ಸುಧಾರಣೆಯಾದಾಗ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದೂ ಪ್ರತಿ ಜನಗಣತಿಯ ವಿವರಗಳೇ ತಿಳಿಸುತ್ತವೆ. ಆದ್ದರಿಂದ,
ಸದ್ಯ ಆಗಬೇಕಾದುದು ಮೂಗನ್ನು ಕೊಯ್ಯುವ ಕೆಲಸ ಅಲ್ಲ. ಮೂಗಿನ ಸೋರುವಿಕೆಯನ್ನು ತಡೆಯುವುದಕ್ಕೆ ಸೂಕ್ತ ಔಷಧಿಯನ್ನು ವಿತರಿಸುವುದು. ಅಂದರೆ, ದೇಶದ ಜನರ ಬಡತನವನ್ನು ನಿವಾರಿಸುವುದಕ್ಕೆ ಸೂಕ್ತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು. ಆರೋಗ್ಯ ಸುರಕ್ಷಿತತೆಯನ್ನು ಒದಗಿಸುವುದು. ಆದರೆ, ಪ್ರಭುತ್ವ ಜನರ ಹೊಟ್ಟೆ ತುಂಬಿಸುವ ಬದಲು ಹೊಟ್ಟೆಯ ಲ್ಲಿರುವ ಭ್ರೂಣವನ್ನು ಕಿತ್ತುಕೊಳ್ಳುವ ಮಾತನ್ನಾಡುತ್ತಿದೆ. ಖಾಲಿ ಹೊಟ್ಟೆಯ ಬಗ್ಗೆ ಯಾವ ಕಾಳಜಿ ಮತ್ತು ಕನಿಕರವೂ ಇಲ್ಲದ ಪ್ರಭುತ್ವವು ಅವರ ಹೊಟ್ಟೆಯಲ್ಲಿರುವ ಭ್ರೂಣದ ಮೇಲೆ ಕಣ್ಣಿಡುವುದು ಅತ್ಯಂತ ಹೃದಯ ಹೀನ ಕ್ರೌರ್ಯ. ನಿಜವಾಗಿ,
ಈ ದೇಶದ ಸಮಸ್ಯೆ ಬೆಳೆಯುತ್ತಿರುವ ಭ್ರೂಣ ಅಲ್ಲ. ಬೆಳೆಯುತ್ತಿರುವ ಬಡತನ, ನಿರುದ್ಯೋಗ, ಆರೋಗ್ಯ ಸೌಲಭ್ಯದ ಕೊರತೆ, ಮೂಲಭೂತ ಅಗತ್ಯಗಳ ಅಲಭ್ಯತೆ ಇತ್ಯಾದಿ ಇತ್ಯಾದಿ. ಆದರೆ ಸಾರ್ವಜನಿಕರ ಕಣ್ಣಿಗೆ ಇವೆಲ್ಲ ತಕ್ಷಣಕ್ಕೆ ಎದ್ದು ಕಾಣಿಸುವುದಿಲ್ಲ. ಕಾರು, ಬಸ್ಸು, ರೈಲು, ವಿಮಾನಗಳಲ್ಲಿ ಪ್ರಯಾಣಿಸುವಾಗ ನಗರಗಳು, ದೊಡ್ಡ ದೊಡ್ಡ ಇಮಾರತ್‌ಗಳು, ಚಂದದ ರಸ್ತೆಗಳು, ಕೋಟು-ಬೂಟಿನ ಜನರ ದರ್ಶನವಾಗುತ್ತದೆಯೇ ಹೊರತು ಕೊಳಚೆಗೇರಿಗಳು, ಗುಡಿಸಲುಗಳು, ಕಾರ್ಮಿಕರು ಕಾಣಿಸುವುದು ಕಡಿಮೆ ಅಥವಾ ಈ ರಸ್ತೆಗಳು ಹಾದು ಹೋಗುವ ಅಕ್ಕ-ಪಕ್ಕವೆಲ್ಲ ವೈಭವವೇ ಅಧಿಕವಿವೆ. ಆದರೆ ಈ ರಸ್ತೆಯ ಹೊರಗಡೆ ಇನ್ನೊಂದು ಭಾರತ ಇದೆ. ಅಲ್ಲಿ ಬಡತನ, ಹಸಿವು, ಅನಾರೋಗ್ಯ, ಕೊಳಚೆಗೇರಿ ಇತ್ಯಾದಿಗಳು ಧಾರಾಳ ಇವೆ. ಇವೆಲ್ಲ ನಮ್ಮನ್ನಾಳುವವರ ವೈಫಲ್ಯ. ಇವರು ಮನಸ್ಸು ಮಾಡಿದರೆ ಈ ಬಡ ಭಾರತದ ಜೀವನ ಮಟ್ಟವನ್ನು ಸುಧಾರಿಸಬಹುದಿತ್ತು. ಆದರೆ,
ನಮ್ಮನ್ನಾಳುವವರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಬಡವರನ್ನೆಲ್ಲ ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ. ಅವರ ಹೊಟ್ಟೆ ಈ ದೇಶದ ಪಾಲಿಗೆ ಅಪಾಯಕಾರಿ ಎಂದು ಹೇಳತೊಡಗಿದ್ದಾರೆ. ಅಂದಹಾಗೆ,
ಬಯಕೆ ಹೇಗೆ ಮನುಷ್ಯನನ್ನು ಸಕ್ರಿಯಗೊಳಿಸುತ್ತದೋ ಹಾಗೆಯೇ ಭಯವು ಅಸತ್ಯವನ್ನೂ ಸತ್ಯವೆಂದು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಮುಸ್ಲಿಮರ ಜನಸಂಖ್ಯೆ ಏರುತ್ತಿದೆ ಮತ್ತು ಹೀಗಾದರೆ ಮುಂದೊಂದು ದಿನ ಈ ದೇಶ ಮುಸ್ಲಿಮರದ್ದಾಗುತ್ತದೆ ಎಂಬ ಅಸತ್ಯವನ್ನು ನಮ್ಮ ನ್ನಾಳುವವರು ಹಂಚುತ್ತಿದ್ದಾರೆ. ಈ ಅಸತ್ಯವನ್ನೇ ಸತ್ಯವೆಂದು ನಂಬಿಕೊಂಡ ಜನ ಭಯಭೀತರಾಗಿ ಜನಸಂಖ್ಯೆಯೇ ಈ ದೇಶದ ಪರಮ ಶತ್ರು ಎಂದು ಅಂದುಕೊಳ್ಳತೊಡಗಿದ್ದಾರೆ. ಈ ದೇಶ ಮುಸ್ಲಿಮರ ಪಾಲಾಗದಿರಬೇಕಾದರೆ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಯಾಗಲೇಬೇಕು ಎಂದವರು ನಂಬಿಕೊAಡಿದ್ದಾರೆ. ನಿಜವಾಗಿ, ಇದು ಆಳುವವರ ಹುನ್ನಾರ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಅವರು ಕಂಡುಕೊAಡಿರುವ ಸುಲಭ ದಾರಿ. ಹೀಗೆ ಮಾಡುವುದರಿಂದ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿ ಲ್ಲಿಸಿದಂತೆಯೂ ಆಗುತ್ತದೆ ಮತ್ತು ಬಡತನ ನಿವಾರಣೆಯ ಹೊಣೆಯಿಂದ ನುಣುಚಿಕೊಂಡಂತೆಯೂ ಆಗುತ್ತದೆ. ಆದ್ದರಿಂದ,
ಕಟಕಟೆಯಲ್ಲಿ ನಿಲ್ಲಬೇಕಾದುದು ಭ್ರೂಣ ಅಲ್ಲ, ಪ್ರಭುತ್ವ.